ಆಪಾದನೆ
ಕೃಷ್ಣ ಶ್ರೀಕಾಂತ ದೇವಾಂಗಮಠ
ಕೊಲೆ ಆಪಾದನೆ ಹೊತ್ತು ಕಟಕಟೆ
ಏರಿದ ಬಾಲಕ
ಮುಖದಲ್ಲಿ ಮುಗ್ಧ ಮಂದಹಾಸ ಬೀರುತ್ತಾ
ಕಿಕ್ಕಿರಿದ ಜನರತ್ತ ಕುತೂಹಲದ ಕಣ್ಣರಳಿಸಿ ಕಪ್ಪು ಕೋಟಿನವರ ಮಾತು ಆಲಿಸುತ್ತ
ಆಕಳಿಸಿ ನಿದ್ದೆಗೆ ಜಾರುತ್ತಿದ್ದ.
ಪಕ್ಕದಲ್ಲಿ ಕಾವಲಿಗೆಂದು ನಿಂತಿದ್ದ
ಸ್ಟಾರ್ ಗಳಿಲ್ಲದ ಖಾಕಿಯವ ಕೋಲಿನಿಂದ
ನಿದ್ದೆಹೋಗದಿರಲೆಂದು ಆಗಾಗ ತಿವಿಯುತ್ತಲೇ ಇದ್ದ ಮತ್ತು ತಾನೂ ಆಕಳಿಸುತ್ತಿದ್ದ.
ಕಣ್ಣು ಕಟ್ಟಿಸಿಕೊಂಡ ನ್ಯಾಯದೇವತೆ
ಅಂತಃಕರಣದ ಕಣ್ಣು ತೆರದೇ ಇದ್ದಳು
ನಿಜದ ತಲೆಯ ಮೇಲೆ ಹೊಡೆದಂತೆ
ಸುಳ್ಳಾಡುವವರ ಮಧ್ಯೆ
ಹೃದಯದ ತುಂಬಾ ಸುಡುವ ಕೆಂಡದಂಥ ಸತ್ಯ ಇಟ್ಟುಕೊಂಡು ಹುಡುಗ ತಂಪಾಗುತ್ತಿದ್ದ.
ಚಾಕುವಿನಿಂದ ದೇಹದ ತುಂಬೆಲ್ಲ ದಯಾಹೀನನಂತೆ ಮನಸ್ಸಿಗೆ ತೋಚಿದಂತೆ ಇರಿದು ರಾಕ್ಷಸ ಪ್ರವೃತ್ತಿ ಮೆರೆದಿದ್ದಾನೆ
ಪ್ರತ್ಯಕ್ಷದರ್ಶಿಯಂತೊಂದು
ಗಂಟಾಘೋಷ ಧ್ವನಿ ಕೋಣೆ ಪೂರ್ತಿ ಕಂಪಿಸಿತು ಗಜಿಬಿಜಿಗೆ ಕದಡಿದ ಮೌನ ಸಾಕ್ಷಿ ಹೇಳುತ್ತಿತ್ತು.
ನೇರ ಬೆರಳು ಮಾಡಿ ಶಿಕ್ಷಾರ್ಹ ವ್ಯಕ್ತಿ ಎಂದು ಖಾಸಗಿ ಕೋಟಿನವ ತಾನೇ ಊದಿಬಿಟ್ಟ
ಕುಳಿತವರು ತಲೆಯೂ ಆಡಿಸಿದರು
ಕೆಲವರು ಅಲ್ಲ ಎಂಬಂತೆ
ಚಿಲ್ಲರೆ ರಾಜಕಾರಣ ತಾಂಡವವಾಡುತ್ತಿತ್ತು.ಸರ್ಕಾರಿ ವಕೀಲ ಈಗ ತನ್ನ ಅಸ್ತಿತ್ವವನ್ನ
ಸೊಲ್ಲೆತ್ತಿ ಖಾತ್ರಿ ಪಡಿಸಿದ
ಇದಕ್ಕೆ ನನ್ನ ತಡೆ ಇದೆ ಸ್ವಾಮಿ.
ಬಾಲಾಪರಾಧಿ ಅಲ್ಲ
ಇಗೋ ನಿರಪರಾಧಿಯ ಹಣೆಪಟ್ಟಿ
ಚೂರಿಯ ಮೇಲಿನ ಕೈ ಬೆರಳ ಪ್ರತಿ.
ಮಾತಡಗಿದ ಎದುರು ಲಾಯರಿ
ಕೋಟು ಬಿಚ್ಚಿ ಕಾಲಿಗೆ ವಿಶ್ರಾಂತಿ ಹೇಳಿ
ಕುರ್ಚಿ ಹಿಡಿದ
ನೆಟ್ಟ ನೋಟ ಮಾತ್ರ
ನೆರೆದವರಲ್ಲೊಬ್ಬನ ಮೇಲಿತ್ತು
ಭಯಕ್ಕೆ ಕರವಸ್ತ್ರ ಸಿಗದೆ ಬೆವರು ಸುರಿಯುತ್ತಿತ್ತು
ಹರಿಸಿದ ರಕ್ತಕ್ಕೆ ಇನ್ನೋರ್ವನ ನೆತ್ತರು ಒಳಗೆ ಹೆಪ್ಪುಗಟ್ಟುತ್ತಿತ್ತು.
ನಗುಮೊಗದ ಹುಡುಗ ಈಗ
ಮೌನದಲ್ಲೆ ಕೊಲ್ಲುವ ಮಾಯಾ ಕೋಲಾಹಲ.





0 Comments