ನವೋಮಿ ಕಾಲಂ: ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡಿದ್ದಿದ್ರೆ….

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ
ಹೋಗ್ತಾ ಇದ್ದೇನೆ..
ಅವನಿಲ್ಲದ ದಿನ ನೋಡಿ ಅವಳು ಒಂದಿಷ್ಟು ಬಟ್ಟೆ ಬರೆ ತನಗೆ ಅಗತ್ಯವಾಗಿ ಬೇಕಾಗಿದ್ದ ಸಾಮಾನನ್ನು ತನ್ನ ಗೆಳೆಯನ ಮನೆಗೆ ಸಾಗಿಸಿದ್ದಾಳೆ. ಅವಳ ಈ ವರ್ತನೆ ನೋಡಿದರೆ ಫೈನಲ್ ದಿನಕ್ಕಾಗಿ ಕಾದಿರುವ ಹಾಗಿದೆ. ಈ ರೀತಿ ಕಳ್ಳಿಯಂತೆ ವರ್ತಿಸುವಾಗ ಆ ಮನೆಯ ಒಂದೊಂದು ಮೂಲೆಯೂ ತಮ್ಮಲ್ಲೇ ಮಾತಾಡಿಕೊಂಡು ನಗತೊಡಗುತ್ತವೆ. ಅಕ್ಕಿ ತುಂಬಿದ ಆ ಚೆಂಬನ್ನು ಈಕೆ ತುಳಿಯುವಾಗ ಅವಳ ಕಾಲು ಗಳು ನಡುಗುತ್ತಿದ್ದುದನ್ನು ಆ ಮನೆಯ ಹೊಸ್ತಿಲು ಇನ್ನೂ ಮರೆತಿಲ್ಲ.ಮದುವೆಯಾದ ಹೊಸತರಲ್ಲಿ ತಾಯಿ ತಂದೆಯರ ಕಣ್ತಪ್ಪಿಸಿ ಏನೋ ನೆವ ಹುಡುಕಿ ಮುದ್ದಿನ ಹೆಂಡತಿಯ ಕಡೆಗೆ ಬರುತ್ತಿದ್ದ ಗಂಡ, ಯಾರಾದರೂ ನೋಡಿಯಾರೆಂಬ ಭಯದಿಂದ ಓಡುವ ಅವಳು, ಮತ್ತೆ ಅವಳನ್ನು ಎಳೆದುಕೊಂಡು ಬಾಗಿಲು ಹಾಕುವ ಗಂಡ ಇವನ್ನೆಲ್ಲ ನೀವಿಬ್ಬರೂ ಮರೆತರೇನೂ ನಾನಂತೂ ಮರೆತಿಲ್ಲ ಎನ್ನುತ್ತಿದೆ ಅಲ್ಲಿಯ ಮಂಚ., ಅಡಿಗೆ ಮನೆಯ ಒಡಲಲ್ಲಂತೂ ಇಂಥ ಹತ್ತಾರು ಕಥೆಗಳಿವೆ. ಆರಂಭದಲ್ಲಿ ಇವಳು ಮಾಡಿದ ರುಚಿಯಿಲ್ಲದ ಅಡಿಗೆಯನ್ನು ಮತ್ತೆ ಮತ್ತೆ ಚಪ್ಪರಿಸುತ್ತ ಕೈಬೆರಳನ್ನು ಹಾಗೆ ಮುದ್ದಿಸುತ್ತ., ಏನೇನೋ ಪೊಲಿ ಮಾತಾಡುತ್ತಿದ್ದನ್ನು ಕೇಳಿ ಥೂಥೂ ಶಾಂತಂಪಾಪಂ ಈ ಮನುಷ್ಯ ಜಾತಿ ಎಂದು ನಾನೇ ನಾಚಿಕೆ ಪಟ್ಟುಕೊಂಡಿರಲಿಲ್ಲವೆ..
Z3(2)
ಆ ಮನೆಯ ಹಾಲ್ ಗಂತೂ ಇವರಿಬ್ಬರ ವರ್ತನೆಯೇ ಬೇಸರ ತರಿಸಿದೆ.ಎಷ್ಟೋ ಸಂಜೆಗಳನ್ನು ಈ ಮನೆಯ ಸದಸ್ಯರು ಅದೆಷ್ಟು ಪ್ರೀತಿಯಿಂದ ಇಲ್ಲಿ ಕಳೆದಿಲ್ಲ..ಆ ಮುದ್ದು ಕಂದಮ್ಮನ ಆಗಮನವನ್ನು ಇದೇ ಹಾಲ್ ನಲ್ಲಿಯೇ ಎಲ್ಲ ಸಂಭ್ರಮದಿಂದ ಆಚರಿಸಿರಲಿಲ್ಲವೆ, ತನ್ನನ್ನು ಯಾರೂ ನೋಡುತ್ತಿಲ್ಲ ಎನ್ನುವುದನ್ನು ಪಕ್ಕಾ ಮಾಡಿಕೊಳ್ಳುತ್ತ ಮೈಕೈ ತುಂಬಿಕೊಂಡು ನಳನಳಿಸುತ್ತಿದ್ದ ತನ್ನ ಮಡದಿಯನ್ನು ಹಾಗೆ ಗಿಂಡುತ್ತಿದ್ದುದನ್ನು ಮರೆಯೋಕೆ ಹೇಗೆ ಸಾಧ್ಯ..ಅವಳಾದರೂ ಏನು ಬೇಡಬೇಡವೆನುತ್ತಲೇ ನಾಚಿಕೊಂಡು ಅದನ್ನು ಖುಷಿಯಿಂದಲೇ ಅನುಭವಿಸುತ್ತಿರಲಿಲ್ಲವೆ….ಹೇಳಿಕೊಳ್ಳೋಕೆ ಖುಷಿಖುಷಿಯಾದಂಥ ಎಷ್ಟೊಂದು ವಿಷಯಗಳಿವೆ. ಆದರೆ ದಿನಗಳೆದಂತೆ ಶುರುವಾದ ಒಂದೊಂದು ಕಿರಿಕಿರಿಗಳು ಎಲ್ಲಕ್ಕಿಂತ ಮಹತ್ವ ಪಡೆದು ಈ ರೀತಿ ಇಬ್ಬರೂ ಬೇರೆಬೇರೆ ಯಾಗುವಂತೆ ಮಾಡುತ್ತಿದ್ದುದು ಜೀವವಿಲ್ಲದ ನಮ್ಮಿಂದಲೂ ನೋಡಕ್ಕಾಗುತ್ತಿಲ್ಲ. ಆಶ್ಚರ್ಯ ಎಂದರೆ ಇಬ್ಬರಲ್ಲೂ ಅಂಥ ನೋವು ಕಾಣುತ್ತಿಲ್ಲ..ಸದ್ಯ ಬಿಡುಗಡೆ ಸಿಕ್ಕರೆ ಸಾಕು ಎಂದು ಓಡಾಡುತ್ತಿದ್ದುದನ್ನು ನೋಡಿದರೆ ಬೇಜಾರಾಗುತ್ತದೆ….
ಈ ಕಡೆ …
ಅವರಿಬ್ಬರು ಎದುರು ಬದಿರು ಕುಳಿತುಕೊಂಡು ಒಬ್ಬರ ಕಣ್ಣಲ್ಲಿ ಮತ್ತೊಬ್ಬರು ಕಳೆದುಹೋಗಿದ್ದಾರೆ. ಹೊಸ ಮನೆ ತುಂಬುವ, ಶೃಂಗರಿಸುವ, ತಮ್ಮನ್ನು ತಾವು ತುಂಬಿಕೊಳ್ಳುವ ಸಂಭ್ರಮದಲ್ಲಿ ಇಬ್ಬರೂ ಜಗವನ್ನೇ ಮರೆತುಬಿಟ್ಟಿದ್ದಾರೆ..ಅವಳು ಹನಿಮೂನ್ ಗೆ ಎಲ್ಲಿಹೋಗಬೇಕೆಂದು ಈಗಲೇ ಲೆಕ್ಕ ಹಾಕುತ್ತಿದ್ದಾಳೆ. ಅವನು ..ಅವಳನ್ನು ಅಲ್ಲಿ ಇಲ್ಲಿ ಎಲ್ಲೆಲ್ಲೋ ಕರೆದುಕೊಂಡು ಹೋಗುವುದಾಗಿ ಹೇಳುತ್ತಿದ್ದಾನೆ. ಆದರೂ ಮನದ ಮೂಲೆಯೊಂದರಲ್ಲಿ ಅವನಿಗೆ ಭಯ ಕಾಡಿದೆ. ಎಲ್ಲ ತಾವಂದುಕೊಳ್ಳುವಂತೆ ಆಗಿದ್ದರೆ..ಮನೆಯಲ್ಲಿರುವ ಆ ರಾಕ್ಷಸಿ ತಾನಾಗಿಯೇ ಮನೆ ಬಿಟ್ಟು ಹೋದರೆ ಎಷ್ಟೊಂದು ಚೆಂದ.ಯಾವನಾದರೊಟ್ಟಿಗೆ ಓಡಿ ಹೋದರಂತೂ ಇನ್ನೂ ಒಳ್ಳೆಯದು… ಸೌಹಾರ್ದಯುತವಾಗಿಯೇ ಎಲ್ಲ ಬಗೆಹರಿಸಿಕೊಳ್ಳಬಹುದು. ಆದರೂ..ಯಾವಾಗಪ್ಪ ಅವಳಿಂದ ಬಿಡುಗಡೆ ಎಂದುಕೊಳ್ಳುತ್ತಲೇ ಅದನ್ನು ಹೊರಗಡೆ ತರದೆ ಖುಷಿಯಿಂದಲೇ ಮತ್ತೆಮತ್ತೆ ಇವಳ ಕೈಸವರುತ್ತಿದ್ದಾನೆ.ಏನೇ ಆಗಲಿ ಹನಿಮೂನ್ ಗೆ ಸ್ವಿಜರ್ ಲ್ಯಾಂಡ್ಗೆ ಹೋಗೋದು ನಿಶ್ಟಿತ ಎಂದು ಹೇಳುತ್ತಿದ್ದಾನೆ…
ಯೌವನ ಮುಗಿದಿಲ್ಲ..
ಹೆಚ್ಚೆಂದರೆ 3 ವರ್ಷ ಕಾಲ ಮದುವೆ,ಪ್ರಸ್ಥ,ಬಸಿರು,ಮಗುವಿನ ಸಂಭ್ರಮವಿತ್ತೇನೋ ಈ ಮನೆಯಲ್ಲಿ. ಇದ್ದಕ್ಕಿದ್ದಂತೆ ಇಬ್ಬರೂ ಬದಲಾಗತೊಡಗಿದ್ದುದನ್ನು ಈ ಮನೆಯ ನಿರ್ಜಿವ ವಸ್ತುಗಳು ಸೂಕ್ಷ್ಮವಾಗಿ ಗಮನಿಸಿವೆ. ಆರಂಭದಲ್ಲಿ ಅವನ ಅತ್ಯಂತ ಅಸಹ್ಯನಿರಂತರ ಗೊರಕೆಯನ್ನೇ ಇಷ್ಟ ಪಡುತ್ತಿದ್ದ ಅವಳಿಗೆ ಬರುಬರುತ್ತ ಅವನ ಬ್ರಶ್ ಮಾಡುವ ಶಬ್ದ ಕೂಡ ಸಹಿಸಲಸಾಧ್ಯವಾದದ್ದು..ಹಳೆ ವಿಷಯ. ಆರಂಭದಲ್ಲಿ ಅವಳ ಜಡೆಗೆ ಸುತ್ತಿಕೊಂಡಿರುತ್ತಿದ್ದ ಇಂವ ಬರುಬರುತ್ತ ಮನೆಯಲ್ಲಿ ಒಂದು ಕೂದಲು ಕಂಡರೂ ಸಾಕು,ಥೂ…ಛಿ…ಎಂದುಕೊಂಡೇ ದಿನಚರಿ ಆರಂಭಿಸುತ್ತಿದ್ದುದು..ನಿತ್ಯದ ಜಗಳಕ್ಕೆ ನಾಂದಿಯಾಗುತ್ತಿತ್ತು..ಕೂದಲು ಮತ್ತು ಬ್ರಶ್ ವಿಷಯ ಅಲ್ಲೇ ನಿಲ್ಲದೆ ರಾತ್ರಿ ಮಂಚದ ಮನೆಯಲ್ಲೂ ಪುನರಾವರ್ತನೆಯಾಗುತ್ತಿತ್ತು. ಮನಸ್ಸುಗಳು ಕೆಟ್ಟು ನಾರುತ್ತಿದ್ದರೂ,ಮೈಯ ವಾಂಛೆ ತೀರಿಸಿಕೊಳ್ಳಲು ಆತ ಅವಳ ಹತ್ತಿರ ಬಂದರೆ ಅವಳು ಕರೆಂಟು ಹೊಡೆದವಳಂತೆ ದೂರ ಸರಿಯುತ್ತಿದ್ದಳು,.ತನ್ನ ಗಂಡಸ್ತನಕ್ಕೆ ಧಕ್ಕೆ ತಗಲಿದ್ದಕ್ಕೆ ಅಯ್ಯೋ ನಿನ್ನ ನೋಡಿದರೆ ಯಾವನಿಗೂ ಏಳೋದಿಲ್ಲ ಬಿಡು.ಸ್ವಲ್ಪ ಕನ್ನಡಿಲಿ ನಿನ್ನ ದರಿದ್ರ ಮುಖ ನೋಡಿಕೋ ಎಂದು ಭುಸುಗುಡುತ್ತ ಹೊರಸರಿಯುತ್ತಿದ್ದ. ಅವಳು ಮನಸ್ಸಿನಲ್ಲೇ ಸದ್ಯ ಪೀಡೆ ತೊಲಗ್ತು ಅಂತ ತನಗೆ ಹತ್ತಿರವಾಗತೊಡಗಿದ್ದ ಹೊಸಗೆಳೆಯನನ್ನು ನೆನಪಿಸಿಕೊಂಡು,ನಿಟ್ಟುಸಿರುಬಿಡುತ್ತಿದ್ದಳು. ತನ್ನ ಸಿಟ್ಟನ್ನೆಲ್ಲ ಅವನೊಂದಿಗೆ ಹೇಳಿಕೊಳ್ಳುತ್ತಿದ್ದ ಅವಳಿಗೆ ದಿನಗಳೆದಂತೆ ಆ ಹೊಸಬನೇ ಹೆಚ್ಚು ಇಷ್ಟವಾಗತೊಡಗಿದ್ದ. ಇನ್ನೂ ಮದುವೆಯಾಗದ ತನಗಿಂತ ಚಿಕ್ಕ ಹುಡುಗ…ಯೌವನ ಹೊರಸೂಸುವ ಅವನ ಮೈಕಂಡು ಅವಳಿಗೂ ಇನ್ನಿಲ್ಲದ ಬಯಕೆ ಕಾಡಿದೆ.ಅವನೊಟ್ಟಿಗೆ ಹೆಚ್ಚೆಚ್ಚು ಮಾತನಾಡುವ,ಅವನೊಂದಿಗೆ ಪಾರ್ಕಲ್ಲಿ ಸುತ್ತಾಡುವ ಕನಸು ಕಂಡಿದ್ದಾಳೆ. ಅವನು ಕ್ರಮೇಣ ತನಗೆ ಹತ್ತಿರವಾಗುವುದನ್ನು ಗಮನಿಸಿ ಅದರ ಲಾಭ ಪಡೆಯುವ ಪೂರ್ತಿ ಪ್ರಯತ್ನ ಅವಳು ಮಾಡಿದ್ದಾಳೆ. ತನ್ನ ಗಂಡನ ವಿರುದ್ಧ ಸ್ವಲ್ಪ ಹೆಚ್ಚಿಗೆನೇ ಕಥೆ ಕಟ್ಟಿ ಉಪ್ಪು ಖಾರ ಮಸಾಲಾ ಬೆರೆಸಿ ಹೇಳಿದ್ದಾಳೆ. ಒಟ್ಟಾರೆ ಇಬ್ಬರೂ ಹತ್ತಿರವಾಗತೊಡಗಿದ್ದಾರೆ. ಮತ್ತೊಂದು ಮದುವೆ ಇಲ್ಲದಿದ್ದರೂ ಸರಿ.ಇರೋಕೆ ಒಬ್ಬ ಸಿಕ್ಕರೆ ಸಾಕು ಎನ್ನುವುದು ಅವಳ ಸದ್ಯದ ಮನಸ್ಥಿತಿ. ಅಂದುಕೊಂಡದ್ದು ಎಲ್ಲ ಆಗುತ್ತಿದ್ದಂತೆ., ಗಂಟು ಮೂಟೆ ಕಟ್ಟತೊಡಗಿದ್ದಾಳೆ. ಒಂದೊಂದೇ ಸಾಮಾನನ್ನು ಅವನಿರುವ ಕೋಣೆಗೆ ಸಾಗಿಸಿದ್ದಾಳೆ.
ಇವನ್ನೆಲ್ಲ ನೋಡಿಯೂ ನೋಡದಂತೆ ಕಣ್ಮುಚ್ಚಿ ಕುಳಿತಿದ್ದಾಳೆ ಅವಳತ್ತೆ..ಇವೆಲ್ಲವೂ ಅವಳಿಗೆ ವಿಚಿತ್ರೆನಿಸುತ್ತದೆ.ತಾನೀ ಮನೆಗೆ ಬಂದ ದಿನಗಳು ಅವಳಿಗೆ ನೆನಪಾಗತೊಡಗುತ್ತವೆ…
ಈ ಮನೆಯಲ್ಲಿ ನಾನು ಏನಿಲ್ಲವೆಂದರೂ 40ವರ್ಷ ಕಳೆದಿದ್ದೇನೆ.ಮದುವೆ ಆಗಿ ಬಂದಾಗ 18 ವರ್ಷ.ನನಗೂ ಅವರಿಗೂ 15 ವರ್ಷದ ಅಂತರ.ಅವರು ತಂದು ಹಾಕಿದ್ದನ್ನು ಬೇಯಿಸಿ ಹಾಕಿ,ಅವರಿಗೆ ಬೇಕಾದಷ್ಟು ಮಕ್ಕಳನ್ನು ಹೆತ್ತುಕೊಟ್ಟಿದ್ದೇನೆ. ಅವರು ಬೈಯ್ದಾಗ ಬೈಸಿಕೊಂಡಿದ್ದೇನೆ.ಪ್ರೀತಿಯಿಂದಲೋ ಅಥವಾ ಇನ್ಯಾವ ಕಾರಣಕ್ಕೋ ಒಂದೇಟು ಹೊಡೆದಾಗ ಸಹಿಸಿಕೊಂಡಿದ್ದೇನೆ. ಆದರೆ ನನಗ್ಯಾವಾಗಲೂ ಈ ರೀತಿ ಮನೆಬಿಟ್ಟು ಹೋಗುವ ವಿಚಾರ ಮನಸ್ಸಿನಲ್ಲಿಯೇ ಬರಲಿಲ್ಲ.ನಾನೇನೂ ಹೆಚ್ಚು ಓದಿಲ್ಲ.ಆದರೂ ನನ್ನ ಮಗ,ಸೊಸೆ ಈ ರೀತಿ ದೂರವಾಗುತ್ತಿರುವುದನ್ನು ನೋಡಿದರೆ ಭಯವಾಗುತ್ತದೆ.ಓದಿದವರು,ಬುದ್ಧಿವಂತರು ಎನಿಸಿಕೊಂಡವರು ಈ ರೀತಿ ಆದರೆ ಮಕ್ಕಳ ಭವಿಷ್ಯವೇನು.7 ವರ್ಷದ ಮೊಮ್ಮಗ ಗಂಡಹೆಂಡಿರಿಬ್ಬರು ಜನಗಳವಾಡುವಾಗ ಕಣ್ ಕಣ್ ಬಿಟ್ಟು ನೋಡುತ್ತಾನೆ. ಅವನಿಗೆ ಏನೂ ಅರ್ಥವಾಗದು.ಇವರಿಬ್ಬರು ದೂರವಾರೆ ಏನು ಗತಿ .ಅವಳು ನಿಟ್ಟುಸಿರುಬಿಡುತ್ತಿದ್ದಾಳೆ.
ಅಜ್ಜಿ ಚಿಂತೆಯಲ್ಲಿ ಕೊರಗುತ್ತಿರುವುದು ಅವನಿಗೂ ಅರ್ಥವಾಗುತ್ತಿದೆ.ಅಮ್ಮ ಇತ್ತಿತ್ತಲಾಗೆ ರಾತ್ರಿ ತಡವಾಗಿ ಬರುತ್ತಾಳಲ್ಲ ಯಾಕೆ ಎಂದು ಅವನು ಚಿಂತಿಸುತ್ತಿದ್ದಾನೆ…ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಏಳುತ್ತವೆ.
..ಅಮ್ಮ ಯಾವಾಗಲೂ ಟೆನ್ಶನ್ ನಲ್ಲೇ ಇರುತ್ತಾಳೆ.ಸದಾ ಪೋನ್ ಕೈಯ್ಯಲ್ಲಿಟ್ಟುಕೊಂಡು ಏನೋ ಮಾಡುತ್ತಿರುತ್ತಾಳೆ.ಆಗಾಗ ಅವಳ ಮುಖ ಸ್ವಲ್ಪ ಅರಳುತ್ತದೆ. ಮೊದಲಿನಂತೆ ಅವಳು ಪ್ರೀತಿಯಿಂದ ನನ್ನ ತೆಲೆಸವರುವುದಿಲ್ಲ.ಗಡಿಬಿಡಿಯಿಂದ ಊಟಮಾಡಿಸಿ ನಿದ್ದೆಹೋಗು ಎನ್ನುತ್ತಾಳೆ.ನನಗೋ ಅವಳ ಎದೆಯಲ್ಲಿ ಮುಖವಿಟ್ಟು ಮಲಗಬೇಕು. ಪಕ್ಕದಲ್ಲಿ ಅಪ್ಪ ಇರಬೇಕು. ಅಪ್ಪಅಮ್ಮ ಇಬ್ರೂ ಮಧ್ಯದಲ್ಲಿ ನನ್ನನ್ನು ಮಲಗಿಸಿಕೊಂಡು ಎಷ್ಟೋ ರಾತ್ರಿ ಖುಷಿಯಿಂದ ಕಳೆದಿದ್ದಾರೆ. ಅಪ್ಪನಿಗೆ ನಾನು ಕಾಲಿನಿಂದ ಒದೆಯುತ್ತಿದ್ದೆ. ಅದಕ್ಕೆ ಅಪ್ಪ ನನಗೆ ಪ್ರೀತಿಯಿಂದ ಚಕ್ಕುಲಗುಲಿ ಹಾಕುತ್ತಿದ್ದುದು ನೆನಪಾಗುತ್ತದೆ.ಆದರೆ ಈಗ ಅಪ್ಪ ಬೇರೆ ರೂಮಿನಲ್ಲಿ ಮಲಗುತ್ತಾರೆ.ಅಪ್ಪಿತಪ್ಪಿ ಬಂದರೂ ಅಮ್ಮ ಗೋಡೆಗೊರಗಿ ನಿದ್ದೆ ಹೋಗುತ್ತಾಳೆ. ಅಪ್ಪ ನನ್ನ ಜೊತೆ ಮಾತಾಡೋದನ್ನು ನಿಲ್ಲಿಸಿಬಿಟ್ಟಿದ್ದಾರೆ.ಅಮ್ಮ ಮನೆ ಬಿಟ್ಟು ಹೋಗುವುದಾಗಿ ಒಮ್ಮೊಮ್ಮೆ ಹೇಳುವುದನ್ನು ಕೇಳಿಸಿಕೊಂಡಿದ್ದೇನೆ.ನಾನು ಹೇಳುತ್ತೇನೆ,ಅಮ್ಮ ನೀನು ಹಾಗೆ ಮಾಡಿದರೆ ನಾನು ಯಾರ ಜೊತೆ ಮಲಗಲಿ ಅಂತ. ಅವಳು ನನ್ನ ಮಾತನ್ನೇ ಸರಿಯಾಗಿ ಕೇಳಿಸಿಕೊಳ್ಳುತ್ತಿಲ್ಲ…
ನನಗೂ ಸಾಕಾಗಿಬಿಟ್ಟಿದೆ….
ನನಗೆ ಅವಳ ಮೇಲೆ ಅಂಥ ದ್ವೇಶವೇನೂ ಇಲ್ಲ. ಆದರೆ ಪ್ರತಿ ಹಂತದಲ್ಲೂ ನನ್ನನ್ನು ಕಡಿಮೆ ಮಾಡಿ ತೋರಿಸುವ ಅವಳ ಪ್ರವೃತ್ತಿಯನ್ನು ನಾನು ಖಂಡಿಸುತ್ತ ಬಂದಿದ್ದೇನೆ.ಆದರೆ ಅವಳು ಇದನ್ನು ನಿಮ್ಮ ತಪ್ಪು ಕಲ್ಪನೆ ಎಂದು ವಾದಿಸುತ್ತಾಳೆ.ಅವಳೇ ಈ ರೀತಿ ಆಡುವಾಗ ಗಂಡಸಾದ ನನಗಿನ್ನೆಷ್ಚಿರಬೇಡ..ಅವಳಿಗೆ ಹೇಳಿದ್ದೇನೆ.ನಾನಿಷ್ಟ ಪಟ್ಟರೆ ನೂರು ಹುಡುಗಿಯರು ನನಗೆ ಸಿಕ್ತಾರೆ.ನಿನ್ನ ಬಗ್ಗೆ ನೋಡ್ಕೋ ಅಂಥ.ಆದರೆ ಆಶ್ಚರ್ಯ ಅವಳ ಸುತ್ತಮುತ್ತ ನೂರಾರು ಗಂಡಸರು…ಅಂಥದ್ದೇನಿದೆ ಅವಳಲ್ಲಿ ..ಹಾಗೆ ನೋಡಿದರೆ ನಾನೆಷ್ಟು ಪ್ರಯತ್ನ ಪಟ್ಟರೂ ಒಬ್ಬ ಪ್ರೆಶ್ ಆಗಿರೋ ಹುಡುಗಿಯೂ ನನ್ನ ಬಲೆಗೆ ಬೀಳಲಿಲ್ಲ. ಹೊಸಬಳು ಎಂದುಕೊಂಡಿರುವ ಇನ್ನೊಬ್ಬಳು ಗಂಟು ಬಿದ್ದಿದ್ದಾಳೆ ನಿಜ.ಆದರೆ ಅವಳದು ಇದು ಮೂರನೇ ಅಫೇರ್ ಅಂಥ ಅವಳೇ ಹೇಳಿದ್ದಾಳೆ.. ಲೆಟ್ ಮಿ ಬಿ ಪ್ರ್ಯಾಂಕ್ ಅಂತ ಬೆಡ್ ರೂಮಿನಿಂದ ಹಿಡಿದು ಎಲ್ಲವನ್ನೂ ವಿವರಿಸಿದ್ದಾಳೆ.ಅದನ್ನೆಲ್ಲ ಕಸಿವಿಸಿಯಿಂದಲೇ ಕೇಳಿದ್ದೇನೆ. ನಾಳೆ ನನ್ನನ್ನು ಇವಳು ಡಂಪ್ ಮಾಡೋದ್ರಲ್ಲಿ ಯಾವ ಗ್ಯಾರಂಟಿ ಇಲ್ಲ.ಒಮ್ಮೊಮ್ಮೆ ಇದ್ದುದರಲ್ಲಿ ಅಡ್ಜಸ್ಟ್ ಮಾಡಿಕೊಂಡು ಹೋಗಿದ್ರೆ ಚೆನ್ನಾಗಿರುತ್ತಿತ್ತು ಎನ್ನಿಸುತ್ತೆ. ಆದರೆ ನನ್ನ ಈಗೋ ಒತ್ತೆಗಿಟ್ಟು ಆ ರಾಕ್ಷಸಿ ಬಳಿ ಮತ್ತೆ ಹೋಗುವ ಪ್ರಶ್ನೆಯೇ ಇಲ್ಲ.ಅಪ್ಪಅಮ್ಮಂಗೆ ಬೇಜಾರು ಮಾಡಿಕೊಳ್ಳಬೇಡ ಎನ್ನಬೇಕು.ಮಗನನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಬೇಕು..
ಮುಗಿದ ಅಧ್ಯಾಯ-
ದೇಹದ ಎಲ್ಲ ಖುಷಿಗಳು ತೀರಿಹೋಗಿವೆ.ಕೆಲಸವಿಲ್ಲದ ಈ ಹುಡುಗ,ಮನೆ ಖರ್ಚು,ಎಲ್ಲವನ್ನು ಸಂಭಾಳಿಸುತ್ತ ಅವಳು ಸೋತುಬಿಟ್ಟಿದ್ದಾಳೆ. ಸುಮ್ಮನೆ ಕುಳಿತು ಬಿಟ್ಟಿತಿನ್ನುವ ಈ ಹುಡುಗನನ್ನು ಕಂಡರೂ ಅವಳಿಗೆ ಇತ್ತಿತ್ತಲಾಗಿ ಅಸಹ್ಯ ಎನಿಸತೊಡಗಿದೆ..
ಅತ್ತ ಅವನು..ಹೊಸಬಳ ಇನ್ನಿಲ್ಲದ ಬೇಡಿಕೆಗಳನ್ನು ತೀರಿಸುತ್ತ ಹೈರಾಣಾಗಿದ್ದಾನೆ. ಮಾತೆತ್ತಿದ್ದರೆ ಬಿಟ್ಟು ಹೋಗುತ್ತೇನೆ ಎನ್ನುವ ಅವಳ ಬಾಯಿಗೆ ಹೆದರಿ ಬಾಯ್ಮುಚ್ಚಿ ಕೂತಿದ್ದಾನೆ.ಇಬ್ಬರಿಗೂ ತನ್ನ ಮಗ,ಮನೆಯ ಹಿರಿಯರೆಲ್ಲ ನೆನಪಾಗುತ್ತಾರೆ. ಒಂದು ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡಿದಿದ್ರೆ ಈ ರೀತಿ ದಿನೇ ದಿನೇ ಸಾಯುವ ಪ್ರಮೇಯ ಬರ್ತಾ ಇರ್ಲಿಲ್ವಲ್ಲ ಅಂಥ ಇಬ್ಬರೂ ಪರಿತಪಿಸುತ್ತಿದ್ದಾರೆ.

‍ಲೇಖಕರು avadhi

May 30, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. poorvi

    tumba chennagi barediddira kanri, adre e saalu ಅಯ್ಯೋ ನಿನ್ನ ನೋಡಿದರೆ ಯಾವನಿಗೂ ಏಳೋದಿಲ್ಲ ಬಿಡು.ಸ್ವಲ್ಪ ಕನ್ನಡಿಲಿ ನಿನ್ನ ದರಿದ್ರ ಮುಖ ನೋಡಿಕೋ ಎಂದು ಭುಸುಗುಡುತ್ತ ಹೊರಸರಿಯುತ್ತಿದ್ದ. aragisikollodu swalpa kashta aytu

    ಪ್ರತಿಕ್ರಿಯೆ
  2. poorvi

    nice story, but this line ಅಯ್ಯೋ ನಿನ್ನ ನೋಡಿದರೆ ಯಾವನಿಗೂ ಏಳೋದಿಲ್ಲ ಬಿಡು.ಸ್ವಲ್ಪ ಕನ್ನಡಿಲಿ ನಿನ್ನ ದರಿದ್ರ ಮುಖ ನೋಡಿಕೋ ಎಂದು ಭುಸುಗುಡುತ್ತ ಹೊರಸರಿಯುತ್ತಿದ್ದ. horrible navomi

    ಪ್ರತಿಕ್ರಿಯೆ
  3. Sandhya

    Good one Navomi. u kow i happen to see many extra marrital affairs around me ad it always makes me sad when a kid is involved.

    ಪ್ರತಿಕ್ರಿಯೆ
  4. sham

    THIS IS THE TRUTH OF LIFE ITS VERY NICE ಅಯ್ಯೋ ನಿನ್ನ ನೋಡಿದರೆ ಯಾವನಿಗೂ ಏಳೋದಿಲ್ಲ ಬಿಡು.this line doesn’t looks good.
    but don’t don’t stop its ok keep writing.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: