ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾತಿಚರಾಮಿ: ಇದೊಂದು ಕಂಪ್ಲೀಟ್ ಚಿತ್ರ,

ಧನಂಜಯ ಎನ್ 

ಏಕೆ ಅನಾರೋಗ್ಯ ಮತ್ತು ಅವೈಜ್ಞಾನಿಕ ಆಲೋಚನೆಗಳು, ಯಾವಾಗಲೂ ನಮ್ಮನ್ನು ಅತೀ ಭಾವುಕತೆಗೆ, ದುಃಖಕ್ಕೆ , ದೂಡುತ್ತವೆ ???
ಧೀರ್ಘಾವಧಿಯನ್ನೇನೂ ತೆಗೆದುಕೊಳ್ಳದ ಅವು, ಇನ್ನೇನು ಜೀವನದ ಅಂತ್ಯಕ್ಕೆ ತಳ್ಳುವುದು ಸುಳ್ಳಲ್ಲ.

ತುಂಬಾ ಹಿಂದೆಯೇ ಪ್ರೂವ್ ಆಗಿರುವ ಸೂತ್ರಗಳನ್ನ ಇಟ್ಟುಕೊಂಡೇ…. ಅಷ್ಟೋ ಇಷ್ಟೋ, ಕೆಲವೊಮ್ಮೆ ಕೊಪ್ಪರಿಕೆಯಷ್ಟು ಕಾಸು ಮಾಡಿಕೊಳ್ಳುವ, ಪ್ರೇಕ್ಷಕನ ಬೆನ್ನಿಗೆ ಗುಂಡು ಸೂಜಿ ಚುಚ್ಚಿ ಕಳಿಸುವ ಛಾಳಿಗೆ
“ಕಮರ್ಷಿಯಲ್ ಸಿನೆಮಾಗಳು” ಅಂತಾನೂ ಕರಿಯಬಹುದು. ಇದೊಂದು ಭಗೀರಥ ಪ್ರಯತ್ನ.
ಆಗೊಮ್ಮೆ ಈಗೊಮ್ಮೆ ಅಂತ, ಇಂಥಾ ಒಂದಷ್ಟು ಸೂತ್ರಗಳನ್ನ ಮುರಿದು ಹಾಕಿ, ಒಂದೊಂದ್ ಸಿನೆಮಾ ಬರ್ತವೆ.
ಆ ಲಿಸ್ಟಿಗೆ ಈ “ನಾತಿಚರಾಮಿ ” ಸೇರ್ಪಡೆ.

ಖುಷಿಯಾಗತ್ತೆ, ಪ್ರೇಕ್ಷಕನಿಗೆ ಹೊಸತನವನ್ನ ಒಗ್ಗರಣೆ ಇಲ್ಲದೆಯೂ ಕೊಡಬಹುದು ಅಂತ ಈ ಟೀಮ್ ಚೆನ್ನಾಗಿ ತಿಳಿದುಕೊಂಡು ಕೆಲಸ ಮಾಡಿರುವುದಕ್ಕೆ.

ಇದೊಂದು ಕಂಪ್ಲೀಟ್ ಚಿತ್ರ,
ನಟನೆ ಅನ್ನೋದಕ್ಕಿಂತ ಇವರೆಲ್ಲಾ ಅಲ್ಲಿದ್ದರು ಅನ್ನೋ ರೀತಿ ತೋರಿಸುವ ಚಿತ್ರ,
ಬ್ಯಾಗ್ರೌಂಡ್ ಮ್ಯೂಸಿಕ್ ಅನ್ನೋದಕ್ಕಿಂತ ಈ ಭಾವನೆಗೆ ಇಂಥದ್ದೇ ಏನೋ ಒಂದು ಲಯ ನಮ್ಮಲ್ಲೇ ಕೇಳಿಸುತ್ತೆ ಆ ಸಮಯಕ್ಕೆ ಅನ್ನಿಸುವ ಚಿತ್ರ,

ಫೈಟ್ ಗಳಿಲ್ಲ, ಐಟಂ ಸಾಂಗ್ ಇಲ್ಲ, ಇದು ಖಾಲಿ ಪೀಲಿ ಲವ್ ಸ್ಟೋರಿ ಅಲ್ಲವೇ ಅಲ್ಲಾ.. ಮುಖ್ಯ ಪಾತ್ರಗಳಲ್ಲಿ ಒಬ್ಬರಾದ ಶ್ರುತಿ ಹರಿಹರನ್ ಸಂಸ್ಕೃತಿ ಮಣ್ಣು ಮಸಿ ಅಂತೆಲ್ಲಾ ಉದ್ದುದ್ದ ಡೈಲಾಗ್ ಹೊಡೆಯುವುದಂತೂ ಇಲ್ಲವೇ ಇಲ್ಲಾ,
ಬದಲಿಗೆ ನಮ್ಮೊಂದಿಗೆ ನೇರಾ ನೇರಾ ಮಾತಿಗಿಳಿಯುತ್ತಾಳೆ.

ತರಕಾರಿ ಹಚ್ಚುವಾಗ, ಬಸ್ಸಿಗಾಗಿ ಕಾಯುವಾಗ, ಆಫೀಸಿನ ಮೀಟಿಂಗ್ ನಲ್ಲಿದ್ದಾಗ, ಆನ್ಲೈನ್ ಶಾಪಿಂಗ್ ಮಾಡುವಾಗ, ಹೀಗೆ ಎಲ್ಲಾ ಕಡೆಯಲ್ಲೂ ಈ ಸನ್ನಿವೇಶಗಳನ್ನ, ಈ ಭಾವನೆಗಳನ್ನು, ಈ ಸ್ಟ್ರೆಸ್ ನ್ನ ನೀವೂ ಕೂಡ ಫೇಸ್ ಮಾಡಿರ್ತೀರಿ ಅಲ್ವಾ ಅನ್ನೋ ಹಾಗೆ.

ಹಾಗಂತ ಉದ್ವೇಗದಿಂದ ನೀವು ಚಪ್ಪಾಳೆ ಹೊಡೆದಾಗ, ವಿಶಲ್ ಹೊಡೆದಾಗ ಅವಳದನ್ನ ಕೇಳಿಸಿಕೊಳ್ಳುವುದೂ ಇಲ್ಲಾ,
ಯಾಕಂದ್ರೆ ತೀರಾ ಬೋಲ್ಡ್ ಆಗಿ ಡೈಲಾಗ್ ಹೇಳಿ ಅಂತ ಹೇಳಿಕೊಟ್ಟ ನಿರ್ದೇಶಕನೂ ಸಹಿತ ಆ ಚಪ್ಪಾಳೆಯ ಶಬ್ದವನ್ನ ಕೇಳಿಸಿಕೊಳ್ಳುವಷ್ಟು ಬಿಡುವು ಆಕೆಗೆ ನೀಡುವುದಿಲ್ಲ.

ಈ…. ಎಲ್ಲಗಳ ನಡುವೆ ಈ ಸಿನೆಮಾದಲ್ಲಿ ಇನ್ನೊಂದೆರಡು ಪಾತ್ರಗಳು ಬಂದು ಹೋಗುತ್ತವೆ.
ಸುಮ್ಮನೇ ಬಂದು ಹೋಗಲ್ಲ, ಈ ಶ್ರುತಿ ಹರಿಹರನ್ ಗಿಂತಲೂ ಸಲ್ಪ ಜಾಸ್ತಿಯೇ ಮಾತಿಗಿಳಿಯುತ್ತವೆ.

ಸಂಚಾರಿ ವಿಜಯ್,
ಅರೆ ವಾಹ್, ಯಾರೋ ಇದು, ತುಂಬಾ ದಿನ ಆದ್ಮೇಲೆ ನಮ್ಮನ್ನ ರೆಪ್ರೆಸೆಂಟ್ ಮಾಡೋ ಲೆವೆಲ್ ಗೆ ಒಬ್ಬನಾದ್ರು ಬಂದ್ನಲ್ಲಾ ಕನ್ನಡ ಸಿಲ್ವರ್ ಸ್ಕ್ರೀನ್ ಮೇಲೆ, ಅಂತ ಯಾವುದೇ ರಿಸ್ಕ್ ಇಲ್ಲದೇ ಹೀರೋ ಆಗಿಬಿಡ್ತಾರೆ.

ರೋಡ್ ಸೈಡಿನ ಟೀ ಅಂಗಡಿ ಮುಂದೆ ಸಿಗರೇಟ್ ಸೇದುತ್ತಾ ನಿಂತವನು ಬಿಡುವ ಹೊಗೆಯಲ್ಲಿ ಬರೀ ಯೋಚನೆಗಳೇ ಇರುವುದಿಲ್ಲ, ತನ್ನ ಪಾಡಿಗೆ ತಾನು ಬದುಕುವ ಒಂದು ಮೌನವೂ ಇರತ್ತೆ.

ತನ್ನ ಹೆಂಡತಿ ಪಾತ್ರಕ್ಕೆ ಬಯ್ಯುವಾಗ, ಹಾಳಾದ್ ಸೀರಿಯಲ್ಲೂ ನಮ್ ಪ್ರಾಣ ತಿಂತವೇ ಅನ್ನುವಾಗ, ಆದಾಯವನ್ನ ಲೆಕ್ಕವಿಡದೇ ಬಾರ್ ನಲ್ಲಿ ಸ್ಕಾಚ್ ಹೀರುವಾಗ,,,ಇಲ್ಲೆಲ್ಲಾ ರೆಪ್ರೆಸೆಂಟ್ ಮಾಡೋದಿರಲಿ ಒಂದು ಫುಲ್ ಸೈಜ್ ಮಿರರ್ ಆಗಿ ಕೆಲ್ಸ ಮಾಡ್ತಾರೆ.

ಎಲ್ಲಾ ಪಾತ್ರಗಳ ಬಗ್ಗೆ ಹೀಗೇ ಹೇಳುತ್ತಾ ಕೂತ್ರೆ, ನೀವು ಸಿನೆಮಾ ನೋಡುವಾಗ ಅಬ್ಸರ್ವ್ ಮಾಡ್ಲಿಕ್ಕೆ ನಾನೇನೂ ಉಳಿಸಿಲ್ಲಾ ಅಂತ ಅನ್ನಿಸ್ಕೊಬೇಕಾಗತ್ತೆ, ಯಾಕಂದ್ರೆ ಇದ್ರಲ್ಲಿ ಇರೋದು 6 ರಿಂದ 7 ಪಾತ್ರಗಳು ಅಷ್ಟೇ. ಅದರಲ್ಲಿ ಒಂದು ಬಹಳ ಸರ್ಪ್ರೈಸ್ ಆಗಿರುವ ಪಾತ್ರವೂ ಸೇರಿದೆ.!!! ಅದನ್ನ ಹೇಗೆ ಸ್ವೀಕರಿಸುತ್ತೀರೋ ನಿಮಗೆ ಬಿಟ್ಟದ್ದು.

ನಿರ್ದೇಶಕ ನಿರಾಸೆ ಮೂಡಿಸುವುದಿಲ್ಲ, 1 ಘಂಟೆ 50 ನಿಮಿಷದಲ್ಲಿ ಒಂದು ಸೆಕೆಂಡಿನಷ್ಟೂ ಖಾಲಿ ಉಳಿಸದೆಯೇ ಮ್ಯಾಗ್ನೆಟ್ ಥರಾ ಚರ್ಚೆ ನಡೆಸುತ್ತಾ ಹೋಗುತ್ತಾನೆ.

ತನ್ನ ಸ್ಕ್ರೀನ್ ಲೀಮಿಟೇಶನ್ ನಲ್ಲಿ ಎಷ್ಟಾಗುತ್ತೋ ಅದಕ್ಕಿಂತಾ ಹೆಚ್ಚಿಗೆಯೇ ಬೋಲ್ಡ್ ಆಗಿ ಚರ್ಚಿಸುತ್ತಾನೆ. ಎಲ್ಲಕ್ಕಿಂತಾ ಹೆಚ್ಚಾಗಿ ತನಗೇನು ಬೇಕೋ ಅದನ್ನಾತ ಎಲ್ಲರಿಂದಲೂ ಪಡೆದುಕೊಂಡಿದ್ದಾನೆ, ಅವನ ಸಮಾಧಾನದ ಉಸಿರು ಪ್ರೇಕ್ಷಕನಿಗೆ ಕೇಳಿಸುವಸ್ಟು ಕೆಲಸ ಮಾಡಿದ್ದಾನೆ.

ಈ ಕಥೆ ಸಂಧ್ಯಾರಾಣಿಯವರದ್ದು, ಇಂಥಾ ಕಥೆಗಳು ಹೆಣ್ಣಿಗೆ ಮಾತ್ರ ಹೊಳೆಯುತ್ತಲ್ಲಾ , ಅಂತ ನಮ್ಮಲ್ಲಿ ಒಂದು ಸಣ್ಣ ನಾಚಿಕೆಯಾದ್ರೂ ಹುಟ್ಟಲಿಲ್ಲ ಅಂದರೆ ನಿಜಕ್ಕೂ ನಾವು ಗಂಡಸರಲ್ಲ , ಹೊಹ್ ಸ್ಸಾರಿ ಮನುಷ್ಯರಲ್ಲ ಎಂದು ಹೇಳಬಹುದು.

ಅಬ್ಬಬ್ಬಾ ಎಂಥಾ ಗಟ್ಟಿಗಿತ್ತಿ, ಓದು ಓದು ಓದು ಈ ಎಲ್ಲಾ ಭಾವನೆಗಳನ್ನ ಬಾಯಿ ಮೇಲೆ ಬೆರಳಿಟ್ಟುಕೊಂಡು ಓದು ಅಂತ ಓದಿಸಿಕೊಂಡೇ ಹೋಗುತ್ತಾರಲ್ಲಾ !!!

ಈಗಾಗಲೇ ರಿಲೀಸ್ ಆಗಿ 3 ದಿನಗಳಾಗಿದೆ, ಇದು ಥಿಯೇಟರ್ ನಲ್ಲೇ ನೋಡಬೇಕಾದ ಚಿತ್ರ.
ಒಂದು ಪಾತ್ರದ ಮೂಲಕ ಮನ್ಸೋರೆ ಅವರು ಒಂದು ಡೈಲಾಗ್ ಹೊಡೆಸುತ್ತಾರೆ, “ಇಷ್ಟು ಜನ ಸುತ್ತಲೂ ಇದ್ರು ನನ್ ಮೇಲೆ ಮಾತ್ರ ಸ್ಪೆಷಲ್ ಕನ್ಸರ್ನ್ ಯಾಕೆ ನಿಮ್ಗೆ” ಅಂತ .
ಬಹುಶಃ ಈ ಡೈಲಾಗ್ ಆ ಸನ್ನಿವೇಶ ನೆಡೆದ ರೂಮಿನಲ್ಲೇ ಆಕೆ ಹೇಳಿದ್ದರೆ ಅದು ಬರೀ ಸಂಭಾಷಣೆಯಾಗಿ ಉಳಿಯುತ್ತಿತ್ತು.
ಡೋರ್ ತೆಗೆದು ಹೊರಗಡೆ ಬಂದು ಹೇಳಿದಾಗ ಅದಕ್ಕೊಂದು ಹೊಸ ಅರ್ಥ ಬರುವುದರಲ್ಲಿ ಸಂದೇಹವಿಲ್ಲ , #METOO ವಿನ ಬಗ್ಗೆ ಇನ್ನೂ ಗೊಂದಲಗಳನ್ನಿರಿಸಿಕೊಂಡಿರುವವರು ಈ ದೃಶ್ಯವನ್ನು ಒಮ್ಮೆ ಗ್ಲಾನ್ಸ್ ಮಾಡಿದರೂ ಸಾಕು.

ಪ್ರೇಕ್ಷಕನಿಗೆ ಸಹಾಯ ಮಾಡುವ ಅವಕಾಶ ಯಾವಾಗಂದ್ರೆ ಆಗ ಬರಲ್ಲ, ಎಲ್ಲೋ ಒಂದೊಂದ್ ಬಾರಿ ಸಿಗತ್ತೆ.
ಇಂಥಹ ಸ್ಪೆಷಲ್ ಚಿತ್ರಗಳನ್ನ ಪ್ರೋತ್ಸಾಹಿಸೋ ಬೆಳೆಸೋ ಅವಕಾಶ ಸಿಕ್ಕಿದೆ ಉಪಯೋಗಿಸಿಕೊಳ್ಳಿ.
ಇಷ್ಟನ್ನೂ ನಾನು ಬರೆಯುವುದರೊಳಗೆ ಈ ಸಿನೆಮಾವನ್ನ ಎರಡು ಬಾರಿ ನೋಡಿರುತ್ತೇನೆ. ಈ ವಾರದೊಳಗೆ ಒಂದಷ್ಟು ಗೆಳೆಯರೊಟ್ಟಿಗೆ ಮತ್ತೊಮ್ಮೆ ನೋಡುವ ಆಸೆಯ ಜೊತೆಗೆ.
ಈ ಮೂಲಕ ಒಳ್ಳೆ ಚಿತ್ರಗಳ ಬೆಳವಣಿಗೆಯಾಗಲಿ, ಕರ್ನಾಟಕ ಗೋಲ್ಡನ್ ಸಿನೆಮಾಸ್ ಅಂತ ನಾವು ಇನ್ನೂ ಜೋರಾಗಿ ಹೇಳುವ ಬನ್ನಿ.

ಬನ್ನಿ, ನಾತಿಚರಾಮಿ ಅಂದರೆ ನಿಲ್ಲುತ್ತೇನೆ ಎನ್ನುವ ಭರವಸೆ.

‍ಲೇಖಕರು avadhi

30 December, 2018

2 Comments

  1. Nagashyla Kumar

    ಬಹಳ ಚೆನ್ನಾಗಿ ಬರೆದಿದ್ದೀರಿ. ಉತ್ತಮ ಕನ್ನಡ ಚಿತ್ರಗಳ ಬಗ್ಗೆ ಈ ರೀತಿಯ ಪ್ರೋತ್ಸಾಹದಾಯಕ ವಿಶ್ಲೇಷಣೆ/ವಿಮರ್ಷೆ ಅತ್ಯಗತ್ಯ. ಎಷ್ಟೋ ಉತ್ತಮ ಚಿತ್ರಗಳು ನಮ್ಮ ಅರಿವಿಗೇ ಬಾರದೆ ಹೋಗಿರುತ್ತವೆ. ನಿಮ್ಮ ಉತ್ತಮ ಲೇಖನಕ್ಕೆ ನಮ್ಮ ವಂದನೆ, ಅಭಿನಂದನೆಗಳು.

  2. ರಘುನಾಥ

    ಚಂದದ ಗ್ರಹಿಕೆಯ ಅಭಿವ್ಯಕ್ತಿ ಅಭಿನಂದನೆ ಇಬ್ಬರಿಗೂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading