ಕಿಡಿ

ಮಲ್ಲಿಕಾರ್ಜುನಗೌಡ ತೂಲಹಳ್ಳಿ
ಕಾಣದ ಕಿಡಿ ತಾಗಿ
ಸುಡುತ್ತಲೇ ಇದೆ
ಮಣ್ಣು ಕಾಯ
ಕುಂಬಾರನ ಆವುಗೆಯಂತೆ
ನೆಲ ಕಾದು
ಒಡಲು ಬೆಂದು
ಕೊಟ್ಟ ರೂಪು
ಕೊರೆದ ಚಿತ್ರಗಳೆಲ್ಲಾ
ಸ್ಥಿರವಾಗುವುದಾದರೆ
ನೆಲದ ಪೈರು ಊರ ಸಂತೆ
ಉಂಬುವ ಒಡಲು
ವಿಷ ಕಳೆದು
ಕೆಂಡದ ಹೂವಿನ ಪಾತ್ರೆಯಲಿ
ಜ್ವಲಿಸುವ ಬಂಡು
ಬಾಳಾಗುವುದಾದರೆ
ತಾಗುತ್ತಲೇ ಇರಲಿ ಕಿಡಿ
ವಿಷ ವಿಷಮ ಮಾತು
ವಿಷ ವಿಷಯದ ತೂತು
ಮುಚ್ಚಲಿ
ರಸ್ತೆಗಳು ವಿಹಾರಗಳಾಗಲಿ
ಅಧ್ಯಕ್ಷರೇ ಬೇಡದೆ
ಪಾರ್ಲಿಮೆಂಟಿನ
ಕುರ್ಚಿಗಳೆಲ್ಲಾ ಮಕ್ಕಳಾಗಿ
ಆಡಿ ದಣಿದು
ನಿದ್ದೆಯೂ ಸವಿಗನಸಾಗುವುದಾದರೆ
ಆಗೊಂದು
ನಿಜ ಬೆಳಗು
ಬೆರಗು
ನಂಬಿ ಉಸಿರಾಡಬಹುದಾದ
ಗಾಳಿ
ಬೀಸುವುದಾದರೆ
ತಾಗುತ್ತಲೇ ಇರಲಿ
ಕಿಡಿ





0 Comments