ನಾಯಕ ಮಾಸ್ರ‍್ರು

ಸುನಂದಾ ಕಡಮೆ

ಕಳೆದ ಆ ನಾಲ್ಕು ದಿನಗಳಿಂದ ಅರ್ಥವೇ ಆಗದ ಅವ್ಯಕ್ತ ನೋವಿನ ವಿಚಿತ್ರ ಅಪರಾಧೀ ಭಾವದಿಂದ ಬಳಲುತ್ತಿರುವ ನಾಯಕ ಮಾಸ್ರ‍್ರು ತಮ್ಮ ಮನೆಯಂಗಳದಲ್ಲಿ ಹಾಕಿಕೊಂಡ ಆರಾಮ ಕುರ್ಚಿಯಲ್ಲಿ ಕೂತು, ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಮುಖಕ್ಕೆ ಮರೆ ಮಾಡಿಕೊಂಡು ಹಿಡಿದು ಸುಮ್ಮನೇ ಏನನ್ನೋ ಓದುತ್ತಿರುವ ಭಂಗಿಯಲ್ಲಿ ಕೂತಿದ್ದರು. ತೆರೆದ ಅಂಗಳದಲ್ಲಿ ಮೇಲೆ ಸುವಿಶಾಲ ಹರಡಿಕೊಂಡ ಮುಗಿಲು ಇನ್ನೇನು ಮಳೆ ಬರುವ ಲಕ್ಷಣ ಹೊತ್ತು ಮೋಡ ಕಟ್ಟಿಕೊಳ್ಳುತ್ತಿತ್ತು. ದೂರದ ರಸ್ತೆಯಿಂದಲೇ ಅದನ್ನು ಗಮನಿಸಿದ ಅವರ ಅತ್ಯಂತ ಮೆಚ್ಚಿನ ಹಳೆಯ ಶಿಷ್ಯ ರಮಾನಂದ, ತನ್ನ ಕಿವಿಯ ಮೇಲೆ ಬಿದ್ದ ಸುಮೇದನೆಂಬ ವಿದ್ಯಾರ್ಥಿಯ ಆಕಸ್ಮಿಕ ಸಾವಿನ ಸುದ್ದಿಗೆ ವ್ಯತಿರಿಕ್ತವಾಗಿ, ಊರಿನ ತುಂಬ ಹರಿದಾಡುತ್ತಿದ್ದ ಸಂಶಯಾಸ್ಪದ ಸಂಗತಿಯೊಂದನ್ನು ಮಾಸ್ರ‍್ರ ಬಳಿ ಹೋಗಿ ಹೇಳಲೋ ಬೇಡವೋ ಎಂಬ ಸಂದಿಗ್ಧದಲ್ಲಿ,

ಅಲ್ಲೇ ಕೆಲ ಸಮಯ ದಿಗಿಲಿನಿಂದ ನಿಂತು ಬಿಟ್ಟಿದ್ದ. ಹಾಗೆಯೇ ತಡವರಿಸುತ್ತಲೇ ಒಂದು ಹೆಜ್ಜೆ ಮುಂದಿಟ್ಟವ ನಂತರ ಎರಡು ಹೆಜ್ಜೆ ಹಿಂದಿಟ್ಟ, ಏನನ್ನೂ ಹೇಳಿ ಕೇಳಿ ಮಾಡುವ ಧೈರ್ಯವಾಗದೇ ಹಿಂಗಾಲಲ್ಲೇ ತುಸುತುಸುವೇ ಸರಿಯುತ್ತ ತಲೆಯಾಡಿಸುತ್ತ ಏನೋ ಯೋಚಿಸುತ್ತ ರಮಾನಂದ ಹಾಗೇ ಅಲ್ಲಿಂದಲೇ ಹಿಂತಿರುಗಿದ್ದ. ಆದರೆ ರಮಾನಂದ ಹಾಗೆ ಅನುಮಾನಿಸುತ್ತ ರಸ್ತೆಯಲ್ಲೇ ನಿಂತು, ಅಲ್ಲಿಂದಲೇ ಹಿಂತಿರುಗಿ ಹೊರಟು ಹೋದದ್ದನ್ನು ನಾಯಕ ಮಾಸ್ರ‍್ರು ತಮ್ಮ ಚಾಳೀಸಿನೊಳಗಿಂದಲೇ ಓರೆನೋಟವೊಂದನ್ನು ಬೀರಿ, ತುಸುವೇ ಕಾಣುವ ಪತ್ರಿಕೆಯ ಅಂಚಿನಿಂದ ತೀಕ್ಷ್ಣವಾಗಿ ಅವನನ್ನು ಗಮನಿಸಿದವರೇ ಕೂತಲ್ಲೇ ಇನ್ನಷ್ಟು ಕಂಗಾಲಾಗಿಬಿಟ್ಟರು.

ತನ್ನ ಆತ್ಮೀಯ ಹಳೆಯ ವಿದ್ಯಾರ್ಥಿ ರಮಾನಂದ ಬಂದು ಕೂತು ವಿಲಕ್ಷಣ ಮುರುಟಿ ಹೋದ ತನಗೇನಾದರೂ ಒಂದಿಷ್ಟು ಮನಸ್ಸು ಅರಳುವ ಮಾತಾಡುತ್ತಾನೆ ಅಂತ ಕಾದಿದ್ದ ಮಾಸ್ರ‍್ರಿಗೆ ಒಂದು ಕ್ಷಣ ಗೊಂದಲವೇ ಅನ್ನಿಸಿತು. ಆ ಕ್ಷಣ ಪತ್ರಿಕೆ ಮಡಚಿಟ್ಟು ನಡುಗುವ ಕಾಲುಗಳಿಂದಲೇ ಎದ್ದು ಸಡಿಲಗೊಂಡ ಲುಂಗಿಯನ್ನು ಬಿಗಿ ಮಾಡಿಕೊಂಡರು. ಶಿಷ್ಯ ರಮಾನಂದನ ತಿರಸ್ಕಾರದ ಕುರಿತೇ ಯೋಚಿಸುತ್ತ ಅಂಗಳದಲ್ಲಿಯೇ ಅತ್ತಿತ್ತ ಒಂದೆರಡು ಹೆಜ್ಜೆ ಹಾಕಿ ಒಳಬಂದ ನಾಯಕ ಮಾಸ್ರ‍್ರು ತಮ್ಮ ಪತ್ನಿ ಮೀನಾಕ್ಷಿಯನ್ನು ವಿನಾಕರಣ ಒಮ್ಮೆ ದಿಟ್ಟಿಸಿ, ತಮ್ಮ ಮಲುಗುವ ಕೋಣೆಯತ್ತ ಹೆಜ್ಜೆ ಹಾಕಿದರು. ಅವರ ಮ್ಲಾನವದನವನ್ನು ಕಿಂಚಿತ್ತೇ ಗಮನಿಸಿದ ಮೀನಾಕ್ಷಿಗೆ ಎನೋ ಹೊಳೆದಂತಾಗಿ, ಹೊರ ಇಣುಕಿ, ಯಾರಾದರೂ ಬಂದು ಕೂತು ಇಲ್ಲದ ಸಂಗತಿ ಕೇಳಿ ಹೇಳಿ, ಎರಡು ದಿನಗಳಿಂದ ತಿಳಿಯಾಗುತ್ತ ನಡೆದಿದ್ದ ಮಾಸ್ರ‍್ರ ಮಾನಸಿಕ ಸ್ಥಿತಿಯನ್ನು ಹೊಸದಾಗಿ ಕಲಕಿಬಿಟ್ಟರೇ ಎಂಬ ಅನುಮಾನದ ದೃಷ್ಟಿಯಿಂದ ಸುತ್ತ ಕಣ್ಣಾಡಿಸಿದರು. ಅಂಗಳ ದೆಣಪೆ ರಸ್ತೆಗಳಲ್ಲಿ ಅಂಥ ಯಾರ ಸುಳಿವೂ ಅವರಿಗೆ ಕಾಣಲಿಲ್ಲ.

ದಿನದಂತೆ ಪತ್ರಿಕೆಯನ್ನು ನೀಟಾಗಿ ಪುಟಗಳ ತುದಿಯನ್ನು ಹೊಂದಿಸಿ ಆಯತಾಕಾರಕ್ಕೆ ಸೇರುವಂತೆ ಮಡಚದೇ, ಹಾಗೇ ಅವಸರದಲ್ಲಿ ಬಿಸಾಕಿದಂತೆ ಕಾಣುವ ಪತ್ರಿಕೆ ಬಿದ್ದ ಆ ಶೈಲಿಯಲ್ಲೇ ನಾಯಕ ಮಾಸ್ರ‍್ರ ದುಗುಡಗೊಂಡ ಮನಸ್ಥಿತಿಯು ಮೀನಾಕ್ಷಿಯ ಅನುಭವಕ್ಕೆ ಬಂದಿತ್ತು.
ಹಾಸಿಗೆಯಲ್ಲಿ ಸುಮ್ಮನೇ ಒರಗಿಕೊಂಡು ಮಲಗಿದಂತೆ ಕಂಡರೂ ನಾಯಕ ಮಾಸ್ರ‍್ರಿಗೆ ನಿದ್ದೆ ಬಂದಿರಲಾರದು ಎಂಬುದನ್ನು ಅರಿತುಕೊಂಡ ಮೀನಾಕ್ಷಿ ಮೆಲ್ಲಗೆ ಅವರತ್ತ ನಡೆದು ಅವರ ಬೆನ್ನಿನ ಬದಿಯಲ್ಲಿ ಮೌನವಾಗೇ ಕೂತರು. ಯಾವ ಮಾತನ್ನು ಮೊದಲಿಗೆ ಆಡಬೇಕೆಂದೇ ತಿಳಿಯದೇ ಅವರು ಮಗಳು ಆಶಾ ವಿಷಯ ತೆಗೆದು ಸಣ್ಣ ದನಿಯಲ್ಲಿ ‘ಆಶಾಗೆ ಇವತ್ತೇ ಅವ್ಳ ಡ್ರಾಯಿಂಗ್ ಪರೀಕ್ಷೆ ಫೀಸ್ ತುಂಬೇಕಿತ್ತಂತೆ, ಕೊಟ್ ಕಳಸ್ದೆ’ ಎಂದು ತೇಲಿಸಿ ತೇಲಿಸಿ ನುಡಿದ ಆ ಶೈಲಿ ಹೆಂಡತಿಯ ಬೇರೆ ಯಾವುದೋ ಮಾತಿಗೆ ಪೀಠಿಕೆಯಾಗಿದ್ದಂತೆ ನಾಯಕ ಮಾಸ್ರ‍್ರಿಗೆ ಅನ್ನಿಸಿತು, ಮಾತಿಗೆ ಮಾತು ಜೋಡಿಸುವ ಚೈತನ್ಯ ಅವರಲ್ಲಿ ಉಳಿದಂತಿರಲಿಲ್ಲ.

ಆದರೂ ಅವರು ಕಣ್ಣುಮುಚ್ಚಿಕೊಂಡೇ ಹೆಂಡತಿಯತ್ತ ಹೊರಳಿ ‘ಆಯ್ತು’ ಎಂದರು. ಮೀನಾಕ್ಷಿ ಗಂಡನ ನೆತ್ತಿಯ ತಲೆಗೂದಲಲ್ಲಿ ನಿಧಾನ ಕೈಯಾಡಿಸುತ್ತ ‘ಯಾಕೆ ಹೊತ್ತಿಲ್ದ ಹೊತ್ನಲ್ ಹೀಂಗ್ ಮನೀಕಂಡೀರಿ’ ಎಂದು ವಿಚಾರಿಸಲೋ ಬೇಡವೋ ಎಂಬ ದಿಗಿಲಿನಲ್ಲೇ ಕೇಳಿದರು.. ತಮ್ಮ ತಲೆಗೂದಲನ್ನು ಹೆಂಡತಿಯ ಕೈಯಿಂದ ಬಿಡಿಸಿಕೊಳ್ಳುತ್ತ ‘ಅಂಥದೇನಿಲ್ವೆ, ಅದು ಏನಾಯ್ತಂದ್ರೆ, ಈಗ್ ಹೊರಗ ಕೂತ್ಕಂಡಿದ್ದಾಗ, ರಸ್ತೇಲಿ ನಮ್ಮನೀ ಕಡೀಗೆ ರ‍್ತಿದ್ದ ರಮಾನಂದ ಯಾಕೋ ರ‍್ಲೋ ಬೇಡ್ವೋ ಅನ್ನೋ ಅನ್ಮಾನದಲ್ಲೇ ಸ್ವಲ್ಪ ಹೊತ್ ಅಲ್ಲೇ ಮುರ್ಕಿಗೆ ನಿಂತು ವಾಪಸ್ ಹೋಗ್ಬಿಟ್ಟ, ಹೀಂಗೆ ನಂಬಿಗಸ್ಥ ವಿದ್ಯಾರ್ಥಿಗಳೆಲ್ಲ ನನ್ನ ಬ್ಯಾರೇ ಥರಾ ನೋಡೂದಂದ್ರೆ?’ ಎನ್ನುತ್ತಲೇ ನಾಯಕ ಮಾಸ್ರ‍್ರ ಮುಖದಲ್ಲಿ ಸೋತು ಹೋದಂತಹ ಭಾವ ಗಮನಿಸಿದ ಮೀನಾಕ್ಷಿ ತಕ್ಷಣಕ್ಕೆ ಏನು ಹೇಳಬೇಕೆಂದೇ ತಿಳಿಯದೇ ‘ಹ್ಞ ಹ್ಞ ಅವ್ನ ಯಾವ್ದೋ ಅರ್ಜಂಟ್ ಕೆಲ್ಸ ಎಚ್ಚರಾಗ್ ವಾಪಸ್ ಹೋಗರ‍್ಬೇಕ, ಮುಂಚೇ ಊರಿಗೆಲ್ಲ ಒಬ್ಬಂದೇ ಬಾಡ್ಗಿ ಗಾಡಿ ಇರೂದು, ತಕ್ಷಣ ಯಾರಿಂದ ಕರೆ ಬಂತೋ ಏನೋ, ಅದೇ ವಿಷ್ಯಾನೇ ನಿಮ್ ಕಡೀ ಮಾತಾಡೂ ಮನಸ್ಸಾಗದೇ ಹೋದ ಅಂತ ಯಾಕ ಸುಮಸುಮ್ನೇ ಮನ್ಸೀಗ ಹಚ್ಕತೀರಿ? ನಾಕ್ ದಿನಾ ಆಯ್ತ ಆ ಸಂಗ್ತಿ ನಡದು. ಹಂಗೇನರೂ ಆಗಿದ್ರೆ ಆ ಹುಡ್ಗನ ಅಪ್ಪವ್ವೆ ಮತ್ ಸಂಬಂಧಿರ‍್ರು ಇಟ್ ದಿನ ಸುಮ್ಕಿರತಿದ್ರೆ?’ ಅಂತೇನೋ ಮೀನಾಕ್ಷಿ ತಡೆತಡೆದು ಹೇಳಲು ಹೊರಟರು.

ನಾಯಕ ಮಾಸ್ರ‍್ರು ಅದಕ್ಕೆ ಏನನ್ನಾದರೂ ಪ್ರತಿಕ್ರಿಯಿಸುವ ಶಕ್ತಿಯನ್ನೇ ಕಳಕೊಂಡವರಂತೆ ಈಗ ಸುಮ್ಮನೇ ಕಣ್ಣು ಮುಚ್ಚಿ ಮಲಗಿ ನಿದ್ದೆ ಹೋದಂತೆ ನಟಿಸಿದರು. ಅವರಿಗೆ ಏಕಾಂತದಲ್ಲಿ ಮಲಗಿ ಕ್ಷಣದಲ್ಲೇ ಮಿಂಚಿನಂತೆ ಸಂಭವಿಸಿದ ಆ ದುರಂತವನ್ನು ಅಪಾದಮಸ್ತಕ ಕಣ್ಮುಂದೆ ತಂದುಕೊಂಡು ಧ್ಯಾನಿಸುತ್ತ ತನಗೆ ತಿಳಿಯದೇ ತನ್ನ ಕೈಯಿಂದಲೇ ಘಟಿಸಿದ ತಪ್ಪಿಗಾಗಿ ಅಖಂಡ ಪಶ್ಚಾತ್ತಾಪ ಪಡಬೇಕು ಅನ್ನಿಸುತ್ತಿತ್ತು. ಹಾಗೆ ಗಂಡ ನಿದ್ದೆ ಹೋದರೆಂದೇ ಭಾವಿಸಿದ ಮೀನಾಕ್ಷಿಯೂ ಎದ್ದು ಅರ್ಧ ಮುಗಿಸಿದ್ದ ತಮ್ಮ ಅಡುಗೆಯನ್ನು ಜ್ಞಾಪಿಸಿಕೊಳ್ಳುತ್ತ ಅತ್ತ ಹೆಜ್ಜೆ ಹಾಕಿದರು. ಹೆಂಡತಿ ತನ್ನ ಬಳಿಯಿಂದ ಎದ್ದು ಹೋದದ್ದೇ ನಾಯಕ ಮಾಸ್ರ‍್ರು ಕಣ್ಣು ತೆರೆದು ಪುನಃ ಯೋಚಿಸತೊಡಗಿದರು.

‘ಅದ ಹ್ಯಾಂಗ್ ಹಂಗಾಯ್ತೇನ? ಎಸ್ಸೆಎಲ್ಸಿ ಕಲೀತಿದ್ದ ಸುಮೇದನ ಕೆನ್ನೀಗೆ ಅದ್ಯಾವ್ ವಿಷ ಘಳಿಗೇಲ್ ನನ್ನಿಂದ ಚಟರ‍್ನೆ ಆ ಒಂದ್ ಏಟ್ ಬಿತ್ತೊ? ಅಂವ ಕೆಳಗ ಬಿದ್ಕಂಡ್ ಚಡಪಡಸ್ತೇ ಇರೂವಾಗೂ ನನ್ನ್ ಸಂಶಯ ಪಿಶಾಚೀ ಮನ್ಸು ಅಂವ ನಾಟ್ಕ ಮಾಡ್ತೀಂವ ಹ್ಞಾ ಅಂತ್ಲೇ ಯಾಕ್ ಅನ್ಸ್ ಹೋಯ್ತೋ? ಹದ್ನಾರರ ಪ್ವಾರಾ ಸುಮೇದ ಹ್ಯಾಂಗ್ ಆ ದಿನ್ ನನ್ ಕಣ್ಮುಂದೇ ನೆಲ್ಕುರುಳಿ ಒದ್ದಾಡ್ಬಿಟ್ಟ. ಆ ಎಳೀ ಹುಡುಗನ್ ಸಾವೀಗ್ ನಾನೇ ಕರ‍್ಣ ಆದ್ನೋ ಏನೊ, ಕ್ಲಾಸ್‌ನಲ್ಲಿದ್ ಬ್ಯಾರೇ ವಿದ್ಯಾರ್ಥಿಗಳೆಲ್ಲ ಸೇರಿ ಅಂವನನ್ನ ಎಂಥದೋ ಗಾಬರಿಯಿಂದ ಎತ್ತಿ ಕೂಡ್ಸಿದ್ರು, ಸುಮೇದ ಆಗಲೇ ಅಡ್ಡಗೋಣ ಹಾಕ್ಬಿಟ್ಟದ್ದ, ಛೇ, ಹ್ಯಂಗ್ ನಡೀತದು ಅಂಥ ಘೋರ, ಆಗ್ಲೇ ಅವ್ನ ಉಸ್ರೂ ನಿಂತ್ ಹೋಗಿತ್ತೇ, ಇಲ್ಲಿಲ್ಲ, ಅಂವ ಆಸ್ಪತ್ರೇಲಿ ಚಣ ಕಣ್ ತೆಗ್ದು ತನ್ ಅಮ್ಮನ ನೋಡ್ ಎನೋ ಹೇಳಿದ್ನಂತಲ್ಲ?’ ಅದನ್ನು ಯಾರೋ ಬಂದು ಹೆಡ್ ಮಾಸ್ಟರೊಂದಿಗೆ ಹೇಳುವುದು ಹೌದೋ ಅಲ್ಲವೋ ಅನ್ನುವಂತೆ ನಾಯಕ ಮಾಸ್ರ‍್ರ ಕಿವಿಗೆ ಬಿದ್ದಿತ್ತು.

‘ಏನ್ ಹೇಳಿದ್ದಾನು ಆ ನನ್ ಮುದ್ ಕೂಸು ? ಛೆ, ಇದೇ, ಇದೇ ಹಸ್ತದಿಂದ, ಛೇ ಇದೇ ಪಾಪಿ ಹಸ್ತದಿಂದ, ಹ್ಯಾಂಗ್ ಏಟ್ ಬಿತ್ತದು, ಇಪ್ಪತ್ತೆಂಟ್ ವರ್ಷದ್ ನನ್ ಸರ್ವೀಸ್ನಲ್ಲಿ ಎಟ್ ಸಾವ್ರ ಮಕ್ಳನ್ ಹಿಂಗೇ ಹೊಡ್ದು ಬೈದು ಸರೀ ದಾರಿಗ್ ಹಚ್ಚಿದ್ದೆ ಅನ್ನೂ ನನ್ ಗರ್ವಾನೇ ನಂಗ್ ಮುಳು ಆಯ್ತೋ ಎನೊ, ಕ್ಲಾಸೀಗೇ ಮೊದ್ಲ ನಂಬರ್ ಬರೋ ಹುಡ್ಗ, ಎಷ್ಟ್ ಪ್ರಾಮಾಣಿಕನಾಗಿ ಓದ್ಕೋತಿದ್ದ, ಎಷ್ಟ್ ಬುದ್ದವಂತ್ ಹುಡ್ಗ, ಅಂವ್ನ ಕಣ್ಣಲ್ ನನ್ ಬಗ್ಗೆ ಅದೆಂಥ ಗೌರವದ ಛಾಯೆ ಕಾಣಸ್ತಿತ್ತು ? ಪಠ್ಯದಲ್ ಏನಾದ್ರೂ ಕಠಿಣ ಆಗಿದ್ದನ್ ಕೇಳ್ಬೇಕಾದ್ರ ಅದೆಂಥ ತುಂಬು ವಿನಯ ಅವ್ನ ಮುಖಭಾವದಲ್ಲಿರತ್ತಿತ್ತು ?’ ಸುಮೇದನ ನೆನಪಿನಲ್ಲೇ ಮಗ್ಗಲು ಬದಲಿಸಿ ನಿಟ್ಟುಸಿರುಬಿಟ್ಟರು ಮಾಸ್ರ‍್ರು.

‘ಅಪರೂಪಕ್ಕೊಮ್ಮೆ ತಪ್ ಉತ್ರ ಕೊಟ್ ದಿನಾ ಅವ್ನ ಮುಖದಲ್ ಹ್ಯಂಗೆ ಸಂಕೋಚ ಉಕ್ತಿತ್ತು ? ಆ ದಿನವೂ ಹಂಗೇ ಒಂದ್ ಸಣ್ ತಪ್ಪೀಗೆ ಅದೂ ಒಂಬತ್ನೆತ್ತೆಲಿ ಕಲ್ತ್ ಗಣಿತದ ಸಿದ್ದಾಂತ ಒಂದ್ ತಪ್ ಹೇಳ್ದ ಅಂತ ನಾ ಆಕಸ್ಮಾತ್ ಕೈ ಬೀಸ್ದೆ, ಅಂಥಾ ಎಷ್ಟ್ ಹೊಡ್ತಾ ಎಷ್ಟೋ ವಿದ್ಯಾರ್ಥಿಗಳಿಗೆ ನಾ ಈವರೀಗ್ ಹೊಡೀಲಿಲ್ಲ ? ಅದೊಂದೇ ಏಟ್ ಯಾಕ್ ಸುಮೇದನ; ಅದೂ ನನ್ ಅಚ್ಚುಮೆಚ್ಚಿನ ಶಿಷ್ಯನ ಪ್ರಾಣಕ್ಕೇ ಕುತ್ತು ತಂದಿಟ್ತೊ’ ಸಹಿಸಲಸಾಧ್ಯವಾಗಿ ಜಾರಿ ಹೋದ ಆ ಕಠಿಣ ಕ್ಷಣಗಳನ್ನು ನೆನಪಿಸಿ ಪಶ್ಚಾತ್ತಾಪ ಪಡುತ್ತಲೇ ನಾಯಕ ಮಾಸ್ರ‍್ರು, ಅತ್ತಿತ್ತ ಹೊರಳಾಡುತ್ತಲೇ ತಮ್ಮನ್ನೇ ತಾವು ಮತ್ತೆ ಮತ್ತೆ ಪ್ರಶ್ನಿಸಿಕೊಂಡರು.

ಹೀಗೆ ಒಬ್ಬರೇ ಕೂತು ಎಲ್ಲವನ್ನೂ ಕಣ್ಣೆದುರು ತಂದು ಹೊಸದಾಗಿ ಚಿಂತಿಸಲು ಈ ನಾಕೂ ದಿನ ಏಕಾಂತವೇ ಸಿಕ್ಕಿರಲಿಲ್ಲ ಮಾಸ್ರ‍್ರಿಗೆ. ಯರ‍್ಯಾರೋ ಬಂದು ‘ಮಾಸ್ರ‍್ರೆ ಇನ್ನ ಸ್ವಲ್ಪ್ ದಿನ ಶಾಲೀಗ್ ಹೋಗ್ಬ್ಯಾಡಿ, ಇನ್ ಸ್ವಲ್ಪ್ ದಿನ ಒಬ್ಬೊಬ್ರೇ ಹೊರಗ್ ಹೋಗ್ಬ್ಯಾಡಿ’ ಅಂದಿದ್ದಕ್ಕೆ ನಾನೂ ಹೆದರಿ ಮನೇಲುಳ್ದೆ, ಜೊತೇಲಿದ್ ಮಾಸ್ತರ್ ಗಳೂ ಬಂದು ನನ್ನೆದುರು ಒಂದೂ ಮಾತಾಡ್ದೇ ಕೂತು ಹೋದ್ರೇ ಹೊರ್ತಾಗಿ, ನಿಮ್ದೇನ್ ತಪ್ಪಿಲ್ಲ ಅಂತ ಬಾಯ್ಬಿಟ್ಟು ಹೇಳ್ಳಿಲ್ಲ, ಇದರಲ್ಲಿ ನನ್ನ ತಪ್ಪು ಎಷ್ಟು? ಅರೆ, ನನ್ನ ಹತ್ರ ಕಲ್ತ ಮಕ್ಳು ಹುಷಾರಾಗ್ಬೇಕು ಅಂತ ಬಯ್ಸೋದೇ ನನ್ನ ದೌರ್ಬಲ್ಯವೋ? ಇದಕ್ಕೆ ನಾನೇ ಪೂರ್ತಿ ಹೊಣೆಗಾರನೇ? ಎಂದೆಲ್ಲ ತಲೆ ತಿನ್ನುತ್ತಿದ್ದ ನಾನಾ ಬಗೆಯ ಆತಂಕಗಳು ಮಾಸ್ರ‍್ರನ್ನು ಮಲಗಿರಲೂ ಕೊಡದೇ, ಎದ್ದು ಕೂಡಲೂ ಕೊಡದೇ ನಿತಾಂತ ಸಂಕಟವೊಂದು ನಿಸೂರಾಗಿ ಮುತ್ತಿಕೊಂಡು ಸತಾಯಿಸತೊಡಗಿತ್ತು. ಈ ಪ್ರಕರಣ ಇದೀಗ ಎಲ್ಲಿಗೆ ಹೋಗಿ ಮುಟ್ಟುತ್ತದೋ ಎಂಬ ಚಿಂತೆ ಅವರನ್ನು ಒಳಗೆಲ್ಲೋ ತೀಕ್ಷ್ಣ ಸುಡಲಾರಂಭಿಸಿತು. ಯಾವುದೇ ದುರ್ಘಳಿಗೆಯಲ್ಲೂ ನನ್ನ ಮೇಲೆ ಆರೆಸ್ಟ್ ವಾರಂಟ್ ಹಿಡಿದು ಪೋಲೀಸರು ಮನೆ ಬಾಗಿಲಿಗೆ ಬಂದು ನಿಲ್ಲಬಹುದಲ್ಲ ? ಅಂದೆನಿಸುತ್ತ ಹೋದಹಾಗೇ, ಮರುಕ್ಷಣದಲ್ಲೇ ಥಟ್ಟನೆ ಎದ್ದು ಕೂತ ಮಾಸ್ರ‍್ರು, ಸ್ವಲ್ಪ ಧೈರ್ಯ ತೆಗೆದುಕೊಳ್ಳುತ್ತ, ಹಾಗೇನಾದರೂ ಗತಿಸಿಯೇ ಬಿಟ್ಟರೆ ತನ್ನ ಹೆಂಡತಿಗೆ ಹೇಳಿ ಹೋಗಬೇಕಾದ ಉದ್ದ ಪಟ್ಟಿಯನ್ನು ತಮ್ಮ ಮನಸ್ಸಿನೊಳಗೇ ತಯಾರು ಮಾಡಿಕೊಳ್ಳತೊಡಗಿದರು.

ಬ್ಯಾಂಕಿನ ಪಾಸ್ ಬುಕ್ಕು ತೆಗೆದು, ಮೀನಾಕ್ಷಿ ತಿಂಗಳ ಮನೆ ಖರ್ಚಿನ ಹಣ ಇರಿಸುವ ಡಬ್ಬದಲ್ಲಿ ಹಾಕಿಟ್ಟರು. ಮತ್ತು ಚೆಕ್ ಬುಕ್ಕಿನ ಎಂಟ್ಹತ್ತು ಚೆಕ್ ಗಳಿಗೆ ಒಮ್ಮೆಲೇ ನಡುಗುವ ಕೈಗಳಿಂದಲೇ ಸಹಿ ಗೀಚಿಟ್ಟರು. ಸಹಿ ಮಾಡುವಾಗ ಮಾತ್ರ ಅವರ ಕಣ್ಣು ಮಂಜಾದAತಾಗಿ ತಮ್ಮ ಹೆಸರಿನ ಮೊದಲಕ್ಷರ ಮಾತ್ರ ಅವರಿಗೆ ಕಂಡಿತು. ಹಾಲು ತರಕಾರಿ ಮೀನು ಹೀಗೆ ಮನೆಗೆ ಬೇಕಾಗುವ ರೇಶನ್ನನ್ನು ತಂದು ಕೊಡಲು ಆ ರಮಾನಂದನೇ ಸರಿ. ಇಷ್ಟು ದಿನ ಅವ್ನೇ ಅಲ್ವೇ ಅದಕ್ಕೆಲ್ಲ ಸಹಾಯ ಮಾಡುತ್ತಿದ್ದವ. ‘ನಂಗೆ ಈ ಮುಂದಿನ ದಿನದಲ್ಲಿ ಏನಾದ್ರೂ ಆಗಬಹುದು, ಆ ಕೆಟ್ಟ ಸಮದರ್ಭದಲ್ಲ ನೀ ನಾನಿಲ್ದೆ ಇಲ್ಲಿ ಒಬ್ಳೇ ಇರೋ ಬದ್ಲು ಆಶಳನ್ನು ರ‍್ಕೊಂಡು ತಾಯೀ ಮನೆಗಾದ್ರೂ ಹೋಗಿರು’ ಅಂತೆಲ್ಲ ಹೇಳಿಯಾದರೂ ಇಡಬೇಕಲ್ಲ ಮೀನಾಕ್ಷಿಗೆ, ಇದನ್ನು ಎಲ್ಲಿಂದ ಹೇಗೆ ಶುರು ಮಾಡೋದು? ಎಂಬ ಆತಂಕದೊAದಿಗೆ ಮಾಸ್ರ‍್ರು ಮೆಲ್ಲಗೆ ಅಡಿಗೆ ಖೋಲಿಯತ್ತ ಹೆಜ್ಜೆ ಹಾಕಿದರು.

ಅಲ್ಲಿ ಮೀನಾಕ್ಷಿ ಇಲ್ಲದ್ದು ಕಂಡು ತುಸು ಅಚ್ಚರಿಯಿಂದಲೇ ಹೊರಕೋಣೆಗೆ ಬಂದರು. ಹೊರಗೆ ಗೇಟಿನಲ್ಲಿ ಯಾರೊಂದಿಗೋ ಮಾತಾಡುತ್ತ ನಿಂತ ಹೆಂಡತಿಯನ್ನು ಕಂಡದ್ದೇ ಮಾಸ್ರ‍್ರಿಗೆ ಇನ್ನಷ್ಟು ಗಲಿಬಿಲಿಯೆನ್ನಿಸಿತು. ಒಮ್ಮೆಲೇ ಅವಳನ್ನು ಕರೆಯುವ ಹಾಗೂ ಇಲ್ಲ, ಅಥವಾ ತಾನಾದರೂ ಮೊದಲಿನಂತೆ ಅವರಿದ್ದಲ್ಲಿಯೇ ಹೋಗಿ ನಿಂತು ಏನಾದರೂ ಮಾತನಾಡುವ ಮುಖವೂ ನನಗಿಲ್ಲದೇ ಹೋಯಿತಲ್ಲ, ಛೇ, ತಿರುತಿರುಗಿ ಆ ಅವರ ಮಾತಿನ ಬಾಣ ಸುಮೇದನ ವಿಷಯಕ್ಕೇ ಬಂದು ನನ್ನ ವ್ಯಕ್ತಿತ್ವವನ್ನು ಎಲ್ಲ ಬದಿಯಿಂದಲೂ ಖಾಲಿಯಾಗಿಸಿ ಬಿಡುತ್ತದೋ ಅಂತ ಹೆದರಿದ ಮಾಸ್ರ‍್ರು, ದೆಣಪೆಯಲ್ಲಿ ನಿಂತ ಅವರಿಬ್ಬರೂ ಕಾಣುವಂತೆ, ಹೊರ ಕೋಣೆಯ ಕುರ್ಚಿಯಲ್ಲಿ ತಮ್ಮ ದೇಹವನ್ನೆಲ್ಲ ಒಂದು ಹಿಡಿಯಲ್ಲಿ ಬಂಧಿಸಿಟ್ಟAತೆ ಕೂತರು. ಮಗಳು ಆಶಾ ಇನ್ನೂ ಚಿಕ್ಕವಳು, ಇದನ್ನು ಹೇಗೆ ಭರಿಸೀತು ಅವಳ ಮುಗ್ಧ ಮನಸ್ಸು? ಎಂಬ ಯೋಚನೆಯೇ ಮಾಸ್ರ‍್ರನ್ನು ಇನ್ನಷ್ಟು ಹಿಂಸಿಸಿತು.

ತನ್ನ ಮನಸ್ಸಿನ ತುಮುಲವನ್ನೆಲ್ಲ ಯಾರೊಂದಿಗಾದರೂ ಹೇಳಿಕೊಂಡುಬಿಡಬೇಕು ಅನ್ನಿಸುತ್ತಿದ್ದರೂ ಇಂಥ ಪರಿಸ್ಥಿತಿಯಲ್ಲಿ ಅದು ಮೀನಾಕ್ಷಿಯೊಂದಿಗೆ ಬೇಡ ಅಂತಲೇ ತೀರ್ಮಾನಿಸಿದರು. ಅಪರಾದ, ಶಿಕ್ಷೆ, ಜೈಲು ಅಂತೆಲ್ಲ ಮೀನಾಕ್ಷಿಯೊಂದಿಗೆ ಹೇಳಿದರೆ ಅವಳ ಮನಸ್ಸಿನಲ್ಲಿ ಇನ್ನಷ್ಟು ಗೊಂದಲ ಏರ್ಪಟ್ಟು ನಾಳೆಯ ಚಿಂತೆಯಿAದ ಅವಳು ಇನ್ನಷ್ಟು ಕುಗ್ಗಿಹೋಗಬಹುದು ಅನ್ನಿಸಿತು.

ಅವಳಿಗೆ ಸಮಾಧಾನವಾಗುವ ವಿಷಯವಷ್ಟನ್ನೇ ಅವಳೊಂದಿಗೆ ಮಾತಾಡುವುದು ಒಳಿತು. ನಾನಿಲ್ಲದಾಗ ಹಿರಿಮಗನಂತೆ ನಿಂತು ಮನೆಯ ಬೇಕು ಬೇಡ ನೋಡಿಕೊಳ್ಳಲು ಆ ರಮಾನಂದನೇ ಯೋಗ್ಯನಾಗಿದ್ದ. ಆದರೆ ಇಂದು ಆತನೂ ನನಗೆ ಬೆನ್ನು ಹಾಕಿ ಹೋಗಿಬಿಟ್ಟನಲ್ಲ. ‘ನಿಮ್ ಹೊಡ್ತ ತಿಂದೇ ನಾ ಇಟ್ ಗಟ್ಟಿ ಆದದ್ದು, ಎಲ್ಲ ಶಿಷ್ಯರೂ ಅವರವರ ದಾರೀಲಿ ಉದ್ದಾರ ಅಂತ ಆದದ್ದೇ ಆಗಿದ್ರೆ, ಮಾಸ್ರ‍್ರೇ ಅದ ನೀವ್ ಕಲ್ಸಿದ್ ಗಣಿತ ಮತ್ ವಿಜ್ಞಾನದಿಂದ’ ಅಂತ ಪದೇ ಪದೇ ಹೇಳುತ್ತಿದ್ದ ರಮಾನಂದ, ಎಷ್ಟು ಬೇಗ ಬದಲಾಗಿಬಿಟ್ಟ ? ಎಲ್ಲೋ ಒಂಚೂರು ಆಶಾಕಿರಣದಂತೆ ಜಾಗ್ರತವಾಗಿದ್ದ ನಾಯಕ ಮಾಸ್ರ‍್ರ ಆತ್ಮವಿಶ್ವಾಸ ಇದ್ದಲ್ಲೇ ಉಡುಗಿದಂತಾಯಿತು. ಯೋಚನೆಗಳೂ ದೃಷ್ಟಿಯೂ ಭಾವನೆಗಳೂ ದಿಕ್ಕಾಪಾಲಾಗಿ ಪ್ರವಹಿಸುತ್ತ ಮಾಸ್ರ‍್ರಿಗೆ ತಮ್ಮಿರವನ್ನೇ ಮರೆಸಿಬಿಟ್ಟವು.

ಆಗಸದಲ್ಲಿ ಮೋಡಗಳು ಖಟ್ ಕಟ್ ಕಟಲ್ ಎಂದು ಗುಡುಗು ಹಾಕುತ್ತಿದ್ದವು. ರಸ್ತೆಯಿಂದ ಅವಸರದಲ್ಲಿ ಬಂದು ಗೇಟು ಹೊಕ್ಕ ನಾಲ್ಕಾರು ಜನ ಕೊಂಚ ನಿಂತು ಮೀನಾಕ್ಷಿಯಲ್ಲಿ ಏನನ್ನೋ ವಿಚಾರಿಸಿದವರೇ ದೊಡ್ಡ ಹೆಜ್ಜೆಯಲ್ಲೇ ತಮ್ಮ ಮನೆಯ ಬದಿ ಬಂದದ್ದನ್ನು ಮಾಸ್ರ‍್ರು ಕೂತಲ್ಲಿಂದಲೇ ಗಮನಿಸಿದರು, ಅವರೆಲ್ಲ ಸುಮೇದನ ಮನೆಯವರೇ ಅಂತ ಅವರಿಗೆ ಅ ಕ್ಷಣದಲ್ಲೇ ಖಾತ್ರಿಯಾಗಿಬಿಟ್ಟಿತು. ತಾನು ಹಾಗೇ ಕುಳಿತಿರಲೋ ಅಥವಾ ಒಳಗೆದ್ದು ಹೋಗಲೋ ತಿಳಿಯದೇ ಅವರು ಚಡಪಡಿಸಿಹೋದರು. ಮುಂದೊದಗುವ ಅನಾಹುತಗಳನ್ನೆಲ್ಲ ಬಂದಂತೆ ಸ್ವೀಕರಿಸುವ ಹಂತಕ್ಕೆ ಮಾಸ್ರ‍್ರು ತಮ್ಮ ಮನಸ್ಸನ್ನು ಜಡವಾಗಿಸಿಕೊಂಡರು.

ಅತ್ತಿತ್ತ ನೋಡುವುದರೊಳಗೆ ಅವರೆಲ್ಲ ಅಂಗಳದಿಂದ ಮೆಟ್ಟಿಲು ಹತ್ತಿ ಬಾಗಿಲಿಂದ ಒಳ ಬಂದು ಒಬ್ಬೊಬ್ಬರು ಒಂದೊಂದು ಕುರ್ಚಿಯನ್ನು ಎಳೆದು ತಮ್ಮ ಸುತ್ತಲೂ ಕೂತೇ ಬಿಟ್ಟದ್ದು ಮಾಸ್ರ‍್ರಿಗೆ ಉಸಿರುಕಟ್ಟಿಸುವಂತಾದರೂ, ತಗ್ಗಿಸಿದ ತಲೆಯನ್ನು ಮೇಲೆತ್ತಲು ಮತ್ತು ಅವರ ಮುಖ ದಿಟ್ಟಿಸಲು ಎಷ್ಟೇ ಪ್ರಯತ್ನಿಸಿದರೂ ಮಾಸ್ರ‍್ರಿಗೆ ಸಾಧ್ಯವಾಗಲಿಲ್ಲ. ಕ್ಷಮಿಸಿ ಅಂತಲಾದರೂ ಯಾವ ಬಾಯಲ್ಲಿ ಕೇಳಿಕೊಳ್ಳುವುದು? ಇನ್ನೊಬ್ಬರ ಮನೆಯ ಹಸುಗೂಸನ್ನು ವಿನಾಕಾರಣ ಇಲ್ಲವಾಗಿಸಿದ ಯಾತನೆಯೊಂದು ಅವರ ಪಾಲಿಗೆ ಗಂಟಲಿನ ವಿಷವಾಗಿ ಪರಿಣಮಿಸಿತ್ತು. ಕ್ಷಮಿಸಿ ಎನ್ನುವ ಪದದ ಅರ್ಥ ಕಳೆದುಕೊಳ್ಳುವುದು ಇಂಥ ಭೀಬತ್ಸ ಸಮಯದಲ್ಲೇ ಇರಬೇಕು ಅನ್ನಿಸಿತು ಮಾಸ್ರ‍್ರಿಗೆ. ಒಂದು ಅಮಾಯಕ ಜೀವದ ಬಲಿಯು ಕ್ಷಮಾಪಣೆಯ ಗೆರೆಯನ್ನೂ ದಾಟಿ ಅಲ್ಲೆಲ್ಲ ಒಂದು ರೀತಿಯ ಶೂನ್ಯವನ್ನೇ ಸೃಷ್ಟಿಸಿತ್ತು.

ಬಂದವರೂ ಮಾಸ್ರ‍್ರ ಜೊತೆ ಒಂದೆರಡು ನಿಮಿಷ ತಲೆ ತಗ್ಗಿಸಿ ಕುಳಿತದ್ದು ಅಗಲಿದ ಹಸುಳೆಗೆ ಅರ್ಪಿಸಿದ ಅಶ್ರುತರ್ಪಣದ ವಿಚ್ಛಿನ್ನ ಘಳಿಗೆಯಂತಿತ್ತು. ಅಂಥದೊಂದು ನಿರುಪಾಯ ಸ್ಥಿತಿಯಲ್ಲಿ ಯಾರಾದರೊಬ್ಬರು ಮಾತನಾಡಲೇ ಬೇಕಲ್ಲವೇ ಎಂಬುದನ್ನರಿತ ಸುಮೇದನ ಚಿಕ್ಕಪ್ಪ ಮೆಲ್ಲಗೆ ಸಣ್ಣ ಸ್ವರದಲ್ಲಿ ‘ಸರ್’ ಅಂತ ಬಾಯಿಬಿಟ್ಟು ಮುಂದುರೆಸಿದ್ದ.. ‘ಸರ್, ಇಷ್ಟು ಬೇಸರ ಯಾಕೆ ಮಾಡ್ಕೋಳ್ತೀರಿ, ರಮಾನಂದ ಹೇಳ್ದ, ಮೂರು ದಿನದಿಂದ ನೀವು ಶಾಲೆಗೂ ಹೋಗಿಲ್ಲಂತೆ, ಎಸ್ಸೆಸೆಲ್ಸಿ ಮಕ್ಕಳ ಪರೀಕ್ಷೆಗಳು ಹತ್ರ ಬಂತು, ನಿಮ್ಮನ್ನು ಬಿಟ್ರೆ ಅವರ ಭವಿಷ್ಯದ ಗತಿ ಏನು ಸರ್, ಏಳಿ ಸರ್, ನೀವು ಹೀಗೆ ಕೂತದ್ದು ನಮ್ಮಿಂದ ನೋಡ್ಲಿಕ್ ಆಗೂದಿಲ್ಲ’ ಎನ್ನುತ್ತಿದ್ದಂತೆಯೇ ಬಂದವರ ತಲೆಗಳೆಲ್ಲ ಒಂದೊಂದೇ ಮೇಲೆದ್ದು ಮಾಸ್ತರ ಕಣ್ಣುಗಳನ್ನೇ ದಿಟ್ಟಿಸಿದವು.

ತಕ್ಷಣ ಮಾಸ್ರ‍್ರೊಳಗೆ ಹೆಪ್ಪುಗಟ್ಟಿದ ಮೋಡವೊಂದು ಕರಗುತ್ತ ಕಳಚುತ್ತ ದುಃಖದ ಕಟ್ಟೆಯೊಡೆದು, ಅವರು ಹಾಕಿದ್ದ ಕನ್ನಡಕ ತೆಗೆಯುತ್ತ ಒಮ್ಮೆಲೇ ಬಿಕ್ಕಳಿಸಿದರು. ಎಂಥದೋ ದುಗುಡ ತುಂಬಿದ ಈ ಸಂದರ್ಭ ಹೇಗೆ ನಿರ್ವಹಿಸಬೇಕೆಂದೇ ತಿಳಿಯದೇ ಕೂತಿದ್ದ ಎಲ್ಲರೂ ಒಮ್ಮೆಲೇ ಎದ್ದು ನಿಂತಿದ್ದರು. ಗೊತ್ತಿದೆ ಅಂದುಕೊಂಡರೆ ಎಲ್ಲರಿಗೂ ಎಲ್ಲವೂ ಗೊತ್ತಿದ್ದ ಆದರೆ ಹೀಗೇ ಅಂತ ಯಾರಿಗೂ ಏನೂ ಗೊತ್ತಿಲ್ಲದ ಮತ್ತು ಏನನ್ನಾದರೂ ಬಾಯಿಬಿಟ್ಟು ಹೇಳಲು ಕೇಳಲು ಶಬ್ದಗಳೇ ಸಿಗದ ಒಂದು ವಿಚಿತ್ರ ಸನ್ನಿವೇಶವಿದು.

ಇದ್ದುದರಲ್ಲೇ ಗಟ್ಟಿ ಮನಸ್ಸು ಮಾಡಿಕೊಂಡು ಮುಂದೆ ಬಂದ ಸುಮೇದನ ತಂದೆ ನಡುಗುವ ಸ್ವರದಲ್ಲೇ ‘ನಾಳೆಯೇ ಶಾಲೆಗೆ ಹೊರ್ಡಿ ಸರ್, ಯಾವ್ದನ್ನೂ ಯೋಚ್ನೆ ಮಾಡ್ಬೇಡಿ, ಶಾಲೇಲಿ ಮಕ್ಳು ನಿಮ್ಮನ್ನು ಕಾಯ್ತಿವೆ’ ಎನ್ನುತ್ತ ಮಾಸ್ರ‍್ರ ಹೆಗಲು ಸವರಿ ಚೂರು ಸರಿದು ನಿಂತು ಅಲ್ಲೇ ಬಾಗಿಲಲ್ಲಿ ಕೂತಿದ್ದ ಮೀನಾಕ್ಷಿಯವರ ಕಡೆ ತಿರುಗಿ ‘ಅಕ್ಕೋರೇ, ಮಾಸ್ರ‍್ರಿಗೆ ಸಮಾಧಾನ ಮಾಡಿ, ನಾಳೆಯಿಂದ ಮುದ್ದಾಂ ಶಾಲೆಗೆ ಕಳ್ಸಿ’ ಎನ್ನುವ ಪುರುಸೊತ್ತಿಲ್ಲದೇ ಈಗ ನಾಲ್ವರೂ ಎದ್ದು ನಿಂತು ತಂತಮ್ಮ ಎದೆಗೆ ಕೈಯಿಟ್ಟು ‘ನಮಸ್ಕಾರ’ ಎಂದುಸುರುತ್ತ ಹೊರ ನಡೆದರು.

ಮಾಸ್ರ‍್ರಿಗೆ ಇದೆಲ್ಲ ಒಂದು ಕನಸೇನೋ ಅನ್ನುವಷ್ಟು ದ್ವಂದ್ವದಲ್ಲೇ ಅವರಿಗರಿವಿಲ್ಲದೇ ಕಣ್ಣಿಂದ ದಳದಳ ನೀರು ಸುರಿದು ಹೋಗುತ್ತಿತ್ತು. ಹರೆಯದ ಮಗನನ್ನು ಕಳಕೊಂಡ ಒಬ್ಬ ತಂದೆ-ತಾಯಿಯ ಭಾವನಾತ್ಮಕ ನೋವಿಗಿಂತ ಹೆಚ್ಚಾಗಿ ವಿದ್ಯಾರ್ಥಿಗಳನ್ನು ಬೆಳೆಸುವ ಮಾಸ್ರ‍್ರ ಮಹತ್ವವೇ ಹೆಚ್ಚೆಂದು ಸಾರುವ ಈ ದೃಶ್ಯ ಮೀನಾಕ್ಷಿಯಲ್ಲಿ ತೀಕ್ಷ್ಣ ಅನುಭೂತಿಯನ್ನು ಉಕ್ಕಿಸಿದ್ದಲ್ಲದೇ ಪತಿಯ ಘನತೆಯ ಉತ್ತುಂಗ ಕಂಡು ಭಾವೋದ್ವೇಗದ ದುಮ್ಮಾನದಿಂದ ಅವರ ಕಣ್ಣೂ ತುಂಬಿ ಬಂತು.

ಕೀಲಿಕೈ ಕೊಟ್ಟಂತೆ ಮಾಸ್ರ‍್ರು ಅವರ ಹಿಂದೆಯೇ ಎದ್ದು ಬಂದು ಬಾಗಿಲಲ್ಲಿ ನಿಂತಾಗ ಹೊರಗೆ ಮಳೆ ಸುರಿದ ಮುಗಿಲು ಪರಿಶುಭ್ರವಾಗಿತ್ತು. ತಮ್ಮ ಎಡಗೈಯಲ್ಲಿದ್ದ ಕನ್ನಡಕವನ್ನು ನಿಧಾನ ಕಣ್ಣಿಗೆ ಧರಿಸಿದ ಮಾಸ್ರ‍್ರು ಅಖಂಡ ಮನುಷ್ಯ ಕುಲವನ್ನು ಪರವಶರಾಗಿ ನಂಬುತ್ತ ತಲೆಯೆತ್ತಿ ನಿಡಿದಾದ ಆ ಮುಗಿಲನ್ನೇ ದಿಟ್ಟಿಸಿದರು.

‍ಲೇಖಕರು avadhi

September 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಯಂ.ಕೃಷ್ಣರಾಜ.ಭಟ್. ಹೆಬ್ರಿ.

    ಕಣ್ಣೆದುರು ನಡೆದ ಹಾಗೆ ಕಥೆ ಕಟ್ಟಿದ ರೀತಿ ಅನನ್ಯ, ಅಭಿನಂದನೆಗಳು.

    ಪ್ರತಿಕ್ರಿಯೆ
  2. ಲಲಿತಾ ಸಿದ್ಧಬಸವಯ್ಯ

    ನಾಯಕ ಮಾಸ್ತರಷ್ಟೇ , ಸುಮೇದನ ತಂದೆ ಚಿಕ್ಕಪ್ಪಂದಿರ ನಡತೆಯೂ ಘನತರವಾದದ್ದು. ಇಂತಹ ಆರೋಗ್ಯಕರ ಮನಸ್ಸು ಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: