ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಗರೇಖಾ ಗಾಂವಕರ ಹೊಸ ಕವಿತೆ- ಎಲ್ಲವೂ ಅವ ಹೇಳಿದ ಹಾಗೆ

ನಾಗರೇಖಾ ಗಾಂವಕರ

ಮೈಗೂಡಿಸಿಕೊಳ್ಳಬೇಕಿದೆ
ಸೋಗು ಹಾಕುವುದು ಹೇಗೆಂದು?

ಮುಖಚರ್ಮಕ್ಕೆ ಯಾವ ಬಣ್ಣ
ಒಗ್ಗುವುದು ಎಂದು?
ನಗುವಿನ ತೆಳು ಪರದೆಯನ್ನು
ತೊಡುವುದು ಹೇಗೆಂದು?

ಎಲ್ಲವೂ ಅವ ಹೇಳಿದ ಹಾಗೇ

ಮೈಗೂಡಿಸಿಕೊಳ್ಳಬೇಕಿದೆ
ಮಾಗಿದ ಮುಖಮುದ್ರೆ
ಹೊತ್ತು ನುಡಿಯುವುದು ಹೇಗೆ?
ಕಣ್ಣುಗಳ ಕೆಳಗೆ ಮೂಡಿದ
ಗೆರೆಗಳ ಮರೆಮಾಚುವ ಬಗೆ ಎಂತು?

ಪರಪರಿಯ ಕಾಳಜಿಯ
ತೋರಿ ನಟಿಸುವುದು ಹೇಗೆ?
ಕಲಿಯಬೇಕಿದೆ
ಪ್ರೀತಿಯ ನೆರಳು ಮಾಸಿದ
ಚಪ್ಪರದಡಿಯಲ್ಲಿ ಬದುಕುವುದು ಹೇಗೆ?

ಭಾವಸತ್ತರೂ ಬದುಕಿನ
ಲೆಕ್ಕಾಚಾರದಲ್ಲಿ ಮುಳುಗಿ
ಮನಸ್ಸನ್ನು ಮಾರಿಕೊಳ್ಳುವುದ
ಕಲಿಯಬೇಕಿದೆ.
ಒಳಹೃದಯದಲ್ಲಿ ಮುಚ್ಚಿಟ್ಟ
ಮುಖವನ್ನು ಆಗಾಗ ತಟ್ಟುತ್ತಾ
ಸ್ಥಿತಪ್ರಜ್ಞ ಬೆಳ್ಳಿ ರೇಖೆಗಳನ್ನು
ಹಣೆಯಲ್ಲಿ ಹೊತ್ತು
ಪಾತ್ರಕ್ಕೆ ತಕ್ಕ ಬಟ್ಟೆಗಳನ್ನು
ತೊಡುವುದನ್ನು
ಮೈಗೂಡಿಸಿಕೊಳ್ಳಬೇಕಿದೆ

ನಿನ್ನವರಿಗಾಗಿ ನಿನ್ನೊಡಲ
ಕುಡಿಗಳಿಗಾಗಿ
ಬದುಕಬೇಕಿದೆ, ನೀನು
ನಿನಗಾಗಿ ಸತ್ತು ಹೋದರೂ ನೀನು
ಎನ್ನುತ್ತಾನೆ ಅವನು
ಎಲ್ಲವೂ ಅವ ಹೇಳಿದ ಹಾಗೆ!!!!

ಅ-ವ್ಯಕ್ತ

ವ್ಯಕ್ತಗೊಳ್ಳುತ್ತೇನೆ ನಾನು
ಅವ್ಯಕ್ತಕ್ಕೆ ತಳ್ಳುವ ಕೈಗಳ
ಕಿರುಬೆರಳ ಸಂದಿಯಲ್ಲಿ ಜುಗುಳಿ
ಚುಕ್ಕಿ-ಚಂದಿರರ
ಜೊತೆಗೂಡುತ್ತೇನೆ.

ನಿರ್ವಾತದಲ್ಲೂ ನಿರತ ಉಸಿರಾಡುತ್ತಾ
ಪದವಿನೋದ ಗಾನ ಪಾಡುತ್ತಾ
ತಿವಿಯ ಬಂದವರೆಡೆಗೆ
ನಸು ನಗುತ್ತ ಪ್ರೀತಿತೆನೆ
ಕೊಯ್ಯುತ್ತೇನೆ

ಎಲ್ಲೋ ಹುಟ್ಟಿ
ಮತ್ತೆಲ್ಲೋ ಸಾಯುವ ಹಕ್ಕಿ
ಹಾರುವ ಖುಷಿಯಲ್ಲೆ
ಬದುಕಿನಂದವ ಪಾಡುವ ಪರಿ
ಕನಸುತ್ತೇನೆ.

ದನಗಳ ಹಿಂಡಿನಲ್ಲಿ ತಾಯಿಯನು
ಕಾಣದ ಕರು
ಹುಡುಕುತ್ತಾ ಅನ್ಯ ಹಸುವಿನ
ಕೆಚ್ಚಲಿಗೆ ಬಾಯಿಟ್ಟು
ಹಿಂಗಾಲ ಒದೆತಕ್ಕೆ ಬಿದ್ದರೂ
ಮತ್ತೆದ್ದು ನಡೆಯುತ್ತ
ಗಮ್ಯದೆಡೆಗೆ ನಡೆದು ಬಾಲನೆಗರಿಸಿಕೊಂಡು
ಹೆತ್ತಬ್ಬೆಯ ಮೊಲೆ ಚೀಪುತ್ತಾ
ಪಡುವ ಪರಮಾನಂದವ
ಹೊಂದುತ್ತೇನೆ.

ರಹದಾರಿಯ ಅರಿವಿಲ್ಲದೆಯೂ
ಹಾರುವ ಬಣ್ಣದ ಚಿಟ್ಟೆ
ಬೆನ್ನು ಹತ್ತಿ
ಕಾಲ ಬದಲಾದಂತೆ
ಬಣ್ಣ ಬದಲಾಯಿಸುವ ಗೋಸುಂಬೆಗಳ
ಅಂಟು ಜಿಹ್ವೆಯ ಜೊಲ್ಲಿಗೆ
ನಿಲುಕದೇ ಬೆಳಕಿನೆಡೆಗೆ
ಜಿಗಿಯುವ ಹಾತೆಯಾಗುತ್ತೇನೆ ನಾನು

ಉರಿವ ಬೆಂಕಿಗೆ ಮೈ ಸುಟ್ಟುಕೊಂಡು
ಅಗ್ನಿದಿವ್ಯದ ಎದುರು ಸ್ಪುಟಗೊಳ್ಳುತ್ತೇನೆ
ಮುಕ್ತಳಾಗುತ್ತೇನೆ ನಾನು.

‍ಲೇಖಕರು Avadhi

28 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading