ನಾಟಿ ಹುಂಜದ ಬಡಿವಾರ ಮತ್ತು ದುರಂತ

ಕೇಶವ ಮಳಗಿ

ಗುರುಪ್ರಸಾದ್‌ ಕಂಟಲಗೆರೆಯವರ ಕಥೆಗಳು ತಮ್ಮ ಸಂಯಮಪೂರ್ಣ ನಿರೂಪಣೆ, ಬಿಗುಪಿನ ಶೈಲಿ ಮತ್ತು ಕಹಿಯಿಲ್ಲದೆ ದುರಂತದ ತೀವ್ರತೆಯನ್ನು ಕಟ್ಟುಕೊಡುವಲ್ಲಿ ತೋರುವ ಕಲಾತ್ಮಕತೆಯಿಂದ ಮತ್ತು ಸ್ಥಳೀಯತೆ-ಪ್ರಾದೇಶಿಕತೆಯನ್ನು ನಿಭಾಯಿಸುವ ವಿಧಾನಗಳಿಂದ ನನಗೆ ಪ್ರಿಯ. ದೇವನೂರು ಮಹಾದೇವರ ಬರಹಗಳ ವಿಸ್ತರಣೆಯಾಗಿ ಗುರುಪ್ರಸಾದರ ಕಥೆಗಳು ನನಗೆ ಕಂಡಿವೆ. ಇದು ಅತ್ಯಂತ ಸಕಾರಾತ್ಮಕ.

ಈ ವಾರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ಗುರುಪ್ರಸಾದರ ‘ನಾಟಿ ಹುಂಜ’ ಕಥೆ ಅವರ ಮೇಲಿನ ನನ್ನ ಕಥಾ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಕಥೆ ಒಡಲಾಳದ ಸಾಕವ್ವನ ಸಂಸಾರದ ಕಥೆಗಳಿಗಿರಬಹುದಾದ ಹಲವು ಮಗ್ಗುಲುಗಳಲ್ಲಿ ಒಂದಾಗಿದ್ದು ಆ ಸಮುದಾಯದ ಅನುಭವದ ವಿಸ್ತರಣೆಯಾಗಿದೆ.

ಅತಿ ಸಾಮಾನ್ಯರ ಬದುಕಿನೊಳಗಡಗಿದ ಕಾವ್ಯತೀವ್ರತೆಯನ್ನು ಈ ಕಥೆ ಬಹಳ ಚೆನ್ನಾಗಿ ಕಟ್ಟಿಕೊಡುತ್ತದೆ. ಕಥೆಯಲ್ಲಿನ ಪಾತ್ರಗಳ ನಿಖರತೆ, ಅವರು ಆಡುವ ಮಾತು, ಕಥಾ ಪರಿಸರಗಳು ಸ್ಥಳೀಯತೆಯತೆಯನ್ನು ಮುನ್ನೆಲೆಗೆ ತರುತ್ತವೆ. ಸಾಮಾನ್ಯರ ಬದುಕಿನ ಸಾಮಾನ್ಯ ಸಂಗತಿಗಳು ಹೇಗೆ ಅಸಾಮಾನ್ಯವಾಗಿ ಪುರಾಣಗಳಾಗಬಲ್ಲವು, ಎಂಬುದನ್ನು ತಿಳಿಸಿಕೊಡುತ್ತವೆ.

ಕಥೆಯಲ್ಲಿನ ಸಣ್ಣ ಸಣ್ಣ ಸಂಗತಿಗಳು ಸಣ್ಣ ಸಣ್ಣ ಮಗ್ಗುಲುಗಳನ್ನು ಹುಟ್ಟಿಸಿ ಕಥಾ ಹಂದರವನ್ನು ಹಿಗ್ಗಿಸುತ್ತ ಹೋಗುವುದು ಮನೋಜ್ಞವಾಗಿದೆ. ಈ ಅಂಶಗಳೇ ಈ ಕಥೆಯ ಚೆಲುವಾಗಿದೆ. ಕರಿಯಪ್ಪ, ರಂಗಯ್ಯ, ರಂಗಮ್ಮರಂಥವರ ನಿತ್ಯದ ಬದುಕಿನ ಪಡಿಪಾಟುಗಳಲ್ಲಿ ಬಂದು ಸೇರುವ ನೆರೆಹೊರೆಯವರು, ಕೊರಮ್ರ ನರಸಯ್ಯ, ನುಂಗಯ್ಯ ಮುಂತಾದವರು ಕಥೆಯನ್ನು ತಮ್ಮ ತಮ್ಮ ನೆಲೆಯಲ್ಲಿ ಬೆಳೆಸುತ್ತಿದ್ದರೂ ಕಥೆಯ ಎಲ್ಲಾ ತಿರುವುಗಳಿಗೆ ಕಾರಣನಾಗುವವನು ಮಾತ್ರ ‘ಅಂಡಬಂಡ’ ಹುಂಜ! ಆತ ಈ ಮನೆತನದ ವಾರಸುದಾರಿಕೆ ಪಡೆದವನು. ಮನೆತನವನ್ನು ಬೆಳಗಿದವನು! ಆತನ ತಂತ್ರಮಂತ್ರಗಳು, ಪುರುಷ ಸಾಹಸಗಳು, ಕೊನೆಗೆ ಅಸಹಾಯಕತೆ ಕೂಡ ಆತನ ನಾಯಕ ಗುಣವನ್ನೇ ಹೊರಗೆಡಹುವವು.

ಈ ಸಮುದಾಯದ ಮಕ್ಕಳು ಓದಿ, ಸರ್ಕಾರಿ ನೌಕರಿ ಪಡೆದು ಒಂದು ಸ್ಥಿತಿ ತಲುಪಲು ಈತನ ಕರುಣೆ ಕೆಲಸ ಮಾಡಿದೆ. ಹೊರಗೆ ಮಾತ್ರ ತಪ್ಪಿಸಿಕೊಂಡು ಓಡಾಡುವ ಗೋಚರ ಹುಂಜವಾದರೂ, ಇವರ ಬದುಕನ್ನು ಅಗೋರಚವಾಗಿ ನಿಯಂತ್ರಿಸುವವನು ಈ ಹುಂಜಪ್ಪನೇ!

ಹಾಗೇ ಸರ್ಕಾರಿ ನೌಕರಿ ಪಡೆದ ನುಂಗಯ್ಯ ನಾಟಿಕೋಳಿ ರುಚಿ ಹುಡುಕಿ ಹಳ್ಳಿಗಳ ತಿರುಗುವ ಸ್ಥಿತಿಗೆ ಬಂದಿರುವುದು ಇಂತಹ ಕೋಳಿ-ಹುಂಜಗಳ ಕೊಡುಗೆಗಳಿಂದಲೇ. ಬಡವರ ಬದುಕಿಗೆ ಆರ್ಥಿಕ ಬಿಡುಗಡೆಯನು ದೊರಕಿಸಿಕೊಡುವ ಪ್ರಾಣಿಗಳ ಲೋಕ ಅಗಾಧವಾದುದು. ಹಸು, ಕುರಿ, ಕೋಳಿ ಯಾವುದೇ ಇರಲಿ. ಇವು ಕೆಳ ಸಮುದಾಯಗಳ ಆತ್ಮವಿಶ್ವಾಸವನು ಹೆಚ್ಚಿಸುವ ಶಕ್ತಿಯಾಗಿವೆ. ಇದನ್ನು ಬರೆಯುವಾಗ ಕಥೆಯೊಂದರ ಮೂಲಕ ಹಸುವಿನ ಮತ್ತು ಹೆಣ್ಣೊಬ್ಬಳ ಸಂಬಂಧಗಳ ಸೂಕ್ಷ್ಮಗಳನ್ನು ತೆರೆದಿಟ್ಟ ಬಸವರಾಜು ಕುಕ್ಕರವಳ್ಳಿಯವರ ಕಥೆಯೊಂದು ನೆನಪಾಗುತ್ತಿದೆ.

ಗುರುಪ್ರಸಾದರ ನಾಟಿ ಹುಂಜ ಕಥೆಯುದ್ದಕ್ಕೂ ನಂಜಿರದ ವಿನೋದ ಶೈಲಿ ಕಥೆಯ ಒಳಾವರಣದಂತೆ ಕೆಲಸ ಮಾಡಿದೆ. ಈ ವಿನೋದ ಮಾಯಕಾರ ದೇವನೂರು ಮಹಾದೇವರಿಗಿಂತ ಬೇರೆ ಬಗೆಯದು.

ಪ್ರಾಣಿಲೋಕ ಮನುಷ್ಯರ ಬದುಕನ್ನು ಸಹ್ಯ ಮಾಡುತ್ತವೆ. ಮನುಷ್ಯರು ಬದುಕು ಕಟ್ಟಿಕೊಳ್ಳಲು, ಆ ಮೂಲಕ ಸಂಕಟಗಳಿಂದ ಬಿಡುಗಡೆ ಪಡೆಯಲು ಅನುವು ಮಾಡಿಕೊಡುತ್ತವೆ. ನೀವು ಮನುಷ್ಯರು ಎಂಬ ಎಚ್ಚರಿಕೆಯನ್ನು ಸದಾ ನೀಡುತ್ತವೆ. ಆದರೆ, ಮನುಷ್ಯ ಕೃತಘ್ನನಾಗಿರುತ್ತಾನೆ.

ಪ್ರಾಣಿಲೋಕದ ಕರುಣೆಯಿಂದಲೇ ಮಕ್ಕಳನ್ನು ಓದಿಸಿ, ಸರ್ಕಾರಿ ನೌಕರಿ ಪಡೆಯಲು ಅರ್ಹರನ್ನಾಗಿಸುವ ರಂಗಯ್ಯ-ರಂಗಮ್ಮರ ಸಂಕಟಗಳು ಹಲವು ಬಗೆಯವು. ಸರ್ಕಾರಿ ನೌಕರನಾದ ಮಗ ಹಳೆಮನೆ ಕೆಡವಿ ಥಾರಸಿ ಮನೆಯನ್ನು ಕಟ್ಟಬಲ್ಲಷ್ಟು ಸ್ಥಿತಿವಂತ. ಆದರೆ, ಹೊಸ ಮನೆಯನ್ನು ಆತ ಕಟ್ಟಿರುವುದು ನಾಯಿ, ಬೆಕ್ಕು, ಕೋಳಿಗಳಿಗಲ್ಲ, ಮನುಷ್ಯರಿಗೆ! ಇಲ್ಲಿ ಪ್ರಾಣಿ ಪ್ರವೇಶ ನಿಷಿದ್ಧ. ಈ ನಿಲುವಿನಿಂದ ನೆಲೆ ಕಳೆದುಕೊಂಡಂತಾದ ಹುಂಜ-ಕೋಳಿಗಳು ಮನೆಯ ಬಳಿ ಸುಳಿಯುವುದನ್ನೇ ಮರೆತಿವೆ! ಇರುಳೆಲ್ಲ ಗಿಡದ ಕೊಂಬೆಗಳಲ್ಲಿ ನಿದ್ರಿಸುತ್ತವೆ!

ಕಥೆ ಕ್ಲೈಮಾಕ್ಸ್‌ ತಲುಪುವಾಗ ರಂಗಯ್ಯನಿಗೆ ಬೀಳುವ ಕನಸು ಆತನಲ್ಲಿ ತಾನು ಮನುಷ್ಯನೆಂಬ ಎಚ್ಚರವನ್ನು ಮೂಡಿಸುತ್ತದೆ. ಮನುಷ್ಯರ ಅಹಮಿಕೆಯ ವಿರುದ್ಧ ಓಡಿ ಓಡಿ ಸೋತಂತಿರುವ ಅಂಡಬಂಡ ಹುಂಜಪ್ಪ ಮಳೆಯಲ್ಲಿ ನೆನೆದು, ಬೆಳಗ್ಗೆಯೇ ಮನೆಯ ಮುಂದೆ ಶರಣಾಗತನಂತೆ ನಿಂತಿದ್ದಾನೆ!

ಜಂಜಡಗಳಿಂದ ತುಂಬಿದ, ‘ಕ್ಷುದ್ರ’ವೆನ್ನಬಹುದಾದ ಬದುಕಿನಲ್ಲಿ ಆ ಜಂಜಡಗಳಲ್ಲಿಯೇ ಕಾವ್ಯದ ಲಯವನ್ನು ಹುಡುಕುವ ರಂಗಯ್ಯ-ರಂಗಮ್ಮನಂಥವರಿಗೆ ಬಿಡುಗಡೆ ನೀಡುವ ’ಮೂಲಧಾತು’ವೇ ಪರಕೀಯವಾಗುವುದೇ? ಓದು, ಸರ್ಕಾರಿ ಕೆಲಸಗಳಿಗೆ, ಹೊಸ ಮನೆ ಕಟ್ಟೋಣಕ್ಕೆ ನಿಮಿತ್ತವಾಗಿರಬಹುದಾದ ಕ್ಷುದ್ರ ಹಕ್ಕಿಯೊಂದಕ್ಕೆ ಒದಗುವ ದುರಂತವನ್ನು ಏನೆನ್ನಬೇಕು? ಈ ವಾಸ್ತವದ ಘೋರವನ್ನು ಹೇಳುವುದು ಹೇಗೆ?

ಗುರುಪ್ರಸಾದರ ‘ನಾಟಿ ಹುಂಜ’ ಕಥೆ ತಾನು ಉಕ್ಕಿಸುವ ವಿನೋದ ಪ್ರಜ್ಞೆಯ ಹೊರತಾಗಿ ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳುವಂತೆ ಮಾಡುತ್ತದೆ. ನನಗೆ ತುಂಬ ಇಷ್ಟವಾದ ಕಥೆ. ಸಾವಧಾನದ ಓದು ಅತಿ ಅಗತ್ಯ.

ನೀವೂ ಓದಿ.

‍ಲೇಖಕರು Admin

July 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: