ನಿಕಿತಾ ಓದಿದ ‘ಗ್ರಸ್ತ’

ನಿಕಿತಾ

ಎಂದಿನಂತೆ ಇದು ಬುಕ್ ರಿವ್ಯೂ ಖಂಡಿತವಾಗಿಯೂ ಅಲ್ಲ! ನಾನು ಯಾವಾಗಲೂ ಹೇಳುವ ಹಾಗೆ ಕೆಲವೊಂದು ಪುಸ್ತಕಗಳು ಒಂದು ರೀತಿಯ ಬೇರೆಯದೇ ಅನುಭವವನ್ನು ನೀಡುತ್ತದೆ. ಆ ಅನುಭವವು ವಿವರಣೆಗೆ ನಿಲುಕದ್ದು. ಹಿಂದೆ ‘ನನ್ನಿ’ ಓದಿದಾಗ ಈ ರೀತಿ ಅನುಭವವಾದದ್ದು, ಈಗ ಮತ್ತೊಮ್ಮೆ ಕರಣಂ ಪವನ್ ಪ್ರಸಾದ್ ಅವರವದ್ದೇ ಇನ್ನೊಂದು ಕಾದಂಬರಿಯಾದ ಗ್ರಸ್ತ ಓದಿದ ಮೇಲೂ ಅಂತಹದ್ದೇ ವಿವರಿಸಲಾಗದ ಮತ್ತೊಂದು ತರಹದ ಅನುಭವವಾಯಿತು. ಆದರೆ ಪುಸ್ತಕ ಓದಿ ಮುಗಿಸಿದಾಗಲಿಂದ ಬಿಟ್ಟು ಬಿಡದೆ ಕಾಡುತ್ತಿರುವ ಕಾರಣ ಅದರ ಕುರಿತು ಒಂದು ಟಿಪ್ಪಣಿ ಬರೆಯಲು ಒತ್ತಾಯಿಸುತ್ತಿದೆ. ಹಾಗಾಗಿ ಇದು ಪುಸ್ತಕದ ಕುರಿತು ನನ್ನ ಅನುಭವವೇ ಹೊರತು, ಅದರ ವಿಮರ್ಶೆಯಲ್ಲ.

ಎಷ್ಟೋ ಬಾರಿ ಬಹಳ ಕಡಿಮೆ ಸಾಮಾಗ್ರಿಗಳನ್ನು ಬಳಸಿ ಮಾಡುವ ಅಡಿಗೆಯೂ ಕೆಡುವುದುಂಟು. ಅಂತಹುದರಲ್ಲಿ ಕರಣಂ ಅವರು, ವೇದ-ವೇದಾಂತ, ವಿಜ್ಞಾನ, ಸಮಾಜ, ಬಂಧ-ಬಾಂಧವ್ಯ, ಮನುಷ್ಯನ ಭಾವನೆ, ಸ್ವಭಾವಗಳು ಹೀಗೆ ಹತ್ತು ಹಲವು ಗಂಭೀರ ವಿಷಯಗಳನ್ನಿಟ್ಟುಕೊಂಡು ಒಂದು ಅಚ್ಚುಕಟ್ಟಾದ ರಸಪಾಕವನ್ನೇ ತಯಾರಿಸಿದ್ದಾರೆ. ಇಷ್ಟೆಲ್ಲಾ ಗಂಭೀರವಾದ ವಿಷಯಗಳಿಂದ ಕೂಡಿದ್ದರೂ, ಕಾದಂಬರಿಯನ್ನು ಓದಬೇಕಾದರೆ ಸ್ವಲ್ಪವೂ ಕೂಡ information overload ಎನ್ನಿಸದೇ, ಹದವಾಗಿ ಬೆಂದ ಹೂರಣದಿಂದ ತಯಾರಿಸಿದ ಹೋಳಿಗೆಯನ್ನು ಸವಿದ ತೃಪ್ತಿಯನ್ನು ನೀಡುತ್ತದೆ. ವೇದಾಂತ ಮತ್ತು ವಿಜ್ಞಾನ ಎರಡು ವ್ಯತಿರಿಕ್ತವಾದ ವಿಷಯಗಳು ಎಂಬುದು ಸಹಜವಾಗಿರುವ ಕಲ್ಪನೆ. ವೇದಾಂತವನ್ನು ಕೇವಲ philosophical/spiritual ಪಂಗಡಕ್ಕೆ ಸೀಮಿತ ಪಡಿಸಿದರೆ, ವಿಜ್ಞಾನವನ್ನು logical/factual ಸಾಮ್ರಾಜ್ಯದ ಮುಕುಟದಂತೆ ಪರಿಗಣಿಸಲಾಗುತ್ತದೆ. ಆದರೆ, ಈ ಎರಡೂ ಹೇಗೆ ಒಂದಕ್ಕೊಂದು ಪೂರಕವಾಗಿದೆ ಎಂದು ಗ್ರಸ್ತ ಕಾದಂಬರಿಯಲ್ಲಿ ಓದಬಹುದು. ‘Where Physics ends Metaphysics begins’ ಎಂಬುದು ನನ್ನ ನಂಬಿಕೆ. ಆದರೆ ಈ ಎರಡು ವಿರುದ್ಧ ಎನ್ನಿಸವ ವಿಷಯಗಳನ್ನು ಬೆಸೆದು ವೇದಾಂತ ವಿಜ್ಞಾನದ್ದೇ continuum ಎಂಬುದನ್ನು ವಿದ್ಯುತ್ ಪರಿಕಲ್ಪನೆಯನ್ನು ಅದ್ವೈತ ಸಿದ್ಧಾಂತದ ಮೂಲಕ ವಿವರಿಸಿರುವ ಪ್ರಯತ್ನವನ್ನು ಗ್ರಸ್ತ ಅತ್ಯಂತ ಸೊಗಸಾಗಿ ಮಾಡಿದೆ. ಭಾರತೀಯ ತತ್ವಶಾಸ್ತ್ರನ್ನು ಬಹಳ ಸುಲಭವಾಗಿ ಅರ್ಥವಾಗುವಂತೆ ಭೌತಶಾಸ್ತ್ರದ ನಿದರ್ಶನಗಳೊಂದಿಗೆ ವಿವರಿಸಲಾಗಿದೆ.

ಈ ಕಾದಂಬರಿಯಲ್ಲಿರುವ ಪ್ರತಿಯೊಂದು ಪಾತ್ರವೂ ಮನುಷ್ಯ ಗುಣ-ಸ್ವಭಾವಗಳನ್ನು ನುರಿತಾಗಿ ಪ್ರತಿಬಿಂಬಿಸುತ್ತದೆ. ಪ್ರತಿಯೊಂದು ಪಾತ್ರದ ಬೆಳವಣಿಗೆ ಅಷ್ಟೇ ಉತ್ತಮವಾಗಿ ಮೂಡಿಬಂದಿದೆ. ಇದಲ್ಲದೇ, ಈ ಕಾದಂಬರಿಯಲ್ಲಿರುವ ಪ್ರತಿಯೊಂದು ಪಾತ್ರದ ಬಗ್ಗೆಯೇ ಪ್ರತ್ಯೇಕ ಟಿಪ್ಪಣಿಯನ್ನು ಬರೆಯುವಷ್ಟರ ಮಟ್ಟಿಗೆ ಆಳವಾಗಿದ್ದೂ, ಕೆಲವು ಪಾತ್ರಗಳ spin-off ಕಥೆಯಾಗಿ ಮಾಡಬಹುದೆನೋ ಎಂದೆನಿಸುತ್ತದೆ.

ಒಂದು ಕಾದಂಬರಿಗೆ ಕಥೆ ಹಾಗೂ ಕಥಾವಸ್ತು ಎರಡೂ ಬಹುಮುಖ್ಯ. ಹಲವಾರು ಬಾರಿ ಸಂಶೋಧನೆಯನ್ನು ಪುಸ್ತಕದಲ್ಲಿ ಭಟ್ಟಿ ಇಳಿಸುವ ತರಾತುರಿಯಲ್ಲಿ ಕಥಾವಸ್ತು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡು ಒಂದು ಶೈಕ್ಷಣಿಕ ಅಧ್ಯಯನದಂತೆ ಅನಿಸಬಹುದು. ಗ್ರಸ್ತದಲ್ಲಿ ಕಥೆಗೆ ಯಾವುದೇ ತರಹದ ಧಕ್ಕೆ ಉಂಟಾಗದೇ, ಕಥಾವಸ್ತುವಿಗೆ ಪೂರಕವಾಗುವುದರ ಜೊತೆಗೆ ಅತ್ಯಂತ ರೋಚಕವಾಗಿದೆ. ಕಥೆಯ ಅಂತ್ಯ ಭಾಗವಂತೂ ಊಹೆಗೂ ಮೀರಿದ್ದು. ಪುಸ್ತಕ ಓದಿ ಮುಗಿಸುವಷ್ಟರಲ್ಲಿ ಓದುಗರಿಗೆ ಹಲವು ಬಗೆಯ ಭಾವನೆಗಳು ಮೂಡಿಸಿ ವಿಶೇಷ ಅನುಭವವನ್ನು ನೀಡುವುದರಲ್ಲಿ ಹೆಚ್ಚು ಸಂಶಯವಿಲ್ಲ. ಗ್ರಸ್ತ ಖಂಡಿತವಾಗಿಯೂ ಒಂದು Masterpiece!

‍ಲೇಖಕರು avadhi

February 7, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: