ಆರ್ ಎನ್ ದರ್ಗಾದವರ ಕವಿತೆ- ಸಂತೆ ಗದ್ದಲದಲ್ಲಿ ಹೂವು ಮತ್ತು ಅವನು..

ಆರ್ ಎನ್ ದರ್ಗಾದವರ

ಹೂವ ಮಾರುವ ಹುಡುಗ
ಕುಕ್ಕರಗಾಲಿನಲಿ ಕುಳಿತೆ ಇದ್ದಾನೆ
ಮಾರು ಹಾಕುತ ಮೊಳ ಎಣಿಸಿಸುತಾ
ದಾಟಿ ಹೋಗುವವರ ಮಧ್ಯ
ಅದೆಷ್ಟು ಏಕಾಗ್ರತೆಯನ್ನು ಗಳಿಸಿಕೊಂಡಿದ್ದಾನೆ

ಹೊತ್ತಿ ಉರಿಯುವ ಬಿಸಿಲ ನಡುವೆ
ನೀರು ಚಿಮುಕಿಸುತಾ
ಹೂವಿಗೊಂದು ಮುಗುಳ್ನಗು ಲೇಪಿಸಿ
ಮತ್ತೆ ಮತ್ತೆ ಅವುಗಳೊಂದಿಗೆ ಮಾತಿಗಿಳಿಯುತಾನೆ
ನಿದ್ದೆ ಮಂಪರು ಜಾರಿಯಾಗದಂತೆ
ಹೂವು ನಕ್ಕಾಗಲೊಮ್ಮೆ ತಾನೂ ನಗುತಾ
ಮುದ್ದಿಸುತಾನೆ,
ಇಬ್ಬರ ಅಂತರಾತ್ಮದಲಿ ಏರ್ಪಟ್ಟ ಒಲವನು
ಹಂಚುತಾ ತಾನೂ ಒಲವಾಗುತಾನೆ

ಸಣ್ಣದೊಂದು ಹಾಡಿನ ಪಲ್ಲವಿ ಸಾಲನು
ಗೊಣಗಿಕೊಳ್ಳುತಾ ಲೋಕ ಸಂಗವ ತೊರೆಯುತಾನೆ
ಮೂವತ್ತಕ್ಕೆ ಮಾರು,ಹದಿನೈದಕ್ಕೆ ಮೊಳ
ಎಂದಾಗೊಮ್ಮೆ ಪ್ರಿಯತಮನ ಸಂಗ ತೊರೆಯುವ ಭಯದಲಿ
ಸಣ್ಣಹಠ ಹಿಡಿದು ಸಪ್ಪೆ ಸಪ್ಪೆಯಾಗುತ್ತವೆ

ಅವನು ನೀರು ಚಿಮುಕಿಸುತಾನೆ
ಬಿಸಿಲ ನಡುವೆ ಕಳೆದುಹೋದ ನಗು ತೊಟ್ಟು
ಹೂಗಳು ಮತ್ತೆ ಕಿಲಕಿಲ ನಗುತವೆ
ಅವನ ಹಸಿದ ಹೊಟ್ಟೆಗೊಂದು ಶಾಪ ಹಾಕಿ
ಕೊಳ್ಳಲು ಬಂದ ಯಾರದೋ ಸಂತೆಚೀಲದಲಿ
ಅವಿತು ವಿದಾಯ ಗೀತೆ ಎಳೆಯುತಾ
ಜನ ಜಾತ್ರೆ ನಡುವೆ ಮರೆಯಾಗುತವೆ

ನಾಳೆಯನು ನೆನೆಯುತ, ನಿನ್ನೆಯನು ಮರೆಯುತ್ತಾ
ಅಳತೆ ಹಾಕುವ ನೆಪದಲಿ
ಎದೆ ಹತ್ತಿರ ಎಳೆದುಕೊಂಡು
ಹೃದಯದ ಪಿಸುದನಿಯ
ನಿಧಾನಕೆ ಹೂವಿನ ಹೃದಯಕೂ
ತಲುಪಿಸಿ,
ನೂಕುನುಗ್ಗಲು ನಡುವೆ ನೆಮ್ಮದಿಗಾಣುವದನು
ಅರಿತುಕೊಂಡಿದ್ದಾನೆ…

‍ಲೇಖಕರು avadhi

February 7, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Simura Maridasanahalli

    ರಣರಂಗಿತರಂಗ

    ಆ ನೆಲದಲ್ಲಿ ಗದ್ದೆಗಳು ನೆಮ್ಮದಿಯಾಗಿದ್ದವು
    ಹೊಲಗಳಲ್ಲಿ ಹೂಗಳು ನಗುತ್ತಿದ್ದವು
    ಗುಡಿಸಿಲಿನಲ್ಲಿ ಗಾಳಿ ಬೆಳಕು ಪತಂಗ
    ಆಗತಾನೇ ಒಳಬಂದ ಹಣ್ಣು ಮಾತಿಗಿಳಿದಿದ್ದವು
    ಹಿಂಬದಿಯಲ್ಲಿ ಸಣ್ಣ ಹಳ್ಳವೊಂದು ಧ್ಯಾನದಲ್ಲಿತ್ತು
    ದೂರದ ಬೆಟ್ಟ ಬೇಲಿಯೊಳಗೆ ನಿದ್ರಿಸುತ್ತಿತ್ತು
    ಗಡಿಯಲ್ಲಿದ್ದರೂ ಜನರ ಹೃದಯ ಮಿಡಿಯುತ್ತಿತ್ತು

    ಅಂದು ಮುಂಜಾನೆ ಬೆಟ್ಟದ ಮೇಲೆ
    ವಿನಾಕಾರಣ ಮೌನದ ಅಮಾನುಷ ಕಗ್ಗೊಲೆ
    ಶಾಂತ ಆಗಸದಲ್ಲಿ ನಿರಾಳಗಾಳಿಗೆ ರಣರಂಗಿತರಂಗ
    ಹಸಿರು ನೆಲೆದ ತುಂಬಾ ಬೆಂಕಿ ಉಂಡೆಗಳ ಕುಣಿದಾಗ
    ಹೂ ಹಣ್ಣು ಪತಂಗ ಗುಡಿಸಲು; ಬಿಸೀಬೂದಿ
    ಹಳ್ಳದ ನೀರ ಮೇಲೆ ರಕ್ತದ ಸವಾರಿ
    ಕೇಕೆ ಹಾಕುತ್ತ ಕುಪ್ಪಳಿಸಿದ ಬಾಂಬಿನ ಧೂಳಲಿ
    ಹೆತ್ತವರ ತುಂಡು ಮಾಂಸ ಪುಟ್ಟ ಮಗಳ ಬೊಗಸೆಗೆ

    ಆ ಹುಡುಗಿ ಈಗ ಅದೇ ನೆಲವ ಹುತ್ತುತ್ತಿದ್ದಾಳೆ
    ನೆನ್ನೆಯಷ್ಟೇ ಗುಡಿಸಲಿಗೆ ಪುನರ್ಜನ್ಮ ನೀಡಿದ್ದಾಳೆ
    ಅವಳೆದೆಯ ಅದಮ್ಯ ಪ್ರೇಮಕೆ ಹೊಸ ಪತಂಗ ಜೊತೆಯಾಗಿದೆ
    ಹಳ್ಳದ ನೀರು ಹೂಗಳ ಅರಳಿಸಿಯೇ ತೀರಲು ಹರಿದಿದೆ
    ದೂರದ ಬೆಟ್ಟದ ಬೇಲಿಯು ಬಳ್ಳಿಯಾಗಿದೆ
    ಆಗಸದಲ್ಲಿ ಗಾಳಿ ಪಟಗಳ ಎತ್ತಿ ಆಡಿಸುತ್ತಿದೆ
    ಹೆತ್ತವರ ಗೋರಿಗಳೆದುರು ವಿಶ್ವ ನಾಯಕರಲ್ಲಿ ಪ್ರಾರ್ಥಿಸುತ್ತಿದ್ದಾಳೆ
    ಗಡಿಯಾಚೆಗಿನ ಜನರ ಹೃದಯಗಳು ಮಿಡಿಯುತ್ತಲಿರಲಿ
    -ಸಿಮೂರ ಮರಿದಾಸನಹಳ್ಳಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: