ಆನಂತರ…

ರೂಪ ಹಾಸನ

                    ಅವಳ ಕಾಯ ಅಕಟವಿಕಟ ಅಳತೆಗಳ ಸಂತೆ                                                     
                    ರೂಪ ಸ್ವರೂಪಗಳ ವಿಭ್ರಮೆಯ ಕಂತೆ                                                        
                    ಲೆಕ್ಕಕ್ಕಿದೆಯೇ ಭಾವ ಬುದ್ಧಿ ಚಿತ್ತ ಆತ್ಮ                                                           
                    ಕಾಣಬಲ್ಲುದೇ ಕಾಯದೊಳಗಣ ಪರಮಾತ್ಮ?

ಪ್ರೀತಿಯಿಂದ ತಲೆ ನೇವರಿಸ ಹೋದರೂ ಆ 14ರ ಹರೆಯದ ಪುಟ್ಟ ಹುಡುಗಿ ಹೆಡೆ ತುಳಿದ ಹಾವಿನಂತೆ ಪೂತ್ಕರಿಸುತ್ತಿದ್ದಳು. ಉದರದಾಳದಿಂದ ಎದ್ದು ಬಂದ ಆಕ್ರೋಶ ಅವಳ ಕಣ್ಣುಗಳಲ್ಲಿ ಮಡುಗಟ್ಟಿ ನಿಂತು ಎದುರಿನವರನ್ನು ಸುಡುತ್ತಿರುವಂತೆ ಭಾಸವಾಗುತ್ತಿತ್ತು. ತಲೆನೇವರಿಸಲು ಹೋದ ಕೈ, ಸುಡುವ ಬೆಂಕಿ ತಾಕಿದಂತೆ ತಾನಾಗಿಯೇ ಹಿಂದೆ ಸರಿಯುತ್ತಿತ್ತು.

ಅವಳು ಮಾತು ನಿಲ್ಲಿಸಿ ತಿಂಗಳುಗಳೇ ಕಳೆದಿದ್ದವು. ಯಾವ ಸ್ಪಂದನೆಯೂ ಇಲ್ಲದ ಜೀವಚ್ಛವದಂತೆ ಕಲ್ಲಾಗಿಬಿಟ್ಟಿದ್ದಳು. ಎದುರಿನವರ ಮಾತು, ವ್ಯವಹಾರಗಳೊಂದೂ ತನಗೆ ಸಂಬಂಧವೇ ಇಲ್ಲವೆಂಬಂತೆ, ತಾನು ಈ ಲೋಕದವಳೇ ಅಲ್ಲವೆಂಬಂತೆ, ಶೂನ್ಯದಲ್ಲಿ ದೃಷ್ಟಿನೆಟ್ಟು ತಟಸ್ಥ ಕುಳಿತುಬಿಟ್ಟಿದ್ದಳು. ಅವಳ ತಾಯಿಯಲ್ಲದೇ ಬೇರೆ ಯಾರೂ ಅವಳನ್ನು ಮುಟ್ಟುವಂತಿರಲಿಲ್ಲ. ಮುಟ್ಟಿದವರಿಗೆ ಗಂಡಾಂತರ!   

ನಾಲ್ಕು ತಿಂಗಳ ಹಿಂದೆ ಅವಳೂ ಎಲ್ಲರಂತೆ ಸಹಜ, ಸಾಮಾನ್ಯ ಬಾಲೆ. ಮನೆಯಲ್ಲಿ ಬಡತನವಿದ್ದರೂ ಅಪ್ಪ-ಅಮ್ಮನ ಪ್ರೀತಿಗೇನೂ ಕೊರತೆಯಿರಲಿಲ್ಲ. ತಾನು, ತನ್ನ ಶಾಲೆ, ಪಾಠ, ಮನೆಗೆಲಸದ ಜೊತೆಗೇ ಗೆಳತಿಯರೊಂದಿಗೆ ನಗುತ್ತ, ಆಟವಾಡುತ್ತಾ, ಬೆರೆಯುತ್ತಾ ಬೆಳೆಯುತ್ತಿದ್ದಳು ಹಳ್ಳಿಯ ಈ ಮುಗ್ಧ ಹುಡುಗಿ.

ಅವಳ ಕಣ್ಣ ತುಂಬಾ ನೂರಾರು ಕನಸುಗಳಿದ್ದವು. ಬೆಟ್ಟದಷ್ಟು ಆಸೆ ಇತ್ತು. ಗೆಳತಿಯರೊಂದಿಗಿನ ಮಾತುಕತೆ, ಆಟ-ಪಾಠದಲ್ಲೆಲ್ಲ ಅದಮ್ಯ ಉತ್ಸಾಹ, ಬಾಲ್ಯದ ತುಂಟತನದ ಜೊತೆಗೆ, ಎಲ್ಲ ಬದಲಿಸುವ ಛಲ. ಓದಿ ಕೆಲಸಕ್ಕೆ ಸೇರಿ ಅಪ್ಪ-ಅಮ್ಮನ ಬಡತನ ನೀಗಿಸುವ ಹಂಬಲ. ಪುಟ್ಟ ತಮ್ಮನನ್ನು ದೊಡ್ಡ ಆಫೀಸರ್ ಮಾಡುವ ಕನಸು. ಅರಳು ಹುರಿದಂತೆ ಪಟಪಟನೆ ಮಾತನಾಡಿ ಎದುರಿನವರನ್ನು ಮೋಡಿ ಮಾಡಿಬಿಡುವ ಪೋರಿ. ಈಗ…   

ಎಂದಿನಂತೆ ಶಾಲೆ ಮುಗಿಸಿ ಬಂದು, ಮನೆಗೆಲಸದಲ್ಲಿ ತೊಡಗಿಕೊಂಡಿದ್ದ ಹುಡುಗಿಗೆ ಆಘಾತ ಕಾದಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಒಳಹೊಕ್ಕಿದ್ದ ಆ ಕಾಮುಕ ತನ್ನ ಪೈಶಾಚಿಕ ಕೃತ್ಯ ಮುಗಿಸಿ ಪರಾರಿಯಾಗಿದ್ದ. ಅದರೊಂದಿಗೇ ಆ ಹುಡುಗಿಯ ಕೋಮಲ ಬದುಕನ್ನೇ ಮುರುಟಿ ಮೂಲೆಗೆಸೆದಿದ್ದ. ಈ ಆಘಾತ ಅವಳ ಒಳಗನ್ನೇ ಛಿದ್ರಗೊಳಿಸಿತ್ತು.                                                                            

ಮುಂದೆ.. ಆ ಪುಟ್ಟ ಮನೆಯ ತುಂಬಾ ಜನರೋ ಜನರು. ಪೊಲೀಸರು, ಮಾಧ್ಯಮದವರು, ಅವರು, ಇವರು, ಎಲ್ಲರೂ…..ಸಂಬಂಧಿಸಿದವರು, ಸಂಬಂಧವಿಲ್ಲದವರು, ಸಂತೈಕೆಗೋ, ಕುತೂಹಲಕ್ಕೋ, ಕೆಲಸವಿಲ್ಲದ್ದಕ್ಕೋ… ಒಟ್ಟಾರೆ ಜನರ ಪ್ರವಾಹ. ನೂರೆಂಟು ಪ್ರಶ್ನೆ, ತರಹೇವಾರಿ ವಿಚಾರಣೆ. ಆಸ್ಪತ್ರೆ, ಪೊಲೀಸ್ ಠಾಣೆ, ಕೋರ್ಟ್, ಕಛೇರಿ.. ಮುಗಿಯದ ಗೋಳು. ಹಳ್ಳಿಯ ಬಡ ಕುಟುಂಬದ ಪ್ರಶಾಂತ ಬದುಕು ಈಗ ಬಯಲಿಗಿಟ್ಟ ಹಣತೆ. ಬತ್ತಿ-ಎಣ್ಣೆಗಳಿದ್ದೂ ಪ್ರಚಂಡ ಗಾಳಿಗೆ ಮತ್ತೆ ಮತ್ತೆ ಕಂದುವ ಬೆಳಕು! ಬಯಲಲ್ಲೇ ಮತ್ತೆ ಮತ್ತೆ ದೀಪ ಹೊತ್ತಿಸುವ ಅನಿವಾರ್ಯತೆಯಲ್ಲಿ ಹೈರಾಣಾದ ಜೀವಗಳು.

ದೇಹಕ್ಕಾದ ಗಾಯ ಕ್ರಮೇಣ ಮಾಯುತ್ತದೆ. ಆದರೆ ಮನಸ್ಸಿಗಾದ ಗಾಯ? ಸುತ್ತ ಮುತ್ತಲಿನವರ ಕೊಂಕು, ಅಸಹ್ಯದ ನೋಟಗಳು, ಅನುಕಂಪದ, ನಾಟಕೀಯ ಮಾತುಗಳು, ‘ಆ ಹುಡುಗಿಗೆ ತಲೆಕೆಟ್ಟಿದೆ’, ‘ಹುಚ್ಚು ಹಿಡಿದಿದೆ’ ಎಂಬ ಗುಸುಗುಸು. ನೂರೆಂಟು ಜನರ ನೂರೆಂಟು ಬಿಟ್ಟಿ ಉಪದೇಶ, ಸಲಹೆ, ಸೂಚನೆ. ಗಾಯವನ್ನು ಕೆದಕಿ, ಕೆದಕಿ ವ್ರಣವಾಗಿಸಿ, ನಾರುವಂತೆ ಮಾಡಿಬಿಡುತ್ತವೆ.

ಸುದ್ದಿ ಮಾಡುವ ಭರದಲ್ಲಿ, ಸಹಾಯ ಮಾಡುವ ನೆವದಲ್ಲಿ ತೋರಿಸಬೇಕಾದ್ದು ಬೇಡದ್ದೆಲ್ಲವನ್ನೂ ಬಿಚ್ಚಿಟ್ಟು, ಘಟನೆಯ ವೈಭವೀಕರಣ ಮಾಡಿ ಅನವಶ್ಯಕವಾಗಿ ಎಳೆದು, ಪೂರ್ವ ಪರ ವಿಶ್ಲೇಷಣೆ ಮಾಡಿ ಕೆಲ ದೃಶ್ಯ ಮಾಧ್ಯಮಗಳು ಮತ್ತಷ್ಟು ರಾಡಿಗೊಳಿಸಿ ಬಿಟ್ಟು ಬಿಡುತ್ತವೆ.     

ಈಗ, ಆ ಕಂದಮ್ಮನ ಸ್ಥಿತಿಯನ್ನು ನೋಡಿದರೆ ಯಾರೋ ಹೊಟ್ಟೆಯೊಳಗೆ ಕೈ ಹಾಕಿ ಕರುಳನ್ನೆಲ್ಲಾ ಹಿಂಡಿ ಜಾಲಾಡಿದಂತೆ ಸಂಕಟವಾಗುತ್ತದೆ. ಅಮಾಯಕ ಹುಡುಗಿಯ ಬದುಕನ್ನೇ ಕಾಲಿನಿಂದ ಹೊಸಕಿ ಎಸೆದಂತೆ ಸಂಬಂಧವಿಲ್ಲದ- ಪ್ರೀತಿಯಲ್ಲದ ಈ ಪಾಶವೀಕೃತ್ಯಕ್ಕೂ ‘ಅತ್ಯಾಚಾರ’ ವೆಂಬ ಸಣ್ಣ ಪದವೇ ಸಾಕೇ ಎನಿಸಿಬಿಡುತ್ತದೆ.    

ಯಾರೋ ಆ ಹುಡುಗಿಯ ಮನೆಗೆ ಹೋಗಿ ಉಪದೇಶ ಕೊಡುತ್ತಾರೆ. “ಇಂತಹ ಆಕಸ್ಮಿಕಗಳು ನಡೆದಾಗ ಅದನ್ನು ಭಾವನಾತ್ಮಕವಾಗಿ ಮನಸ್ಸಿಗೆ ಹಚ್ಚಿಕೊಳ್ಳದೇ ಅತ್ಯಾಚಾರಿ ಹೇಗೆ ಎಲ್ಲಾ ಕೊಡವಿಕೊಂಡು ನಡೆದುಬಿಡುತ್ತಾನೋ ಹಾಗೇ ಎಲ್ಲಾ ಮರೆತು, ಕೊಡವಿಕೊಂಡು ಮುಂದಡಿಯಿಡಬೇಕು” ಎಂದು. ಆದರೆ ವಾಸ್ತವಕ್ಕೂ ಉಪದೇಶಕ್ಕೂ ಅಜಗಜಾಂತರ.

ಅವನು ಎದ್ದು ನಡೆದುಬಿಟ್ಟದ್ದಕ್ಕೂ, ಇವಳು ಎದ್ದು ನಡೆಯುವುದಕ್ಕೂ ಉತ್ತರ-ದಕ್ಷಿಣಗಳಷ್ಟು ಅಂತರ! ಹುಡುಗಿಯ ತಾಯಿ ಕಣ್ಣೀರು ತುಂಬಿಕೊಳ್ಳುತ್ತಾಳೆ ; “ಎಲ್ಲಾ ಅದ್ಹೇಗ್ ಮರೆಯೋದು ಹೇಳ್ಕೊಡಿಯವ್ವ. ಆ ಪಾಪಿನ ಕೊಂದರೂ ನಮಗೆ ಸಮಾಧಾನ ಆಗಕಿಲ್ಲ. ಆದರೆ ಏನ್ ಮಾಡಿದ್ರು ನಮ್ಮುಡುಗಿ ಬದುಕು ಸರಿ ಹೋಗ್ತದಾ? ನಿಮ್ಮ ಮನೆಯಾಗೇ, ನಿಮ್ ಹುಡ್ಗೀಗೆ ಇಂಗಾಗಿದ್ರೆ ಏನ್ ಮಾಡ್ತಿದ್ರಿ? ಆಗ್ಲೂ ಏನೂ ಆಗೇ ಇಲ್ಲ ಅಂದ್ಕೋತಿದ್ರ? ನಮ್ಮಷ್ಟಕ್ಕೆ ನಮ್ಮ ಬಿಟ್ರೆ ಹೆಂಗೋ ಸಂಕಟ ಪಡ್ತಾ ಬದುಕ್ಕೊತೀವಿ.” ಎನ್ನುತ್ತಾಳೆ. ಹೌದು ಕಾನೂನು ಅಪರಾಧಿಗೆ ಶಿಕ್ಷೆ ಕೊಡಬಹುದು. ಆದರೆ ಅದು ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಬಹುದೇ? ಆ ಹುಡುಗಿ ಕಳೆದುಕೊಂಡ ಶಾಂತಿ, ನೆಮ್ಮದಿ, ಸುಂದರ ಬದುಕು, ಕನಸು, ನಿಷ್ಕಲ್ಮಷ ನಗುವನ್ನು ಹಿಂತಿರುಗಿಸಬಲ್ಲುದೇ?     

ಇದೊಂದು ಸತ್ಯ ಕಥೆ. ಇಂತಹ ಎಷ್ಟೊಂದು ಘಟನೆಗಳೋ? ಕೆಲವು ಮಾತ್ರ ಸುದ್ದಿಯಾಗುತ್ತವೆ. ಹಲವು, ಸುದ್ದಿಯಾದ ಆನಂತರದ ಪರಿಣಾಮ ಎದುರಿಸಲಾಗದೇ ‘ಮರ್ಯಾದೆ’ಗೆ ಅಂಜಿ ದನಿ ಕಳೆದುಕೊಳ್ಳುತ್ತವೆ. ಆದರೆ ಒಳಗೇ ಸದ್ದಿಲ್ಲದೇ ಉಸಿರಾಡುತ್ತಿರುತ್ತವೆ. ನಿತ್ಯ ಮನ ಮುದುರಿಕೊಳ್ಳುತ್ತಾ, ಬದುಕು ಕಮರಿಸಿಕೊಳ್ಳುತ್ತಿರುತ್ತವೆ.  

‘ಭಾರತದಲ್ಲಿ 16 ವರ್ಷದೊಳಗಿನ ಒಂದು ಹೆಣ್ಣು ಮಗು ಪ್ರತಿ 155 ನಿಮಿಷಕ್ಕೊಮ್ಮೆ ಅತ್ಯಾಚಾರಕ್ಕೊಳಗಾಗುತ್ತಿದೆ, 10 ವರ್ಷದ ಕೆಳಗಿನ ಒಂದು ಹೆಣ್ಣುಮಗು ಪ್ರತಿ 13 ಗಂಟೆಗೊಮ್ಮೆ ಹಾಗೂ 10 ಹೆಣ್ಣುಮಕ್ಕಳಲ್ಲಿ ಒಂದು ಮಗು ಯಾವಾಗ ಬೇಕಾದರೂ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ನಿತ್ಯ ತೂಗುವ ಕತ್ತಿ’ ಎಂಬ ಸಮೀಕ್ಷಾ ವರದಿ ಓದಿದಾಗ ನಮ್ಮ ಸುತ್ತಲೂ ಎಂಥಹ ಅಸಹ್ಯದ ನರಕವಿದೆ ಎಂದು ಹೇಸಿಗೆಯಾಗುತ್ತದೆ.

ಇವೆಲ್ಲಾ ಕೇವಲ ದಾಖಲಾದ ಅತ್ಯಾಚಾರಗಳಷ್ಟೇ ಎಂಬುದು ನಮಗೆ ನೆನಪಿರಬೇಕು. ದಾಖಲಾಗದವುಗಳ ಸಂಖ್ಯೆ ಖಂಡಿತಾ ಇದಕ್ಕಿಂತಾ 2-3 ಪಟ್ಟು ಹೆಚ್ಚೇ ಆಗಿರುತ್ತದೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹಿಂದೆಂದಿಗಿಂತಾ ಇಂದು ಮೂರು ಪಟ್ಟು ಏರಿಕೆಯಾಗಿರುವುದನ್ನು ಅಂಕಿಅಂಶಗಳೇ ಸೂಚಿಸುತ್ತಿವೆ. ಆದರೆ ಶಿಕ್ಷೆಯಾಗಿರುವ ಪ್ರಮಾಣ ಮಾತ್ರ ಬೆರಳೆಣಿಕೆಯಷ್ಟು. ಇದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುವಂತೆ ಮಾಡುತ್ತಿದೆ. 

                                        

ಇಷ್ಟೊಂದು ಪ್ರಮಾಣದಲ್ಲಿ ಅತ್ಯಾಚಾರಗಳು ನಡೆಯುತ್ತಿವೆ ಎಂದಾದರೆ ಎಷ್ಟೊಂದು ‘ಅಮಾನವೀಯ, ಪೈಶಾಚಿಕ’ ವ್ಯಕ್ತಿಗಳು ನಮ್ಮ ಮಧ್ಯೆ ಇದ್ದಾರೆ, ನಿತ್ಯ ಸೃಷ್ಟಿಯಾಗುತ್ತಿದ್ದಾರೆ ಎಂದು ಆತಂಕವಾಗುತ್ತದೆ. ಮತ್ತೆ ಇದರ ಹೊಣೆಗಾರಿಕೆ ಸಮಾಜದ ಮೇಲೆ. ಅಂದರೆ ನಮ್ಮ ಮೇಲೇ! ಸಮಸ್ಯೆಯ ಇನ್ನೊಂದು ಮಗ್ಗುಲನ್ನು ತೆರೆದು ನೋಡಿದರೆ, ದೃಶ್ಯ ಮಾಧ್ಯಮಗಳಲ್ಲಿನ ಎಗ್ಗಿಲ್ಲದ ಅಶ್ಲೀಲ ಪ್ರದರ್ಶನ, ಕಾಮುಕ ನೃತ್ಯ, ಹಿಂಸೆ, ಸೆಕ್ಸ್‍ನ್ನು ಎತ್ತಿಹಿಡಿಯುತ್ತಿರುವ ಪರಿಣಾಮ, ಹೆಣ್ಣನ್ನು ಭೋಗದ ವಸ್ತುವಿನಂತೆ ಬಳಸಿ ಬಿಸಾಡುವ ಇಂತಹ ವಿಕೃತಿ ವಿಜೃಂಭಿಸಲು ಕಾರಣವಾಗಿದೆ.    

ಚಿಕ್ಕಂದಿನಲ್ಲಿಯೇ ಮಕ್ಕಳ ವ್ಯಕ್ತಿತ್ವ ದೋಷಗಳನ್ನು ಸಹನೆಯಿಂದ ಗುರುತಿಸಿ ಸರಿಪಡಿಸುವ ಅರಿವು, ಸಮಯ, ಶ್ರದ್ಧೆ ಪಾಲಕರಲ್ಲೂ ಮೂಡಬೇಕಿದೆ. ಭೋಗ ಸಂಸ್ಕೃತಿಯ ಬೆನ್ನು ಹತ್ತಿರುವ ಇಂದಿನ ಕೆಲವು ಯುವಜನರು, ಕ್ಷಣಕಾಲದ ಮೋಜು-ಮಜವೇ ಬದುಕೆಂದು ಕಣ್ಣುಕಟ್ಟಿದ ಹುಚ್ಚು ಕುದುರೆಗಳಂತೆ ಸಾಗುತ್ತಿರುವಾಗ, ಅದು ಹೊತ್ತು ತರುತ್ತಿರುವ ಸಮಸ್ಯೆಗಳು ಭೀಕರವಾಗಿ ನಮ್ಮ ಮುಂದೆ ನಿಂತಿವೆ. ಅದಕ್ಕೆ ಕಡಿವಾಣ ಎಲ್ಲಿ? ಹೇಗೆ ಹಾಕಬೇಕೆಂದು ಚಿಂತಿಸುವ ಅನಿವಾರ್ಯತೆ ಈಗ ಬಂದಿದೆ.     

ಜೊತೆಗೇ ಅತ್ಯಾಚಾರ ಪ್ರಕರಣಗಳ ಪೂರ್ವ, ಪರಗಳನ್ನು ಎತ್ತಿ ಹಿಡಿದು ತೋರುವುದಕ್ಕಿಂತಾ ಹೆಣ್ಣುಮಕ್ಕಳ ಮೇಲಾಗುವ ಅದರಲ್ಲೂ ಅಪ್ರಾಪ್ತ ಮಕ್ಕಳ ಮೇಲಾಗುವ ‘ಆನಂತರ’ದ ಪರಿಣಾಮಗಳ ಹೃದಯ ವಿದ್ರಾವಕ ಸ್ಥಿತಿಯ  ವರದಿಗಳಿಗೆ ಮಾಧ್ಯಮಗಳು ಹೆಚ್ಚಿನ ಗಮನಹರಿಸಬೇಕಿದೆ. ಅವು ಬಹು ಸೂಕ್ಷ್ಮ ರೀತಿಯಲ್ಲಿ, ಮಾನವೀಯ ನೆಲೆಗಳಲ್ಲಿ ದಾಖಲಾಗಬೇಕು. ಫಾಲೋಅಪ್‍ಗಳೂ ಆಗುತ್ತಿರಬೇಕು. ಜೊತೆಗೆ ಅತ್ಯಾಚಾರ ಪ್ರಕರಣಗಳಲ್ಲಿ ನೀಡುವ ಶಿಕ್ಷೆಯ ಕುರಿತೂ ಕಾಲಕಾಲಕ್ಕೆ ಸುದ್ದಿ ಮೂಡಿಬರಬೇಕು. ಆಗಲಾದರು ವಿಕೃತ ಮನಸ್ಸಿನ ವ್ಯಕ್ತಿಗಳ ಮೇಲೆ ಇವು ಪರಿಣಾಮ ಬೀರಿ ಮನಃಪರಿವರ್ತನೆಗೆ ಕಾರಣವಾಗಬಹುದು.     

ಸೆಕ್ಸ್‍ನ ಕುರಿತು ಮುಕ್ತವಾಗಿ ಯೋಚಿಸುವ, ನಡೆದುಕೊಳ್ಳುವ ಪ್ರಕ್ರಿಯೆಗಳು ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಕೂಡ, ಕೌಮಾರ್ಯ, ಶೀಲದ ಕುರಿತು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ವಿಪರೀತದ ಕಲ್ಪನೆಗಳು ಇನ್ನೂ ಜೀವಂತವಾಗಿವೆ. ಅತ್ಯಾಚಾರಕ್ಕೊಳಗಾಗಿ ಸುದ್ದಿಯಾದ ಹೆಣ್ಣುಮಕ್ಕಳ ಬದುಕು ಅಸಹನೀಯವಾಗಿ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ಮತ್ತೆ ಕೆಲವರು ಖಿನ್ನತೆಗೆ, ತೀವ್ರ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗಿ ನರಳುತ್ತಿದ್ದಾರೆ. ಕಾನೂನು ತನ್ನ ಪ್ರಕ್ರಿಯೆ ಪೂರೈಸಲು ದೀರ್ಘ ಸಮಯ ಬೇಕಿರುವುದರಿಂದ, ಸರಿಯಾದ ಸಾಕ್ಷ್ಯಾಧಾರಗಳಿಲ್ಲದೇ, ನ್ಯಾಯ ಸಿಗದಿದ್ದಾಗ ಬೀದಿಗೆ ಬಿದ್ದ ಹೆಣ್ಣು ಮಗು ಮಾನಸಿಕವಾಗಿ ಛಿದ್ರವಾಗಿ ಹೋಗುತ್ತದೆ. ನ್ಯಾಯಕ್ಕಾಗಿ ಕಾಯುವ ಹಂತದಲ್ಲಿನ ಮಾನಸಿಕ ಹಿಂಸೆ, ಸಮಾಜದ ಹೀನ ವರ್ತನೆ ವರ್ಣನೆಗೂ ನಿಲುಕದಂತಹುದು.                                                           

ಮಕ್ಕಳ ಹಕ್ಕುಗಳ ಕುರಿತು ನಮ್ಮಲ್ಲಿ ಇನ್ನೂ ಜಾಗೃತಿ ಮೂಡದಿರುವುದು, ಸರ್ಕಾರದಿಂಧ ಇಂತಹ ಮಕ್ಕಳಿಗೆ ಸರಿಯಾದ ಪುನರ್ವಸತಿ ಆಗದಿರುವುದು, ಪರಿಹಾರ ಧನ ವಿತರಣೆಯಾಗದಿರುವುದು, ಕೃತ್ಯ ನಡೆದ ಕೂಡಲೇ ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಾಗದಿರುವುದು, ಪೊಲೀಸ್ ಇಲಾಖೆಯಲ್ಲಿ ಸರಿಯಾದ ಸೆಕ್ಷನ್‍ಗಳನ್ನು ಹಾಕದೇ ಪ್ರಕರಣ ದಾಖಲಿಸುವುದು ಇಂತಹ ಪ್ರಕರಣಗಳು ದಿಕ್ಕುತಪ್ಪುವುದಕ್ಕೆ, ಹೆಚ್ಚುತ್ತಿರುವುದಕ್ಕೆ ಕೆಲವು ಕಾರಣಗಳು.

ಎಲ್ಲಕ್ಕಿಂಥಾ ಮುಖ್ಯವಾಗಿ ಕಡಿವಾಣವಿಲ್ಲದ ನಮ್ಮ ದೃಶ್ಯಮಾಧ್ಯಮ, ಅಂತರ್ಜಾಲಗಳು ಇಂತಹ ಪ್ರಕರಣಗಳು ಹೆಚ್ಚುವುದಕ್ಕೆ ಕಾರಣವಾಗುತ್ತಿವೆ. ಎಲ್ಲಕ್ಕಿಂತಾ ಮುಖ್ಯವಾಗಿ ಇಂದಿನ ಹೆಣ್ಣು ಮಕ್ಕಳು ಸಮಾಜದಲ್ಲಿ ಕ್ರಿಯಾಶೀಲರಾದಷ್ಟೂ ಅವರನ್ನು ಗೌರವದಿಂದ ಕಾಣುವ ಮನೋಭಾವ ಮೂಡಬೇಕು.

ಹೊರಪ್ರಪಂಚಕ್ಕೆ ಕಾಲಿಡುವ ಪ್ರತಿ ಹೆಣ್ಣೂ ‘ನಾನೊಂದು ಹೆಣ್ಣು ಮಾತ್ರವಲ್ಲ, ಭಾವ, ಬುದ್ಧಿ, ಚಿತ್ತ, ಆತ್ಮಗಳಿರುವ ವ್ಯಕ್ತಿ’ ಎಂದುಕೊಂಡು ನಡೆದಿರುವಾಗ, ಅವಳನ್ನು ಅವಳ ‘ದೇಹ’ದಿಂದಲೇ ಅಳೆಯುವ ಇಂತಹ ಅಮಾನುಷ ಕೃತ್ಯಗಳಿಂದ ಸಹಜವಾಗಿ ಅರಳಬೇಕಿರುವ ಹೂವು, ವಿಕಸಿಸುವ ಮೊದಲೇ ಬಾಡಿ ಹೋದಂತೆ, ಬದುಕು ಮುದುರಿ ಹೋಗುತ್ತದೆ. ಹಾಗಾಗದಂತೆ ಸಮಾಜ ಎಚ್ಚರವಹಿಸಬೇಕಿದೆ.

‍ಲೇಖಕರು Avadhi

September 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: