ನಾನು ‘ಗುಣಮುಖ’ಳಾದೆ…

ಬಾಲ ಒಂದಿಲ್ಲ ಅಷ್ಟೇ..ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. 

ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ಪ್ರಥಮ್ ಬುಕ್ಸ್ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ. 

ಉಳಿದವರೆಲ್ಲಾ ಶಾಲೆ ಅಭಿವೃದ್ಧಿ ಮಾಡ್ತಾರೆ, ನಾನು ಮಕ್ಕಳ ಜೊತೆ ಬಾಲ ಕಟ್ಟಿಕೊಂಡು ಕುಣೀತೀನಿಅಂತ ತಮ್ಮ ಇಂದಿನ ಐಕಾನಿಕ್ ಸ್ಮೈಲ್ ಕೊಡುತ್ತಾರೆ. 

ಹೇಮಾಗೆ ಪುಸ್ತಕ ಎಂದರೆ ಇನ್ನಿಲ್ಲದ ಹುಚ್ಚು. ತಾವು ಓದಿದ ಕೃತಿಗಳ ಪಾತ್ರಗಳು ಇವರನ್ನು ಇನ್ನಿಲ್ಲದಂತೆ ಕಾಡುತ್ತವೆ. ನಿದ್ದೆಯಲ್ಲೂ..ಎಂದು ಮಾತು ಸೇರಿಸುತ್ತಾರೆ. ಇಂದಿನಿಂದ ಪ್ರತೀ ವಾರ ಹೇಮಾ ತಮ್ಮನ್ನು ಕಾಡಿದ ಪಾತ್ರಗಳನ್ನು ತಂದು ನಮ್ಮ ಎದುರು ನಿಲ್ಲಿಸಲಿದ್ದಾರೆ.

ಒಂದು ಕಾಲವಿತ್ತು: ಗುಣಮುಖ ಓದುವ ಮುಂಚಿನದ್ದು…

ಎದುರು ಕೂತ ಅಪ್ಪ, ‘‘ಸುಮ್ಮನಿದ್ದು ಸಾಯಿಸಬೇಡ. ಮನಸ್ಸಿನಲ್ಲಿರುವುದನ್ನು ಹೇಳು,’’ ಎನ್ನುತ್ತಿದ್ದರೆ, ತಾನು ಮಾತನಾಡಿದರೆ ಮೌನವಾಗಿರುವ ಮಗಳು ಮತ್ತೆ ಎಲ್ಲಿ ಇನ್ನೂ ಮೌನಕ್ಕೆ ಜಾರುತ್ತಾಳೋ ಎಂದು ಅಪ್ಪನ ಹಿಂದೆ ನಿಂತು, ನಾನೇ ಮಾತನಾಡಲಿ ಅಂತ ಕಾಯುತ್ತಿದ್ದ ಅವ್ವ.

ಇದು ನಾನು ಸುಖಾಸುಮ್ಮನೆ ಸಿಟ್ಟು ಮಾಡಿಕೊಂಡು ಬಿಮ್ಮನೆ ಕುಳಿತಾಗಲೆಲ್ಲ ಮನೆಯಲ್ಲಿ ಸಾಮಾನ್ಯವಾಗಿ ಘಟಿಸುತ್ತಿದ್ದ ದೃಶ್ಯ. ಹೊರಗಡೆ ಮಾತೇ ಆಡದೆ, ಅಪರಿಚಿತರಿಗೆ ಕೆಲವೊಮ್ಮೆ ಇಗೋಯಿಸ್ಟ್ ಆಗಿ ಕಾಣುವವಳು ಮನೆಯಲ್ಲಿ ಏನೋ ಒಂದು ಹರಟುತ್ತಿರುತ್ತಿದ್ದೆ.

ಹೀಗಾಗಿ ನನ್ನ ಜಗಳ, ಜೋರು ಮಾತಿಗಿಂತ ಮೌನಕ್ಕೆ ಹೆದರುತ್ತಿದ್ದರು ಎಲ್ಲರೂ. ಏಕ್‌ದಂ ‘ತಣ್ಣಗೆ’ ಉಳಿದರೆ, ಅಬ್‌ ನಾರ್ಮಲ್ ಅಟಿಟ್ಯೂಡ್‌ ನ ಮಗಳು ನಾರ್ಮಲ್ ಆಗಿಲ್ಲ ಅಂತ ಅಪ್ಪ, ಅವ್ವ ಗಾಬರಿ ಬೀಳುತ್ತಿದ್ದರು.

ಇನ್ನು ನಾನು ಮೌನವಾಗಿದ್ದೇನೆ ಎನ್ನುವುದು ಅಪ್ಪ-ಅವ್ವನಿಗೆ ಗೊತ್ತಾಗುತ್ತಿದ್ದುದು ಒಂದು ಕೆಲಸದಿಂದ.  ಎಂತಹ ತುರ್ತಿನಲ್ಲೂ ಹೊರಗೆ ಹೋಗುವಾಗ ಚಪ್ಪಲಿ ಮೆಟ್ಟುತ್ತಾ ‘ಬರ್ತೇನಿ…’ ಅಂತ ಹೇಳಿ ಹೋಗುವುದು ನನ್ನ ರೂಢಿ. ಹಾಗೆ ಹೇಳಿ ಹೋಗದಿದ್ದರೆ, ನನಗೆ ಇಷ್ಟವಾಗದ ಘಟನೆ ನಡೆದಿದ್ದಕ್ಕೆ ಸಿಟ್ಟು ಬಂದಿದೆ ಎಂದೇ ಅರ್ಥ.

ಅದು ಹಾಗೇ ಮುಂದುವರಿಯುವ ಲಕ್ಷಣ ಕಂಡು ಬಂದ ತಕ್ಷಣ ಅಪ್ಪ, ‘‘ಜಗದ ಕೂಡ ಜಗಳಾಡುವ ಈ ಹಠ ಯಾಕೆ? ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ಬದುಕುವ ನಿನ್ನ ಸುಮ್ಮನುಳಿಯುವಿಕೆ ಅಪಾರವಾಗಿ ಕಾಡುತ್ತದೆ,’’ ಎಂದು ಸಂಧಾನ ಸೂತ್ರ ಹಿಡಿದು ಬರುತ್ತಿದ್ದರು. ಅಲ್ಲಿಗೆ ನನ್ನ ಮೌನ ಕೊನೆಯಾಗುತ್ತಿತ್ತು.

ತಪ್ಪು ನನ್ನದಿದ್ದಾಗಲೂ ಎಲ್ಲರೂ ತಾವೇ ಕ್ಷಮೆ ಕೇಳಿ ನನ್ನನ್ನ ಮುಚ್ಚಟೆಯಿಂದ ನೋಡಿಕೊಂಡರು. ಹಾಗೆ ಮಾಡುವ ಮೂಲಕ ನನ್ನನ್ನು ಎಷ್ಟು ಪ್ರೀತಿಸುತ್ತೇವೆ ಎನ್ನುವುದನ್ನು ತೋರಿಸಿ ಕೊಟ್ಟರು. ಇದನ್ನು ಮಾಡುವ ಅಗತ್ಯವೇನಿತ್ತು ಎನ್ನುವ ಪ್ರಶ್ನೆ ನನ್ನೊಳಗೆ ಮೂಡಿದಾಗ ಅನಿಸಿದ್ದು, ಪ್ರೀತಿಸುವ ಶಕ್ತಿ ದೊಡ್ಡದು. ಅದು ತಾನು ಪ್ರೀತಿಸಬೇಕಾದ ವಸ್ತುವನ್ನು ತನಗೆ ತಾನೇ ಹುಡುಕಿಕೊಂಡು ಅಭಿವ್ಯಕ್ತಿಗೆ ದಾರಿ ಕಂಡುಕೊಳ್ಳುತ್ತದೆ ಎಂದು ನಾನು ಈಗ ಅನೇಕ ಬಾರಿ ಅಂದುಕೊಳ್ಳುತ್ತೇನೆ.

ಇಂಥವು ಪದೇ ಪದೇ ಘಟಿಸುತ್ತಿದ್ದ ವೇಳೆಯಲ್ಲೇ ನಾನು ‘ಗುಣಮುಖ’ ಓದಿದ್ದು. ಅಲಾವಿ ಖಾನ್ ಮತ್ತು ಶಿರಾಜ್ ನ ಮಹಾಕವಿ ಸಾದಿ ಬಗ್ಗೆ ಓದಿದ್ದು ನನ್ನನ್ನೇ ನಾನು ಮುರಿದು ಕಟ್ಟಿಕೊಳ್ಳಲು ಸಾಧ್ಯವಾಯಿತು.

‘ಗುಣಮುಖ’ದಲ್ಲಿ ನನಗೆ ತುಂಬಾ ಇಷ್ಟವಾದ ಪ್ರತಿಮೆ: ನಾನು ನಾದಿರ್ ಶಾ. ಚಕ್ರವರ್ತಿ ನಾದಿರ್ ಶಾ ಎಂದ ದೊರೆಗೆ, ಅಲಾವಿ ಖಾನ್ ಪ್ರೀತಿಯಿಂದ ಯಾರದು, ಯಾರಿಗೆ ಹಾಗನ್ನುವುದು? ಎಂದು ಕೇಳುವುದು.

ನಂತರ ದೊರೆಗೆ ತಿಳಿಸಿ ಹೇಳುವುದು; ಮನುಷ್ಯರನ್ನು ಅರ್ಥಮಾಡಿಕೊಳ್ಳುವ, ಅವರ ಅಳಲನ್ನು ತಿಳಿದೊಳ್ಳುವ ನಾಯಕ ತಾನೇ ತಾನಾಗಿ ಎಲ್ಲ ಅಸಹಾಯಕ ಜನತೆಯ ಚಕ್ರವರ್ತಿ. ಆದರೆ ರೋಗದಿಂದಾಗಿ ನೀನೇ ಇಲ್ಲಿ ಅಸಹಾಯಕ. 

ದೊರೆಗೆ ಕಾಯಿಲೆ ಬಗ್ಗೆ ಪ್ರಶ್ನಿಸಿದರೆ, ಸಹಾಯಕ ಉತ್ತರಿಸುತ್ತಿರುತ್ತಾನೆ. ಆಗ ಅಲಾವಿ ಕಾಯಿಲೆಯ ವ್ಯಕ್ತಿಯೇ ತನ್ನ ದೇಹದ ಕಷ್ಟಗಳ ಬಗ್ಗೆ ಮಾತನಾಡುವುದಕ್ಕೂ ಬೇರೆಯವರು ಹೇಳುವುದಕ್ಕೂ ವ್ಯತ್ಯಾಸವಿದೆ. ದೇಹ ನಿಜಕ್ಕೂ ಗೊತ್ತಿರುವುದು ಆ ದೇಹ ಹೊತ್ತ ವ್ಯಕ್ತಿಗೆ.

ರೋಗಿಯ ಕರುಳು, ಪಿತ್ಥಕೋಶ, ಉದರ, ಹೃದಯ – ಎಲ್ಲವೂ ರೋಗಿಗೆ ನೀಡುತ್ತಿರುವ ಕಿರಿಕಿರಿ ರೋಗಿಯ ಧ್ವನಿ, ನಿಲುವು, ಭಾಷೆಯ ಮೂಲಕ ಹೊರ ಹೊಮ್ಮುತ್ತದೆ. ಆ ಕಾರಣದಿಂದ ಮಾತ್ರ ಕೇಳುತ್ತಿದ್ದೇನೆ. ಸಾಧ್ಯವಾದರೆ ತಾವೇ ಉತ್ತರಿಸಬೇಕು. ನನ್ನ ಪ್ರಶ್ನೆಗಳು ವಿಚಿತ್ರವೆನ್ನಿಸಿದರೂ ಅದನ್ನು ಉತ್ತರಿಸಿದರೆ ಗುಣಪಡಿಸಲು ಸಹಾಯವಾಗುತ್ತದೆ.

ಮುಂದಿನ ಅವರಿಬ್ಬರ ಸಂಭಾಷಣೆ ನೋಡಿ:

ಅಲಾವಿ –  ನಾನು ದೇಶಕ್ಕೆ ಮದ್ದುಕೊಡೋ ಹಕೀಮನಲ್ಲ, ಮನುಷ್ಯನಿಗೆ ಮಾತ್ರ. ದೇಶದ ಕಷ್ಟ ಮನುಷ್ಯನಿಗೆ ಕಾಯಿಲೆ ತರಬಹುದು. ದಯವಿಟ್ಟು ನಾನು ಹೇಳಿದಂತೆ ಹೇಳಿ: “ನಾನು ನಾದಿರ್ ಶಾ, ಕಾಯಿಲೆಯಿಂದ ನರಳುತ್ತಿರುವೆ. ನನ್ನನ್ನು ಪರೀಕ್ಷಿಸಿ ಔಷಧಿ ಕೊಡಿ.”

ನಾದಿರ್ – ನಾನು ಹೇಳುವುದಿಲ್ಲ. ನೀನು ಎಷ್ಟೇ ಕೇಳಿಕೊಂಡರೂ ಹೇಳುವುದಿಲ್ಲ. ನೀನೊಬ್ಬ ಉದ್ಧಟ. ಇದಕ್ಕೂ ನನ್ನ ಕಾಯಿಲೆಗೂ ಏನು ಸಂಬಂಧ?

ಅಲಾವಿ – ದೇಹ ಅಂದರೆ ನೀವು ಎಲುಬು, ಮಾಂಸ ಮಾತ್ರ ಅಂತ ತಿಳಿದಿರುವಂತಿದೆ! ದೇಹ ಮನಸ್ಸು, ಆತ್ಮ ಚೈತನ್ಯದಿಂದ ಕೂಡಿದ್ದು. ನೀವು ಆತ್ಮಹತ್ಯೆಯ ದಾರಿಯಲ್ಲಿದ್ದೀರಿ; ನಿಮಗೆ ಕಾಯಿಲೆ ಗುಣಪಡಿಸಿಕೊಳ್ಳುವ ಇಷ್ಟವಿಲ್ಲ. ಮನುಷ್ಯರೊಂದಿಗೆ ಮನುಷ್ಯರಂತೆ ಮಾತಾಡುವ ಶಕ್ತಿ ಕೂಡ ಇಲ್ಲ. ನಾನು ಹೀಗೆ ಹೇಳುತ್ತಿದ್ದೇನೆಂದು ತಪ್ಪು ತಿಳಿಯಬೇಡಿ. ಯಾವುದೂ ನಿನ್ನ ಆತ್ಮಕ್ಕೆ ತಟ್ಟುತ್ತಿಲ್ಲ. ಚೇತನವನ್ನು ಸ್ಪರ್ಶಸುತ್ತಿಲ್ಲ.

ಮಗುವಾಗು, ಶಾರದೆಯ ಮಗುವಾಗು. ನೀನು ನಿನ್ನೆ ಕರೆದುಕೊಂಡ ಇಬ್ಬರು ಹೆಣ್ಣುಗಳ ಮಗುವಾಗು. ನಿನ್ನ ತಾಯಿಯ ಯೋನಿಯಿಂದ ಹುಟ್ಟಿ ಕಣ್ಣು ತೆರೆದ ಮಗುವಾಗು. ಎಲ್ಲ ಅಹಂಕಾರಗಳು ಹುಟ್ಟುವುದಕ್ಕೆ ಮುಂಚೆ ಗೋಚರಿಸಿದ ಈ ಪ್ರಪಂಚವನ್ನು ನೋಡು. ನೀನು ಈ ಜಗತ್ತಿನಲ್ಲಿ ಕಳೆದಿರುವ ಐವತ್ತು ವರ್ಷಗಳ ಅಹಂಕಾರ, ಸ್ವಪ್ರತಿಷ್ಠೆಯ ಇನ್ನೊಂದು ಮುಖವನ್ನು ಅರ್ಥಮಾಡಿಕೋ. ಇಲ್ಲಿ ಯಾವುದು ಮುಖ್ಯ? ಯಾವುದರಿಂದ ದೇಹ ಚೈತನ್ಯ ಪಡೆಯುತ್ತದೆ? ಯಾವುದರಿಂದ ಆತಂಕ ಇಲ್ಲವಾಗುತ್ತದೆ?

ಗೊತ್ತಾಗುತ್ತಿಲ್ಲ ಅಲ್ಲವೇ? ಗೊತ್ತು ಮಾಡಿಕೊಳ್ಳಲು ಪ್ರಯತ್ನಿಸು, ಸ್ವಪ್ರತಿಷ್ಠನಿಗೆ, ಅಹಂಕಾರಿಗೆ ತನ್ನ ಕೃತ್ಯಗಳ ಪರಿಣಾಮವೇ ಗೊತ್ತಿರುವುದಿಲ್ಲ. ಕಣ್ಣುಮುಚ್ಚಿಸು ಯೋಚಿಸು. ಅದೊಂದೇ ಕಣ್ಣು ಪಡೆಯುವ ಮಾರ್ಗ.

ಚಕ್ರವರ್ತಿಯಾಗುವುದಕ್ಕೆ ಅನೇಕ ಮಾರ್ಗಗಳಿವೆ; ಸರ್ವಶಕ್ತ ಅಲ್ಲಾಹು ಯಾವುದೇ ಅಹಂಕಾರವಿಲ್ಲ ಚಕ್ರವರ್ತಿ, ಕವಿ ಜಲಾಲುದ್ದೀನ್ ರೂಮಿ ಯಾವುದೇ ಪ್ರದರ್ಶನವಿಲ್ಲ ಕಾವ್ಯಲೋಕದ ಚಕ್ರವರ್ತಿ, ಆದರೆ ಪ್ರೀತಿಯೊಂದೇ ಮನುಷ್ಯನನ್ನ ಮನುಷ್ಯನನ್ನಾಗಿಸುವುದು.

ಕಾಯಿಲೆ ಬಂದಿರುವುದು ತನಗೆ ಪ್ರೀತಿಸಲು ಬರುವುದಿಲ್ಲ ಎಂಬ ಕಾರಣಕ್ಕೆ ಎನ್ನುವುದು ಗೊತ್ತಾಗುತ್ತಿದ್ದ ಹಾಗೆ ದೊರೆಗೆ ರೋಗ ವಾಸಿಯಾಗುತ್ತದೆ ಆಗ ಅಲಾವಿ ಹೇಳುತ್ತಾನೆ – ಜೀವನದಲ್ಲಿ ಕಟ್ಟಕಡೆಗೆ ಯಾವುದು ಮುಖ್ಯ ತಿಳಿಯಿತೆ? ಎಂದು. ಪುಸ್ತಕ ಓದಿ ಮುಗಿಸಿ ಕೆಳಗಿಟ್ಟಾಗ ಬದುಕಿಗೆ ಯಾವುದು ಮುಖ್ಯ ಎನ್ನುವುದು ನನಗೂ ಅರ್ಥವಾಗಿ ಹೋಗಿತ್ತು!

November 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: