ನಾನು, ನನ್ನ ಅಣ್ಣ ಹಾಮಾನಾ..

1

ಪರಿಸರ ಮತ್ತು ಪರಂಪರೆ

ದಟ್ಟವಾದ ಕಾಡು. ಕಾಡಿನ ಮಧ್ಯೆ ಒಂಟಿ ಮನೆ. ಇನ್ನೊಂದು ಮನೆಯನ್ನು ಕಾಣಲು ಕಾಡಿನಲ್ಲಿ ಅದೆಷ್ಟೋ ದೂರ ಸಾಗಿ ಹೋಗಬೇಕು. ಆಸುಪಾಸಿನಲ್ಲಿ ಮನುಷ್ಯ ಜೀವಿಗಳು ವಿರಳವಾಗಿದ್ದರೂ ಹುಲಿ, ಚಿರತೆ, ಕಾಡೆಮ್ಮೆ ಅಥವಾ ಕೋಣ ಮುಂತಾದ ಪ್ರಾಣಿಗಳು ಮನೆಗೆ ಹತ್ತಿರದಲ್ಲೇ ಓಡಾಡುತ್ತಿದ್ದ ಕಾಲ. ಮಾನವರಿಗಿಂತ ಹೆಚ್ಚು ಆತ್ಮೀಯವೂ ಕಡಿಮೆ ಅಪಾಯಕಾರಿಯೂ ಆಗಿದ್ದ ಈ ಜೀವಿಗಳ ನಡುವೆ ಬಾಳುವುದು ಆ ದಿನಗಳಲ್ಲಿ ಬದುಕು ದುಸ್ತರ ಎನ್ನಿಸುತ್ತಿರಲಿಲ್ಲ. ಅಂತಹ ಒಂದು ನಿಸರ್ಗದ ಪರಿಸರದಲ್ಲಿ ಬದುಕಿದ ಜನ ನಾವು. ಅದು ಇಂದಿಗೆ ಸುಮಾರು ಮುಕ್ಕಾಲು ಶತಮಾನದ ಹಿಂದಿನ ಮಾತು.

ಅಂದಿನ ಆ ಪರಿಸರದ ಸೌಂದರ್ಯ ಮತ್ತು ರೌದ್ರಗಳು ಈಗ ಉಳಿದಿರುವುದು ಕುವೆಂಪು ಅವರ ಸಾಹಿತ್ಯದಲ್ಲಿ ಮಾತ್ರ.

ರಸ್ತೆ, ಆಸ್ಪತ್ರೆ, ಶಾಲೆ, ಅಂಗಡಿ ಮುಂತಾದ ಸೌಕರ್ಯಗಳಿಂದ ವಂಚಿತವಾಗಿದ್ದ ಬದುಕು. ವರ್ಷದಲ್ಲಿ ಐದಾರು ತಿಂಗಳು ಒಂದೇ ಸಮನೆ ಸುರಿಯುವ ಮಳೆ. ಎಲ್ಲ ಕಡೆ ನೀರಿನಿಂದ ಆವೃತವಾದ ದ್ವೀಪದಲ್ಲಿ ವಾಸಿಸುತ್ತಿದ್ದ ಅನುಭವ. ಹಾಗಾದರೂ ಆ ಬಗೆಯ ಬದುಕಿಗೆ ಅದರದೇ ಆದ ಆಕರ್ಷಣೆಗಳೂ ಉಲ್ಲಾಸಗಳೂ ಇದ್ದದ್ದು ಮಾತ್ರ ಸತ್ಯ. ಭೋರ್ಗರೆಯುವ ಮಳೆ, ಕಪ್ಪೆಗಳ ವಟಗುಟ್ಟುವಿಕೆ, ಮೈಕೊರೆಯುವ ಚಳಿಯಲ್ಲಿ ಕಂಬಳಿ ಹೊದ್ದು ಮಲಗುವುದು ಎಂತಹ ಅದ್ಭುತ ಅನುಭವ! ಮಳೆಗಾಲದಲ್ಲಿ ಯಥೇಚ್ಚವಾಗಿ ಸಿಗುತ್ತಿದ್ದ ಬಗೆ ಬಗೆಯ ಮೀನುಗಳು, ಅವುಗಳಿಂದ ತಯಾರಿಸುತ್ತಿದ್ದ ಭಕ್ಷ್ಯಗಳು ಯಾವ ಪಂಚತಾರಾ ಹೋಟೆಲುಗಳಲ್ಲಿ ಸಿಗಲು ಸಾಧ್ಯ?

ಮಳೆಗಾಲ ಇನ್ನೇನು ಮುಗಿಯಿತು ಎನ್ನುವಷ್ಟರಲ್ಲಿ ಹಬ್ಬಗಳ ಸಾಲು. ಗೌರಿ ಹಬ್ಬ, ನವರಾತ್ರಿ, ಭೂಮಿ ಹುಣ್ಣಿಮೆ, ದೀಪಾವಳಿ ಹೀಗೆ ಒಂದೊಂದಕ್ಕೂ ಅದರದೇ ಆದ ವೈಶಿಷ್ಟ್ಯ ಮತ್ತು ಆಕರ್ಷಣೆಗಳು. ದೀಪಾವಳಿಯ ಸಂಭ್ರಮವಂತೂ ಹೇಳತೀರದು. ಆಗ ನಡೆಯುತ್ತಿದ್ದ ಗೋಪೂಜೆ, ಕೃಷಿಯ ಸಲಕರಣೆಗಳನ್ನೆಲ್ಲ ಜೋಡಿಸಿ ನೆರವೇರಿಸುತ್ತಿದ್ದ ಬಲೀಂದ್ರನ ಪೂಜೆ, ರಾತ್ರಿ ಹೊತ್ತಿನಲ್ಲಿ ಮನೆಯಿಂದ ಮನೆಗೆ ಹಾಡಿಕೊಂಡು ಬರುತ್ತಿದ್ದ ‘ಅಂಟಿಗೆಪೆಂಟಿಗೆ’ ತಂಡಗಳು—ಅವೆಲ್ಲಾ ಎಂಥ ಮೋಜಿನ ಸಂಗತಿಗಳು. ಹಬ್ಬಗಳ ಆಸುಪಾಸಿನಲ್ಲಿ ನಡೆಯುತ್ತಿದ್ದ ಶಿಕಾರಿ, ಕೋಳಿ ಅಂಕ, ಹುಲಿ ವೇಷ ಕುಣಿತ, ಕೋಲಾಟಗಳು ಕೊಡುತ್ತಿದ್ದ ಮುದ ಅದನ್ನು ಅನುಭವಿಸಿದವರಿಗೆ ಮಾತ್ರವೇ ಗೊತ್ತು. ನಂತರದ ಚಳಿಗಾಲ. ಆ ಕಾಲಕ್ಕೆ ನಡೆಯುತ್ತಿದ್ದ ಅಡಿಕೆ ಕೊಯ್ಲು. ಅಡಿಕೆ ಸುಲಿಯುವವರಿಗಾಗಿ ಹಾಕುತ್ತಿದ್ದ ಅಗ್ಗಿಷ್ಟಗೆ. ಅದರ ಕಾವಿನಲ್ಲಿ ಬೆಚ್ಚಗೆ ಕುಳಿತು ಅಡಿಕೆ ಸುಲಿಯುವವರು ಹೇಳುತ್ತಿದ್ದ ರಾಕ್ಷಸರ ಕಥೆಗಳು, ಜನಪದ ಲಾವಣಿಗಳು, ಒಗಟುಗಳನ್ನು

ಕೇಳುವುದು ಇತ್ಯಾದಿ.   ಬೇಸಿಗೆ ಕಾಲದ್ದು ಇನ್ನೊಂದು ಬಗೆ. ನಿಸರ್ಗವೇ ಯಥೇಚ್ಚವಾಗಿ ಒದಗಿಸಿ ಕೊಡುತ್ತಿದ್ದ ಬಗೆ ಬಗೆಯ ಹಣ್ಣುಗಳು, ಬಿಳಿಮಾರಲು ಹಣ್ಣು, ಗೇರು ಹಣ್ಣು, ಪೇರಲ ಹಣ್ಣು, ಮಾವಿನ ಹಣ್ಣು, ಹಲಸಿನ ಹಣ್ಣು ಇತ್ಯಾದಿ. ಹಣ್ಣುಗಳ ಹುಡುಕಾಟದಲ್ಲಿ ಕಾಡು ಮೇಡುಗಳಲ್ಲಿ ಅಲೆದಾಟ. ಅನಾಯಾಸವಾಗಿ ಸಿಗುತ್ತಿದ್ದ ಜೇನು. ವರ್ಷಕ್ಕೊಮ್ಮೆ ನಡೆಯುತ್ತಿದ್ದ ದೇವರ ಹರಕೆ, ಎರಡು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಕವಲೇದುರ್ಗದ ಮಾರಿಜಾತ್ರೆ, ದೂರದ ತೀರ್ಥಹಳ್ಳಿಯ ಎಳ್ಳಮವಾಸ್ಯೆ ಜಾತ್ರೆ—ಇವೆಲ್ಲ ಸಡಗರದ ಸಾಮೂಹಿಕ ಸನ್ನಿವೇಶಗಳು.

ಒಟ್ಟಿನಲ್ಲಿ ಅದೊಂದು ಐಷಾರಾಮಿ ಅಲ್ಲದಿದ್ದರೂ ಶ್ರೀಮಂತ ಬದುಕು. ಅದರಲ್ಲಿ ವೈವಿಧ್ಯವಿತ್ತು, ಲವಲವಿಕೆ ಇತ್ತು, ಉಲ್ಲಾಸ ಮತ್ತು ಉತ್ಸಾಹಗಳು ಇದ್ದುವು. ಈ ಬಗೆಯ ಆತ್ಮೀಯ, ವೈವಿಧ್ಯಮಯ ಅನುಭವಗಳನ್ನು ಇಂದಿನ ಟೆಲಿವಿಷನ್ ಯುಗದ ಮಕ್ಕಳು ಕಲ್ಪಿಸಿಕೊಳ್ಳಲು ಅಸಾಧ್ಯ. ಆ ಬಗೆಯ ಪ್ರಾಕೃತಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನುಭವಿಸಿದವರು ನಾವು; ಎಂದರೆ ನಾನು, ನನ್ನ ಅಣ್ಣ ಹಾಮಾನಾ ಮತ್ತು ಇತರ ಸೋದರ, ಸೋದರಿಯರು.

ನಮ್ಮ ಪೂರ್ವಜರ ಬಗೆಗಿನ ವಿವರಗಳು ಚರಿತ್ರೆಯ ಮಸುಕಿನಲ್ಲಿ ಮುಚ್ಚಿಹೋಗಿವೆ. ನಮ್ಮ ಹಿರಿಯರು ಕೆಳದಿ ಮತ್ತು ಕವಲೇದುರ್ಗ ಸಂಸ್ಥಾನಗಳ ಆಡಳಿತ ಯಾ ಸೇನೆಯಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ನಿರ್ವಹಿಸುತ್ತಿದ್ದು, ‘ನಾಯಕ’ ಎಂಬ ಅಧಿಕಾರ ಸೂಚಕ ಬಿರುದನ್ನು ಪಡೆದುಕೊಂಡಿರಬಹುದೆಂಬ ಊಹೆ ಜನರಲ್ಲಿ ಪ್ರಚಲಿತವಾಗಿದೆ. ಅದರ ಸತ್ಯಾಸತ್ಯತೆಯ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಿರದ ಕಾರಣ, ಆ ವಿಚಾರ ಕುರಿತ ಚರ್ಚೆಯಾಗಲೀ, ತೀರ್ಮಾನವಾಗಲೀ ಇಲ್ಲಿ ಅಪ್ರಸ್ತುತ.

ನಾವು ಹಾರೋಗದ್ದೆಯವರು. ಹಾರೋಗದ್ದೆ ಎನ್ನುವುದು ಒಂದು ಊರಿನ ಹೆಸರು; ಅದು ನಮ್ಮ ಮನೆತನದ ಹೆಸರು ಕೂಡಾ ಹೌದು. ಹಾರೋಗದ್ದೆ ಮನೆಯವರು ಆ ಸುತ್ತಮುತ್ತಿನ ಪ್ರದೇಶಗಳಲ್ಲಿ ಸಾಕಷ್ಟು ಪ್ರಭಾವಶಾಲಿಗಳಾಗಿದ್ದು, ಊರಿನ ಆಗುಹೋಗುಗಳಲ್ಲಿ ಅವರ ಮಾರ್ಗದರ್ಶನ, ನಿರ್ದೇಶನ ಮತ್ತು ತೀರ್ಪುಗಳಿಗೆ ಸದಾ ಮನ್ನಣೆ ಇರುತ್ತಿದ್ದಿತು.(1) ಈ ಪ್ರಭಾವೀ ಮನೆತನಕ್ಕೆ ಸೇರಿದವರು ನಮ್ಮ ತಂದೆ ಹಾರೋಗದ್ದೆ ಶ್ರೀನಿವಾಸ ನಾಯಕರು. ಅವರು ಹುಟ್ಟಿದ್ದು 1900ರಲ್ಲಿ; ತಂದೆ ಸಿದ್ದಪ್ಪ ನಾಯಕರು ಸರ್ಕಾರಿ ಸೇವೆಯಲ್ಲಿದ್ದವರು. ಶ್ರೀನಿವಾಸ ನಾಯಕರು ಓದಿದ್ದು ಅಂದಿನ ಲೋಯರ್ ಸೆಕೆಂಡರಿ. ಆ ಕಾಲಕ್ಕೆ ಅದು ಒಳ್ಳೆಯ ವಿದ್ಯಾರ್ಹತೆ. ಅವರು ತಮ್ಮ ಮೂವತ್ತರ ವಯಸ್ಸಿನ ಸುಮಾರಿಗೆ ವ್ಯವಹಾರ ಮತ್ತು ರಾಜಕೀಯದಲ್ಲಿ ತೊಡಗಿಸಿಕೊಂಡು ಸಾಕಷ್ಟು ಖ್ಯಾತನಾಮರಾಗಿದ್ದರು.

ಹಳ್ಳಿಯಲ್ಲಿ ಹುಟ್ಟಿದ ಅವರು ತೀರ್ಥಹಳ್ಳಿ ಪೇಟೆ ಸೇರಿದರು. ರೈತ ಕುಟುಂಬದವರು ವ್ಯಾಪಾರದಲ್ಲಿ ತೊಡಗಿಸಿಕೊಳ್ಳದ ಕಾಲದಲ್ಲಿ ಅವರು ಪಟ್ಟಣದಲ್ಲಿ ದಿನಸಿ ಅಂಗಡಿ ತೆರೆದು ದಾಖಲೆ ಮಾಡಿದರು. 1927ರಲ್ಲಿ ಗಾಂಧೀಜಿ ತೀರ್ಥಹಳ್ಳಿಗೆ ಬಂದ ಸಮಯದಲ್ಲಿ, ಇವರು ಅಲ್ಲಿನ ಪುರಸಭೆಯ ಉಪಾಧ್ಯಕ್ಷರಾಗಿದ್ದು, ಮಹಾತ್ಮರಿಗೆ ಬಿನ್ನವತ್ತಳೆ ಅರ್ಪಿಸಿದ್ದರು. ಅದು ಅವರ ಬದುಕಿನ ಅವಿಸ್ಮರಣೀಯ ಘಟನೆ ಎಂಬುದಾಗಿ ತಮ್ಮ ಜೀವನದುದ್ದಕ್ಕೂ ಅವರು ನೆನಪಿಸಿಕೊಳ್ಳುತ್ತಿದ್ದರು. (2) ಆ ನಂತರದಲ್ಲಿ ಅವರು ಅಂದಿನ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಚುನಾಯಿತರಾಗಿ ಜನೋಪಯೋಗಿ ಕೆಲಸಗಳಲ್ಲಿ ಕೆಲಕಾಲ ತೊಡಗಿಸಿಕೊಂಡಿದ್ದರು. ಕೊನೆಯಲ್ಲಿ ಅಡಿಕೆ ವ್ಯಾಪಾರಕ್ಕೆ ಕೈಹಾಕಿ ಭರಿಸಲಾರದ ನಷ್ಟಗಳನ್ನು ಅನುಭವಿಸಿ ಹಳ್ಳಿ ಸೇರಿದರು. ಮುಂದಿನದೆಲ್ಲ ಮಕ್ಕಳ ವಿದ್ಯಾಭ್ಯಾಸ ಮತ್ತು ಶ್ರೇಯಸ್ಸಿಗಾಗಿ ನಡೆಸಿದ ಅವಿರತ ದುಡಿಮೆ, ಹೋರಾಟ.

ಹಳ್ಳಿ ಸೇರಿದ ಶ್ರೀನಿವಾಸ ನಾಯಕರು ತಮ್ಮ ಪೂರ್ವಜರ ಮನೆ ಹಾರೋಗದ್ದೆಗೆ ಸಮೀಪದಲ್ಲಿ ಹೊಸದೊಂದು ಮನೆ ಕಟ್ಟಿ ಅಲ್ಲಿ ವಾಸಿಸತೊಡಗಿದರು. ಅದೇ ಹಾರೋಗದ್ದೆ ‘ಹೊಸಮನೆ.’ 1984ರಲ್ಲಿ ಅವರು ತೀರಿಕೊಳ್ಳುವವರೆಗೂ ಅದೇ ಮನೆಯಲ್ಲಿ ವಾಸವಾಗಿದ್ದು, ಅಲ್ಲಿಯೇ ತಮ್ಮ ಬದುಕಿನ ಕಷ್ಟಕೋಟಲೆಗಳನ್ನು ಅನುಭವಿಸಿದರು.

ಅವರೊಬ್ಬ ಸಾತ್ವಿಕರು. ಭಗವದ್ಗೀತೆಯನ್ನು ಓದಿಕೊಂಡವರು. ನೂರಕ್ಕೆ ನೂರರಷ್ಟು ಭಗವದ್ಗೀತೆಯಲ್ಲಿನ ಸಂದೇಶ, ಮೌಲ್ಯಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಅವರಿಗೆ ಸಾಧ್ಯವಾಗದೇ ಇದ್ದಿರಬಹುದು. ಆದರೆ ಗೀತೆಯ ಪ್ರಭಾವ ಅವರ ಮೇಲಾದದ್ದಂತೂ ನಿಶ್ಚಿತ. ಕಟಪಾಡಿ ಗೋಪಾಲಕೃಷ್ಣ ಕಾಮತ್, ಡಾ. ಚಾರ್ಲ್ಸ್ ಡಿಸೋಜಾ, ವೈ. ವಾಸಪ್ಪ. ಎ. ಆರ್. ಬದರೀನಾರಾಯಣ ಮೊದಲಾದವರು ಅವರಿಗೆ ಆತ್ಮೀಯರು ಹಾಗೂ ಸ್ನೇಹಿತರು. ಅವರ ಈ ಆಪ್ತವಲಯವೇ ಅವರ ಜಾತ್ಯತೀತ ಮನೋಭಾವಕ್ಕೆ ಸಾಕ್ಷಿ. ಅವರ ಈ ಜಾತ್ಯತೀತ ನಿಲುವು ಅವರ ಮಕ್ಕಳಾದ ನಮ್ಮ ಮೇಲೆ ಯಾವ ಬಗೆಯ ಪ್ರಭಾವ ಬೀರಿತ್ತೆಂದರೆ, ನಾವು ಊರು ಬಿಟ್ಟು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮೈಸೂರು ಸೇರುವವರೆಗೂ ನಮಗೆ ಜಾತಿ, ಮತಗಳ ಬಗೆಗೆ ಕಲ್ಪನೆಯೇ ಇರಲಿಲ್ಲ.

ಅವರ ಇನ್ನೊಂದು ಗೀಳು ವಿದ್ಯಾಭ್ಯಾಸ. ‘ಯಾರೋ ನಿಮ್ಮ ಆಸ್ತಿಯನ್ನು ಕಸಿದುಕೊಳ್ಳಬಹುದು ಅಥವಾ ನೀವೇ ಕಳೆದುಕೊಳ್ಳಬಹುದು. ಆದರೆ ನೀವು ಕಲಿತ ವಿದ್ಯೆಯನ್ನು ಯಾರೂ ಕಿತ್ತುಕೊಳ್ಳಲಾರರು’ ಎನ್ನುವುದು ಅವರ ಮನೋಧರ್ಮ. ಸಹಜವಾಗಿಯೇ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಟ್ಟರು. ಊರಿನಲ್ಲಿ ಶಾಲೆ ಇಲ್ಲದ ಕಾರಣ ಮನೆಯಲ್ಲೇ ಮಕ್ಕಳಿಗೆ ಪಾಠ ಹೇಳಿಸಿದರು. ಅವರ ಎಂಟು ಜನ ಮಕ್ಕಳಲ್ಲಿ ಐದು ಜನರನ್ನು ಪದವೀಧರರನ್ನಾಗಿಸಿದರು. ಇಬ್ಬರು ಮಕ್ಕಳು ಹೆಚ್ಚಿನ ವ್ಯಾಸಂಗಕ್ಕೆ ಅಮೆರಿಕಾಕ್ಕೆ ಹೋಗಿ ಅಲ್ಲಿನ ವಿಶ್ವವಿದ್ಯಾಲಯಗಳಿಂದ ಪಿಎಚ್. ಡಿ. ಪದವಿ ಪಡೆದು ಬಂದಾಗ ಸಂತೋಷ ಹಾಗೂ ಹೆಮ್ಮೆ ಪಟ್ಟುಕೊಂಡರು.

ತಾಯಿ ರುಕ್ಮಿಣಿಯಮ್ಮ ಕೊಳಿಗೆ ಮನೆತನಕ್ಕೆ ಸೇರಿದವರು. ಅವರು ಹುಟ್ಟಿದ್ದು ಆಗಷ್ಟ್ 25, 1914. ಸರಿಯಾಗಿ ಒಂದು ಶತಮಾನದ ಹಿಂದೆ. ಅವರ ತಂದೆ ನಾಲೂರು ದೇವಪ್ಪ ಗೌಡರು ಸಹ ಜಮೀನುದಾರರು. ಜೊತೆಗೆ ಜವಳಿ ವ್ಯಾಪಾರವನ್ನು ಮಾಡುತ್ತಿದ್ದರು. ಅವರು ಕೂಡಾ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ನಮ್ಮ ತಾಯಿ ಚಿಕ್ಕವರಿದ್ದಾಗಲೇ ಅವರ ತಾಯಿಯನ್ನು ಕಳೆದುಕೊಂಡರು. ಹಾಗಾಗಿ ಅವರಿಗೆ ತಮ್ಮ ತಾಯಿಯ ತವರು ಹೆಚ್ಚು ಆತ್ಮೀಯವಾಯಿತು. ಅವರ ಅಜ್ಜ (ತಾಯಿಯ ತಂದೆ) ಮಳವಾಡಿ ಗಿರಿಯಪ್ಪ ಗೌಡರು ಒಕ್ಕಲಿಗ ಜನಾಂಗದ ಮುಂದಾಳುಗಳಾಗಿದ್ದು, ಕ್ರಿಶ್ಚಿಯನ್ ಮಿಷಿನೆರಿಗಳ ಜೊತೆಯಲ್ಲಿ ಸಂಪರ್ಕ ಪಡೆದು, ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಗಿರಿಯಪ್ಪ ಗೌಡರ ಮಕ್ಕಳಾದ ನಾಲೂರು ಶಂಕರಪ್ಪ ಗೌಡರು ಮತ್ತು ಚಿನ್ನಪ್ಪ ಗೌಡರು (ತಾಯಿಯ ಸೋದರಮಾವಂದಿರು) ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರಗಳಲ್ಲಿ ಆಸಕ್ತರಾಗಿದ್ದು, ಪ್ರಗತಿಪರ ದೃಷ್ಟಿ ಹೊಂದಿದವರಾಗಿದ್ದರು.

ನಮ್ಮ ತಾಯಿಗೆ ತಮ್ಮ ತವರಿಗಿಂತ ಈ ಸೋದರ ಮಾವಂದಿರೇ ಹೆಚ್ಚು ಆಪ್ತರಾದರು. ಈ ಕಾರಣದಿಂದಾಗಿ, ಇವರ ಮನೆಗೆ ಬಂದುಹೋಗುತ್ತಿದ್ದ ಮಾಸ್ತಿಯವರಂಥ ಹಿರಿಯ ಸಾಹಿತಿಗಳ ಸಂಪರ್ಕ ತಾಯಿಯ ಜೊತೆಯಲ್ಲಿ ಅಲ್ಲಿಗೆ ಹೋಗುತ್ತಿದ್ದ ಬಾಲಕ ಮಾನಪ್ಪನಿಗೆ ಲಭಿಸುವುದು ಸಾಧ್ಯವಾಯಿತು. ಜೊತೆಗೆ ಅವರ ಪ್ರಭಾವಕ್ಕೆ ಒಳಗಾಗುವ ಅವಕಾಶಗಳು ದೊರಕಿಬಂದವು. ನಮ್ಮ ತಾಯಿ ಓದಿದ್ದು ಕಡಿಮೆಯೇ, ಅಂದಿನ ಪ್ರಾಥಮಿಕ ಶಿಕ್ಷಣ. ಆದರೂ ಅವರು ಸಹ ವಿದ್ಯಾಪಕ್ಷಪಾತಿಗಳಾಗಿದ್ದರು. ಅವರು ಬರೆಯುತ್ತಿದ್ದ ಪತ್ರಗಳು ಎಷ್ಟು ಅಚ್ಚುಕಟ್ಟಾಗಿದ್ದವೆಂದರೆ, ಮುಂದೆ ಹಾ. ಮಾ. ನಾಯಕರ ಪತ್ರಗಳಿಗೆ ಅವೇ ಮಾದರಿಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ತಂದೆ ತಾಯಿ ಇಬ್ಬರೂ ಸಾಹಿತ್ಯಾಸಕ್ತರು. ತಂದೆಯವರು ಪುಸ್ತಕಗಳನ್ನು ಕೊಂಡು ಅಥವಾ ಸ್ನೇಹಿತರಿಂದ ಪಡೆದುಕೊಂಡು ಓದುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದರು. ಕುವೆಂಪು, ಕಾರಂತ, ಗೊರೂರಂತಹವರ ಪುಸ್ತಕಗಳು ಅವರಿಗೆ ಹೆಚ್ಚು ಪ್ರಿಯವಾಗಿದ್ದವು. ಅವರು ತೀರ್ಥಹಳ್ಳಿಯ ಶಾಲೆಯಲ್ಲಿ ಕುವೆಂಪು ಅವರ ಸಹಪಾಠಿಗಳಾಗಿದ್ದರು ಎನ್ನುವ ಅಂಶ ಇಲ್ಲಿ ಉಲ್ಲೇಖಾರ್ಹ (3). ನಮ್ಮ ತಾಯಿಯಂತೂ ಅದ್ಭುತ ಓದುಗಾರರು. ಅನಕೃ, ತರಾಸು, ಕಟ್ಟೀಮನಿಯವರ ಕಾದಂಬರಿಗಳಲ್ಲಿ ಅವರ ಆಸಕ್ತಿ ಇಂದಿನ ಮಹಿಳೆಯರು ಟೀವಿ ಸೀರಿಯಲ್‍ಗಳಲ್ಲಿ ತೋರುವ ಆಸಕ್ತಿಗೂ ಮಿಗಿಲಾಗಿತ್ತು ಎಂದರೆ ಅದು ಅತಿಶಯೋಕ್ತಿಯ ಮಾತಲ್ಲ. ಭೈರಪ್ಪನವರ ಕಾದಂಬರಿಗಳು ಕನ್ನಡ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಬರುತ್ತಿದ್ದ ಕಾಲದಲ್ಲಿ ಆ ಪತ್ರಿಕೆಗಳನ್ನು ಹೊತ್ತು ತರುತ್ತಿದ್ದ ಬಸ್ಸಿಗಾಗಿ ಅವರು ಕಾಯ್ದು ಕುಳಿತುಕೊಳ್ಳುತ್ತಿದ್ದರು.

ಈ ತಂದೆ ತಾಯಿಯರ ಸಾಹಿತ್ಯದ ಒಲವು ಹಾ.ಮಾ.ನಾಯಕರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದು ಸತ್ಯ. ಈ ಮಾತನ್ನು ಹಾ.ಮಾ.ನಾ ಅವರೇ ಒಪ್ಪಿಕೊಳ್ಳುತ್ತಾರೆ; ತಾಯಿಯವರ ಓದಿನ ಹವ್ಯಾಸ ಕುರಿತು ಹೇಳುತ್ತಾ, “ಇದೆಲ್ಲದರಿಂದ ನನ್ನಲ್ಲಿ ಒಳ್ಳೆಯ ಸಾಹಿತ್ಯಾಭಿರುಚಿ ಬೆಳೆಯಿತು. ಅದೇ ನನ್ನ ಆಸ್ತಿ ಆಗಿ ಉಳಿದಿದೆ” (4) ಎಂದು ಸ್ಮರಿಸುತ್ತಾರೆ.

ನಮ್ಮ ತಾಯಿತಂದೆಯರಿಗೆ ನಾವು ಎಂಟು ಜನ ಮಕ್ಕಳು. ಹಾ.ಮಾ.ನಾ (ಮಾನಪ್ಪ) ಮೊದಲ ಮಗ. ನಾನು ಮೂರನೆಯವನು. ನಮ್ಮಿಬ್ಬರ ನಡುವಿನ ರಾಮದಾಸ ಎರಡನೆಯವನು. ನಮ್ಮ ನಂತರದಲ್ಲಿ ಮೂವರು ಹೆಣ್ಣು ಮಕ್ಕಳು. ಇಂದ್ರಮ್ಮ, ಜಯಮ್ಮ, ಶ್ರೀದೇವಿ. ಅವರ ನಂತರದಲ್ಲಿ ಹುಟ್ಟಿದವರು ಗೋಪಾಲ ಮತ್ತು ಸರೋಜ. ಇವರುಗಳನ್ನು ಕುರಿತು ಒಂದೆರಡು ಮಾತುಗಳನ್ನು ಹೇಳುವುದು ಅಪ್ರಸ್ತುತ ಆಗಲಾರದು.

ರಾಮದಾಸ ನಾಯಕರು ಮೊದಲಿನಿಂದಲೂ ಮನೆ, ಜಮೀನು ನೋಡಿಕೊಳ್ಳಲೆಂದೇ ‘ನಾಮಿನೀ’ ಆದ್ದವರು. ಹೇಗಿದ್ದರೂ ಹಳ್ಳಿ ಸೇರುವ ನನಗೆ ಹೆಚ್ಚಿನ ಓದೇಕೆ ಎಂಬ ಮನೋಭಾವ ತಳೆದ ಅವರು, ವಿದ್ಯಾಭ್ಯಾಸವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದೆ, ಹೈಸ್ಕೂಲ್ ಮುಗಿಸುವಷ್ಟರಲ್ಲೇ ಊರು ಸೇರಿಕೊಂಡರು. ಬೇಜವಾಬ್ದಾರಿ ಮನುಷ್ಯ ಎನ್ನುವ ಆಪಾದನೆಗೆ ಗುರಿಯಾದರೂ ಸಹ, ಅವರೊಬ್ಬ ಕ್ರಿಯಾಶೀಲ ಮತ್ತು ಪರೋಪಕಾರಿ. ಕೃಷಿ, ವ್ಯಾಪಾರ, ವ್ಯವಹಾರ ಎಲ್ಲವನ್ನೂ ಮಾಡಿದರು. ಯಾವುದೂ ಕೈ ಹತ್ತಲಿಲ್ಲ. ಒಂದು ಅವಧಿಗೆ ತೀರ್ಥಹಳ್ಳಿಯ ತಾಲ್ಲೂಕು ಪಂಚಾಯತಿಯ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು, ನಂತರದಲ್ಲಿ ರಾಜಕೀಯದಿಂದ ದೂರವೇ ಉಳಿದರು. ಎಂತಹ ಸಂದರ್ಭವನ್ನೂ ನಿಭಾಯಿಸಬಲ್ಲ ರಾಮದಾಸ ನಾಯಕರು ಊರಿನ ಜನರಿಗೆ ‘ಆಪದ್ಭಾಂದವರು’ ಎಂದರೆ ಅತಿಶಯೋಕ್ತಿಯ ಮಾತಲ್ಲ.

ಗೋಪಾಲನ ವಿಚಾರವೇ ಬೇರೆ. ಅವನು ಪದವೀಧರನಾಗಿದ್ದು, ಉನ್ನತ ವ್ಯಾಸಂಗದಲ್ಲಿ ಆಸಕ್ತಿ ಹೊಂದಿದ್ದರೂ, ಮನೆಯ ಜವಾಬ್ದಾರಿ ಅವನ ಹೆಗಲಿಗೆ ಬಂದದ್ದರಿಂದ ಅದನ್ನು ಒಪ್ಪಿಕೊಂಡು ಸಮರ್ಥನಾಗಿ ನಿಭಾಯಿಸಿದ. ಸಾಹಿತ್ಯ ಮತ್ತು ನಾಟಕಗಳಲ್ಲಿ ಸಾಕಷ್ಟು ಪರಿಶ್ರಮ ಹೊಂದಿರುವ ಅವನು, ಕೃಷಿಯಲ್ಲಿ ತೊಡಗಿಸಿಕೊಂಡು ಸಫಲನಾಗಿದ್ದಾನೆ. ಗ್ರಾಮಪಂಚಾಯಿತಿಯ ಅಧ್ಯಕ್ಷನಾಗಿ ಊರಿಗೆ ಒಳ್ಳೆಯ ಕೆಲಸ ಮಾಡಿದ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಗೋಪಾಲ, ಊರಿನ ಜನರ ಬಾಯಲ್ಲಿ ಗೋಪಾಲ ನಾಯಕರು. ಅವರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ತಂಗಿಯರೆಲ್ಲ ಅವರವರ ಸಂಸಾರವನ್ನು ಒಪ್ಪವಾಗಿಸುವಲ್ಲಿ ಪರಿಶ್ರಮ ವಹಿಸಿ, ಬದುಕಿನ ಸೋಲು-ಗೆಲುವುಗಳ ನಡುವೆ, ನೆಮ್ಮದಿಯ ಬದುಕನ್ನು ಬದುಕುತ್ತಿದ್ದಾರೆ. ಬದುಕು ಯಾವತ್ತೂ ಮತ್ತು ಎಲ್ಲರಿಗೂ ಒಂದು ಬಗೆಯ ಹೋರಾಟವೇ. ಈ ಹೋರಾಟದಲ್ಲಿ ಸಫಲತೆಯನ್ನು ಸಾಧಿಸುತ್ತಾ ಬಂದಿದ್ದು, ಬದುಕಿನ ಶರತ್ಕಾಲದಲ್ಲಿ ಇಂದಿನ ಬದಲಾದ ಪ್ರಪಂಚದ ಆಗುಹೋಗುಗಳನ್ನು ವಿಸ್ಮಯದಿಂದ ಗಮನಿಸುತ್ತಾ, “ಏನೆಲ್ಲ ಕಂಡೆವಪ್ಪಾ!” ಎಂದು ತೃಪ್ತಿಪಡುತ್ತಿದ್ದಾರೆ.

। ಇನ್ನುಳಿದದ್ದು ನಾಳೆಗೆ.. ।

 

ಅಡಿ ಟಿಪ್ಪಣಿಗಳು

1.ಇತ್ತೀಚಿನ ವಂಶಾವಳಿ ಪಟ್ಟಿಗೆ, ನೋಡಿ:  ಜೆ. ಕೆ. ರಮೇಶ. ಭಾರತೀಯ ಸಾಹಿತ್ಯ ನಿರ್ಮಾಪಕರು: ಹಾ. ಮಾ. ನಾಯಕ. ಸಾಹಿತ್ಯ ಅಕಾದೆಮಿ, ನವದೆಹಲಿ, 2010

2.ನೋಡಿ: ಹಾರೋಗದ್ದೆ ಶ್ರೀನಿವಾಸ ನಾಯಕ. ನಾನು ಗಾಂಧೀಜಿಯವರನ್ನು ನೋಡಿದ್ದೆ. ಹಾ. ಮಾ. ನಾಯಕ (ಸಂ.) ಅಪ್ಪಯ್ಯ. 1984

3.ನೋಡಿ: ಕುವೆಂಪು. ನಿತ್ಯ ಮತ್ತು ಅಮೃತ. ಹಾ. ಮಾ. ನಾಯಕ (ಸಂ.) ಅಪ್ಪಯ್ಯ. 1984.

4.ಹಾ.ಮಾ.ನಾ: ತಾಯಿ ನೆನಪು. ಹಾ.ಮಾ.ನಾ: ಸಾರಸ್ವತ. ಗೀತಾ ಬುಕ್ ಹೌಸ್, ಮೈಸೂರು. 2003. ಪುಟ 282

‍ಲೇಖಕರು avadhi

September 15, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: