ಮೂಕನಂತೆ ಹೊರಟವನಿಗೆ ಮಾತು ಕಲಿಸುವವರು ಸಿಕ್ಕಂತಾಗಿ…

ಮಂಜುನಾಥ್ ಲತಾ

ನೆನ್ನೆ ಮಧ್ಯಾಹ್ನ ಹೀಗೆಯೇ ಆಯಿತು. ಪುಸ್ತಕಗಳ ವಿನ್ಯಾಸ ಕೆಲಸಕ್ಕೆಂದು ಬೆಂಗಳೂರಿಗೆ ಬಂದುಳಿದಿದ್ದ ನನಗೆ ಎರಡು ದಿನಗಳ ‘ಬೆಂಗಳೂರು ಲಿಟರೇಚರ್ ಫೆಸ್ಟಿವಲ್’ ಥರದ್ದೊಂದು ಇದೆಯೆಂಬುದು ಗೊತ್ತಿರಲಿಲ್ಲ. ನಾಗತಿಹಳ್ಳಿ ರಮೇಶಣ್ಣ ‘ಬಾರೋ ಇಂಥವುಗಳನ್ನೂ ನೋಡಿ ತಿಳಿಯುವುದು ಇರುತ್ತದೆ’ ಎಂದು ಕರೆದರು.

ಅವರೊಂದಿಗೆ ನಾವು ನೇರ ತಲುಪಿದ್ದು ಹಿರಿಯ ಪತ್ರಕರ್ತ, ಸಂಗೀತ ನಿರ್ದೇಶಕ ಎಸ್.ಆರ್. ರಾಮಕೃಷ್ಣ ಸರ್ ಅವರ ಬಳಿಗೆ. ಅವರಾಗಲೇ ಆಲ್ಬಂವೊದರ ರಾಗ ಸಂಯೋಜನೆಯಲ್ಲಿ ತೊಡಗಿದ್ದರು. ತಮ್ಮ ಹೊಸ ‘ರಾಗನುಡಿ’ಯೊಂದನ್ನು ನನಗೆ ಕೇಳಿಸಿ, ನಮ್ಮೊಂದಿಗೆ ಹೊರಟರು.

ನಾನು ಎಂದೂ ಅಂತಹ ‘ಸಾಹಿತ್ಯ ಫೆಸ್ಟಿವಲ್’ಗಳನ್ನು ಕಂಡವನಲ್ಲ;ಅಂತಲ್ಲಿಗೆ ಹೋಗುವ ಸನ್ನಿವೇಶಗಳೂ ಒದಗಿರಲಿಲ್ಲ. ಹಾಗಾಗಿಯೇ ಅಲ್ಲಿ ನನ್ನನ್ನು ಒಂದಿಷ್ಟು ಹೊತ್ತು ಹಿಡಿದು ನಿಲ್ಲಿಸುವ ಕ್ಷಣಗಳು ಕಾಣಲಿಲ್ಲ. ಅಲ್ಲೇ ಬಹು ದಿನಗಳ ನಂತರ ಪತ್ರಕರ್ತ ಗೆಳೆಯ ಮಂಜು ಶೆಟ್ಟರ್ ಸಿಕ್ಕಿದ್ದು ಒಂದಿಷ್ಟು ಸಮಾಧಾನ ತಂದಿತು. ಮೂಕನಂತೆ ರಮೇಶಣ್ಣ, ರಾಮಕೃಷ್ಣ ಸರ್, ಮಂಜು ಶೆಟ್ಟರ್ ಕರೆದೊಯ್ದ ಕಡೆ ಅಡ್ಡಾಡಿದೆ.

ಸಾಕೆನ್ನಿಸಿ ಹೊರ ಬಂದಾಗ ರಾಮಕೃಷ್ಣ ಸರ್ ‘ಇರಿ ನಮ್ಮ ಕಾರಲ್ಲಿಯೇ ಸಣ್ಣದೊಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾಡೋಣ’ ಎಂದಾಗ ಎಲ್ಲರಿಗೂ ಸಣ್ಣದೊಂದು ಅಚ್ಚರಿ. ‘ಕಾರುಗಳೇ ತುಂಬಿದ್ದ ಅಶೋಕ ಹೋಟೆಲ್‌ನ ‘ಕಾರುಜಾತ್ರೆಯ ಟ್ರಾಫಿಕ್ ಸಿಕ್ಕು’ಗಳಿಂದ ಬಿಡಿಸಿಕೊಂಡು ಪಕ್ಕದಲ್ಲಿಯೇ ಇದ್ದ ಕುಮಾರ ಕೃಪಾ ಅತಿಥಿ ಗೃಹದ ಪಾರ್ಕ್ ಬೆಂಚೊಂದರ ಮುಂದೆ ಪುಸ್ತಕ ಬಿಡುಗಡೆಗೆ ಸಜ್ಜಾದೆವು.

ಅದು ದೇವನೂರ ಮಹಾದೇವ ಅವರ ‘ಆರ್‌ಎಸ್‌ಎಸ್: ಆಳ ಮತ್ತು ಅಗಲ’ ಪುಸ್ತಕದ ಇಂಗ್ಲಿಷ್ ಅನುವಾದ ‘ಆರ್‌ಎಸ್‌ಎಸ್: ದಿ ಲಾಂಗ್ ಅಂಡ್ ದಿ ಶಾರ್ಟ್ ಆಫ್ ಇಟ್’ ಬಿಡುಗಡೆಯ ಸಾಂಕೇತಿಕ ಕಾರ್ಯಕ್ರಮ. ಈಗಾಗಲೇ ದೇವನೂರರ ಈ ಪುಟ್ಟ ಪುಸ್ತಕ ಉಂಟು ಮಾಡಿರುವ ಸಂಚಲನದ ಬಗ್ಗೆ ಎಲ್ಲರಿಗೂ ಗೊತ್ತಿರುವುದರಿಂದ ಮತ್ತೆ ಹೇಳಬೇಕಿಲ್ಲ. ಈ ಕೃತಿಯನ್ನು ತಮ್ಮ ಬಿಡುವಿಲ್ಲದ ದಿನಚರಿಯ ನಡುವೆ ರಾಮಕೃಷ್ಣ ಸರ್ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ; ಅದು ಅವರ ಎಂದಿನ ಸದ್ದಿಲ್ಲದ ಕಾಳಜಿ. ಹಲವು ನೆಲೆಗಳಲ್ಲಿ, ಹಲವು ಹಿನ್ನೆಲೆಯ ಜನರನ್ನು ತಲುಪಿರುವ ದೇವನೂರರ ಈ ಪುಸ್ತಕ ಇನ್ನೂ ‘ಹಲವು ಮೆಟ್ಟಿಲಿನ ಜನ’ರನ್ನು ತಲುಪುವಂತಾಗಬೇಕಿದೆ.

‘ಸಾಹಿತ್ಯ ಫೆಸ್ಟಿವಲ್’ನಲ್ಲಿ ಕೆಲ ಹೊತ್ತಷ್ಟೇ ಕೆಲವೇ ಮಾತುಗಳನ್ನು ಕೇಳಿಸಿಕೊಂಡು, ‘ನನ್ನ ಜನರಂತೆ ಕಾಣಿಸದ’ ಅಲ್ಲಿನ ಜನರನ್ನೆಲ್ಲ ಮೂಕನಂತೆ ನೋಡಿ ಹೊರಬಂದ ನನಗೆ ರಾಮಕೃಷ್ಣ ಸರ್, ರಮೇಶಣ್ಣ, ಆಗಷ್ಟೇ ಪರಿಚಯವಾದ ತುಮಕೂರಿನ ಹಿರಿಯರಾದ ಶಿವಾನಂದ, ಪತ್ರಕರ್ತ ಗೆಳೆಯ ಮಂಜು ಶೆಟ್ಟರ್ ಮಾತು ಕಲಿಸುವಂತಹವರಾಗಿ ಕಾಣತೊಡಗಿದರು; ರಾಮಕೃಷ್ಣ ಸರ್ ಅನುವಾದಿಸಿರುವ ದೇವನೂರರ ಈ ಪುಸ್ತಕದ ‘ಒಳದನಿ’ ‘ಸಾಹಿತ್ಯ ಫೆಸ್ಟಿವಲ್’ನ ‘ಆ ನನ್ನ ಜನ’ರಿಗೂ ತಲುಪಬೇಕಾಗಿದೆ ಎಂದು ಅನ್ನಿಸತೊಡಗಿತು.

‍ಲೇಖಕರು Admin

December 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: