ನಾಡು ಕಾಡುಗಳ ಕಿಂದರ ಜೋಗಿ…

ರಘುನಾಥ್‌ ಕೃಷ್ಣಮಾಚಾರ್

ಕಾಡುಗಳನ್ನು ಕಡಿದು ನಾಡನ್ನು ಕಟ್ಟಿದವರಿದ್ದಾರೆ. ಹಣದ ಲಾಲಸೆಗಾಗಿಯೇ ನಾಟಾಗಳ ಕಳ್ಳಸಾಗಾಣಿಕೆ ಮಾಡಿದವರಿದ್ದಾರೆ. ಆದರೆ ತಮ್ಮ ಸ್ವಂತ ಹಣವನ್ನು ತೆತ್ತು ಕಾಡುಗಳನ್ನು ಬೆಳೆಸುವುದಕ್ಕಾಗಿಯೇ ಕಾಡಿನಲ್ಲಿ ಜಾಗವನ್ನು ಖರೀದಿಸಿ ಮರಗಿಡಗಳನ್ನು ನೆಟ್ಟು ಬೆಳೆಸಿ ವನಸಂರಕ್ಷಣೆ ಮಾಡುತ್ತಿರುವವರು ಇಲ್ಲವೆಂದೇ ಹೇಳಬೇಕು. ಮಂಗಳೂರು ಬಳಿಯ ‘ಅಭಯಾರಣ್ಯ” ಮತ್ತು ಬಿಸಲೆ ಘಾಟಿಯಲ್ಲಿ “ಕಪ್ಪೆಗೂಡೆಂಬ” ಹದಿನಾರು ಎಕೆರೆಗಳ ಕಾಡನ್ನು ಬೆಳೆಸುತ್ತಾ ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಮಣ್ಣಿನ ಋಣವನ್ನು ತೀರಿಸುತ್ತಿರುವ ಸಾಹಸಿಗರೆಂದರೆ ಮಂಗಳೂರಿನ ಅಶೋಕವರ್ಧನ ಮತ್ತು ದೇವಕಿ ದಂಪತಿಯರು.

ಒಂದು ಶತಮಾನದಷ್ಟು ಹಿಂದೆಯೇ ಅಮೇರಿಕಾದ ವಿಲ್ಯಂ ಕೆಂಟ್ ಎನ್ನುವವನು ಆರನೂರು ಎಕರೆ ಕಾಡನ್ನು ಕೇವಲ ಅದರ ರಕ್ಷಣೆಗಾಗಿಯೇ ತನ್ನ ಸ್ವಂತ ಹಣವನ್ನು ಖರ್ಚು ಮಾಡಿ ಖರೀದಿಸಿದ್ದನೆಂದೂ ಇದು ಬಹುಶಃ ವಿಶ್ವದಲ್ಲೇ ಪ್ರಥಮ ನಿದರ್ಶನ ವಿರಬಹುದೆಂದೂ ಅಶೋಕವರ್ಧನ್ ಅವರು ಹೇಳುತ್ತಾರೆ. ವಿಲ್ಯಂ ಕೆಂಟ್ ಅವರ ಪ್ರಭಾವವಿರಬೇಕು ! ಸ್ವಂತ ಹಣ ಖರ್ಚುಮಾಡಿ ಕೇವಲ ವನ್ಯಸಂರಕ್ಷಣೆಗಾಗಿಯೇ ಕಾಡನ್ನು ಖರೀದಿಸಿ ಬೆಳೆಸುತ್ತಿರುವ ಅಶೋಕವರ್ಧನ್ ಕನ್ನಡಿಗರಲ್ಲೂ ಆದ್ಯರೇ ಇರಬೇಕು.

ಕಳೆದ ಶತಮಾನದ ಕೊನೆಯ ಭಾಗದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ದತ್ತಿ ಉಪನ್ಯಾಸ ನೀಡಲು ಬಂದಿದ್ದ ಇವರ ತಂದೆ, ಕನ್ನಡದ ಅನನ್ಯ ವೈಚಾರಿಕ ಪ್ರೊಫೆಸರ್ ಜಿ.ಟಿ.ನಾರಾಯಣರಾವ್ ಅವರು. ಅವರದೇಹವನ್ನು plastination ಮಾಡಿ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಇಡಲಾಗಿದೆ. ಜಿ.ಡಿ.ಎನ್ ಅವರನ್ನು ನೋಡದವರು ಈಗಲೂ ನೋಡಿಕೊಂಡು ಬರಬಹುದು. ಗಾಜಿನ ಮನೆಯಲ್ಲಿ ನಿರಾಳ ಮಲಗಿದ್ದಾರೆ.
ಬಹಳ ಹಿಂದೆ ಜಿ.ಟಿ.ಎನ್. ಅವರು ಮುಂಬಯಿಗೂ ಬಂದಿದ್ದರು. ಅಂದು ಮೈಸೂರು ಅಸೋಸಿಯೇಷನ್ ನಲ್ಲಿ ಉಪನ್ಯಾಸ ನೀಡಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದ ನೆನಪು ಇನ್ನೂ ಹಸಿಯಾಗಿದೆ.

ತಂದೆಯವರ ಹಾಸ್ಯಪ್ರಜ್ಞೆಯೇ ಅವರ ಮಗನಾದ ಅಶೋಕ್ ಅವರಿಗೂ ಬಂದಿದೆ- ಜೊತೆಗೆ ಅವರ ಪ್ರಖರ ವೈಚಾರಿಕತೆಯೂ. ಸಾಂಪ್ರದಾಯಿಕ ಕುಟುಂಬದಿಂದ ಬಂದ ದೇವಕಿ ಮತ್ತು ವೈಚಾರಿಕತೆಯೇ ಉಸಿರಾಗುಳ್ಳ ಅಶೋಕ್ ವರ್ಧನ್ ಅವರ ದಾಂಪತ್ಯಕ್ಕೆ ಎಂದೂ ಕುಂದುಂಟಾಗಿಲ್ಲ. ಯಾಕೆಂದರೆ ಸಾಂಪ್ರದಾಯಿಕತೆಯನ್ನೂ, ವೈಚಾರಿಕತೆಯನ್ನೂ ಆರೋಗ್ಯಕರವಾಗಿ ಕಸಿಮಾಡಿಕೊಂಡಿರುವ ನಿಲುವು ದೇವಕಿಯವರದು. ಅಶೋಕ್ ಅವರ ಜೊತೆ ಕಾಡುಮೇಡು ಸುತ್ತುತ್ರಾ ವನ್ಯಸಂರಕ್ಷಣೆಯ ಅವರ ಯೋಜನೆಗಳಿಗೆ ನೆರವು ನೀಡುತ್ತಿದ್ದಾರೆ. ಅವರ ದಾಂಪತ್ಯ ಅನುರೂಪವಾದುದು.

೨೦೦೦ ದಲ್ಲಿ ಗಿರಿಜಾ ಅವರು ಮಾಡಿದ ಪಿ ಎಚ್ ಡಿ ಮಹಾಪ್ರಬಂಧ ‘ಕಥಾಮಾನಸಿ’ಯ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ಅದರ ಪ್ರತಿಗಳನ್ನು ವಿಲೇವಾರಿ ಮಾಡುವಾಗ, ನಮಗೆ ನೆನಪು ಬಂದದ್ದು, ಅವರ ಮಗ ಅಶೋಕವರ್ಧನ್ ಮಂಗಳೂರಿನಲ್ಲಿ ನಡೆಸುತ್ತಿದ್ದ ಖ್ಯಾತ ‘ಅತ್ರಿ ಬುಕ್ ಸೆಂಟರ್” ಎಂಬ ಪುಸ್ತಕದಂಗಡಿ ! ಅಲ್ಲಿಗೆ ಹೋಗಿ ಅದರ ಹತ್ತು ಪ್ರತಿಗಳನ್ನು ನೀಡಿದಾಗ, ಅಪರಿಚಿತರಾಗಿದ್ದ ನಮ್ಮಿಂದ ಮರುಮಾತನಾಡದೆ ಕೊಂಡು, ಅದರ ಮೊಬಲಗನ್ನು ಕೂಡಲೇ ಪಾವತಿ ಮಾಡಿದ, ಅವರ ವ್ಯಾವಹಾರಿಕ ಪ್ರಾಮಾಣಿಕತೆ ನಮ್ಮನ್ನು ಚಕಿತಗೊಳಿಸಿತು.

ಮಂಗಳೂರಿನ ಬಹಳ ಪ್ರಮುಖ ಜಾಗದಲ್ಲಿದ್ದ ‘ಆತ್ರಿ ಬುಕ್ ಸೆಂಟರ್’ ಈಗ ಮುಚ್ಚಿದೆ. ಲಾಭದಾಯಕವಾದ ಪುಸ್ತಕೋದ್ಯಮವನ್ನು ತ್ಯಜಿಸಿ ಈಗ ಕಾಡಿನ ಕಡೆಗೆ ನಡೆದಿದ್ದಾರೆ – “ಕಾಡ ಮೂಲಕವೆ ಪಥ ಆಗಸಕ್ಕೆ” ಎನ್ನುವಂತೆ! ನಿಜವಾದ ವಾನಪ್ರಸ್ಥ ಎಂದರೆ ಇದೇ ಅಲ್ಲವೇ? ಮಣ್ಣಿನ ಶರೀರವನ್ನು ಮಣ್ಣಿನ ಶ್ರೇಯಸ್ಸಿಗಾಗಿ ಮುಡಿಪಾಗಿಡುವುದು! ಅವರು ಕ್ರಿಮಿನಾಶಕಗಳನ್ನು ಬಳಸುವುದಿಲ್ಲ, ಸೊಳ್ಳೆ ಬತ್ತಿಗಳನ್ನೂ ಉರಿಸುವುದಿಲ್ಲ. ಎಲ್ಲದರಲ್ಲೂ ಅವರದು ಸಾವಯವ ಸಂಸ್ಕೃತಿ!

ಅವರು ಮೊಗಹೊತ್ತಿಗೆಯಲ್ಲಿ ತಮ್ಮ ಚಾರಣ ಸಾಹಸಗಾಥೆಯನ್ನು ಬರೆಯಲಾರಂಭಿಸಿದಾಗ “ಎತ್ತಣ ಪುಸ್ತಕದಂಗಡಿ ಎತ್ತಣ ಚಾರಣ” ಎಂಬ ಬೆರಗುಂಟಾಯಿತು. ಕ್ರಮೇಣ ಅವರು ನಾನು ಓದಿದ ಕಾಲೇಜಿನಲ್ಲಿ ನನಗಿಂತ ಮೊದಲೇ ಓದಿದ ನನ್ನ ಹಿರಿಯ ಸಹಪಾಠಿ, ಎಂದು ತಿಳಿದು ರೋಮಾಂಚನ ಉಂಟಾಯಿತು. ಅದರಲ್ಲೂ, ಅವರ ತಂದೆ ಬೆಂಗಳೂರಿನಲ್ಲಿ ಅದೆ ಕಾಲೇಜ್ ನಲ್ಲಿ ಅಧ್ಯಾಪಕರಾಗಿದ್ದಾಗ, ಮಾಸ್ತಿಯವರ ಬಳಿಗೆ ಹೋಗಿ ಅವರ ಆತ್ಮಚರಿತ್ರೆಯ “ಭಾವ” ದ ಮೂರು ಸಂಪುಟಗಳನ್ನು ಬರೆದುಕೊಟ್ಟ ಸಾರಸ್ವತ ಗಾಥೆಯನ್ನು ಓದಿ ಕೃತಜ್ಞತೆ ಉಂಟಾಯಿತು- ಆಗ ತಾನೇ ನಾನು ಮು.ವಿವಿ.ಕನ್ನಡ ಎಂ.ಎ.ವಿದ್ಯಾರ್ಥಿಗಳಿಗೆ ಅದನ್ನು ಪಾಠ ಮಾಡುತ್ತಿದ್ದೆ.

ಅವರ ಜತೆಗೆ ಮೊಗಹೊತ್ತಿಗೆಯಲ್ಲಿ ನಮ್ಮ ಸಂವಾದ ಆರಂಭವಾಯಿತು. ಈಚೆಗೆ ಗಿರಿಜಾ ಅನುವಾದ ಮಾಡಿದ ಕಾದಂಬರಿ ‘ಸಾವಿತ್ರಿ’ ಯ ರಂಗರೂಪಕ ‘ಆನಂದ ಭಾವಿನಿ’ಯನ್ನು, ಮಂಗಳೂರು ವಿ.ವಿ ಯಲ್ಲಿ ‌ನೋಡಿ ಬಂದು ,ಅದನ್ನು ಕುರಿತು ಸಮೀಕ್ಷೆ ಬರೆದಾಗ, ಅವರ ವೈವಿಧ್ಯಮಯ ಆಸಕ್ತಿ ಕಂಡು ಬೆರಗುಂಟಾಯಿತು. ಅವರಿಗೆ ಕೃತಜ್ಞತೆ ವ್ಯಕ್ತಪಡಿಸಿ ,ಅವರು ಕಾಡು ಮಾಡಿದ ಸಾಹಸಗಾಥೆಯನ್ನು ಕೇಳಿ ,ಅದನ್ನು ನೋಡುವ ಕುತೂಹಲ ಗಿರಿಜಾ ಅವರಲ್ಲಿ ವ್ಯಕ್ತಪಡಿಸಿದಾಗ ,ಅವರು ಬನ್ನಿ ಎಂದು ಆಹ್ವಾನಿಸಿದರು. ಆಗ, ನಾವು ಗೆಳೆಯರಾದ ಡಾ.ನರಸಿಂಹಮೂರ್ತಿಯವರ ಮನೆಯಲ್ಲಿ ಇದ್ದೆವು. ನಮ್ಮ ಉತ್ಸುಕತೆಯನ್ನು ತಿಳಿದು, ಮೊದಲೇ ಗೆಳೆಯರಾದ ಅವರ ಮನೆಗೆ, ನಮ್ಮನ್ನು ಕರೆದುಕೊಂಡು ಹೋಗಲು ಉತ್ಸಾಹದಿಂದ ಮೂರ್ತಿ ಸಿದ್ದರಾದರು. ತಿಂಡಿ ತಿಂದು ಅಲ್ಲಿ ತಲುಪಿದಾಗ ಒಂಬತ್ತೂವರೆ ಆಗಿತ್ತು.

ಕಲಾತ್ಮಕ ಹಾಗೂ ಸಾರಸ್ವತ ಭಂಡಾರದಂತಿದ್ದ ಅವರ ಮನೆಯನ್ನು ನೋಡಿ, ಅಲ್ಲಿಂದ ಹೊರಡುವ ಮುನ್ನ ,ಅವರ ತಂದೆಯವರ ವೈವಿಧ್ಯಮಯ ಆಸಕ್ತಿಗೆ ನಿದರ್ಶನವಾದ, ಎರಡು ಪುಸ್ತಕಗಳನ್ನು ಉಡುಗೊರೆ ಕೊಟ್ಟರು. ಅವರ ಶ್ರೀಮತಿ ಅವರ ಪತಿಯನ್ನು ಹೆಸರು ಹಿಡಿದು ಕರೆಯುತ್ತಿದ್ದುದನ್ನು ಕಂಡು ದಿಗ್ಭ್ರಮೆ ಉಂಟಾಯಿತು. ಇದೇನು ಬಂತು ‘ಕಲಿಗಾಲವೆಂದರೆ ಇದೆ ‘, ಎಂದು ಕೊಂಡೆ. (ನಾವೂ ಅದೇ ಜಾತಿಗೆ ಸೇರಿದವರು. ವಯಸ್ಸಿನಲ್ಲಿ ಅವರಿಗಿಂತ ಕೆಲವು ವರ್ಷಗಳಷ್ಟೇ ಕಿರಿಯರು) ತಮ್ಮ ಕಾರಿನಲ್ಲಿ ನಮ್ಮನ್ನು ಅವರ ಅಭಯಾರಣ್ಯವೆಂಬ ಕಾಡಿಗೆ ಕರೆದುಕೊಂಡು ಹೋದರು. ಅವರ ಬಂಧು ಸತ್ಯನಾರಾಯಣರ ಐವತ್ತು ಎಕರೆ ಜಾಗದಲ್ಲಿ ಒಂದೆರಡು ಎಕರೆಗಳಷ್ಟು ಖರೀದಿಸಿ ಕಾಡು ಬೆಳೆಸುತ್ತಿದ್ದಾರೆ.

ಅಭಯಾರಣ್ಯಕ್ಕೆ ಹೋಗುವಾಗ ದಾರಿಯಲ್ಲಿ ಒಂದು ಹೋಟೆಲ್ ನೆದುರು ನಿಲ್ಲಿಸಿದರು. ನಾನೆಲ್ಲೋ ನಮಗೆ ಕಾಫಿ ಸಮಾರಾಧನೆ ಮಾಡಿಸುತ್ತಾರೆ ,ಎಂದು ಸಂಭ್ರಮದಿಂದ ಇದ್ದರೆ, ಒಬ್ಬರೆ ಹೋಗಿ ನಿರಾಸೆಗೊಳಿಸಿದರು. ಬರುವಾಗ ಅವರ ಕೈಯಲ್ಲಿ ಎರಡು ದೊಡ್ಡ ಡಬ್ಬಿಗಳು . ನನಗೆ ಅದರಲ್ಲಿ ಏನಿರಬಹುದು ಎಂದು ಕುತೂಹಲ. ಆದರೆ ಕೇಳುವುದು ಹೇಗೆ ಎಂದು ಸುಮ್ಮನಾದೆ.

ಅವರ ಅಭಯಾರಣ್ಯ ತಲುಪಿದ ನಂತರ ಅವರ ಶ್ರೀಮತಿ ಆ ಕಾಡುಮನೆಯಲ್ಲಿ ಚಹ ಮಾಡಿಕೊಟ್ಟರು.ಕಾಡಿನಲ್ಲಿ ಕೂಡ ಮನೆ ಇರಬಹುದು ಎಂದು ನನಗೆ ಗೊತ್ತಾದದ್ದು ಆಗಲೇ.ನಮ್ಮ ನರಸಿಂಹಮೂರ್ತಿ ಬಾವಿಯಿಂದ ನೀರು ಸೇದಿ ಕೊಟ್ಟರೆ, ನನ್ನ ಸಂಗಾತಿ ಅದನ್ನು ಸೊಂಟಕ್ಕೆ ಇರುಕಿಕೊಂಡು ಬಂದರು.

ಚಹ ಹೊಟ್ಟೆಗೆ ಬಿದ್ದ ಮೇಲೆ ಕಾಡಿನಲ್ಲಿ ಸುತ್ತುವ ಹುಕಿ ಬಂದಿತು. ಎಲ್ಲಿ ನೋಡಿದರೂ ಉದ್ದೋ ಉದ್ದದ ಬಿದುರಿನ ಮರಗಳು ( gaint bamboo)! ತರ ತರದ ಗಿಡಗಳ ನಡುವೆ ದಾರಿ ಮಾಡಿಕೊಂಡು ಹೋಗುವಾಗ, ಎಲ್ಲಿ ಬಿದ್ದು ಬಿಟ್ಟರೆ ಎಂಬ ಭಯ ಬೇರೆ. ಬೊಂಬಿನ ಮರಗಳು ಒತ್ತಟ್ಟಿಗೆ ಇದ್ದುದನ್ನು ನೋಡಿ, “ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ” ಎಂಬ ಅಡಿಗರ ಕವನದ ಸಾಕ್ಷಾತ್ಕಾರ ಮೊದಲ ಬಾರಿಗೆ ಆಯಿತು.
ದಾರಿಯ ಬದಿಗೆ ಸತ್ಯನಾರಾಯಣ ಅವರು ಸಂಗ್ರಹಿಸಿರುವ ಬೃಹದಾಕಾರದ ಅನೇಕ ಒರಳುಕಲ್ಲುಗಳು ಕಾಣ ಸಿಗುತ್ತವೆ. ನಶಿಸಿ ಹೋಗುತ್ತಿರುವ ಒಂದು ಸಂಸ್ಕೃತಿಯ ಪ್ರತೀಕವಾಗಿ ನಿಂತಿವೆ!! ಜನರಿಗೆ ಬೇಡವಾಗಿ ಬಿದ್ದುಕೊಂಡಿರುವ ಅಂತಹ ಹಲವಾರು ಒರಳು ಕಲ್ಲುಗಳನ್ನು ಲಾರಿಯಲ್ಲಿ ಹಾಕಿಕೊಂಡು ಬಂದಿದ್ದಾರೆ. ತಮ್ಮ ಕಾಡಿನದಾರಿಯ ಬದಿಗಳಲ್ಲಿ ಅವನ್ನು ಅಲಂಕಾರಿಕವಾಗಿ ಇರಿಸಿದ್ದಾರೆ.

ಅಲ್ಲಿ ತಿರುಗಾಡಿ ಮರಳಿ ಕಾಡುಮನೆಗೆ ಬಂದಾಗ, ಅವರು ಹೋಟೆಲ್ ನಿಂದ ಹೊತ್ತು ತಂದಿದ್ದ ಡಬ್ಬಿಗಳ ಉದ್ಘಾಟನಾ ಸಮಾರಂಭ ಮಾಡಿದರು. ಅದರಿಂದ ಅವರು ಕೊಟ್ಟ ಸ್ಟೀಲ್ ತಟ್ಟೆಗೆ ಫಲಾವ್ ಬಿದ್ದಿತು. ಆಗ ಮೊದಲು ಉಂಟಾಗಿದ್ದ ಕುತೂಹಲ ತಣಿಯಿತು.ಅದರ ಜತೆಗೆ ಅವರು ಮೊಸರನ್ನ ಉಪ್ಪಿನಕಾಯಿ ಬಡಿಸಿದಾಗ ಹೊಟ್ಟೆ ತಂಪಾಯಿತು. ಜೊತೆಗೆ ಹಲಸಿನ ಪಾಯಸ ಬೇರೆ! ವಿಶಿಷ್ಟ ರುಚಿ! ಸಕ್ಕರೆಗಿಂತ ಹೆಚ್ಚಾಗಿ ಪ್ರೀತಿಯನ್ನೇ ಬೆರೆಸಿದಂತಿತ್ತು.

ಆಗ ಮಾತು ಮೊಳಕೆಯೊಡೆಯಿತು” ಇದನ್ನೆಲ್ಲಾ ಮಾಡಲು ನೀವೇ ಸ್ಪೂರ್ತಿ ನಾ” ಎಂದು ಅವರ ಶ್ರೀಮತಿಯನ್ನು ಕೇಳಿದೆ.ಅವರು ” ನಾನು ಅಲ್ಲ,ಇದು ಅವರದೆ ಯೋಜನೆ’ ಎಂದರು. ಖಾಸಗಿಯಾಗಿ ಕಾಡನ್ನು ಹೊಂದಬಹುದು ಎಂದು ಗೊತ್ತಾಗಿದ್ದೆ ಇದನ್ನು ನೋಡಿದ ಮೇಲೆ. ಅವರನ್ನೇ ಕೇಳಿದೆ” ಇಂಗ್ಲಿಷ್ ಸಾಹಿತ್ಯ ಓದಿದ ನಿಮಗೆ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳಾದ ವರ್ಡ್ಸ್ ವರ್ತ್ ಮುಂತಾದವರು ಸ್ಪೂರ್ತಿನಾ” ? ಅದಕ್ಕೆ ಅವರು ಅದನ್ನು ಅಲ್ಲಗಳೆದರು. ಅವರ ಪುಸ್ತಕದಂಗಡಿಯೆ ಅದಕ್ಕೆ ಕಾರಣವಿರಬೇಕು ಎಂದು ನನ್ನ ಊಹೆ. ಯಾಕೆಂದರೆ ಪುಸ್ತಕದಂಗಡಿ ಇರುವಾಗಲೇ ಅವರು ಇದನ್ನು ಮಾಡಿದರಲ್ಲದೆ, ಪ್ರತಿವಾರ ಬೈಕ್ ನಲ್ಲಿ ಅಭಯಾರಣ್ಯಕ್ಕೆ ಬರುತ್ತಿದ್ದರಂತೆ.ಬಹುಶಃ ಪುಸ್ತಕದಂಗಡಿ ಮತ್ತು ಕಾಡನ್ನು ಏಕಕಾಲದಲ್ಲಿ ನಡೆಸಿಕೊಂಡು ಬಂದವರೆಂದರೆ ಇವರೊಬ್ಬರೆ ಕನ್ನಡದಲ್ಲಿ ಎಂದು ನನಗೆ ಕಾಣುತ್ತದೆ.

“ವನವೆಲ್ಲ ನೀವೇ ವನದೊಳಗಣ ತರುವೆಲ್ಲ ನೀವೇ” ಎಂಬ ಅಕ್ಕನ ವಚನದ ಸಾಕ್ಷಾತ್ಕಾರ ಆಗಬೇಕು ಎಂದರೆ ಅಭಯಾರಣ್ಯದ ದರ್ಶನ ನೀವು ಮಾಡಬೇಕು. ಎರಡು ದಶಕಗಳ ಹಿಂದೆ ನಾನು ಮಂಗಳೂರು ವಿ.ವಿ. ಕನ್ನಡ ವಿಭಾಗ ಆಯೋಜಿಸಿದ್ದ ಪುನಃ ಚೇತನ ಶಿಬಿರದಲ್ಲಿ ಭಾಗವಹಿಸಲು ಬಂದಾಗ, ಇಲ್ಲಿ ಇವರು ಆಯೋಜಿಸಿದ ‘ದೊಂದಿ (ಪಂಜಿನ) ಯಕ್ಷಗಾನ’ ನೋಡಿದ್ದೆ. ಅದೇ ಸಂದರ್ಭದಲ್ಲಿ ತೇಜಸ್ವಿವರ ದರ್ಶನ ಮಾಡಿದ್ದ ನೆನಪು ಮರುಕಳಿಸಿತು.

ಕಾಡಿನ ಸಂದುಗೊಂದಿಗಳಲ್ಲಿ ಹಿರಿಯರಾದ ಅಶೋಕ್ ಅವರು ಬಾಲಕನಂತೆ ಪುಟು ಪುಟು ಓಡಾಡುತ್ತಿದ್ದಾಗ ಹಳೆಯ ಹಿಂದಿ ಹಾಗೂ ಕನ್ಬಡ ಹಾಡುಗಳ ಶಿಳ್ಳೆ ಹೊಡೆಯುತ್ತಿದ್ದರು. ಶಿಳ್ಳೆಯೇ ಇಷ್ಟು ಚೆನ್ನಾಗಿದ್ದರೆ ಹಾಡು ಇನ್ನೆಷ್ಟು ಮಧುರವಾಗಿರಬಹುದು. ‘ಒಂದು ಹಾಡು ಹೇಳಿ’ ಎಂದು ಗಿರಿಜಾ ಅವರನ್ನು ಪೀಡಿಸುತ್ತಿದ್ದರು. ಅವರು ಹಾಡಲಿಲ್ಲ ಆದರೆ ಶಿಳ್ಳೆಯನ್ನೂ ನಿಲ್ಲಿಸಲಿಲ್ಲ. ಈ ವಯಸ್ಸಿನಲ್ಲಿ ಅವರ ಉತ್ಸಾಹ ಕಂಡು ನನಗೆ ಅಸೂಯೆಯಾಯಿತು.ಅಶೋಕವನವನ್ನು ಬೆಳೆಸಿದ ಅವರು ಅನ್ವರ್ಥನಾಮಧಾರಿಗಳು.

ಇದಕ್ಕೆಲ್ಲ ಕಾರಣಕರ್ತರಾದ ಅಶೋಕ್ ಅವರಿಗೆ, ಒಂದು ಸಾರ್ಥಕ ದಿನವನ್ನು ಕಳೆಯಲು ಕಾರಣಕರ್ತರಾದ ಅವರ ಶ್ರೀಮತಿ ದೇವಕಿಯವರಿಗೆ ವಂದನೆ, ಅಭಿನಂದನೆ

‍ಲೇಖಕರು Admin

December 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಶೋಭಾ ಹೆಗಡೆ

    ವಿನಾಶದಂಚಿನಲ್ಲಿ ಹಸಿರು..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: