ನಾಳಿನ ಭರವಸೆ ಹೊತ್ತ ಸ್ಮೃತಿ ಸಂಚಯ

ಮಮತಾ ರಾವ್

ಜಗತ್ತೆಲ್ಲಾ ಕೋವಿಡ್ ರೋಗದ ಆತಂಕ, ಭವಿಷ್ಯದ ಕುರಿತಾದ ಅಂಧಕಾರದಲ್ಲಿ ಮುಳುಗಿರುವಾಗ ಸಕಾರಾತ್ಮಕ ನಿಲುವಿನ ಲೇಖಕಿ ಶ್ಯಾಮಲಾ ಮಾಧವ ಅವರ ಆತ್ಮಕಥನ ‘ನಾಳೆ ಇನ್ನೂ ಕಾದಿದೆ’ ಪುಸ್ತಕರೂಪದಲ್ಲಿ ಬೆಳಕು ಕಂಡದ್ದು ಔಚಿತ್ಯಪೂರ್ಣವಾಗಿದೆ. ಕೃತಿಯ ಶೀರ್ಷಿಕೆಯೇ ಸೂಚಿಸುವಂತೆ ಪ್ರಸ್ತು ಆತ್ಮಕಥನವೂ ಪ್ರತಿಯೊಬ್ಬ ಓದುಗನಲ್ಲಿ ತಮ್ಮ ಬದುಕಿನ ಪುಟಗಳನ್ನು ಮತ್ತೋಮ್ಮೆ ಸಾವಧಾನವಾಗಿ ಅವಲೋಕಿಸುವುದನ್ನು ಪ್ರೇರೇಪಿಸುತ್ತದೆ; ಬದುಕಿನಲ್ಲಿ ತಾವುಂಡ ಸವಿನೆನಪುಗಳನ್ನು ತಾಜಾಗೊಳಿಸುತ್ತಾ, ಸಡಿಲಗೊಂಡ ಸಂಬಂಧಗಳನ್ನು ಮತ್ತೆ ಬೆಳೆಯುವ ಮೂಲಕ ನಾಳೆಯ ಕುರಿತು ಹೊಸ ಭರವಸೆಗಳ ಆಶಾಕಿರಣವನ್ನು ಮೂಡಿಸುತ್ತದೆ.

ಅತ್ರಿಬುಕ್ಸ್ ನ ಅಂತರ್ಜಾಲದ ಕೊಂಡಿಯಲ್ಲಿ ಧಾರವಾಹಿಯಾಗಿ ಈಗಾಗಲೇ ಅಪಾರ ಓದುಗ ವರ್ಗವನ್ನು ಆಕರ್ಷಿಸಿದೆ. ಕುವೆಂಪು ಅವರು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಪ್ರಾರಂಭದಲ್ಲಿ ‘ಇಲ್ಲಿ ಯಾರು ಮುಖ್ಯರಲ್ಲ; ಯಾರು ಅಮುಖ್ಯರಲ್ಲ’ ಎಂದಿರುವುದು ನಮಗೆಲ್ಲ ತಿಳಿದಿರುವ ಸಂಗತಿ. ಆದರೆ ಶ್ಯಾಮಲಾ ಅವರ ಆತ್ಮಕಥನವನ್ನು ಓದುತ್ತಾ ಹೋದರೆ ಇವರಿಗೆ–‘ಎಲ್ಲರು ಮುಖ್ಯರು, ಯಾರು ಅಮುಖ್ಯರಲ್ಲ’ ಎನ್ನುವುದು ಮನದಟ್ಟಾಗುತ್ತದೆ.

ಬಾಲ್ಯದಲ್ಲಿ ಕಂಡ ಹರಿಜನಕೇರಿಯ ‘ಅದ’, ಪಾಯಿಖಾನೆ ತೊಳೆಯುವ ಅವನ ಪತ್ನಿ ‘ಗುಲ್ಲಿ’, ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯ ಶುಶ್ರೂಷೆಯನ್ನು ಮಾಡುತ್ತಿದ್ದ ಫಾ.ಮುಲ್ಲರ್ ಆಸ್ಪತ್ರೆಯ ನರ್ಸುಗಳು ಬೀನಾ ಮತ್ತು ರೇಷ್ಮಾ, ಶಾಲಾ-ಕಾಲೇಜುಗಳ ಶಿಕ್ಷಕ-ಶಿಕ್ಷಕಿಯರು, ಗೆಳತಿಯರು, ನೆರೆಹೊರೆಯವರು, ಮನೆಯ ನಾಯಿ-ರಾಕಿ, ಬುಶ್, ವಿಂಟರ್, ಬದುಕಿನ ಪಯಣದ ಪ್ರತಿಯೊಂದು ತಿರುವಿನಲ್ಲಿ ಜೊತೆಯಾಗಿ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟ ಸಂಗಾತಿಗಳು ಹೀಗೆ ಪ್ರತಿಯೊಬ್ಬರನ್ನು ಶ್ಯಾಮಲಾ ನೆನಪಿನ ಮಡಿಲಲ್ಲಿ ಜೋಪಾನವಾಗಿಟ್ಟಿರುವ ಪರಿ ಅಪರೂಪವಾದುದು, ಬೆರಗು ಮೂಡಿಸುವುದು.

ಇವರೆಲ್ಲರಿಗೆ ಕಲಶಪ್ರಾಯರಾದ ತಮ್ಮ ಮನೆತನದ ಹಿರಿಯರ ಬದುಕಿನ ಕುತsಹಲಕಾರಿ ಘಟನೆಗಳ ಮೂಲಕ ಅವರ ಅನನ್ಯ ಅನುಭವಗಳನ್ನು ಕಟ್ಟಿಕೊಡುತ್ತಾ ಓದುಗರ ಮುಂದೆ ಅನೂಹ್ಯಲೋಕವನ್ನು ತೆರೆದಿಡುತ್ತಾರೆ. ಸುಶಿಕ್ಷಿತ ಹಿರಿಯ ತಲೆಮಾರಿನವರು ತಮ್ಮೂರಿನಲ್ಲಿ ಶಾಲೆಗಳನ್ನು ಸ್ಥಾಪಿಸಿ ವಿದ್ಯಾಪ್ರಸಾರ ಮಾಡುವ ಮೂಲಕ ಸಮಾಜಕಲ್ಯಾಣ ಮಾಡಿದ್ದರ ಕುರಿತು ಅಪಾರ ಅಭಿಮಾನ ಇವರಿಗೆ. ತಮ್ಮ ಪೂರ್ವಜರ ಬದುಕಿನ ಸಾಹಸ-ಸಾಧನೆಗಳ ಮುಂದೆ ತಾವು ಕಂಡುಂಡ ಅನುಭವಲೋಕ, ತಮ್ಮ ಸಾಧನೆಗಳು, ತಾವು ಪಡೆದ ಪ್ರಶಸ್ತಿಗಳೆಲ್ಲವೂ ನಗಣ್ಯ ಎನ್ನುವ ತಟಸ್ಥಭಾವ ಇವರದ್ದು.

ಓದುತ್ತಾ ಹೋದಂತೆ ಅವರೊಂದಿಗೆ ನಾನು ಅವರು ಕಟ್ಟಿ ಡುವ ಅವರ ಶಾಲಾ-ಕಾಲೇಜುಗಳ (ಮುಖ್ಯವಾಗಿ ಬೆಸೆಂಟ್ ಶಾಲೆ) ಗೆಳತಿರ‍ಲ್ಲಿ ಓರ್ವಳಾಗಿ ಅವರ ಶಾಲೆಯ ಚಟುವಟಿಕೆಗಳಲ್ಲಿ ಒಡನಾಡಿಯಾಗಿ, ಗುಡ್ದೆಮನೆ ಮುಂದಿನ ಹಾದಿಯಲ್ಲಿ ಕೈಕೈ ಹಿಡಿದು ಸುತ್ತಾಡುತ್ತಾ, ಬಣ್ಣಬಣ್ಣದ ಹೂಗಳನ್ನು ಹೆಕ್ಕಿ ಆಘ್ರಾಣಿಸುತ್ತಾ, ಸಮುದ್ರತೀರಗಳಲ್ಲಿ ಮನದಣಿಯೆ ಆಟವಾಡಿ ಮರಳಲ್ಲಿ ಹೊರಳಾಡಿ, ಅವರು ನೋಡಿದ ಸಿನೇಮಾಗಳು, ಓದಿ ಆನಂದಿಸಿದ ಪುಸ್ತಕಗಳ ಚರ್ಚೆಯಲ್ಲಿ ಭಾಗವಹಿಸಿ, ಅವರೊಂದಿಗೆ ಬುಶ್ ಮತ್ತು ವಿಂಟರ್‌ನನ್ನು ಹಿಡಿಯಲು ಶತಪ್ರಯತ್ನ ಮಾಡಿ ದಣಿದ ಅನುಭವ ನನದೂ ಆಗಿ ಮನಸ್ಸು ಹಗುರವಾಯಿತು. ಇಂತಿರುವಾಗ ಅವರೊಂದಿಗಿನ ಮಾತುಕತೆಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಗೊಳ್ಳುತ್ತಿದ್ದ ಅವರ ಪ್ರೀತಿಯ ಶಾರದತ್ತೆ ಅರ್ಥಾತ್ ಅಮ್ಮಾಯಿ, ಬೆಲ್ಯಮ್ಮ, ಭಾಮಾಂಟಿ, ಗೆಳತಿ ಸ್ವರ್ಣಾ ಮುಂತಾದವರು ನನ್ನವರೇ ಎಂದೆನಿಸಿದರೆ ಅದರ‍ಲ್ಲಿ ತಪ್ಪೇನು?

ಎಷ್ಟೊಂದು ನೆನಪುಗಳು!!! ತಮ್ಮ ಬದುಕಿನ ಘಟನೆಗಳನ್ನು ಮಾತ್ರವಲ್ಲ ಬಂಧು-ಬಳಗದವರ, ಮಿತ್ರವರ್ಗದ ಪ್ರತಿಯೊಂದು ವಿಷಯಗಳನ್ನು ಚಾಚುತಪ್ಪದೆ ನೆನಪಿಟ್ಟುಕೊಂಡಿದ್ದಾರೆ. ಬಂಧುಗಳ ಮರಣಕ್ಕೆ ದುಃಖಿಸುವ ಶ್ಯಾಮಲಾ, ನರ್ಸ್ ಬೀನಾಳ, ಸಾಕುನಾಯಿಗಳ ಅಗ್ಯಕೆಯ ನೋವನ್ನು ದಾಖ್ಯಸಿರುವುದು ಇಲ್ಲಿ ಮುಖ್ಯವಾಗುತ್ತದೆ. ತಮ್ಮ ಅನಾರೋಗ್ಯದ ವೇಳೆಯಲ್ಲಿ ಡಾಕ್ಟರ್‌ಗಳು ನೀಡಿದ ಔಷಧಿಗಳನ್ನು ಅತ್ಯಂತ ನಿಖರವಾಗಿ ನಮೂದಿಸಿದ್ದಾರೆ.

ಮನುಷ್ಯರಿಗಿಂತಲು ಪ್ರಕೃತಿಯನ್ನು, ಮೂಕಪ್ರಾಣಿಗಳನ್ನು ಗಾಢವಾಗಿ ಪ್ರೀತಿಸುವ ಶ್ಯಾಮಲಾರಿಗೆ ಬದಲಾದ ತಮ್ಮೂರಿನ ಪರಿಕರ-ತಮ್ಮ ಮನೆಯ ಮುಂದಿನ ಜಾಗದಲ್ಲಿ ತಲೆ ಎತ್ತಿರುವ ಚತುಷ್ಪಥ, ಅತ್ಯಂತ ಪ್ರೀತಿಯ ಸಮುದ್ರತಡಿಯಲ್ಲಿ ಪೇರಿಸಲ್ಪಟ್ಟ ಬಂಡೆಗಳ ತಡೆಗೋಡೆ; ಮನುಜನಿರ್ಮಿತ ಕಲ್ಮಷಗಳಿಂದಾಗಿ ಉಸಿರುಗಟ್ಟಿರುವ ಅಳಿವೆ, ಮಂಗಳೂರಿನ ಬಾವುಟಗುಡ್ಡೆಯಿಂದ ಕಾಣಸಿಗುತ್ತಿದ್ದ ಸೂರ್ಯಾಸ್ತವನ್ನು ಮರೆಮಾಡಲೆಂದೇ ತಲೆ ಎತ್ತಿರುವ ಬೃಹತ್ ವಸತಿ ಸಂಕೀರ್ಣ, ಎತ್ತಿನ ಹೊಳೆಯ ಯೋಜನೆಯ ನೆಪದಲ್ಲಿ ಪಶ್ಚಿಮ ಘಟ್ಟವನ್ನು ಹಾಳು ಕೆಡವಲಾಗುವ ನೇತ್ರಾವತಿ ನದಿಯ ತಿರುವು ಇತ್ಯಾದಿ ಬಹಳ ಕಾಡುವ ವಿಷಯಗಳು. ಅತ್ಯಂತ ಭಾವಜೀವಿ ಪರಿಸರಪ್ರೇಮಿ ಶ್ಯಾಮಲಾ ಮನಸ್ಸಿಗೆ ಅನಿಸಿದ್ದನ್ನು ಹೇಳಿಬಿಡುವ ತಮ್ಮ ನಿರ್ಭಿಡೆ ಸ್ವಭಾವದಿಂದಾಗಿ ಇವುಗಳನ್ನು ಅಕ್ಷರರೂಪಕ್ಕಿಳಿಸಿದ್ದಾರೆ.

ವಿಶ್ವಸಾಹಿತ್ಯದ ಅತ್ಯುತ್ತಮ ಕೃತಿಗಳನ್ನೆಲ್ಲಾ ಕನ್ನಡ ಓದುಗರಿಗೆ ದೊರೆಕಿಸಬೇಕೆನ್ನುವ ನಿಟ್ಟಿನಲ್ಲಿ ಈಗಾಗಲೇ ‘ಗಾನ್ ವಿದ್ ದ ವಿಂಡ್’ ‘ಫ್ರಾಂಕಿನ್‌ ಸ್ಟೈನ್’ ‘ ಜೇನ್ ಏರ್’ ‘ವೂದರಿಂಗ್ ಹೈಟ್ಸ್’ ನಂತಹ ಕ್ಲಾಸಿಕ್‌ಗಳನ್ನು ಅನುವಾದ ಮಾಡಿದ ಶ್ರೇಯಸ್ಸು ಇವರದ್ದು. ಅನುವಾದವೆಂದರೆ ನೀರು ಕುಡಿದಂತೆ. ಮೂಲಕೃತಿ ಇಂಗ್ಲೀಷ್‌ನಲ್ಲಿರಲಿ, ಹಿಂದಿ-ಮರಾಠಿಯಲ್ಲಿ ಇರಲಿ, ನಿರ್ಧಾರ ಮಾಡಿ ಒಮ್ಮೆ ಕೈಗೆತ್ತಿಕೊಂಡರೋ ಅದು ಮುಗಿಯುವವರೆಗೆ ತಮ್ಮ ಆರೋಗ್ಯವನ್ನು ಕಡೆಗಣಿಸಿ ಅಹೋರಾತ್ರಿ ಮಾಡಿರುವ ಪರಿಶ್ರಮಕ್ಕೆ ಸಾಟಿಯಿಲ್ಲ. ಅವರ ಈ ಜಿಗುಟುತನವನ್ನು ಜಯಂತ ಕಾಯ್ಕಿಣಿಯವರು ‘ವ್ರತ’ವೆಂದು, ಕೆ.ಟಿ.ಗಟ್ಟಿಯವರು ‘ತಪಸ್ಸು’ ಎಂದು ಗುರುತಿಸಿರುವುದು ಯೋಗ್ಯವಾದುದು. ಅನುವಾದ ಮಾತ್ರವಲ್ಲದೆ, ಅಂಕಣಬರಹ, ಜೀವನಚರಿತ್ರೆ, ಕಥಾಸಂಕಲವನ್ನು ಪ್ರಕಟಿಸಿದ್ದು ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿರುವರು.

ಮೂರ್ನಾಲ್ಕು ತಲೆಮಾರಿನ ಒಂದು ಕುಟುಂಬದ ಕಥಾನಕವು ಒಂದು ನಿರ್ದಿಷ್ಟ ಕಾಲಘಟ್ಟದ, ವಿವಿಧ ಜನಾಂಗ, ವಿವಿಧ ಧರ್ಮೀಯ ಜನರ ಬದುಕನ್ನು, ವೈಚಾರಿಕತೆಯನ್ನು, ಸಾಮಾಜಿಕ ಪಲ್ಲಟಗಳನ್ನು ಕಟ್ಟಿಕೊಡುವುದರೊಂದಿಗೆ, ತನ್ನ ಹಳೆರೂಪು ತ್ಯಜಿಸಿ ಆಧುನಿಕತೆಯ ಥಳಕು ಬೆಳಕಿನತ್ತ ವಾಲುತ್ತಾ ಬಂದ ಮಂಗಳsರಿನ ಐತಿಹಾಸಿಕ ದಾಖಲೆಯೂ ಹೌದು. ಪ್ರಸ್ತುತ ಆತ್ಮಕಥನವನ್ನು ಕಾದಂಬರಿಯ ರೂಪದಲ್ಲಿ ಬರೆಯುತ್ತಿದ್ದರೆ ಒಂದು ಬೃಹತ್ ಕಾದಂಬರಿಯಾಗುತ್ತಿತ್ತೇನೋ ನಿಜ. ಆದರೆ ‘ಹೃದಯದಲ್ಲಿ ಬರೆದುದೆಲ್ಲವನ್ನು ಅಕ್ಷರಕ್ಕಿಳಿಸುವುದು ಸಾಧ್ಯವೂ ಅಲ್ಲ; ಸಾಧುವೂ ಅಲ್ಲ.’ ಎನ್ನುವ ಶ್ಯಾಮಲಾ ಅವರಿಗೆ ಅನುವಾದದ ಕುರಿತು ಇರುವ ಆಸ್ಥೆ-ಆಸಕ್ತಿ ಸ್ವಾತಂತ್ರ ಬರವಣಿಗೆಯ ಕುರಿತು ಇಲ್ಲ ಎನ್ನುವುದು ಮಾತ್ರ ಸ್ಪಷ್ಟ.

ಈ ಕುರಿತು ನಾನು ಅವರ‍ಲ್ಲಿ ಬಹಳ ಸಲ ವಾದ ಮಾಡಿದ್ದುಂಟು. ‘ನಾಳೆ ಇನ್ನೂ ಇದೆ’ ಎನ್ನುತ್ತಾ ನಾಳೆ ಇನ್ನಿಲ್ಲವೆಂಬಂತೆ ಬರೆಯುತ್ತಿರುವ ಆತ್ಮೀಯ ಗೆಳತಿ ಶ್ಯಾಮಲಾಳ ಬರವಣಿಗೆ ನಿರಂತರವಾಗರ‍್ಯ. ಅತ್ಯಂತ ವಿರಳವಾಗುತ್ತಿರುವ ನಿಷ್ಕಲ್ಮಶ ವ್ಯಕ್ತಿತ್ವ, ಆತ್ಮೀಯತೆಯ ಸಂವೇದನಾಶೀಲತೆಯ ಸಾಕಾರ ಶ್ಯಾಮಲಾ. ಅವರ ಅಧ್ಯಯನ ಶೀಲತೆ, ಅವರು ಸಿಕ್ಕಸಿಕ್ಕಲ್ಲಿ ಜೋಡಿಸುತ್ತಾ ಹೋಗುವ ಸ್ನೇಹತಂತುವಿನ ಮೂಲಕ ಅವರದಾಗುವ ಅನನ್ಯ ಅನುಭವಲೋಕ, ಅವರ‍ಲ್ಲಿ ಹುದುಗಿರುವ ಅಪಾರ ಶಬ್ಧ ಭಂಡಾರ, ಕಾವ್ಯಾತ್ಮಕ ನಿರೂಪಣಾ ಶೈಲಿ, ಸಾಹಿತ್ಯದ ಕುರಿತು ಅವರಿಗಿರುವ ಆಸ್ಥೆಯಿಂದಾಗಿ ಇನ್ನಷ್ಟು ಕೃತಿಗಳು ಅವರ ಲೇಖನಿಯಿಂದ ಮೂಡಿ ಕನ್ನಡ ಸಾರಸ್ವತಲೋಕವನ್ನು ಶ್ರೀಮಂತಗೊಳಿಸಲಿ ಎನ್ನುವುದು ನನ್ನ ಹಾರೈಕೆ.

‍ಲೇಖಕರು Avadhi

May 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: