ಹಾಮಾನಾ ‘ಹುಟ್ಟಿನಿಂದಲೇ ನಾಯಕರು’

6

ವ್ಯಕ್ತಿತ್ವ

ಹಾಮಾನಾ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಕುರಿತು ಅನೇಕರು ಬರೆದಿದ್ದಾರೆ. ಅವನ ಸ್ನೇಹಿತರೂ, ಖ್ಯಾತ ಕಾದಂಬರಿಕಾರರೂ ಆದ ಎಸ್.ಎಲ್. ಭೈರಪ್ಪ ಅವನನ್ನು “ಲಿವಿಂಗ್ ಲೆಜೆಂಡ್” ಎಂದಿದ್ದಾರೆ. ಹಾಮಾನಾ “ಹುಟ್ಟಿನಿಂದಲೇ ನಾಯಕರು” ಎಂದು ಅವನ ಗುರುಗಳೂ, ಸಹೋದ್ಯೋಗಿಯೂ ಆಗಿದ್ದ ಪ್ರೊ ದೇ. ಜವರೇಗೌಡರು ಅಭಿಪ್ರಾಯಪಡುತ್ತಾರೆ. “ನನ್ನ ಶಿಷ್ಯ ಸೂರ್ಯನಿದ್ದ ಹಾಗೆ” ಎಂದು ಇನ್ನೊಬ್ಬ ಗುರುಗಳಾಗಿದ್ದ  ಪ್ರೊ ತ. ಸು. ಶಾಮರಾಯರು ಕೊಂಡಾಡುತ್ತಾರೆ.  ಮತ್ತೊಬ್ಬ ಗುರು ಪ್ರೊ ಎಸ್. ವಿ. ಪರಮೇಶ್ವರ ಭಟ್ಟರ ದೃಷ್ಟಿಯಲ್ಲಿ ಹಾಮಾನಾ “ಭರವಸೆಯ ಕೈಗಂಭ”ವಾಗಿ ಕಾಣುತ್ತಾನೆ. ಸಾಹಿತ್ಯ ಲೋಕದ ದಿಗ್ಗಜರು ಹಾಮಾನಾ ಕೊಟ್ಟ ಬಿರುದುಗಳ ಪಟ್ಟ ದೊಡ್ಡದು: “ದೊಡ್ಡ ಮನುಷ್ಯರು”

(ಟಿ. ವಿ. ವೆಂಕಟಾಚಲ ಶಾಸ್ತ್ರಿ), “ಎತ್ತರದಲ್ಲಿ ಎತ್ತರದವರು” (ಕೆ. ಎಸ್. ದೇಶಪಾಂಡೆ), “ತಾರಾ ಮೌಲ್ಯದ ಸಾಹಿತಿ” (ಪಿ. ಎಸ್. ರಾಮಾನುಜಂ), “ಅಪ್ಪಟ ಹೃದಯ ಶ್ರೀಮಂತ” (ಪ್ರೇಮಾ ಭಟ್), “ಕೃತಜ್ಞ” (ಎಂ. ಎಂ. ಕಲಬುರ್ಗಿ), “ವಿದ್ಯೆ ವಿನಯಗಳ ಪ್ರತೀಕ” (ವ್ಯಾಸರಾಯ ಬಲ್ಲಾಳ), “ನಾಡದೀಪ” (ತಾಳ್ತಜೆ ವಸಂತಕುಮಾರ), “ಕನ್ನಡದ ದೀಪ” (ಬಿ.ವಿ. ಕೆದಿಲಾಯ), “ಕನ್ನಡದ ಮಹಾನಾಯಕರು” (ಮಂದಾಕಿನಿ ಪುರೋಹಿತ) “ಘನತೆ ಗೌರವಗಳ ಪ್ರತೀಕ” (ಜೆ. ಕೆ. ರಮೇಶ) “ಸಮುದ್ರ ಸದೃಶ ವ್ಯಕ್ತಿ” (ವೀಣಾ ಶಾಂತೇಶ್ವರ), “ಕನ್ನಡ ಪುತ್ರ ರತ್ನ” (ಆರ್. ಸಿ. ಹಿರೇಮಠ), “ಕನ್ನಡದ ನಾಯಕ ರತ್ನ” (ವಸಂತ ಕುಷ್ಟಗಿ), “ಕನ್ನಡದ ರಕ್ಷಾಮಣಿ (ಜಿ. ವೆಂಕಟಸುಬ್ಬಯ್ಯ) “ಕನ್ನಡದ ಮಿಶನರಿ” (ಎಂ.ಬಿ. ನೇಗಿನಾಳ)–ಹುಡುಕುತ್ತಾ ಹೋದರೆ ಈ ಪಟ್ಟಿ ಹೀಗೆ ಬೆಳೆಯುತ್ತಲೇ ಹೋಗುತ್ತದೆ.  ಡಾ. ಸಿಪಿಕೆ ಹಾಮಾನಾ ಅವರಲ್ಲಿ “ಹಣತೆಯ ಗುಣ”ವನ್ನು ಗುರುತಿಸುತ್ತಾರೆ; ಡಾ. ರಾಗೌ ಹಾಮಾನಾ ಅವರನ್ನು “ಒಂದು ಮಾದರಿ ಒಂದು ಆದರ್ಶ”ವಾಗಿ ಪರಿಗಣಿಸುತ್ತಾರೆ. “ನೆನೆಯಬೇಕಾದವರು ತಂಪು ಹೊತ್ತಿನಲ್ಲಿ” ಎಂದು ಡಾ. ವಿಜಯಾ ದಬ್ಬೆಯವರು ಹೇಳಿದರೆ, “ತಂಪು ಹೊತ್ತಿನಲ್ಲಿ ನೆನೆಯಬೇಕು” ಎಂದು ಡಾ. ವೈ. ಸಿ. ಭಾನುಮತಿ ಅಭಿಪ್ರಾಯಪಡುತ್ತಾರೆ. (1)

 

ಹಾಮಾನಾ ಕುರಿತ ಮೇಲಿನ ನುಡಿಗಟ್ಟುಗಳು ಮತ್ತು ಅಭಿಪ್ರಾಯಗಳು ಅವನ ಬಹುಮುಖ ಪ್ರತಿಭೆ ಮತ್ತು ವ್ಯಕ್ತಿತ್ವವನ್ನೂ, ಕನ್ನಡದ ಬಗೆಗಿನ ಅವನ ಬದ್ಧತೆಯನ್ನೂ ಸೂಚಿಸುತ್ತವೆ. ಈ ಎಲ್ಲ ವಿವರಣೆಗಳನ್ನು ಒಟ್ಟಾರೆ ಪರಿಗಣಿಸಿದರೆ, ಹಾಮಾನಾ ವ್ಯಕ್ತಿತ್ವದ ಒಂದು ಸಮಗ್ರ ಚಿತ್ರಣ ಹೊರಹೊಮ್ಮುತ್ತದೆ. ಮುಂದಾಳತ್ವ, ದಕ್ಷತೆ, ನ್ಯಾಯನಿಷ್ಠೆ, ಅಂತಃಕರಣ, ಇತರರ ಕಷ್ಟಗಳಿಗೆ ಸ್ಪಂದಿಸುವುದು, ಕನ್ನಡ ಪ್ರೀತಿ ಇವು ಹಾಮಾನಾ ವ್ಯಕ್ತಿ ವೈಶಿಷ್ಟ್ಯಗಳು. ಇವುಗಳನ್ನು ನಾನು ಇಲ್ಲಿ ವಿಸ್ತರಿಸುವುದಿಲ್ಲ. ನಾನು ಕಂಡಂತೆ ಹಾಮಾನಾ ಯಾವ ಬಗೆಯ ವ್ಯಕ್ತಿಯಾಗಿದ್ದ ಎಂದು ವಿಶ್ಲೇಷಿಸುವುದಷ್ಟೇ ನನ್ನ ಇಲ್ಲಿನ ಉದ್ದೇಶ. ಹಾಮಾನಾ ನನ್ನ ಅಣ್ಣ ಆಗಿದ್ದ ಎನ್ನುವ ಕಾರಣಕ್ಕೆ ನನ್ನ ವಿಶ್ಲೇಷಣೆಯಲ್ಲಿ ಉದಾರತೆ ಅಥವಾ ವಸ್ತುನಿಷ್ಠತೆಯ ಕೊರತೆಯನ್ನು ಯಾರಾದರೂ ಗ್ರಹಿಸಿದರೆ, ಆ ವಿಚಾರದಲ್ಲಿ ನನ್ನ ಯಾವುದೇ ತಕರಾರು ಇಲ್ಲ.

ಹಾಮಾನಾ ಕುರಿತಂತೆ ವಾದ ವಿವಾದಗಳಿಗೇನೂ ಕೊರತೆ ಇಲ್ಲ. ಬಹಳಷ್ಟು ಜನ ಅವನನ್ನು ಹಾಡಿ ಹೊಗಳಿದ್ದಾರೆ; ಅವನನ್ನು ಪ್ರೀತಿಸಿ, ಗೌರವಿಸಿದ್ದಾರೆ. ಅವನನ್ನು ಒಬ್ಬ‘ಖಳ ನಾಯಕ’ ಎಂದು ಗ್ರಹಿಸುವ ಕೆಲವರಾದರೂ ಇದ್ದಾರೆ. ಇಂತಹ ಗ್ರಹಿಕೆಗೆ ಅವನ ಜನಪ್ರಿಯತೆ, ನ್ಯಾಯ ನಿಷ್ಠುರತೆ ಮುಖ್ಯ ಕಾರಣ ಇದ್ದಿರಲೂಬಹುದು.

ಹಾಮಾನಾ ಕುರಿತು ಏನನ್ನು ಹೇಳಿದರೂ, ಅವನನ್ನು ಬಲ್ಲವರಿಗೆ, ಅದು ಹೊಸದು ಎನ್ನಿಸುವುದಿಲ್ಲ. ಕಾರಣ ಅವನನ್ನು ಬಲ್ಲವರೆಲ್ಲರಿಗೂ ಅವನ ಸ್ವಭಾವದ ಪರಿಚಯವಿತ್ತು. ಅವನ ಬದುಕು ಒಂದು ಬಗೆಯ ‘ತೆರೆದ ಪುಸ್ತಕ.’ ಅದರಲ್ಲಿ ಯಾವುದೇ ಬಗೆಯ ಕಪಟ ಇರಲಿಲ್ಲ; ಅವನ ಜೀವನದಲ್ಲಿ ಯಾವುದಾದರೂ ‘ಗುಟ್ಟು’ಗಳಿದ್ದವೆಂದು ನನಗನ್ನಿಸುವುದಿಲ್ಲ. ನೇರ ನಡೆ ನುಡಿ. ಹೇಳಬೇಕಾದುದನ್ನು ಯಾವುದೇ ಅಂಜಿಕೆ ಅಥವಾ ಭಯವಿಲ್ಲದೆ ನೇರವಾಗಿ ಹೇಳುವ ಎದೆಗಾರಿಕೆ ಅವನದಾಗಿತ್ತು. ನುಡಿದಂತೆ ನಡೆಯುವ, ನಡೆದಂತೆ ನುಡಿಯುವ ಧೀರೋದಾತ್ತ ವ್ಯಕ್ತಿತ್ವ.

ದೊಡ್ಡಣ್ಣನ ಈ ವಿಶಿಷ್ಟ ವ್ಯಕ್ತಿತ್ವವನ್ನು ಮೆಚ್ಚಿಕೊಂಡು ಚಂದ್ರಶೇಖರ ಕಂಬಾರರು ಹೀಗೆ ಹೇಳಿದ್ದಾರೆ: ‘… ಹಾ. ಮಾ. ನಾ. ಬದುಕು-ಬರೆಹಗಳ ಮಧ್ಯೆ ಬಿರುಕಿಲ್ಲ. ಅವರು ಬರೆದದ್ದನ್ನು ಬದುಕುತ್ತಾರೆ, ಬದುಕಿದ್ದನ್ನು ಬರೆಯುತ್ತಾರೆ. ಆದ್ದರಿಂದ ಅವರ ವ್ಯಕ್ತಿತ್ವವೇ ನಮಗೊಂದು ದೊಡ್ಡ ಮೌಲ್ಯವಾಗುತ್ತದೆ.’ (2) ಯಾವುದನ್ನು ಕಂಬಾರರು ಮೌಲ್ಯವೆಂದು ಪರಿಗಣಿಸುತ್ತಾರೋ ಅದೇ ಮೌಲ್ಯಾಧಾರಿತ ಬದುಕನ್ನು ಬಹಳಷ್ಟು ಜನ ತಪ್ಪಾಗಿಯೂ ಅರ್ಥೈಸಿದ್ದುಂಟು. ಅವನ ನೇರ ನುಡಿ ಮತ್ತು ನಿಷ್ಠುರ ನಡೆಗಳನ್ನು ‘ಅಹಂಕಾರ’ ಎಂದು ಪರಿಗಣಿಸಿದವರೂ ಇದ್ದಾರೆ.

ಒಪ್ಪ, ಓರಣ, ಶಿಸ್ತು

ಒಪ್ಪ, ಓರಣ, ಶಿಸ್ತುಗಳು ಹಾಮಾನಾ ಬದುಕಿನ ‘ಟ್ರೇಡ್ ಮಾರ್ಕ್’ಗಳು.  ಅವನ ಉಡುಗೆ ತೊಡುಗೆಗಳು, ಅವನು ಬರೆಯುತ್ತಿದ್ದ ಅಂದವಾದ ಕಾರ್ಡುಗಳು, ಅವನ ಸುಂದರವಾದ ಹಸ್ತಾಕ್ಷರಗಳು, ಧೂಳು ಕೊಳೆಗಳನ್ನೇ ಕಾಣದ ಅವನ ಕಾರು ಇವೆಲ್ಲಾ ಅವನ ಅಚ್ಚುಕಟ್ಟಿಗೆ ಕೇವಲ ಸಾಕ್ಷಿಗಳು. ಒಂದು ತರಹ ‘ಸ್ಪಿಕ್ ಅಂಡ್ ಸ್ಪ್ಯಾನ್’ ಅಂತಾರಲ್ಲ, ಆ ರೀತಿ. ನಾಯಕರ ಕಾರ್ಡುಗಳನ್ನು ಕುರಿತ ಜಯಂತ ಕಾಯ್ಕಿಣಿ ಅವರ ಕವನದ ಸಾಲುಗಳು ಅವುಗಳ ವೈಶಿಷ್ಟ್ಯವನ್ನು ಕಣ್ಣಿಗೆ ಕಟ್ಟುವಂತೆ ಸೂಚಿಸುತ್ತವೆ:

“ಹಾಮಾನಾಯಕರು ಬರೆಯುವ ಕಾರ್ಡು ಸ್ವಚ್ಛ

ಅದೇ ಅಂಚೆಯಲ್ಲಿ ಬಂದರೂ ಇತರ ಪತ್ರಗಳಿಗಿಂತ ನೀಟು

ಕಿವಿ ಮಡಿಸದ ಅಂಚು ಸುಲಿಯದ ಗರಿ ಗರಿ ಕಾರ್ಡು

ಹಣೆಯ ನಡುವೆ ರಬ್ಬರ್ ಸ್ಟಾಂಪಿನ ಗೋಧೂಳಿ

ಎರಡೂ ಕಡೆ ಅಷ್ಟೇ ಮಾರ್ಜನ್ ಬಿಟ್ಟು ರಸ್ತೆಯ

ನಟ್ಟನಡುವೆ ನಡೆದಂತೆ ಪುಟ್ಟ ಪುಟ್ಟ ಸಾಲು

ಜಿಲೇಬಿ ಹೊಂದಿಸಿಟ್ಟಂಥ ಅಕ್ಷರಗಳು

ಸುತ್ತಿ ಬಳಸದ ಕೊಕ್ಕೆ ಹಾಕದ ನೇರ ಮಜಕೂರು

ಹಂಚಿಕೊಳ್ಳುವ ದ್ವನಿ ಆತುಕೊಳ್ಳುವ ಮಾತು

ಅವರದೇ ಅಂಗೈ ಬಂದಂಗೆ ಮುಂದೆ ಕೈಕುಲುಕಲು” (3)

ಪ್ರತಿಯೊಂದರಲ್ಲೂ ಅದೇ ಸೂತ್ರ: ಎಲ್ಲೂ ಕಲೆ ಇರಬಾರದು; ಧೂಳಿನ ಕಣ ಕಾಣಿಸಬಾರದು. ಇದನ್ನು ಅರ್ಥಮಾಡಿಕೊಂಡು, ಇದಕ್ಕೆ ಸ್ಪಂದಿಸಿದ ಮಡದಿ ಯಶೋಧರಮ್ಮ ಸದಾ ಸ್ವಚ್ಛಗೊಳಿಸುವ ಕಾಯಕದಲ್ಲೇ ತೊಡಗಿರುತ್ತಿದ್ದರು ಎಂದರೆ ಉತ್ಪ್ರೇಕ್ಷೆ ಆಗುವುದಿಲ್ಲ.  ಹಾಮಾನಾ ಅಚ್ಚುಕಟ್ಟುತನ ಯಾವ ಮಟ್ಟದ್ದಾಗಿತ್ತೆಂದರೆ, ಅದೊಂದು ಬಗೆಯ ‘ಗೀಳು’ ಎಂದು ಕರೆದರೂ ತಪ್ಪಾಗಲಾರದು. ನನಗೆ ತಿಳಿದಂತೆ ಅವನ ಹತ್ತಿರ ಒಂದು ಅಲಾರಂ ಗಡಿಯಾರ ಇತ್ತು. ಅದು ಅವನು ತೀರ್ಥಹಳ್ಳಿಯಲ್ಲಿ ಎಸ್. ಎಸ್. ಎಲ್. ಸಿ. ಓದುತ್ತಿದ್ದ ಕಾಲಕ್ಕೆ ಕೊಂಡುಕೊಂಡದ್ದು; ಮುಂದಿನ ಸುಮಾರು ಐವತ್ತು ವರ್ಷಗಳ ಕಾಲ ಅದು ಅವನ ಒಡನಾಡಿಯಾಗಿತ್ತು. ಅದಕ್ಕೆ ಒಂದು ಪ್ಲಾಸ್ಟಿಕ್ ಹೊದಿಕೆ ಹೊದೆಸಿ ಅದರದೇ ಜಾಗದಲ್ಲಿ ಇಟ್ಟಿರುತ್ತಿದ್ದ; ನಿತ್ಯವೂ ನಿಯಮಿತ ವೇಳೆಗೆ ಅದನ್ನು ಹೊರತೆಗೆದು ಅದಕ್ಕೆ ಕೀಲಿ ಕೊಟ್ಟು, ಅದೇ ಜಾಗದಲ್ಲಿ ಮರುಸ್ಥಾಪನೆ ಮಾಡುತ್ತಿದ್ದ.

ಶಿಸ್ತಿನ ವಿಚಾರದಲ್ಲಿ ಹಾಮಾನಾ ಒಂದು ಬಗೆಯ ದಂತಕತೆಯೇ ಆಗಿದ್ದ ಎನ್ನುವುದನ್ನು ಅವನನ್ನು ಬಲ್ಲವರೆಲ್ಲ ಬಲ್ಲರು. ನಾಯಕರ ಕಾರು ಗಂಗೋತ್ರಿಗೆ ಬರುವ ಮತ್ತು ಬಿಡುವ ಸಮಯವನ್ನು ಆಧರಿಸಿ ತಮ್ಮ ವಾಚುಗಳಲ್ಲಿ ಸಮಯವನ್ನು ಸರಿಪಡಿಸಿಕೊಳ್ಳುತ್ತಿದ್ದುದಾಗಿ ಕೆಲವರು ತಮಾಷೆ ಮಾಡುತ್ತಿದ್ದದ್ದನ್ನು ನಾನು ಕೇಳಿದ್ದೇನೆ. ಸಭೆ, ಸಮಾರಂಭಗಳಂತೂ ನಿಗದಿ ಪಡಿಸಿದ ಸಮಯಕ್ಕೆ ನಡೆಯಲೇಬೇಕು. ಅತಿಥಿಗಳು ಎಷ್ಟೇ ದೊಡ್ಡವರಿರಲಿ, ಮಂತ್ರಿಗಳೂ ಸೇರಿದಂತೆ—ಅವರು ಸರಿಯಾದ ವೇಳೆಗೆ ಬಾರದಿದ್ದರೆ, ಹಾಮಾನಾ ಅವರಿಗಾಗಿ ಕಾಯುವವನಲ್ಲ.

ಅವನು ಬೆಂಗಳೂರಿಗೆ ಬಂದಾಗ, ಎಂದಾದರೂ ಒಮ್ಮೆ ತನ್ನನ್ನ್ನು ಬಂದು ಕಾಣುವಂತೆ ಕರೆ ಮಾಡುತ್ತಿದ್ದ. ಕೆಂಪೇಗೌಡ ರಸ್ತೆಯಲ್ಲಿದ್ದ ‘ಬ್ರಾಡ್ ವೇ’ ಹೋಟೆಲಿನಲ್ಲಿ ವಾಸ್ತವ್ಯ. ನಾನು ಅಲ್ಲಿಗೆ ಹೋಗುವುದು ಸ್ವಲ್ಪ ತಡವಾದರೂ, “ಏನಯ್ಯಾ, ಮಿನಿಸ್ಟರ್ ಸಮಯ ಪಾಲಿಸುತ್ತೀಯ” ಎಂದು ಗೇಲಿ ಮಾಡುತ್ತಿದ್ದ. “ಬೆಂಗಳೂರು ಹಾಳು ‘ಟ್ರಾಫಿಕ್’ ಮಾರಾಯಾ” ಎಂದು ಸಬೂಬು ಹೇಳಿದರೆ, “ನಾನು ಸಾಕಷ್ಟು ಬೆಂಗಳೂರು ನೋಡಿದೀನಪ್ಪ. ಸ್ವಲ್ಪ ಬೇಗನೆ ಹೊರಟರೆ ಸರಿಯಾದ ಸಮಯಕ್ಕೆ ಬರಬಹುದು” ಎಂದು ತನ್ನ ಅಸಮಾಧಾನ ವ್ಯಕ್ತಪಡಿಸುತ್ತಿದ್ದ.

ಒಪ್ಪ, ಓರಣ, ಶಿಸ್ತುಗಳಿಗೆ ಸಂಬಂಧಿಸಿದಂತೆ ಹಾಮಾನಾ ಎಷ್ಟು ಕಾಳಜಿ ಹೊಂದಿದ್ದ ಎನ್ನುವ ಬಗೆಗೆ ಪ್ರಾಧ್ಯಾಪಕ ಎಂ. ಕೃಷ್ಣೇಗೌಡರು ಬರೆದ ಕೆಲವು ಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದು:

“1980ನೇ ಇಸವಿಯಲ್ಲಿ ನಾನು ಕನ್ನಡ ಎಂ.ಎ. ಓದಲು ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಗೆ ಸೇರಿಕೊಂಡೆ.  … ಆಗ ನಮ್ಮ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದವರು ಡಾ. ಹಾ. ಮಾ. ನಾಯಕರು. ತಮ್ಮ ವೃತ್ತಿಯಲ್ಲೂ, ಬದುಕಿನಲ್ಲೂ ಅತ್ಯಂತ ಘನತೆಯಿಂದ ನಡೆದುಕೊಂಡ ಮಹನೀಯ ಚೇತಕರು ಡಾ. ನಾಯಕರು. ಅವರು ಸ್ವಾಗತ ಸಮಾರಂಭದಲ್ಲಿ ಹೇಳಿದ್ದ ಕೆಲವು ಮಾತುಗಳನ್ನು ನಾನು ಜನ್ಮವಿಡೀ ಮರೆಯುವುದಿಲ್ಲ. ಅದೇ ಮಾತುಗಳನ್ನು ಈಗಲೂ ಆಗಾಗ ನನ್ನ ವಿದ್ಯಾರ್ಥಿಗಳಿಗೆ ಹೇಳುತ್ತಿರುತ್ತೇನೆ. ನಾಯಕರ ಮಾತುಗಳೆಂದರೆ ಖಚಿತ, ಸರಳ ಮತ್ತು ನೇರ. ಅವರು ಅವತ್ತು ತಮ್ಮ ಮಾತು ಆರಂಭಿಸಿದ್ದು ಹೀಗೆ—

“ಸ್ನೇಹಿತರೆ, ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಯನ ಮಾಡೋದಕ್ಕೆ ನೀವು ಬಂದು ಸೇರಿದ್ದೀರಿ. ಒಂದು ಔನ್ನತ್ಯದ ಪರಂಪರೆ ಇರುವ ಈ ಸಂಸ್ಥೆಗೆ ನಿಮ್ಮನ್ನು ಸಂತೋಷದಿಂದ ಸ್ವಾಗತಿಸುತ್ತಿದ್ದೇನೆ.

ಈ ಸಂದರ್ಭದಲ್ಲಿ ಸ್ವಲ್ಪ ನಿಷ್ಠುರವಾಗಿ ಒಂದು ಮಾತನ್ನ ಹೇಳಿಬಿಡ್ತೇನೆ ನಾನು. ಕನ್ನಡ ಅಧ್ಯಯನ ಸಂಸ್ಥೆಗೆ ದಯವಿಟ್ಟು ಬಂದು ಸೇರಿಕೊಳ್ಳಿ ಅಂತ ನಾವೇನೂ ನಿಮ್ಮನ್ನು ಕರೆದಿಲ್ಲ! ನೀವೇ ಬಂದು ಸೇರಿಕೊಂಡಿದ್ದೀರಿ. ನೀವೇ ಬಂದು ಸೇರಿಕೊಂಡಿರೋದರಿಂದ ನಾವು ಹೇಳಿದ ಹಾಗೆ ನೀವು ಕೇಳಬೇಕು. ನಾವೇ ಬಂದು ಕರೆದಿದ್ರೆ ನೀವು ಹೇಳಿದ ಹಾಗೆ ನಾವು ಕೇಳ್ತಾ ಇದ್ವಿ. ಆದರೆ ನೀವೇ ಬಂದು ಸೇರಿಕೊಂಡಿರೋದರಿಂದ ಕೇಳಬೇಕಾದವರು ನೀವು! ಹೇಳೋರು ನಾವು! ಹಾಗೆಂದರೆ ನಾವು ಏನೇನೋ ಹೇಳುವುದಿಲ್ಲ. ನೀವು ಏನೇನೋ ಕೇಳಬೇಕಾಗಿಲ್ಲ. ಈ ಸಂಸ್ಥೆಯಲ್ಲಿ ಕೆಲವು ನೀತಿ ನಿಯಮಗಳಿವೆ. ಅವುಗಳನ್ನು ನಾವು ಹೇಳ್ತೀವಿ. ನೀವು ಕೇಳಬೇಕು ಅಷ್ಟೇ”

ಹೀಗೆ ಮಾತು ಶುರುಮಾಡಿದ ಹಾ. ಮಾ. ನಾಯಕರು ಅವತ್ತಿನ ಭಾಷಣದಲ್ಲಿ ಹೇಳಿದ, ನನ್ನ ಮನಸ್ಸಿನಲ್ಲಿ ‘ಶಿಲಾ ನಿಕ್ಷಿಪ್ತಾಕ್ಷರ’ಗಳಂತೆ ದಾಖಲಾಗಿರುವ ಮಾತುಗಳು ಇವು—

“ದೊಡ್ಡ ದೊಡ್ಡ ತಪ್ಪುಗಳನ್ನು ಮಾಡಬೇಡಿ ಅಂತ ನಾನು ನಿಮಗೆ ಹೇಳುವುದಿಲ್ಲ ಮತ್ತು ಹಾಗೆ ಹೇಳಬೇಕಾಗಿಯೂ ಇಲ್ಲ. ಯಾಕೆ ಅಂದ್ರೆ ಸಾಮಾನ್ಯವಾಗಿ ದೊಡ್ಡ ದೊಡ್ಡ ತಪ್ಪುಗಳನ್ನು ನೀವು ಮಾಡುವುದಿಲ್ಲ. ಅಕಸ್ಮಾತ್ ದೊಡ್ಡ ತಪ್ಪುಗಳನ್ನು ನೀವು ಮಾಡಿದರೆ ನಿಮ್ಮನ್ನು ವಿಚಾರಿಸಿಕೊಳ್ಳೋದಕ್ಕೆ ಒಂದು ದೊಡ್ಡ ವ್ಯವಸ್ಥೆಯೇ ಇದೆ. ಪೋಲಿಸ್ ಠಾಣೆಗಳಿವೆ, ಕೋರ್ಟುಗಳಿವೆ! ದೊಡ್ಡ ದೊಡ್ಡ ತಪ್ಪುಗಳನ್ನು ಮಾಡಿದರೆ ಅವು ಅಂಥವರನ್ನು ವಿಚಾರಿಸಿಕೊಳ್ಳುತ್ತವೆ! ಆದ್ದರಿಂದ ದೊಡ್ಡ ತಪ್ಪುಗಳನ್ನು ಮಾಡುವವರ ಬಗ್ಗೆ ನಮಗೆ ಆತಂಕವಿಲ್ಲ. ಆದರೆ ನೀವು ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತೀರಿ! ಸಣ್ಣ ಸಣ್ಣ ತಪ್ಪು ಮಾಡಿದವರನ್ನು ವಿಚಾರಿಸಿಕೊಳ್ಳೋದಕ್ಕೆ ನಮ್ಮಲ್ಲಿ ಯಾವುದೇ ವ್ಯವಸ್ಥೆಯಿಲ್ಲ ಮತ್ತು ಅಂಥದೊಂದು ವ್ಯವಸ್ಥೆ ಇರಬೇಕಾಗಿಯೂ ಇಲ್ಲ. ಆದ್ದರಿಂದ ನೀವು ಸಣ್ಣ ಸಣ್ಣ ತಪ್ಪುಗಳನ್ನು ಮಾಡಬಾರದು.

“ಸಣ್ಣ ತಪ್ಪುಗಳು ಅಂದ್ರೆ ಯಾವುವು? ಸಂಸ್ಥೆಯ ಒಳಗೆ ಜೋರುದನಿಯಲ್ಲಿ ಮಾತಾಡಿ ತರಗತಿಗಳಿಗೆ ತೊಂದರೆ ಮಾಡೋದು, ಲೈಬ್ರರಿಯಲ್ಲಿ, ತಮ್ಮ ತಮ್ಮ ಕೊಠಡಿಗಳಲ್ಲಿ ಅಧ್ಯಯನ ಮಾಡ್ತಾ ಇರೋರಿಗೆ ಕಿರಿಕಿರಿ ಮಾಡೋದು, ಕಾಗದದ ಚೂರುಗಳನ್ನು ಎಲ್ಲೆಂದರಲ್ಲಿ ಬಿಸಾಡೋದು, ತಿಂಡಿ ತಿನ್ನುವಾಗ ಚೆಲ್ಲಾಡೋದು, ಸಂಸ್ಥೆಯ ಹಜಾರಗಳಲ್ಲಿ ನಡೆದಾಡುವಾಗ ಕಾಲು ಸವರಿಕೊಂಡು ನಡೆಯೋದು ಅಥವಾ ಚಪ್ಪಲಿಗಳ ಸದ್ದುಮಾಡಿಕೊಂಡು ನಡೆಯೋದು, ಕುರ್ಚಿ ಟೇಬಲ್ಲುಗಳ ಮೇಲೆ ‘ಶಾಸನ’ಗಳನ್ನು ಕೆತ್ತೋದು… ಇಂಥವೆಲ್ಲಾ ದೊಡ್ಡ ತಪ್ಪುಗಳಲ್ಲ, ಆದರೆ ಸಣ್ಣ ತಪ್ಪುಗಳು… ಈಗ ನೀವು ಗೋಡೆಗೆ ಒರಗ್ಕೊಂಡು ನಿಲ್ತೀರಿ. ಹಾಗೆ ನಿಂತಾಗ ನಿಮ್ಮ ಒಂದು ಕಾಲನ್ನು ಎತ್ತಿ ಗೋಡೆಯ ಮೇಲಿಡ್ತೀರಿ. ನಿಮ್ಮ ಬೂಟು ಅಥವಾ ಚಪ್ಪಲಿಯ ಗುರುತು ಬಿಳಿಗೋಡೆಯ ಮೇಲೆ ಅಚ್ಚಾಗುತ್ತದೆ. ಈ ಸಮಾರಂಭ ಮುಗಿದ ಮೇಲೆ ನಿಮಗೆ ಕಾಫಿ ಕೊಡ್ತಾರೆ. ಕಾಫಿ ಕುಡಿದ ಕಪ್ಪುಗಳನ್ನು ಕಿಟಕಿಗಳ ಮೇಲಿಡ್ತೀರಿ. ನೀವು ಹಾಗೆ ಇಟ್ಟ ಜಾಗದಲ್ಲಿ ಉಂಗುರುಂಗುರವಾಗಿ ಕಾಫಿ ಕಲೆಗಳು ಬೀಳುತ್ತವೆ. ಇನ್ನೊಮ್ಮೆ ಸುಣ್ಣ ಬಣ್ಣ ಮಾಡುವ ತನಕ ಆ ಅಸಹ್ಯ ಗುರುತುಗಳು ಹಾಗೆ ಉಳಿದಿರ್ತವೆ!”

“ನೀವು ಈ ಸಂಸ್ಥೆಯನ್ನು ಬಿಟ್ಟುಹೋಗುವಾಗ ನಿಮ್ಮದೊಂದು ವ್ಯಕ್ತಿತ್ವದ ಗುರುತು ಉಳಿಸಿ ಹೋಗಬೇಕೇ ವಿನಾ ಇಂಥ ಗುರುತುಗಳನ್ನಲ್ಲ. ಇಂಥ ಸಣ್ಣ ತಪ್ಪುಗಳನ್ನು ನೀವು ಮಾಡಬಾರದು! ಈ ತಪ್ಪುಗಳು ಸಣ್ಣವೇ ಆದರೂ ಇದರಿಂದ ಒಂದು ಸಂಸ್ಥೆಯ, ಸಮಾಜದ ವಾತಾವರಣ ಹಾಳಾಗುತ್ತದೆ. ಅದೂ ಅಲ್ಲದೆ ಸಣ್ಣ ಸಣ್ಣ ತಪ್ಪುಗಳನ್ನು ಮಾಡದಿರುವಂಥಾ ಶಿಕ್ಷಣವನ್ನು ನಿಮಗೆ ನೀವೆ ಕೊಟ್ಟುಕೊಂಡರೆ ಮುಂದೆ ನೀವು ದೊಡ್ಡ ತಪ್ಪನ್ನೂ ಮಾಡುವುದಿಲ್ಲ…!” (4)

ನಾಯಕರು ತಮ್ಮ ಅನ್ನಿಸಿಕೆಗಳನ್ನು ಇದೇ ವಾಕ್ಯಗಳಲ್ಲಿ ಹೇಳಿದರೋ ಅಥವಾ ಬೇರೆ ಬಗೆಯಲ್ಲಿ ಹೇಳಿದರೋ ತಿಳಿಯದು; ಆದರೆ ಇಲ್ಲಿ ಅಡಕವಾಗಿರುವ ಧ್ವನಿ ಮತ್ತು ವಿಚಾರಗಳು ಮಾತ್ರ ನಾಯಕರವೇ. ಆ ಕಾರಣಕ್ಕೆ ಅವುಗಳನ್ನು ಇಲ್ಲಿ ಸುದೀರ್ಘವಾಗಿ ಉಲ್ಲೇಖಿಸಲಾಗಿದೆ.

। ಇನ್ನುಳಿದದ್ದು ನಾಳೆಗೆ ।

ಅಡಿ ಟಿಪ್ಪಣಿಗಳು

1.ಹಾಮಾನಾ ಕುರಿತ ಈ ಅಭಿಪ್ರಾಯಗಳನ್ನು ಸ. ಚಿ. ರಮೇಶ (ಸಂ.) ಶಬ್ಧಾಂಜಲಿ ಮತ್ತುಸೋಮಶೇಖರ ಗೌಡ ಮತ್ತು ಪದ್ಮಾ ಶೇಖರ್ (ಸಂ.) ನಮ್ಮ ನಾಯಕರು ಸಂಕಲನಗಳಿಂದ ಉಲ್ಲೇಖಿಸಲಾಗಿದೆ.

2.ಚಂದ್ರಶೇಖರ ಕಂಬಾರ: ಹಾ. ಮಾ. ನಾ—ವ್ಯಕ್ತಿತ್ವವೇ ಒಂದು ಮೌಲ್ಯ. ಎಸ್. ಎಲ್. ಭೈರಪ್ಪ, ಜೆ. ಆರ್. ಲಕ್ಷ್ಮಣರಾವ್ ಮತ್ತು ಪ್ರಧಾನ್ ಗುರುದತ್ತ (ಸಂ.) ಮಾನ–ಹಾ ಮಾ ನಾಯಕ ಅಭಿನಂದನ ಗ್ರಂಥ. ಗೀತಾ ಬುಕ್ ಹೌಸ್, ಮೈಸೂರು. 1992.

3.ಜಯಂತ ಕಾಯ್ಕಿಣಿ:  ನಾಯಕರ ಕಾರ್ಡು. ಸೋಮಶೇಖರ ಗೌಡ ಮತ್ತು ಪದ್ಮ ಶೇಖರ್ (ಸಂ.) ಅದೇ.

4.ಎಂ. ಕೃಷ್ಣೇಗೌಡ: ಅಪ್ಪಾ! ಒಂದು ಗಳುಗೆ ನೆರಳಿಗೆ ಬಂದು ನೆತ್ತಿ ತಂಪು ಮಾಡಿಕೊಳ್ಳಿ! ವಿಜಯವಾಣಿ, ಬೆಂಗಳೂರು.

 

‍ಲೇಖಕರು avadhi

September 21, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: