ಬಾಬಾ ರಾಂದೇವ್ ಅವರ ನಿರಶನ ಪ್ರಹಸನ ಆರಂಭವಾಗಿದ್ದೂ ನಾಟಕೀಯವಾಗಿ, ಅಂತ್ಯವಾಗಿದ್ದೂ ನಾಟಕೀಯವಾಗಿಯೇ. ಈಗಲೂ ನಾಟಕ ಮುಂದುವರೆಯುತ್ತಲೇ ಇದೆ. ವೇದಿಕೆ ಮಾತ್ರ ದೆಹಲಿಯಿಂದ ಹರಿದ್ವಾರಕ್ಕೆ ಸ್ಥಳಾಂತರಗೊಂಡಿದೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ರಾಂದೇವ್ ಲೀಲೆಯ ಒಳಗುಟ್ಟುಗಳು ಇನ್ನೂ ಬಹಿರಂಗವಾಗಿಲ್ಲ. ಸರ್ಕಾರ ಅನುಮತಿ ನೀಡಿದ್ದೇಕೆ, ಪೊಲೀಸರು ದಾಳಿ ನಡೆಸಿದ್ದೇಕೆ, ರಾಂದೇವ್ ಮಹಿಳೆಯ ವೇಷ ತೊಟ್ಟು ಪರಾರಿಯಾಗಲು ಯತ್ನಿಸಿದ್ದೇಕೆ, ಈಗ ಪ್ರಧಾನಿಯನ್ನು ಕ್ಷಮಿಸಿದ್ದೇನೆ ಎಂದು ಹೇಳಿದ್ದೇಕೆ ಎಲ್ಲವೂ ಪ್ರಶ್ನೆಗಳೇ. ಭಾರತದ ಸಮಕಾಲೀನ ಇತಿಹಾಸದಲ್ಲೂ ಸತ್ಯಾಗ್ರಹಗಳಿಗೇನೂ ಕಡಿಮೆಯಿಲ್ಲ. ಆದರೂ ರಾಂದೇವ್ ಸತ್ಯಾಗ್ರಹ ಸೃಷ್ಟಿಸಿದ ಸನ್ನಿವೇಶವನ್ನು ಯಾರೂ ಸೃಷ್ಟಿಸಿರಲಿಲ್ಲ. ಆದರೂ ಸತ್ಯಾಗ್ರಹ ನಿರತರ ಮೇಲೆ ನಡೆದ ಪೊಲೀಸ್ ದಾಳಿ ಖಂಡನಾರ್ಹ.
ಏತನ್ಮಧ್ಯೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರಾಂದೇವ್ ಮತ್ತವರ ಬೆಂಬಲಿಗರ ಮೇಲೆ ದೆಹಲಿ ಪೊಲೀಸರು ನಡುರಾತ್ರಿಯಲ್ಲಿ ದಾಳಿ ನಡೆಸಿದ್ದನ್ನು ತೀವ್ರವಾಗಿ ಖಂಡಿಸಿರುವ ಸರ್ವೋಚ್ಚ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಮಧ್ಯ ಪ್ರವೇಶಿಸಿದ್ದು, ಬಲ ಪ್ರಯೋಗ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಇದು ನಿಜಕ್ಕೂ ಸ್ತುತ್ಯಾರ್ಹ ಕ್ರಮ. ಮಿಸ್ಟರ್ ಕ್ಲೀನ್ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ದಾಳಿ ಅನಿವಾರ್ಯವಾಗಿತ್ತು, ತಮಗೆ ಅನ್ಯ ಮಾರ್ಗವಿರಲಿಲ್ಲ, ಆದರೂ ನಡೆದ ಘಟನೆ ದುರದೃಷ್ಟಕರ ಎಂದು ಹೇಳಿರುವುದು ಅವರ ಘನತೆಗೆ ತಕ್ಕುದಲ್ಲ. ಸರ್ವೋಚ್ಚ ನ್ಯಾಯಾಲಯದ ನೋಟೀಸಿನ ಹಿನ್ನೆಲೆಯಲ್ಲಿ ಸಿಂಗ್ ಮತ್ತೊಮ್ಮೆ ಪೇಚಿಗೆ ಸಿಲುಕುವ ಸಂಭವವೇ ಹೆಚ್ಚು. ರಾಮಲೀಲಾ ಮೈದಾನದಲ್ಲಿ ನಡೆದದ್ದು ವ್ಯಕ್ತಿಯ ಮೇಲಿನ ಹಲ್ಲೆ ಅಲ್ಲ. ಪ್ರಜಾತಂತ್ರ ಮೌಲ್ಯಗಳ ಮೇಲೆ ನಡೆದ ದಾಳಿ ಎಂದು ಪ್ರಧಾನಿಗಳು ಗಮನಿಸಬೇಕಿತ್ತು.
ಸರ್ವೋಚ್ಚ ನ್ಯಾಯಾಲಯ ತನ್ನ ನ್ಯಾಯಿಕ ಕ್ರಿಯಾಶೀಲತೆಯನ್ನು ಪ್ರದರ್ಶಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ರಾಮ್‌ಲೀಲಾ ಮೈದಾನದಲ್ಲಿ ನಡೆದ ದೌರ್ಜನ್ಯ ಮತ್ತು ಪ್ರಜಾತಂತ್ರ ವಿರೋಧಿ ಆಕ್ರಮಣವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿರುವುದು ದೇಶದ ಜನಸಾಮಾನ್ಯರಲ್ಲಿ ಆಶಾಭಾವನೆಯನ್ನು ಮೂಡಿಸುತ್ತದೆ. ಅನೇಕ ಸಂದರ್ಭಗಳಲ್ಲಿ ನ್ಯಾಯಾಲಯಗಳು ಈ ರೀತಿಯ ಸ್ವಯಂಪ್ರೇರಿತ ನಿರ್ಣಯ ಕೈಗೊಂಡಿವೆ. ಅವು ಜನರ ಮೆಚ್ಚುಗೆಯನ್ನೂ ಗಳಿಸಿದೆ. ಭಾರತದಲ್ಲಿ ಅಧಿಕಾರದ ಗದ್ದುಗೆ ಏರಿರುವ ಪ್ರತಿಯೊಂದು ಪಕ್ಷವೂ ಒಂದಲ್ಲ ಒಂದು ಸಂದರ್ಭದಲ್ಲಿ ಈ ರೀತಿಯ ದಮನಕಾರಿ ಪ್ರವೃತ್ತಿಯನ್ನು ಪ್ರದರ್ಶಿಸಿರುವುದು ಸಾರ್ವಕಾಲಿಕ, ಸಾರ್ವತ್ರಿಕ ಸತ್ಯ. ಹಾಗಾಗಿ ನ್ಯಾಯಾಲಯದ ಈ ಕ್ರಮ ಆಳುವ ವರ್ಗಗಳಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸುತ್ತದೆ.
ಆದರೆ ಇಲ್ಲಿ ಮತ್ತೊಂದು ಗಂಭೀರ ಪ್ರಶ್ನೆ ಎದುರಾಗುತ್ತದೆ. ನವ ಉದಾರವಾದ ಮತ್ತು ಜಾಗತೀಕರಣ ಯುಗದಲ್ಲಿ ಪೊಲೀಸರು, ಸೇನಾಪಡೆಗಳು, ಸರ್ಕಾರಿ ಆಡಳಿತ ಯಂತ್ರಗಳು ಶಾಂತಿಯುತ ಪ್ರತಿಭಟನಕಾರರ ಮೇಲೆ ಏಕಾಏಕಿ ದಾಳಿ ನಡೆಸಿರುವುದೂ ಇದೇ ಮೊದಲ ಬಾರಿಯಲ್ಲ. ಕರ್ನಾಟಕದ ಕೊಪ್ಪಳ, ಹಾವೇರಿ, ಮೈಸೂರು ಕೆಲವು ಉದಾಹರಣೆಗಳು. ಉತ್ತರ ಪ್ರದೇಶದ ನೊಯಿಡಾದ ರೈತ ಪ್ರತಿಭಟನೆ ಇತ್ತೀಚಿನ ಉಗ್ರ ನಿದರ್ಶನ. ಈ ಪೊಲೀಸ್ ದಾಳಿಗಳಲ್ಲೂ ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಡುವ ಅಮಾಯಕ ಜನತೆ ದಾಳಿಗೊಳಗಾಗಿದ್ದಾರೆ. ಒರಿಸ್ಸಾ, ಛತ್ತಿಸ್‌ಘಡ್, ಹರ‍್ಯಾಣ, ಮಹಾರಾಷ್ಟ್ರ, ಕರ್ನಾಟಕ ಎಲ್ಲೆಡೆ ಭೂಸ್ವಾಧೀನದ ವಿರುದ್ಧ ನಡೆಯುತ್ತಿರುವ ಹೋರಾಟಗಳನ್ನು, ಆದಿವಾಸಿಗಳ ಜೀವನ್ಮರಣದ ಹೋರಾಟಗಳನ್ನು ಪೊಲೀಸರು ಇದೇ ರೀತಿ ಹತ್ತಿಕ್ಕುತ್ತಿದ್ದಾರೆ. ಪರಿಸರ ರಕ್ಷಣೆಗಾಗಿ ನಡೆಯುವ ಆಂದೋಲನಗಳ ಮೇಲೂ ಆಳುವ ವರ್ಗಗಳು ದಾಳಿ ನಡೆಸುತ್ತಲೇ ಇವೆ.
ಉದ್ಯೋಗ ಖಾತರಿ ಯೋಜನೆಯಲ್ಲಿನ ಅವ್ಯವಹಾರಗಳನ್ನು ಬಯಲಿಗೆಳೆಯುವ, ಮಾಹಿತಿ ಹಕ್ಕುಗಳಿಗಾಗಿ ಹೋರಾಡುವ ಸಾಮಾಜಿಕ ಕಾರ್ಯಕರ್ತರು ಪೊಲೀಸರಿಂದ, ಸಮಾಜಘಾತುಕ ಶಕ್ತಿಗಳಿಂದ ಹಲ್ಲೆಗೊಳಗಾಗುತ್ತಿದ್ದಾರೆ. ಹತ್ಯೆಗೀಡಾಗುತ್ತಿದ್ದಾರೆ. ನಿಷ್ಠಾವಂತ ಅಧಿಕಾರಿಗಳು ಕೊಲೆಗೀಡಾಗುತ್ತಿದ್ದಾರೆ. ಜನಸಾಮಾನ್ಯರು ಪ್ರತಿಭಟನೆಗೆ ಬೀದಿಗಿಳಿಯಲೂ ಹೆದರುವಂತಹ ಪರಿಸ್ಥಿತಿ ಅನೇಕ ರಾಜ್ಯಗಳಲ್ಲಿ ಸೃಷ್ಟಿಯಾಗಿದೆ. ಆದರೆ ರಾಂದೇವ್ ವಿರುದ್ಧ ನಡೆದ ದಾಳಿ ಸೃಷ್ಟಿಸಿರುವ ವಿವಾದ, ಚರ್ಚೆ, ಉಪನ್ಯಾಸಗಳು ಈ ಯಾವುದೇ ಘಟನೆಗಳು ಏಕೆ ಸೃಷ್ಟಿಸಿಲ್ಲ. ಈ ಜನಪರ ಹೋರಾಟಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ವಿದ್ಯುನ್ಮಾನ ಮಾಧ್ಯಮಗಳೂ ಸಹ ರಾಂದೇವ್ ಪ್ರಹಸನಕ್ಕೆ ಇಡೀ ವಾರ ಮೀಸಲಾಗಿಟ್ಟು, ಪರದೆಯ ಮೇಲೆ ಸೈದ್ಧಾಂತಿಕ ಜಟ್ಟಿ ಕಾಳಗವನ್ನೇ ಮಾಡಿದ ಪರಿ ನೋಡಿದರೆ ಮಾಧ್ಯಮಗಳ ಹೊಣೆಗಾರಿಕೆಯೂ ಪ್ರಶ್ನಾರ್ಹವೆನಿಸುತ್ತದೆ. ಈ ಪ್ರಶ್ನೆಗೆ ನಾಗರಿಕ ಸಮಾಜ ಉತ್ತರ ಕಂಡುಕೊಳ್ಳಬೇಕಿದೆ. ಸತ್ಯಾಗ್ರಹ ಎನ್ನುವುದು ಜನಾಂದೋಲನದ ಒಂದು ಭಾಗವಾಗಿ ಹೊರಹೊಮ್ಮಬೇಕೇ ಹೊರತು ವ್ಯಕ್ತಿಗತ ವೈಭವೀಕರಣದ ವಸ್ತುವಾಗಬಾರದು.
ಇದೇ ಸಂದರ್ಭದಲ್ಲಿ ಉಲ್ಲೇಖಿಸಬೇಕಾದ ಸಂಗತಿ ಎಂದರೆ ಭಾರತದಲ್ಲಿ ಮತ್ತೊಂದು ಉಪವಾಸ ಸತ್ಯಾಗ್ರಹವೂ ಸದ್ದಿಲ್ಲದೆ ನಡೆಯುತ್ತಲೇ ಇದೆ. ಕೆಲವು ದಿನಗಳು ಅಥವಾ ತಿಂಗಳುಗಳಿಂದಲ್ಲ. ಹತ್ತು ವರ್ಷಗಳಿಂದ. ಮಣಿಪುರದಲ್ಲಿ ಮಹಿಳೆಯರ ಮೇಲೆ ವಿಶೇಷ ಸೇನೆಯ ಸೈನಿಕರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ಇರೋಮ್ ಶರ್ಮಿಳಾ ಎಂಬ ಹೋರಾಟಗಾರ್ತಿ ಕಳೆದ ಹತ್ತು ವರ್ಷಗಳಿಂದ ಉಪವಾಸ ನಿರಶನ ಮಾಡುತ್ತಿದ್ದಾರೆ. ಅವರ ಬೇಡಿಕೆ ಒಂದೇ. ವಿಶೇಷ ಸಶಸ್ತ್ರ ಸೇನಾ ಕಾಯ್ದೆ ಎಂಬ ಕರಾಳ ಕಾಯ್ದೆಯನ್ನು ರದ್ದು ಪಡಿಸುವುದು. ಆದರೆ ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರವಾಗಲೀ ಅಥವಾ ರಾಜಕೀಯ ಪಕ್ಷಗಳಾಗಲೀ ಈವರೆಗೂ ಶರ್ಮಿಳಾ ಅವರತ್ತ ತಿರುಗಿಯೂ ನೋಡಿಲ್ಲ. ಮಾಧ್ಯಮಗಳಿಗೂ ಈ ವಿಚಾರ ಅನಪೇಕ್ಷಿತವೇ ಆಗಿದೆ. ಕಾರಣ ಆಕೆಗೆ ರಾಜಕೀಯ ವರ್ಚಸ್ಸಿಲ್ಲ. ಅಪಾರ ಸಂಖ್ಯೆಯ ಹಿಂಬಾಲಕರಿಲ್ಲ. ಮೇಲೆ ಹೇಳಿದ ಸಿದ್ಧತೆಗಳೊಂದಿಗೆ ನಿರಶನ ಹೂಡುವ ಸಾಮರ್ಥ್ಯವಿಲ್ಲ.
ಅಣ್ಣಾ ಹಜಾರೆಯಾಗಲಿ, ಬಾಬಾ ರಾಂದೇವ್ ಆಗಲಿ ಪ್ರಜ್ಞಾವಂತ ಪ್ರಜೆಗಳ ನಾಗರಿಕ ಪ್ರತಿನಿಧಿಗಳಾಗಿ ಹೋರಾಟದ ಮುಂಚೂಣಿಯಲ್ಲಿ ನಿಲ್ಲಬೇಕೇ ಹೊರತು, ದೈವೀಕ ಸ್ಥಾನವನ್ನು ಅಲಂಕರಿಸಬಾರದು. ಬಾಬಾ ರಾಂದೇವ್ ಪ್ರಹಸನದಲ್ಲಿ ಈ ಲಕ್ಷಣಗಳು ನಿಚ್ಚಳವಾಗಿ ಕಾಣುತ್ತಿವೆ. ಸತ್ಯಾಗ್ರಹವನ್ನು ಸತ್ಯಾಗ್ರಹಿಯ ಮುಖೇನ ನೋಡುವ ಹೊಸ ಪರಂಪರೆ ಭಾರತದ ರಾಜಕಾರಣದಲ್ಲಿ ಆರಂಭವಾಗುತ್ತಿರುವ ಸೂಚನೆಗಳು ಕಾಣುತ್ತಿವೆ. ಎಲ್ಲ ರೀತಿಯ ಅನಪೇಕ್ಷಿತ ಪೊಲೀಸ್ ದಾಳಿಯ ಬಗ್ಗೆಯೂ ನ್ಯಾಯಾಂಗ ಇದೇ ನಿಲುವು ತಾಳಿದಲ್ಲಿ, ಆಳ್ವಿಕರ ದಮನಕಾರಿ ಪ್ರವೃತ್ತಿಗೆ ಕಡಿವಾಣ ಹಾಕಬಹುದು.








Sama tookada lekhana. kanoonu, adhikara, police vyvaste kaiyallittukondiruva sarakaragalu tamma viruddada satyagrahagalannu ella bala prayogisi hattikkuvudu prajaprabhutvakke dodda apachaara. Sarvochcha nyayala madhya praveshisisi kendra sarakarakke notice neediruvudu nyayanga vyavaste `jivanta’vaagide ennuvudakke saakshi.
ಒಳ್ಳೆಯ ಲೇಖನ.. ಕೇ೦ದ್ರ ಸರ್ಕಾರ ಅನಗತ್ಯವಾಗಿ ವಿವಾದವನ್ನ ಮೈಮೇಲೆ ಎಳೆದುಕೊ೦ಡ೦ತಾಯ್ತು.. ರಾ೦ದೇವ್ ಅವರ ಉದ್ದೇಶ ಉಧಾತ್ತವಾದದ್ದೇ, ಆದರೆ ರಾ೦ದೇವ್ ಅಣ್ಣಾ ಹಜಾರೆ ಅಲ್ಲ.. ಏನೇ ಆಗಲಿ, Baaba should be eternally grateful to the central government!! Just think about the coverage he got!
ಸಮಯೋಚಿತ ಲೇಖನವೆಂದರೂ.. ಎಲ್ಲೋ ಒಂದು ಕಡೆ ಬಾಬಾರನ್ನು ಸೋಲಿಸಲೆಬೇಕು ಎಂಬ ಹೀಡನ್ ಅಜೆಂಡಾ ಢಾಳಾಗಿ ಕಾಣಿಸುತ್ತಿದೆ.
ಹಲವಾರು ಹೋರಾಟಗಳನ್ನು ತಾವು ಉಲ್ಲೇಖಿಸಿದ್ದಿರಿ ಅವಗಳನ್ನು ನಮ್ಮ ಮಾಧ್ಯಮಗಳು ಇನ್ನು ಹುರಿದಿಂಬಿಸಲಿ, ಯಾರೂ ಹುರಿದಿಂಬಿಸದಿದ್ದರು ಹೋರಾಟಗಳು ನಡೆಯುತ್ತಿರುತ್ತವೆ ಎಂಬುವುದಕ್ಕೆ ನೀವೇ ಉಲ್ಲೇಖಿಸಿರುವ ಇರೋಮ್ ಶರ್ಮಿಳಾರವರ ಹೋರಾಟವೇ ಉದಾಹರಣೆ. ಇನ್ನು ರಾಮದೇವ ಹೋರಾಟಕ್ಕೆ ನಮ್ಮ ಮಾಧ್ಯಮಗಳು ಮತ್ತು ಮಧ್ಯಮ ವರ್ಗದ ಜನರು (ನೆನಪಿರಲಿ ಆವತ್ತು ರಾತ್ರಿ ಪೆಟ್ಟು ತಿಂದವರೇ ಇವರು) ಇಷ್ಟೊಂದು ಬೆಂಬಲ ನೀಡಿದ್ದರ ಬಗ್ಗೆ ನಿಮ್ಮ ಪ್ರಶ್ನೆ ಸರಿಯಾದದ್ದೆ. ಎಲ್ಲೊ ಒಂದು ಕಡೆ ನಮ್ಮ ಜನರು ಈ ಎಲ್ಲ ಬ್ರಷ್ಟಾಚಾರ ಮತ್ತು ನಮ್ಮ ದೇಶದ ರಾಜಕಾರಣಿಗಳ ಬಗ್ಗೆ ಬಹಳಷ್ಟು ರೋಸಿ ಹೋಗಿರುವುದು ಕಾರಣವಾಗಿರಬಹುದೆ? ನಮ್ಮ ನಾಯಕತ್ವದ ವ್ಯಾಪ್ತಿ ಎಷ್ಟು ದೊಡ್ಡದೋ (Marketing Style) ಅಷ್ಟು ಪ್ರಚಾರ ದೊರಕುತ್ತಿರಬಹುದೇನೋ, ಹೇಗೆಂದರೆ ನಮಗೆ ಸ್ವಾತಂತ್ರ್ಯ ಹೋರಾಟ ಎಂದರೆ “ಮಹಾತ್ಮ ಗಾಂಧಿ” ನೇನಪಿಗೆ ಬರುತ್ತಾರೆ ಅಂದರೆ ಆ ಕಾಲದಲ್ಲಿ ಬೇರಾರೂ ಹೋರಾಟವನ್ನೆ ಮಾಡಿರಲಿಲ್ಲವೆಂದಲ್ಲ ಅಲ್ಲವೇ? ಇನ್ನೂ ಉದಾಹರಣೆ ಬೇಕಾದರೆ ನಮ್ಮ ಕೆಂದ್ರ ಸರ್ಕಾರದ ಬಹಳಷ್ಟು (ಸುಮಾರು ೯೦% ಕ್ಕೂ ಹೆಚ್ಚು) ಯೋಜನೆಗಳು ಕೇವಲ ಜವಾಹರ, ಇಂದಿರಾ ಮತ್ತು ರಾಜೀವ ಅಂದರೇ ಬೇರಾರೂ ರಾಜಕೀಯ ನೇತಾರರೂ ಈ ರಾಷ್ಟ್ರಕ್ಕಾಗಿ ಒಳಿತನ್ನು ಮಾಡಿಲ್ಲವೇ ಎಂಬುದಲ್ಲ, ಅವರಿಗೆ ಸರಿಯಾದ ಮಾರ್ಕೇಟರಗಳು ಮತ್ತು ಪ್ರಭಾವಶಾಲಿ ಬೆಂಬಲಿಗರು ದೊರೆತರು ಅಷ್ಟೆ.
ಇನ್ನೂ “ಸತ್ಯಾಗ್ರಹವೋ ಸತ್ಯಾಗ್ರಹಿಯೋ ಯಾವುದು ಮುಖ್ಯ” ಅದನ್ನು ಹೀಗೂ ಕೇಳಬಹದು “ಪ್ರಶ್ನೆ ಮುಖ್ಯವೋ ಪ್ರಶ್ನಿಸಿದವ ಮುಖ್ಯವೋ?”
ಉತ್ತರಿಸಬೇಕಾದವರು ಯಾರು ಎನ್ನುವುದು ಮುಖ್ಯ…!!!
ನಾಯಕನಾದವನಿಗೆ, ತಲಪುವ ಗುರಿಗಿಂತ, ಗುರಿಯನ್ನು ತಲುಪಬೇಕಾದ ಮಾರ್ಗವೇ ಮುಖ್ಯ. ಇದೇ ಅಣ್ಣಾ ಹಜಾರೆ ಮತ್ತು ರಾಮದೇವ ಅವರಿಗೆ ಇರುವ ವ್ಯತ್ಯಾಸ.
ಬಾಬಾ ಅವರನ್ನು ಸೋಲಿಸಲೇ ಬೇಕು. ಇದು ಸತ್ಯ.ಏಕೆಂದರೆ ಸಶಸ್ತ್ರ ಪಡೆ ನಿರ್ಮಿಸಲು ಹವಣಿಸುತ್ತಿರುವ ರಾಂದೇವ್ ಅವರ ಫ್ಯಾಸಿಸ್ಟ್ ತಂತ್ರಗಳನ್ನು ಸೋಲಿಸಲೇ ಬೇಕು. ರಾಂದೇವ್ ಅವರ ನಿಜವಾದ ಬಣ್ಣ ಈಗ ಬಯಲಾಗುತ್ತಿದೆ.ಮುಂದೆ ಇನ್ನೂ ಬಯಲಾಗುತ್ತದೆ. ನೋಡುತ್ತಿರಿ.
ನಾ ದಿವಾಕರ
ನಿರ್ಧಾರಗಳಲ್ಲಿ ಗೋಚರಿಸದ ಪಾರದರ್ಶಕತೆ, ಪ್ರಮಾಣಿಕತೆ ಮತ್ತು ಸ್ಥಿರತೆ- ಇವುಗಳು ಬಾಬಾ ರಾಮದೇವ ಅವರ ಸತ್ಯಾಗ್ರಹದ ಹಾದಿ ತಪ್ಪಲು ಪ್ರಮುಖವಾದ ಕಾರಣಗಳಾಗಿವೆ. ಸತ್ಯಾಗ್ರಹಿಗಳಿಗೆ ಇವು ಇರಲೇಬೇಕಾದ ಪ್ರಮುಖಾಂಶಗಳು.
ಒಂದು ಸಾವಿರ ಕೋಟಿಗಿಂತಲೂ ಹೆಚ್ಚು ಸಂಪತ್ತಿನ ಟ್ರಸ್ಟಿಗೆ ಮುಖ್ಯಸ್ಥರಾಗಿರುವ ಗುರು ರಾಮದೇವ್ ಅವರಿಗೆ ಅಷ್ಟೊಂದು ಹಣ ಮುಗಿಲಿನಿಂದ ಉದುರಿತೇ ಇಲ್ಲವೇ ನೆಲದಿಂದ ಹುಟ್ಟಿ ಬಂದಿತೇ ? ಅವರಿಗೆ ಬಂದಿರುವ ಗುರು ಕಾಣಿಕೆಯಲ್ಲಿ ಭ್ರಷ್ಟಾಚಾರದಿಂದ ಗಳಿಸಿರುವ ಕಪ್ಪುಹಣವಿಲ್ಲವೇ ? ಒಂದು ಅರೆಗಳಿಗೆ ಗುರು ರಾಮದೇವ್ ಅವರೇ ತಮ್ಮ ಬದುಕಿನಲ್ಲಿ ತಾವು ನಡೆದು ಬಂದಿರುವ ಹಾದಿಯ ಕಡೆಗೆ ಕಣ್ಣನ್ನು ಹಾಯಿಸಿ , ತಮ್ಮ ಬಳಿಗೆ ಬಂದವರು ಸಮಾಜದ ಯಾವ ವರ್ಗಕ್ಕೆ ಸೇರಿದವರು ? ತಮಗೆ ಅಷ್ಟೊಂದು ಹಣ ಕೊಟ್ಟವರಿಗೆ ಆ ಹಣ ಎಲ್ಲಿಂದ ಹೇಗೆ ಬಂದಿರಬಹುದು ? ಈಗ ತಮಗೆ ಬೆಂಬಲ ಕೊಡುತ್ತಿರುವವರು ಎಷ್ಟರಮಟ್ಟಿಗೆ ಪ್ರಾಮಾಣಿಕರಾಗಿ ಬಾಳುತ್ತಿದ್ದಾರೆ ? ಎಂಬುದನ್ನು ನೋಡಲಿ . ರಾಮದೇವ್ ಅವರಿಗೆ ಬೆಂಬಲ ಕೊಡುತ್ತಿರುವ ಕಡೆಗಳಲ್ಲಿ ಹೋಮ ಕುಂಡಕ್ಕೆ ತುಪ್ಪ ಹಾಕುತ್ತ , ಭಜನೆಯಲ್ಲಿ ತೊಡಗಿರುವವರನ್ನು ನೋಡಿದರೆ , ಇವರೆಲ್ಲರ ಸಾಮಾಜಿಕ ಸತ್ಯಾಗ್ರಹದ ಉದ್ದೇಶ ಮತ್ತು ಗುರಿ ಭ್ರಷ್ಟಾಚಾರ ನಿವಾರಣೆ ಇಲ್ಲವೇ ಕಪ್ಪುಹಣದ ವಾಪಸಾತಿಗಿಂತ ಮತ್ತೇನೋ ಇರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.
Baba Ramdev is not driven by his own inner voice. He is taught to act like this and he his acting accordingly to the whims and fancies of some of the right wing ideologue. an activist most learn to think his own not taught by others.