ಅದರಲ್ಲಿ ಲಿಂಗದೇವರು ಹಳೆಮನೆ ಅವರ ಸಂದರ್ಶನ ಕೂಡಾ ಇತ್ತು..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ

ಡಾ. ರೈನೆರ್ ಲೋತ್ಜ್ ಜರ್ಮನ್ ಭಾಷೆ ಮತ್ತು ಸಾಹಿತ್ಯದ ಅಧ್ಯಾಪಕರಾಗಿ ಬಹಳ ವರ್ಷ ಕೆಲಸಮಾಡಿದವರು. ಭಾರತದೊಂದಿಗೆ ದೀರ್ಘಕಾಲದಿಂದ ನಿಕಟ ಸಂಪರ್ಕ ಹೊಂದಿರುವವರು. ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ ಬಹಳ ವರ್ಷ ಜರ್ಮನ್ ಭಾಷೆ -ಸಾಹಿತ್ಯ ಬೋಧಿಸಿದವರು. ಮ್ಯಾಕ್ ಮುಲ್ಲರ್ ಭವನ ಸಹಿತ ಅನೇಕ ಸಂಸ್ಥೆಗಳಲ್ಲಿ ದೆಹಲಿಯಲ್ಲಿ ಸುಮಾರು ಇಪ್ಪತೈದು ವರ್ಷ ವಾಸಮಾಡಿದವರು. ಈಗಲೂ ವರ್ಷದಲ್ಲಿ ಮೂರು ತಿಂಗಳು ಭಾರತದಲ್ಲಿ ಇರುತ್ತಾರೆ. ಅವರ ಪತ್ನಿ ದೆಹಲಿಯಲ್ಲಿ ಹಿಂದಿ ಎಂಎ ಮತ್ತು ಪಿ ಎಚ್ ಡಿ ಮಾಡಿದ್ದು , ಈಗ ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿವಿಯಲ್ಲಿ ಹಿಂದಿ ಪ್ರಾಧ್ಯಾಪಕಿ ಆಗಿದ್ದಾರೆ. ರೈನೆರ್ ಲೋತ್ಜ್ ಅವರು ಇತ್ತೀಚಿಗೆ ಮುಗಿಸಿದ ಯೋಜನೆ -ಬಾಲಿವುಡ್  ಹಿಂದಿ ಸಿನೆಮಾಗಳ ಮೂಲಕ ಭಾರತದಲ್ಲಿ ಹಿಂದಿ ಭಾಷೆಯ ಪ್ರಭಾವ. ಅದಕ್ಕಾಗಿ ಭಾರತದಲ್ಲಿ ಅನೇಕ ತಜ್ಞರನ್ನು ಭಾಷಾ ವಿಜ್ನಾನಿಗಳನ್ನು ಸಿನೆಮ ನಿರ್ದೇಶಕರನ್ನು ಅವರು ಸಂದರ್ಶನ ಮಾಡಿದ್ದಾರೆ. ಈ ಯೋಜನೆಯ ಕುರಿತು ನಿನ್ನೆ ರೈನೆರ್ ಅವರು ಇಂಡಾಲಜಿ ವಿಭಾಗದಲ್ಲಿ ತಮ್ಮ ಅಧ್ಯಯನದ ಮುಖ್ಯಾಂಶಗಳನ್ನು ದಾಖಲೆಗಳ ಸಹಿತ ಮಂಡಿಸಿದರು.

ರೈನೆರ್ ಸಂದರ್ಶಿದವರಲ್ಲಿ ಕನ್ನಡದ ಲೇಖಕ ಚಿಂತಕ ಯು ಆರ್ ಅನಂತಮೂರ್ತಿ,ರಂಗತಜ್ಞ ಭಾಷಾವಿಜ್ಞಾನಿ ಹಳೆಮನೆ ಇದ್ದರು. ಹಿಂದಿ ಚಿತ್ರರಂಗದ ಮಹತ್ವದ ಕಲಾವಿದರು ಕವಿಗಳು ಗುಲ್ಜಾರ್ ಮತ್ತು ಜಾವೇದ್ ಅಕ್ತರ್ ಇದ್ದರು. ತಮಿಳು ಚಿತ್ರ ನಿರ್ದೇಶಕ ಹರಿಹರನ್ ಮತ್ತು ಇತ್ತೀಚಿನ ಕೆಲವು ಹಿಂದಿ ಚಿತ್ರ ನಿರ್ದೇಶಕರ ಸಂದರ್ಶನ ಇತ್ತು. ದೆಹಲಿಯ ಹಿಂದಿ ಮತ್ತು ಭಾಷಾವಿಜ್ಞಾನದ ಪ್ರಾಧ್ಯಾಪಕಿ ಡಾ.ಅನ್ವಿತ ಅಬ್ಬಿ ತಮ್ಮ ಸಂಶೋಧನೆಯ ಸಂಗತಿಗಳನ್ನು ವಿವರಿಸಿದ ಭಾಗಗಳು ಇದ್ದುವು.

ಅನಂತಮೂರ್ತಿ ಅವರು ಮನೆಯ ಭಾಷೆ , ಬೀದಿಯ ಭಾಷೆ ಮತ್ತು ಅಟ್ಟದ ಭಾಷೆಯ ಬಗ್ಗೆ ಮಾತಾಡಿದ ಭಾಗ ನೋಡಿದೆವು. ಹಿಂದಿ ಕೆಲವೊಮ್ಮೆ ಬೀದಿಯ ಭಾಷೆ ಆಗಿ ಬೆಳೆದ ಬಗೆಯನ್ನು ಅವರು ಹೇಳಿದ್ದಾರೆ. ಲಿಂಗದೇವರು ಹಳೆಮನೆ ಅವರ ಸಂದರ್ಶನದ ಸ್ವಲ್ಪ ಭಾಗ ಮಾತ್ರ ನಿನ್ನೆ ನೋಡಲು ಸಾಧ್ಯ ಆಯಿತು. ರೈನೆರ್ ಅವರು ಹಳೆಮನೆ ಅವರನ್ನು ಸಂದರ್ಶಿಸಿದ್ದು ೨೦೦೯ರ ಫೆಬ್ರವರಿಯಲ್ಲಿ ಮೈಸೂರಿನಲ್ಲಿ. ಹಳೆಮನೆ ಅವರು ಅರುವತ್ತರ ದಶಕದಲ್ಲಿ ತಾವು ನೋಡಿದ ಹಿಂದಿ ಸಿನೆಮಾಗಳ ಬಗ್ಗೆ , ಅವುಗಳು ತಮ್ಮ ಸುಮಧುರ ಹಾಡುಗಳಿಂದ ತಮ್ಮನ್ನು ಸೆಳೆದ ಬಗೆಯನ್ನು ಹೇಳಿದ್ದಾರೆ. ಹಿಂದಿ ಭಾಷೆಗಿಂತ ಹಿಂದಿ ಹಾಡುಗಳಿಗಾಗಿಯೇ ಹಿಂದಿ ಸಿನೆಮಾ ನೋಡುವ ಆಸಕ್ತಿ ಹಿಂದಿಯೇತರ ಪ್ರದೇಶಗಳಲ್ಲಿ ಇದ್ದ ಬಗ್ಗೆ ಅವರು ಉದಾಹರಣೆಗಳೊಂದಿಗೆ ವಿವರಿಸಿದ ಭಾಗ ಗಮನ ಸೆಳೆಯಿತು. ಬಳಿಕದ ಚರ್ಚೆಯಲ್ಲೂ ಈ ಅಂಶಕ್ಕೆ ಹೆಚ್ಚು ಬೆಂಬಲ ದೊರೆಯಿತು.

ಗುಲ್ಜಾರ್ ಮತ್ತು ಜಾವೇದ್ ಅಕ್ತರ್ ತಮ್ಮ ಅನುಭವಗಳ ಮೂಲಕ ಬಾಲಿವುಡ್ ಸಿನೆಮಾಗಳು ಹಿಂದಿಯನ್ನು ಜನಪ್ರಿಯಗೊಳಿಸಿದ ಬಗೆಗಳನ್ನು ವಿಶ್ಲೇಷಿಸಿದರು. ಡಾ.ಅಬ್ಬಿ ಸಾಮಾಜಿಕ ಭಾಷಾವಿಜ್ಞಾನದ ತಮ್ಮ ಯೋಜನೆಗಳ ಆಧಾರದ ಮೇಲೆ ಕೆಲವು ಹೊಸ ಸಂಗತಿಗಳ ಮೇಲೆ ಬೆಳಕು ಚೆಲ್ಲಿದರು. ಈಶಾನ್ಯ ರಾಜ್ಯಗಳಲ್ಲಿ ಹಿಂದಿ ಭಾಷೆಯ ರೂಪಗಳ ಬಗೆಗಿನ ತಮ್ಮ ಅಧ್ಯಯನದ ಫಲಿತಗಳ ಚರ್ಚೆ ಇತ್ತು. ತಮಿಳು ಚಿತ್ರ ನಿರ್ದೇಶಕ ಹರಿಹರನ್ ಹೊಸ ಕಾಲದ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಹಿಂದಿ ಸಿನೆಮಾಗಳ ಪ್ರಭಾವದ ಕುರಿತು ವಿಮರ್ಶಿಸಿದ ಭಾಗ ಇತ್ತು.

ಆಧುನಿಕ ಹಿಂದಿ ಸಿನೆಮಾಗಳಲ್ಲಿನ ಭಾಷೆಯು ಇಂಗ್ಲಿಶ್ ಮಿಶ್ರಿತ ಆಗಿರುವ ಬಗ್ಗೆ ಕೆಲವು ಸಂದರ್ಶನಗಳು ಮತ್ತು ಚರ್ಚೆ ಇತ್ತು. ಗ್ರಾಮೀಣ ಹಿಂದಿಯ ಸ್ಥಾನವನ್ನು ನಗರದ ವಾಣಿಜ್ಯ ಹಿಂದಿ ಆಕ್ರಮಿಸಿಕೊಂಡ ಬಗ್ಗೆ ಸಂವಾದದಲ್ಲಿ ಅಭಿಪ್ರಾಯಗಳು ಪ್ರಕಟ ಆದುವು. ಸೆಕ್ಸ್, ಹಿಂಸೆ ಮತ್ತು ಹಣ -ಆಧುನಿಕ ಭಾರತೀಯ ಬದುಕಿನ ಮೇಲೆ ಹೊಂದಿರುವ ಕರಾಳ ಹಿಡಿತವು ಹಿಂದಿ ಸಿನೆಮಾದ ಭಾಷೆಯಲ್ಲಿ ಪ್ರಕಟವಾಗುತ್ತಿರುವ ಕ್ರಮದ ವಿಶ್ಲೇಷಣೆ ರೈನೆರ್ ಉಪನ್ಯಾಸಕ್ಕೆ ಸಾಮಾಜಿಕ ಆಯಾಮವನ್ನು ತಂದುಕೊಟ್ಟಿತು.

ಹಿಂದಿ ಮತ್ತು ಇಂಗ್ಲಿಶ್ ಭಾಷೆಗಳು ಆಧುನಿಕ ಭಾರತದಲ್ಲಿ ಪ್ರಭುತ್ವ ಹೊಂದಲು ಮಾಡುತ್ತಿರುವ ಕಾರ್ಯಯೋಜನೆಗಳ ಬಗ್ಗೆ ಉಪಯುಕ್ತ ಚರ್ಚೆ ನಡೆಯಿತು. ರಾಷ್ಟ್ರಭಾಷೆ, ಸಂಪರ್ಕ ಭಾಷೆ , ವಾಣಿಜ್ಯ ಭಾಷೆ ,ಆಡಳಿತ ಭಾಷೆಗಳು ಬದಲಾಗುತಿರುವ ವಿನ್ಯಾಸಗಳ ಬಗ್ಗೆ ಬೇರೆ ಬೇರೆ ಚಿಂತನೆಗಳು ಮೂಡಿದವು. ಹಣದ ಭಾಷೆಯಾಗಿ ಇಂಗ್ಲಿಶ್ , ಟಿವಿ ಭಾಷೆಯಾಗಿ ಹಿಂದಿ -ನಮ್ಮನ್ನು ಆಕರ್ಷಿಸುತ್ತಿರುವುದರ ಕುರಿತು ನನ್ನ ಅಭಿಪ್ರಾಯ ಹೇಳಿದೆ. ಇಲ್ಲಿ ಸಂವಾದಗಳಲ್ಲಿ ಯಾರೂ ತಮ್ಮ ಅಭಿಪ್ರಾಯವೇ ಸರಿ , ಉಳಿದವರದ್ದು ತಪ್ಪು ಎಂದು ಅಲ್ಲಗಳೆಯುವ ಹೀಗಳೆಯುವ ಸಂಪ್ರದಾಯ ಇಲ್ಲ. ಎಲ್ಲರಿಗೂ ಅವರವರ ಅಭಿಪ್ರಾಯ ಹೇಳುವ ಸ್ವಾತಂತ್ರ್ಯ ಇರುತ್ತದೆ. ಅಭಿಪ್ರಾಯದ ಭಿನ್ನತೆಗಳನ್ನು ಗೌರವದಿಂದ ಕಾಣುವ ಇಲ್ಲಿನ ಸಂವಾದದ ಕ್ರಮ ನಿಜವಾದ ಪ್ರಜಾಪ್ರಭುತ್ವದ ಲಕ್ಷಣ.

ಲಿಂಗದೇವರು ಹಳೆಮನೆಯವರ ವೀಡಿಯೋ ಸಂದರ್ಶನದ ನಡುವೆ ಪ್ರೊ. ಬ್ರೂಕ್ನರ್ ಹಳೆಮನೆ ನಿಧನದ ಬಗ್ಗೆ ಸಭೆಗೆ ತಿಳಿಸಲು ನನಗೆ ಹೇಳಿದರು. ನಾನು ಹಳೆಮನೆಯವರ ಸಂಕ್ಷಿಪ್ತ ಪರಿಚಯ ಸಾಧನೆ ಬಗ್ಗೆ ಹೇಳಿದೆ. ಇಲ್ಲಿನ ಇಂಡಾಲಜಿ ವಿಭಾಗದ ಜೊತೆಗಿನ ಅವರ ಸಂಬಂಧ , ಜುಲೈ ಮೊದಲಲ್ಲಿ ಅವರು ಇಲ್ಲಿ ಬರಬೇಕಾಗಿದ್ದ ಕಾರ್ಯಕ್ರಮದ ಕುರಿತು ಹೇಳಿದೆ. ಅಲ್ಲಿ ಎಲ್ಲರ ಸಂತಾಪದ ಭಾವನೆಗಳನ್ನು ಅವರ ಕುಟುಂಬಕ್ಕೆ ತಿಳಿಸುತ್ತೇನೆ ಎಂದು ಅವರ ಶೋಕ ಭಾವನೆಗೆ ದನಿ ಕೊಟ್ಟೆ. ನನ್ನ ಪಕ್ಕದಲ್ಲಿ ಬಾಲನ್ ನಂಬಿಯಾರ್ ಮತ್ತು ಜಾನಕಿ ನಾಯರ್ ಕುಳಿತಿದ್ದರು. ಬಾಲನ್ ನಂಬಿಯಾರ್ ಪ್ರಸಿದ್ಧ ಕಲಾವಿದ -ಪೇಂಟಿಂಗ್, ಶಿಲ್ಪ, ಫೋಟೋಗ್ರಫಿ, ತೆಯ್ಯಂ -ಹೀಗೆ ಅನೇಕ ರಂಗಗಳ ಭೀಷ್ಮ. ಅನೇಕ ವರ್ಷಗಳಿಂದ ಬೆಂಗಳೂರು ನಿವಾಸಿ. ಅವರು ಕೆಲವು ತಿಂಗಳುಗಳ ಹಿಂದೆ ಮೈಸೂರಿಗೆ ಹಳೆಮನೆ ಆಹ್ವಾನದಂತೆ ರಂಗಾಯಣಕ್ಕೆ ಹೋದ ವಿಷಯ ನನ್ನೊಡನೆ ತಿಳಿಸಿದರು. ಬಿ ವಿ ಕಾರಂತ ನಾಟಕೋತ್ಸವಕ್ಕೆ ಅತಿಥಿಯಾಗಿ ಹೋಗಿ ಹಳೆಮನೆ ಅವರೊಂದಿಗೆ ಒಡನಾಡಿದ ನೆನಪುಗಳನ್ನು ಬಾಲನ್ ನನ್ನಲ್ಲಿ ಹಂಚಿಕೊಂಡರು.

ಡಾ. ಜಾನಕಿ ನಾಯರ್ ಬಹಳ ವರ್ಷಗಳಿಂದ ಬೆಂಗಳೂರಲ್ಲಿ ಇದ್ದು ಶಿಕ್ಷಣ ಪಡೆದು ,ಡೆಕ್ಕನ್ ಹೆರಾಲ್ಡ್ ನಲ್ಲಿ ಕೆಲಸ ಮಾಡಿ ಈಗ ದೆಹಲಿಯಲ್ಲಿ ಜೆಏನ್ ಯು ವಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಇದ್ದಾರೆ.. ಈ ಬೇಸಗೆಯಲಿ ಇಲ್ಲಿ ‘ಭಾರತದಲ್ಲಿ ಮಹಿಳೆ ಮತ್ತು ಕಾನೂನು’ ಕುರಿತು ಇಲ್ಲಿನ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸುತ್ತಿದ್ದಾರೆ..ಜಾನಕಿ ಕೂಡಾ ಹಳೆಮನೆ ಬಗ್ಗೆ ತಮಗೆ ಗೊತ್ತಿದ್ದ ಅವರ ರಂಗಭೂಮಿ ಪ್ರತಿಭೆಯನ್ನು ನೆನೆದುಕೊಂಡರು.

ಕಾರ್ಯಕ್ರಮ ಮುಗಿದ ಬಳಿಕ ರೈನೆರ್ ತಾವು ನಡೆಸಿದ ಹಳೆಮನೆ ಸಂದರ್ಶನದ ಪೂರ್ಣ ಪಾಠದ ವೀಡಿಯೋ ಸಿಡಿಯ ಒಂದು ಪ್ರತಿ ನನಗೆ ಕೊಟ್ಟರು. ಅದನ್ನು ಬಿಡುವಿನಲ್ಲಿ ಪೂರ್ಣವಾಗಿ ನೋಡಬೇಕು. ರಂಗಭೂಮಿಯಂತೆ ಸಿನೆಮಾ ಕೂಡಾ ಹಳೆಮನೆಯ ಆಸಕ್ತಿಯ ಅಧ್ಯಯನದ ವಿಷಯ ಆಗಿತ್ತು. ಆ ಕುರಿತು ಅವರು ಸಾಕಷ್ಟು ಬರೆದಿದ್ದಾರೆ. ’ಆವಾರಾ ‘ಸಿನೆಮಾದ ಹಾಡುಗಳ ಬಗ್ಗೆ ಅವರು ತಮ್ಮ ಸಂದರ್ಶನದಲ್ಲಿ ಉತ್ಸಾಹದಿಂದ ಮಾತಾಡಿದ್ದಾರೆ. ಎಲ್ಲರದ್ದೂ ಒಂದಲ್ಲ ಒಂದು ರೀತಿಯ ಆವಾರಾ ಬದುಕು.

ನಮ್ಮ ಕನ್ನಡದ ಮಲ್ಲಿಗೆಯ ಕವಿ ಕೆ ಎಸ ನರಸಿಂಹ ಸ್ವಾಮಿ ತಮ್ಮ ‘ಮನೆಯಿಂದ ಮನೆಗೆ ‘ಕವನದಲ್ಲಿ ಹೇಳುವ ಹಾಗೆ ಕೊನೆಯಿರದ ಮನೆಗೆ ನಾವು ಪಯಣ ಹೊರಟಿದ್ದೇವೆ-

ಅಲ್ಲಿ ಹೊಸಮನೆ ಇಲ್ಲ ,ಎಲ್ಲವೂ ಹಳೆಯ ಮನೆಗಳೇ .

ಲಿಂಗದೇವರು ಹಳೆಮನೆ ಅವರ ಅಂತ್ಯಕ್ರಿಯೆ ಗೆ ಸೇರಿದ್ದ ಜನಸ್ತೋಮ

ಚಿತ್ರ: ಉಗಮ ಶ್ರೀನಿವಾಸ್

 

‍ಲೇಖಕರು G

June 10, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: