ಶ್ರೀನಿವಾಸ ಪ್ರಭು ಅಂಕಣ- ಒಂದು ಶನಿವಾರ ನಾಟಕ ಮುಗಿದ ಮೇಲೆ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

57

ನಾನು ‘ಚಿರಂತನ’ ತಂಡಕ್ಕೆ ಮಾಡಿಸಿದ ನಾಟಕ ‘ಬೆಟ್ಟಸಾಲು ಮಳೆ’. ಕಾಳೇಗೌಡ ನಾಗವಾರ ಅವರ ಇದೇ ಹೆಸರಿನ ನೀಳ್ಗತೆಯನ್ನು ನಾನೇ ನಾಟಕ ರೂಪಕ್ಕೆ ಅಳವಡಿಸಿಕೊಂಡಿದ್ದೆ.ಕಾಳೇಗೌಡ ನಾಗವಾರ ಅವರು ಪ್ರಗತಿಪರ ಮನೋಧರ್ಮದ ಚಿಂತಕರು ಹಾಗೂ ಬರಹಗಾರರು. ಕಾಳೇಗೌಡರು ಮದುವೆಯಾದದ್ದು 1972 ರಲ್ಲಿ…50 ವರ್ಷಗಳ ಹಿಂದೆ..ಅಂದರೆ ಈಗ ಅವರ ವೈವಾಹಿಕ ಜೀವನದ ಸ್ವರ್ಣ ಮಹೋತ್ಸವ! ಆದರೆ ಅಂದು ನಡೆದದ್ದು ಮಾತ್ರ ಯಾವ ‘ಉತ್ಸವ’ವೂ ಇಲ್ಲದ,ಯಾವ ಅದ್ದೂರಿ—ಆಡಂಬರಗಳೂ ಇಲ್ಲದ,ಯಾವ ಧಾರ್ಮಿಕ ಕ್ರಿಯಾವಿಧಿಗಳೂ ಇಲ್ಲದ ಅತ್ಯಂತ ಸರಳ ಮದುವೆ! ಆಗ ನಾನಿನ್ನೂ ಬಿ.ಎ ಆನರ್ಸ್ ವಿದ್ಯಾರ್ಥಿ. ಕಾಳೇಗೌಡರ ಮದುವೆ ಆ ಸಂದರ್ಭದಲ್ಲಿ ಒಂದು ಸಂಚಲನವನ್ನೇ ಮೂಡಿಸಿತ್ತೆಂದು ಕೆಲ ಮಿತ್ರರು ನೆನಪಿಸಿಕೊಳ್ಳುತ್ತಾರೆ.

“ನಮ್ಮ ದೇಶದಲ್ಲಿ ಸಾವಿರದೆಂಟು ಸಮಸ್ಯೆಗಳಿವೆ; ಈಗಲೂ ಎಷ್ಟೋ ಮನೆಗಳಲ್ಲಿ ಶೌಚಾಲಯವಿಲ್ಲ..ಎಷ್ಟೋ ಹಳ್ಳಿಗಳಲ್ಲಿ ಶಾಲೆಗಳಿಲ್ಲ.. ಆದರೂ ಜೀವಮಾನದ ಗಳಿಕೆಯನ್ನೆಲ್ಲಾ ಮದುವೆಗಾಗಿ ಖರ್ಚುಮಾಡಿಕೊಂಡು, ಸಾಲದ್ದಕ್ಕೆ ಸಾಲದ ಹೊರೆಯನ್ನೂ ಮೈಮೇಲೆ ಎಳೆದುಕೊಂಡು ಒದ್ದಾಡುವುದರಲ್ಲಿ ಏನರ್ಥವಿದೆ?” ಎನ್ನುತ್ತಿದ್ದರಂತೆ ಕಾಳೇಗೌಡರು. ಕೇವಲ ಇಂಥ ಹೇಳಿಕೆಗಳನ್ನು ನೀಡಿ ಸುಮ್ಮನಾಗದೇ ತಾವೇ ಸಂಪ್ರದಾಯಗಳನ್ನು ಮುರಿಯುವ ಮಾರ್ಗವನ್ನು ಅನುಸರಿಸಿ ಅಂದಿನ ಯುವ ಪೀಳಿಗೆಗೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರು ಕಾಳೇಗೌಡರು.ರಾಷ್ಟ್ರಕವಿ ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ಪರಿಕಲ್ಪನೆಯಿಂದ ಸ್ಫೂರ್ತಿಗೊಂಡು “ಎರಡು ಸಮಾನಮನಸ್ಕ ಜೀವಿಗಳು ಒಟ್ಟಾಗಿ ಬಾಳುವುದಕ್ಕೆ ಯಾವ ನಗಾರಿ ತುತ್ತೂರಿಗಳ ಅಗತ್ಯವೂ ಇಲ್ಲ..ಯಾವ ಮುಹೂರ್ತ—’ಕಾಲ’ಗಳನ್ನೂ ನೋಡುವ ಅಗತ್ಯವೂ ಇಲ್ಲ” ಎಂದು ನುಡಿದು ನುಡಿದಂತೆ ನಡೆದು ತೋರಿಸಿದವರು ಕಾಳೇಗೌಡರು.

ಅವರ ಈ ಪ್ರಗತಿಪರ ಮನೋಧರ್ಮ,ಸ್ವಸ್ಥ ಸಮಾಜ ರೂಪುಗೊಳ್ಳಬೇಕೆಂಬ ಅವರ ತುಡಿತ—ಕಾಳಜಿಗಳು ಅವರ ಬರಹಗಳಲ್ಲಿಯೂ ಢಾಳಾಗಿ ಹೊಡೆದು ಕಾಣುತ್ತವೆ.ಅವರ ‘ಬೆಟ್ಟಸಾಲು ಮಳೆ’ ನೀಳ್ಗತೆಯೂ ಸಹಾ ಇಂತಹ ಜನಪರ ಕಾಳಜಿಗಳನ್ನು ಮೈದುಂಬಿಕೊಂಡಿರುವ ಒಂದು ಸಮರ್ಥ ಕೃತಿ. ಊಳಿಗಮಾನ್ಯ ವಾತಾವರಣದ ಗ್ರಾಮೀಣ ಬದುಕು..ಅಲ್ಲಿಯ ಉಸಿರುಗಟ್ಟಿಸುವ ಶ್ರೇಣೀಕೃತ ವ್ಯವಸ್ಥೆ.. ಹಲವು ಹತ್ತು ಹಂತಗಳಲ್ಲಿ ನಡೆಯುವ ಶೋಷಣೆಯ ತಣ್ಣನೆಯ ಕ್ರೌರ್ಯ..ಹಳ್ಳಿಯ ಮುಗ್ಧ ಜನರ ಮೇಲೆ ನಡೆಯುವ ವಿನಾಕಾರಣದ ಪೋಲೀಸ್ ದೌರ್ಜನ್ಯ..ಇವೆಲ್ಲದರ ನಡುವೆಯೇ ಪುಟಿದೇಳುವ ಹೋರಾಟದ ದನಿ..ಅರ್ಥಪೂರ್ಣ ಸುಂದರ ಸ್ವಸ್ಥ ಸಮಾಜವನ್ನು ಕಟ್ಟಬಯಸುವ ಉತ್ಸಾಹೀ ಪ್ರಗತಿಪರ ಮನಸ್ಸುಗಳು…ಇವೆಲ್ಲವೂ ಮಿಳಿತಗೊಂಡಿರುವ ‘ಬೆಟ್ಟಸಾಲು ಮಳೆ’ ಕಥೆ,ಸಶಕ್ತ ಗ್ರಾಮ್ಯಭಾಷೆಯ ಸೊಗಡಿನಿಂದಲೂ ಘರ್ಷಣೆಗಳ ನಾಟಕೀಯ ಪ್ರಸ್ತುತಿಯಿಂದಲೂ ನಮ್ಮನ್ನು ಗಾಢವಾಗಿ ಆವರಿಸಿಕೊಳ್ಳುತ್ತದೆ. ಕಥೆಯ ಈ ಅಂತರ್ಗತ ನಾಟಕೀಯತೆಯಿಂದಾಗಿಯೇ ಈ ಕೃತಿ ರಂಗಭೂಮಿಗೂ ಸುಲಭವಾಗಿ ಒಗ್ಗಿಕೊಳ್ಳುತ್ತದೆ ಎಂದು ನನಗನ್ನಿಸಿತು. ಕಾಳೇಗೌಡರೊಂದಿಗೆ ಚರ್ಚಿಸಿ ಅವರ ಅನುಮತಿಯನ್ನು ಪಡೆದು ನಾಟಕರೂಪವನ್ನು ಸಿದ್ಧಗೊಳಿಸಿದೆ.

‘ಚಿರಂತನ’ ರಂಗತಂಡವನ್ನು ಕಟ್ಟಿ ಬೆಳೆಸಿದವರು ಬಿ.ಸಿ.ಶ್ರೀನಿವಾಸ ಅಯ್ಯಂಗಾರ್ ಎಂಬ ಉತ್ಸಾಹೀ ರಂಗಕರ್ಮಿ. ‘ಬೆಟ್ಟಸಾಲು ಮಳೆ’ ನಾಟಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರ ಅಗತ್ಯವಿದ್ದುದರಿಂದ ನಮ್ಮ ನಾಟ್ಯದರ್ಪಣ ತಂಡದ ಒಂದಷ್ಟು ಕಲಾವಿದರನ್ನೂ ನಮ್ಮ ತಂಡಕ್ಕೆ ಸೇರಿಸಿಕೊಂಡೆ.ಲಲಿತ ಪ್ರಸಾದ್ ,ಬಿ.ಸಿ.ಎಸ್.ಅಯ್ಯಂಗಾರ್ , ಎಲ್. ಎಸ್.ಸುಧೀಂದ್ರ,ನಳಿನಿ ಅಕ್ಕ ಮುಖ್ಯ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.ರಂಗದ ಮೇಲೆ ನಾಟಕ ಚೆನ್ನಾಗಿಯೇ ಮೂಡಿಬಂದರೂ ನನಗೇಕೋ ಪೂರ್ಣ ಸಮಾಧಾನವಾಗದೇ ನಾಟಕ ರೂಪಾಂತರದಲ್ಲಿಯೇ ಕೊಂಚ ಅರಕೆಯಾದಂತೆ ಭಾಸವಾಯಿತು.ಕೆಲ ಬದಲಾವಣೆಗಳೊಂದಿಗೆ ನಾಟಕ ಇನ್ನೂ ಪ್ರಭಾವಿಯಾಗಿ ರಂಗದ ಮೇಲೆ ಮೂಡಿಬರಬಹುದು ಎಂದು ತೀವ್ರವಾಗಿ ಅನ್ನಿಸತೊಡಗಿತು.

ಹಳೆಯ ಮೈಸೂರಿನ ಪ್ರಾಂತ್ಯದ ಗ್ರಾಮ್ಯದ ನುಡಿಕಟ್ಟು —ಲಯ—ಉಚ್ಚಾರಗಳು ಬಹಳಷ್ಟು ಪಾತ್ರಧಾರಿಗಳಿಗೆ ಒಗ್ಗಿ ಬರದೇ ಹೋದದ್ದೂ ಒಂದು ಕೊರತೆಯಾಯಿತು. ಮುಂದಿನ ಪ್ರದರ್ಶನಗಳಲ್ಲಿ ಈ ಕೊರತೆಗಳನ್ನು ನಿವಾರಿಸಿಕೊಂಡು ನಾಟಕವನ್ನು ಇನ್ನಷ್ಟು ಸಮರ್ಥವಾಗಿ ಕಟ್ಟಿಕೊಡಬೇಕೆಂದುಕೊಂಡರೂ ಅನೇಕ ಅನಿವಾರ್ಯ ಕಾರಣಗಳಿಂದಾಗಿ ನಾಟಕದ ಮರು ಪ್ರದರ್ಶನಗಳಾಗದೇ ನನ್ನ ಹಂಬಲ ಈಡೇರದೇ ಹೋಯಿತು.ಏನೇ ಆದರೂ ಈಗಲೂ ಸಾಂದರ್ಭಿಕವಾಗಬಹುದಾದ,ನಿರ್ದೇಶಕರಿಗೆ ಸವಾಲಾಗಬಲ್ಲ ಅಂಶಗಳು ‘ಬೆಟ್ಟಸಾಲು ಮಳೆ’ ಕಥೆಯಲ್ಲಿ ಹುದುಗಿವೆಯೆಂಬುದಂತೂ ಸತ್ಯ. ಆಗ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವಿಮರ್ಶೆಯ ಕೆಲ ಸಾಲುಗಳನ್ನು ಉದ್ಧರಿಸುವುದಾದರೆ:
“ನಾಟಕದ ಪೂರ್ವಾರ್ಧದ ಮುಖ್ಯ ಕೊರತೆಯಾಗಿ ಕಂಡಿದ್ದು ವಾತಾವರಣ ಸೃಷ್ಟಿ—ವಸ್ತು ಸ್ಥಾಪನೆಯಲ್ಲಿನ ವೈಫಲ್ಯ.. ಪ್ರಾರಂಭದಲ್ಲಿ ಪಿಚ್ಚೆನಿಸಿದರೂ ನಾಟಕೀಯತೆ ಅಂತರ್ಗತವಾಗಿರುವ ಸನ್ನಿವೇಶಗಳಲ್ಲಿ ಪ್ರಯೋಗ ಚುರುಕಿನ ಕ್ರಿಯೆ, ರಭಸದ ಗತಿ ಪಡೆದುಕೊಂಡಿತು;ಕ್ರಿಯಾ ಪ್ರಧಾನವಾದ ಉತ್ತರಾರ್ಧ ಹೆಚ್ಚು ಪರಿಣಾಮಕಾರಿಯಾಯಿತು. ಪೋಲೀಸರನ್ನು ಅಶ್ವತ್ಥ ಎದುರಿಸುವ ಸನ್ನಿವೇಶ,ತಿಮ್ಮಕ್ಕ ಪೋಲೀಸರ ಎದುರು ಊರಿನ ಗಂಡಸರಿಗೆ ಸವಾಲು ಹಾಕುವ ಸನ್ನಿವೇಶ,ಆಮೇಲೆ ಪೋಲೀಸರು ನಡೆಸಿದ ದಾಳಿ ಹಾಗೂ ಇತರ ಗುಂಪುಕ್ರಿಯೆಯ ಸಂದರ್ಭಗಳಲ್ಲಿ ಪ್ರಭು ಪ್ರತಿಭಾಸ್ಪರ್ಶ ಎದ್ದು ಕಾಣುತ್ತಿತ್ತು.”

ಒಟ್ಟಿನಲ್ಲಿ ವೈಯಕ್ತಿಕವಾಗಿ ನನಗೆ ಕೊಂಚ ಕೊರತೆಗಳಿದ್ದಂತೆ ತೋರಿದರೂ ಪ್ರೇಕ್ಷಕರನ್ನು ಮುಟ್ಟುವಲ್ಲಿ ‘ಬೆಟ್ಟಸಾಲು ಮಳೆ’ ಯಶಸ್ವಿಯಾಯಿತು. ಮುಖ್ಯ ಕಲಾವಿದರೂ ಸಹಾ ತಂತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು.

ಗುಳ್ಳೆನರಿ ನಾಟಕವನ್ನು ನಮ್ಮ ತಂಡಕ್ಕೆ ಮಾಡಿಸುತ್ತಿದ್ದ ಸಮಯದಲ್ಲೇ ನಮ್ಮ ತಂಡಕ್ಕೆ ಹೊಸದಾಗಿ ಸೇರ್ಪಡೆಯಾದ ಫಣೀಂದ್ರ ನಾಥ್ ,ಸುಶೀಲೇಂದ್ರ ಪುರೋಹಿತ್ ಹಾಗೂ ದತ್ತಾತ್ರೇಯ—ಈ ಮೂವರೂ ಕೆನರಾಬ್ಯಾಂಕ್ ನ ಉದ್ಯೋಗಿಗಳಾಗಿದ್ದರು. ನಾಟಕರಂಗದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರುಗಳು ಬಲುಬೇಗ ನನಗೆ ಆತ್ಮೀಯರಾಗಿಬಿಟ್ಟರು. ಒಂದು ಸಂಜೆ ಕಲಾಕ್ಷೇತ್ರದ ಮೆಟ್ಟಿಲ ಮೇಲೆ ಹರಟುತ್ತಾ ಕುಳಿತಿದ್ದಾಗ ಇದ್ದಕ್ಕಿದ್ದ ಹಾಗೆ ಫಣಿ ಕೇಳಿದರು: ” ಪ್ರಭೂ, ನೀವು ಯಾಕೆ ಒಂದು ಚಿಕ್ಕ ಗಾಡಿ ತೊಗೋಬಾರದು? ಓಡಾಟಕ್ಕೆ ಅನುಕೂಲವಾಗುತ್ತೆ.” ಅವರ ಮಾತು ಕೇಳಿ ನಾನು ಜೋರಾಗಿ ನಕ್ಕುಬಿಟ್ಟೆ. ” ಓಡಾಟಕ್ಕೆ ಅನುಕೂಲ ಆಗೋದೇನೋ ಸರಿ ಫಣಿ, ಆದರೆ ಗಾಡಿ ತೊಗೋಬೇಕು ಅಂದ್ರೆ ಸಾವಿರಾರು ರೂಪಾಯಿ ಬೇಕು..ಎಲ್ಲಿಂದ ತರಲಿ ನಾನು!?” ಎಂದೆ ನಾನು. ” ಆ ವಿಚಾರ ನೀವು ನಮಗೆ ಬಿಡಿ..ನಾಳೆ ಬೆಳಿಗ್ಗೆ ನಮ್ಮ ಬ್ಯಾಂಕ್ ಗೆ ಬನ್ನಿ..ಮ್ಯಾನೇಜರ್ ಗೆ ನಿಮ್ಮ ಪರಿಚಯ ಮಾಡಿಕೊಡ್ತೇನೆ..ಗಾಡಿ ತೊಗೊಳ್ಳೊದಕ್ಕೆ 90% ಸಾಲ ಕೊಡ್ತಾರೆ ಬ್ಯಾಂಕ್ ನಲ್ಲಿ..ಪ್ರತಿ ತಿಂಗಳೂ ಕಂತು ಕಟ್ಟಿಕೊಂಡು ನಿಧಾನವಾಗಿ ಸಾಲ ತೀರಿಸಿಕೋ ಬಹುದು..” ಎಂದರು ಫಣಿ. ನಾನೇನೂ ಮಾತಾಡದೇ ಸುಮ್ಮನೇ ಕುಳಿತಿದ್ದೆ. ನನ್ನ ಮನಸ್ಸಿನಲ್ಲಿ ಉಳಿದ 10% ಹಣ ಹೊಂದಿಸುವುದು ಹೇಗೆ, ಪೆಟ್ರೋಲ್ ಹಾಕಿಸಲು ದುಡ್ಡೆಲ್ಲಿಂದ ತರುವುದು..ಇತ್ಯಾದಿ ವಿಚಾರಗಳ ಜಿಜ್ಞಾಸೆ ನಡೆಯುತ್ತಿತ್ತು! ನನ್ನ ಮನಸ್ಸು ಓದಿಕೊಂಡವರಂತೆ ಫಣಿ ನಗುತ್ತಾ ಹೇಳಿದರು: “ಜಾಸ್ತಿ ತಲೆ ಕೆಡಿಸಿಕೋಬೇಡಿ ಸರ್ ,ನೀವು ನಾಳೆ ನಮ್ಮ ಬ್ಯಾಂಕ್ ಗೆ ಬನ್ನಿ.. ಮಿಕ್ಕ ವ್ಯವಸ್ಥೆ ನಾವು ನೋಡಿಕೋತೀವಿ”.

ಸರಿ,ಮರುದಿನ ಬ್ಯಾಂಕ್ ಗೆ ಹೋಗಿ ಅವರು ನೀಡಿದ ಒಂದಷ್ಟು ಅರ್ಜಿಗಳಿಗೆ ರುಜು ಹಾಕಿದೆ. ಮೊದಲಿಗೆ ಆಗಿದ್ದು ನನ್ನ ಹೆಸರಿನಲ್ಲಿ ಒಂದು ಖಾತೆ ತೆಗೆಯುವ ಕೆಲಸ! ಅದುವರೆಗೆ ಬಂದಿದ್ದ ಹಲವಾರು ಚೆಕ್ ಗಳನ್ನು , ಆಗ ಇದ್ದ ಡಿಸ್ಕೌಂಟ್ ಮಾಡಿಸುವ ಪದ್ಧತಿಯಲ್ಲಿ ಮುರಿಸಿ ಕಮೀಷನ್ ಕೊಟ್ಟು ಉಳಿದ ಹಣ ಇಟ್ಟುಕೊಳ್ಳುತ್ತಿದ್ದುದರಿಂದ ಖಾತೆ ತೆರೆಯುವ ಅಗತ್ಯವೇ ಬಂದಿರಲಿಲ್ಲ. ಮ್ಯಾನೇಜರ್ ಅವರಿಗೆ ನನ್ನನ್ನು ಪರಿಚಯ ಮಾಡಿಕೊಟ್ಟ ಫಣಿ—ಸುಶೀಲೇಂದ್ರ, ನಾನು ತಿಂಗಳಿಗೆ ಸುಮಾರು ಒಂದು—ಒಂದೂವರೆ ಸಾವಿರ ರೂಪಾಯಿಗಳಷ್ಟು ಹಣವನ್ನು ರಂಗ ಚಟುವಟಿಕೆಗಳಿಂದ ಸಂಪಾದಿಸುತ್ತೇನೆಂದು ಸರಾಗವಾಗಿ ಹೇಳಿಬಿಟ್ಟರು!ಮ್ಯಾನೇಜರ್ ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರ ನೀಡುತ್ತಿದ್ದುದು ಅವರಿಬ್ಬರೇ! ನಾನು ಮೂಕ ಪ್ರೇಕ್ಷಕ! ಕೊಂಚ ಅನುಮಾನದಿಂದಲೇ ಸಾಲ ನೀಡಲು ಒಪ್ಪಿಕೊಂಡ ಮ್ಯಾನೇಜರ್ ಅವರು ಕೊನೆಯಲ್ಲಿ, “ಯಾವುದಕ್ಕೂ ನೀವಿರ್ತೀರಲ್ಲಾ..so no problems” ಎಂದು ಬೇರೆ ಫಣಿ—ಸುಶೀಲೇಂದ್ರರಿಗೆ ಮಾರ್ಮಿಕವಾಗಿ ನುಡಿದದ್ದು ಕೊಂಚ ಕಸಿವಿಸಿಯೇ ಆಯಿತು. ಒಟ್ಟಿನಲ್ಲಿ ಫಣಿ—ಸುಶೀಲೇಂದ್ರರ ಪ್ರಯತ್ನ—ನೆರವುಗಳಿಂದಾಗಿ ಒಂದೆರಡು ವಾರಗಳಲ್ಲೇ ನಾನು 697 ಎಂಬ ಸಂಖ್ಯೆಯನ್ನು ಹೊಂದಿದ್ದ ನೀಲಿ ಬಣ್ಣದ ಸುವೇಗಾ ಎಂಬ ಪುಟ್ಟ ವಾಹನದ ಒಡೆಯನಾದೆ.

ಇದೇ ಸಂದರ್ಭದಲ್ಲಿ ನಾನು ನಟಿಸಿದ ಒಂದೆರಡು ನಾಟಕಗಳು ನೆನಪಾಗುತ್ತಿವೆ.ಮೊದಲನೆಯದು ರಾಣಿರಾವ್ ಅವರು ನಿರ್ದೇಶಿಸಿದ್ದ ಡಾ॥ಫಾಸ್ಟಸ್ ಎಂಬ ನಾಟಕ. ಕ್ರಿಸ್ಟೊಫರ್ ಮಾರ್ಲೋ ನ ಈ ಪ್ರಸಿದ್ಧ ಹಾಗೂ ಬಹುಚರ್ಚಿತ ನಾಟಕವನ್ನು ಬೆನಕ ತಂಡದ ಕೃಷ್ಣಮೂರ್ತಿಯವರು ಅನುವಾದಿಸಿದ್ದರು.ರಂಗಪ್ರಸ್ತುತಿಯ ಹೊಣೆಯೂ ಅವರದೇ. ಕನ್ನಡದ ಅತಿ ಶ್ರೀಮಂತ ಪ್ರಸ್ತುತಿಯ ನಾಟಕಗಳ ಗುಂಪಿಗೆ ಡಾ॥ಫಾಸ್ಟಸ್ ಕೂಡಾ ಸೇರುತ್ತದೆ! ಅಂಕಲ್ ಲೋಕನಾಥ್ ಅವರು ಡಾ॥ಫಾಸ್ಟಸ್ ನ ಪಾತ್ರವನ್ನು ನಿರ್ವಹಿಸಿದ್ದರು.ನರಕದ ಅಧಿಪತಿ ಲೂಸಿಫರ್ ನ ಸೇವಕನಾದ ಮೆಫಿಸ್ಟೊಫಿಲಿಸ್ ನ ಪಾತ್ರವನ್ನು ನಾನು ನಿರ್ವಹಿಸಿದ್ದೆ. ನನ್ನ ಪಾತ್ರಕ್ಕೆ ನಾಟಕದಲ್ಲಿ ಹೇಳಿಕೊಳ್ಳುವಂತಹ ಪ್ರಾಮುಖ್ಯತೆ ಇಲ್ಲದಿದ್ದರೂ ಲೋಕನಾಥ್ ರಂತಹ ಮೇರು ನಟರೊಂದಿಗೆ ನಟಿಸುವ ಅವಕಾಶ ದೊರೆತದ್ದು ನನಗೆ ಸಂತಸದ ಸಂಗತಿಯಾಗಿತ್ತು. ತಾಂತ್ರಿಕ ವೈಭವ ಹಾಗೂ ವರ್ಣರಂಜಿತ ಪ್ರಸ್ತುತಿಗಳಿಂದಾಗಿ ಫಾಸ್ಟಸ್ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಲೋಕನಾಥ್ ಅವರದಂತೂ ಫಾಸ್ಟಸ್ ಪಾತ್ರದಲ್ಲಿ ಅವಿಸ್ಮರಣೀಯ ಅಭಿನಯ.

ಟಿ.ಎನ್.ನರಸಿಂಹನ್ ಅಲಿಯಾಸ್ ನಚ್ಚಿ ಸಂಕೇತ್ ತಂಡಕ್ಕಾಗಿ ನಿರ್ದೇಶಿಸಿದ ನಾಟಕ ‘ನಮ್ಮ ನಿಮ್ಮಂಥವರು’. ಹೆರಾಲ್ಡ್ ಪಿಂಟರ್ ನ ‘ಕೇರ್ ಟೇಕರ್ ‘ ನಾಟಕವನ್ನು ನಚ್ಚಿಯೇ ಕನ್ನಡಕ್ಕೆ ರೂಪಾಂತರಿಸಿದ್ದ. ನಾಟಕದಲ್ಲಿ ಇದ್ದದ್ದು ಮೂರೇ ಪಾತ್ರಗಳು: ನಚ್ಚಿ, ನಾನು ಹಾಗೂ ಸಂಕೇತ್ ಕಾಶಿ ಆ ಪಾತ್ರಗಳನ್ನು ನಿರ್ವಹಿಸುತ್ತಿದ್ದೆವು. ಮನುಷ್ಯನ ಏಕಾಕಿತನ ಹಾಗೂ ಅಸ್ಮಿತೆಗಾಗಿನ ಅವನ ನಿರಂತರ ಹುಡುಕಾಟ, ಅವನ ಒಳಗಡಗಿರುವ ಕ್ರೌರ್ಯ—ಮೃಗೀಯ ಪ್ರವೃತ್ತಿಗಳು, ಅವನ ಭಯ—ತಲ್ಲಣಗಳು, ಅವನ ಕನಸು—ಭ್ರಮೆಗಳು…ಹೀಗೆ ಹಲವು ಹತ್ತು ವಿಚಾರಗಳು ಮೂಲ ನಾಟಕದಲ್ಲಿ ಅಡಕವಾಗಿದ್ದು ಒಂದು ರೀತಿಯಲ್ಲಿ ಸರಾಗ ಸಂವಹನಕ್ಕೆ ಒದಗದ ನಾಟಕವಿದು ಎಂದೂ ನನಗನ್ನಿಸಿದ್ದುಂಟು! ನಚ್ಚಿಯ ಭಾವಾನುವಾದವಾದರೂ ಸಹಾ ಸಂವಹನಕ್ಕೆ ಸವಾಲೊಡ್ಡುವಂತೆಯೇ ಇತ್ತು! ಅಂದರೆ ನೇರವಾಗಿ ಒಂದೇ ಬೀಸಿನಲ್ಲಿ ನಾಟಕದ ಕ್ರಿಯೆಯೊಂದಿಗೆ ಬೆರೆತು ಆಸ್ವಾದಿಸಲು ಪ್ರೇಕ್ಷಕನಿಗೆ ತುಸು ಕಷ್ಟವಾಗುವಂತೆಯೇ ಇತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ ನಚ್ಚಿ ಅಂಥೆಲ್ಲ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುವವನೇ ಅಲ್ಲ! ಜತೆಗೆ ಅವನು ನಾಟಕವನ್ನು ನಿರ್ದೇಶಿಸುತ್ತಿದ್ದ ಕ್ರಮವೇ ನನ್ನ ನಿರ್ದೇಶನ ಕ್ರಮಕ್ಕಿಂತ ತೀರಾ ಭಿನ್ನವಾದುದು! ದೃಶ್ಯವನ್ನು ಸಿದ್ಧ ಪಡಿಸಿದ ಮೇಲೂ ಮತ್ತೆ ಮತ್ತೆ ಹೊಸದೇನನ್ನೋ ಸೇರಿಸುತ್ತಿದ್ದ ನಚ್ಚಿ! ನಾಟಕದ ಪ್ರದರ್ಶನ ನಾಳೆ ಅನ್ನುವವರೆಗೂ ಅವನ ಈ ‘ಸ್ಫೂರ್ತ ವಿಸ್ತರಣ’ (improvisation) ಪ್ರಕ್ರಿಯೆ ಮುಂದುವರಿಯುತ್ತಲೇ ಇತ್ತು! ನನಗೋ ಒಮ್ಮೆ ನಾಟಕ ಸಂಪೂರ್ಣವಾಗಿ ಸಿದ್ಧವಾದ ಮೇಲೆ ಬದಲಾವಣೆಗಳನ್ನು ಮಾಡಿ ಕಲಾವಿದರನ್ನು ಗೊಂದಲಗಳಿಗೆ ದೂಡುವುದು ಸ್ವಲ್ಪವೂ ಸೇರುತ್ತಿರಲಿಲ್ಲ! ನಚ್ಚಿಯಾದರೋ improvise ಮಾಡದೇ ಕ್ಷಣವೂ ವಿರಮಿಸುವವನಲ್ಲ! ‘ನಮ್ಮ ನಿಮ್ಮಂಥವರು’ ನಾಟಕದ ಒಂದು ಪ್ರದರ್ಶನದಲ್ಲಂತೂ ಮಧ್ಯಂತರದ ನಂತರ ನಾಟಕ ಶುರು ಮಾಡುವ ಮೊದಲು ನನ್ನ ಬಳಿ ಬಂದು , “ಭಾಳ ಅದ್ಭುತವಾದ ನಾಲ್ಕು ಸಾಲು ಬರೆದಿದೀನಿ..ಇದನ್ನ ಹೇಳಿ ಆಮೇಲೆ ಮುಂದುವರಿಸು” ಎಂದು ನನ್ನ ಕೈಗೊಂದು ಚೀಟಿ ತುರುಕಿದ್ದ! ಸಾಲುಗಳೂ ಅದ್ಭುತವಾಗಿದ್ದವು..ನಾನೂ ಕಲಿತು ನೆನಪಿಟ್ಟುಕೊಂಡು ಹೇಳಿದೆ ಅನ್ನುವುದು ಬೇರೆಯ ಮಾತು..ಆದರೂ ಯಾಕೋ ನನಗೆ ಈ ಕ್ರಮ ಕೊಂಚ ಭಯ ಹುಟ್ಟಿಸುವಂಥದ್ದೇ!

ಏನೇ ಆದರೂ ನಚ್ಚಿಯ ನಿರ್ದೇಶನದಲ್ಲಿ ಅಭಿನಯಿಸಿದ್ದು ಒಂದು ಹೊಸ ಅನುಭವವನ್ನು ತಂದುಕೊಟ್ಟಿದ್ದಲ್ಲದೇ ಆವರೆಗೆ ನನ್ನ ಸೀಮೆಯೊಳಗೆ ಪ್ರವೇಶಿಸದಿದ್ದ ಹೊಸ ಕ್ರಮವೊಂದರೆಡೆಗೂ ನನ್ನನ್ನು ಆಕರ್ಷಿಸಿತು. ಆಗಾಗ್ಗೆ ನಾಟಕದ ತಾಲೀಮಿಗೆ ಶಂಕರ್ ನಾಗ್ ಬರುತ್ತಿದ್ದರು.ಎಷ್ಟೋ ದಿನ ತಡರಾತ್ರಿಯವರೆಗೆ ರಿಹರ್ಸಲ್ ಸಾಗುತ್ತಿತ್ತು!
ರಂಗದ ಮೇಲೂ ‘ನಮ್ಮ ನಿಮ್ಮಂಥವರು’ ನಾಟಕ ಸೊಗಸಾಗಿ ಮೂಡಿಬಂದು ಯಶಸ್ವೀ ಪ್ರಯೋಗಾತ್ಮಕ ನಾಟಕಗಳ ಗುಂಪಿಗೆ ಸೇರ್ಪಡೆಯಾಯಿತು. ಅಸಂಗತ ನಾಟಕಗಳ ಲಕ್ಷಣಗಳನ್ನೂ ಕೊಂಚ ಮಟ್ಟಿಗೆ ಮೈಗೂಡಿಸಿಕೊಂಡಿದ್ದ ಈ ನಾಟಕದ ಬಗ್ಗೆ “ಅಷ್ಟು ಸುಲಭವಾಗಿ ಅರ್ಥವಾಗುವಂಥದ್ದಲ್ಲ” ಎಂಬ ಗೊಣಗಾಟ ಅಲ್ಲಲ್ಲಿ ಕೇಳಿಬಂದರೂ ಅಸಂಗತ ನಾಟಕಗಳ ಹಾಗೂ ಪ್ರಯೋಗಾತ್ಮಕ ನಾಟಕಗಳ ಪರಿಚಯವಿದ್ದ ಒಂದು ವರ್ಗದ ಪ್ರೇಕ್ಷಕರು ನಾಟಕವನ್ನು ಬಹುವಾಗಿ ಮೆಚ್ಚಿಕೊಂಡು ಶ್ಲಾಘಿಸಿದರು. ಕಾಶಿಯ ಮನೋಜ್ಞ ಅಭಿನಯವಂತೂ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಹೆಸರಾಂತ ರಂಗಕರ್ಮಿ—ನಿರ್ದೇಶಕ—ನಾಟಕಕಾರ ಕ.ವೆಂ.ರಾಜಗೊಪಾಲ ಅವರು ಒಂದೆಡೆ ಹೀಗೆ ಬರೆದಿದ್ದರು: “ಸಂಕೇತ್ ಕಲಾವಿದರು ಈಗಾಗಲೇ ಕೆಲವು ಉತ್ತಮ ನಾಟಕಗಳನ್ನು ಪ್ರದರ್ಶಿಸಿ ಹೆಸರುವಾಸಿಯಾಗಿದ್ದಾರಷ್ಟೇ. ನರಸಿಂಹನ್ ಈ ನಾಟಕದ ರೂಪಾಂತರ,ನಿರ್ದೇಶನ ಮತ್ತು ಅಭಿನಯವನ್ನು ನಡೆಸಿದ್ದಾರೆ. ಇವರ ಸಂಗಡ ಕಾಶಿನಾಥ್ ಮತ್ತು ಶ್ರೀನಿವಾಸ ಪ್ರಭು—ಹೀಗೆ ಸುಪ್ರಸಿದ್ಧರ ಅಭಿನಯಕ್ಕೆ ಒಳ್ಳೆಯ ಅವಕಾಶವೂ ಉಂಟಾಗಿದೆ. ನರಸಿಂಹನ್ ಹಾಗೂ ಕಾಶಿನಾಥ್ ಅವರು ಪಾತ್ರಗಳಿಗೆ ತಕ್ಕ ಆಯ್ಕೆಯೂ ಆಗಿದ್ದು ಪ್ರಭು ಮಾತ್ರ ಒರಟುತನ ಸಾಲದ ನೀತಿವಂತ ಪಾತ್ರವಾಯಿತೆಂದು ಹೇಳಬಹುದು..ಒಟ್ಟಿನಲ್ಲಿ ಇದೊಂದು ಶ್ರೇಷ್ಠಮಟ್ಟದ ಪ್ರಯೋಗ”. ನಾಟಕವನ್ನು ಮೆಚ್ಚಿಕೊಂಡರೂ ನನಗೆ ಸಣ್ಣದಾಗಿ ಕುಟುಕಿ ಬರೆದದ್ದು ನೋಡಿ ನನಗೆ ಪೆಚ್ಚಾಗಿ ಹೋಯಿತು. “ಅದೇಕೆ ಹಾಗೆ ಬರೆದಿದ್ದಾರೆ? ಅವರ ವಿಮರ್ಶೆಯ ಅರ್ಥವೇನು?” ಎಂದು ನಚ್ಚಿಯನ್ನು ಕೇಳಿದೆ. “ನನಗರ್ಥವಾದರೆ ತಾನೇ ನಾನು ನಿನಗೆ ವಿವರಿಸೋದು?! ಅವರ ಅಭಿಪ್ರಾಯ ಬರ್ದಿದಾರೆ..ಅವರು ಸಿಕ್ಕಾಗ ಅವರನ್ನೇ ಕೇಳೋಣ..ತಲೆ ಕೆಡಿಸಿಕೋಬೇಡ.. I am extremely happy with your performance” ಎಂದು ಸಮಾಧಾನ ಹೇಳಿದ ನಚ್ಚಿ. ಶಂಕರ್ ನಾಗ್ ಕೂಡಾ ನನ್ನ ಅಭಿನಯವನ್ನು ಮೆಚ್ಚಿ ಬೆನ್ನು ತಟ್ಟಿದ್ದು ನನ್ನನ್ನು ಮತ್ತಷ್ಟು ಹಗುರಾಗಿಸಿತು.

ನಾನು ದೆಹಲಿಯ ನಾಟಕಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಪೀಟರ್ ಷಫರ್ ನ ‘Royal hunt of the sun’ ನಾಟಕವನ್ನು ‘ರಾಜಬೇಟೆ’ ಎಂಬ ಹೆಸರಿನಲ್ಲಿ ರೂಪಾಂತರಿಸಿ ಸಿದ್ಧವಾಗಿಟ್ಟುಕೊಂಡಿದ್ದೆ. ನನ್ನನ್ನು ಬಹುವಾಗಿ ಕಾಡಿದ ನಾಟಕವದು. ಆದರೆ ಆ ನಾಟಕವನ್ನು ರಂಗದ ಮೇಲೆ ತರುವುದು ಒಂದು ದೊಡ್ಡ ಸಾಹಸದ ಕೆಲಸವೇ ಆಗಿತ್ತು! ನೂರಾರು ಪಾತ್ರಗಳು…ಭಾರೀ ರಂಗಸಜ್ಜಿಕೆ..ಕಾಲ ದೇಶ ಸೂಚಕ ಉಡುಗೆ ತೊಡುಗೆ ಹಾಗೂ ರಂಗ ಪರಿಕರಗಳು..ರಂಗದ ಮೇಲೆ ಮುಖಾಮುಖಿಯಾಗುವ ಎರಡು ಸೈನ್ಯಗಳು..ಒಂದೇ ಎರಡೇ! ಇಷ್ಟು ದೊಡ್ಡ ಹರವಿನ ನಾಟಕದ ಪ್ರಯೋಗಕ್ಕೆ ಸಾವಿರಾರು ರೂಪಾಯಿಗಳ ಬಂಡವಾಳ ಬೇಕು. ಉದ್ಭವ—ಗುಳ್ಳೆನರಿ ನಾಟಕಗಳ ಯಶಸ್ವೀ ಪ್ರದರ್ಶನಗಳಿಂದಾಗಿ ನಮ್ಮ ತಂಡದ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಎಷ್ಟೋ ಸುಧಾರಿಸಿದ್ದರೂ ‘ರಾಜಬೇಟೆ’ಗೆ ತೊಡಗುವಷ್ಟು ಕ್ಷಮತೆ ಬಂದಿರಲಿಲ್ಲ!”ಈಗಲೇ ಬೇಡ ಕಣೋ..ಸಿಕ್ಕಾಪಟ್ಟೆ ಸಾಲ ಮಾಡಬೇಕಾಗುತ್ತೆ..ಏನಾದ್ರೂ ಹೆಚ್ಚುಕಮ್ಮಿ ಆಗಿಬಿಟ್ರೆ ಪರ್ಮನೆಂಟ್ ಆಗಿ ಅಂಗಡಿ ಮುಚ್ಚಬೇಕಾಗುತ್ತೆ…ಸ್ವಲ್ಪ ದಿನ ಕಳೀಲಿ..ಇನ್ನಷ್ಟು ಬಂಡವಾಳ ಹೊಂದಿಸಿಕೊಂಡು ಆಮೇಲೆ ಖಂಡಿತಾ ಮಾಡೋಣ” ಎಂದಿದ್ದ ನಮ್ಮ ತಂಡದ ‘ಮುನಿರಂಗಪ್ಪ’ ರಿಚರ್ಡ್ ಜಿ ಲೂಯಿಸ್ ಅಲಿಯಾಸ್ ರಿಚಿ.ಹಾಗಾಗಿ ಸಾಕಷ್ಟು ಹಿಂದೆಯೇ ಸಿದ್ಧವಾಗಿದ್ದರೂ ‘ರಾಜಬೇಟೆ’ ಯ ಹಸ್ತಪ್ರತಿ ಮನೆಯ ಕಪಾಟಿನಲ್ಲಿ ಧೂಳು ಮೆತ್ತಿಕೊಂಡು ಮಲಗಿತ್ತು.’ನಮ್ಮ ನಿಮ್ಮಂಥವರು’ ನಾಟಕದ ನಂತರ ನನಗೆ ಥಟ್ಟನೆ ಒಂದು ವಿಚಾರ ಮನಸ್ಸಿಗೆ ಬಂತು: ಸಂಕೇತ್ ತಂಡಕ್ಕೆ ಯಾಕೆ ‘ರಾಜಬೇಟೆ’ ನಾಟಕವನ್ನು ಮಾಡಿಸಬಾರದು? ಬಂಡವಾಳ ದೊಡ್ಡ ಸಮಸ್ಯೆಯಾಗದು;ಜೊತೆಗೆ ಶಂಕರ್ ನಾಗ್ ರ ತಂಡವೆಂದರೆ ಕಲಾವಿದರನ್ನು ಒಟ್ಟುಗೂಡಿಸುವುದೂ ಸುಲಭ! ಎಲ್ಲಕ್ಕಿಂತ ಮುಖ್ಯವಾಗಿ ನಾಟಕದ ಎರಡು ಅತಿ ಮುಖ್ಯ ಪಾತ್ರಗಳು ಅನಂತನಾಗ್ ಹಾಗೂ ಶಂಕರ್ ನಾಗ್ ಅವರಿಗೆ ಹೇಳಿ ಮಾಡಿಸಿದಂತಹ ಪಾತ್ರಗಳು! ಕೂಡಲೇ ನಚ್ಚಿಯೊಂದಿಗೆ ಈ ಕುರಿತಾಗಿ ಮಾತಾಡಿದೆ.ನಚ್ಚಿ ಪರಮೋತ್ಸಾಹದಿಂದಲೇ ಹೇಳಿದ:” ಖಂಡಿತ ಮಾಡೊಣ..ಎಲ್ಲರನ್ನೂ ಒಟ್ಟು ಸೇರಿಸ್ತೀನಿ..ನೀನು ನಾಟಕದ ಒಂದು ರೀಡಿಂಗ್ ಕೊಡು..ಆಮೇಲೆ ಮುಂದಿನ ತೀರ್ಮಾನ ಮಾಡೋಣ” .’ರಾಜಬೇಟೆ’ ಹಸ್ತಪ್ರತಿಯ ಮೇಲಿನ ಧೂಳು ಝಾಡಿಸುವ ಸಮಯ ಹತ್ತಿರ ಬಂತೆಂದು ನನಗೆ ಸಂಭ್ರಮವೋ ಸಂಭ್ರಮ!

ಆ ಸಂದರ್ಭದಲ್ಲಿಯೇ ನಾವು ಹೊಸದೊಂದು ಯೋಜನೆಯನ್ನು ಪ್ರಾರಂಭಿಸಿದ್ದೆವು:’ಬಡಾವಣಾ ರಂಗಭೂಮಿ.’ ಸಮುದಾಯ ತಂಡ ಏರ್ಪಡಿಸಿದ್ದ ಒಂದು ವಿಚಾರ ಗೋಷ್ಠಿಯಲ್ಲಿ ನಾನು ಈ ‘ಬಡಾವಣಾ ರಂಗಭೂಮಿ’ಯ ಪರಿಕಲ್ಪನೆಯ ಕುರಿತು ಮಾತಾಡಿದ್ದೆ.”ಪ್ರೇಕ್ಷಕರು ನಾಟಕಕ್ಕೆ ಬಾರದೇ ಹೋದರೆ ನಾವೇ ಪ್ರೇಕ್ಷಕರ ಬಳಿಗೆ ನಾಟಕವನ್ನು ಒಯ್ಯೋಣ;ನಗರದ ಎಲ್ಲಿ ಬಡಾವಣೆಗಳಲ್ಲೂ ಒಂದಲ್ಲ ಒಂದು ರಂಗಮಂದಿರವಿದ್ದೇ ಇರುತ್ತದೆ;ಅಲ್ಲಿ ನಮ್ಮ ನಾಟಕ ಪ್ರದರ್ಶನಗಳನ್ನು ನೀಡೋಣ; ನಾಟಕ ನೋಡಲು ದೂರದ ರಂಗಮಂದಿರಕ್ಕೆ ಹೋಗಿಬರುವುದೇ ದೊಡ್ಡ ಸಮಸ್ಯೆಯಾಗಿರುವ ಪ್ರೇಕ್ಷಕರು ಅವರವರ ಬಡಾವಣೆಯಲ್ಲೇ, ಹೋ
ಗಿ ಬರಲು ಅನುಕೂಲವಿರುವಷ್ಟು ದೂರದಲ್ಲೇ ನಾಟಕ ಪ್ರದರ್ಶನ ಏರ್ಪಡಿಸಿದರೆ ಖಂಡಿತ ನಾಟಕಕ್ಕೆ ಬರುತ್ತಾರೆ” ಎಂಬುದು ನನ್ನ ಪ್ರಬಂಧದ ತಿರುಳಾಗಿತ್ತು. ಸಭೆಯ ಅಧ್ಯಕ್ಷರಾಗಿದ್ದ ಚಂದ್ರಶೇಖರ ಪಾಟೀಲರಾದಿಯಾಗಿ ಅನೇಕ ರಂಗಕರ್ಮಿಗಳು ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡದ್ದಷ್ಟೇ ಅಲ್ಲ, ಇದನ್ನು ಕಾರ್ಯರೂಪಕ್ಕೆ ತರಲು ಎಲ್ಲ ಸಹಕಾರ ನೀಡುವುದಾಗಿಯೂ ಭರವಸೆ ಕೊಟ್ಟರು.ಮಲ್ಲೇಶ್ವರದ ಗೋಖಲೆ ಇನ್ಸ್ಟಿಟ್ಯೂಟ್, ಗಾಯನ ಸಮಾಜ, ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್…ಹೀಗೆ ಒಂದಷ್ಟು ಸ್ಥಳಗಳನ್ನು ಗುರುತು ಹಾಕಿಕೊಂಡು ಬಡಾವಣಾ ರಂಗಭೂಮಿಗೆ ಚಾಲನೆಯನ್ನು ನೀಡಿಯೇ ಬಿಟ್ಟ ನಮ್ಮ ತಂಡದ ಮುನಿರಂಗಪ್ಪ ರಿಚಿ!ಪ್ರಪ್ರಥಮವಾಗಿ ಮಲ್ಲೇಶ್ವರದ ಗೋಖಲೆ ಇನ್ಸ್ಟಿಟ್ಯೂಟ್ ನಲ್ಲಿ ನಾಟ್ಯದರ್ಪಣ ತಂಡದ ವತಿಯಿಂದ ‘ಬಡಾವಣಾ ರಂಗಭೂಮಿ’ಗಾಗಿ ‘ಉದ್ಭವ’ ನಾಟಕದ ವಾರಾಂತ್ಯ ಪ್ರದರ್ಶನಗಳನ್ನು ಏರ್ಪಡಿಸಿದೆವು.

ಒಂದು ಶನಿವಾರ ನಾಟಕ ಮುಗಿದ ಮೇಲೆ ಅಲ್ಲಿಯೇ ‘ರಾಜಬೇಟೆ’ ನಾಟಕದ ಓದನ್ನು ಇಟ್ಟುಕೊಳ್ಳುವುದೆಂದು ನಚ್ಚಿ ನಿರ್ಧರಿಸಿದ. ಶಂಕರ್ ನಾಗ್, ನಚ್ಚಿ, ಕಾಶಿ, ರಂಗಣ್ಣಿ, ನಮ್ಮ ತಂಡದ ಕಲಾವಿದರು…ಎಲ್ಲರ ಸಮಕ್ಷಮದಲ್ಲಿ ‘ರಾಜಬೇಟೆ’ ನಾಟಕದ ಓದಿನ ಕಾರ್ಯಕ್ರಮ ನಡೆಯಿತು. ಹೆಚ್ಚುಕಡಿಮೆ ಎರಡು ತಾಸಿನ ಒಂದೇ ಓಟದ ಓದಿನ ನಂತರ ಕೆಲ ಕ್ಷಣ ಯಾರೂ ಮಾತಾಡಲಿಲ್ಲ. ನಾಟಕದ ಕೊನೆಯ ಭಾಗ ಹಾಗೇ ಮನ ಕಲಕುವಂತೆ ಇತ್ತು ಕೂಡಾ. ಎಲ್ಲರಿಗೂ ನಾಟಕ ತುಂಬಾ ಇಷ್ಟವಾಯಿತು. ನಾನು ಅಪಾರ ನಿರೀಕ್ಷೆ— ಕಾತರ—ಕುತೂಹಲದಿಂದ ಶಂಕರ್ ನಾಗ್ ಅವರ ಮುಖವನ್ನು ನೋಡಿದೆ. ಶಂಕರ್ ನಾಗ್ ನಿಧಾನವಾಗಿ ಹೇಳತೊಡಗಿದರು: “ನಾಟಕ ಅದ್ಭುತವಾಗಿದೆ ಅನ್ನೋದರಲ್ಲಿ ಎರಡು ಮಾತಿಲ್ಲ.. ಆದರೆ ಇಷ್ಟು ದೊಡ್ಡ ಕ್ಯಾನ್ವಾಸ್ ನ ನಾಟಕದ ಪ್ರಯೋಗ ಕಷ್ಟ ಆಗುತ್ತೆ.. ನಾವು ಕಮ್ಮಿ ಪಾತ್ರಗಳಿರೋ ಅಂಥ ನಾಟಕಗಳನ್ನೇ ಹೆಚ್ಚಾಗಿ ಆರಿಸಿಕೊಳ್ಳೋಣ ಅಂತ ಯೋಚನೆ ಮಾಡ್ತಿದೀವಿ.. ಅದರಿಂದ ಎಲ್ಲಾ ಕಡೆ ನಾಟಕ ತೊಗೊಂಡು ಹೋಗೋದೂ ಸುಲಭ ಆಗುತ್ತೆ..” ಇಷ್ಟು ಹೇಳಿ ನನ್ನತ್ತ ತಿರುಗಿದ ಅವರಿಗೆ ನನ್ನ ಮುಖದ ಮೇಲೆ ಅಚ್ಚೊತ್ತಿದ್ದ ನಿರಾಸೆ—ಹತಾಶೆಗಳು ಕಂಡು ಕೊಂಚ ಗಲಿಬಿಲಿಯಾಯಿತು.” ಶ್ರೀನಿವಾಸ್, don’t get disheartened! ನೀವು ನಿಮ್ಮ ತಂಡಕ್ಕೇ ಈ ನಾಟಕ ಮಾಡಿಸಿ..ನಿಮಗೇನು ಸಹಾಯ—ಸಹಕಾರ ಬೇಕಿದ್ರೂ ಹೇಳಿ..ನಾನು ಮಾಡಿಕೊಡ್ತೀನಿ” ಎಂದು ಭರವಸೆ ನೀಡಿದರು. ಅವರಿಗೆ ಧನ್ಯವಾದಗಳನ್ನರ್ಪಿಸಿ ಎಲ್ಲರೂ ಅಲ್ಲಿಂದ ಚದುರಿದೆವು.

‘ರಾಜಬೇಟೆ’ ಹಸ್ತಪ್ರತಿ ಮತ್ತೆ ಮನೆಯ ಕಪಾಟು ಸೇರಿ ಸ್ವಸ್ಥ ಮಲಗಿತು.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

July 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: