ನಾರಾಯಣ ಯಾಜಿ ಓದಿದ ‘ಕಣ್ಣಿನಲಿ ನಿಂತ ಗಾಳಿ’

ನಾರಾಯಣ ಯಾಜಿ

ರಾಜು ಹೆಗಡೆ ಅವರ ಕವನವನ್ನು ಅವರ ಪ್ರಾರಂಭದ ದಿನದಿಂದಲೂ ಓದುತ್ತಾ ಬಂದವನು ನಾನು. ಅವರ ಕವನವಿರಲಿ, ಕತೆಯಿರಲಿ ಅದರಲ್ಲಿ ಅವರು ಬೆಳೆದ ಶರಾವತಿ ನದಿದಂಡೆ ಬಹಳಷ್ಟು ಪ್ರಭಾವವನ್ನು ಬೀರಿದೆ. ಉತ್ತರ ಕನ್ನಡದ ಕತೆಗಾರರಲ್ಲಿ ಅವರವರು ಬೆಳೆದ ಊರು ಮತ್ತು ಪರಿಸರ ಮುಖ್ಯ ಪಾತ್ರವನ್ನು ವಹಿಸುತ್ತದೆ. ರಾಜು ಇದಕ್ಕೆ ಹೊರತಲ್ಲ. ಅವರ ಸಾಹಿತ್ಯದಲ್ಲಿ ಬರುವ ಮಾಗೋಡು, ಹೈಗುಂದ, ಕೆರಮನೆ ಮತ್ತು ಚಿಟ್ಟಾಣಿ ಅವರ ಯಕ್ಷಗಾನ ಅಭಿಮಾನಿಗಳ ನಡುವಿನ ಹೊಯ್ ಕೈ ಇವೆಲ್ಲವೂ ನಿಜಜೀವನದಲ್ಲಿ ನಡೆದ ಸಂಗತಿಗಳು. ಶರಾವತಿ ನದಿ ಜೋಗವನ್ನು ಇಳಿದು ಸಮುದ್ರಕ್ಕೆ ಸೇರುವಾಗ ಗೇರುಸೊಪ್ಪಾದಿಂದ ಹಿಡಿದು ಹೊನ್ನಾವರದವರೆಗಿನ ದಂಡೆಗಳಲ್ಲಿ ಜನಜೀವನ ತುಂಬಾ ನಿಧಾನ, ಒಂದು ಕಾಲಕ್ಕೆ ಮಾಗೋಡಿನಿಂದ ಹೊನ್ನಾವರಕ್ಕೆ ಬರುವವರು ಗೇರುಸೊಪ್ಪಾ ಲಾಂಚ್ ಅಥವಾ ದೋಣಿಯನ್ನು ಅವಲಂಭಿಸಬೇಕಾಗಿತ್ತು. ಅವು ನದಿಯಲ್ಲಿ ತೇಲಿ ಬರುವಾಗ ನದಿ ಹರಿಯದೇ ನಿಂತಲ್ಲೇ ನಿಂತಿರುವಂತೆ ಕಾಣುತ್ತದೆ.

ನೀರಿನಲ್ಲಿ ಸಮುದ್ರದ ಉಪ್ಪಿನಂಶವಿರುವ ಕಾರಣದಿಂದಾಗಿ ಕುಡಿಯುವಂತೆಯೂ ಇಲ್ಲ. ಎಲ್ಲ ಇದ್ದೂ ಯಾವುದೂ ಉಪಯೋಗಕ್ಕಿಲ್ಲದ ಸಂಗತಿಗಳಂತೆ ತೋರುವುದಾದರೂ ಅದರಲ್ಲಿನ ಸಂಕೀರ್ಣತೆಯನ್ನು ತಿಳಿಯಾಗಿಸಿಕೊಂಡರೆ ನದಿಯಲ್ಲಿ ಸಿಗುವ ಬಳಚು (ಕಪ್ಪೆಚಿಪ್ಪುವಿನಂತೆ) ಕಲ್ಲಿನಂತೆ ಒಳಗೆ ಮೃದುವಾಗಿರುತ್ತದೆ. ರಾಜು ಹೆಗಡೆಯವರ ಕವನಗಳಲ್ಲಿ ಈ ಗುಣಗಳನ್ನು ಕಾಣಬಹುದಾಗಿದೆ. ಇವರ ಕವನಗಳಲ್ಲಿ ಬಳಸುವ ಪ್ರತಿಮೆಗಳು ನಿಗೂಢವಾಗಿರುವುದಿಲ್ಲ. ಅದರಲ್ಲಿ ಕಾವ್ಯಕ್ಕಿರಬೇಕಾದ ಗೇಯತೆಯ ಹದವನ್ನು ತಪ್ಪದೇ ಪಾಲಿಸುತ್ತದೆ. ಇಲ್ಲಿನ ಕಾವ್ಯಗಳಲ್ಲಿ ಕವಿ ಅಡಗಿಬಿಡುತ್ತಾನೆ. ಸಾಹಿತ್ಯವೆನ್ನುವುದು ಗೆಲ್ಲಬೇಕಾದರೆ ಈ ಅಡಗಿಕೊಳುವ ಮತ್ತು ಅಡಗಿಸಿಬಿಡುವ ಸಾಮರ್ಥ್ಯ ಆತ ರಚಿಸಿದ ಕೃತಿಗಿರಬೇಕಾಗುತ್ತದೆ. ಈ ಗುಣಗಳನ್ನು ನಿರಂತರವಾಗಿ ನೋಡುತ್ತಾ ಬಂದ ನನಗೆ ಅವರ ಹೊಸ ಕವನ ಸಂಕಲನ “ಕಣ್ಣಿನಲ್ಲಿ ನಿಂತ ಗಾಳಿ” ಈ ಎಲ್ಲ ಸಾರವನ್ನು ತುಂಬಿಕೊಂಡ ಕವನಸಂಗ್ರಹವಾಗಿ ಕಾಣಿಸುತ್ತದೆ. ಅದನ್ನು ಮಳೆ ಮೀಯುತ್ತಿದೆ ಎನ್ನುವ ಕವನದಲ್ಲಿ

ಮಳೆ ಮೀಯುತ್ತಿದೆ
ಬಿಸಿಲಲ್ಲಿ ಮೋಡ ಆಡುತ್ತವೆ
ನಂತರದ ಸಾಲಿನಲ್ಲಿ ಬರುವ
ಅವಳು ಸುಸ್ತಾದಂತೆ ಕಾಣುತ್ತಾಳೆ
ಎಲಬು ಚರ್ಮ ಮಾತ್ರೈದೆ
ಬಿಳಿಯ ಹಲ್ಲು
ಹೊಳೆವ ಕಣ್ಣುಗಳು
ಮಳೆ ಮೀಯುತ್ತಿದೆ

ಎಂದು ಒಂದೇ ಸಲಕ್ಕೆ ಕವನದ ಸ್ವಸರೂಪವನ್ನು ರಮ್ಯದಿಂದ ದುಗುಡಕ್ಕೆ ಬದಲಾಯಿಸಿಬಿಡುತ್ತಾರೆ. ಇಲ್ಲಿ ಅವಳ ಸುಸ್ತಿಗೆ ಕಾರಣ ಮಳೆ ಮೀಯುವದು ಎನ್ನುವ ಗುಮಾನಿಯನ್ನೂ ಹುಟ್ಟುಹಾಕುತ್ತದೆ. ಚೊಕ್ಕಗೊಳಿಸುವ ಮಳೆಗೇ ತನ್ನನ್ನು ಚೊಕ್ಕಟವಾಗಿಟ್ಟುಕೊಳ್ಳುವ ಹೊತ್ತು ಎದುರಾಗಿದೆ. ಮೋಡ ಮತ್ತು ಸೂರ್ಯನ ಚಲ್ಲಾಟೆವೆಂದರೆ ನೆರಳು ಮುಗಿಲಿನಾಟ. ಆ ಮೋಡ ನೀರಿಲ್ಲದ ಮೋಡವೂ ಹೌದು, ಪರಿಸರದ ಮಾಲಿನ್ಯದಿಂದ ಮಳೆನೀರು ಮಲಿನವಾಗಿ ತನ್ನನ್ನು ತಾನೇ ಚೊಕ್ಕಗೊಳಿಸುವ ಕ್ರಿಯೆಯಲ್ಲಿ ಎಲ್ಲವನ್ನೂ ಬಿಟ್ಟು ಧೋ ಧೋ ಎಂದು ಜೋರಾಗಿ ಬೀಳುವುದೂ ಆಗಿರಬಹುದು, ಹೀಗೆ ಹಲ ಸಂಗತಿಗಳನ್ನು ರಾಜು ಹೊರಹಾಕಿ ತಾನು ತಣ್ಣಗೆ ಅಡಗಿಬಿಡುತ್ತಾರೆ. ಕೊಳೆತೊಳೆವ ಭರದಲ್ಲಿ ನೀರು ಹೆಣ್ಣಾಗಿ ತನ್ನ ಅಂತರಂಗದಲ್ಲಿ ರೋಧಿಸುವ ಆದರೆ ಆ ರೋಧನಕ್ಕೆ ತಹಮಿಕೆಯನ್ನು ಹಾಡುವಿಕೆಯಲ್ಲಿ ಕಂಡುಕೊಳ್ಳುವ ಉತ್ತರ ಕಾಣುತ್ತದೆ. ಹೀಗೆ ಉತ್ತರ ಸಿಕ್ಕಿತು ಎಂದು ಅಂದುಕೊಳ್ಳುವಾಗ ಕೊನೆಗೊಂದು ಗೂಢತೆಯಿದೆ.

ಆದರೆ
ಮಳೆ….

ಇದಕ್ಕೆ ವ್ಯಾಖ್ಯಾನವನ್ನು ಹೇಗೆ ಬೇಕಾದರೂ ಮಾಡಿಕೊಳ್ಳಬಹುದು. ಮನುಷ್ಯನ ಸಂಯಮ, ಪ್ರೀತಿ ನೋವಿಗೆ ಒಂದು ಮಿತಿಯಿದೆ, ಆದರೆ ಮೀಯುವ ಮಳೆ ಅದು ಪ್ರಕೃತಿ ಅದು ನಮ್ಮ ನಿಯಂತ್ರಣದಲ್ಲಿಲ್ಲ; ಇನ್ನೊಬ್ಬರನ್ನು ಮೀಯಿಸುವ ಮಳೆ ತಾನೇ ಮೀಯತೊಡಗಿದರೆ ಎನ್ನುವ ವಿರಾಮದಲ್ಲಿ (Pause) ಕಾವ್ಯ ಪುನಃ ಪ್ರಾರಂಭವಾಗುವ ಬಿಂದುವಾಗಿ ಹೊಮ್ಮಿದೆ. ಅವರ ಮುಂದಿನ “ಪೇಟೆಯಲ್ಲಿ ಸಿಕ್ಕವಳು” ಎನ್ನುವ ಕವನದಲ್ಲಿ . ಮತ್ತೊಮ್ಮೆ ಮೀಯುವ ಸಂಗತಿಯನ್ನು ಮುಂದುವರಿಸುತ್ತಾರೆ.

ಜಾತ್ರೆ
ಪೇಟೆಯಲಿ
ಕಳೆದು ಹೋದವಳು
ಅಚಾನಕ್ ಆಗಿ
ಅಂಗಡಿ ಬಾಗಿಲಲ್ಲಿ
ಸಿಕ್ಕಂತಿದೆ. . . .
ಎಂದು ಪ್ರಾರಂಭವಾಗುವ ಕವನ ಕೊನೆಗೆ
ಈಗ
ನದಿ
ಮೀಯುತ್ತಿದೆ ಕಡಲಲ್ಲಿ
ಕಾಲ ಕಳೆದುಕೊಳ್ಳಲಿ ಕಾಲನ್ನು
ಎನ್ನುತ್ತಾ. . .

ರಾಜುವಿನ ಕವನಗಳಲ್ಲಿ ಅವಳು ಹೆಂಡತಿ, ಪ್ರೇಯಸಿ, ಗೆಳತಿ ಹೀಗೆ ಹಲ ಬಗೆಯಲ್ಲಿ ಕಾಡುತ್ತಿರುತಾಳೆ. ಕಳೆದು ಹೋದವಳು ಎನ್ನುವುದು ಇದ್ದು ಮಾಯವಾದುದರ ಸಂಕೇತವೂ ಹೌದು. ಕೆ. ಎಸ್. ನರಸಿಂಹಸ್ವಾಮಿಯವರ “ನಮ್ಮೂರ ಸಂತೆಯಲಿ … ಅತ್ತಿತ್ತ ಸುಳಿದವರು ನೀವಲ್ಲವೇ ಎನ್ನುವ ಕವನವನ್ನು ನೆನಪಿಸುವ ಇದು ನಂತರ ಹಟಾತ್ ಆಗಿ ತಿರುವನ್ನು ಪಡೆದುಕೊಳ್ಳುವುದು ಅವಳನ್ನು ಮರೆಯಲಾರದ ತನ್ನ ನದಿ ಕಡಲಾದಂತೆ ಎನ್ನುವ ಆಕೆಯ ಮೇಲಿರುವ ತನ್ನ ಹಂಬಲವನ್ನು ತೋಡಿಕೊಳ್ಳುತ್ತಿರುತ್ತದೆ. ಮಳೆಯ ಹನಿಯೂ ನೀರು, ನದಿಯಲ್ಲಿ ಹರಿಯುವುದೂ ನೀರೆ. ಇಲ್ಲಿ ನದಿ ಕಡಲಲ್ಲಿ ಮೀಯುತಿದೆ. ಕಾಲ ಮತ್ತು ಕಾಲ ಕೂಡಿಕೊಂಡಾಗ. ಅಲ್ಲಿರುವುದು ಅಸ್ತಿತ್ವವೇ ಇಲ್ಲದ ವ್ಯಕ್ತಿತ್ವ. ಇಲ್ಲಿ ಕಾವ್ಯಾರ್ಥ ಹೊಮ್ಮುವುದು ಟೇಲರ್ ಅಂಗಿಯನ್ನು ಹೊಲಿದಂತೆ. ಹೊಲಿಯುವ ಕ್ರಿಯೆಯಲ್ಲಿ ಕತ್ತರಿಸುವುದು ಮತ್ತು ಕೂಡುವುದು ಎರಡೂ ಇದೆ.

ಕತ್ತರಿಸುವುದು ಕೂಡಿಸಲಿಕ್ಕಾಗಿ, ಸಮಗ್ರವಾದ ತನ್ನ ಬಟ್ಟೆಯನ್ನು (ಬಟ್ಟೆ ಎನ್ನುವುದಕ್ಕೆ ಬದುಕು ಎನ್ನುವ ಅರ್ಥವೂ ಇದೆ.) ಅಮೂರ್ತವಾದ ಅವಳಲ್ಲಿ ಸೇರಿಕೊಳ್ಳುವಾಗ ಅರ್ಧನಾರೀಶ್ವರ ಭಾವವಾಗಬೇಕು. ಅದಾಗಿದೆ ಇಲ್ಲಿ ಎನ್ನುವುದನ್ನು ಅರ್ಥಪೂರ್ಣವಾಗಿ ಧ್ವನಿಸಿದ್ದಾರೆ. “ಬೇಸಿಗೆಯಲ್ಲಿ ಮಳೆ” ಎನ್ನುವ ಕವನದಲ್ಲಿ ಇದೇ ಮಳೆಯ ಹೊಸ ಆಯಾಮವನ್ನು ಕಾಣಬಹುದು. ದೇಹಕ್ಕೆ ವಯಸ್ಸಾದರೂ ತಾರುಣ್ಯದಿಂದ ಕೂಡಿರುವ ರಸಿಕ ಮನಸ್ಸು ರಾಜು ಹೆಗಡೆಯವರಲ್ಲಿದೆ. ಇವೆಲ್ಲವೂ ಪಾರದರ್ಶಕವಾದ ಕವನಗಳು ಎಂದು ಮೊದಲಿಗೆ ಅನಿಸುತ್ತದೆ. ಆದರೆ ಇವೆಲ್ಲವೂ ಸೀರೆಯೊಳಗಿರುವ ಹೆಣ್ಣಿನ ಆಕಾರದಂತೆ ಊಹಿಸುವುದರಲ್ಲಿರುವ ಕಲ್ಪನಾ ವಿಲಾಸ ತೆರೆದು ನೋಡುವುದರಲ್ಲಿರುವದಿಲ್ಲ. ಇದು ಹೆಗಡೆಯವರ ಮೂಲ ಗುಣವೂ ಹೌದು. ಅನಗತ್ಯವಾದ ಕ್ಲಿಷ್ಟತೆಗಳನ್ನು ಅವರ ಕವನಗಳಲ್ಲಿ ಕಾಣಲಾಗುವುದಿಲ್ಲ.

ನವ್ಯಕವಿಗಳ ಪ್ರಭಾವವನ್ನು ಇವರ ಕವನಗಳಲ್ಲಿ ಕಾಣಬಹುದಾದರೂ ಈ ಮುಚ್ಚಿ ತೆರೆದು ತೋರಿಸುವ ಗುಣ ಇತರ ಪ್ರಮುಖ ಕವಿಗಳಿಂದ ಇವರನ್ನು ಪ್ರತ್ಯೇಕವಾಗಿ ನಿಲ್ಲಿಸುತ್ತದೆ. ಕವನ ಸಾಗುವಾಗ ಒಮ್ಮೆ ಅಪ್ಪಟ ಪ್ರೇಮಿಯಾಗಿ ನರಸಿಂಹ ಸ್ವಾಮಿಯವರಂತೆ, ಇನ್ನೊಮ್ಮೆ ಬಿ. ಆರ್. ಲಕ್ಷ್ಮಣರಾಯರಂತೆ ಕಾಣುವ ರಾಜು ಅವರೆಲ್ಲರಿಗಿಂತ ಭಿನ್ನವಾಗುವುದು ಈ ಕಾರಣದಿಂದ. ಅನೇಕ ಸಾರೆ ಜಯಂತ ಕಾಯ್ಕಿಣಿಯವರ ಜಾಡನ್ನು ಕಾಣಬಹುದಾಗಿದೆ. ಅವರಂತೆ ಗದ್ಯಲಯವನ್ನು ಬಳಸಿಕೊಂಡು ಕಾವ್ಯಕ್ಕೆ ಸಹಜವಾದ ಲಯಗಳನ್ನು ನೇಯುವ ಕ್ರಿಯೆ ಇವರ ಕವನಗಳ ವಿಶೇಷ. ಇಲ್ಲಿನ ಕವನಗಳ ನವಿರುಗುಣ ಮತ್ತು ಆರ್ದ್ರಭಾವಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಅವುಗಳನ್ನು ಗಟ್ಟಿಯಾಗಿ ಓದಿಕೊಳ್ಳಬೇಕು. ಆಗ ಈ ಎಲ್ಲ ಅನುಭವಗಳು ನಮ್ಮ ಅನುಭವಕ್ಕೆ ಬರುತ್ತದೆ. ಇದನ್ನು ಅವರ “ಸೀರೆ ಹರಗುವುದು” ಎನ್ನುವ ಕವನದಲ್ಲಿ ಗಮನಿಸಬಹುದು.

ಸೀರೆಯ ಹರಗುವಿಕೆಯನ್ನು ಬಣ್ಣಿಸುತ್ತಾ ಚತುರ್ವಿದ ಪುರುಷಾರ್ಥಗಳತೆ ಎಂದು ಬಳ್ಳಿಯ ಮೇಲೆ ಹರವಿದ ನೀರೆಯ ಸೀರೆಯಿಂದ ಮದುವೆಯಲ್ಲಿ ಹೆಂಡತಿಗೆ ವಚನಕೊಡುವ ಧರ್ಮ ಅರ್ಥ ಕಾಮ ಮೋಕ್ಷಗಳ ಕಡೆ ನಮ್ಮನ್ನು ಸೆಳೆಯುತ್ತಾರೆ. ಒಂದು ನಾದ ಹೊಮ್ಮುವುದು ಇಂತಹ ಗಳಿಗೆಗಳಲ್ಲಿ. ಸೀರೆಯನ್ನು ಅಪಹರಿಸಿದವ ಮತ್ತು ಕೊಟ್ಟವ ಶ್ರೀಕೃಷ್ಣ ಮಾತ್ರ. ಹರಡುವಿಕೆಯ ಎಲ್ಲಾ ಆಯಾಮಗಳನ್ನು ವಿವರಿಸುತ್ತಾ ಮೂರ್ತವಾಗಿಸುವ ಸನ್ನಿವೇಶವನ್ನು ಅಮೂರ್ತವಾದ ಅಕ್ಷಯಾಂಬರಕ್ಕೆ ಕೊಂಡೊಯ್ಯುವುದಿದೆಯಲ್ಲ, ಅದು ಕಾವ್ಯದ ಕಲ್ಪನಾಶಕ್ತಿಯನ್ನು ನಿರ್ಣಯಿಸುತ್ತದೆ. ಇಲ್ಲಿನ ಕವನಗಳಲ್ಲಿ ಮುರಿಯುವ ಮತ್ತು ಕಟ್ಟುವ ಕ್ರಿಯೆಗಳಿಲ್ಲ. ಊದಿನಕಡ್ಡಿಯಿಂದ ಹೊರಟ ಹೊಗೆ ವಿಧವಿಧವಾದ ಆಕಾರವನ್ನು ಪಡೆದುಕೊಳ್ಳುತ್ತಾ ಕೋಣೆಯನ್ನೆಲ್ಲವನ್ನು ಆವರಿಸಿ ಅಮೂರ್ತವಾಗುವಿಕೆಯಂತೆ ಇವರ ಕಾವ್ಯಗಳು. ಉಪಯೋಗಿಸುವ ಪದಗಳಲ್ಲಿ ಅಸಂಸ್ಕೃತಿಯಿಲ್ಲ. ವಿಕೃತವಿನ್ಯಾಸಗಳಿಲ್ಲ. ಪ್ರತಿಮೆಯನ್ನು ಬಳಸುವ ಕ್ರಿಯೆಯಲ್ಲಿಯೂ ರಾಜು ಜಾಗರೂಕತೆ ವಹಿಸುತ್ತಾರೆ. “ದಾರಿ ದಿಕ್ಕು” ಎನ್ನುವಲ್ಲಿ

ಊರಲ್ಲಿ
ಕಾಡಿಗೆ ಹೋಗುದಾದರೂ
ಆರಾಮಾಗಿ ಹೋಗುತ್ತಿದ್ದೆವು

……………………

ಅಲ್ಲೂ ಈಗ
ಕಂಪೌಂಡು, ಬೇಲಿಗಲಾಗಿ
ಜಣಕುಜಣಕಾಗಿದೆ

ಜಣಕುಜಣಕು ಎನುವ ಗ್ರಾಮ್ಯಪದಲ್ಲಿನ ಸಂಗೀತದ ರಿದಂ ಗಮನಿಸಬಹುದು; ಸಂಗೀತದ ಪಹಾಡಿ ಧುನ್ ನಂತೆ ಹಳ್ಳಿ ಮತ್ತು ಬೆಂಗಳೂರು ಎರಡೂ ಒಂದೇ ಎನ್ನುವ ನಿರ್ಲಿಪ್ತ ಮನೋಭಾವ ತಾಳುವ ಕವಿತೆ ಕೊನೆಯಲ್ಲಿ “ಬಾರಿಗೆ ಹೋಗಿ ಕತ್ತಲಾಗುತ್ತೇನೆ” ಎನ್ನುವಲ್ಲಿ ಗುಂಗು ಏರಿಸಿಬಿಡುತ್ತದೆ. ಒಂಥರಾ ಗಜಲ್ ಕೇಳುತ್ತಾ ಅಮಲೇರಿಸಿಕೊಂಡಂತೆ. ರಾಜು ಹಾಡುವ ಕವಿತೆಗಳನ್ನು ಬರೆದಿಲ್ಲ. ಹಾಡುವ ಕವಿತೆಗಳಲ್ಲಿ ಸಂಗೀತ ರಾಗ ತಾಳ ಧ್ವನಿ ಇವೆಲ್ಲವುಗಳ ಸಮ್ಮಿಶ್ರ ಇರುತ್ತದೆ. ಅಲ್ಲಿ ಕಾವ್ಯದ ಒಳತಿರುಳು ಮತ್ತು ಧ್ವನಿಯನ್ನು ನಿಧಾನಕ್ಕೆ ಹುಡುಕಬೇಕಾಗುತ್ತದೆ. ಆದರೆ ಬಂಧಮುಕ್ತ ಕವನಗಳಲ್ಲಿ ಹಾಗಲ್ಲ. ಕಾವ್ಯವಿಲಾಸಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಇಂತಹ ಸಂಗತಿಗಳಲ್ಲಿ ಕನ್ನಡದ ಪ್ರಮುಖ ಕವಿಗಳಾಗಿ ಅವರು ಕಾಣಿಸಿಕೊಳ್ಳುವದನ್ನು ಗಮನಿಸಲು ಚಿಮುಕಿಸುವ ಕವನವನ್ನು ನೋಡಿ.

……….

ಅವಳ ಬಳೆಗಲ ಸದ್ದು
ಹಾಕುವವಳಲ್ಲ್ ಅವಳು ಅದನು
ಹಾಡು ಮುಂದುವರಿಯುತ್ತದೆ
ಹರಿವ ಹಳ್ಳ
ಕೊಳ್ಲಗಲಲ್ಲಿ ಉಲಿವ
ಬಿಳಿಯ ಕೊಳ್ಳಿ
ನಡೆದು ಹೋಗುತ್ತವೆ
ನದಿಗಳು
ಗುಡ್ಡ ಬೆಟ್ಟಗಳ ನಡುವೆ
ಆಗಾಗ ಚಿಮುಕಿಸುವ
ನರಳು
ಅವಳ ಬೆರಳು

ಸುಮ್ಮನೆ ಬಿ. ಆರ್. ಲಕ್ಷ್ಮಣರಾಯರ ಗೋಪಿ ಮತ್ತು ಗಾಂಡಲಿನಾ ನೆನಪು ಮಾಡಿಸುವ ಕವನವಾದರೂ ಅದರಿಂದ ಆಚೆ ನಿಂತಿದೆ. ನವಿರಾದ ಕಚಕುಳಿಯನ್ನು ಇಡಿಸುತ್ತಾ ಬೆರಳಿನಾಟವನ್ನು ಮೂರ್ತಮಾಡಿಸುವ ಕವನ ಇದು.

ಇದೇ ರಾಜು ಆಯಿ ಎನ್ನುವ ಕವನದಲ್ಲಿ
ಮೌನದ ಬಗ್ಗೆ
ಮಾತಾಡುವದು ಹೇಗೆ

ಎನ್ನುತ್ತಾ ತರುವ ಚಿತ್ರಣ ಎಲ್ಲರ ಮನೆಯ ಅಮ್ಮನನನ್ನು ನೆನಪಿಸುತ್ತಾರೆ. ಅಲೆಮಾರಿ ಗಂಡನ ಹೆಂಡತಿಯಾಗಿ ಎಲ್ಲವನ್ನು ಸಹಿಸಿ ಬದುಕು ಸವೆಸುವದು ಇದೆಯಲ್ಲ ಅದೆಲ್ಲದರ ಪ್ರತಿನಿಧಿಯಾಗಿದ್ದಾಳೆ. ಕೊನೆಗೆ

ನೋಡುವದೇನೂ ಇಲ್ಲ ನನಗೆ
ಕಾಣುವುದನ್ನು ಬಿಟ್ಟು

ಎನ್ನುವಾಗ ಎದೆಯೊಳಗೆ ಎಲ್ಲ ದುಃಖವನ್ನು ಅವಿತಿಟ್ಟು ಅದನ್ನು ಸ್ಪೋಟಿಸಲಿಕ್ಕೂ ಆಗದ ಅಸಹಾಯಕತೆಯ ಆಯಿಯ ಚಿತ್ರಣವನ್ನು ಚಿತ್ರಿಸಿದ್ದಾರೆ. ಕಾವ್ಯವೆನ್ನುವುದು ಬದುಕಿನ ಕನ್ನಡಿಯಾಗುವ ಹೊತ್ತಿನಲ್ಲಿ ಅನೇಕ ಸಲ ಮುಖನೋಡುವ ಧೈರ್ಯ ಬರುವುದಿಲ್ಲ. ನಮ್ಮ ಮುಖಕ್ಕೆ ನಾವೇ ಮೆತ್ತಿಕೊಂಡ ಕಲೆ ನಮ್ಮನ್ನು ಹೆದರಿಸಿತು ಎನ್ನುವ ಭಯ. ಅಂತಹ ಸ್ಥಿತಿಯಲ್ಲಿ ಇಲ್ಲಿ ಕವಿಯಿದ್ದಾನೆ. ಕವನದ ಭಾವ ತೀವ್ರತೆ ನಿರ್ಭಾವುಕದಲ್ಲಿ ಹುಟ್ಟುತ್ತದೆ. ಈ ನಿರ್ಭಾವುಕತೆ ನಮ್ಮ ಪಲಾಯನವಾದದಲ್ಲಿಯೂ ಅನೇಕ ಸಲ ಇದು ಕವಿಯ ಅಸಹಾಯಕತೆಯ ಪರಿಣಾಮವೂ ಹೌದು.

ಮೊದಲೇ ಹೇಳಿದಂತೆ ಇಲ್ಲೆಲ್ಲ ತಾನು ಕಂಡ ತನ್ನ ಊರಿನ ಬದುಕಿನ ಹಿನ್ನೆಲೆ ಇದರಲ್ಲಿದೆ. ಹಾಗಾಗಿ ರಾಜು ಊರಿನಲ್ಲಿ ಎರಡು ಸಾಬರ ಅಂಗಡಿಯ ಕುರಿತು ತಮಾಷೆಗಾಗಿ ಹಾಡುವ “ಇದ್ರೂ ಸೈಬ್ರು, ಸತ್ರೂ ಸೈಬ್ರು” ಹಾಡನ್ನು ಹೊಸ ನಮೂನೆಯಿಂದ ದುಡಿಸಿಕೊಳ್ಳಬಲ್ಲರು. ಇಲ್ಲಿ ಬರುವ ಸಂಶಿಪೇಸ್ತು, ಜಾತ್ರೆ ಎಲ್ಲದರಲ್ಲಿ ಸೈಬ್ರು ಅಂಗಡಿ. ಅದು ಕಾಣಿಸದಿರುವ ಮತ್ತು ಕಾಣಿಸಕೊಳ್ಳಬೇಕಾದ ಕಾಲದ ತುರ್ತನ್ನು

ಪೇಸ್ತ್ ಮುಗಿದು
ತೇರು ಬಂತು

ಎನ್ನುವಲ್ಲಿ ಧರ್ಮ ಸಾಮರಸ್ಯವನ್ನು ಕಣ್ಣಿಗೆ ಕಟ್ಟುವಂತೆ ಬರೆಯುತ್ತಾರೆ. ಈ ಹೊತ್ತಿನ ಅನಿವಾರ್ಯತೆಯು ಇದಾಗಿದೆ.ಅವರ ಕವನಗಳಲ್ಲಿ ಈ ಕವನ ಬಹುಕಾಲ ನಿಲ್ಲುತ್ತದೆ.

ಈ ಕವನದ ಶೀರ್ಷಿಕೆ “ಕಣ್ಣಿನಲ್ಲಿ ನಿಂತ ನೀರು” ಅರ್ಥಪೂರ್ಣವಾಗಿವೆ. ಅವರ ಕೃತಿಗಳ ಹೆಸರೇ ಮಜವಾಗಿರುತ್ತದೆ. ಜಾಂಬ್ಳಿ ಟುವಾಲು, ಟೊಂಗೆಯಲ್ಲಿ ನಕ್ಷತ್ರ, ಪಾಯಸದ ಗಿಡ ಹೀಗೆ ಇರುವ ಸಾಲಿಗೆ ಇದೊಂದು ಹೆಸರು ಸೇರುತ್ತದೆ. ಕಣ್ಣಿನಲ್ಲಿ ನೋಡುತ್ತೇವೆ. ಈ ನೋಡುವಿಕೆಯ ಹಿಂದ ಜೀವಂತಿಕೆ ಇರಬೇಕಾಗುತ್ತದೆ. ಗಾಳಿ ಇಲ್ಲಿ ಉಸಿರಾಟದ ಸಂಕೇತವಾಗಿದೆ. ಕಣ್ಣೊಂದು ಮಾತ್ರವಲ್ಲ; ಅದನ್ನು ನೋಡುವ ಜೀವಂತಿಕೆಯ ಮನಸ್ಸು ನಿಮಗಿರಬೇಕೆನ್ನುವ ಸಂದೇಶ ಇಲ್ಲಿದೆ. ರಾಜುವಿನ ಕವನಗಳಲ್ಲಿ ಮುಖ್ಯವಾಗಿ ಕಾಣುವ ಗುಣ ನಿತ್ಯ ಸತ್ಯಗಳೆಲ್ಲವೂ ಅನಿತ್ಯಭಾವದಲ್ಲಿ ಪ್ರಕಟವಾಗುವಿಕೆ. ಇಲ್ಲಿ ನಾಲ್ಕು ಭಾಗಗಳಲ್ಲಿ ಕವನಗಳಿವೆ. ಆದರೆ ಈ ನಾಲ್ಕು ವಿಭಾಗಗಳನ್ನು ಇಂತಹದುದಕ್ಕೇ ಸಂಬಂಧಿಸಿದವುಗಳು ಎನ್ನುವುದಕ್ಕಾಗುವುದಿಲ್ಲ. ಕವನಗಳು ಸ್ಥಾಯಿಯಲ್ಲ; ಜಂಗಮಭಾವನಗಳನ್ನು ಪ್ರಕಟಿಸುತ್ತಲೇ ಇರುತ್ತವೆ.

ಈ ಕವನ ಇಲ್ಲಿಗೆ ಮುಕ್ತಾಯವಾಯಿತು ಎಂದುಕೊಳ್ಳುವಾಗಲೇ ಮುಂದಿನ ಯಾವುದೋ ಕವನಗಳಲ್ಲಿ ಆ ವಿಷಯಗಳ ನಿರ್ವಚನ (Etimology) ಹೊರಹೊಮ್ಮಿದೆ. ಇಲ್ಲಿನ ಕವಿತೆಗಳಾದ ಮಳೆ, ಮಳೆ ಹೊಯ್ಯುವಾಗ, ಚಲ್ಲಾಪಿಲ್ಲಿ, ಶಾಂತವಾದ ಹೀಗೆ ಅನೇಕ ಕವನಗಳಲ್ಲಿ ಈ ಇರುವಿಕೆ ಮತ್ತು ಇಲ್ಲದೇ ಇರುವಿಕೆಯ ಭಾವಗಳನ್ನು ಗಮನಿಸಬಹುದು. ಹಳ್ಳಿಯ ಗುಡ್ಡಗಾಡುಗಳಲ್ಲಿ ಮಳೆಗಾಲದಲ್ಲಿ ಮಳೆಯ ನೀರು ಯಾವಯಾವುದೋ ತೂತಿನಲ್ಲಿ ಇಂಗಿ ಮುಂದೆ ಯಾವುದೋ ಕಡೆ ಬುಗ್ಗನೆ ಚಿಮ್ಮುತ್ತದೆ. ಅಲ್ಲಿ ಕಟ್ಟೆಯನ್ನು ಕಟ್ಟಿ ಆ ತೂಬನ್ನು ಬಿಗಿ ಮಾಡಿದರೆ ಮತ್ತೊಂದು ಮಾರು ದೂರದಲ್ಲಿನ ಕಲ್ಲುಬಂಡೆಯ ಕೆಳಗಿನಿಂದ ತಣ್ಣಗೆ ಹರಿಯಲು ಪ್ರಾರಂಭಿಸುತ್ತದೆ. ಇಂತಹ ಗತಿಯನ್ನು ಈ ಸಂಕಲದಲ್ಲಿದೆ. ಇಲ್ಲಿ ಜೀವನಾನುಭವವಿಲ್ಲದಿರಬಹುದು, ಆದರೆ ಜೀವನಾನುಕಂಪವಿದೆ. ಹಕ್ಕಿ ಇರುವುದು ಅದು ಇಲ್ಲವಾಗುವಿಕೆಯ ವರೆಗೆ ಎನ್ನುವಾಗ ಅದನ್ನು ಆಧ್ಯಾತ್ಮದಿಂದ ಹಿಡಿದು ಹಕ್ಕಿ ಸಹಜವಾಗಿ ಸಾಯುವದಿಲ್ಲ. ಅದು ಕೊನೆಯಕಾಲದಲ್ಲಿ ಮೇಲ್ಮುಖನಾಗಿ ಹಾರುತ್ತಾ ಅನಂತಾಕಾಶದಲ್ಲಿ ಲೀನವಾಗುತ್ತದೆ ಎನ್ನುವ ಜನಾಂಗವೊಂದರ ನಂಬುಗೆಯವರೆಗೆ ಇವರ ಹಾಸು ವ್ಯಾಪಿಸುತ್ತದೆ.

ಮೊದಲೇ ವಿವರಿಸಿದಂತೆ ಕವಿ ಕಾವ್ಯದಲ್ಲಿ ಅಡಗಿ ಕುಳಿತಾಗ ಕಾವ್ಯದ ಗೆಲುವಾಗುತ್ತದೆ. ಆತ ಕಾವ್ಯದ ಮೇಲೆ ಸವಾರಿ ಮಾಡಿದರೆ ಅದು ಕಾವ್ಯದ ಸೋಲು. ರಾಜು ಮೊದಲ ಸಾಲಿಗೆ ಸೇರಿದ ಕವಿ.

‍ಲೇಖಕರು avadhi

March 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: