ಮಾಲಿನಿ ಭರತನಾಟ್ಯ ರಸಸಂಜೆ…

ಶಿವಾನಿ ಹೊಸಮನಿ

ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಗೂ ಭಾರತೀಯ ವಿದ್ಯಾಭವನದ ಸಹಯೋಗದಲ್ಲಿ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವಂತಹ 39ನೇ ವರ್ಷದ ಪ್ರತಿ ಶುಕ್ರವಾರದ ಕಾರ್ಯಕ್ರಮದ ಸರಣಿಯಲ್ಲಿ ವಿದುಷಿ ಶ್ರೀಮತಿ ಶಮಾ ಕೃಷ್ಣ ಅವರ ಶಿಷ್ಯೆ ಯುವ ಕಲಾವಿದೆ  ಮಾಲಿನಿ ಅಗ್ರಹಾರ್ ಅವರು ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಭರತನಾಟ್ಯವನ್ನು ಪ್ರಸ್ತುತ ಪಡಿಸಿದರು.  

ಕಲಾವಿದೆ  ಮಾಲಿನಿ ಅಗ್ರಹಾರ್ ಅವರು ತಮ್ಮ ನೃತ್ಯ ಕಾರ್ಯಕ್ರಮವನ್ನು ಸಾಂಪ್ರದಾಯಿಕ ಮಲ್ಲಾರಿಯೊಂದಿಗೆ ಆರಂಭಿಸಿದರು. ಮಲ್ಲಾರಿಯು ದೇವಾಲಯ ನೃತ್ಯ ಸಂಪ್ರದಾಯಕ್ಕೆ ಸೇರಿದ್ದು ಲಯದ ವಿನ್ಯಾಸಗಳಿಂದ ದೈವಿಕ ವಾತಾವರಣವನ್ನು ನಿರ್ಮಿಸುತ್ತವೆ. ಮಲ್ಲಾರಿಯು ವಿಳಂಬ ಕಾಲ, ಮಧ್ಯಮಕಾಲ ಹಾಗೂ ತಾರಕಕಾಲಗಳಲ್ಲಿ ಸುಂದರ ವಿನ್ಯಾಸದ ಜತಿಗಳ ಮೋಹಕವಾದ ನೃತ್ತ ಭಾಗಗಳನ್ನು ಲಯಬದ್ಧವಾಗಿ, ಅಂಗಶುದ್ಧಿಯೊಂದಿಗೆ ನರ್ತಿಸಿ ಗುರುಗಳು ನಟರಾಜ, ವಿದ್ವಾಂಸರು ಹಾಗೂ ಸಭೆಗೆ ವಂದಿಸುವ ಮೂಲಕ ಕಾರ್ಯಕ್ರಮವು ಶುಭಾರಂಭಗೊಂಡಿತು. ಮೃದಂಗ ವಿದ್ವಾಂಸರಾದ ವಿದ್ವಾನ್ ಶ್ರೀ ಶ್ರೀಹರಿಯವರು ರಚಿಸಿದಂತಹ ಈ ಮಲ್ಲಾರಿಯು ನಾಟ ರಾಗ, ಹಾಗೂ ಖಂಡಜಾತಿ ತ್ರಿಪುಟತಾಳದಲ್ಲಿ ನಿಬದ್ಧವಾಗಿತ್ತು. 

ನಂತರದಲ್ಲಿ  ಪುರಂದರದಾಸರ ವಿರಚಿತ ಆದಿಪೂಜಿತ ಗಣನಾಥನ ಒಂದು ದೇವರನಾಮ. ವಂದಿಸುವುದಾದಿಯಲಿ ಗಣನಾಥನ ದೇವರನಾಮವು ನಾಟ ರಾಗ, ಖಂಡಛಾಪುತಾಳದಲ್ಲಿತ್ತು. ಗಜಮುಖನ ಆರಾಧಿಸದೆ, ಶಿವನ ತಪವನ್ನು ಆಚರಿಸಿ ರಾವಣನು ಆತ್ಮಲಿಂಗವನ್ನು ಪಡೆದುಕೊಂಡಿರುತ್ತಾನೆ. ಗಣೇಶನು ಬಾಲಕನ ವೇಶದಲ್ಲಿ ಬಂದು ಅದನ್ನು ಅಲ್ಲಿಯೇ ಸ್ಥಾಪಿಸುವಂತೆ ಮಾಡುತ್ತಾನೆ. ಈ ಸನ್ನಿವೇಶವನ್ನು ಕಲಾವಿದೆಯು ಅತ್ಯಂತ ಚಾತುರ್ಯತೆಯಿಂದ ಅಭಿನಯಿಸಿ ಗಣನಾಥನಿಗೆ ಸಂಗೀತ ನೃತ್ಯ ಜ್ಞಾನ, ಕಲೆಯ ಜ್ಞಾನ ನೀಡು ಎಂದು ಬೇಡುತ್ತಾ  ಮೊದಲ ನೃತ್ಯವನ್ನು ಸಂಪನ್ನಗೊಳಿಸಿದರು.

ನಾಟ್ಯಶಾಸ್ತ್ರದಲ್ಲಿ ಉಲ್ಲೇಖವಿರುವಂತಹ ಚಾರಿಗಳು, ನೃತ್ತ ಹಸ್ತಗಳು, ಕರಣಗಳ ಬಗ್ಗೆ ಪದ್ಮಭೂಷಣ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರು ದೀರ್ಘ ಅಧ್ಯಯನ, ಸಂಶೋಧನೆಗಳನ್ನು ನಡೆಸಿ ಅದಕ್ಕೊಂದು ರೂಪುರೇಶೆ ಕೊಟ್ಟು ವಿನ್ಯಾಸಗೊಳಿಸಿ ನೃತ್ಯಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.  ಅಂತಹ ವಿನ್ಯಾಸಗಳನ್ನು ಒಳಗೊಂಡಂತಹ, ಕಮಾಚ್ ರಾಗ, ಆದಿತಾಳದಲ್ಲಿರುವ ಶ್ರೀ ಚಿನ್ನಕೃಷ್ಣದಾಸರು ರಚಿಸಿರುವಂತಹ ಒಂದು ಜತಿಸ್ವರಕ್ಕೆ ಕಲಾವಿದೆಯು ಅತ್ಯಂತ ಪ್ರಬುದ್ಧ ರೀತಿಯಲ್ಲಿ ಪ್ರಸ್ತುತ ಪಡಿಸಿದರು.

ಅರ್ಧನಿಕುಟ್ಟಂ, ವ್ಯಂಸಿತಂ, ವಿವೃತ್ತಂ, ಕುಂಚಿತಂ, ಡೋಲಾಪಾದ, ರೇಚಿತ ನಿಕುಟಂ, ಗಂಡಸೂಚಿಯಂತಹ ಕರಣಗಳನ್ನೂ ಸುಲಲಿತವಾಗಿ, ಲಾಲಿತ್ಯಪೂರ್ಣ ಬಳಕೆಯು ಜತಿಸ್ವರದ ಸೊಬಗನ್ನು ಹೆಚ್ಚಿಸಿತು.  ಕಲಾವಿದೆಯ ಲಾಸ್ಯಭರಿತ ನೃತ್ಯ, ಸುಂದರವಾದ ಕೈ ಹಾಗೂ ಕಣ್ಣು ಚಲನೆಗಳು ಗಮನ ಸೆಳೆದವು.

ಮುಂದಿನ ನೃತ್ಯ ಬಂಧ- ಪದವರ್ಣ, ಭರತನಾಟ್ಯ ಮಾರ್ಗಂನ ಕೇಂದ್ರ ಭಾಗ ವರ್ಣ. ಖ್ಯಾತ ಕೊಳಲು ವಿದ್ವಾಂಸರಾದ ವಿದ್ವಾನ್ ಶ್ರೀ ಮಹೇಶ್ ಸ್ವಾಮಿಯವರು ರಚಿಸಿರುವಂತಹ ಸುಂದರೇಶ್ವರನು ಬಾರನೇಕೆ ಎಂಬ ವರ್ಣದ ಪ್ರಸ್ತುತಿ. ಇಲ್ಲಿನ ನಾಯಕಿ ಮೀನಾಕ್ಷಿ.

ವಿರಹೋತ್ಕಂಠಿತೆಯಾದರೂ ಕೂಡ ಶಿವನ ಮೇಲೆ ಅಗಾಧ ನಂಬಿಕೆ ಇರಿಸಿಕೊಂಡಿರುವ ಸ್ವಾಧೀನಪತಿಕೆ ಕೂಡ. ಸುಂದರೇಶ್ವರನ ಪ್ರೇಮಕ್ಕೆ ಹಾತೊರೆಯುವ ಮೀನಾಕ್ಷಿ ರೂಪದ ಪಾರ್ವತಿಯು ತನ್ನ ಮನಸ್ಸಿನ ಜೊತೆ ತನ್ನ ಭಾವನೆಗಳನ್ನು ಹಂಚಿಕೊಳ್ಳುವಂತಹ ಪ್ರಸಂಗವನ್ನು  ಮನಮುಟ್ಟುವಂತೆ ಅಭಿನಯಿಸಿದರು. 

ಸೃಷ್ಟಿಯ ಕಾರ್ಯಗಳಲ್ಲಿ, ಭಕ್ತರ ಮನದಿಚ್ಛೆಗಳನ್ನು ಪೂರೈಸುವಲ್ಲಿ ಮಗ್ನನಾಗಿ, ಅಥವಾ ಗಂಗೆಯ ಜೊತೆ ಕಾಲಕಳೆಯುತ್ತಾ ನನ್ನನ್ನು ಮರೆತಿದ್ದಾನೆಯೇ, ಅಥವಾ ನನ್ನ ಮೇಲೆ ಕೋಪಗೊಂಡಿರಬಹುದೇ ಎಂದು ನೆನೆದು ದುಃಖಿಸುತ್ತಾಳೆ. ಯಾಕೆ ಆ ಸುಂದರೇಶ್ವರ ನನ್ನ ಬಳಿ ಬರುತ್ತಿಲ್ಲ, ಚಂದಿರನ ಮುಡಿದಿದ್ದಾನೆ ಆ ಚೆಲುವ ಎನ್ನುತ್ತಾ ಆ ಕಥಾನಕವನ್ನು ಕಲಾವಿದೆಯು ನೆನಪಿಸಿಕೊಳ್ಳುತ್ತಾಳೆ.

ದಕ್ಷನ ಮಕ್ಕಳಾದ ನಕ್ಷತ್ರಗಳನ್ನು ವಿವಾಹವಾದ ಚಂದಿರನಿಗೆ ರೋಹಿಣಿಯ ಮೇಲೆಯೇ ಹೆಚ್ಚು ಒಲವು, ನೊಂದ ತನ್ನ ಮಕ್ಕಳ ಅಳಲನ್ನು ಕಂಡ ದಕ್ಷನು ಚಂದ್ರನಿಗೆ ಶಾಪ ಕೊಡುತ್ತಾನೆ.  ಶಿವನು ಚಂದ್ರನನ್ನು ಶಾಪಮುಕ್ತಗೊಳಿಸಿ ಪುನರ್ಜನ್ಮ ನೀಡಿ ತನ್ನ ಶಿರದಲ್ಲಿಯೇ ಧರಿಸುತ್ತಾನೆ. ಅಂತಹ ಕರುಣಾಮಯಿ ಚಂದ್ರಶೇಖರನಿಗೆ ನನ್ನ ಮೇಲೇಕೆ ಛಲವೆಂಬ ಆತಂಕ ಹೊಂದಿದ್ದ ಪಾರ್ವತಿಯಾಗಿ ಪರಿಪಕ್ವ ಅಭಿನಯ ಕಲಾ ರಸಿಕರ ಮನಸೆಳೆಯಿತು. ಶಿವನು ಗಜಾಸುರನ ಒಡಲೊಳಗೆ ಸೇರಿ, ಶರೀರವನ್ನು ಛೇದಿಸಿ ಗಜಚರ್ಮಾಂಬರನಾದುದನ್ನೂ ನೆನೆಯುತ್ತಾಳೆ, ಆತ ನನ್ನ ಮನಸ್ಸನ್ನು ಒಲಿಸಿಕೊಂಡಿದ್ದಾನೆ. ನೃತ್ಯದಲ್ಲಿಯೂ ನನ್ನನ್ನು ಜಯಿಸಿದ್ದಾನೆ, ನನ್ನೊಂದಿಗೆ ಇನ್ನಾವ ಜಯದ ಅಪೇಕ್ಷೆ ಹೊಂದಿದ್ದಾನೆ ಎಂದು ಕಳವಳಗೊಳ್ಳುತ್ತಾಳೆ.

ಮನ್ಮಥನ ಬಾಣಕ್ಕೂ ಮಣಿಯಲ್ಲಿಲ್ಲ, ಶೃಂಗಾರಾದಿ ನವರಸಗಳ ನಾಯಕ, ನಾಟ್ಯಾಧಿಪತಿ ಸ್ವತಃ ಅವನು… ಮತ್ತಿನ್ನಾವ ರಂಜನೆ ಬೇಕು ಅವನನ್ನು ಒಲಿಸಲು ಎಂದು ವಿರಹೋತ್ಕಂಠಿತೆ ಮನದಲ್ಲಿಯೇ ಪರಿತಪಿಸುವ ನಾಯಕಿಯಾಗಿ ಕಲಾವಿದೆ ಮಾಲಿನಿ ಅವರು ಅತ್ಯಂತ ಸಮರ್ಥವಾಗಿ ನಿಭಾಯಿಸಿದರು.  ಆಭೇರಿ ರಾಗ, ಆದಿ ತಾಳದಲ್ಲಿದ್ದ ಈ ವರ್ಣದ ನೃತ್ಯ ಸಂಯೋಜನೆ ಗುರು ಶ್ರೀಮತಿ ಶಮಾ ಕೃಷ್ಣ ಅವರದ್ದಾಗಿತ್ತು, ಹಾಗೂ ಜತಿಗಳ ನೃತ್ಯ ಸಂಯೋಜನೆ ಪದ್ಮಭೂಷಣ ಗುರು ಡಾಕ್ಟರ್ ಪದ್ಮಾ ಸುಬ್ರಹ್ಮಣ್ಯಂ ಅವರು ಮಾಡಿದ್ದರು..    

ಕಾರ್ಯಕ್ರಮದ ಇನ್ನೊಂದು ಪ್ರಸ್ತುತಿ ಪ್ರಸಿದ್ಧ ಕೃತಿ ಶ್ರೀ ಮೈಸೂರು ವಸುದೇವಾಚಾರ್ಯರ ರಚನೆ ಬ್ರೊಚೆ ವಾರೆವರುರ. ಈ ಕೃತಿಯಲ್ಲಿ ಭಕ್ತೆಯು ಶ್ರೀರಾಮನನ್ನು ಸ್ತುತಿಸುತ್ತಾ ನೀನಲ್ಲದೆ ನನ್ನನ್ನು ಯಾರು ರಕ್ಷಿಸುತ್ತಾರೆ? ಶಿವಧನುಸ್ಸನ್ನು ಮುರಿದು ಸೀತೆಯನ್ನು ವರಿಸಿದ ರಘುವರ, ಗಜೇಂದ್ರನಿಗೆ ಮೋಕ್ಷ  ನೀಡಿದ ಕರುಣಾಮಯಿ, ವಾತಾತ್ಮಜ ಹನುಮನಿಂದ ಅರಾಧಿತನಾದ ರಾಮನೆ, ನನ್ನ ಅತಂಕಗಳನ್ನು ದೂರ ಮಾಡಿ ನನ್ನನ್ನು ರಕ್ಷಿಸು ಎಂದು ಬೇಡಿಕೊಳಂಡು ಕಲಾವಿದೆಯು ರಾಮನ ಭಕ್ತಿಯಲ್ಲಿ ತಲ್ಲೀನವಾಗಿ ಮಾಡಿದ ಅಭಿನಯವು ಸೊಗಸಾಗಿತ್ತು. ಇದು ಖಮಾಚ್ ರಾಗ ಆದಿ ತಾಳದಲ್ಲಿ ಸಂಯೋಜನೆಯಾಗಿತ್ತು.

ಕಲಾವಿದೆ ಮಾಲಿನಿ ಅಗ್ರಹಾರ್ ಅವರು  ಶ್ರೀ ಉತ್ತುಕಾಡು ವೆಂಕಟ ಸುಬ್ಬಯ್ಯರ್ ಅವರು ರಚಿಸಿರುವಂತಹ  ತಾಯೆ ಯಶೋದೆ ಪದಂ ಪ್ರದರ್ಶಿಸಿದರು. ತೋಡಿ ರಾಗ, ಆದಿ ತಾಳದಲ್ಲಿದ್ದ ಪದಂಗೆ ನೃತ್ಯ ಸಂಯೋಜನೆ ಮಾಡಿದವರು ಗುರು ಶ್ರೀಮತಿ ಬ್ರಘಾ ಬೆಸೆಲ್ ಅವರು.  ಗೋಪಿಕೆಯರು ಹೊತ್ತೊಯ್ಯುತ್ತಿದ್ದ ಹಾಲಿನ ಮಡಕೆ ಒಡೆಯುವುದು, ಕಟ್ಟಿ ಹಾಕಿದ್ದ ಹಸುಗಳನ್ನು ಬಿಚ್ಚಿ ಓಡಿಸುವುದು, ಗೋಪಿಯ ಗಂಡನ ಮೀಸೆಯೊಂದಿಗೆ ಆಕೆಯ ಜಡೆಯನ್ನು ಕಟ್ಟಿ ಹಾಕಿದ್ದು, ಶಾಲೆಯಲ್ಲಿ ಮಕ್ಕಳ ಜೊತೆ ಆಡುತ್ತಿದ್ದ ತುಂಟಾಟ, ಗೋಪಿಕೆಯರಿಗೆ ಹಾವು ತೋರಿಸಿ ಹೆದರಿಸುವುದು ಹೀಗೆ, ಕೃಷ್ಣನ, ಹಾಸ್ಯ ಭರಿತ ತುಂಟ ಲೀಲೆಗಳನ್ನು ಕಲಾವಿದೆಯು ನೈಪುಣ್ಯತೆಯಿಂದ, ಮನೋಜ್ಞವಾಗಿ ಪ್ರಸ್ತುತಪಡಿಸಿ ಗೋಪಿಕೆಯರು ಕೃಷ್ಣನಲೀಲೆಗಳ ವರದಿ ಒಪ್ಪಿಸುತ್ತಾ ಆಕೆಯ ಮಗನನ್ನು ಕಟ್ಟಿ ಹಾಕಲು ಹೇಳುವ ರಂಜನೀಯ ಸನ್ನಿವೇಶಗಳು ಹಾಗು ಪ್ರಭಾವಶಾಲಿ ಅಭಿನಯ ಪ್ರೇಕ್ಷಕರಿಗೆ ರಸಾನುಭವ ನೀಡಿತು.

ತಿಲ್ಲಾನ ಎಂದರೆ ಸಂಭ್ರಮ. ತಿಲ್ಲಾನದಲ್ಲಿ ವೇಗದ ಗತಿಯ ಲಯ ಸಂಯೋಜನೆಗಳು ಹಾಗು ವಿನ್ಯಾಸಗಳನ್ನು ಕಾಣುತ್ತೇವೆ. ಪಲ್ಲವಿ ,ಅನುಪಲ್ಲವಿ ಹಾಗು ಚರಣಗಳು ಶೊಲ್ಲುಕಟ್ಟುಗಳಲ್ಲಿ ವಿನ್ಯಾಸಗೊಂಡಿದ್ದು ಕೊನೆಯಲ್ಲಿ ವಾಗ್ಗೆಯಕಾರರು ತಮ್ಮ ಇಷ್ಟದೈವವೊಂದರ ಗುಣಗಾನ ಮಾಡಿರುತ್ತಾರೆ. ಡಾ. ಪದ್ಮಾ ಸುಬ್ರಹ್ಮಣ್ಯಂ ಅವರು  ನೃತ್ಯ ಸಂಯೋಜನೆಯನ್ನು ಮಾಡಿರವಂತಹ, ಪುದುಕೋಟೈ ವೈದ್ಯನಾಥ ಭಾಗವತರ್ ರಚಿಸಿರುವಂತಹ ಹಿಂದೋಳ ರಾಗ ಖಂಡ ಏಕತಾಳದಲ್ಲಿ ನಿಬದ್ಧವಾಗಿರುವ ತಿಲ್ಲಾನದೊಂದಿಗೆ ಕಲಾವಿದೆಯು ತಮ್ಮ ನೃತ್ಯ ಪ್ರಸ್ತುತಿಯನ್ನು ಮುಕ್ತಾಯಗೊಳಿಸಿದರು.  

ಕಾಂಚೀಪುರಂನ ಕಾಮಾಕ್ಷಿಯ ಕೃಪಾ ಕಟಾಕ್ಷವನ್ನು ಬೇಡುತ್ತಾ, ಆಕೆಯ ಕರುಣೆಯನ್ನು ಬಯಸುವಂತಹ ಸಾಹಿತ್ಯವನ್ನು ಹೊಂದಿರುವ ಈ ತಲ್ಲಾನವನ್ನು  ಜತಿಗಳ ಝೇಂಕಾರದೊಂದಿಗೆ ಚೈತನ್ಯದ ಚಿಲುಮೆಯಾಗಿ ಕಲಾವಿದೆಯು ವಿದ್ಯುಕ್ತವಾಗಿ ಮಂಗಳದೊಂದಿಗೆ ತಮ್ಮ ನೃತ್ಯ ಪ್ರಸ್ತುತಿಯನ್ನು ಸಂಪನ್ನಗೊಳಿಸಿದರು.

 ಸಂಗೀತ ವಿದ್ವಾಂಸರುಗಳಾದ ಶ್ರೀಮತಿ ದೀಪ್ತಿ ಶ್ರೀನಾಥ್ ಅವರು, ಶ್ರೀ ನರಸಿಂಹ ಮೂರ್ತಿ ಅವರು, ಹಾಗೂ ಶ್ರೀ ಕಾರ್ತಿಕ್ ವೈಧಾತ್ರಿ ಅವರು ಹಾಗೂ  ನೃತ್ಯ ಸಂಯೋಜನೆ ಮಾಡಿ ನಟುವಾಂಗವನ್ನು ನಿರ್ವಹಿಸಿ ಕಲಾವಿದೆಗೆ ಮಾರ್ಗದರ್ಶನ ನೀಡಿದ ಗುರು ಶ್ರೀಮತಿ ಶಮಾ ಕೃಷ್ಣ ಅವರು ರಸಾನುಭವದ  ನೃತ್ಯ ಸಂಜೆಯ ಯಶಸ್ಸಿನಲ್ಲಿ ಪಾಲುದಾರರು.  

‍ಲೇಖಕರು Admin

January 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: