ಗ್ರಾಮಸಭೆಗೆ ಬಂತು ಮಕ್ಕಳ ಹಕ್ಕುಗಳ ವಿಚಾರಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

|ಕಳೆದ ವಾರದಿಂದ|

ಯಾಕೆ ಬೇಕು?

ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿನ ಮಕ್ಕಳ ಪರಿಸ್ಥಿತಿ, ಅವರ ಆವಶ್ಯಕತೆಗಳು ಮತ್ತು ಅಲ್ಲಿ ಲಭ್ಯವಿರುವ ಸೇವೆಗಳನ್ನು ಸಮೀಕರಿಸಲು ಯತ್ನಿಸುತ್ತಿದ್ದಾಗ ನನಗೆ ಕಾಣಿಸುತ್ತಿದ್ದುದು ʼನವಗ್ರಹಗಳುʼ!

ಪೌರಾಣಿಕ ಕಲ್ಪನೆಯ ನವಗ್ರಹಗಳು ಅಷ್ಟ ದಿಕ್ಕುಗಳನ್ನು ಕಾಯಲೆಂದು ಎಲ್ಲ ಕಡೆಗೂ ಮೊಗ ಮಾಡಿಕೊಂಡು ಇರುತ್ತವೆಂದೂ, ಅವುಗಳು ಪರಸ್ಪರ ದೃಷ್ಟಿಯಲ್ಲಿ ದೃಷ್ಟಿಯಿಟ್ಟು ನೋಡದಿರಲು ಇನ್ನೇನೋ ಮಹತ್ತರವಾದ ಕಾರಣವಿದೆಯೇನೋ ಗೊತ್ತಿಲ್ಲ.

ಆದರೆ ಇಲ್ಲಿನ ನವಗ್ರಹಗಳು – ಗ್ರಾಮಪಂಚಾಯತಿ; ಅಂಗನವಾಡಿ, ಶಾಲಾಭಿವೃದ್ಧಿ ಸಮಿತಿ; ಪಡಿತರ ಅಂಗಡಿ; ಶಾಲಾ ಶಿಕ್ಷಕರು; ಸ್ವಯಂಸೇವಾ ಸಂಘಟನೆ; ಆರೋಗ್ಯಾಧಿಕಾರಿ /ವೈದ್ಯರು, ಪೊಲೀಸ್ ‌ಮತ್ತು ಬಾಲವಿಕಾಸ ಸಮಿತಿ – ಈ ಎಲ್ಲರೂ ಒಬ್ಬರಿಗೊಬ್ಬರು ಮುಖ ತೋರದೆ ತಮ್ಮ ತಮ್ಮ ಪರಿಧಿಯೊಳಗೆ ಬೇರೆಯವರು ಬರದಂತೆ ಅಥವಾ ತಾವು ಬೇರೆಯವರ ಪರಿಧಿಗೆ ಹೋಗದಂತೆ ಇದ್ದುಬಿಡುತ್ತಾರೆ!

ಹೀಗಾದಾಗ ಎಲ್ಲರೂ ಒಟ್ಟಿಗೆ ಸೇರಿ ಗ್ರಾಮ ಪಂಚಾಯತ್ ‌ರಾಜ್‌ ಕಾಯಿದೆಯಲ್ಲಿನ ಆಶಯದಂತೆ ನಡೆದುಕೊಳ್ಳುವುದೇ ಇಲ್ಲ. ಇನ್ನು ಮಕ್ಕಳ ಬದುಕು ಸುಧಾರಿಸಬೇಕೆಂದರೆ ಹೇಗೆ?

ಸ್ಥಳೀಯರು ಕೆಲವರ ವಿರೋಧ, ಕೆಲವರ ಬೆಂಬಲದ ಮಧ್ಯ ನಾವು ಐದಾರು ʼಮಕ್ಕಳ ಹಕ್ಕುಗಳ ಗ್ರಾಮಸಭೆಗಳನ್ನುʼ ಅನಧಿಕೃತವಾಗಿ ನಡೆಸಿದೆವು! ಬಂದ ಫಲಿತಾಂಶ ಮಾತ್ರ ಪ್ರೋತ್ಸಾಹಕರವಾಗಿತ್ತು. ಈ ಗ್ರಾಮಸಭೆಗಳಲ್ಲಿ ನಾವು ತಯಾರಿಸಿದ್ದ ʼಆಯಾ ಗ್ರಾಮಪಂಚಾಯತಿಯ ಮಕ್ಕಳ ಪರಿಸ್ಥಿತಿ ತೋರಿಸುವ ಜಾತಕʼ ಪರಿಚಯಿಸಿದೆವು.

ಅದೇನೂ ಸುಲಭವಾಗಿರಲಿಲ್ಲ. ಒಂದಷ್ಟು ಕಡೆ ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು ಮತ್ತು ಶಿಕ್ಷಕರು ಬಿಸಿಬಿಸಿಯಾಗಿಯೇ ಪ್ರತಿಕ್ರಿಯಿಸಿದರು. ನೀವ್ಯಾರು ಇದನ್ನೆಲ್ಲಾ ಹೇಳಕ್ಕೆ, ನಾವು ನಿಮಗೆ ಉತ್ತರಿಸಬೇಕಿಲ್ಲ, ಇತ್ಯಾದಿ. ಹಾಗೆಯೇ ಕೆಲವೆಡೆ ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಸದಸ್ಯರು ಮತ್ತು ಈ ಸೇವಾದಾರರ ನಡುವೆ ಇನ್ನೇನು ಕೈಕೈ ಮಿಲಾಯಿಸುತ್ತದೆ ಎನ್ನುವಂತೆಯೂ ಆಯಿತು. ಇದಕ್ಕೆಲ್ಲಾ ಕಾರಣ ಆಯಾ ಗ್ರಾಮಪಂಚಾಯತಿಯ ʼಮಕ್ಕಳ ಪರಿಸ್ಥಿತಿ ನಿಚ್ಚಳವಾಗಿ ತೋರುವ ವರದಿಗಳುʼ.

ಇಲ್ಲಿಂದ ಮುಂದಿನದು ಸದ್ಯ ಕರ್ನಾಟಕದಲ್ಲಿ ಮಕ್ಕಳ ಹಕ್ಕುಗಳನ್ನು ಗ್ರಾಮ ಮಟ್ಟದಲ್ಲಿ ಅಧಿಕೃತವಾಗಿ ಚರ್ಚೆಗೆ ತರಲು ನಡೆದ ಚಾರಿತ್ರಿಕ ವಕೀಲಿ ಯತ್ನಗಳು.

೨೦೦೬ರ ಜುಲೈ ತಿಂಗಳಲ್ಲಿ ಆಗ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ‌ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ವಿ.ಪಿ.ಬಳಿಗಾರ್‌. ಅವರನ್ನು ಭೇಟಿ ಮಾಡಿ ನಮ್ಮ ಅನುಭವದ ಕತೆಯನ್ನು ಹೇಳಲಾರಂಭಿಸಿದೆ. ಸ್ವಲ್ಪ ಹೊತ್ತು ಕೇಳಿದ ಬಳಿಗಾರ್‌ಅವರು, ʼಇದು ನನಗೊಬ್ಬನಿಗೇ ಬೇಡ. ನಮ್ಮ ಮಂಥನ ಸಭೆಯಲ್ಲಿ ನಮ್ಮ ಎಲ್ಲ ಅಧಿಕಾರಿಗಳ ಮುಂದೆ ಹೇಳು. ತಯಾರಾಗಿ ಬಾʼ ಎಂದು ೫ ಆಗಸ್ಟ್‌ ೨೦೦೬ರ ಸಭೆಗೆ ಅಧಿಕೃತ ಆಹ್ವಾನ ಕೊಟ್ಟರು. 

ಸಭೆಯ ಕಾರ್ಯಕ್ರಮ ಪಟ್ಟಿಯಲ್ಲಿ ʼಗ್ರಾಮಪಂಚಾಯತಿ ಮತ್ತು ಮಕ್ಕಳ ಹಕ್ಕುಗಳ ವಿಚಾರಗಳುʼ ಎಂದಿತ್ತು. ನಾನು ವಿಚಾರ ಮಂಡನೆ ಆರಂಭಿಸುತ್ತಿದ್ದಂತೆಯೇ ಕೆಲವು ಅಧಿಕಾರಿಗಳು ಬಹಳ ಸ್ಪಷ್ಟವಾಗಿ ಹೇಳಿದ್ದು, ಇವೆಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದು. ನಮಗ್ಯಾಕೆ? ಬಳಿಗಾರ್ ‌ಅವರು ಸುಮ್ಮನೆ ನೋಡುತ್ತಿದ್ದರು. ನಾನು ಮಾತು ಮುಂದುವರೆಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ‌ರಾಜ್ ‌ಕಾಯಿದೆ, ಇಲಾಖೆಯ ಕರ್ತವ್ಯಗಳು, ಪಂಚಾಯತ್ ‌ಸದಸ್ಯರಿಗೆ ಆಗಬೇಕಿರುವ ಮಕ್ಕಳ ಹಕ್ಕುಗಳನ್ನು ಕುರಿತು ಸೂಕ್ಷ್ಮತೆ ತರಬೇತಿಗಳು, ನಮ್ಮ ಕ್ರಿಯಾ ಅಧ್ಯಯನದ ಅನುಭವಗಳು ಎಲ್ಲವನ್ನೂ ಬಿಚ್ಚಿಟ್ಟೆ.

 ‘ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳು ಮಕ್ಕಳ ಪರಿಸ್ಥಿತಿ ಕುರಿತು ಎಲ್ಲ ಮಾಹಿತಿಗಳನ್ನು ತಮ್ಮೊಡನೆ ಇಟ್ಟುಕೊಂಡದ್ದೇ ಆದಲ್ಲಿ ಮತ್ತು ಅವುಗಳನ್ನು ಕಾಲಕಾಲಕ್ಕೆ ವಿಶ್ಲೇಷಿಸುವ, ಹಿಂದು ಮುಂದಿನ ಅಂಕಿಅಂಶಗಳಿಗೆ ತಾಳೆಹಾಕಿ ನೋಡುವ ಪ್ರಯತ್ನವನ್ನು ಮಾಡಿದ್ದೇ ಆದಲ್ಲಿ, ಭಾರತ ಸರ್ಕಾರ ಜಾಗತಿಕ ಮಟ್ಟದಲ್ಲಿ ಒಪ್ಪಿರುವ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಹಾಗೂ ಜಗತ್ತಿನೆದುರು ಇರುವ ಸಹಸ್ರಮಾನದ ಅಭಿವೃದ್ಧಿ ಗುರಿಗಳ ಸಾಧನೆಗೆ ತಳಮಟ್ಟದಲ್ಲೇ ಗಟ್ಟಿ ಪ್ರಯತ್ನಗಳು ಆಗಲಿವೆ.

ಹೀಗೆ ಮಾಡಿದ್ದೇ ಆದಲ್ಲಿ ನಮ್ಮ ಗ್ರಾಮ ಪಂಚಾಯಿತಿಗಳನ್ನು ಮಕ್ಕಳ ಸ್ನೇಹೀ ಗ್ರಾಮ ಪಂಚಾಯಿತಿಗಳೆಂದು ಗುರುತಿಸುವುದರಲ್ಲಿ ಸಾರ್ಥಕತೆ ಇರುತ್ತದೆ’ ಎಂದು ಹೇಳಿ, ʼಎಲ್ಲ ಗ್ರಾಮ ಪಂಚಾಯಿತಿಗಳು ವರ್ಷದಲ್ಲಿ ಒಂದು ದಿನ ಮಕ್ಕಳ ವಿಚಾರಗಳನ್ನು ಕೇಂದ್ರೀಕರಿಸಿ ಮಕ್ಕಳನ್ನೊಳಗೊಂಡು ಸಭೆಯನ್ನು ನಡೆಸಿದರೆ ಮಕ್ಕಳ ವಿಚಾರಗಳಿಗೆ ತಳಮಟ್ಟದ ಸರ್ಕಾರ ನೀಡುವ ಪ್ರಾಮುಖ್ಯತೆ ಮತ್ತು ಬದ್ಧತೆಯನ್ನು ತೋರಿಸಿದಂತಾಗುತ್ತದೆʼ ಎಂದು ಸಲಹೆ ನೀಡಿದೆ.

ʼಹನ್ನೊಂದನೇ ಪಂಚವಾರ್ಷಿಕ ಯೋಜನೆಯಲ್ಲಿ ಮಕ್ಕಳ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿಯ ಪಾತ್ರವನ್ನು ಪ್ರಮುಖವಾಗಿ ಗಮನಿಸಲಾಗುತ್ತದೆ ಎಂದು ಹೇಳಲಾಗಿದ್ದು ನಾವು ಈಗಲೇ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿಯ ಕಲ್ಪನೆಗೆ ಒತ್ತಾಸೆಯಾದಲ್ಲಿ, ಹನ್ನೊಂದನೇ ಪಂಚವಾರ್ಷಿಕ ಯೋಜನೆಯ ಗುರಿಗಳನ್ನು ಮುಟ್ಟಲು ನೆರವಾಗುತ್ತದೆʼ ಎಂದೂ ನನ್ನ ಸುದೀರ್ಘವಾದ ವಿಚಾರ ಮಂಡನೆಯ ಕೊನೆಯಲ್ಲಿ ಹೇಳಿದೆ. 

ಕೆಲವು ಪ್ರಶ್ನೋತ್ತರಗಳಾದ ಮೇಲೆ ಬಳಿಗಾರ್‌ಅವರು ಕೇಳಿದರು, ʼಏನು ಆಗಬೇಕು ನಮ್ಮಿಂದ ಈಗ? ಏನು ಮಕ್ಕಳನ್ನು ಕುರಿತು ಗ್ರಾಮಸಭೆ ಆಗಬೇಕಾ?ʼ ನನ್ನೊಡನೆ ಇದ್ದ ಎಚ್.ಸಿ.ರಾಘವೇಂದ್ರ ನನ್ನ ಕೈಜಗ್ಗಿ ʼಹಕ್ಕುಗಳು ಸೇರಿಸಿ ಹೇಳಿ ಸಾರ್‌ʼ ಎಂದ. ಹೇಳಿದೆ, ʼಮಕ್ಕಳ ಹಕ್ಕುಗಳ ಗ್ರಾಮಸಭೆ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ವರ್ಷಕ್ಕೊಮ್ಮೆಯಾದರೂ ಆಗಬೇಕು. ಅಲ್ಲಿ ಮಕ್ಕಳ ಪರಿಸ್ಥಿತಿ ಕುರಿತು ಚರ್ಚೆಯಾಗಬೇಕುʼ. ತಥಾಸ್ತು!

ಆಗಲೇ ಬಳಿಗಾರ್‌ ಅವರು ಕೆಲವು ಸೂಚನೆಗಳನ್ನು ನೀಡಿದರು. ಅದು ಸಭೆಯ ನಡಾವಳಿಗಳಲ್ಲಿ ಸೇರಿ ಹೊರಬಿತ್ತು.

  • ಮಕ್ಕಳನ್ನು, ಮಕ್ಕಳ ಹಕ್ಕುಗಳ ವಿಚಾರಗಳನ್ನು ಕೇಂದ್ರೀಕರಿಸಿ, ಮಕ್ಕಳನ್ನೊಳಗೊಂಡು ಗ್ರಾಮ ಸಭೆಗಳನ್ನು ನಡೆಸಬಹುದಾದ ಕಲ್ಪನೆಗೆ ಸಭೆಯಲ್ಲಿ ಒಮ್ಮತವೇರ್ಪಟ್ಟು ಮುಂದೆ ನವೆಂಬರ್ ೧೩ ರಿಂದ ೨೦ರೊಳಗೆ ಒಂದು ದಿನವನ್ನು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮ ಸಭೆಗಳನ್ನು ನಡೆಸಲು ಮೀಸಲಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ದಿಶೆಯಲ್ಲಿ  ಇಲಾಖೆಯ ಅಧಿಕಾರಿಗಳೊಡನೆ ಮಾತನಾಡಿ ಗ್ರಾಮ ಸಭೆಯನ್ನು ನಡೆಸಲು ಬೇಕಾದ ಸಲಹೆ ಸೂಚನೆಗಳನ್ನು ಸಿದ್ಧಪಡಿಸಲು ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಗೆ ಸೂಚಿಸಲಾಯಿತು.
  • ಸ್ವಗ್ರಾಮ ಸ್ವರಾಜ್ ಯೋಜನೆಯಡಿಯಲ್ಲಿ ಪಂಚಾಯಿತಿಗೆ ನೀಡುವ ಅನುದಾನದಲ್ಲಿ ಮಕ್ಕಳ ಅಭಿವೃದ್ಧಿಗೆಂದೇ ನಿರ್ದಿಷ್ಟ ಮೊತ್ತದ ಹಣವನ್ನು (ಸುಮಾರು ಒಂದು ಲಕ್ಷ ರೂಗಳು) ಮೀಸಲಿಡಲು ಎಲ್ಲ ಪಂಚಾಯಿತಿಗಳಿಗೆ ಸೂಚಿಸಲೂ ಹಾಗೂ ಇಂತಹ ಕ್ಷೇತ್ರಗಳಿಗೆ ಈ ಹಣವನ್ನು ವಿನಿಯೋಗಿಸಿದಲ್ಲಿ ಅತ್ಯುತ್ತಮವಾದ ಫಲಿತಾಂಶ ಬರಬಹುದು ಎಂದು ಚಿಂತಿಸಿ ಸಲಹೆ ನೀಡಲು ಚೈಲ್ಡ್ ರೈಟ್ಸ್ ಟ್ರಸ್ಟಗೆ ಕೇಳಿಕೊಳ್ಳಲಾಯಿತು.
  • ಗ್ರಾ.ಪಂ, ತಾ.ಪಂ. ಜಿ.ಪಂ. ಚುನಾಯಿತ ಪ್ರತಿನಿಧಿಗಳಿಗೆ ಮೈಸೂರಿನಲ್ಲಿರುವ ಎಸ್.ಐ.ಆರ್.ಡಿ. ಸಂಸ್ಥೆ ಪ್ರತಿ ವರ್ಷ ನೀಡುವ ತರಬೇತಿಯಲ್ಲಿ ಮಕ್ಕಳ ಹಕ್ಕುಗಳ ವಿಷಯ ಪ್ರಸ್ತಾಪಿಸಲು ನಿರ್ದೇಶಿಸಲಾಯಿತು. ಈ ಕುರಿತು ಶ್ರೀ ಅಶೋಕ್ ಆನಂದ್ ಅವರನ್ನು ಸಂಪರ್ಕಿಸಲು ಚೈಲ್ಡ್ ರೈಟ್ಸ್ ಟ್ರಸ್ಟಗೆ ಸೂಚಿಸಲಾಯಿತು.
  • ಇಲಾಖೆಯ ವಿವಿಧ ಅಧಿಕಾರಿಗಳಿಗೆ ಮಕ್ಕಳ ಹಕ್ಕುಗಳ ಒಡಂಬಡಿಕೆ ಮತ್ತು ಅದರ ಜಾರಿ ಕುರಿತು ತರಬೇತಿ ನೀಡುವ ಆವಶ್ಯಕತೆಯನ್ನು ಕಾರ್ಯದರ್ಶಿಗಳು ಮುಂದಿಟ್ಟು ಈ ಕುರಿತು ಕ್ರಮ ಕೈಗೊಳ್ಳಲು ಸಂಬಂಧಿಸಿದವರಿಗೆ ಸೂಚಿಸಿದರು.
  • ಕುವೆಂಪು ಹಾಗೂ ಹಂಪಿ ವಿಶ್ವವಿದ್ಯಾಲಯದಲ್ಲಿ ಪಂಚಾಯತ್ ರಾಜ್ ಕುರಿತು ನಡೆದಿರುವ ಸರ್ಟಿಫಿಕೇಟ್ ಪದವಿಯಲ್ಲಿ ಮಕ್ಕಳ ಹಕ್ಕುಗಳ ಕುರಿತು ವಿಷಯ ಅಳವಡಿಸಲು ಸೂಚಿಸುವುದಾಗಿಯೂ ಹಾಗೂ ಇದಕ್ಕೆ ಚೈಲ್ಡ್ ರೈಟ್ಸ್ ಟ್ರಸ್ಟ್ ಸಹಾಯ ಕೋರಿದರು.
  • ಪ್ರತೀ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳನ್ನು ಕುರಿತು ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳನ್ನು ಗುರುತಿಸಿ, ಅವುಗಳ ಸಭೆ ಕರೆಯುವುದು ಹಾಗೂ ಅಲ್ಲಿಂದ ಸಂಭವನೀಯ ಸಂಪನ್ಮೂಲ ವ್ಯಕ್ತಿಗಳ ಪಟ್ಟಿಯನ್ನು ಇಲಾಖೆಗೆ ನೀಡಲು ಚೈಲ್ಡ್ ರೈಟ್ಸ್ ಟ್ರಸ್ಟಗೆ ಕಾರ್ಯದರ್ಶಿಗಳು ಸೂಚಿಸಿದರು. 
  • ಆರ್.ಡಿ.ಪಿ.ಆರ್. ಪ್ರಕಟಿಸುವ ಕರ್ನಾಟಕ ವಿಕಾಸ ಪತ್ರಿಕೆಯಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಸ್ನೇಹಿ ಪಂಚಾಯತ್ ಕುರಿತು ವರದಿಗಳು, ಪ್ರಕರಣಗಳು, ಕಾನೂನು ವಿಚಾರಗಳನ್ನು ಪ್ರಕಟಿಸಲು ಸಂಪಾದಕರಿಗೆ ಸೂಚಿಸಿ ಈ ಕುರಿತು ಮಾಹಿತಿಯನ್ನು ನೀಡಲು ಚೈಲ್ಡ್ ರೈಟ್ಸ್ ಟ್ರಸ್ಟನ್ನು ಕೋರಲಾಯಿತು.

ಇನ್ನೇನು ಬೇಕು. ನಮ್ಮ ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತು! ೨೦೦೬ರ ಅಕ್ಟೋಬರ್ ‌ಹೊತ್ತಿಗೆ ಎಲ್ಲ ಗ್ರಾಮ ಪಂಚಾಯತಿಗಳನ್ನು ಉದ್ದೇಶಿಸಿ ಮಕ್ಕಳ ಸ್ಥಿತಿಗತಿಗಳ ಅಂಕಿಅಂಶಗಳನ್ನು ಎದುರಿಟ್ಟುಕೊಂಡು ʼಮಕ್ಕಳ ಹಕ್ಕುಗಳ ಗ್ರಾಮಸಭೆʼ ನಡೆಸಲು ಸುತ್ತೋಲೆ ಸರ್ಕಾರದಿಂದ ಹೊರಬಿತ್ತು.  

ಆದರೆ ಇದು ಅಷ್ಟು ಸುಲಭವಾಗಿ ಆಗಲಿಲ್ಲ. ಈ ವಿಶಿಷ್ಟ ಗ್ರಾಮಸಭೆ ನಡೆಸಲು ಮಕ್ಕಳನ್ನು ಕುರಿತು ಅಂಕಿಅಂಶಗಳನ್ನು ಸಂಗ್ರಹಿಸಿರಬೇಕು, ಅದನ್ನು ಆಧರಿಸಿ ಸಭೆಯಲ್ಲಿ ಚರ್ಚೆ ನಡೆಸಬೇಕು ಎಂದಾಗ ಅದೆಷ್ಟು ಪ್ರತಿರೋಧಗಳು. ಸರ್ಕಾರದವರಷ್ಟೇ ಅಲ್ಲ ಸರ್ಕಾರೇತರರಿಂದಲೂ!  ಮೊದಮೊದಲು ಆಸಕ್ತ ಪಿ.ಡಿ.ಓ. (ಪಂಚಾಯತ್ ‌ಅಭಿವೃದ್ಧಿ ಅಧಿಕಾರಿಗಳು), ಕಾರ್ಯದರ್ಶಿಗಳು ಕೆಲವು ಸ್ವಯಂಸೇವಾ ಸಂಘಟನೆಗಳ ಪ್ರಯತ್ನದಿಂದ ಅಲ್ಲಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳು ನಡೆದವು. ಆಗಲೇ ಏನೂ ಮ್ಯಾಜಿಕ್‌ ಆಗಲಿಲ್ಲ. ಆದರೆ ನಿಧಾನವಾಗಿ ಆಗತೊಡಗಿತು.

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನದ ಗೆಳೆಯರು ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ಉತ್ಸಾಹದಿಂದ ಪಂಚಾಯತಿಗಳೊಡನೆ ಸೇರಿ ಆಯೋಜಿಸಿದರು. ಎಲ್ಲೆಲ್ಲೂ ಅದ್ಭುತವಾದ ಪ್ರತಿಕ್ರಿಯೆ. ಮಕ್ಕಳಿಗೆ ಮೊದಲ ಬಾರಿಗೆ ಗ್ರಾಮಪಂಚಾಯತಿ ಮಟ್ಟದಲ್ಲಿ ತಮ್ಮ ಅಹವಾಲು, ನೋವು, ಆಸೆ ಆಕಾಂಕ್ಷೆಗಳನ್ನು ಅಧಿಕೃತವಾಗಿ ಹೇಳಲೊಂದು ಅವಕಾಶ.

ಅದನ್ನು ಆಲಿಸುವ ಗಮನಕೊಡುವ ಮನಸ್ಸುಗಳು ಇದೆ ಎಂಬುದು ತಿಳಿಯಿತು. ನಾವು ಗೆಳೆಯ ರಾಘವೇಂದ್ರ ಮತ್ತು ಅವನ ಸಹವರ್ತಿಗಳ ನೆರವಿನಿಂದ ಬಳ್ಳಾರಿಯ ಹಲವಾರು ಗ್ರಾಮ ಪಂಚಾಯತಿಗಳಲ್ಲಿ ಸಭೆಗಳನ್ನು ಆಯೋಜಿಸಲು ಗ್ರಾಮ ಪಂಚಾಯತಿಗಳಿಗೆ ಬೆಂಬಲ ನೀಡಿದೆವು.

ಮಕ್ಕಳ ಹಕ್ಕುಗಳ ಗ್ರಾಮಸಭೆ ನಡೆಸುವುದರ ಬಗ್ಗೆ ಒಂದು ಕೈಪಿಡಿಯನ್ನು ರಚಿಸಿ, ನನ್ನನ್ನ ಹಳ್ಳಿಗಳತ್ತ ದೂಡಿದ ಸಮಾಜಕಾರ್ಯದ ಕಣಸುಗಾರ ನನ್ನ ಗುರುಗಳಾದ ಪ್ರೊ. ಎಚ್.ಎಂ. ಮರುಳಸಿದ್ದಯ್ಯನವರ ಮುಂದೆ ಇಟ್ಟೆವು. ಅವರು ಪ್ರೀತಿಯಿಂದ ಗ್ರಾಮಗಳ ಮಕ್ಕಳ ಬದುಕು ಹಸನುಗೊಳಿಸುವುದು ಗ್ರಾಮಪಂಚಾಯತಿಗಳ ಜವಾಬ್ದಾರಿ ಏಕೆ ಪ್ರಮುಖ ಎಂದು ಮುನ್ನುಡಿ ಬರೆದುಕೊಟ್ಟರು.

೨೦೦೭ರಲ್ಲಿ ಹಲವು ಸಂಸ್ಥೆಗಳು ಜೊತೆಗೂಡಿದವು. ಮೈಸೂರಿನ ಎಸ್.ಐ.ಆರ್.ಡಿ (ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ)ಯಲ್ಲಿ ದೊಡ್ಡ ಪ್ರಮಾಣದ ತರಬೇತಿಯಾಯಿತು. ನಮ್ಮೊಡನೆ ದ ಕನ್ಸರ್ನ್ಡ್‌ ಫಾರ್‌ ವರ್ಕಿಂಗ್ ‌ಚಿಲ್ಡ್ರನ್ ‌ಸಂಸ್ಥೆಯ ಗೆಳೆಯರು ಸೇರಿದರು. ತರಬೇತಿ ನಡೆಸಲು ಏರ್ಪಾಡಿನ‌ಹಿಂದೆ ಆಗ ಪಂಚಾಯತ್ ರಾಜ್ ನಿರ್ದೇಶಕರಾಗಿದ್ದ ಅಶ್ರಪುಲ್ ಹಸನ್ ಇದ್ದರು. 

ನಮ್ಮೆಲ್ಲರ ಒಟ್ಟೂ ಪ್ರಯತ್ನದಿಂದ ಮೈಸೂರಿನ ಸಮೀಪದ ಹೆರೋಹಳ್ಳಿ ಗ್ರಾಮ ಪಂಚಾಯತಿಯಲ್ಲಿ ʼಮಕ್ಕಳ ಹಕ್ಕುಗಳ ಗ್ರಾಮಸಭೆʼ ನಡೆಯಿತು. ಅದ್ಭುತವಾದ ಅನುಭವ ಎಲ್ಲರಿಗೂ ದೊರಕಿತು. ಅದರ ದಾಖಲೆಯನ್ನು ಎಸ್.‌ಐ.ಆರ್.ಡಿ. ಸೊಗಸಾಗಿ ಮಾಡಿದ್ದಾರೆ. ಈ ಮುಂದಿನ ಲಿಂಕ್‌ನಲ್ಲಿ ನೋಡಿ. https://www.youtube.com/watch?v=RTRKbdnGzkg

ಇದೇ ಪ್ರಯತ್ನ ಮುಂದೆ ಶಾಲಿನಿ ರಜನೀಶ್ ‌ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಕಾರ್ಯದರ್ಶಿಗಳಾಗಿದ್ದಾಗ ಧಾರವಾಡದ ಬೇಲೂರದಲ್ಲಿ ನಡೆಯಿತು (೧೮ ಫೆಬ್ರವರಿ ೨೦೧೨). ಅಲ್ಲಿಗೆ ಆಗಿನ ಇಲಾಖಾ ಸಚಿವರಾಗಿದ್ದ ಜಗದೀಶ್‌ ಶೆಟ್ಟರ್ ‌ಅವರು ಆಗಮಿಸಿ ಮಕ್ಕಳ ಹಕ್ಕುಗಳ ಗ್ರಾಮಸಭೆಯ ಯಶೋಗಾಥೆಗಳ ಸಂಗ್ರಹವನ್ನು ಬಿಡುಗಡೆ ಮಾಡಿ ಇಡೀ ಪ್ರಕ್ರಿಯೆಯ ಪ್ರಾಮುಖ್ಯತೆ ಕುರಿತು ತಮ್ಮ ಸರ್ಕಾರದ ಬದ್ಧತೆ ತೋರಿದರು.

ಮೈಸೂರಿನಲ್ಲಿ ನಡೆದ ತರಬೇತಿಯಲ್ಲಿ ಭಾಗವಹಿಸಿದ್ದ ಮದ್ದೂರಿನ ನಗರಕೆರೆ ಗ್ರಾಮ ಪಂಚಾಯತಿಯ ನಲಿ ಕೃಷ್ಣ ಇಡೀ ಪ್ರಯೋಗಕ್ಕೆ ಮನಸೋತು ಹೋದರು. ಆಗಿನಿಂದಲೂ ಗ್ರಾಮ ಪಂಚಾಯತಿ ಮತ್ತು ಮಕ್ಕಳ ವಿಚಾರಕ್ಕೆ ನಲಿ ಕೃಷ್ಣ ರಾಯಭಾರಿಗಳಾದರು. ನಾನೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹತ್ತಾರು ಕಡೆ ಗ್ರಾಮಸಭೆಗಳಲ್ಲಿ ಭಾಗವಹಿಸಿ ಅಲ್ಲಿನ ಉತ್ಸಾಹ, ಅವಕಾಶ, ಸಾಧ್ಯತೆಗಳನ್ನು ಅನುಭವಿಸಿ ರೋಮಾಂಚನಗೊಂಡಿದ್ದೇನೆ.

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಮಕ್ಕಳ ಬದುಕುವ ಹಕ್ಕುಗಳು, ರಕ್ಷಣೆ ಹೊಂದುವ ಹಕ್ಕುಗಳು, ಅಭಿವೃದ್ಧಿ ಹೊಂದುವ ಹಕ್ಕುಗಳು ವಿಚಾರಗಳನ್ನು ಜನ ಸಾಮಾನ್ಯವಾಗಿ ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಮಾನ್ಯ ಮಾಡುತ್ತಾರೆ ಕೂಡಾ. ಆದರೆ ಮಕ್ಕಳೂ ಪ್ರಜೆಗಳು ಅವರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಮತ್ತು ತಮ್ಮನ್ನು ಕುರಿತು ಆಗುವ ನಿರ್ಧಾರಗಳ ಸಂದರ್ಭದಲ್ಲಿ ಅವರಿಗೂ ಭಾಗವಹಿಸುವ ಹಕ್ಕಿದೆ ಎಂಬುದನ್ನು ವಯಸ್ಕರು ಮತ್ತು ವ್ಯವಸ್ಥೆ ಸುಲಭವಾಗಿ ಒಪ್ಪುವುದಿಲ್ಲ.

ಮಕ್ಕಳ ಹಕ್ಕುಗಳ ಗ್ರಾಮಸಭೆಯ ಮೂಲಕ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೧೨ – ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಮತ್ತು ಪರಿಚ್ಛೇದ ೧೩ – ಅಭಿಪ್ರಾಯ ಸ್ವಾತಂತ್ರ್ಯ ಜಾರಿಯಾಗುವ ಯತ್ನಗಳು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಆರಂಭವಾಯಿತು ಎನ್ನಬಹುದು.  

ಮುಂದಿನದೆಲ್ಲವೂ ಕ್ಷಿಪ್ರ ಬೆಳವಣಿಗೆಗಳು. ೨೦೦೬ ಮತ್ತು ೨೦೦೭ರ ಅನುಭವ ಹಲವರ ಮೇಲೆ ಪ್ರಭಾವ ಬೀರಿತು. ಮೊದಲ ಬಾರಿಗೆ ರಾಜ್ಯದುದ್ದಕ್ಕೂ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳಿಗೆ ಸ್ಥಳೀಯವಾಗಿ ಆಲಿಸುವ ಕಿವಿಗಳು, ಮನಸ್ಸುಗಳು ಸಿದ್ಧವಾದವು! ಜೊತೆಗೆ ಪರಿಹಾರಗಳೂ ಕೂಡ.

ಉದಾಹರಣೆಗಳು: ( ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳ ಯಶೋಗಾಥೆಗಳು ಪುಸ್ತಕದಿಂದ) 

  • ನಮ್ಮ ಶಾಲೆಗೆ ಶಿಕ್ಷಕರು ಬರುತ್ತಿಲ್ಲ ಯಾವಾಗೋ ಒಂದು ದಿನ ಬಂದರೆ ಆಯಿತಷ್ಟೆ. ಬಂದವರು ಏನು ಮಾಡಿದರೆಂದು ಕೇಳುವುದಿಲ್ಲ ಇತ್ಯಾದಿ.. ಹೇಳಿದ ಮಕ್ಕಳ ಸಮಸ್ಯೆಗೆ ಮರುದಿನದಿಂದಲೇ ಪರಿಹಾರ ಸಿಕ್ಕಿ ಶಾಲೆಗೆ ಬಾರದ ಶಿಕ್ಷಕರನ್ನು ಕರೆಸಿದ ಕೀರ್ತಿ ರಾಯಚೂರು ಜಿಲ್ಲೆಯ ಭೂಪೂರ ಗ್ರಾಮ ಪಂಚಾಯಿತಿಯ ಮಕ್ಕಳ ಗ್ರಾಮಸಭೆಗೆ ಸಲ್ಲುತ್ತದೆ (೨೦೦೯).
  • ಮೈಸೂರಿನ  ಹೆರೋಹಳ್ಳಿ ಗ್ರಾಮಪಂಚಾಯತಿಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಲೂ ಹಣ ಅಪೇಕ್ಷಿಸುತ್ತಾರೆ ಎಂದು ಮಗುವೊಂದು ಕೊಟ್ಟ ದೂರಿಗೆ ಸ್ಪಂದಿಸಿದ ವೈದ್ಯರು ಮುಂದೆ ಹಾಗಾಗದ ಹಾಗೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು (೨೦೦೭).
  • ಪಂಚಾಯಿತಿಯಲ್ಲಿ ಮನೆಗಳಿಗೆ ನೀರು ಬಿಡುವವರು ಬೆಳಗ್ಗೆ 10 ಗಂಟೆಗೆ ಬಿಡುತ್ತಿದ್ದರಿಂದ ಶಾಲೆಗೆ ಹೋಗಲಿಕ್ಕಾಗದ ಮಕ್ಕಳ ಸಮಸ್ಯೆಗೆ ಪರಿಹಾರ ಒದಗಿಸಿಕೊಟ್ಟಿದ್ದು, ಜಾಲಿಹಾಳ ಗ್ರಾಮ ಪಂಚಾಯಿತಿಯಲ್ಲಿ ನಡೆದ ಮಕ್ಕಳ ಗ್ರಾಮಸಭೆ. (೨೦೧೧)
  • ಹಲವಾರು ವರ್ಷಗಳಿಂದ ಅಂಗನವಾಡಿ ಕಟ್ಟಡವಿಲ್ಲದೆ ಹಳೇ ಕಟ್ಟದಲ್ಲಿದ್ದ ಮಾದಿಗ ಸಮುದಾಯದ ಮಕ್ಕಳಿಗೆ ಅಂಗನವಾಡಿ ಕಟ್ಟಡ ಬಂದಿದ್ದು ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲೂಕಿನ ಕುಳಲಿ ಗ್ರಾಮ ಪಂಚಾಯಿತಿಯ ಮಕ್ಕಳ ಗ್ರಾಮಸಭೆಗೆ ಸಲ್ಲುತ್ತದೆ (೨೦೦೮).
  • ಶನಿವಾರ ರಾತ್ರಿ , ಭಾನುವಾರ ಹಗಲು ರಾತ್ರಿ ನಮ್ಮ ತರಗತಿಗಳ ಮುಂಭಾಗ ಇಸ್ಪೀಟ್ ಕ್ಲಬ್ ಆಗುತ್ತೆ. ಇಲ್ಲಿ ಬೀಡಿ, ಸಿಗರೇಟ್‌, ಪಾನ್ ಪರಾಗ್ ಪ್ಯಾಕೇಟ್ ಗಳು, ಸಾರಾಯಿ ಬಾಟ್ಲು, ಕಾಂಡೋಮ್‌ ರಬ್ಬರ್ ಚೀಲ, ಅಲ್ಲೇ ಮಾಡಿರುವ ವಾಂತಿ ಇದನ್ನೆಲ್ಲಾ ನಮಗೆ ಶುದ್ಧ ಮಾಡಕ್ಕೆ ಬೇಜಾರು ಎನ್ನುವ ಮಕ್ಕಳ ಸಮಸ್ಯೆಗೆ ಸ್ಪಂದಿಸಿದ ಪಂಚಾಯಿತಿ ಕೂಡಲೇ ಕ್ರಮ ಕೈಗೊಂಡಿತು. ಈಗ ಆ ಶಾಲೆ ಆವರಣ ಬದಲಾಗಿದೆ. ಸೋಮವಾರ ಬೆಳಗಾದರೆ ಮಕ್ಕಳು ನಡುಗಲ್ಲ, ನಗ್ತಾ ನಗ್ತಾ ಬರ್ತಾರೆ.  ಇದು ಬಳ್ಳಾರಿ ಜಿಲ್ಲೆಯ ೧೦ ಮುದ್ದಾಪುರ ಗ್ರಾಮ ಪಂಚಾಯತಿಯಲ್ಲಿ (೨೦೦೬).
  • ಮಂಡ್ಯದ ನಗರಕೆರೆ ಗ್ರಾಮ ಪಂಚಾಯತಿಯು ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಬಂದ ಪ್ರಸ್ತಾವನೆಗೆ ಸ್ಪಂದಿಸಿ ಶಾಲೆಗೆ ಕಾಂಪೌಂಡ್‌ ಗೋಡೆಯನ್ನು ಕಟ್ಟಿಸಲು ನಿರ್ಧರಿಸಿ ಅದನ್ನು ತಮ್ಮ ಪಂಚಾಯತಿಯ ಯೋಜನೆಯಲ್ಲಿ ಸೇರಿಸಿಕೊಂಡು ನಿರ್ಮಿಸಿತು. (೨೦೧೦)

ಈ ಎಲ್ಲವೂ ಮುದ್ರಣ ಮತ್ತು ದೃಷ್ಯ ಮಾಧ್ಯಮಗಳಲ್ಲಿ ದಾಖಲಾಯಿತು. ಎಲ್ಲ ಕಡೆಯೂ ಮಕ್ಕಳ ಈ ಅನುಭವ ಸುಂದರವೇ ಆಗಲಿಲ್ಲ. ಸಂಘರ್ಷವೂ ಇತ್ತು. ʼಮಕ್ಕಳಿಗೆ ದೊಡ್ಡವರೆಲ್ಲಾ ಏನೋ ಹೇಳಿಕೊಟ್ಟು ಕಳಿಹಿಸುತ್ತಾರೆ. ಮಕ್ಕಳಿಗ್ಯಾಕೆ ಪಂಚಾಯತಿ ವಿಚಾರ… ಬಲೇ ನಾಲಗೆ ಹರಿಬಿಡ್ತಾವೆ… ಅಲ್ಲ ದೊಡ್ಡೋರ್ಗೇ ಬೇಡ್ದಿರೋ ವಿಚಾರ ಮಕ್ಕಳಿಗ್ಯಾಕೆ… ಯಾವೋನವ್ನು ಮಕ್ಕಳಿಗೆ ಇದೆಲ್ಲಾ ಕಲಿಸ್ದೋನು… ಹೀಗೆ ಇನ್ನೂ ಏನೇನೋ ಬರೆಯಲಾಗದವು ಕೂಡಾ! 

ಧಾರವಾಡದ ಉಪ್ಪಿನಬೆಟಗೇರಿ ಗ್ರಾಮಪಂಚಾಯತಿಯವರು ಗ್ರಾಮಸಭೆಯಲ್ಲಿ ಮಕ್ಕಳು ಕೇಳಿದ ವಿಚಾರಗಳಿಗೆ ಕೆರಳಿ, ಗ್ರಾಮಸಭೆಯನ್ನೇ ಬರ್ಕಾಸ್ತು ಮಾಡಿ, ಮಕ್ಕಳ ಶಾಲೆಗೆ ಹೋಗಿ, ಮುಖ್ಯಸ್ಥರೆದುರು ಪ್ರತಾಪ ತೋರಿ ಮಕ್ಕಳಿಂದ ʼಕ್ಷಮಾಪಣೆ ಪತ್ರʼ ಬರೆಸಿಕೊಂಡರು. ಅದರ ಮಾರನೇ ದಿನ ಅದೇ ಮಾಧ್ಯಮಗಳಲ್ಲಿ ಸುದ್ದಿಯಾಯಿತು. ನಂತರದ ದಿನ ಅದೇ ಗ್ರಾಮ ಪಂಚಾಯತಿ ಅದೇ ಮಕ್ಕಳನ್ನು ಮತ್ತೆ ಆಹ್ವಾನಿಸಿ ಮತ್ತೊಮ್ಮೆ ʼಮಕ್ಕಳ ಹಕ್ಕುಗಳ ಗ್ರಾಮಸಭೆʼಯನ್ನು ಸಂಪೂರ್ಣ ಗೌರವಾದರಗಳಿಂದ ನಡೆಸಿತು.

ಹಿರಿಯ ಐ.ಎ.ಎಸ್‌. ಅಧಿಕಾರಿ ಶಾಲಿನಿ ರಜನೀಶ್‌ ಅವರು ಆಡಳಿತ ಸುಧಾರಣೆ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾಗಿದ್ದಾಗ ಹೊರತಂದ ಸಿಟಿಝನ್‌ ಸೆಂಟ್ರಿಕ್‌ ಇನ್ನೋವೇಷನ್ಸ್‌ ಇನ್‌ ಕರ್ನಾಟಕ (೨೦೧೨) ಎಂಬ ಸಂಕಲನದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ, ಹೇಗೆ ಒಂದು ಸ್ವಯಂಸೇವಾ ಸಂಘಟನೆಯ ಅನುಭವ ಸರ್ಕಾರದ ಕಾರ್ಯ ಯೋಜನೆಯ ಭಾಗವಾಯಿತು ಎಂದು ದಾಖಲಿಸಿದರು.

ಈ ಅನುಭವಗಳನ್ನೆಲ್ಲಾ ಕಿಲಾ – ಕೇರಳ ಇನ್ಸ್ಟಿಟ್ಯೂಟ್ ‌ಫಾರ್‌ ರೂರಲ್‌ ಡೆವೆಲಪ್‌ಮೆಂಟ್ ‌ನಲ್ಲಿ ಮಂಡಿಸಿ ತರಬೇತಿ ನೀಡಲು  ಗೆಳೆಯ ಡಾ. ಪೀಟರ್‌ ರಾಜ್‌ ಆಹ್ವಾನಿಸಿದರು. ನನ್ನ ಸಹೋದ್ಯೋಗಿ ನಾಗರಾಜ ಬಿ.ಜಿ. ನಾನು ಹಲವು ಬಾರಿ ಕೇರಳಕ್ಕೆ ಹೋಗಿಬಂದೆವು.

ದೆಹಲಿಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಇನ್ಸ್ಟಿಟ್ಯೂಷನ್ ‌ಫಾರ್ ಸೋಷಿಯಲ್‌  ಸೈನ್ಸಸ್‌ ನಡೆಸಿದ ಸಮ್ಮೇಳನದಲ್ಲಿ ಮಂಡಿಸಲು ಡಾ. ಶಾಂತಾ ಸಿನ್ಹಾ ಆಹ್ವಾನಿಸಿದರು. ನಿಪ್ಸಿಡ್ ‌ಹಲವು ಸುತ್ತುಗಳಲ್ಲಿ ದಕ್ಷಿಣ ರಾಜ್ಯಗಳ ಅಧಿಕಾರಿಗಳಿಗೆ ಮಕ್ಕಳ ಹಕ್ಕುಗಳ ಗ್ರಾಮಸಭೆ ಕುರಿತು ವಿಚಾರ ತಿಳಿಸಲು ಕರೆಯುತ್ತಲೇ ಇತ್ತು. ಈ ಅನುಭವಗಳನ್ನು ತಿಳಿಯಲು ಒರಿಸ್ಸಾದ ಶಾಸಕರು ೨೦೧೬ರಲ್ಲಿ ಬೆಂಗಳೂರಿಗೆ ಬಂದಿದ್ದರು.

ವರ್ಷ ವರ್ಷ ಮಕ್ಕಳ ಹಕ್ಕುಗಳ ಗ್ರಾಮಸಭೆಯ ವ್ಯಾಪ್ತಿ, ಕಲ್ಪನೆ, ಸಾಧ್ಯತೆಗಳು ವಿಸ್ತರಿಸುತ್ತಾ ಸಾಗುತ್ತಿದೆ. ಎಸ್.‌ಐ.ಆರ್.‌ಡಿ.ಯ ಗ್ರಾಮಪಂಚಾಯತಿ ಸದಸ್ಯರ ತರಬೇತಿ ಕೈಪಿಡಿಯಲ್ಲಿ ಮಕ್ಕಳ ಹಕ್ಕುಗಳು ಸೇರಿದೆ. ಈ ಕಲ್ಪನೆಗೀಗ ಹಲವು ವ್ಯಕ್ತಿಗಳು, ಸಂಸ್ಥೆಗಳು ವೈವಿಧ್ಯಮಯವಾದ ಸಾಧ್ಯತೆಗಳನ್ನು ಸೇರಿಸುತ್ತಾ ಮಕ್ಕಳ ಹಕ್ಕುಗಳ ಕಲ್ಪನೆಗೆ ವಾರಸುದಾರರಾಗುತ್ತಿದ್ದಾರೆ. ಬಹಳ ಸಂತೋಷಕರ ಬೆಳವಣಿಗೆ. ೨೦೦೬ರಿಂದ ಈ ವಿಶಿಷ್ಟವಾದ ಪ್ರಯೋಗದಲ್ಲಿ ತೊಡಗಿಕೊಂಡಿರುವ ಮಕ್ಕಳು ಪ್ರಾಯಶಃ ಪ್ರಜಾಪ್ರಭುತ್ವ ತತ್ತ್ವಗಳನ್ನು ಮೈಗೂಡಿಸಿಕೊಂಡಿದ್ದಾರೆ ಎನ್ನಬಹುದು.

ಸದ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ‌ರಾಜ್‌ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಉಮಾ ಮಹದೇವನ್ ‌ಇಮ್ಮಡಿಯಾದ ಉತ್ಸಾಹದಿಂದ ಕಳೆದೆರೆಡು ವರ್ಷಗಳಿಂದ ಮಕ್ಕಳ ಹಕ್ಕುಗಳ ಗ್ರಾಮಸಭೆಗಳನ್ನು ನಡೆಸಲು ಒತ್ತಾಸೆಯಾಗಿದ್ದಾರೆ. ಈ ವರ್ಷವೂ ನವೆಂಬರ್‌ತಿಂಗಳ ೧೩ರಿಂದ ಆರಂಭವಾಗಲಿರುವ ಮಕ್ಕಳ ಹಕ್ಕುಗಳ ತ್ರೈಮಾಸಿಕದಲ್ಲಿ ʼಮಕ್ಕಳ ಹಕ್ಕುಗಳ ಗ್ರಾಮಸಭೆʼಗಳು ಪ್ರಮುಖವಾಗಿದೆ. ನೀವೂ ಭಾಗವಹಿಸುವಿರಿ ತಾನೇ? 

‍ಲೇಖಕರು ವಾಸುದೇವ ಶರ್ಮ

November 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: