ಇಲ್ಲವಾದರು ಟಿಎಸ್ಸಾರ್: ಮುಗಿದ ಪ್ರಜಾವಾಣಿ ಆದಿ ಪರ್ವ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. 

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

। ಕಳೆದ ವಾರದಿಂದ ।

ಸಾಪ್ತಾಹಿಕ ಪುರವಣಿ ಪ್ರಜಾವಾಣಿ ಓದುಗರ ಕಣ್ಮಣಿ.ಅಂದಿನಿಂದ ಇಂದಿನವರೆಗೆ ಓದುಗರು ಸಾಪ್ತಾಹಿಕ ಪುರವಣಿಯನ್ನು ಅತಿಯಾದ ನಿರೀಕ್ಷೆ, ಕಟ್ಟೆಚ್ಚರಗಳಿಂದ ನೋಡುತ್ತಾ ಬಂದಿದ್ದಾರೆ. ತಮ್ಮದೊಂದು ಕಥೆ, ಕವಿತೆ, ತಮ್ಮ ಪುಸ್ತಕ ವಿಮರ್ಶೆ ಪ್ರಜಾವಾಣಿ ಸಾಪು'ದಲ್ಲಿ ಬರಬೇಕೆಂದು ಹಾತೊರೆಯುವ, ಅದೊಂದು ಮಾನ್ಯತೆಯೆಂದು ಹಿಗ್ಗುವ ಲೇಖಕರು ಇದ್ದಾರೆ. ಇದು ‘ಸಾಪು’ ಸ್ವಯಂ ರೂಪಿತ ಗುಣಮಟ್ಟದ ಹಿರಿಮೆ.

ತಾನೇ ರೂಪಿಸಿದ, ಕಟ್ಟಿದ ಗುಣಮಟ್ಟವನ್ನು ಎಲ್ಲ ಕಾಲಕ್ಕೂ ಕಾಪಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಅದಕ್ಕೆ ನಿರಂತರವಾಗಿ ಸೃಜನಶೀಲ ಪ್ರತಿಭಾನ್ವೇಷಣೆ ನಡೆಯುತ್ತಲೇ ಇರಬೇಕಾಗುತ್ತದೆ. ನಾವು ಇಂಥ ಕಾರ್ಯದಲ್ಲಿ ಅವಿರತ ತೊಡಗಿದ್ದದಾಗ್ಯೂ ಓದುಗರ ನಿರೀಕ್ಷೆಯನ್ನು ತಣಿಸಿದೆವು ಎಂದು ಖಾತ್ರಿಯಾಗಿ ಹೇಳಲಾಗದು.

“ಇತ್ತೀಚೆಗೆ ಒಳ್ಳೆಯ ಕಥೆಗಳು ಬರುತ್ತಿಲ್ಲ, ಹೊಸ ರೀತಿಯ ಕಥೆಗಳು ಬರುತ್ತಿಲ್ಲ” ಎನ್ನುವ ಅಸಮಾಧಾನಗಳು ವಾಚಕರಿಂದ ಕೇಳಿ ಬರುತ್ತಲೇ ಇರುತ್ತವೆ. 76-77ರ ಅವಧಿಯಲ್ಲಿ ಒಮ್ಮೆ ವಾಚಕ ಮಹಾಶಯರೊಬ್ಬರು ʼಸಾಪು’ದಲ್ಲಿ ಪ್ರಕಟವಾದ ಒಂದು ಕಥೆಯನ್ನು ವಿಮರ್ಶಿಸಿ,ಇದು ʼಪ್ರವಾ’ಯಲ್ಲಿ ಪ್ರಕಟವಾಗಲು ಯೋಗ್ಯವಲ್ಲದ ಕಥೆ. ಇತ್ತೀಚೆಗೆ ಒಳ್ಳೆಯ ಕಥೆಗಳು ಪ್ರಕಟವಾಗುತ್ತಿಲ್ಲ” ಎಂದು ನೇರವಾಗಿ ಸಂಪಾದಕರ ಹೆಸರಿಗೇ ಪತ್ರ ಬರೆದಿದ್ದರು. ಕಥೆಯನ್ನು ಓದಿ ನೋಡಿದ ಟಿಎಸ್ಸಾರ್, ತಿಂಗಳ ಸಭೆಯಲ್ಲಿ ಈ ಪತ್ರವನ್ನು ಪ್ರಸ್ತಾಪಿಸಿ, ಏಕೆ ಹೀಗೆ? ಇದೊಂದು ತೀರಾ ಸಾಧಾರಣವಾದ ಕಥೆ. ಇದನ್ನೇಕೆ ಆಯ್ಕೆ ಮಾಡಿದಿರಿ?” ಎಂದು ಕೇಳಿದರು.

“ಇತ್ತೀಚೆಗೆ ಒಳ್ಳೆಯ ಕಥೆಗಳೇ ಬರುತ್ತಿಲ. ಬಂದಿದ್ದರಲ್ಲೇ ಒಂದನ್ನು ಹಾಕಬೇಕಾಗಿದೆ” ಎಂದು ವೈಕುಂಠರಾಜು ಸಮಜಾಯಿಷಿ ಕೊಟ್ಟರು. “ಈಸ್ ಇಟ್! ಇಫ್ ಯೂ ಡೋಂಟ್ ಹ್ಯಾವ್ ಎ ಸ್ಟೋರಿ, ಯು ರೈಟ್ ಒನ್, ಡೋಂಟ್ ಪಬ್ಲಿಷ್ ರಬ್ಬಿಷ್” ಎಂದು ಸಂಪಾದಕರು ಕಡ್ಡಿ ತುಂಡು ಮಾಡಿದಂತೆ ಖಡಾಖಡಿ ಹೇಳಿದರು.

ಹೌದು, ಎಲ್ಲ ಕಾಲಕ್ಕೂ ಒಳ್ಳೆಯ ಲೇಖನಗಳು, ಕಥೆಗಳು, ವಿಮರ್ಶೆಗಳು ಬರುವುದಿಲ್ಲ. ಹಾಗೆಂದು ಪುರವಣಿಯ ಎಲ್ಲ ಕಾಲಂಗಳನ್ನು ನಾವೇ ತುಂಬಲಿಕ್ಕಾಗುತ್ತದೆಯೆ? ಎಂದು ನಾವು ಯೋಚಿಸುವಂತಾಯಿತು. ʼಯು ರೈಟ್ ಒನ್’ಎನ್ನುವ ಮಾತಿನ ಅರ್ಥ ಮ್ಯಾಗಸೀ಼ನ್ ನಿರ್ವಹಿಸುವ ಉಪಸಂಪಾದಕರೇ ಬರೆಯಬೇಕು ಎನ್ನುವ ವಾಚ್ಯಕ್ಕೇ ಸೀಮಿತಗೊಂಡಿರಲಿಲ್ಲ. ಒಳ್ಳೆಯ ಕಥೆಗಳನ್ನು ಬರೆಸಬೇಕು ಎನ್ನುವ ಇಂಗಿತವಿತ್ತು ಅದರಲ್ಲಿ. ಜರ್ನಲಿಸ್ಟ್ ಷುಡ್ ಬಿ ಮೋಟಿವೇಟರ್ಸ್, ಪತ್ರಕರ್ತರು ಪ್ರೇರಕಶಕ್ತಿಯಾಗಿ ಕೆಲಸ ಮಾಡಬೇಕು ಎಂದು ಒಮ್ಮೆ ಟಿಎಸ್ಸಾರ್ ಹೇಳಿದ್ದುಂಟು.ಈ ಮಾತು ನನ್ನ ತಲೆಯಲ್ಲಿ ಭದ್ರವಾಗಿ ತಳ ಊರಿಬಿಟ್ಟಿತು,ಉದ್ದಕ್ಕೂ ನನ್ನನ್ನು ಎಚ್ಚರಿಸುತ್ತಲೇ ಇತ್ತು.

ದೀಪಾವಳಿ ವಿಶೇಷ ಸಂಚಿಕೆ ಸಂದರ್ಭದಲ್ಲಿ ಮಾತ್ರ ಕಥೆ/ಕವನ/ಲೇಖನ ಕೋರಿ ಲೇಖಕರಿಗೆ ಪತ್ರ ಬರೆಯುವ ಪರಿಪಾಠವಿಟ್ಟುಕೊಂಡಿದ್ದ ನಾವು ಈಗ ʼಸಾಪು’ಗೆ ಕಥೆ ಬರೆದು ಕೊಡಿ ಎಂದು ಪ್ರೀತಿಪೂರ್ವಕವಾಗಿ ಒತ್ತಾಯಿಸಿ ಲೇಖಕರಿಗೆ ಪತ್ರಗಳನ್ನು ಬರೆಯಲಾರಂಭಿಸಿದೆವು.

ಈ ಪರಿಯ ಕೆಲಸಕ್ಕೆ ಹೆಚ್ಚಿನ ಸಿಬ್ಬಂದಿ ಬೇಕಾಗುತ್ತದೆ. ಸಿಬ್ಬಂದಿಗೂ ಇನ್ಸೆಂಟಿವ್ ಕೊಡಬೇಕಾಗುತ್ತದೆ. ನನಗೆ ಇನ್ನೊಬ್ಬ ಉಪ ಸಂಪಾದಕರನ್ನು ಕೊಡಿ ಎಂಬ ಬೇಡಿಕೆಯನ್ನಿಟ್ಟರು ವೈಕುಂಠರಾಜು. ಜೊತೆಗೆ ತಮಗೆ ಮ್ಯಾ಼ಗ್ ಸೀ಼ನ್ ಎಡಿಟರ್ ಅಭಿಧಾನ ನೀಡಬೇಕೆಂದು ಕೋರಿದರು. ಅವರು ವಾಸ್ತವವಾಗಿ ಸಾಪು ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರೂ ಚೀಫ್ ಸಬ್ ಎಡಿಟರ್ ಅಭಿಧಾನ ನೀಡಲಾಗಿತ್ತು.

ಸಂಪಾದಕರು ಎರಡನ್ನೂ ತಳ್ಳಿ ಹಾಕಿದರು. ತಮ್ಮನ್ನು ಮ್ಯಾಗಸೀ಼ನ್ ಎಡಿಟರ್ ಮಾಡಲಿಲ್ಲ ಎಂಬ ಅಸಮಾಧಾನ ವೈಕುಂಠರಾಜು ಅವರಲ್ಲಿ ಬಹಳ ದಿನಗಳಿಂದ ಇತ್ತು. ಪತ್ರಕರ್ತರ ಮೊದಲನೇ ವೇತನ ಮಂಡಲಿಯ ಶಿಫಾರಸುಗಳಲ್ಲಿ ಮ್ಯಾಗಸೀ಼ನ್ ಎಡಿಟರ್ ಎಂಬ ಹುದ್ದೆಯನ್ನು ಮಾನ್ಯ ಮಾಡಲಾಗಿತ್ತಾದರೂ ಅದಕ್ಕೆ ವಿಶೇಷ ಸಂಬಳ ಶಿಫಾರಸು ಮಾಡಿರಲಿಲ್ಲ.

ಚೀಫ್ ಸಬ್ ಎಡಿಟರ್ಗೆ ನೀಡುವ ಸಂಬಳವನ್ನೇ ಮ್ಯಾಗಸೀ಼ನ್ ಎಡಿಟರ್, ಸ್ಪೋರ್ಟ್ಸ್ ಎಡಿಟರ್, ಕಾಮರ್ಸ್ ಎಡಿಟರ್ ಈ ಹುದ್ದೆಗಳಿಗೂ ಶಿಫಾರಸು ಮಾಡಿತ್ತು. ಆದರೆ ಈ ಹುದ್ದೆಗಳನ್ನು ನಿರ್ವಹಿಸುತ್ತಿರುವವರಿಗೆ ಆಡಳಿತ ವರ್ಗ ವಿಶೇಷ ಸಂಬಳ ಆಥವಾ ಅಸಿಸ್ಟೆಂಟ್ ಎಡಿಟರ್ ಶ್ರೇಣಿಯ ವೇತನ ನೀಡಲು ಅವಕಾಶವಿತ್ತು. ವೈಕುಂಠರಾಜು ತಮ್ಮ ಬೇಡಿಕೆಯನ್ನು ಆಡಳಿತ ಮಂಡಳಿಗೆ ಸಲ್ಲಿಸಿದರು.

ಇಸವಿ 1977. ಟಿಎಸ್ಸಾರ್ ಆರೋಗ್ಯ ಸರಿ ಇರಲಿಲ್ಲ. ಮನೆಯಿಂದಲೇ ʼಛೂ ಬಾಣ’ ಬರೆದು ಕಳುಹಿಸುತ್ತಿದ್ದರು ಹಾಗೂ ಫೋನಿನಲ್ಲೇ ಸಂಪಾದಕೀಯ ವಿಷಯ ಇತ್ಯಾದಿಗಳನ್ನು ತಿಳಿಸಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಆಡಳಿತ ಮಂಡಳಿ ವೈಕುಂಠರಾಜು ಅವರ ಮನವಿ ಬಗ್ಗೆ ಸಂಪಾದಕರ ಅಭಿಪ್ರಾಯ ಕೇಳಿತ್ತು. ವೈದ್ಯರು ಬಾಂಬೆಯಲ್ಲಿ ತಜ್ಞರಿಂದ ಚಿಕಿತ್ಸೆ ಪಡೆಯುವಂತೆ ಟಿಎಸ್ಸಾರ್ ಅವರಿಗೆ ಸಲಹೆ ಮಾಡಿದ್ದರು.

ಬಾಂಬೆಗೆ ಹೊರಡುವ ಹಿಂದಿನ ದಿನ ಇರಬೇಕು. ಸುಮಾರು ಹನ್ನೆರಡು ಗಂಟೆ ಹೊತ್ತಿಗೆ ಟಿಎಸ್ಸಾರ್ ಕಚೇರಿಗೆ ಬಂದರು. ಸುಮಾರು ಒಂದೂವರೆ ಎರಡು ತಿಂಗಳಿನಿಂದ ಬಂದಿರಲಿಲ್ಲ. ತುಂಬ ತೆಗೆದು ಹೋಗಿದ್ದರು. ಬಂದವರೇ ಸುದ್ದಿ ಸಂಪಾದಕರು ಮತ್ತು ಸಹಾಯಕ ಸಂಪಾದಕರುಗಳನ್ನು ಕರೆಸಿಕೊಂಡು ಮಾತುಕತೆ ನಡೆಸಿದರು.

ವೈಕುಂಠರಾಜೂ ಅವರು ಹೋಗಿ ಕಂಡರು. ವೈಕುಂಠರಾಜು ಅವರಿಗೆ ಮ್ಯಾಗಸೀ಼ನ್ ಎಡಿಟರ್ ಅಭಿಧಾನ ನೀಡಬಹುದೆಂದು ಶಿಫಾರಸು ಬರೆದು ಆಡಳಿತ ಮಂಡಳಿಗೆ ಕಳುಹಿಸಿಕೊಟ್ಟರು. ಅದು ಅವರು ಸಹಿ ಮಾಡಿದ ಕೊನೆಯ ಶಿಫಾರಸಾಗಿತ್ತು. ಊಟದ ಸಮಯವಾಗಿತ್ತು. ಟಿಎಸ್ಸಾರ್ ರೆಕ್ಕೆ ಬಾಗಿಲ ಬಳಿ ಬಂದು ಬಾಗಿಲ ಮೇಲೆ ಕೈ ಆನಿಸಿ ಮೇಲೆ ಸಂಪಾದಕೀಯ ವಿಭಾಗದುದ್ದಗಲ ಕಣ್ಣು ಹಾಯಿಸಿದರು.

ಅವರು ಎಂದಿನಂತೆ “ಎನಿಬಡಿ ಫಾರ್ ತಿಳಿ ಸಾರ್” ಎಂದು ಸಹಭೋಜನಕ್ಕೆ ಸಹೋದ್ಯೋಗಿಗಳನ್ನು ಕರೆಯಲಿಲ್ಲ. ನಿಧಾನವಾಗಿ ಮುಂದೆ ಹೆಜ್ಜೆ ಇಟ್ಟು ನಿರ್ಗಮಿಸಿದರು. ಅದೇ ಕೊನೆ, ಮತ್ತೆ ಟಿಎಸ್ಸಾರ್ ಬರಲಿಲ್ಲ. ಟಿಎಸ್ಸಾರ್ ಪದವನ್ನೇ ʼತಿಳಿಸಾರ್’ ಎಂದು ಶ್ಲೇಷಿಸಿ ತಾವು ತಿಳಿಸಾರು ಮಾಡುವುದರಲ್ಲಿ ನಾಳಪಾಕ ಹಸ್ತರೆಂದು ಅವರು ಹೇಳಿಕೊಳ್ಳುತ್ತಿದದ್ದರು. ಹಾಗೂ ಊಟದ ವೇಳೆ ಸಹೋದ್ಯೋಗಿಗಳಿಗೆ ತಿಳಿಸಾರಿನ ರುಚಿ ತೋರಿಸುತ್ತಿದ್ದರು.

ಇದು ಟಿಸ್ಸಾರ್ ತಮ್ಮನ್ನೇ ವಿಡಂಬಿಸಿಕೊಳ್ಳುವ ಪರಿಯೂ ಆಗಿತ್ತು. ಬಾಂಬೆಯಿಂದ ಹಿಂದಿರುಗಿ ಬಂದರು. ಆದರೆ ಕಾಯಿಲೆ ಗುಣವಾಗಿರಲಿಲ್ಲ. 1977ರ ಏಪ್ರಿಲ್ 11ರಂದು ರಾಮಚಂದ್ರ ರಾಯರು ಇಹಲೋಕ ತ್ಯಜಿಸಿದರು. ಆ ಕ್ಷಣಕ್ಕೆ ನಮಗೆ ಕನ್ನಡ ಪತ್ರಿಕಾ ಪ್ರಪಂಚದಲ್ಲೊಂದು ಶೂನ್ಯ ಉಂಟಾದಂತೆ ಭಾಸವಾಗಿತ್ತು. ಟಿಎಸ್ಸಾರ್ ನಿಧನದೊಂದಿಗೆ ‘ಪ್ರಜಾವಾಣಿ’ಯ ಆದಿ ಪರ್ವ ಮುಕ್ತಾಯಗೊಂಡಿತ್ತು. ಮುಂದೇನು? ಮುಂದೆ ಯಾರು?

ಈ ಪ್ರಶ್ನೆಗಳು ನಮ್ಮನ್ನು ಕಾಡತೊಡಗಿದವು. ಹೊಸ ಸಂಪಾದಕರು ನಮ್ಮವರಲ್ಲೇ ಒಬ್ಬರಾಗಿರುವರೆ? ಅಥವಾ ಹೊರಗಿನಿಂದ ಯಾರಾದರೂ ಬರಬಹುದೆ? ಸೇವಾ ಹಿರಿತನದ ಪ್ರಕಾರ ವೈ.ಎನ್.ಕೆ. ಮತ್ತು ಸಿದ್ಧಲಿಂಗಪ್ಪ ಅರ್ಹರಾಗಿದ್ದರು. ಆದರೆ ವೇತನ ಮಂಡಳಿ ನಿಯಮಾನುಸಾರ ಸಂಪಾದಕರ ಹುದ್ದೆಯನ್ನು ಭರ್ತಿಮಾಡಲು ಸೇವಾ ಹಿರಿತನವಷ್ಟನ್ನೇ ಪರಿಗಣಿಸಬೇಕಾಗಿರಲಿಲ್ಲ.

ಸಂಪಾದಕನಿಗೆ ವೇತನ ಮಂಡಳಿ ಸಂಬಳವನ್ನು ನಿಗದಿಪಡಿಸಿರಲಿಲ್ಲ. ಅದನ್ನು ಆಯಾ ಪತ್ರಿಕೆಗಳ ಆಡಳಿತ ವರ್ಗದ ಇಷ್ಟಕ್ಕೆ ಬಿಟ್ಟಿತ್ತು. ಆಡಳಿತ ಮಂಡಳಿ ಸೇವಾ ಹಿರಿತನವನ್ನು ಬದಿಗೊತ್ತಿ, ಹೆಚ್ಚಿನ ವೇತನದ ಮೇಲೆ ಹೊರಗಿನವರನ್ನೂ ನೇಮಿಸಬಹುದಾಗಿತ್ತು. ವೈಕುಂಠರಾಜು ಅವರೂ ಸಂಪಾದಕ ಹುದ್ದೆಯ ಆಕಾಂಕ್ಷಿಯಾಗಿದ್ದು ಅವರದೇ ಆದ ಮಾರ್ಗದಲ್ಲಿ ಆಗ ಲಾಬಿ ನಡೆಸಿದ್ದು ಗೋಪ್ಯವಾಗೇನೂ ಉಳಿಯಲಿಲ್ಲ.

ಈ ಮಧ್ಯೆ ಕಂಪೋಸಿಂಗ್ ಮತ್ತು ಮುದ್ರಣ ವಿಭಾಗದ ಕಾಮ್ರೇಡುಗಳು “ಸಂಪಾದಕನ ಹುದ್ದೆಗೆ ಬಿಸಿ ರಕ್ತದ ಶ್ರೀ ವೈಕುಂಠರಾಜು ಅವರೇ ಯೋಗ್ಯರು” ಎಂಬಂಥ ಕರಪತ್ರವೊಂದನ್ನು ಹೊರಡಿಸಿ ಅದನ್ನು ಗವರ‍್ನಿಂಗ್ ಡೈರೆಕ್ಟರಿಗೆ ತಲುಪಿಸಿದ್ದರು.

ಪ್ರಜಾವಾಣಿಯ ಮುಂದಿನ ಸಂಪಾದಕರು ಯಾರು ಎಂಬುದು ಕೆಲವು ದಿನಗಳು ʼಪ್ರವಾ’ ಒಳಗೂ ಹೊರಗೂ ಕುತೂಹಲ ಕೆದರಿತ್ತು. ಆಡಳಿತ ಮಂಡಲಿ ಶ್ರೀ ವೈ ಎನ್.ಕೆ.ಯವರನ್ನು ಸಂಪಾದಕರನ್ನಾಗಿ ನೇಮಿಸಿ ಈ ಕುತೂಹಲಕ್ಕೆ ತೆರೆ ಎಳೆಯಿತು. ಸಿದ್ಧಲಿಂಗಪ್ಪನವರು ಸುದ್ದಿ ಸಂಪಾದಕರಾದರು.

ಟಿಎಸ್ಸಾರ್ ನಿಧನದೊಂದಿಗೆ ಅವರ ʼಛೂ ಬಾಣ’ ಅಂಕಣ ನಿಲ್ಲಿಸುವುದು ಅನಿವಾರ್ಯವಾಯಿತು. ʼಛೂ ಬಾಣ’ ಅಂಕಣ ಉಳಿಸಿಕೊಳ್ಳಬೇಕು, ಆ ಅಂಕಣದಡಿ ವೈಎನ್ಕೆ ಬರೆಯಬಹುದೆಂದು ಕೆಲವರು ಸಲಹೆ ಮಾಡಿದರು. ವೈಎನ್ಕೆ ಅಥವಾ ಬೇರೆ ಯಾರೇ ಬರೆದರೂ ಅದು ಟಿಎಸ್ಸಾರ್ ಛೂ ಬಾಣವಾಗುತ್ತಿರಲಿಲ್ಲ ಎಂದೇ ವೈಎನ್ಕೆ ʼಛೂ ಬಾಣ’ ನಿಲ್ಲಿಸುವ ನಿರ್ಧಾರ ಕೈಗೊಂಡರು.

ಆದರೆ ಛೂಬಾಣದ ವ್ಯಂಗ್ಯ-ವಿಡಂಬನೆಗಳನ್ನು ಉಳಿಸಿಕೊಳ್ಳುವ ಅಗತ್ಯವಿತ್ತು. ಅದರ ಜಾಗ ತುಂಬಲು ಪ್ರಚಲಿತ ವಿಷಯಗಳನ್ನು ಅದರ ವಿವಿಧ ಮಗ್ಗುಲುಗಳಿಂದ ವಿಡಂಬಿಸುವ, ಪರಿಹಾಸ್ಯಗೈಯ್ಯುವ ಮೂರನೇ ಸಂಪಾದಕೀಯವನ್ನು ಪ್ರಾರಂಭಿಸಲು ವೈಎನ್ಕೆ ನಿರ್ಧರಿಸಿದರು.

ಎರಡನೆಯ ಸಂಪಾದಕೀಯದ ಕೆಳಗೆ ಬರುತ್ತಿದ್ದ ಸುದ್ದಿಯ ʼತೆರೆಮರೆ’ ನಿಲ್ಲಿಸಿ ಮೂರನೆ ಸಂಪಾದಕೀಯಕ್ಕೆ ಜಾಗಮಾಡಿಕೊಡಲಾಯಿತು. ಶುರುವಿನಲ್ಲಿ ವೈಎನ್ಕೆ ಯವರೇ ಈ ಮೂರನೆಯ ಸಂಪಾದಕೀಯವನ್ನು ಬರೆಯುತ್ತಿದ್ದರು.

ಅವರಿಗೆ ಆಗದಿದದ್ದಾಗ ಸದಾಶಿವನಿಗೆ ಅಥವಾ ನನಗೆ ಬರೆಯಲು ಹೇಳುತ್ತಿದ್ದರು. ವೈಎನ್ಕೆ ಬರೆದ ಮೂರನೆಯ ಸಂಪಾದಕೀಯಗಳು ʼಬರಲಿದೆ ಬರಲಿದೆ’ ಹೆಸರಿನಲ್ಲಿ ಪುಸ್ತಕವಾಯಿತು.

1990ರಲ್ಲಿ ಸಹ ಸಂಪಾದಕನಾದ (ಅಸೋಸಿಯೇಟ್ ಎಡಿಟರ್) ನಂತರ ನಾನು ಬಹುತೇಕ ನಿವೃತ್ತನಾಗುವವರೆಗೆ ಮೂರನೆಯ ಸಂಪಾದಕೀಯವನ್ನು ಬರೆದೆ. ನನ್ನ ಆಯ್ದ ಮೂರನೆಯ ಸಂಪಾದಕೀಯ ʼಚಿಲಿಪಿಲಿ’ ಲಲಿತ ವಾಚಿಕೆಗಳು ಅಭಿಧಾನದಲ್ಲಿ 1999ರಲ್ಲಿ ಪ್ರಕಟವಾಯಿತು. ವೈಎನ್ಕೆ ಸಂಪಾದಕರಾಗಿದ್ದಾಗಲೇ ಲಂಕೇಶರು ಪ್ರಜಾವಾಣಿಗ ಅಂಕಣ ಬರೆಯಲು ಶುರುಮಾಡಿದ್ದು.

ಲಂಕೇಶರಿಂದ ಒಂದು ಲೇಖನಮಾಲೆ ಬರೆಸಬಹುದೆಂದು ಸಂಪಾದಕರಿಗೆ ಮೇಲಿನಿಂದಲೇ ಸೂಚನೆ ಬಂದಿತ್ತು. ಪ್ರಖರ ಶೈಲಿಯ ರಾಜಕೀಯ ಟೀಕೆ ಟಿಪ್ಪಣಿಗಳು, ‘ಬಂ-ಗುಂ’ ಲೇವಡಿಗಳು, ವಿಡಂಬನೆಗಳಿಂದ ಲಂಕೇಶರ ಲೇಖನಗಳು ಜನರಿಗೆ ರಸಕವಳದಂತಿದ್ದು ಪ್ರಿಯವಾದವು. ಲಂಕೇಶರ ಅಂಕಣವನ್ನು ನಿಲ್ಲಿಸಬೇಕಾದ ಅನಿವಾರ್ಯತೆಯೂ ವೈಎನ್ಕೆ ಅವರಿಗೇ ಒದಗಿ ಬಂತು.

`ಬಂ-ಗುಂ’ ಪ್ರಯೋಗಗಳು, ಕಟುವಾದ ಟೀಕೆಗಳು ರಾಜಕೀಯ ವಲಯಗಳಲ್ಲಿ ಮತ್ತು ನಾಯಕರುಗಳ ಅಭಿಮಾನಿಗಳಿಗೆ ರುಚಿಸಿದಂತೆ ತೋರಲಿಲ್ಲ. ಕೆಲವು ವಲಯಗಳ ಈ ಅಸಮಾಧಾನ ಗೌರ್ನಿಂಗ್ ಡೈರೆಕ್ಟರ್ ಅವರ ಕಿವಿಯನ್ನೂ ಮುಟ್ಟಿತ್ತು. ಪ್ರಭಾವಶಾಲಿ ಬಣಗಳ ಲಾಬಿ, ಅಂಟುನಂಟುಗಳು ಕೆಲಸ ಮಾಡಿದ್ದವು.

ಲಂಕೇಶರ ಅಂಕಣವನ್ನು ತತ್ಕ್ಷಣದಿಂದ ನಿಲ್ಲಿಸುವಂತೆ ಮೇಲಿನಿಂದ ವೈಎನ್ಕೆ ಯವರಿಗೆ ಹುಕುಂ ಬಂತು. ಅಂಕಣದ ಜನಪ್ರಿಯತೆ ಸಹಿಸದೇ ಪೂರ್ವಗ್ರಹ ಪೀಡಿತರಾದ ವೈಎನ್ಕೆಯವರೇ ಲಂಕೇಶರ ಅಂಕಣ ನಿಲ್ಲಲು ಕಾರಣ ಎಂಬ ಪುಕಾರು ಹಬ್ಬಿತು. ಹೊರಗಿನವರಿಗೆ ಒಳಗಿನ ಸತ್ಯ ತಿಳಿದಿರಲಿಲ್ಲ.

। ಮುಂದಿನ ವಾರಕ್ಕೆ ।

November 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಸಿ. ಎನ್. ರಾಮಚಂದ್ರನ್

    ಪ್ರಿಯ ಜಿಎನ್‍ಆರ್ ಅವರಿಗೆ: ನಿಮ್ಮ ಇಂದಿನ ಅಂಕಣ ಓದುತ್ತಿದ್ದಂತೆ, ನಿಮ್ಮೊಡನೆ ಪ್ರಜಾವಾಣಿಯಲ್ಲಿದ್ದ ರಘುರಾಮ ಶೆಟ್ಟರ “ಮುಂಗಾರು”ವಿನಲ್ಲಿ ಪ್ರಕಟವಾದ “ಅರಸು: ಪತ್ರಕರ್ತ ಕಂಡಂತೆ” ಎಂಬ ಅಂಕಣ ಬರಹಗಳು ನೆನಪಿಗೆ ಬಂದುವು. (ಅನೇಕ ನೆಲೆಗಳಲ್ಲಿ ನಿಮ್ಮ ಈ ಅಂಕಣಗಳು ಮತ್ತು ಶೆಟ್ಟರ ಅಂಕಣಗಳು ಪರಸ್ಪರ ಪೂರಕವಾಗಿವೆ. ) ಪತ್ರಿಕಾರಂಗಕ್ಕೆ ಹಾಗೂ ಪತ್ರಿಕಾ ಸಂಪಾದಕರಿಗೆ ವಿಶಿಷ್ಟ ಛವಿ ಹಾಗೂ ಪ್ರಭಾವವನ್ನು ತಂದು ಕೊಟ್ಟವರು ಟಿಎಸ್‍ಆರ್. ಅವರಿಲ್ಲದಾದಾಗ ಕವಿದ ಶೂನ್ಯವನ್ನು ನೀವು ಸರಿಯಾಗಿಯೇ ’ಆದಿಪರ್ವ’ವೆಂದು ಗುರುತಿಸಿದ್ದೀರಿ. ಆದರೆ, ಕನ್ನಡ ಪತ್ರಿಕಾರಂಗ ಎಷ್ಟು ಶ್ರೀಮಂತವಾದುದೆಂದರೆ, ಆ ಶೂನ್ಯವನ್ನು ನಂತರ ಬಂದ ಪ್ರಜಾವಾಣಿಯ ಅನೇಕ ಸಂಪಾದಕರು ತುಂಬಿದರು; ಅವರುಗಳಲ್ಲಿ ನೀವೂ ಒಬ್ಬರು ಎಂಬುದು ನಮಗೆಲ್ಲಾ ಹೆಮ್ಮೆಯ ವಿಷಯ. ಅಂದಿನ ಸಂಧಿಕಾಲದ ವ್ಯಕ್ತಿಗಳನ್ನು ಹಾಗೂ ವಿವರಗಳನ್ನು ಹೀಗೆಯೇ ದಾಖಲಿಸಿ; ಕೇವಲ ಪತ್ರಕರ್ತರಿಗಲ್ಲದೆ ಎಲ್ಲಾ ಓದುಗರಿಗೂ ತುಂಬಾ ಉಪಯೋಗವಾಗುತ್ತದೆ. ಅಭಿನಂದನೆಗಳು. ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: