ನಾಮದೇವ ಕಾಗದಗಾರ ಓದಿದ ‘ಮುಗಿಲಹಕ್ಕಿಯ ನೆಲದ ಹಾಡು’

ಮಾನವೀಯ ಮೌಲ್ಯದ ‘ಮುಗಿಲಹಕ್ಕಿಯ ನೆಲದ ಹಾಡು’

ನಾಮದೇವ ಕಾಗದಗಾರ

ಗದಗ ಜಿಲ್ಲೆಯ ಹೊಸೂರು ಗ್ರಾಮದಲ್ಲಿ ಜನಿಸಿರುವ ಕವಿ ಮೈಲಾರಪ್ಪ ಬೂದಿಹಾಳ ಮುಗಿಲಹಕ್ಕಿ ಎಂದೇ ಪ್ರಸಿದ್ಧರು. ಜಾನಪದ ಸೊಗಡನ್ನು ಮೈಗೂಡಿಸಿಕೊಂಡಿರುವ ಇವರು ಪ್ರಸ್ತುತ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಳೇ ಜಿರಾಳ ಕಲ್ಗುಡಿಯ ಸರಕಾರಿ ಪ್ರಾಥಮಿಕ ಶಾಲೆಯ ಏಕೋಪಾಧ್ಯಾಯ ಶಿಕ್ಷಕ. 2007 ರಿಂದ ಶಿಕ್ಷಕರಾಗಿ ಸೇರಿದ ಮೈಲಾರಪ್ಪ ಗ್ರಾಮದ ಜನರ ಸಹಾಯದಿಂದ ಪುಟ್ಟ ಹಳ್ಳಿಯ ಶಾಲೆಯನ್ನು ರಾಜ್ಯದ ಮಾದರಿ ಶಾಲೆಯನ್ನಾಗಿಸಲು ಶ್ರಮವಹಿಸಿರುತ್ತಾರೆ.

ಸದಾ ಸಮಾಜಮಿಖಿಯಾಗಿರುವ ಇವರು ತಮ್ಮ ಸುತ್ತಲಿನ ಘಟನೆಗಳನ್ನು ನವಿರಾದ ಭಾಷೆ, ಬರವಣೆಗೆಯ ಮೂಲಕ ಸ್ಪಂಧಿಸುತ್ತಾ “ದಾಟಬೇಡ ಹೊಸ್ತಿಲು” ಸಂಕಲದ ಮೂಲಕ ಗಮನ ಸೆಳೆದಿದ್ದಾರೆ. ಈಗ ಮೈಲಾರಪನರ‍್ಪು ‘ಮುಗಿಲಹಕ್ಕಿಯ ನೆಲದ ಹಾಡು’ ಹನಿಗವನ ಸಂಕಲನದ ಮೂಲಕ ಸಮಾಜದ ಚಿತ್ರಣಗಳನ್ನು ಚಿತ್ರಿಸಿ ಓದುಗರ ಎದುರಿಗೆ ಇಟ್ಟಿರುತ್ತಾರೆ.

ಸಂಕಲನವನ್ನು ತಿರುವುತ್ತಾ ಹೋದಂತೆ ಮೈಲಾರಪ್ಪ ಬೂದಿಹಾಳ ಅವರ ಪ್ರಸ್ತುತ ಸಂಕಲನ ಮುಗಿಲ ಹಕ್ಕಿಯ ನೆಲದ ಹಾಡು ಆತ್ಮನಿವೇದನೆಯಂತೆ ಕೇಳಿಸುತ್ತದೆ. ಸಂಕಲನದ ಉದ್ದಕ್ಕೂ ಮತ್ತೆ ಮತ್ತೆ ಒಂದು ವಿನ್ಯಾಸದಂತೆ ಪುನರಾವರ್ತನೆಗಗೊಳ್ಳುವ ರೂಪಕದಲ್ಲಿ ಹೇಳುವುದಾದರೆ ಈ ಹನಿಗವಿತೆಗಳು ಈ ಬೆಂಗಾಡಿನ ನೆಲದ ಮೇಲಿನ ಗಾಢ ಕತ್ತಲಿನಲ್ಲಿ ಕವಿ ಬಿಚ್ಚಿಟ್ಟ ಅಕ್ಷರಗಳಾಗಿವೆ. ಬೆಂಗಾಡಿನ ಕತ್ತಲು ದಟ್ಟವಾಗಿದೆ. ಈ ಕತ್ತಲಲ್ಲಿ ಕುಳಿತು ನೆಲ ತನ್ನ ವೇದನೆಯನ್ನು ಹಾಡಿನ ಮೂಲಕ ಹೇಳಿಕೊಳ್ಳುತ್ತಿದೆ. ಮೊದಲ ಓದಿಗೆ ಈ ಹನಿಗವಿತೆಗಳು ಸರಳ ಉಪದೇಶದ ಸುಭಾಷಿತಗಳಂತೆ ಕಂಡರೂ ಲೋಕದ ವ್ಯವಹಾರವನ್ನು ಅವು ಚಿತ್ರಿಸುವ ಬಗೆ ಸಂಕೀರ್ಣವಾಗಿವೆ.

ಸಂಕಲನದ ತುಂಬಬೆಲ್ಲಾ ನೆಲದ ಹಾಡಿನ ಮುತ್ತುಗಳು ಚೆಲ್ಲಾಡಿರುವುವು. ಸುಖ ದುಃಖ, ಚೆಲುವು ಕುರೂಪು, ಸ್ವಾತಂತ್ರ್ಯ ದಾಸ್ಯ, ಕತ್ತಲೆ ಬೆಳಕು, ನ್ಯಾಯ ಅನ್ಯಾಯ,- ಹೀಗೆ ಮುನುಷ್ಯನ ಪಾಡನ್ನು ಅಖಂಡವಾಗಿ ಗ್ರಹಿಸಿ ದಾಖಲಿಸಿಕೊಂಡ ಕಿರು ಟಿಪ್ಪಣಿಗಳಂತೆ ಇಲ್ಲಿನ ಸಾಲುಗಳು ಓದಿಸಿಕೊಂಡು ಹೋಗುತ್ತವೆ.

ದೀಪದ ಬೆಳಕಲ್ಲಿ
ಹಸಿವು
ಕೊಲ್ಲುವುದಕ್ಕಿಂತ
ಹಣತೆ
ಹಚ್ಚುವುದೇ ಬೇಡ…
ಬದುಕಿನ ಅನ್ಯಾಯ,ಕುರೂಪ ಮತ್ತು ಕ್ಷುದ್ರತೆಗಳಿಗೆ ಕವಿಯ ಪ್ರತಿಕ್ರಿಯೆ ಇಲ್ಲಿ ಆಕ್ರೋಶದ ಕಿರುಚಾಡುವಿಕೆಯ ಬದಲು ವ್ಯಂಗ್ಯದ ಚಾಟಿಏಟಿನ ರೂಪ ತಾಳಿವೆ. ಇಲ್ಲಿರುವ ಸಾಲುಗಳಲ್ಲಿ ಮೈಲಾರಪ್ಪ ಸಾಂದ್ರ ಜೀವನಾನುಭವವನ್ನು ಹಿಡಿದಿಟ್ಟಿದ್ದಾರೆ. ಎಲ್ಲವನ್ನೂ ಒಂದೇ ಉಸುರಿಗೆ ಓದುವುದು ಕಷ್ಟ. ಕೆಲವನ್ನು ಮತ್ತೆ ಮತ್ತೆ ಓದಿ ಒಳಗಿಳಿಸಿಕೊಳ್ಳಬೇಕು.

ಇಲ್ಲಿನ ಹನಿಗವಿತೆಗಳಲ್ಲಿ ಸದ್ಭಾವನೆಯ ಸವಿಯಿದೆ. ಮಾನವೀಯ ಮೌಲ್ಯದ ಮಾಧುರ್ಯವಿದೆ. ಮನಸ್ಸುಗಳು ಕುಲಷಿತವಾಗಬಾರದೆಂಬ ಕಳಕಳಿಯ ರುಚಿಯಿದೆ. ವಸ್ತು ಮತ್ತು ಆಶಯದ ದೃಷ್ಟಿಯಿಂದ ಮುನ್ನಲೆಗೆ ಬಂದ ಇಲ್ಲಿನ ಹನಿಗಗವಿತೆಗಳು ತೀವ್ರ ಪರಿಣಾಮ ದೃಷ್ಟಿಯಿಂದ ಇನ್ನಷ್ಟು ಮೊನಚನ್ನು ಬಯಸುವಂತಿವೆ. ಒಂದು ಕಡೆ ಶಾಂತಿ ಬಗ್ಗೆ ಬರೆಯುತ್ತಾರೆ. ಇನ್ನೊಂದು ಕಡೆ ಅಸ್ಪೃಶ್ಯತೆಯ ಬಗ್ಗೆ ಬರೆಯುತ್ತಾರೆ. ಹತ್ತಾರು ಶತಮಾನಗಳಿಂದ ಪ್ರಶ್ನಿಸುತ್ತಲೇ ಪರಿಹಾರ ಕಂಡುಕೊಳ್ಳುತ್ತಾ ಬಂದರು ಇಂದಿಗೂ ಅಸ್ಪೃಶ್ಯತೆ ವಾಸಿಯಾಗಿಲ್ಲ. ಅಸ್ಪೃಶ್ಯತೆಯಿಂದ ತುಳಿತಕ್ಕೊಳಗಾದ ಕವಿ ತಮ್ಮ ಅನುಭವವನ್ನು ಈ ರೀತಿಯಾಗಿ ವ್ಯಕ್ತಪಡಿಸುತ್ತಾರೆ.

ಉಳ್ಳವರ ಕಾಲಿಗೆ
ಮೆಟ್ಟಾಗಿದ್ದರು
ಚುಚ್ಚುವರು ಮುಳ್ಳಾಗಿ…
ಬದುಕಲ್ಲಿ ಎಷ್ಟೇ ಕಷ್ಟಗಳು ಬಂದರೂ ಅದೆಲ್ಲವನ್ನೂ ಸಹಿಸಿಕೊಂಡು ಮುನ್ನಡೆಯಬೇಕು. ಸಮುದ್ರದ ದಂಡೆಯಂತೆ ಆಗಬೇಕು. ಎಷ್ಟೇ ಅಲೆಗಳು ಅಪ್ಪಳಿಸಿದರೂ ದೃತಿಗೆಡದ ಉತ್ಸಾಹದ ಬಂಡೆಯಂತೆ. ಹೀಗೆ ಬದುಕಿನ, ಸಾಮಾಜಿಕ ಏರುಪೇರುಗಳನ್ನು ಸರಳವಾದ ಚುಟುಕಿನ ಮೂಲಕವೇ ತುಂಬಾ ಸೊಗಸಾಗಿ ಹೇಳಿದ್ದಾರೆ. ಮನುಷ್ಯನ ಸ್ವಾರ್ಥತೆಯ ಬದುಕಿನ, ಬಡತನದ ಬೇಗೆಯ, ಸತ್ಯದ ಮಾರ್ಗ, ಮೋಹದ ಬಲೆ, ಶರೀರ ನಶ್ವರ, ಹೀಗೆ ಹತ್ತಾರು ಮಾನವನ ದಿನನಿತ್ಯದ ಬದುಕಿಗೆ ಹತ್ತಿರವಾಗುವ ಸಂಗತಿಗಳ ಕುರಿತಾಗಿ ಹನಿಗವಿತೆಗಳು ಮೂಡಿಬಂದಿವೆ.

ನಿನ್ನ ಕಣ್ಣೆದುರು ನಿಂತಾಗಲೆಲ್ಲಾ
ಮೇಣದಂತೆ ಕರಗಿ ಬಿಡುವೆ
ಬಾಳ ಬೆಳಕಿನ ತುಸು ಪ್ರೀತಿಗೆ…

ಈ ರೀತಿಯಾದ ಸಹಜ ಪ್ರೀತಿ, ಪ್ರೇಮ, ಕಾಮ ವಸ್ತುಗಳಾಗಿರುವ ಹನಿಗವಿತೆಗಳೂ ಇಲ್ಲಿವೆ. ಪ್ರತಿಯೊಂದು ಚುಟುಕುಗಳು ತುಂಬಾ ಅರ್ಥಪೂರ್ಣವಾಗಿ ಹಾಗೂ ಹಾಸ್ಯಭರಿತವಾಗಿವೆ. ಓದಿದೊಡನೆ ಪ್ರಾಸಪದದಿಂದ ಕೂಡಿದ್ದು ತಿಳಿಹಾಸ್ಯಬೆರೆತ ಚುಟುಕು ಎನಿಸಿದರೂ ಅವುಗಳ ಆಂತರ್ಯದ ಅರ್ಥ ಮೌಲ್ಯಯುತವಾಗಿದೆ. ಇವರ ಹನಿಗವಿತೆಗಳ ಗುಚ್ಛದಲ್ಲಿ ಸಮಾಜದ ಓರೆಕೋರೆ, ಅಂಕುಡೊಂಕು ಗಳನ್ನು ತಿದ್ಧುವ,ನಿಷ್ಕ್ರಿಯ ಸಮಾಜವನ್ನು ಎಚ್ಚರಿಸಿ ವಾಸ್ತವದಡೆ ಕೊಂಡೊಯ್ಯುವ ತುಡಿತ, ಸನ್ಮಾರ್ಗ ತೋರುವ ಮಹದಾಸೆ ಇವರ ಕವಿತ್ವದಲಿ ಬಿಂಬಿತವಾಗಿ ಕಾಣುತ್ತದೆ. ಪ್ರತಿ ಕವನಗಳು ಹೊಸ ಭರವಸೆ ಮೂಡಿಸಿ, ಹೊಸದಂದು ತಾರ್ಕಿಕ ಲೋಕದ ದರ್ಶನ ಮಾಡಿಸುತ್ತಿವೆ. ಸಾಮಾಜಿಕ ಕಳಕಳಿಯ ಸ್ಪಂದನೆಯಿದೆ, ಜೀವಪರ ಕಾಳಜಿಯ ಅದಮ್ಯ ಮಿಡತವಿದೆ.

ಸಮಾಜದ ಒಂದು ಭಾಗವಾಗಿರುವ ಕವಿಗೆ ಅವರದೇ ಆದ ಜವಾಬ್ಧಾರಿ ಇದೆ. ಕವಿಯೊಬ್ಬ ಸಮಾಜ ಚಿಂತಕನಾಗಿಯೂ ಕೆಲಸ ನಿರ್ವಹಿಸುತ್ತಾರೆ ಎಂಬುದಕ್ಕೆ ಈ ಸಂಕಲದಲ್ಲಿನ ಹನಿಗವಿತೆಗಳೇ ಸಾಕ್ಷಿ.

ಬೆವರು ಕುಡಿದು
ಬಿಕ್ಕಳಿಸುತ್ತಿದ್ದ ನೆಲದವ್ವ
ಹಸಿರು ಸೀರೆಯುಟ್ಟು
ಕಂಗಳಿಸುವಳು…

ನಿತ್ಯದ ಭುವಿಯ ಮೇಲಿನ ಬದುಕು ತೆರೆದಿಡುವ ಕಟು ವಾಸ್ತವ ಸತ್ಯಗಳಿಗೆ ಕವಿತೆಯ ಒಡಲು ಸ್ಥಳಾವಕಾಶ ನೀಡುತ್ತದೆ. ಕವಿಯ ಲೇಖನಿ ಯಾವತ್ತೂ ಚಿಂತನೆಯ ಚಿತ್ರಗಳನ್ನು ಬಿಡಿಸುತ್ತದೆ. ಕವಿತೆ ಎಂದರೆ ಮಾತನಾಡುವ ಚಿತ್ರ. ಕನಸುಗಾರಿಕೆಯ ನೆಲೆಯಲ್ಲೂ ತುಂಬು ಪ್ರೀತಿಯಲ್ಲಿ ಮನಸ್ಸನ್ನು ಹಗುರವಾಗಿಸಿಕೊಳ್ಳುತ್ತಾ ಮುಂದುವರೆಯುವ ಇವರ ಕವಿತೆಗಳು ಬಾಳ ಬದುಕಿಗೆ ಬೆಳಕಾಗಿ ನಿಂತಿದೆ.

ನೀವು ಹನಿಗವನವೆನ್ನಿ, ಹನಿಗವಿತೆಯನ್ನಿ, ಕಿರುಗವಿತೆಯನ್ನಿ, ಚುಟುಕವೆನ್ನಿ ಅಥವಾ ಮತ್ತಿನೇನೋ ಅನ್ನಿ ಅದನ್ನು ಕೆಲವರು ಪ್ರಾಸಕ್ಕಷ್ಟೇ ಬರೆದರೆ, ಕೆಲವರು ಗಂಭೀರವಾಗಿ ಸಾಮಾಜಿಕ ಕಳಕಳಿಯಿಂದ ಬರೆಯುತ್ತಾರೆ. ಪ್ರಾಸಕ್ಕಾಗಿ ಬರೆದದ್ದೂ ಆ ಕ್ಷಣಕ್ಕಷ್ಟೇ ಖುಷಿ ನೀಡಿದರೆ, ಗಂಭೀರವಾಗಿ ಬರೆದದ್ದು ಓದುಗನನ್ನು ಕಾಡುವ ಗುಣ ಹೊಂದಿರುತ್ತದೆ. ಹೀಗೆ ಸಾಮಾಜಿಕ ಕಳಕಳಿಯಿಂದ ಬರೆಯುವಲ್ಲಿ ಭರವಸೆ ಮೂಡಿಸುವ ಸಾಲಿನಲ್ಲಿ ಮೈಲಾರಪ್ಪ ಬೂದಿಹಾಳ ಪ್ರಮುಖವಾಗಿ ಕಾಣುತ್ತಿದ್ದಾರೆ.

ಹೀಗೇ ಕವಿ ಮೈಲಾರಪ್ಪ ಬೂದಿಹಾಳ ರವರು ತಮ್ಮ ಭಾವ ಗರ್ಭದ ಮಧುರ ಅದರಗಳಿಗೆ, ತಲ್ಲಣಗಳಿಗೆ, ಕಾವು ಕೊಟ್ಟು ಕವಿತೆಯಂಬ ಹಕ್ಕಿಯ ಭಾವ ಮೊಟ್ಟೆ ಒಡೆದು ಹೊರಬಂದು ಮುಗಿಲ ಹಕ್ಕಿಯಾಗಿ ಹಾರಲು  ಬೇಕಾದ ಎಲ್ಲ ಪರಿಸರವನ್ನು ಸಜ್ಜುಗೊಳಿಸಿದ್ದಾರೆ. ಸಮಾಜ ಸುಧಾರಣೆಯಂತಹ ಕೆಲಸವನ್ನು ನೆಲದ ಹಾಡಿನ ಬರವಣಿಗೆಯ ಮೂಲಕ ಕವಿ ಅರ್ಥಪೂರ್ಣವಾಗಿ ಮಾಡುತ್ತಿದ್ದಾರೆ. ಪ್ರತಿಯೊಂದು ಕವನಗಳೂ ಕೂಡ ಕಾರ್ಯ, ಕಾರಣಗಳನ್ನು ಹೇಳುವುದರೊಂದಿಗೆ ಮಾರ್ಮಿಕವಾಗಿ ಅಜ್ಞಾನ, ದೌರ್ಜನ್ಯಗಳನ್ನು ಪ್ರತಿಭಟಿಸುತ್ತವೆ. ಹಾಗೆ ಪ್ರತಿಭಟಿಸುತ್ತಲೇ ಮಾನವೀಯತೆಗಾಗಿ ಹುಡುಕಾಡುತ್ತಾ, ಮಾನವೀಯತೆಯನ್ನು ಎತ್ತಿ ಹಿಡಿಯುತ್ತಿವೆ.

ಎಲ್ಲವನ್ನೂ,ಎಲ್ಲರನ್ನೂ ಒಳಗೊಳ್ಳುವ ಪರಿಯ ಸೊಭಗಿನಲ್ಲಿ ಅರಳಿರುವ ಹನಿಗವಿತೆಗಳು ಓದುಗ ದೊರೆಗಳ ಪ್ರೀತಿ ಗೆಲ್ಲಲಿ. ಬನ್ನಿ, ಮುಗಿಲಹಕ್ಕಿ ನೆಲದ ಹಾಡಿಗೆ ನಾವು ದ್ವನಿಗೂಡಿಸೋಣ. ಅನುದಿನದ ಘಟನೆಗಳಿಗೆ ಸ್ಪಂದಿಸುವ ಈ ಕವಿಮನಸ್ಸಿನಿಂದ ಇನ್ನಷ್ಟು ವಿವಿಧ ಪ್ರಕಾರದ ಕೃತಿಗಳು ಹೊರ ಬರಲೆಂದು ಹಾರೈಸೋಣ.

‍ಲೇಖಕರು Admin

January 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: