ಆಹ್! ಕಥಕ್ಕಳಿ..

ಕಥಕ್ಕಳಿ ಹಾಡುಗಾರ ಬಾಬು ತುಂಬ ದಿನ ನಮ್ಮ ಬಿಲ್ಡ್ದಿಂಗ್ ನಲ್ಲಿ ಉಳೀಲಿಲ್ಲ.
ಇಲ್ಲಿಗೆ ಬಾಬು ಬಂದ ಆರೇ ತಿಂಗ್ಳಲ್ಲಿ ಅವರ ತಂದೆ ತೀರ್ಕೊಂಡ್ರು. ಊರಿನ ಮನೇಲಿ ಇದ್ದೋರು ಅವರು ಮಾತ್ರ. ಬಾಬು ತುಂಬ ಹಿಂದೆಯೇ ತಾಯೀನ ಕಳ್ಕೊಂಡಿದ್ರು. ಅವ್ರಿಗೆ ಅಣ್ಣ, ತಮ್ಮ, ಅಕ್ಕ, ತಂಗಿ ಯಾರೂ ಇರ್ಲಿಲ್ಲ. ಸಾಕಷ್ಟು ದೊಡ್ಡ ಮನೆ, ತೋಟ. ಮನೇಲಿ ನೋಡ್ಕೊಳ್ಳೋರು ಯಾರೂ ಇರ್ಲಿಲ್ಲ. ಬೇರೆ ಗತೀನೇ ಇಲ್ದೇ ಬಾಬು ನೌಕರಿಗೆ ರಾಜೀನಾಮೆ ಬರ್ದು ಮನೆಗೆ ಹೊರಟೋದ್ರು. ಆದ್ರೆ ಹೊಗೋಕ್ಮುಂಚೆ ನ£ಗೆ ಕಥಕ್ಕಳಿಯ ಒಂದು ಪ್ರದರ್ಶನವೊಂದನ್ನು ತೋರಿಸಿಯೇ ಹೋದ್ರು.

ಅವರ ರೂಮಿಗೆ ಆಗಾಗ ಪದ್ಮನಾಭನ್ ಅನ್ನೋ ಹಿರಿಯರು ಬರೋವ್ರು. ಬಿಳೇ ಮುಂಡು ಸುತ್ಕೊಂಡು, ಬಿಳೇ ಅಂಗಿ ಹಾಕ್ಕೊಂಡು, ಉದ್ದಕ್ಕೆ ಬಿಳೇ ಕೂದಲು ಬಿಟ್ಕೊಂಡು ಬರೋ ಈ ಹಿರಿಯರು ಒಂಥರಾ ನಮ್ ಮಹಾಬಲ ಹೆಗಡೆಯವರ ಹಾಗೇ ಕಾಣ್ತಿದ್ರು. ಅದೇ ತೇಜಸ್ಸು ಅವರ ಮುಖದಲ್ಲಿ. ಅವ್ರು ಬರೋ ಸುದ್ದಿ ಬಂತು ಅಂದ್ರೆ ಆ ರೂಮಿನ ಕ್ಲೀನಿಂಗ್ ಸುರುವಾಗ್ತಿತ್ತು. ಸಿಗರೇಟು ಮೋಟುಗಳು, ಖಾಲಿ ಬಾಟ್ಲಿಗಳು ಹುಡುಕಿ ಹುಡುಕಿ ಹೊರಬರ್ತಿದ್ವು. ಎಲ್ಲಾ ಪರಮ ಪವಿತ್ರ.

ಅವರೆದ್ರು ಎಲ್ಲಾ ಜಾಣ ಮಕ್ಕಳ ಹಾಗೇ ನಡ್ಕೊಳ್ಳೋರು. ನನಗೋ ಸಹಜ ಕುತೂಹಲ. ಒಂದಿನ ಅವರು ಬಂದಾಗ ನಾನೂ ರೂಮು ಹೊಕ್ಕೆ. ಬಾಬು ಪರಿಚಯ ಮಾಡಿಸ್ದ. ಅದೂ ಇದೂ ಮಾತಾಡ್ತಾ ಸುಮಾರು ಹೊತ್ತು ಕೂತೆವು.
ಈ ಮಾತುಕತೇಲಿ ನನಗೆ ತಿಳಿದದ್ದೇನಂದ್ರೆ- ಅವರೊಬ್ಬ ಕಥಕ್ಕಳಿ ವೇಷಧಾರಿ. ಹೆಣ್ಣು ಪಾತ್ರಕ್ಕೆ ಖ್ಯಾತರಾದೋರು. ಎಂಟು ವರ್ಷಕ್ಕೇ ಕಥಕ್ಕಳಿ ಕಲಿಯೋದಕ್ಕೆ ಶುರು ಮಾಡಿ ಹತ್ತು ವರ್ಷ ನಿರಂತರ ಕಥಕ್ಕಳಿ ಕಲಿತು ಹದಿನೆಂಟಕ್ಕೆ ಪಾತ್ರಕ್ಕೆ ಬಣ್ಣ ಹಚ್ಚಿದೋರು.

ಕಥಕ್ಕಳಿಯ ಕುರಿತು ಅವರಿಗೆ ತುಂಬ ಜ್ಞಾನವಿತ್ತು. ಆ ಚಿಕ್ಕ ಮಾತುಕತೆಯಲ್ಲೇ ಸಾಕಷ್ಟು ಸೂಕ್ಷ್ಮವಾಗಿ ಕಥಕ್ಕಳಿಯ ಬಗ್ಗೆ ಹೇಳಿದ್ರು. ನಾನೂ ನಮ್ಮ ಯಕ್ಷಗಾನದ ಕುರಿತು ನನಗೆ ತಿಳಿದದ್ದು ಹೇಳಿದೆ. ನನ್ನ ಮೊಬೈಲ್ ನಲ್ಲಿರೋ ಒಂದೆರಡು ಪ್ರಸಂಗದ ಭಾಗಗಳನ್ನ ತೋರಿಸ್ದೆ. ತುಂಬ ಮೆಚ್ಚಿಕೊಂಡ್ರು. ಅಭಿನಯದ ವಿಸ್ತಾರ ಅವರಿಗೆ ತುಂಬ ಇಷ್ಟವಾಯ್ತು.

ವಿವರವಾಗಿ ಮುಖವರ್ಣಿಕೆಗಳನ್ನ ನೋಡತೊಡಗಿದ್ರು. ನಾನೂ ಒಂದಿಷ್ಟು ವಿವರವಾಗಿ ಹೇಳಿದೆ. ಮಾತಾಡ್ತಾ ಮಾತಾಡ್ತಾ ‘ ಸರ್, ಇಲ್ಲಿಗೆ ಬಂದು ಎಷ್ಟೆಲ್ಲ ತಿಂಗಳುಗಳಾದವು ಇನ್ನೂ ಒಂದೂ ಕಥಕ್ಕಳಿ ಪರ್ಫಾರ್ಮೆನ್ಸ್ ನೋಡೊಕೆ ಆಗ್ಲೇ ಇಲ್ಲ” ಎಂದೆ. ಕೂಡಲೇ ಅವರು ಮೊಬೈಲ್ ಎತ್ಕೊಂಡು ಫೋನ್ ಮಾಡತೊಡಗಿದ್ರು. ಸ್ವಲ್ಪ ಹೊತ್ನಲ್ಲೇ ನಮ್ಮ ಕಾರ್ಯಕ್ರಮ ಫಿಕ್ಸ್ ಆಗೇ ಹೋಯ್ತು.

ಮುಂದಿನ ವಾರದ ಕೊನೆಯಲ್ಲೇ ಎರ್ನಾಕುಲಮ್ ನ ಪ್ಯಾಲೇಸ್ ಗ್ರೌಂಡ್ ನಲ್ಲಿ ಕಥಕ್ಕಳಿ ನೋಡೋಕೆ, ನಾನು ಬಾಬು ಮುಂದಿನ ಸಾಲಲ್ಲಿ ಕುಳಿತಿದ್ವು.

ಕಥಕ್ಕಳಿ, ಕೇರಳದ ‘ ಐಕಾನ್’. ನಾಡ ಕಲೆ ಅನ್ನಿಸಿಕೊಳ್ಳುವಷ್ಟು ಪ್ರೀತಿಯಿಂದ ಜತನದಿಂದ ಕೇರಳಿಗರು ಕಾಪಿಟ್ಟುಕೊಂಡು ಬಂದ ಕಲೆ. ಸುಮಾರು ಹದಿನೇಳನೆಯ ಶತಮಾನದ ಹೊತ್ತಿಗೆ ಪೂರ್ಣಪ್ರಮಾಣದಲ್ಲಿ ರೂಪಿತವಾದ ಈ ಕಲೆ ಬ್ರಿಟಿಷರ ಕಾಲದಮಿನ್ನೇನು ನಶಿಸಿಹೋಗ್ತದೆ ಅನ್ನೋ ಹೊತ್ತಿಗೆ ‘ ಕಲಾಮಂಡಲಂ’ ನ್ನ ಹುಟ್ಟುಹಾಕಿದ ವಲ್ಲತ್ತೂರು ಮೆನನ್ ರಂಥ ಹಿರಿಯರು ಅದರ ವೈಶಿಷ್ಟ್ಯಗಳೂ ಮೂಲರೂಪವೂ ನಶಿಸದಂತೆ ಕಲೆಯನ್ನ ಮತ್ತೆ ಮುನ್ನೆಲೆಗೆ ತಂದರು. ಈಗ ಕಲಾಮಂಡಲಂನಲ್ಲಿ ಕಲಿತ ನೂರಾರು ಕಲಾವಿದರು ಈ ಆಟವನ್ನ ಮೂಲ ರೂಪದಲ್ಲಿಯೇ ನಾಡು, ಹೊರನಾಡು, ಹೊರದೇಶಗಳಿಗೂ ಒಯ್ದು ಪ್ರದರ್ಶನ ಮಾಡ್ತಿದಾರೆ. ಹಾಗಂತ ಆ ಕಲೆ ನಿಂತ ನೀರಾಗಿ ಉಳಿದಿಲ್ಲ. ಸಾಕಷ್ಟು ಪ್ರಯೋಗಗಳೂ ನಡೆದಿವೆ. ಕಥಕ್ಕಳಿ ಶ್ರೀಮಂತವಾಗಿದೆ.

ರಾಮಾಯಣ, ಮಹಾಭಾರತ, ಪುರಾಣದ ಕಥೆಗಳನ್ನ ಹೇಳೋ ಈ ಕಥಕ್ಕಳಿ ಉಳಿದ ಶಾಸ್ತ್ರೀಯ ಕಲಾಪ್ರಕಾರಗಳಂತೆ ಹಾಡು, ನೃತ್ಯ, ಅಭಿನಯಗಳ ಮೇಳಾಮೇಳಿ.

‘ಅಟ್ಟಕಥಾ’ ಎನ್ನೋ ಸಂಸ್ಕೃತಮಯ ಮಲಯಾಳಮ್ ನಲ್ಲಿ ರಚಿತವಾಗಿರೋ ಪ್ರಸಂಗಗಳ ಮೇಲೆ ಆಧರಿತವಾಗಿರೋದು. ಕಥಕ್ಕಳಿಯಲ್ಲಿ ‘ ಶ್ಲೋಕ’ ಮತ್ತು ‘ ಪದ’ ಎನ್ನೋ ಎರಡು ಭಾಗಗಳು. ಸಂಸ್ಕೃತಮಯವಾಗಿರೋ ‘ ಶ್ಲೋಕ’ ಕಥೆ ಹೇಳಿದ್ರೆ, ಮಲಯಾಳಿ ‘ ಪದ’ ಮಾತುಗಳ ಭಾಗ.

ಅಭಿನಯ ತುಂಬಾ ಕ್ಲಿಷ್ಟಕರ. ಸಂಭಾಷಣೆಗಳ ಭಾಗವನ್ನ ಮುದ್ರೆಗಳಲ್ಲಿ ಹೇಳಿದ್ರೆ, ಭಾವಗಳನ್ನ ತೋರಿಸೋದು ಮುಖಾಭಿನಯ ಮತ್ತು ಕಣ್ಣುಗಳ ಚಲನೇಲಿ. ಮಾರ್ಷಿಯಲ್ ಆರ್ಟ್ ಗಳಿಂದಲೂ ಸಾಕಷ್ಟು ಪಡಕೊಂಡಿರೋ ಕಥಕ್ಕಳಿ ತುಂಬಾ ಕಷ್ಟದ,ಕ್ಲಿಷ್ಟಕರ ಕಲಾಪ್ರಕಾರ ಅನ್ನಿಸಕೊಳ್ತದೆ. ಒಂದು ಪಾತ್ರ ಮಾಡೋಕೇನೇ ವರ್ಷಾನುಗಟ್ಟಲೇ ತಯಾರಿ ಬೇಕು.

ತುಂಬ ಸರಳವಾದ ರಂಗಸಜ್ಜಿಕೆ. ರಂಗದ ಮಧ್ಯೆ ಮುಂಭಾಗದಲ್ಲಿ ‘ ಕಳಿವಿಳಕ್ಕು’ ( ಆಟದ ದೀಪ) ಅದರ ಹಿಂದೆಯೇ ಪ್ರದರ್ಶನ ನಡೆಯೋದು. ‘ಆಟದ ಅರೆನಾ’. ಹಿಂದೆ ಬಲಭಾಗದಲ್ಲಿ ವಾದ್ಯಗಾರರು. ಸ್ವಲ್ಪ ಮುಂದೆ ಹಾಡುಗಾರರು. ಹಿಂದೆಲ್ಲ ಆಟ ‘ ಕಳಿವಿಳಕ್ಕು’ ದೀಪದ ಬೆಳಕಲ್ಲೇ ನಡೆಯೋದು. ಹಾಡುಗಾರರು ಎಲ್ಲರಿಗೋ ಕೇಳಿಸುವ ಹಾಗೆ ಜೋರಾಗಿ ಹಾಡೋರು. ರಾತ್ರಿ ಬೆಳಗಿನ ತನಕ ಆಟ. ಕೆಲವು ಬಾರಿ ಎರಡು, ಮೂರು ದಿನ ಕೂಡ. ಈಗ ‘ಸಮಯಮಿತಿ’ ಪ್ರದರ್ಶನಗಳು ಶುರುವಾಗಿವೆ. ‘ಪುರುಷರಿಗೆ ಮಾತ್ರ’ ಎನಿಸಿಕೊಂಡಿದ್ದ ಕಥಕ್ಕಳಿಗೆ ಈಗ ಮಹಿಳೆಯರ ಪ್ರವೇಶವಾಗಿದೆ.

ವಾದ್ಯದ ವಿಚಾರದಲ್ಲೂ ಕಥಕ್ಕಳಿ ಬಹಳ ಸರಳ. ಮದ್ದಲೆ, ಚಂಡೆ ಮತ್ತು ಇಡಕ್ಕ ಎನ್ನೋ ಚಿಕ್ಕ ಚರ್ಮ ವಾದ್ಯ. ಕಲಾವಿದರು ನಿಂತುಕೊಂಡೇ ವಾದ್ಯಗಳನ್ನ ನುಡಿಸೋದು.ನಮ್ಮ ಯಕ್ಷಗಾನದಂತೆ ಹಾಡುಗಾರರು ತಾಳ ಬಾರಿಸುತ್ತ ಹಾಡುಗಳನ್ನ ಹಾಡ್ತಾರೆ. ಆದರೆ ಹಾಡಿನ ಧ್ವನಿಯ ರೂಪಗಳು ಮೂಡ್ ಗೆ ತಕ್ಕಂತೆ ಬದಲಾಗ್ತವೆ. ಕೋಪದ ಭಾವಕ್ಕೆ ತೀಕ್ಷ್ಣವಾದ ಎತ್ತರದ ಧ್ವನಿಯಾದ್ರೆ, ಸಂಭಾಷಣೆಗಳಲ್ಲಿ ಮಂದ್ರವಾಗಿ ಕೆಳ ಸ್ಥಾಯಿಯಲ್ಲಿರ್ತದೆ.

ಕಥಕ್ಕಳಿಯ ವೈಶಿಷ್ಟ್ಯವಿರೊದೇ ಅದರ ವಿವರವಾದ ಬಣ್ಣ್ನಗಾರಿಕೆ ಮತ್ತು ವಸ್ತ್ರವಿನ್ಯಾಸದಲ್ಲಿ. ವೇಷ ಕಟ್ಟೋಕೆ, ಬಣ್ಣ ಹಚ್ಚಿಕೊಳ್ಳೋಕೆ ಎಷ್ಟೋ ಗಂಟೆಗಳೇ ಬೇಕು. ಅಕ್ಕಿಯ ಹಿಟ್ಟಿನ ಪೇಸ್ಟ್ ಮತ್ತು ಸಸ್ಯಮೂಲ ಬಣ್ಣಗಳನ್ನಲ್ಲದೇ ಬೇರೆ ಬಣ್ಣಗಳಿಲ್ಲ.ಬಣ್ಣಗಾರಿಕೆಯಲ್ಲಿ ಆರು ಬಗೆಯ ಶೈಲಿಗಳು. ಮುಖದ ಬಣ್ಣಗಳೇ ಪಾತ್ರಗಳ ವ್ಯಕ್ತಿತ್ವವನ್ನೂ ಹೇಳುತ್ತವೆ. ಉದಾಹರಣೆಗೆ: ರಾವಣ, ದುಷ್ಟಬುದ್ಧಿ ಯಂಥ ಪಾತ್ರಗಳಿಗೆ ಮುಖದ ಬಣ್ಣ ಕೆಂಪು. ಧೀರ ಪಾತ್ರಗಳಿಗೆ ಹಸಿರು ಬಣ್ಣ, ಕಾಡುಜನಗಳಿಗೆ, ಬೇಟೆಗಾರಿಗೆ ಕಪ್ಪು ಬಣ್ಣ, ಸನ್ಯಾಸಿಗಳಿಗೆ, ಸ್ತ್ರೀ ಪಾತ್ರಗಳಿಗೆ ಹಳದಿ ಬಣ್ಣ… ಹೀಗೆ. ಜೊತೆಗೆ ಅಕ್ಕಿಯ ಹಿಟ್ಟಿನಿಂದ ರಚಿತವಾಗೋ ಬೇರೆ ಬೇರೆ ರೀತಿಯ ಮುಖ ವಿನ್ಯಾಸಗಳು. ಇವೆಲ್ಲ, ವಿಸ್ತಾರವಾದ ವಸ್ತ್ರಗಳೊಂದಿಗೆ, ಕಿರೀಟ, ಶಿರೋಭೂಷಣಗಳೊಂದಿಗೆ ಸೇರಿ ಕಟ್ಟಿಕೊಡುವ ಪಾತ್ರದ ನೋಟವೇ ಅದ್ಭುತ.

ಪ್ಯಾಲೇಸ್ ಗ್ರೌಂಡ್ ನಲ್ಲಿ ನಾವು ನೋಡಿದ ಆಟ, ‘ಕೀಚಕ ವಧ’. ಪದ್ಮನಾಭನ್ ಸೈರಂಧ್ರಿಯ ಪಾತ್ರ ಮಾಡಿದ್ರು. ಮೂರು ಘಂಟೆಯ ಪ್ರದರ್ಶನವದು. ಮುದ್ರೆಗಳ ವಿನ್ಯಾಸಗಳನ್ನೆಲ್ಲ ಮೊದಲ ಬಾರಿ ಅರ್ಥ ಮಾಡಿಕೊಳ್ಳೋದು ಕಷ್ಟ. ನಮ್ಮಂಥವರಿಗೆ ಹಾಡುಗಳನ್ನ ಫಾಲೋ ಮಡೋದೂ ಸಾಧ್ಯವಿಲ್ಲ. ಆದರೂ ಕಥೆಯ ನಡೆ ಗೊತ್ತಿರೋದ್ರಿಂದ, ಅಭಿನಯ ಸೂಕ್ಷ್ಮಗಳನ್ನ ಅರ್ಥ ಮಾಡಿಕೊಳ್ಳೋದು ಸಾಧ್ಯವಾದುದರಿಂದ ಆಟ ನೋಡೋದು ಸುಲಭವಾಯ್ತು. ಕೊನೆಯ ಕೀಚಕ ವಧ ಸನ್ನಿವೇಷದಲ್ಲಂತೂ ಭೀಮ, ಕೀಚಕರ ನಡುವಿನ ಸೆಣಸಾಟದಲ್ಲಿ ಕಲಾವಿದರು ತೋರಿದ ಹೊಂದಾಣಿಕೆ ಮತ್ತು ಹೊರಡಿಸಿದ ಶಬ್ದಗಳು ‘ ಆಟ’ ಎಂದೂ ನೆನಪಿನಲ್ಲಿ ಉಳಿಯೋ ಹಾಗೆ ಮಾಡಿದವು.

‍ಲೇಖಕರು avadhi

December 30, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. G.T. Hegde.

    Kathakkaliya Ella ayamagalannu Sundar nirupanyondige tilisiddakke dhanyavadagalu-.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: