ಹಾಮಾನಾ ಮಾಂಸಾಹಾರ ಬಿಟ್ಟರು..

7

ಪ್ರಾಣಿ ಪ್ರೇಮ

ಹಾಮಾನಾ ಮೂಕಪ್ರಾಣಿಗಳ ಬಗೆಗೆ ಅಗಾಧವಾದ ಪ್ರೀತಿ, ಕರುಣೆ ಹೊಂದಿದ್ದ. ಹುಟ್ಟಿನಿಂದ ಮಾಂಸಾಹಾರಿಯಾಗಿದ್ದರೂ ಯಾವುದೋ ವಯಸ್ಸಿನಲ್ಲಿ ಸಂಪೂರ್ಣ ಸಸ್ಯಾಹಾರಿಯಾಗಿ ಬದಲಾವಣೆ ಹೊಂದಿದ. ನಂತರದಲ್ಲಿ ಅವನು ಮೊಟ್ಟೆಗಳೂ ಸೇರಿದಂತೆ ಯಾವುದೇ ಬಗೆಯ ಮಾಂಸಾಹಾರವನ್ನು ಸೇವಿಸುತ್ತಿರಲಿಲ್ಲ. ಅದಕ್ಕೆ ಕಾರಣ ಮಾಂಸಾಹಾರದ ಬಗೆಗೆ ತಿರಸ್ಕಾರವಲ್ಲ; ಅದು ಕೇವಲ ಪ್ರಾಣಿಗಳ ಬಗೆಗೆ ಅವನಿಗಿದ್ದ ಪ್ರೀತಿ ಮಾತ್ರ.

ಹಾಮಾನಾ ಪ್ರಾಣಿಪರ ನೀತಿಯನ್ನು ಅವನ ಎಳೆಯ ವಯಸ್ಸಿನಲ್ಲೇ ರೂಢಿಸಿಕೊಂಡಿದ್ದ. ಉಳುವ ಅಥವಾ ಗಾಡಿ ಎತ್ತುಗಳ ಪರದಾಟ ಕಂಡು ಅವನು ಮರುಕ ವ್ಯಕ್ತಪಡಿಸುತ್ತಿದ್ದದ್ದನ್ನು ನಾನು ಕೇಳಿದ್ದೇನೆ. ಹಸುವಿನ ಹಾಲು ಕರೆಯುತ್ತಿದ್ದ ಸಮಯದಲ್ಲಿ ಅದರ ಕರುವಿಗೆ ಹೆಚ್ಚಿನ ಹಾಲು ಬಿಡುವಂತೆ ತಾಯಿಯವರೊಡನೆ ವಾದಿಸುತ್ತಿದ್ದ.  ಇದೇ ವಿಚಾರವನ್ನು ಅವನು ತನ್ನ ಎಳೆಯ ವಯಸ್ಸಿನಲ್ಲೇ ಬರೆದು ಪ್ರಕಟಿಸಿದ “ಮೂಕದೈನ್ಯ” ಎಂಬ ಹನಿಗತೆಯಲ್ಲಿ ನಿರೂಪಿಸಿದ್ದಾನೆ: “ಎಷ್ಟು ಮುದ್ದಾಗಿತ್ತು ಆ ಕರು! ಹುಟ್ಟಿ ಇನ್ನೂ ತಿಂಗಳಾಗಿರಲಿಲ್ಲ. ಎಳೆ ಬಿಸಿಲಿನಲ್ಲಿ ಹುಲ್ಲುಗರಿಕೆಯ ಬಯಲಿಗೆ ನಮ್ಮ ಮನೆ ಎದುರು ಆ ಕರು ಓಡುತ್ತಿದ್ದಾಗ ಬೆಳ್ಳಿಯಂತೆ ಹೊಳೆಯುತ್ತಿತ್ತು. ಬಾಲ ಆಡಿಸುತ್ತಾ ಚಿಗುರೆಯಂತೆ ನೆಗೆದೋಡುತ್ತಿತ್ತು. … ಅದು ಹುಟ್ಟಿ ತಿಂಗಳಾಗುವುದರೊಳಗೆ ದೌರ್ಭಾಗ್ಯ ಪಡೆದು ಬಂದಿತ್ತು. … ಮನೆಯವರು ಕರುವನ್ನಲಕ್ಷಿಸಿ ಹಾಲು ಹಿಂಡಿದರು. ತಮ್ಮ ಮನೆಯ ಪುಟ್ಟ ಕಂದನಂತೆ ಆ ಎಳೆಗರು ಎಂಬುದನ್ನು ಮರೆತು ಹಾಲು ಕರೆದರು. ಹಾಲು ಕರೆದಾದ ಮೇಲೆ ಎಳೆಗರು ಓಡಿ ಹೋಗಿ ಮೊಲೆಯುಣ್ಣಲು ಬಾಯಿ ಹಾಕುತ್ತಿತ್ತು. ಪಾಪ ತುಂಬಾ ನಿರಾಶೆ. ಹಾಲನ್ನು ಮನೆಯವರು ಬಿಟ್ಟೇ ಇರುತ್ತಿರಲಿಲ್ಲ. ಬರೀ ಮೊಲೆಯನ್ನು ಜಗ್ಗುತ್ತಿತ್ತು. … ದಿನ ದಿನ ಕಳೆದಂತೆ ಸೋತು ಸಣ್ಣಾಗುತ್ತಿದ್ದ ತನ್ನ ಕರುಳ ಕರುವನ್ನು ಕಂಡು ಗೌರಿದನ ನಿತ್ಯವೂ ಕಣ್ಣೀರು ಕರೆಯುತ್ತಿತ್ತು.” (5)

ಹಾಮಾನಾ ಪ್ರಾಣಿದಯೆಗೆ ಸಂಬಂಧಿಸಿದ ಇನ್ನೊಂದು ಸಂಗತಿ ನನ್ನ ನೆನಪಿನಲ್ಲಿ ಉಳಿದುಕೊಂಡು ಬಂದಿದೆ. ಶಿವಮೊಗ್ಗದಿಂದ ಮೈಸೂರಿಗೆ ವರ್ಗವಾಗಿ ಬಂದ ಪ್ರಾರಂಭದಲ್ಲಿ ಅವನು ಅಲ್ಲಿನ ಒಂಟಿಕೊಪ್ಪಲು ಬಡಾವಣೆಯಲ್ಲಿ ಬಾಡಿಗೆ ಮನೆಯೊಂದನ್ನು ಹಿಡಿದು ಸಂಸಾರ ಪ್ರಾರಂಭಿಸಿದ್ದ. ಆ ಕಾಲಕ್ಕೆ ಮನೆಯ ಹತ್ತಿರವೇ ಹಸುಗಳನ್ನು ತಂದು ಮನೆಯವರ ಎದುರೇ ಹಾಲು ಕರೆದುಕೊಡುವ ಪರಿಪಾಠ ಇನ್ನೂ ಚಾಲ್ತಿಯಲ್ಲಿದ್ದಿತ್ತು. ಮಡದಿ ಯಶೋಧರಮ್ಮ ಹಾಲು ಮಾರುವ ಹೆಂಗಸೊಬ್ಬಳ ಜೊತೆ ಮಾತನಾಡಿ, ಮನೆ ಮುಂದೆ ಹಾಲು ಕರೆಸಿಕೊಳ್ಳುವ ವ್ಯವಸ್ಥೆ ಮಾಡಿದರು.

ನಿತ್ಯ ಬೆಳಿಗ್ಗೆ ಹಸು-ಕರು ಮನೆ ಮುಂದೆ ಬರುತ್ತಿದ್ದವು, ಹಾಲಿನ ಹೆಂಗಸು ಮನೆಯವರೊಬ್ಬರ ಎದುರು ಹಾಲು ಕರೆದುಕೊಟ್ಟು ಹೋಗುತ್ತಿದ್ದಳು. ಇದು ಸ್ವಲ್ಪ ಕಾಲ ನಡೆದುಕೊಂಡು ಹೋಯಿತು. ಹಾಮಾನಾ ಹನಿಗತೆ ‘ಮೂಕದೈನ್ಯ’ದ ಪುನಾರಾವೃತಿ ಎಂಬಂತೆ ಕರು ಸತ್ತು ಹೋಯಿತು. ನಂತರದ ದಿನಗಳಲ್ಲಿ ಹಾಲಿನ ಹೆಂಗಸು ಹುಲ್ಲಿನಿಂದ ತಯಾರಿಸಿದ ಕರುವಿನ ಪ್ರತಿಕೃತಿಯೊಂದನ್ನು ಹಸುವಿನ ಮುಂದಿಟ್ಟುಕೊಂಡು ಹಾಲು ಕರೆಯುತ್ತಿದ್ದಳು. ಇದನ್ನು ಗಮನಿಸಿದ ಹಾಮಾನಾ ಖಿನ್ನನಾಗಿ, ಮನೆಯ ಮುಂದೆ ಹಾಲು ಕರೆಸುವ ಏರ್ಪಾಟನ್ನು ಅಲ್ಲಿಗೇ ಕೈಬಿಟ್ಟು, ಹಾಲಿಗೆ ಬೇರೆ ವ್ಯವಸ್ಥೆ ಮಾಡಿದ.

ಹಾಮಾನಾ ಆಪ್ತ ವರ್ಗದವರೆಲ್ಲ ಅವನ ಪ್ರೀತಿಯ ನಾಯಿ ‘ರಾಮು’ವನ್ನು ನೋಡಿ ಬಲ್ಲವರು ಅಥವಾ ಅದರ ಬಗ್ಗೆ ಕೇಳಿಯೇ ಇರುತ್ತಾರೆ. ಬದುಕಿನಲ್ಲಿ ಅದೃಷ್ಟ ಮನುಷ್ಯರಿಗೆ ಮಾತ್ರವೇ ಒದಗಿಬರುವುದಿಲ್ಲ. ಇದು ಪ್ರಾಣಿಗಳಿಗೂ ಅನ್ವಯಿಸುತ್ತದೆ ಎನ್ನುವುದಕ್ಕೆ ‘ರಾಮು’ವೇ ಸಾಕ್ಷಿ. ಎಲ್ಲ ಬೀದಿನಾಯಿಗಳಂತೆ ಇದೂ ಕೂಡಾ ಒಂದು ಅನಾಥ. ಅದು ಮೊದಲಿಗೆ ಹಾಮಾನಾ ಮನೆಯ ಸುತ್ತ ಓಡಾಡಿಕೊಂಡಿತ್ತು; ಯಶೋಧರಕ್ಕ ಅದಕ್ಕೆ ಹಾಳುಮೂಳು ಕೊಟ್ಟರು. ಅವರ ಪ್ರಾಣಿ ಪ್ರೀತಿ ಕೂಡಾ ಅತಿಶಯವಾದದ್ದೇ. ಹಾಗೆಯೆ ಅದು ಅಲ್ಲೇ ನೆಲೆಯೂರಿತು. ಕೆಲವೇ ಸಮಯದಲ್ಲಿ ದೊಡ್ಡಣ್ಣ ಅದರ ಬಗೆಗೆ ವಿಶೇಷ ಮಮತೆ ಬೆಳೆಸಿಕೊಂಡ; ಬೀದಿನಾಯಿಯೊಂದು ಸಾಕುನಾಯಿಯಾಗಿ ಬಡ್ತಿ ಪಡೆದು, ಬೀದಿಯಿಂದ ಅವನ ಮನೆಯಲ್ಲಿ ಪ್ರವೇಶ ಪಡೆದುಕೊಂಡಿತು. ಆ ನಂತರದಲ್ಲಿ ಅದರ ಬದುಕಿನ ರೀತಿಯೇ ಬದಲಾಯಿತು. ಹಾಲು, ಬಿಸ್ಕತ್ತು, ಬಿಸಿಬಿಸಿ ಊಟ, ದಿನನಿತ್ಯ ಸ್ನಾನ, ಸ್ನಾನಕ್ಕೆ ಸೋಪು, ಮೈ ಒರಿಸಲು ಟವೆಲ್, ಮಲಗುವುದಕ್ಕೆ ಹಾಸಿಗೆ, ಸೊಳ್ಳೆ ಪರದೆ–ಹೀಗೆ ‘ರಾಜಭೋಗ’ ರಾಮುವಿನ ಬದುಕಿನಲ್ಲಿ ಒದಗಿಬಂತು.

ರಾಮುವಿನ ವೈಭೋಗ ಜೀವನ ಕುರಿತು ಒಂದು ಬಗೆಯ ಹೊಟ್ಟೆಕಿಚ್ಚು ಪಟ್ಟವರೂ ಉಂಟು.  ನಮ್ಮ ಕುಟುಂಬಕ್ಕೆ ಹತ್ತಿರವಾಗಿದ್ದ ಬಿ.ವಿ. ಕೃಷ್ಣಮೂರ್ತಿ ಮೈಸೂರಿಗೆ ಬಂದಾಗ ದೊಡ್ಡಣ್ಣನ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ. ಊರಿಗೆ ವಾಪಾಸಾದ ನಂತರದಲ್ಲಿ ಅವನು ನಮ್ಮ ತಾಯಿಯವರೊಡನೆ, “ಅಮ್ಮ, ಮುಂದಿನ ಜನ್ಮದಲ್ಲಿ ನಾನು ದೊಡ್ಡಣ್ಣನ ಮನೆಯ ನಾಯಿಯಾಗಿ ಹುಟ್ಟಬೇಕು” ಎಂದು ಹೇಳಿಕೊಂಡಿದ್ದಾಗಿ ನಮ್ಮ ತಾಯಿ ತಮಾಷೆ ಮಾಡುತ್ತಿದ್ದರು. ಹಾಮಾನಾ ದಂಪತಿಗಳು ರಾಮುವನ್ನು ಒಬ್ಬ ಕುಟುಂಬದ ಸದಸ್ಯನ ರೀತಿಯಲ್ಲೇ ಉಪಚರಿಸಿದರು, ಪ್ರೀತಿಸಿದರು. ಅದು ತೀರಿಕೊಂಡಾಗ ಆತ್ಮೀಯ ಬಂಧುವಿನ ಸಾವಿಗೆ ದುಃಖ ಪಡುವಂತೆ ಮರುಗಿದರು. ಅದಕ್ಕೆ ವೈಭವಪೂರ್ಣ ಶವಸಂಸ್ಕಾರವನ್ನೂ ನಡೆಸಿದರು. ನಮ್ಮ ಬಂಧುಗಳೂ ಆಗಿರುವ ಕಡಿದಾಳು ಶ್ಯಾಮಣ್ಣ ಅವರು ‘ನಾಯಕರ ಪ್ರಾಣಿದಯೆ’ಯ ಪರಿಚಯವನ್ನು ತಮ್ಮ ಲೇಖನವೊಂದರಲ್ಲಿ ನಾಜೂಕಾಗಿ ವಿವರಿಸಿದ್ದಾರೆ. (6)

ಅವಿರತ ದುಡಿಮೆ

ಹಾಮಾನಾ ಒಬ್ಬ ಅನನ್ಯ ಶ್ರಮಜೀವಿ. ಪಾಟೀಲ ಪುಟ್ಟಪ್ಪನವರು ಎಲ್ಲಿಯೋ ಬರೆದ ನೆನಪು: “ಹಾಮಾ ನಾಯಕರು ಕೆಲಸಕ್ಕೆ ಸೋಲುವುದಿಲ್ಲ; ಅವರ ಕೈಯ್ಯಲ್ಲಿ ಕೆಲಸವೇ ಸೋಲುತ್ತದೆ.” ಈ ಮಾತು ನೂರಕ್ಕೆ ನೂರು ನಿಜ. ಅವನು ಅಧ್ಯಾಪಕನಾಗಿ ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದ ಎನ್ನುವುದಕ್ಕೆ ಅವನ ವಿದ್ಯಾರ್ಥಿಗಳು ಸಾಕ್ಷಿ. ಜೊತೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದ. ಹತ್ತಾರು ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದ. ಪತ್ರಿಕೆಗಳಿಗೆ ಅಂಕಣಗಳನ್ನು ನಿಯಮಿತವಾಗಿ ಬರೆಯುತ್ತಿದ್ದ.  ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಗಳಲ್ಲಿ ಅನೇಕ ಯೋಜನೆಗಳನ್ನು ರೂಪಿಸಿ, ಕಾರ್ಯಗತಗೊಳಿಸುತ್ತಿದ್ದ.

ಕರ್ನಾಟಕದ ಒಳಗೆ ಮತ್ತು ಹೊರಗೆ ಸದಾ ಸುತ್ತುತ್ತಿದ್ದ. ಇವೆಲ್ಲದರ ಮಧ್ಯೆ ಜನರ ಜೊತೆ ಬೆರೆತು ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದ. ಅವನ ಪತ್ರಗಳು (ಈ ಮೊದಲು ಉಲ್ಲೇಖಿಸಿರುವ ‘ಹಾಮಾನಾ ಕಾರ್ಡು’ಗಳು) ಮತ್ತು ದೂರವಾಣಿಯ ಮೂಲಕ ನಾಡಿನ ಉದ್ದಗಲಕ್ಕೂ ಜನರ ಜೊತೆ ಸಂಪರ್ಕದಲ್ಲಿರುತ್ತಿದ್ದ. ಯಾರೇ ಪತ್ರ ಬರೆದರೂ ಅದಕ್ಕೆ ತಪ್ಪದೆ ಉತ್ತರಿಸುತ್ತಿದ್ದ; ಅವನ ಅವಗಾಹನೆಗೆ ಬರುತ್ತಿದ್ದ ಪುಸ್ತಕಗಳನ್ನು ಕುರಿತು ಅದರ ಲೇಖಕರಿಗೆ ಮೆಚ್ಚುಗೆಯ ಪತ್ರ ಬರೆದು ಪ್ರೋತ್ಸಾಹಿಸುತ್ತಿದ್ದ. ಮೈಸೂರಿನಲ್ಲಿಯೇ ಇರುವ ದಿನಗಳಲ್ಲಿ, ಸಂಜೆ ಸಮಯದಲ್ಲಿ ‘ಗೀತಾ ಬುಕ್ ಹೌಸ್’ಗೆ ಭೆಟ್ಟಿ ನೀಡಿ, ಪುಸ್ತಕಗಳನ್ನು ತಿರುವಿಹಾಕಿ, ಬುಕ್ ಹೌಸ್‍ನ ಮಾಲೀಕ ಶ್ರೀ ಸತ್ಯನಾರಾಯಣರಾವ್ ಸೋದರರೊಂದಿಗೆ ಹರಟೆ ಹೊಡೆಯುವುದು ಕೂಡಾ ಹಾಮಾನಾ ವಾಡಿಕೆಯಾಗಿತ್ತು.

ನಂಬಿಕೆ

ದೇವರು, ಆತ್ಮ, ಪುನರ್ಜನ್ಮ ಮುಂತಾದ ವಿಚಾರಗಳಲ್ಲಿ ದೊಡ್ಡಣ್ಣನ ಆಲೋಚನೆಗಳು ಏನಾಗಿದ್ದವು ಎಂದು ಯೋಚಿಸುತ್ತೇನೆ. ಹೀಗೆ ಎಂದು ನಿರ್ದಿಷ್ಟ ಉತ್ತರ ತೋಚುವುದಿಲ್ಲ. ವಾಸ್ತವದಲ್ಲಿ ಅವನು ಆಧ್ಯಾತ್ಮಿಕ ವಿಚಾರಗಳಲ್ಲಿ ಹೆಚ್ಚಾಗಿ ತಲೆ ಕೆಡಿಸಿಕೊಂಡಿರಲಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಜೀವಿ ಅಥವಾ ಐಹಿಕ ಪ್ರಕೃತಿಗಳಿಗೆ ಮಿಗಿಲಾದ ‘ಶಕ್ತಿ’ಯೊಂದು ಇರುವುದಾಗಿ ಅವನು ನಂಬಿಕೊಂಡಿದ್ದ. ಆದನ್ನು ‘ದೇವರು’ ಎಂದು ಯಾರಾದರೂ ಗುರುತಿಸಿದರೆ ಅದಕ್ಕೆ ಅವನ ವಿರೋಧ ಇದ್ದಂತೆ ಕಾಣುವುದಿಲ್ಲ. ಹಾಗಾದರೂ ಗುಡಿ ಗೋಪುರಗಳಲ್ಲಿ ಪ್ರತಿಷ್ಠಿತವಾದ ದೇವರುಗಳನ್ನು ಯಾವತ್ತೂ ಅವನು ನಂಬಿರಲಿಲ್ಲ. ಸ್ವತಃ ಪೂಜೆಪುನಸ್ಕಾರಗಳನ್ನು ಮಾಡಿದ್ದಾಗಲೀ, ದೇವರ ಮುಂದೆ ನಮಸ್ಕಾರ ಮಾಡಿ ಬೇಡಿಕೊಂಡಿದ್ದಾಗಲೀ ನನಗೆ ತಿಳಿದಿಲ್ಲ.

ಆದರೆ ಬೇರೆಯವರ ನಂಬಿಕೆಗಳ ಬಗೆಗೆ ಅವನದೇನೂ ತಕರಾರು ಇರಲಿಲ್ಲ. ‘ಅವರವರ ನಂಬಿಕೆ ಅವರಿಗೆ’ ಎನ್ನುವುದು ಅವನ ಉದಾತ್ತ ನಿಲುವಾಗಿತ್ತು. ಪತ್ನಿ ಯಶೋದರಮ್ಮ ಅಪಾರ ದೈವ ಭಕ್ತರು. ಅವರು ಹೋಗದ ದೇವಸ್ಥಾನಗಳಿರಲಿಲ್ಲ, ಮಾಡದ ಪೂಜೆಗಳಿರಲಿಲ್ಲ. ಅವರ ಈ ನಂಬಿಕೆ ಮತ್ತು ಆಚರಣೆಗಳಿಗೆ ದೊಡ್ಡಣ್ಣ ಯಾವತ್ತೂ ಅಡ್ಡಿಬರುತ್ತಿರಲಿಲ್ಲ. ತಮ್ಮ ಮಕ್ಕಳ ಮದುವೆ ಯಾವುದೋ ದೇವಸ್ಥಾನದಲ್ಲಿ ಆಗಬೇಕು ಎನ್ನುವುದು ಯಶೋದರಕ್ಕ ಅವರ ತೀರ್ಮಾನವೇ. ದೊಡ್ಡಣ್ಣ ಒಪ್ಪಿಕೊಂಡು ಹಾಗೆಯೇ ನಡೆಸಿಕೊಟ್ಟ. ಯಶೋದರಕ್ಕ ತಿರುಪತಿಗೆ ಹೋಗಬೇಕೆಂಬ ತಮ್ಮ ಆಶೆಯನ್ನು ಮುಂದಿಟ್ಟಾಗ, ಅದನ್ನು ಸಂತೋಷದಿಂದಲೇ ನೆರವೇರಿಸಿದ.

ಹಲವು ವರ್ಷಗಳ ಹಿಂದೆ ನಮ್ಮ ತಂದೆತಾಯಿ ದಕ್ಷಿಣ ಕನ್ನಡದ ಕೆಲವು ದೇವಾಲಯಗಳಿಗೆ ಹೋಗಿಬರುವ ತಮ್ಮ ಹರಕೆಯೊಂದು ಬಹಳ ಕಾಲದಿಂದ ಉಳಿದುಕೊಂಡು ಬಂದಿದೆ ಎನ್ನುವ ಪ್ರಸ್ತಾಪ ಮುಂದಿಟ್ಟರು. ಅದಕ್ಕೆ ಒಪ್ಪಿ, ನಮ್ಮ ಇಡಿಯ ಕುಟುಂಬ ಉಡುಪಿ, ಧರ್ಮಸ್ಥಳ, ಮುಲ್ಕಿ ಮುಂತಾದ ದೇವಸ್ಥಾನಗಳಿಗೆ ಹೋಗಿ ಬಂದದ್ದುಂಟು. ಬೇರೆಯವರ ನಂಬಿಕೆಗಳನ್ನು ತಿರಸ್ಕರಿಸದೆ ತನ್ನ ನಂಬಿಕೆಗಳನ್ನು ಬಿಟ್ಟುಕೊಡದ ಒಂದು ಬಗೆಯ ಸಮನ್ವಯ ಮನೋಭಾವ ಅವನದಾಗಿತ್ತು ಎಂದರೆ ಸರಿಹೋಗುತ್ತದೇನೋ! ಯಾವುದೋ ನಿಲುವಿಗೆ ಕಟ್ಟುಬಿದ್ದ ಅಂಧಾಭಿಮಾನಿಗಳು ಇದು ನಾಯಕರ “ದ್ವಂದ್ವ” ಎಂದು ಟೀಕಿಸುವ ಸಾಧ್ಯತೆ ಇಲ್ಲದಿಲ್ಲ.

ಪುಸ್ತಕ ಪ್ರೀತಿ

ಈ ಎಲ್ಲಕ್ಕೂ ಮಿಗಿಲಾದ ಅವನ ಇನ್ನೊಂದು ಕಾಯಕ: ಓದು ಮತ್ತು ಬರಹ. ಹಾಮಾನಾ ಓದಿನ ಹರವು ವಿಶಾಲವಾದದ್ದು; ಬರಹದ ವ್ಯಾಪ್ತಿ ಕೂಡಾ ಅಷ್ಟೇ ವಿಸ್ತಾರವಾದದ್ದು. ಅವನು ಕಲೆಹಾಕಿದ್ದ ಪುಸ್ತಕಗಳೇ ಅವನ ಆಳವಾದ ಓದಿಗೆ ಸಾಕ್ಷಿ. ಇದಕ್ಕೆ ಸಮರ್ಥನೆ ಎನ್ನುವಂತೆ ಶಿವರಾಮ ಕಾರಂತರ ಹೇಳಿಕೆಯೊಂದನ್ನು ಇಲ್ಲಿ ಉದ್ದರಿಸಬಹುದು. ಕಾರಂತರು ಹೀಗೆ ಹೇಳುತ್ತಾರೆ: ‘ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ—ಕನ್ನಡದಲ್ಲಿ—ಏನಾಗಿದೆ, ಆಗುತ್ತಿದೆ ಎಂದು ಹೇಳಬಲ್ಲವರು ಇರುವುದಾದರೆ ಅದು ಹಾ. ಮಾ. ನಾಯಕರು.’ (6)

ಅವನು ತನ್ನ ವಿದ್ಯಾಭ್ಯಾಸ ಮುಗಿಸಿ ಅಮೆರಿಕಾದಿಂದ ವಾಪಾಸಾದಾಗ ಜೊತೆಯಲ್ಲಿ ತಂದದ್ದು ಒಂದು ಟೈಪ್‍ರೈಟರ್ ಮತ್ತು ಒಂದು ರಾಶಿ ಪುಸ್ತಕಗಳು. ಪುಸ್ತಕದ ಅಂಗಡಿಗಳು ಅವನನ್ನು ಅಯಸ್ಕಾಂತದಂತೆ ಸೆಳೆಯುತ್ತಿದ್ದವು. ಅವನ ಜೊತೆಯಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಓಣಿಗಳಲ್ಲಿ ಓಡಾಡುವಾಗ ನಾನು ಗಮನಿಸಿದ್ದೇನೆ—ಅವನ ಗಮನವೆಲ್ಲ ಬೀದಿಯ ಪಕ್ಕದಲ್ಲಿ ಹರಡಿಕೊಂಡಿರುತ್ತಿದ್ದ ಹಳೆಯ ಪುಸ್ತಕಗಳ ಕಡೆಗೇ ಇರುತ್ತಿತ್ತು. ಅವನು ತೀರಿಕೊಳ್ಳುವ ಮೊದಲು ತನ್ನ ಪುಸ್ತಕದ ಆಸ್ತಿಯನ್ನು ಧರ್ಮಸ್ಥಳದ ಪುಸ್ತಕ ಭಂಡಾರಕ್ಕೆ ಕೊಡುವಂತೆ ಮರಣಪತ್ರದಲ್ಲಿ ಆದೇಶಿಸಿದ್ದ. ಅದು ಹಾಗೆಯೇ ನಡೆಯಿತು.

ಆ ನಂತರದಲ್ಲಿ ಒಮ್ಮೆ ನಾನು ಮತ್ತು ನನ್ನ ಹೆಂಡತಿ ಮಾಲತಿ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರನ್ನು ಭೆಟ್ಟಿಯಾಗಿದ್ದೆವು. ಆ ಸಂದರ್ಭದಲ್ಲಿ ಹೆಗಡೆಯವರು ನನ್ನನ್ನು ನಾಯಕರ ಆ ನಿರ್ಧಾರಕ್ಕೆ ಕಾರಣ ಏನಿರಬಹುದೆಂದು ಊಹಿಸಿ ಹೇಳಿದ ಮಾತು ಇವು: “ತಮ್ಮ ನಿಧನದ ನಂತರವೂ ತಮಗೆ ಪ್ರಿಯವಾದ ಪುಸ್ತಕಗಳನ್ನು ಯಾರಾದರೂ ಚೆನ್ನಾಗಿ ರಕ್ಷಿಸಿಕೊಂಡು ಹೋಗಬೇಕು ಮತ್ತು ಅವುಗಳ ಸದ್ಬಳಕೆಯಾಗಬೇಕು ಎನ್ನುವ ಉದ್ದೇಶ ಇದ್ದಿರಬೇಕು. ನಾವು ಅವರ ಆಶಯವನ್ನು ನೆರವೇರಿಸುವ ವ್ಯವಸ್ಥೆ ಮಾಡಿದ್ದೇವೆ.” ಪೂಜ್ಯ ಹೆಗಡೆಯವರು ಮಾಡಿರುವ ವ್ಯವಸ್ಥೆ ಖಂಡಿತವಾಗಿ ಹಾಮಾನಾ ಆತ್ಮಕ್ಕೆ ಶಾಂತಿ ತರುತ್ತದೆ ಎಂದು ನಾನು ಭಾವಿಸುತ್ತೇನೆ.

ಸಮತಾ ಭಾವನೆ

ವ್ಯಕ್ತಿಗತ ಸಂಬಂಧಗಳಲ್ಲಿ ಹಾಮಾನಾ ಎಂದೂ ತಾರತಮ್ಯ ಮಾಡಿದವನಲ್ಲ. ಜನರ ಜೊತೆಯಲ್ಲಿನ ಒಡನಾಟದಲ್ಲಿ ಅಧಿಕಾರ, ಅಂತಸ್ತುಗಳು ಯಾವತ್ತೂ ಅವನ ಪರಿಗಣನೆಗೆ ಬರುತ್ತಿರಲಿಲ್ಲ. ಸ್ಥಾನಮಾನಗಳ ಭೇದಗಳನ್ನು ಕಡೆಗಾಣಿಸಿ ಎಲ್ಲರೊಡನೆ ಏಕಪ್ರಕಾರವಾಗಿ ವ್ಯವಹರಿಸುವ ಸಮತಾ ಭಾವನೆ ಅವನಲ್ಲಿ ಮನೆಮಾಡಿತ್ತು. ತನ್ನ ಮನೆಗೆಲಸದ ಅಥವಾ ಕಛೇರಿಯ ಕೆಳವರ್ಗದ ನೌಕರರ ಜೊತೆಯಲ್ಲೂ ಗೌರವ, ವಿಶ್ವಾಸಗಳಿಂದ ನಡೆದುಕೊಳ್ಳುವ ಉದಾರತೆ ಅವನಲ್ಲಿತ್ತು. ಅವರ ಕಷ್ಟಸುಖಗಳಿಗೆ ಸ್ಪಂದಿಸುವ, ಅವರೊಡನೆ ಲೋಕಾಭಿರಾಮವಾಗಿ ಮಾತಾಡುವ ಮತ್ತು ಅವಶ್ಯವೆನಿಸಿದಾಗ ತಮಾಷೆ ಮಾಡಿ ಅವರನ್ನು ಸಾಂತ್ವನಗೊಳಿಸುವ ಸ್ವಭಾವ ಅವನದು. ದೊಡ್ಡವರು ಎನ್ನಿಸಿಕೊಂಡವರ ಜೊತೆಯಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದನೋ ಅಷ್ಟೇ ಸ್ವಾಭಾವಿಕವಾಗಿ ಸಾಮಾನ್ಯರ ಜೊತೆಯಲ್ಲೂ ವ್ಯವಹರಿಸಬಲ್ಲವನಾಗಿದ್ದ. ಪ್ರತಿಷ್ಠಿತರ ಜೊತೆಯಲ್ಲಿ ಪ್ರತಿಷ್ಠಿತನಾಗಿ ಬದುಕಿದ ಹಾಮಾನಾ ಅತಿಸಾಮಾನ್ಯರ ಜೊತೆಯಲ್ಲೂ ಅಷ್ಟೇ ಸಹಜವಾಗಿ ನಡೆದುಕೊಳ್ಳುತ್ತಿದ್ದ ರೀತಿ, ರುಡ್‍ಯಾರ್ಡ್ ಕಿಪ್ಲಿಂಗ್ ಕವಿಯ ಶ್ರೇಷ್ಠ ಕವಿತೆ ‘ಇಪ್’ನ ಒಂದು ಸಾಲು, “ವಾಕ್ ವಿತ್ ಕಿಂಗ್ಸ್ ಬಟ್ ನಾಟ್ ಲೂಸ್ ದಿ ಕಾಮನ್ ಟಚ್” – ಈ ಆಶಯಕ್ಕೆ ಅನುಗುಣವಾದ ನಡವಳಿಕೆಯಾಗಿತ್ತು.

ಹಾಮಾನಾ ಸದ್ಗುಣಗಳ ಪಟ್ಟಿ ಮಾಡುತ್ತಾಹೋದರೆ ಅದು ಬೆಳೆಯುತ್ತಲೇ ಹೋಗುತ್ತದೆ. ಅಂದ ಮಾತ್ರಕ್ಕೆ ಅವನು ಮನುಷ್ಯ ಮಾತ್ರರ ದುರ್ಬಲಗಳಿಗೆ ಅತೀತನಾಗಿದ್ದ ಎಂದೇನೂ ಅಲ್ಲ. ಮಾನವ ಸಹಜವಾದ ಕೋಪ, ಮತ್ಸರ, ಅಸಹನೆ, ಅಹಂಕಾರ ಎಲ್ಲವನ್ನೂ ಅವನಲ್ಲಿ ಕಾಣಬಹುದಾಗಿತ್ತು. ಕೆಲವು ಸಂದರ್ಭಗಳಲ್ಲಿ ಅವನ ಈ ವರ್ತನೆಗಳು ತುಸು ಅತಿ ಎನ್ನುವ ಮಟ್ಟದಲ್ಲಿ ವ್ಯಕ್ತವಾಗುತ್ತಿದ್ದವು; ಅದು ಅವನ ಆತ್ಮೀಯರಿಗೆ ಮುಜುಗರ ಮತ್ತು ಬೇಸರಕ್ಕೆ ಕಾರಣವಾದರೆ, ಅವನ ಸವಾಲುದಾರರಿಗೆ ಅವನನ್ನು ತೆಗಳುವ ಅಸ್ತ್ರಗಳಾಗಿದ್ದವು.

ವಿರೋಧಿಗಳ ಭೂತಗನ್ನಡಿಯಲ್ಲಿ ಅವನ ಈ ಬಗೆಯ ನಡವಳಿಕೆಗಳು ಉತ್ಪ್ರೇಕ್ಷೆ ಪಡೆದು ಕೆಲಮಟ್ಟಿನ ಅಪಪ್ರಚಾರ ಆದದ್ದೂ ಉಂಟು. ಅಂಥ ವ್ಯವಸ್ಥಿತ ಅಪಪ್ರಚಾರಗಳ ಬಗ್ಗೆ ಅವನೇನೂ ತಲೆ ಕೆಡಿಸಿಕೊಂಡದ್ದಿಲ್ಲ. ಅವುಗಳನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಿ. ದಿಟ್ಟ ಪ್ರತ್ತ್ಯುತ್ತರಗಳನ್ನು ಸಮರ್ಥವಾಗಿ ನೀಡುತ್ತಿದ್ದ.

 

ಅಡಿ ಟಿಪ್ಪಣಿಗಳು

 

5.ಹಾ. ಮಾ. ನಾಯಕ: ಮೂಕದೈನ್ಯ. ಹಾ ಮಾ ನಾಯಕ: ಬಾಳ್ನೋಟಗಳು. ಊಷಾ ಸಾಹಿತ್ಯ ಮಾಲೆ, ಮೈಸೂರು. 1983 (ಪುಟ 38-39)

6.ಕಡಿದಾಳು ಶ್ಯಾಮಣ್ಣ: ನಾಯಕರ ಪ್ರಾಣಿದಯೆ. ಸ. ಚಿ.ರಮೇಶ (ಸಂ.) ಅದೇ.

7.ಶಿವರಾಮ ಕಾರಂತ: ಸಾಹಿತ್ಯಲೋಕದ ಮಾನದಂಡ. ಎಸ್. ಎಲ್. ಭೈರಪ್ಪ, ಜೆ. ಆರ್. ಲಕ್ಷ್ಮಣರಾವ್ ಮತ್ತು ಪ್ರಧಾನ್ ಗುರುದತ್ತ (ಸಂ.) ಮಾನ–ಹಾ ಮಾ ನಾಯಕ ಅಭಿನಂದನ ಗ್ರಂಥ. ಗೀತಾ ಬುಕ್ ಹೌಸ್, ಮೈಸೂರು. 1992;

‍ಲೇಖಕರು avadhi

September 22, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: