ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಇಷ್ಟದ ಕುಂಚವೇ..

ವ್ಯಾನ್ ಗೊ
ಮಲಯಾಳಂ ಮೂಲ: ಎ ಅಯ್ಯಪ್ಪನ್ 
ಕನ್ನಡಕ್ಕೆ: ಗುರು ಪ್ರಸಾದ್
ಕಿವಿ ಕತ್ತರಿಸಿ ಪ್ರೇಮ ಭೋಜನಕ್ಕೆ ಕೊಟ್ಟು
ಹುಚ್ಚನಂತೆ ರಕ್ತದಲ್ಲಿ ಮಿಂದ ವ್ಯಾನ್ ಗೊ
ನನ್ನ ಲಿಲ್ಲಿ ಗಿಡದಲ್ಲಿ ಅರಳಿದ ಹೂವನ್ನು
ನಿನ್ನ ನೆನಪಿಗಾಗಿ ಕೀಳದೆಯೇ ಬಿಟ್ಟು ಬಿಡುತ್ತೇನೆ…
ನಿನ್ನ ರಕ್ತ ಚೆಲ್ಲಿದ ಕ್ಯಾನ್ವಾಸನ್ನು
ನಿನ್ನ ಕುರಿತಾದ ಕನಸಿನಲ್ಲಿ ಕಾಣುತ್ತಾ
ನಿನ್ನನ್ನು ಸ್ಪರ್ಶಿಸುತ್ತೇನೆ.
ನಿನ್ನ ರಕ್ತದ ಕೂಗಿಗೆ ಕಿವಿಗೊಡುತ್ತೇನೆ.
ಹೌದು..!
ಆ ಚಿತ್ರ ನೋಡುತ್ತದೆ
ಸ್ಪರ್ಶಿಸುತ್ತದೆ
ರಕ್ತದ ಧ್ವನಿ ಕೇಳುತ್ತದೆ.
ನಿನ್ನ ಇಷ್ಟದ ಕುಂಚವೇ
ನಿನಗೆ ದುಸ್ವಪ್ನವಾಗಿ ಕಾಡಿತ್ತಲ್ಲವೇ
ಪ್ರೇಮಕ್ಕೆ ಅರ್ಪಿಸಿದ ಬಲಿ
ನಿನ್ನ ಶ್ರವಣವಾಗಿತ್ತು.
ದೃಶ್ಯವೂ ಶಬ್ದವೂ
ವೇದನೆಯ ಮುಖಾಂತರವೇ
ವ್ಯಕ್ತವಾಗುವ ಕ್ಷಣಗಳಲ್ಲಿ
ಆ ಮಾನಗೆಟ್ಟ ಹೆಣ್ಣು
ನಿನ್ನ ಕೈಬೆರಳುಗಳನ್ನು ಕೇಳಲಿಲ್ಲವಲ್ಲ..!
ಹುಚ್ಚು ಧ್ವನಿತರಂಗಳ ಕಿವಿ ಮಾಂಸವನ್ನು
ನೀನವಳಿಗೆ ಉಣ ಬಡಿಸಿದಾಗ
ನಿನ್ನ ಹಳದಿ ಕಡಲಂಚಿನ
ಸೂರ್ಯನ ಆಳಕ್ಕವಳು ದುಮುಕಲಿಲ್ಲವಲ್ಲ..!
ಸೂರ್ಯನನ್ನು ಕಣ್ಣಾಗಿಸಿ
ಭೂಮಿಯನ್ನು ಮನಸ್ಸಾಗಿಸಿದ
ಅಸ್ವಸ್ಥ ಸ್ವಪ್ನಗಳ ಹಾವು ಏಣಿ ಆಟದಲ್ಲಿ
ಮತ್ತೆ ಮತ್ತೆ ಅವಳಿದ್ದಳು
ಆ ಸ್ನೇಹಿತೆ,  ಹರಿದ ಕಿವಿಯನ್ನು ಪ್ರೀತಿಸಿದವಳು
ಬೇಸಿಗೆಯನ್ನು ಸೂರ್ಯಕಾಂತಿಯಂತೆ
ಪ್ರೀತಿಸಿದವನೇ.. ವ್ಯಾನ್ ಗೊ
ನೀನು ಸಿಂಹದ ನಗುವಾಗಿದ್ದೆ
ಉನ್ಮಾದದಿಂದ ಹುಚ್ಚನಾಗಿರುತ್ತಿದ್ದೆ
ನಿಯಂತ್ರಣದ ಪೀಡಕನಾಗಿದ್ದೆ
ಕಿವಿಯಿಲ್ಲದ ಇತಿಹಾಸದಲ್ಲಿ ನೀನೊಂದು
ಹಾಸ್ಯದ ವಸ್ತುವಾದೆ
ಮೃತ್ಯುವಿನೊಂದಿಗೆ ಸೂರ್ಯನಾದವನೇ
ತಪ್ಪೊಪ್ಪಿಕೊಳ್ಳುವ ಪಾಪಿಯಾಗದೇ
ನಿನ್ನ  ಪ್ರಾಮಾಣಿಕ ಬಣ್ಣಗಳ
ಮಳೆಯಲ್ಲಿ ನೆನೆಯುತ್ತೇನೆ ನಾನು.
ಬಿರುಬಿಸಿಲಲಿನಲ್ಲಿ ಹಳದಿ ಹೂವಿನೊಂದಿಗೆ
ಮನುಷ್ಯನೊಬ್ಬ ಸುಟ್ಟು ಕರಕಲಾಗುತ್ತಿದ್ದಾನೆ
ಎಲುಬು ಮಾಂಸಗಳ ಮುಕುಟದ ಮೇಲೆ
ವಿದಾಯದ ಗೀತೆಗಳು ಪ್ರತಿಫಲಿಸುತ್ತಿವೆ.
ಬೆಂದ ಬಟಾಟೆ ಹೊಟ್ಟೆಗಿಳಿದಿದೆ
ಕಿವುಚಿ ತಿಂದವರ ಬೆರಳಗಳಿಗೂ ಚಿತ್ರ ಅಂಟಿದೆ.
ತುಂಡಾದ ಕಿವಿ ಒಂದು ಶಂಖದಂತೆ
ಶಬ್ದವನ್ನು ಸಂಹರಿಸುತ್ತಿದೆ
ಒಂಟಿಕಿವಿಯ ವಿದೂಷಕನ ತಮಾಷೆ
ಹೃದಯವನ್ನು ಎರಡಾಗಿ ಸೀಳುತ್ತಿದೆ.

‍ಲೇಖಕರು admin

4 March, 2017

1 Comment

  1. Anonymous

    Super…..ninna kavitheyalliruva abiruchige nanna ella vidha shubaharaikegalu…..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading