-ಸಬಿತಾ ಬನ್ನಾಡಿ
ಇತ್ತೀಚೆಗೆ ಶಿವಮೊಗ್ಗ ರಂಗಾಯಣದಲ್ಲಿ ‘ಸ್ವಾತಂತ್ರ್ಯದ ಓಟ’ ನಾಟಕದ ಟ್ರಯಲ್ ಶೋ ಇತ್ತು. ಮೂರುಗಂಟೆಗೂ ಮೀರಿದ ನಾಟಕ, ಸಮಯ ಸರಿದಿದ್ದೇ ತಿಳಿಯದ ರೀತಿಯಲ್ಲಿ ನಮ್ಮೆಲ್ಲರನ್ನು ಆವರಿಸಿಕೊಂಡಿತು. ನಟರಾಜ ಹೊನ್ನವಳ್ಳಿಯವರ ನಿರ್ದೇಶನದಲ್ಲಿ ಶಿವಮೊಗ್ಗ ರಂಗಾಯಣವು ಈ ನಾಟಕವನ್ನು ನಿರ್ಮಿಸಿದೆ.
ಬೋಳುವಾರು ಮುಹಮ್ಮದ್ ಕುಂಞಿಯವರ ಸಾವಿರದ ನೂರ ಹನ್ನೊಂದು (1111) ಪುಟಗಳ ಬೃಹತ್ ಕಾದಂಬರಿಯನ್ನು ಇಷ್ಟು ಸಣ್ಣ ಅವಧಿಯಲ್ಲಿಅಡಕಗೊಳಿಸಿ ಚ್ಯುತಿ ಇಲ್ಲದಂತೆ ರಂಗದ ಮೇಲೆ ತಂದಿರುವುದು ಸಣ್ಣ ಸಂಗತಿಯಲ್ಲ. ಮುಖ್ಯವಾಗಿ ನನ್ನ ಗಮನ ಸೆಳೆದಿದ್ದು ಈ ನಾಟಕದಲ್ಲಿ ಯಾವ ಗಿಮಿಕ್ ಗಳನ್ನು ಬಳಸದಿರುವುದು. ಬದಲಿಗೆ ರಂಗದ ಎಲ್ಲ ಸಾಧ್ಯತೆಗಳನ್ನು ಹದವಾಗಿ, ಹಿತವಾಗಿ ಬಳಸಿಕೊಳ್ಳಲಾಗಿದೆ. ಅತ್ಯಂತ ಗಂಭೀರ ವಿಷಯವು ಕಲಾತ್ಮಕ ಅಭಿವ್ಯಕ್ತಿಯ ಮೂಲಕ ಮನಸ್ಸನ್ನು ಅರಳಿಸುತ್ತಲೇ ಯೋಚಿಸುವಂತೆ ಮಾಡುತ್ತದೆ. ನಾಟಕದ ಮೊದಲ ಹತ್ತು ನಿಮಿಷಗಳು ಜೀವಂತ ಪೈಂಟಿಂಗ್ ನ್ನು ರಂಗದ ಮೇಲೆ ನೋಡಿದಂತಹ ಅನುಭವ ನೀಡುತ್ತದೆ.

ಮೊದಲನೆಯ ಪ್ರದರ್ಶನದ ವೇಳೆ ಬಂದ ಸಲಹೆಯಂತೆ ನಾಟಕದ ಮೊದಲ ಭಾಗವನ್ನು ಸ್ವಲ್ಪ ಚುರುಕುಗೊಳಿಸಿದ್ದು ನಾಟಕಕ್ಕೆ ಪೂರಕವಾಗಿದೆ.ಬಹು ವಿಸ್ತಾರವಾದ ಕಥೆಯನ್ನು ಹೇಳಬೇಕಾದ ಧಾವಂತದಿಂದಾಗಿ ಎರಡನೆಯ ಭಾಗದಲ್ಲಿ ಸ್ವಲ್ಪ ವೇಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದನ್ನು ಸ್ವಲ್ಪ ಸರಿ ಪಡಿಸಿಕೊಳ್ಳಬೇಕಾಗಿದೆ. ಅದು ಬಿಟ್ಟರೆ ನಾಟಕ ಎಲ್ಲಾ ರೀತಿಯಲ್ಲೂ ಕಥೆ, ನಿರೂಪಣೆ, ತಂತ್ರಗಾರಿಕೆ ಭಾವನಾತ್ಮಕ ಮೀಟುವಿಕೆ, ದೃಶ್ಯ ಸಂಯೋಜನೆ,ಸಂಗೀತ, ಪ್ರಸಾಧನ ಎಲ್ಲವೂ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ.
ಪುಟ್ಟರಾಜ ಗವಾಯಿಗಳ ಶಿಷ್ಯರು ಭಾವತುಂಬಿ, ಮನದುಂಬಿ ಹಾಡಿ ಮೋಡಿ ಮಾಡಿದ್ದಾರೆ. ಗೆಳತಿ ಸಹನಾ ಪಿಂಜಾರ್ ವಸ್ತ್ರವಿನ್ಯಾಸವನ್ನು ನಿಖರವಾಗಿ ಕಣ್ಣಿಗೆ ತಂಪಾಗುವಂತೆ ಮಾಡಿದ್ದಾರೆ ಎಷ್ಟು ಬೇಕೋ ಅಷ್ಟೇ ಮಿತವಾಗಿ ಮಾಡಿರುವ ರಂಗಸಜ್ಜಿಕೆ ಗಮನ ಸೆಳೆಯುತ್ತದೆ. ಶಂಕರ್ ಅವರ ಬೆಳಕಿನ ವಿನ್ಯಾಸವಂತೂ ಒಂದು ಪಾತ್ರವಾಗಿ ಕೆಲಸ ಮಾಡಿದೆ.

ಈ ನಾಟಕ ನಾಡಿನಾದ್ಯಂತ ತಿರುಗಾಟಕ್ಕೆ ಬರಲಿದೆ. ನಿಜ ಹೇಳಬೇಕೆಂದರೆ ಇಂದು ಈ ನಾಟಕ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಗಳಾಗಬೇಕಾದ ತುರ್ತು ಇದೆ. ಎಲ್ಲೂ ವಿವಾದಕ್ಕೆ ಎಡೆ ಇಲ್ಲದಂತೆ ವಾಸ್ತವವನ್ನು ಅತ್ಯಂತ ಸಹಜವಾಗಿ ರಂಗದ ಮೇಲೆ ಮೂಡಿಸಲಾಗಿದೆ. ವಿಭಜನೆಯ ನೋವು,ಬದುಕಿನ ಅನಿವಾರ್ಯತೆ, ಊಹೆಯನ್ನು ಮೀರಿದ ಘಟನಾವಳಿಗಳಲ್ಲಿ ಮನುಷ್ಯರ ಅನಾಯ್ಕೆಗಳು- ಇವ್ಯಾವುದೂ ತಿಳಿಯದ ಇಂದಿನ ಹೊಸಕಾಲದ ಪ್ರಜೆಗಳಿಗೆ ಈ ನಾಟಕ ಒಂದು ಎಳೆಯನ್ನಾದರೂ ಹೃದಯದ ತಂತಿಗೆ ಜೋಡಿಸಲು ಅನುವು ಮಾಡಿಕೊಡಬಹುದು.
ನಾಟಕ ನಾಡಿನ ಎಲ್ಲರನ್ನೂ ತಲುಪಲಿ. ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಪ್ರಸನ್ನ ಸಾಗರ ಅವರಿಗೆ ಹಾಗೂ ನಾಟಕದಲ್ಲಿ ಭಾಗಿಯಾದ ಎಲ್ಲರಿಗೂ ಶುಭಾಶಯಗಳು.






ಮುಂಬೈಗೂ ಬರಲಿ!
— ಶ್ಯಾಮಲಾ ಮಾಧವ