ನಶಿಸಿಹೋಗುತ್ತಿರುವ ಒಂದು ಅಪರೂಪದ ಕಲೆ : ಚಿಕಣಿ ಕಲೆ

ಸಿದ್ಧರಾಮ ಕೂಡ್ಲಿಗಿ

ಸಾಹಿತ್ಯವಿರಲಿ, ಕಲೆಯಿರಲಿ, ಸಂಗೀತವಿರಲಿ ಅದಕ್ಕೊಂದು ಉತ್ತಮವಾದ ಪರಿಸರ, ಪ್ರೋತ್ಸಾಹ ದೊರೆತರೆ ಅದು ಯಾವ ಮಟ್ಟಕ್ಕೂ ಹೋಗಬಹುದು, ಅವುಗಳ ಕೃತಿಕಾರನಿಗೂ ಸಹ ಅದೊಂದು ಅತ್ಯುನ್ನತ ಗೌರವವೂ ಹೌದು. ಆದರೆ ಇದಕ್ಕೆ ತದ್ವಿರುದ್ಧವಾದರೆ ಎಂಥ ಪ್ರತಿಭೆಗಳೂ ಸಹ ಹೇಳಹೆಸರಿಲ್ಲದಂತೆ ನಶಿಸಿಹೋಗಿಬಿಡುತ್ತವೆ. ನಮ್ಮಲ್ಲಿ ಜಾನಪದ ಕ್ಷೇತ್ರದಲ್ಲಿ ಆಗಿರುವುದೂ ಅದೇ. ಎಷ್ಟೋ ಜಾನಪದ ಕಲೆ, ಸಾಹಿತ್ಯ, ಸಂಗೀತಗಳು ಸೂಕ್ತ ಪ್ರೋತ್ಸಾಹವಿಲ್ಲದೆ ಕಣ್ಮರೆಯಾಗಿಬಿಟ್ಟಿವೆ. ಇದು ಈ ನಾಡಿನ ದುರಂತ. ಆಧುನಿಕತೆಯ ಬಿರುಗಾಳಿಯೊಳಗೆ ಎಲ್ಲವೂ ಕೊಚ್ಚಿಕೊಂಡುಹೋಗಿವೆ, ಹೋಗುತ್ತಿವೆ.

ನಮ್ಮ ನಾಡಿನ ಅತ್ಯದ್ಭುತ ಕಲೆಗಳಲ್ಲೊಂದು ಚಿಕಣಿ ಚಿತ್ರದ ಕಲೆ. ಈಗ ಇದು ಕಣ್ಮರೆಯಾಗುತ್ತಿದೆ. ಇದಕ್ಕೆ ಮೂಲ ಕಾರಣ ಸರ್ಕಾರ ಹಾಗೂ ಸಮಾಜದ ಅಲಕ್ಷ್ಯತನ ಮತ್ತು ಅದನ್ನು ಬೇಕಾಬಿಟ್ಟಿಯಾಗಿ ಅನುಕರಿಸುತ್ತಿರುವುದು. ಚಿಕಣಿ ಕಲೆಯನ್ನು ಮೂಲತ: ಇದನ್ನು ಸುರಪುರದ ಕಲೆ ಎಂತಲೂ ಕರೆಯಲಾಗುತ್ತದೆ. ಚಿಕಣಿ ಚಿತ್ರಕಲೆ ಎಂದರೆ ಮಿನಿಯೇಚರ್ ಆರ್ಟ್. ಅತ್ಯಂತ ಚಿಕ್ಕದರಲ್ಲಿ ಹಿರಿದಾದ ಕಲೆಯನ್ನು ತೋರ್ಪಡಿಸುವ ವಿಶಿಷ್ಟ ಕಲಾಪ್ರಕಾರ. ಇಂಥವುಗಳನ್ನು ರಚಿಸುವ ಕಲಾವಿದರೂ ಅತ್ಯಂತ ವಿರಳ.

ಸಾಂಪ್ರದಾಯಿಕವಾಗಿ ಬಂದ ಇದಕ್ಕೊಂದು ಅರ್ಥಪೂರ್ಣವಾದ ಮರುಜೀವ ನೀಡಿದ ಕಲಾವಿದರೇ ಖ್ಯಾತ ಹಿರಿಯ ಕಲಾವಿದ ಡಾ.ವಿಜಯ ಹಾಗರಗುಂಡಗಿ. ಕಲಬುರ್ಗಿಯವರಾದ ಡಾ.ವಿಜಯ ಹಾಗರಗುಂಡಗಿಯವರಿಗೆ ಕಲೆಯಲ್ಲಿ ಆಸಕ್ತಿ. ಹೊಸತೇನನ್ನಾದರೂ ಮಾಡಬೇಕೆನ್ನುವ ಇವರ ತುಡಿತಕ್ಕೆ ಚಾಲನೆ ಸಿಕ್ಕದ್ದೇ ಸುರಪುರದಿಂದ. ಅಲ್ಲಿ ರಾಜರ ಕಾಲದ ಹಳೆಯ ಚಿಕಣಿ ಕಲೆಯ ಚಿತ್ರಗಳಿವೆ ಎಂದಾಗ ಡಾ.ವಿಜಯ ಹಾಗರಗುಂಡಗಿ ಅಲ್ಲಿಯ ಕಲೆಯನ್ನು ಅಧ್ಯಯನ ಮಾಡಿದರು. ತಾವೂ ಸಹ ಅದೇ ರೀತಿಯಲ್ಲಿಯೇ ಚಿತ್ರ ರಚಿಸಲು ಯತ್ನಿಸಿ ಅದರಲ್ಲಿ ಯಶಸ್ವಿಯೂ ಆದರು. ಕೇವಲ ರಾಜ್ಯ, ರಾಷ್ಟ್ರವಲ್ಲ, ಅಂತರ್ ರಾಷ್ಟೀಯ ಮಟ್ಟದಲ್ಲಿ ಚಿಕಣಿ ಚಿತ್ರಕಲೆಗೆ ಅತ್ಯಂತ ಬೆಲೆಯಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ದುರಂತವೆಂದರೆ ಈ ಅದ್ಭುತ ಕಲೆ ನಶಿಸಿಹೋಗುತ್ತಿರುವುದು.

ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕಲಾ ಪ್ರದರ್ಶನವನ್ನು ನೀಡಿರುವ ಇವರಿಗೆ ಅರಸಿಕೊಂಡು ಬಂದ ಪ್ರಶಸ್ತಿಗಳು ಸಾಕಷ್ಟು, ಆದರೆ ಒಬ್ಬ ವಿಶಿಷ್ಟ ಕಲಾವಿದನಿಗೆ ದೊರೆಯಬೇಕಾದ ಗೌರವ, ಸಮ್ಮಾನ ದೊರೆಯಲಿಲ್ಲ ಎಂಬ ನೋವು ಅವರದು. ಡಾ.ವಿಜಯ ಹಾಗರಗುಂಡಗಿಯವರ ವಿಶಿಷ್ಟತೆ ಏನೆಂದರೆ ಸಾಂಪ್ರದಾಯಿಕ ಕಲೆಗೇ ತಮ್ಮದೇ ಆದ ಕ್ರಿಯಾಶೀಲತೆಯನ್ನು ಮೇಳೈಸಿದ್ದು. ಪಾರಂಪರಿಕ ಕಲೆಯನ್ನು ಬಿಡದೇ ಅದಕ್ಕೊಂದು ಹೊಸತನ್ನು ತುಂಬಿದವರು ಇವರು.

ಹೀಗಾಗಿಯೆ ’ವಿಜಯ ಹಾಗರಗುಂಡಗಿ ಶೈಲಿ’ ಎಂದೇ ಹೆಸರಾದರು. ಅತ್ಯಂತ ಸೂಕ್ಷ್ಮ ಕಲೆಯಿದು. ಇದಕ್ಕೆ ಬಳಸುವ ಬ್ರಶ್ ನಿಂದ ಹಿಡಿದು, ಬಳಸುವ ಬಣ್ಣವೂ ಸಹ ವಿಷಿಷ್ಟವಾದುದು. ಅತ್ಯಂತ ತೆಳು ಕೂದಲಿನ ಬ್ರಶ್ ಇದಕ್ಕೆ ಬೇಕು. ಅಲ್ಲದೇ ಇವರು ಬಣ್ಣವನ್ನು ಬಳಸಿದ್ದು ರಾಜಸ್ಥಾನದ ಬಣ್ಣದ ಕಲ್ಲುಗಳ ಪುಡಿಯನ್ನು. ಇಂಥ ಕಲ್ಲನ್ನು ಕುಟ್ಟಿ ಪುಡಿ ಮಾಡಿ ಕೊಡುವ ಒಂದು ಶ್ರಮಿಕ ವರ್ಗವೇ ಅಲ್ಲಿದೆ. ಅಂಥ ಬಣ್ಣಗಳನ್ನು ಬಳಸಿ ಚಿತ್ರ ರಚಿಸಿದ್ದಾರೆ. ನಾವು ಹೇಳುವುದು ಸುಲಭ. ಆದರೆ ಅಲ್ಲಿ ಎಷ್ಟು ಶ್ರಮ, ತಾಳ್ಮೆ ಇರುತ್ತದೆಂದರೆ, ಇಂಥ ಚಿತ್ರಗಳನ್ನು ರಚಿಸಲು ವಾರದಿಂದ ಹಿಡಿದು ತಿಂಗಳುಗಳಷ್ಟು ಸಮಯವನ್ನು ತೆಗೆದುಕೊಂಡಿದ್ದಾರೆ. ’ಇದೊಂದು ಅತ್ಯಂತ ತಾಳ್ಮೆ, ಶ್ರಮ ಬೇಡುವ, ಆಸಕ್ತಿಯನ್ನೂ ಬೇಡುವ ಕಲೆ’ ಎನ್ನುತ್ತಾರೆ ಇವರು.

ಚಿಕಣಿ ಚಿತ್ರಕಲೆಯನ್ನು ಸಿದ್ಧಿಸಿಕೊಂಡರೂ ಇವರಿಗೆ ತೃಪ್ತಿಯಿರಲಿಲ್ಲ. ಮತ್ತೆ ಹೊಸತನದ ಹುಡುಕಾಟ. ಈ ಸಲ ಅವರು ರಾಜಸ್ಥಾನಕ್ಕೇ ಪ್ರಯಾಣ ಬೆಳೆಸುತ್ತಾರೆ. ಅಲ್ಲಿಯ ದ್ವಾರಕಾ ಪ್ರಸಾದ ಶರ್ಮ ಎಂಬ ಖ್ಯಾತ ಕಲಾವಿದರ ಶಿಷ್ಯತ್ವದಲ್ಲಿ ಕಲೆಯಲ್ಲಿ ತಂತ್ರ ಹಾಗೂ ಬಂಗಾರ ಬೆಳ್ಳಿಯನ್ನು ಬಳಸುವುದನ್ನು ನಿರಂತರವಾಗಿ ಎರಡು ತಿಂಗಳವರೆಗೂ ಕಲಿಯುತ್ತಾರೆ. ಎರಡು ವರ್ಷಗಳವರೆಗೆ ಕಲಿಯುವ ಕಲೆಯನ್ನು ಎರಡು ತಿಂಗಳಲ್ಲಿ ಕಲಿತ ಸಾಧನೆ ಇವರದು.

ನಂತರ ರಾಮಾಯಣ, ಮಹಾಭಾರತ, ಪೌರಾಣಿಕ ಕತೆಗಳನ್ನೇ ಅಧ್ಯಯನ ಮಾಡಿ ಅದಕ್ಕೆ ತಕ್ಕಂತೆಯೇ ಚಿತ್ರಗಳನ್ನು ರಚಿಸಿದ್ದಾರೆ. ನಿರಂತರ ಅಧ್ಯಯನ, ಅದಕ್ಕೆ ತಕ್ಕಂತೆ ಚಿತ್ರ ರಚಿಸುವುದು, ಸಾಂಪ್ರದಾಯಿಕ ಶೈಲಿಯನ್ನೇ ಅಳವಡಿಸಿಕೊಂಡಿರುವುದು ಇವರ ಶೈಲಿಯಾಗಿದೆ. ಶಾಂತರಸರ ’ಗಜಲ್ ಮತ್ತು ಬಿಡಿ ದ್ವಿಪದಿ’ ಕೃತಿಗೆ, ’ಬಾರಾಮಾಸ್’ ಕೃತಿಗೆ ಚಿತ್ರಗಳನ್ನು ರಚಿಸಿಕೊಟ್ಟಿದ್ದಾರೆ. ಎಚ್.ಎಸ್.ಮುಕ್ತಾಯಕ್ಕನವರ ’ಅವನು ಮಧು ಸಾವು’ ಹಾಗೂ ಕನ್ನಡದ ಪ್ರಥಮ ಗಜಲ್ ಗಳ ಕೃತಿ ’ನಲವತ್ತು ಗಜಲುಗಳು’ ಸಂಗ್ರಹದಲ್ಲೂ ಇವರ ಚಿಕಣಿ ಚಿತ್ರಗಳಿವೆ.

ಮೊದಲು ಯಾವುದೇ ಕೃತಿಯನ್ನು ಪೂರ್ಣವಾಗಿ ಅರ್ಥೈಸಿಕೊಂಡ ನಂತರವೇ ಅದಕ್ಕೊಂದು ರೂಪ ಕೊಡುತ್ತಾರೆ. ಶಾಂತರಸರ ಈ ಕೃತಿಗಳನ್ನು ನೋಡಿದರೆ ಯಾರಿಗೇ ಆಗಲಿ ಇವರ ಚಿತ್ರಗಳು ಎಂಥವು ಎಷ್ಟು ಶ್ರಮ ಇದೆ ಎಂಬುದು ಗೊತ್ತಾಗುತ್ತದೆ.

ಇವರ ಚಿತ್ರಗಳು ಬೆಂಗಳೂರು, ದೆಹಲಿ, ಮುಂಬೈಗಳಲ್ಲಿ ಪ್ರದರ್ಶನಗೊಂಡಿವೆ. ಇಂಗ್ಲೆಂಡ್ ನಲ್ಲಿಯೂ ಸಹ ಸತತ ಮೂರು ವರ್ಷ ಚಿತ್ರಕಲಾ ಪ್ರದರ್ಶನಕ್ಕೆ ಆಹ್ವಾನಿತರಾಗಿದ್ದರು. ಇವರ ರಾಗಮಾಲ ಸರಣಿಯ ಚಿತ್ರಗಳು ಅತ್ಯಂತ ಪ್ರಸಿದ್ಧಿಯನ್ನು ಪಡೆದಂಥವು. ಸಂಗೀತದ ರಾಗಗಳಿಗೇ ಚಿತ್ರ ಬರೆದವರು ಇವರು. ಆ ರಾಗಗಳನ್ನು ಕುರಿತು ಅರಿತುಕೊಂಡೇ ಚಿತ್ರ ರಚಿಸಿದ್ದಾರೆ. ಈ ಚಿತ್ರಗಳು ಎಷ್ಟು ಸೂಕ್ಷ್ಮವೆಂದರೆ ಮಸೂರವನ್ನು ಹಿಡಿದು ನೋಡಿದಾಗಲೇ ಸೂಕ್ಷ್ಮವಾದ ತೆಳುಗೆರೆಗಳು ಕಾಣುತ್ತವೆ. ಸಾಂಪ್ರದಾಯಿಕ ಕಲೆಯು ಕಲೆಯೇ ಅಲ್ಲ ಅದೊಂದು ಕಳಪೆ ಕಲೆ ಎಂದು ಮೂಗುಮುರಿಯುವವರೇ ಮೂಕವಿಸ್ಮಿತರಾಗಿ ಇವರ ಚಿತ್ರಕಲೆಯನ್ನು ಮೆಚ್ಚಿದ್ದಾರೆಂದರೆ ಇವರ ಕಲೆ ಎಂಥದೆಂದು ಅರಿಯಬಹುದು.

ತುಂಬಾ ವಿಶಾದದ ಅಂಶವೇನೆಂದರೆ ಇವರ ಚಿತ್ರಗಳನ್ನು ನೇರವಾಗಿ ಎತ್ತಿಕೊಂಡು ತಮ್ಮದೇ ಚಿತ್ರ ಎಂಬಂತೆ ಕೃತಿಚೌರ್ಯಗಳಾಗಿವೆ. ಕೆಳಗೆ ಇವರ ಹೆಸರನ್ನು ಕಿತ್ತುಹಾಕಿ ತಮ್ಮದೇ ಎಂಬಂತೆ ಬಳಸಿಕೊಂಡಿರುವ ಎಷ್ಟೋ ಉದಾಹರಣೆಗಳಿವೆ ಎಂದು ತುಂಬಾ ನೋವಿನಿಂದ ಹೇಳುತ್ತಾರೆ. ಪುಸ್ತಕಗಳಿಗೆ ಇವರು ರಚಿಸಿಕೊಟ್ಟ ಚಿತ್ರಗಳನ್ನೂ ಸಹ ಇವರ ಅನುಮತಿಯಿಲ್ಲದೇ ನೇರವಾಗಿ ಕಾಪಿ ಮಾಡಿರುವ ಮಹನೀಯರೂ ಇದ್ದಾರೆ. ’ಕಾಪಿರೈಟ್ ಮಾಡಿಸಿಲ್ಲವೇ ಸರ್ ? ಅವರ ವಿರುದ್ಧ ಕೋರ್ಟ್ ಗೆ ಹೋಗಬೇಕಿತ್ತು’ ಎಂದು ನಾನು ಕೇಳಿದೆ. ’ಕೋರ್ಟ್ ಗೆ ಅಲೆಯೋದು ಅಂದ್ರೆ ಗೊತ್ತಲ್ಲ , ಕಾಪಿರೈಟ್ ಅಂದರೆ ಇಲ್ಲಿ ಕಾನೂನಿನಲ್ಲಿ ಅಂಥ ಬಿಗಿಯಾದ ಕ್ರಮಗಳೂ ಇಲ್ಲ, ಹೀಗಾಗಿ ನಾನು ಸುಮ್ಮನಾಗಿಬಿಟ್ಟೆ’ ಎಂದು ತುಂಬಾ ದು:ಖದಲ್ಲಿ ನುಡಿದರು. ನನಗೆ ಅಯ್ಯೋ ಅನಿಸಿಬಿಟ್ಟಿತು. ಎಂಥ ಕಲಾವಿದರ ಕಲೆಗೆ ಎಂಥ ದುರಂತ ಎನಿಸಿತು.

’ಈ ಕಲೆಯನ್ನು ಮುಂದುವರೆಸಿಕೊಂಡು ಹೋಗುವವರು ಯಾರೂ ಇಲ್ಲವೇ ಸರ್ ?’ ಎಂದೆ. ’ಯಾರೂ ಇಲ್ಲ, ಕಲಿಯಲು ಬಂದವರೆಲ್ಲ ಅವಸರದ ಪ್ರವೃತ್ತಿಯವರು, ಬೇಗನೆ ಕಲಿಯಬೇಕು, ಬೇಗನೆ ಪ್ರಸಿದ್ಧಿಗೆ ಬರಬೇಕೆನ್ನುವವರೇ, ಕೆಲವರಂತೂ ಫ್ಯಾಶನ್ ಗಾಗಿ ಇದನ್ನು ಕಲಿಯಲು ಬರುತ್ತಾರೆ’ ಎಂದು ನೊಂದು ಹೇಳಿದರು. ’ಈ ಕಲೆಯನ್ನು ಅಳವಡಿಸಿಕೊಂಡವರು ಇದ್ದಾರೆಯೆ ?’ ಎಂದು ಪ್ರಶ್ನಿಸಿದೆ. ’ಇಲ್ಲ ಎಲ್ಲ ಆಧುನಿಕ ಶೈಲಿಯನ್ನೆ ಅಳವಡಿಸಿಕೊಂಡು ಈ ಕಲೆಯ ಮೂಲ ಅಂತ:ಸತ್ವವನ್ನೇ ಹಾಳು ಮಾಡಿಬಿಟ್ಟಿದ್ದಾರೆ. ಮೂಲವನ್ನು ಉಳಿಸಿಕೊಂಡಿರುವುದು ನಾನಷ್ಟೇ’ ಎಂದರು. ’ಈಗಲೂ ಈ ಚಿತ್ರಕಲೆಯನ್ನು ರಚಿಸುವಿರಾ ?’ ಎಂದು ಕೇಳಿದೆ. ’2002ರಲ್ಲಿಯೇ ಇದನ್ನು ನಿಲ್ಲಿಸಿಬಿಟ್ಟೆ. ಮೊದಲಿನಹಾಗೆ ಈಗ ರಚಿಸುವುದಾಗುತ್ತಿಲ್ಲ, ವಯಸಾಗಿದೆ, ಆರೋಗ್ಯವೂ ಸರಿಯಿಲ್ಲ, ನನ್ನದೇ ಆದ ಹಲವಾರು ಸಮಸ್ಯೆಗಳಿವೆ, ಮನೆ ಪೂರ್ತಿ ಮಾಡಬೇಕಿದೆ, ಸರ್ಕಾರವಾಗಲಿ, ಕಲೆಗೆ ಸಂಬಂಧಿಸಿದ ಅಕಾಡೆಮಿ, ಪರಿಷತ್ತುಗಳಾಗಲಿ ತಿರುಗಿಯೂ ನೋಡುತ್ತಿಲ್ಲ, ಅವರಿಂದಲೇನಾದರೂ ಸಹಾಯ ಒದಗಿದರೆ ಒಂದು ಮನೆಯಾಗುತ್ತದೆ’ ಎಂದಾಗ ನನಗೆ ಕಲೆಯನ್ನೇ ನಂಬಿರುವ ಕಲಾಕಾರರ ದುಸ್ಥಿತಿಯ ಬಗ್ಗೆ ವಿಶಾದವೆನಿಸಿತು.

ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರ ಕೃತಿಚೌರ್ಯ ನಡೆಯುತ್ತದೆ ಎಂದು ತಿಳಿದಿದ್ದ ನನಗೆ ಕಲಾ ಪ್ರಪಂಚದಲ್ಲಿಯೂ ಕೃತಿಚೌರ್ಯ ಮಾಡುವ ಅದ್ವಿತೀಯರಿದ್ದಾರೆಂಬುದು ಇವರಿಂದಲೇ ಗೊತ್ತಾಯಿತು. ಈಗ ಎಲ್ಲರಿಗೂ ಸಿದ್ಧಮಾದರಿಗಳೇ ಬೇಕು. ಧಿಡೀರನೇ ಪ್ರಚಾರ, ಧಿಡೀರನೆ ಹಣ ಮಾಡಬೇಕೆಂಬ ಹಪಾಹಪಿಯೇ ಎಲ್ಲದಕ್ಕೂ ಕಾರಣ. ನಾಲ್ಕು ಸಾಲು ಹಾಡಿದ ತಕ್ಷಣವೇ ಟಿವಿಯಲ್ಲಿ ಬರಬೇಕು, ಸಿನಿಮಾಗಳಲ್ಲಿ ಹಾಡಬೇಕು, ವೇದಿಕೆಯ ಮೇಲೆ ಬರಬೇಕು. ನಾಲ್ಕು ಸಾಲು ಬರೆದ ತಕ್ಷಣವೇ ಪುಸ್ತಕ ಪ್ರಕಟವಾಗಬೇಕು, ಪ್ರಶಸ್ತಿ ದೊರೆಯಬೇಕು, ಸನ್ಮಾನಗಳೂ ಆಗಬೇಕು. ನಾಲ್ಕು ಹೆಜ್ಜೆ ಹಾಕಿದ ತಕ್ಷಣವೇ ನೃತ್ಯಗಾರರೆನಿಸಿಕೊಳ್ಳಬೇಕು, ವೇದಿಕೆಯಲ್ಲಿ ಪ್ರದರ್ಶನ ನೀಡಬೇಕು. ಇಂಥ ಅವಸರಗಳಿಗೆ ಕಲೆ, ಸಾಹಿತ್ಯ, ಸಂಗೀತ ಒಲಿಯುವುದೇ ? ಖಂಡಿತ ಇಲ್ಲ.

ಈಗ ಎಲ್ಲವೂ ಆಗಿನ ಮಟ್ಟಿಗೆ ಅಷ್ಟೆ. ನಿಜವಾದ ಕಲಾವಿದ ಇಂಥವುಗಳಿಂದ ದೂರವಿದ್ದು ಒಬ್ಬ ತಪಸ್ವಿಯಂತೆಯೇ ಸಾಧನೆ ಮಾಡುತ್ತಿರುತ್ತಾನೆ. ಆ ರೀತಿಯಲ್ಲಿ ಡಾ.ವಿಜಯ ಹಾಗರಗುಂಡಗಿ ಶ್ರಮಪಟ್ಟವರು. ಅತ್ಯಂತ ಸರಳ ಸಜ್ಜನಿಕೆಯ ಇವರ ಜೊತೆ ಮಾತನಾಡುತ್ತಿದ್ದಾಗ ಒಬ್ಬ ನಾಡಿನ ಹಿರಿಯ ಕಲಾವಿದರಾಗಿಯೂ ಎಷ್ಟೊಂದು ಸರಳತೆ, ಸಜ್ಜನಿಕೆ, ಎಳ್ಳಷ್ಟೂ ಅಹಂ ಇರದ ಅತ್ಯಂತ ವಿನಯಶಾಲಿಯೊಬ್ಬರ ಜೊತೆ ಮಾತನಾಡಿದ ಭಾವ ನನ್ನಲ್ಲಿ ಉಂಟಾಯಿತು. ಡಾ.ವಿಜಯ ಹಾಗರಗುಂಡಿಗೆ ನಾಡಿನ ಖ್ಯಾತ ಕಲಾವಿದರೆಂಬುದನ್ನು ನಾವು ಮರೆಯುವಂತಿಲ್ಲ. ಅಂಥ ಕಲಾವಿದರ ಮನದಾಳದ ನೋವನ್ನು ಪ್ರಥಮ ಬಾರಿಗೆ ನಾನು ಕೇಳಿದೆ. ಅಂತಹ ಹಿರಿಯ ಕಲಾವಿದರೊಂದಿಗೆ ಮಾತನಾಡುವ ಅವಕಾಶ ದೊರೆಯಿತಲ್ಲ ಎಂಬುದೇ ನನಗೆ ಸಂತೋಷ.

ಇನ್ನು ಮೇಲಾದರೂ ಇವರ ಚಿತ್ರಕಲೆಯನ್ನು ಮತ್ತೆ ಎಲ್ಲರೂ ಗುರುತಿಸುವಂತಾಗಲಿ. ಮುಖ್ಯವಾಗಿ ಸರ್ಕಾರ, ಅಕಾಡೆಮಿ, ಪರಿಷತ್ತುಗಳು. ಇವರ ಚಿತ್ರಗಳನ್ನು ಕದ್ದು ತಮ್ಮದೆಂದು ಹೇಳಿಕೊಳ್ಳುವವರು, ಇವರು ರಚಿಸಿರುವ ಕೃತಿಗಳ ಚಿತ್ರಗಳನ್ನು ಅನಾಮತ್ತಾಗಿ ಎತ್ತಿಕೊಂಡು ತಮ್ಮ ಕೄತಿಗಳಿಗೆ ಹಾಕಿಕೊಂಡವರು ತೀರಾ ನಾಚಿಕೆಗೆಟ್ಟ ಜನ. ಅಂಥವರು ಕದಿಯುವ ಕಾಯಿಲೆಯಿಂದ ಬೇಗ ಗುಣಮುಖರಾಗಲಿ. ಡಾ.ವಿಜಯ ಹಾಗರಗುಂಡಗಿಯವರೊಂದಿಗೆ ಮಾತನಾಡಲು ಅವರ ಮೊಬೈಲ್ ಸಂ 8310294437 ಗೆ ಮಾತನಾಡಬಹುದು.

ಈ ಕಲೆ ಹಾಗೂ ಕಲಾವಿದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ :
https://hagargundagichikaniarts.com/?page_id=17 ಲಿಂಕ್ ನ್ನು ಕ್ಲಿಕ್ ಮಾಡಿ.

‍ಲೇಖಕರು Admin

July 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: