ಉಬ್ಬರ

ಆರ್ಣವಿ

ರಾಜಹಂಸ, ಜೀವನ ಪ್ರಕಾಶನ
ಜೀವನ್ ಪ್ರಕಾಶನದ ರಾಜ್ಯಮಟ್ಟದ
ಯುಗಾದಿ ಕಾವ್ಯ ಸ್ಪರ್ಧೆ-2016ರ ಮೆಚ್ಚುಗೆ ಪಡೆದ ಕವಿತೆ
ಏರು ಜ್ವರದಂತಹ ಬೇಸಗೆಯ ಆ ಕಡಲ ರಾತ್ರಿ
ನಿನ್ನ ಸೋಕಲೂ ಸಾಧ್ಯವಾಗದಂತೆ
ತಬ್ಬಿ ಆವರಿಸಿಕೊಂಡಿರುವ ನನ್ನ ಮೇಲೆ
ಗಾಳಿಗೆ ಕೆಂಡದಂತ ಮುನಿಸು…
ಸುಯ್ಯುತ್ತಾ ಸುಟ್ಟುಬಿಡುವಷ್ಟು ಬಿಸಿ
ಬಟಾಬಯಲಿನ ಕೇಳಿ ಕಂಡ ಚಂದ್ರನಿಗೆ
ಮತ್ತೆ ಮತ್ತೆ ರೋಹಿಣಿಯದೇ ನೆನಪು
ಉತ್ಕಟ ವಾಂಛೆಗೆ ಸೋತು
ನಕ್ಷತ್ರಗಳ ಕಾವಲಿಗೆ ಬಿಟ್ಟು
ಪಾಳಿ ಮುಗಿವ ಮೊದಲೇ ಅವ ಮನೆಗೆ ಪರಾರಿ
ಆ ತಾರೆಗಳಿಗೋ ನಿನ್ನ ಸ್ಪರ್ಶಿಸುವ ಹಂಬಲ
ಆಕಾಶ ತೊರೆದು ಹಾಗೇ ಕರಗಿ
ಚುಕ್ಕಿ ಚುಕ್ಕಿ ಹನಿಗಳಾಗಿ
ನಿನ್ನ ಹಣೆ ಮೇಲಿನ ಬೆವರಾಗಿ
ಮೂಡಿದ ಮೇಲೇನೋ ಸಾರ್ಥಕತೆ
ನನಗೋ ಚುಕ್ಕಿಬೆವರಿನ ಮೇಲೆ ಹೊಟ್ಟೆಕಿಚ್ಚು
ತುಟಿಯಿಂದಲೇ ಅವುಗಳನು ಹೆಕ್ಕಿ
ನಂತರ ಯಾಕೋ ಮರುಕ ಉಕ್ಕಿ
ನಿನ್ನಧರಕ್ಕೂ ಅವುಗಳ ಸವಿ ಉಣಿಸಿದಾಗ
“ಥೂ ಉಪ್ಪುಪ್ಪು….” ಎನ್ನುವ ನಿನ್ನ ಆ ವಾರೇ ಬಾಯಿ
ನಿನ್ನ ವಿಲಾಸ ಕಂಡ ಕಡಲಂತ ಕಡಲಿಗೂ
ಉಪ್ಪೂರಿದ ಬಯಕೆಗಳ ಮೊರೆತ
ನಿನ್ನ ತೊಯ್ಯಿಸಿ ರುಚಿ ಕೇಳಬೇಕೆಂಬ ಧಾವಂತ
ಉಕ್ಕುಕ್ಕಿ ಉಬ್ಬರಿಸಿ ತೀರ ದಾಟುವಂತ ಭರತ
ತೃಪ್ತ ಮರಳಿನದು ಮಾತ್ರ ಸುಖದ ಕನವರಿಕೆ
ನಿನ್ನ ದೇಹದುದ್ದಕ್ಕೂ ಅದರದೇ ನೇವರಿಕೆ
ಬೆವರಿನೊಂದಿಗೆ ಒಪ್ಪಂದ ಮಾಡಿಕೊಂಡು
ನಿನ್ನ ಬರಿ ಮೈಯಿಗೆ ಅಂಟಿಕೊಂಡು
ನಿನ್ನೊಳಗೆ ಬೆರತು ಹೋದೆನೆಂಬ ಬರಿದೇ ಸಾರ್ಥಕತೆ
ನನ್ನೊಳಗೆ ಮಾತ್ರ ಹಲ್ಲು ಕಿರಿಯುವ ಹಮ್ಮು
ಮೆಲ್ಲಗೆ ಕೈಯಾಡಿಸಿಯೇ ಮರಳ ಕೊಡವಿ ಬಿಡಬಲ್ಲೆನೆಂಬ…
ಎಂದಿದ್ದರೂ ನೀ ಪೂರ್ತಿ ನನ್ನವಳೇ ಎಂಬ ಪುರಷ ಅಹಮ್ಮು
ನಿನ್ನ ಮುಖದಲ್ಲಿ ಮಾತ್ರ ಯಾರ ಹಿಡಿತಕ್ಕೂ ಸಿಗದ ಪ್ರಕೃತಿಯಂತ ಹುಸಿನಗು





ಚೆನ್ನಾಗಿದೆ ಕಡಲ ವಣ೯ನೆ.
ಎಷ್ಟು ವಣಿ೯ಸಿದರೂ ಮುಗಿಯದು ಕಡಲ ಸೌಂದರ್ಯ☺
ಸುಂದರವಾಗಿ ಮೂಡಿ ಬಂದಿದೆ,ಸರಳವಾದ ಪದಗಳ ಬಳಕೆ ಅದ್ಭುತವಾಗಿದೆ,