‘ನಾನು-ನಮ್ಮಾಕಿ ಮತ್ತು ಇತರ ಬರಹಗಳು’

ಶ್ರೀ ಗಿರೀಶ್ ಕುಲಕರ್ಣಿಯವರು ಈಗಾಗಲೆ ಫೇಸ್ಬುಕ್ ನ ಹಲವು ವೇದಿಕೆಗಳಲ್ಲಿ ತಮ್ಮ ಬರಹಗಳ ಮೂಲಕ ಪರಿಚಿತರಾದವರು. ಧಾರವಾಡ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ “ಮನೆಮನೆಯಲ್ಲಿ” ಕಾರ್ಯಕ್ರಮದ ಸುಮಾರು 50 ಭಾಗಗಳಿಗೆ ಸಂವಾದ ಬರೆದವರು, ಆಕಾಶವಾಣಿ ನಾಟಕಗಳನ್ನು ರಚಿಸಿದವರು, ತಮ್ಮ ತಿಳಿ ಹಾಸ್ಯದ ಬರಹಗಳ ಮುಖೇನ ಓದುಗರನ್ನು ಆಕರ್ಷಿಸಿದವರು.

ಶ್ರೀಯುತರು ಬರೆದ ಪುಸ್ತಕ “ನಾನು-ನಮ್ಮಾಕಿ” ನಿಜಕ್ಕೂ ಒಂದು ವಿಶಿಷ್ಟವಾದ ಸಂಕಲನವೇ ಸರಿ. ಈ ಪುಸ್ತಕವು ಅವರ ಭೀಮರಥಿ ಶಾಂತಿಯ ಸಂದರ್ಭದಂದು ಬಿಡುಗಡೆಯಾಗಿದ್ದು, ಶೀರ್ಷಿಕೆಯೇ ಹೇಳುವಂತೆ ಶ್ರೀ ಗಿರೀಶ್ ಕುಲಕರ್ಣಿಯವರು ತಮ್ಮ ಮದುವೆಯ ಸಂದರ್ಭಗಳನ್ನು, ದಾಂಪತ್ಯ ಜೀವನದ ರಸ ನಿಮಿಷಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಓದುಗರನ್ನು ತಮ್ಮ ಕಾಲಕ್ಕೆ ಕರೆದೊಯ್ಯುತ್ತಾರೆ. ಅದರಲ್ಲೂ ಹುಡುಗಿ ನೋಡುವ ಶಾಸ್ತ್ರದಿಂದ ಮೊದಲ್ಗೊಂಡು ಮದುವೆಯಾಗುವ ವರೆಗಿನ ಭಾಗಗಳಂತೂ ಕಣ್ಮುಂದೆ ಸುಳಿವ ಚಿತ್ರದಂತೆ ಭಾಸವಾಗುತ್ತದೆ. ಆ ಕಾಲವನ್ನು ಬರಹ ಮುಖೇನ ಪುನಃ ನಿರ್ಮಿಸುವಲ್ಲಿ ಗಿರೀಶ್ ಅವರು ಸಫಲರಾಗಿದ್ದಾರೆ.

ಅದರಲ್ಲೂ ಅಪ್ಪಟ ಧಾರವಾಡ ಭಾಷೆಯ ಸೊಗಡಿನಲ್ಲಿ, ಅಲ್ಲಿನ ಜನಗಳ ಗುಣ, ಸ್ವಭಾವ, ರೀತಿ, ರಿವಾಜು ಇತ್ಯಾದಿ ಇತ್ಯಾದಿಗಳನ್ನು ರಸವತ್ತಾಗಿ ವರ್ಣಿಸುತ್ತಾ ಒಂದು ಸಿನಿಮೀಯ ದೃಶ್ಯ ರೂಪಕವನ್ನು ತೋರುವಲ್ಲಿ ಗಿರೀಶರ ಬರಹ ಗಮನ ಸೆಳೆಯುತ್ತದೆ. ಈ ಪುಸ್ತಕದಲ್ಲಿ ಕೇವಲ ಅವರ ಮದುವೆ ಸಂದರ್ಭದ ವಿವರಣಾ ಭಾಗಗಳಲ್ಲದೇ, ಅನೇಕ ಬಿಡಿ ಬರಹ, ಪ್ರಹಸನಗಳು, ಚಿಕ್ಕ ಪುಟ್ಟ ತಮಾಷೆಯ ಸಂದರ್ಭಗಳು, ಧಾರವಾಡ ಕನ್ನಡದಲ್ಲಿನ ಹರಟೆಗಳು ಎಲ್ಲವೂ ಅಡಕವಾಗಿವೆ. ಆದರೂ ಒಟ್ಟು ಹತ್ತು ಭಾಗದಲ್ಲಿರುವ “ನಾನು-ನಮ್ಮಾಕಿ” ಎಂಬ ಬರಹಗಳೇ ಈ ಪುಸ್ತಕದ ಪ್ರಮುಖ ಆಕರ್ಷಣೆ. ಯಾವುದೋ ಧಾರಾವಾಹಿ ಅಥವಾ ಸಿನಿಮಾ ನೋಡುವಂತಹ ಖುಷಿ ಕೊಡುತ್ತವೆ, ಈ ಬರಹಗಳು.
ಇನ್ನು ಪುಸ್ತಕದ ಅಂತಿಮ ಅಧ್ಯಾಯವಾಗಿ ಲೇಖಕರು ತಮ್ಮ ತಾಯಿಯ ಕುರಿತು ಬರೆದ “ಅನಸೂಯಾ” ಎಂಬ ಲೇಖನವು ನಿಜಕ್ಕೂ ಭಾವಾದ್ರಗೊಳಿಸಿ ನಮ್ಮ ತಾಯಿಯ ನೆನಪು ಚಿಮ್ಮುವಂತೆ ಮಾಡುತ್ತದೆ.

ಒಟ್ಟಾರೆಯಾಗಿ ಸುನಂದಾ ಬೆಳಗಾವಕರ್ ಅವರ ಬರಹಗಳನ್ನು ಮೆಚ್ಚಿ ಓದುತ್ತಿದ್ದ ನನಗೆ ಶ್ರೀ ಗಿರೀಶ್ ಕುಲಕರ್ಣಿಯವರ ಬರಹಗಳು ಅಷ್ಟೇ ಆಪ್ತವಾದದ್ದಂತೂ ಸುಳ್ಳಲ್ಲ. ಇನ್ನು ಇವರು ಬರೆದ ಹರಟೆಗಳಂತೂ ಒಂದಕ್ಕಿಂತ ಒಂದು ಸುಂದರ, ರಂಜನೀಯ. ನಾನು ಇತ್ತೀಚೆಗೆ ಸಾಂಸಾರಿಕ ಹರಟೆ ಬರೆಯಲು ಪ್ರಾರಂಭಿಸಿದ್ದೇನೆ, ಆದರೆ ಗಿರೀಶ್ ಅವರ ಹರಟೆಗಳನ್ನು ನೋಡಿದಾಗ ಅವರ ಬರಹಗಳ ಪ್ರೇರಣೆ ಖಂಡಿತ ಪಡೆಯಲೇ ಬೇಕೆಂಬ ಆಕಾಂಕ್ಷೆ ಮೂಡಿದೆ.

ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಆಸ್ವಾದಿಸಬಯಸುವವರಿಗೆ ಈ ಪುಸ್ತಕ ನಿರಾಶೆ ಮಾಡಲಾರದು; ಆ ಭರವಸೆ ನಾನು ಕೊಡುವೆ. (ಜಿಕೆ)

‍ಲೇಖಕರು Admin

October 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: