‘ಲಂಕೇಶ್ ಪತ್ರಿಕೆ’ ಓದುವವನನ್ನು ಕೆಣಕಬೇಡ!”

2008010154420402-ಡಾ ಸಿದ್ಧಲಿಂಗಯ್ಯ
‘ಲಂಕೇಶ್ ಪತ್ರಿಕೆ ಓದುವವನನ್ನು ಕೆಣಕಬೇಡ!’ ಅಂತ ನಾನು ಆಗಾಗ ಹೇಳ್ತಾ ಇರ್ತ್ತಿನಿ. ಯಾಕೆಂದರೆ ಅವರಿಗೆ ಸ್ವಲ್ಪ ತಿಳಿವಳಿಕೆ ಬಂದಿರುತ್ತದೆ. ‘ಲಂಕೇಶ್ ಪತ್ರಿಕೆ’ ಓದೋರು ಉಳಿದವರಂತಲ್ಲ, ಉಳಿದವರಿಗಿಂತ ಸ್ವಲ್ಪ ಭಿನ್ನವಾದ ಜನ ಎನ್ನುವ ದೃಷ್ಟಿಯಿಂದ ಹೊಸ ಗಾದೆಯನ್ನು ಹೇಳಿದೆ. ಸುಮಾರು ಹದಿಮೂರು, ಹದಿನಾಲ್ಕು ವರ್ಷಗಳ ಹಿಂದೆ, ಇದಕ್ಕೆ ಸಂಬಂಧಪಟ್ಟಂತೆ ನನಗೆ ಒಂದು ಅನುಭವವಾಗಿತ್ತು. ಒಂದು ವಿಶ್ವವಿದ್ಯಾಲಯದವರು ಕಾರವಾರ ಜಿಲ್ಲೆಯಲ್ಲಿ ವಿಚಾರಸಂಕಿರಣವನ್ನು ಏರ್ಪಡಿಸಿದ್ದರು. ನಮ್ಮ ವಿಶ್ವವಿದ್ಯಾಲಯದ ಕಡೆಯಿಂದ ನಾನು ಹೋಗಿದ್ದೆ. ನಾವೆಲ್ಲ ಉಪನ್ಯಾಸಕರು ಬಸ್ಸಿನಿಂದ ಇಳಿದು ಬರುತ್ತಿದ್ದಾಗ ಆ ಸಂಘಟಕರು ಬಂದು ನಮ್ಮನ್ನು ಒಂದು ಪ್ರಶ್ನೆ ಕೇಳಿದರು-ನೀವು ಪ್ರೊಫೆಸರೋ, ಡಾಕ್ಟರೋ ಎಂದು. ಯಾಕೆಂದರೆ ಊಟ ವಸತಿ ವ್ಯವಸ್ಥೆ ಮಾಡುವುದಕ್ಕೋಸ್ಕರ. ನಾವೆಲ್ಲ ಪ್ರೊಫೆಸರ್ ಎಂದರೆ ಬಹಳ ಮರ್ಯಾದೆ ಇರಬೇಕೆಂದುಕೊಂಡು ‘ನಾವೆಲ್ಲ ಪ್ರೊಫೆಸರ್ಸ್’ ಎಂದೆವು. ಕೆಲವರು ‘ಡಾಕ್ಟರ್ ‘ಎಂದರು. ಇದರ ಪರಿಣಾಮ ಏನಾಯಿತೆಂದರೆ ಪ್ರೊಫೆಸರ್ಸ್ ಗೆಲ್ಲ ಭಾರಿ ಕಳಪೆ ವ್ಯವಸ್ಧೆ, ಅಂದರೆ ತಣ್ಣೀರು ಸ್ನಾನ. ಡಾಕ್ಟರ್ ಗಳಿಗೆ ಬಿಸಿನೀರು ಸ್ನಾನ.

lankesh_cover1_th

ನಮ್ಮ ಮಿತ್ರನೊಬ್ಬ ಪ್ರೊಫೆಸರ್ ಎಂದಾಗ ಅವನಿಗೆ ಮುರುಕಲು ಕಾಟ್ ತೋರಿಸಿ ಮಲಗಲಿಕ್ಕೆ ಹೇಳಿದರು. ಪಾಪ ಅವನು ಬಿದ್ದೇ ಹೋದ. ನಾನೂ ಕೂಡ ಪ್ರೊಫೆಸರ್ ಎಂದು ಹೇಳಿದ್ದೆ. ನನಗೂ ವಿಪರೀತ ತೊಂದರೆಯಾಯಿತು. ಡಾಕ್ಟರ್ ಗಳೆಲ್ಲ ಸಂತೋಷವಾಗಿದ್ದರು. ಪ್ರೊಫೆಸರ್ಸ್ ಗೆ ಮಾತ್ರ ಅನ್ಯಾಯ ಮಾಡಿದ್ದರು. ವಸತಿ ಸರಿಯಿರಲಿಲ್ಲ. ಊಟದ ವ್ಯವಸ್ಧೆ ಕೂಡ ಒಂದು ಸಾಧಾರಣ ಹೋಟೆಲಿನಲ್ಲಿ. ಡಾಕ್ಟರ್ ಗಳಿಗೆ ಒಳ್ಳೆ ಹೋಟೆಲ್. ಮತ್ತಿನ್ನೊಂದು ವಿಶೇಷವೆಂದರೆ ಪ್ರೊಫೆಸರ್ಸ್ ಗೆ ಬಸ್ ಚಾರ್ಜ್ ಮಾತ್ರ ಎಂಬ ಸುದ್ದಿ ಹಬ್ಬಿಸಿದರು. ನನಗೇಕೋ ಅನುಮಾನ ಬಂತು. ಇದು ವಿಶ್ವವಿದ್ಯಾಲಯದ ಧೋರಣೆಯಲ್ಲ, ಯಾರೋ ತಿಳಿಗೇಡಿಗಳ ಕೆಲಸ ಎಂದು. ಆ ಸಂದರ್ಭದಲ್ಲಿ ನಾವು ನಾಲ್ಕಾರು ‘ಶೋಷಿತರು’ ಆ ಡಾಕ್ಟರುಗಳ ಜೊತೆ ನಮಗೆ ಸಮಾನತೆ ಬೇಕೆಂದು ಕೇಳಿದೆವು. ಅವರು ನಮ್ಮನ್ನು ದಬಾಯಿಸಿದರು – ಎಷ್ಟೇ ಆಗಲಿ ನೀವು ಪ್ರೊಫೆಸರ್ಸ್ ಅನ್ನೋ ಥರ. ನಾವು ಆಗ, ಈ ವಿಚಾರದಲ್ಲಿ ನೀವು ಏನಾದರೂ ಬದಲಾವಣೆ ಮಾಡಿಕೊಳ್ಳದಿದ್ದರೆ ಮುಂದಿನ ವಾರದ ‘ಲಂಕೇಶ್ ಪತ್ರಿಕೆ’ ಯಲ್ಲಿ ‘ಡಿ. ಎ. ನುಂಗಿದ ದಾಂಡಿಗರು’ ಎಂದು ಹಾಕಿಸಿಬಿಡುತ್ತೇವೆ ಅಂತ ಹೆದರಿಸಿದೆವು. ಅವರು ಕೂಡಲೇ ಹೆದರಿದರು. ಆಗ ಡಾಕ್ಟರ್ ಗಳಿಗಿಂತ ಹೆಚ್ಚಿನ ಮಾನ್ಯತೆ ನಮಗೆ ಸಿಕ್ಕಿತು. ಏಕೆಂದರೆ ಲಂಕೇಶ್ ಪತ್ರಿಕೆಯಲ್ಲಿ ಬರೆಸುತ್ತಾರಂತೆ ಇವರು ಎಂಬ ಕಾರಣಕ್ಕಾಗಿ. ಕೊನೆಗೆ ನಮ್ಮನ್ನು ಪ್ರೊಫೆಸರ್ ಎಲ್ಲಿ, ಪ್ರೊಫೆಸರ್ ಎಲ್ಲಿ ಎಂದು ಕೇಳಲಿಕ್ಕೆ ಶುರುಮಾಡಿದರು!

lankesh77ಈ ಪತ್ರಿಕೆ ಜನತೆಯ ನೋವು ಮತ್ತು ಸಿಟ್ಟಿಗೆ ಅಭಿವ್ಯಕ್ತಿ ಹಿಡಿದಿದ್ದು ಒಂದು ದೊಡ್ಡ ಕೆಲಸ. ಮೊದಲೆಲ್ಲ ಪ್ರಗತಿಪರ ಚಿಂತನೆ, ಹಿನ್ನೆಲೆ ಇರುವವರಿಗೆ ಮಾತ್ರ ಆಳುವವರ ಬಗ್ಗೆ ಶಂಕೆ, ಅವರ ಸ್ಧಾನಮಾನದ ಬಗ್ಗೆ ಅಗೌರವ ಇತ್ಯಾದಿಗಳಿದ್ದವು. ಆದರೆ ಒಟ್ಟು ಕನ್ನಡ ಜನತೆಯೇ ಸರ್ಕಾರವನ್ನು, ಒಬ್ಬ ಮಂತ್ರಿಯನ್ನು ಲಘುವಾಗಿ ತಮಾಷೆಯಾಗಿ ಗೇಲಿ ಮಾಡುವಂತಹ ಒಂದು ಆರೋಗ್ಯಕರವಾದ ಸ್ಥಿತಿಗೆ ತಲುಪಿದ್ದು ‘ಲಂಕೇಶ್ ಪತ್ರಿಕೆ’ ಯ ಒಂದು ಸಾಧನೆಎಂದು ನನ್ನ ಭಾವನೆ. ಏಕೆಂದರೆ ಸರ್ಕಾರವೆಂದರೆ ಪ್ರಶ್ನಾತೀತವಾದದ್ದು, ಮಂತ್ರಿಗಳು ಅಂದರೆ ದೇವರ ಸಮಾನ. ಅವರಿಗೆ ಸನ್ಮಾನ ಬಿಟ್ಟು ನಾವು ಬೇರೆ ಏನನ್ನೂ ಮಾಡಬಾರದು ಎನ್ನುವಂಥ ತಪ್ಪು ಕಲ್ಪನೆಯಿದ್ದಾಗ ‘ಲಂಕೇಶ್ ಪತ್ರಿಕೆ’ ಅವರಿಗೆ ಸನ್ಮಾನವನ್ನು ಬಿಟ್ಟು ಇನ್ನೇನು ಮಾಡಬಹುದೆಂಬುದನ್ನು ಜನತೆಗೆ ಕಲಿಸಿಕೊಟ್ಟಿದೆ. ಕೆಟ್ಟವರು, ದುಷ್ಟರು, ಭ್ರಷ್ಟರು, ಅಹಂಕಾರಿಗಳನ್ನು ಹೆದರಿಸುವುದಕ್ಕೆ ಸಾಧ್ಯವಾದದ್ದು ಈ ಪತ್ರಿಕೆಯ ಮೂಲಕ.

ಕೆಲವು ಪತ್ರಿಕೆಗಳೆಲ್ಲ ದೊಡ್ಡ ವ್ಯಕ್ತಿಯ ಬಗ್ಗೆ ಬರೆಯುತ್ತಿದ್ದಾಗ, ದೊಡ್ಡವರ ಭ್ರಷ್ಟಾಚಾರದ ಬಗ್ಗೆ ಬರೆಯುತ್ತಿದ್ದಾಗ, ಈ ಪತ್ರಿಕೆ ವಿಧಾನಸೌಧದ ವಿಚಾರವನ್ನಷ್ಟೇ ಅಲ್ಲ, ಹೋಬಳಿ ಕೇಂದ್ರದಲ್ಲಿರುವಂತಹ ವೈದ್ಯ, ತಾಲ್ಲೂಕಿನ ತಹಸೀಲ್ದಾರ, ಹಳ್ಳಿಯ ಒಬ್ಬ ಗ್ರಾಮಲೆಕ್ಕಿಗ ಇವರು ಯಾವ ರೀತಿ ಜನರ ರಕ್ತ ಹೀರುತ್ತಿದ್ದಾರೆ, ಜನರನ್ನು ಅವಮಾನ ಮಾಡುತ್ತಿದ್ದಾರೆ, ತೊಂದರೆ ಕೊಡುತ್ತಿದ್ದಾರೆ ಅನ್ನುವುದನ್ನು ಬರೆದಾಗ ಎಲ್ಲ ಮಟ್ಟದಲ್ಲೂ ಒಂದು ಎಚ್ಚರ ಪ್ರಾರಂಭವಾಯ್ತು. ಜನರಲ್ಲೂ ಎಚ್ಚರ ಮೂಡಿತು. ‘ಪತ್ರಿಕೆ’ ಯ ಬಗ್ಗೆ ಜನ ಇಷ್ಟಪಟ್ಟ ಇನ್ನೊಂದು ಅಂಶವೆಂದರೆ ಭಾಷೆ. ಮೊದಲು ನಮಗೆ ಈ ಪತ್ರಿಕೆಯನ್ನು ಓದುತ್ತಿದ್ದರೆ ಆಶ್ಚರ್ಯ ಮತ್ತು ಸಂತೋಷವಾಗೋದು. ‘ಪ್ರಿನ್ಸಿಪಾಲನಿಗೆ ಗೂಸ’ ಅಂತ ಹಾಕೋರು. ಈ ರೀತಿ ಭಾಷೆ ಬಳಸಲು ಸಾಧ್ಯವೆಂದು ನಮಗೆ ಗೊತ್ತಿರಲಿಲ್ಲ. ಪ್ರಿನ್ಸಿಪಾಲನ ಮೇಲೆ ಹಲ್ಲೆ ಎಂದು ನಮಗೆ ಗೊತ್ತಿದ್ದದ್ದು. ‘ಪ್ರಿನ್ಸಿಪಾಲನಿಗೆ ಗೂಸ’ ಎಂಬ ವಾಕ್ಯಗಳನ್ನು ಜನತೆ ನೋಡಿದಾಗ ಈ ಪತ್ರಿಕೆ ನಮ್ಮ ಭಾಷೆಯಲ್ಲೆ ಇದೆ, ನಮ್ಮ ಥರ ಮಾತನಾಡುತ್ತಿದ್ದಾರೆ ಅನ್ನೋರು. ‘ಇನ್ಸ್ ಪೆಕ್ಟರ್ ಗೆ ಇಕ್ಕಿದರು’, ‘ಲಾಯರ್ ಗೆ ಲಾತ’ ಹೀಗೆ ಇವೆಲ್ಲ ನಮಗೆ ಆಕರ್ಷಕವಾಗಿ ಕಂಡು, ಮಾಧ್ಯಮಗಳ ಭಾಷೆಯ ಇನ್ನೊಂದು ಸಾಧ್ಯತೆಯನ್ನು ತೋರಿಸಿಕೊಟ್ಟಂಥ ಪತ್ರಿಕೆ ಇದಾಯಿತು.

ನಮಗೆ ಆಶ್ಚರ್ಯವಾಗುವ ಇನ್ನೊಂದು ಅಂಶವೆಂದರೆ ಕೆ. ಕೆ. ಮೂರ್ತಿಯವರ ಬಗೆಗಿನ ವರದಿ. ನಾನು ಈ ಕೆ. ಕೆ. ಮೂರ್ತಿಯವರು ಚೌಡಯ್ಯ ಹಾಲನ್ನು ಕಟ್ಟಿಸಿದ್ದಾರೆ, ದೊಡ್ಡ ಕಲಾಪ್ರೇಮಿ, ಸಂಗೀತ ಪ್ರೇಮಿ ಎಂದೇ ತಿಳಿದುಕೊಂಡಿದ್ದೆ. ಅದೂ ಇರಬಹುದು. ಸ್ವಲ್ಪ ಗೌರವವಿತ್ತು. ಆದರೆ ‘ಲಂಕೇಶ್ ಪತ್ರಿಕೆ’ ಯಲ್ಲಿ ಒಂದು ದಿವಸ ‘ಸೀಮೆಎಣ್ಣೆ ಕಳ್ಳ ಕೆ. ಕೆ ಮೂರ್ತಿ’ ಎಂದು ಹಾಕಿದ್ದರು. ನನಗೆ ಗಾಬರಿಯಾಯಿತು. ಕಲೆ, ನೃತ್ಯ, ಸಂಗೀತ ಎಂದು ಹೇಳುವ ಸಂಸ್ಕೃತಿಯ ಕೆ. ಕೆ. ಮೂರ್ತಿ ಎಲ್ಲಿ, ಈ ಸೀಮೆಎಣ್ಣೆ ಕಳ್ಳ ಕೆ. ಕೆ. ಮೂರ್ತಿ ಎಲ್ಲಿ ಅಂತ. ನನಗೆ ಇನ್ನಾರೋ ಇರಬೇಕೆಂದು ಆಶ್ಚರ್ಯವಾಯಿತು. ಮತ್ತೆ ಮತ್ತೆ ಓದಿದರೆ ಅದೆ ಕೆ.ಕೆ. ಮೂರ್ತಿ! ಹೀಗೆ ಈ ಪತ್ರಿಕೆ ಈ ರೀತಿಯ ಸಂತೋಷವನ್ನೂ ಕೊಡುತ್ತಾ ಈ ಸಮಾಜದಲ್ಲಿ ಅಹಿತಕರವಾದದ್ದನ್ನು ಮಾಡುವವರು, ಲೂಟಿ ಮಾಡವಂಥವರು, ಆಕ್ರಮ ಮಾರ್ಗದಲ್ಲಿ ಸಂಪತ್ತನ್ನು ಕ್ರೋಢೀಕರಿಸುವಂಥವರಿಗೆ ಸರಿಯಾದ ಪಾಠವನ್ನು ಕಲಿಸುತ್ತಿದೆಯೆನ್ನುವುದು ಜನರು  ಇದನ್ನು ಇಷ್ಟಪಡುವುದಕ್ಕೆ ಇದೊಂದು ಕಾರಣ.

ಬ್ರೆಕ್ಟ್ ನನ್ನು ‘ನೀವು ಯಾರ ಪರ’ ಎಂದು ಕೇಳಿದರೆ, ‘ಸಮಾಜವನ್ನು ಬದಲಾವಣೆ ಮಾಡುವ ದಿಕ್ಕಿನಲ್ಲಿ ಚಳವಳಿ ಮಾಡತಕ್ಕಂತಹ ಜನತೆಯ ಪರ’ ಎಂದು ಅವನು ಹೇಳಿದ. ರೈತ ಚಳವಳಿಯಾಗಲಿ, ಗೋಕಾಕ್ ಚಳವಳಿಯಾಗಲಿ, ದಲಿತ ಚಳವಳಿಯಾಗಲಿ, ಚಳವಳಿಗಳ ಪರವಾಗಿ ನಿಂತ ‘ಪತ್ರಿಕೆ’. ಈ ಚಳವಳಿಗಳ ನಾಯಕರೇನಾದರೂ ತಪ್ಪು ಮಾಡಿದಾಗ, ದೃಷ್ಟಿಕೇನದಲ್ಲಿ ವ್ಯತ್ಯಾಸವಾದಾಗ ಅವರನ್ನು ಟೀಕೆ ಮಾಡಿದ್ದುಂಟು. ಈ ಚಳವಳಿಗಳು ಅತಿಯಾಗಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಮಟ್ಟಕ್ಕೆ ಹೋದಾಗ ಲಂಕೇಶ್ ರವರು ನಿಯಂತ್ರಣ ಮಾಡಿದ್ದಾರೆ. ಸ್ವಲ್ಪ ತಮಾಷೆ ಮಾಡಿದ್ದಾರೆ, ಗೇಲಿ ಮಾಡಿದ್ದಾರೆ. ಅದು ಆರೋಗ್ಯಕರವಾದದ್ದು.

ಇನ್ನೊಂದು ಅಂಶ. ಈ ಪತ್ರಿಕೆ ಶೋಷಿತ ಪರ. ಎಲ್ಲರನ್ನೂ ಒಂದು ಮಾಡಬೇಕು, ತಮ್ಮ ತಮ್ಮ ಜಾತಿಗಳ ಹಿನ್ನೆಲೆಯನ್ನು ಮರೆತು ಬದುಕುವುದೇ ನಮ್ಮ ಉದ್ದೇಶ ಎನ್ನುವುದು ನಮ್ಮ ಪತ್ರಿಕೆಗಳ ಒತ್ತಾಸೆಯಾಗಿ ಕೂಡ ಇರಬೇಕು. ಆದರೆ ಕೆಲವು ಪತ್ರಿಕೆಗಳು ಏನು ಮಾಡುತ್ತವೆಂದರೆ, ‘ಮರ ಉರುಳಿ ಹರಿಜನನ ಸಾವು’ ಅಂತ ಶೀರ್ಷಿಕೆ ಕೊಟ್ಟುಬಿಟ್ಟಿರುತ್ತವೆ. ಮರಕ್ಕೇನು ಇವನು ಹರಿಜನ ಅಂತ ಗೊತ್ತಿತ್ತೇ? ಮರ ಉರುವುದಕ್ಕೂ ಒಬ್ಬ ದಲಿತ ಸಾಯುವುದಕ್ಕೂ ಸಂಬಂಧವೇ ಇಲ್ಲ. ಅವರ ಪ್ರಕಾರ ಮರಗಳು ಕೂಡ ಜಾತಿ ಭಾವನೆ ಇಟ್ಟುಕೊಂಡಿರುತ್ತವೆಂದು ಕಾಣುತ್ತೆ! ‘ಮರ ಉರುಳಿ ಹರಿಜನನ ಸಾವು’ ಎಂಬುದರ ಅರ್ಥವೇನು? ಮನುಷ್ಯರ ಮನಸ್ಸಿನಲ್ಲಿ ಇವನು ಹರಿಜನ ಅನ್ನೋದು, ಬ್ರಾಹ್ಮಣ ಅನ್ನೋದು, ಇವನು ಒಕ್ಕಲಿಗ ಅನ್ನೋದು ಅಷ್ಟೊಂದು ನಿಲ್ಲಬಾರದು. ಕೆಲವು ಸಲ ಒಬ್ಬನ ಮೇಲೆ ಹಲ್ಲೆಯಾಗುತ್ತದೆ. ಇದು ಅವನ ಜಾತಿಯ ಕಾರಣಕ್ಕಾಗಿ ಆಗಿದ್ದರೆ ಆಗ ಹೇಳೋದು ಸರಿ. ಆ ಕಾರಣಕ್ಕಾಗಿ ಅವನಿಗೆ ಹಲ್ಲೆಯಾಗಿದ್ದರೆ ಆ ಅರ್ಥದಲ್ಲಿ ಹೇಳೋದು ನ್ಯಾಯ. ಆದರೆ ಒಂದು ಮರ ಕೂಡ ಒಬ್ಬ ಹರಿಜನನ ಮೇಲೆ ಹೋಗಿ ಬೀಳುತ್ತದೆಂದರೆ ನಿಜವಾಗಿ ಯೋಚನೆ ಮಾಡಬೇಕಾದ ವಿಚಾರ!

ಪತ್ರಕರ್ತರು ಈ ರೀತಿ ಬರೆಯೋದು ಸರಿಯೇ? ಇದನ್ನು ಯೋಚನೆ ಮಾಡಬೇಕು. ಇನ್ನೊಂದು ಕಡೆ ಓದಿದ್ದೆ – ‘ಹರಿಜನ ಮಹಿಳೆಗೆ ತ್ರಿವಳಿ ಶಿಶು ಜನನ’ ಅಂತ. ಇದಕ್ಕೂ ಹರಿಜನ ಆಗಿದ್ದಕ್ಕೂ ಸಂಬಂಧವಿಲ್ಲ. ಅದು ವೈಯಕ್ತಿಕವಾದದ್ದು; ದೈಹಿಕವಾದದ್ದು. ಆಕೆಯ ದೈಹಿಕ ವಿಚಾರಕ್ಕೂ ಇದಕ್ಕೂ ನಾವು ಸಂಬಂಧ ಕಟ್ಟೋಕಾಗುವುದಿಲ್ಲ! ಆದರೆ ಪತ್ರಿಕೆಯವರು ಯಾಕೆ ಈ ರೀತಿ ಮಾಡುತ್ತಿದ್ದಾರೊ! ‘ಲಂಕೇಶ್ ಪತ್ರಿಕೆ’ ಬಹುಶ ಇದನ್ನುತೊಡೆದು ಹಾಕುವುದಕ್ಕೆ ಪ್ರಯತ್ನ ಪಟ್ಟಿದೆ.

ನಮ್ಮ ಕನ್ನಡ ಪತ್ರಿಕೆಗಳ ಮೇಲೆ ನನಗೆ ಸ್ವಲ್ಪ ಅಭಿಮಾನ ಜಾಸ್ತಿ. ಆದರೆ ನಾನು ಅಂಕಿ- ಅಂಶವನ್ನು ಕೊಡುವಾಗ ಇವುಗಳ ವಿರುದ್ಧ ಮಾತನಾಡುತ್ತೀದ್ದೇನೆ ಎಂದಲ್ಲ. ನನಗೆ ಸಿಕ್ಕಿದ ಅಂಕಿ ಅಂಶವೆಂದರೆ ಪ್ರಜಾವಾಣಿ ಪತ್ರಿಕೆ, ಜಾಹೀರಾತನ್ನು 44.90ರಷ್ಟು ಬಳಸುತ್ತದೆ. ಸುದ್ದಿಯನ್ನು ಬಳಸುವಂಥದ್ದು 55.10, ಶೋಷಿತರ ಪರವಾಗಿ ಪ್ರಕಟ ಮಾಡುತ್ತಿರುವಂಥದ್ದು 0.16.’ ಕನ್ನಡ ಪ್ರಭ’ ಪತ್ರಿಕೆಯು ಜಾಹೀರಾತನ್ನು 41.00ರಷ್ಟು, ಸುದ್ದಿಯ ಅಂಶವನ್ನು 59.00ರಷ್ಟು ಬಳಸಿದರೆ, ಶೋಷಿತರ ಪರವಾದ ಲೇಖನಗಳನ್ನು ಪ್ರಕಟಿಸುತ್ತಿರುವುದು 0.22 ರಷ್ಟು. ‘ಇಂಡಿಯನ್ಎಕ್ಸ್ ಪ್ರೆಸ್’ ಪತ್ರಿಕೆಯು ಜಾಹೀರಾತನ್ನು 55.80ರಷ್ಟು, ಸುದ್ದಿಯ ಅಂಶವನ್ನು 44.20ರಷ್ಟು, ಶೋಷಿತರ ಪರವಾಗಿ 0.80ರಷ್ಟು  ಪ್ರಕಟಿಸುತ್ತದೆ. ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯು ಜಾಹಿರಾತು ಕೊಡುತ್ತಿರುವುದು 53.55; ಸುದ್ದಿ ಕೊಡುತ್ತಿರುವುದು 46.45, ಶೋಷಿತರ ಪರವಾದ ಲೇಖನಗಳು ಬರುತ್ತಿರುವುದು 0.06, ‘ಲಂಕೇಶ್ ಪತ್ರಿಕೆ’ ಯಲ್ಲಿ ಜಾಹೀರಾತು ಇಲ್ಲ. ಸುದ್ದಿ ಶೇಕಡ 100ರಷ್ಟು. ಶೋಷಿತರ ಪರವಾದ್ದು ಶೇಕಡ 30ರಷ್ಟು.

ನಾನು ಈ ಅಂಕಿ ಅಂಶವನ್ನು ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧಕರೊಬ್ಬರಿಂದ ಪಡೆದೆ. ‘ಲಂಕೇಶ್ ಪತ್ರಿಕೆ’ ಯ ಬಗ್ಗೆ ಆ ತಜ್ಞರ ಸಂಪರ್ಕ ಮಾಡಿದಾಗ ಈ ಅಭಿಪ್ರಾಯವನ್ನು ಕೊಟ್ಟರು. ಅಂದರೆ ದೇಶದಲ್ಲೇ ಈ ಬಗೆಯ ಒಂದು ವಿಶಿಷ್ಟತೆ, ಜನಪರತೆ, ಶೋಷಿತರ ಪರವಾಗಿ ಕಳಕಳಿಯಿರುವ ಜನಪ್ರಿಯ ಪತ್ರಿಕೆ ಬೇರೊಂದಿಲ್ಲ. ಈ ಪತ್ರಿಕೆ ಮಾಡಿದ ಇನ್ನೊಂದು ಕೆಲಸ ಕನ್ನಡಿಗರಿಗೆ ಸಿಟ್ಟನ್ನು ಕಲಿಸಿದ್ದು. ಆ ಸಿಟ್ಟು ನಮ್ಮ ಜನಗಳಿಗೆ ಇರಲಿಲ್ಲ. ಅದನ್ನು ‘ಪತ್ರಿಕೆ’ ಕಲಿಸಿದೆಯೆಂದೇ ನನ್ನ ಭಾವನೆ. ಗುಂಡೂರಾಯರು ವಿಧಾನಸೌಧಕ್ಕೆ ಬೇಲಿಹಾಕಿ, ವಿಧಾನಸೌಧದ ಪ್ರವೇಶಕ್ಕೆ ನಿರ್ಬಂಧ ಹಾಕಿದಾಗ ನಮ್ಮ ಜನಗಳು ಎಂಥವರಂದರೆ, “ಸರಿಯಾಗಿ ಮಾಡಿದರು ಗುಂಡೂರಾಯರು” ಅಂತ ಸಂತೋಷಪಡುತ್ತಿದ್ದರು, ‘ಎಂಥ ಗಟ್ಟಿಗ ಗುಂಡೂರಾಯ, ಬೇಲಿ ಹಾಕಿಸಿದ ನೋಡಿ’ ಎಂದು ನಮ್ಮ ಜನಗಳೇ ಮಾತಾಡುತ್ತಿದ್ದರು.

ಆಗ ‘ಲಂಕೇಶ್ ಪತ್ರಿಕೆ’ ಒಂದು ಲೇಖನವನ್ನು ಪ್ರಕಟಮಾಡಿತು. ವಿಧಾನಸೌಧ ಯಾರಪ್ಪನ ಆಸ್ತಿ, ಅದಕ್ಕೆ ಪ್ರವೇಶವಿದೆ, ಅದು ನಮ್ಮದು, ಇವರ್ಯರೋ ಕುಳಿತಿದ್ದಾರಷ್ಟೇ. ಜನ ಹೋಗಬೇಕು ಅಲ್ಲಿಗೆ, ಒಳಗೆ ಕುಳಿತವರು ಹೊರಗೆ ಬರಬೇಕು ಎಂದು ‘ಲಂಕೇಶ್ ಪತ್ರಿಕೆ’ ಯಲ್ಲಿ ಪ್ರಕಟವಾಯಿತು.

ಇನ್ನೊಂದು ಘಟನೆ. ಒಬ್ಬ ಮನೆಯನ್ನು ಚೆನ್ನಾಗಿ ಕಟ್ಟಿಸಿದ್ದ. ‘ಏನ್ಸಾರ್ ಚೆನ್ನಾಗಿ ಕಟ್ಟಿಸಿದ್ದೀರಿ’ ಎಂದೆ. ಅವನು ‘ಇನ್ನೂ ಚೆನ್ನಾಗಿ ಕಟ್ಟಿಸುತ್ತಿದ್ದೆ, ಲಂಕೇಶ್ ಪತ್ರಿಕೆ ನನಗೆ damage ಮಾಡಿಬಿಟ್ಟಿತು’ ಅಂದ. ಅಂದರೆ ದುಡ್ಡು ಹೊಡೆದಿದ್ದ. ಸ್ವಲ್ಪ ಸುದ್ದಿ ಬರುತ್ತಿದ್ದ ಹಾಗೆ ಮನೆ ಕಟ್ಟಿಸುವುದನ್ನೆ ಸ್ಟಾಪ್ ಮಾಡಿಬಿಟ್ಟ. ಆದಷ್ಟು ಅಸಹಾಯಕರನ್ನು ಹೆದರಿಸಿಕೊಂಡು ಲೂಟಿ ಮಾಡುವಂಥ ದುಷ್ಟರ ವಿರುದ್ಧವಾಗಿ ಜನ ಅಲ್ಲಲ್ಲಿ ದನಿ ಎತ್ತುವಂತ ಕೆಲಸವನ್ನು ಪತ್ರಿಕೆ ಮಾಡುತ್ತಿದೆ. ಅದನ್ನು ನಾವು ಕೂಡ ವೈಯಕ್ತಿಕ ಜೀವನದಲ್ಲಿ, ಸಾರ್ವಜನಿಕ ಜೀವನದಲ್ಲಿ ಮಾಡತಕ್ಕಂಥದ್ದು ನಮ್ಮ ನಾಡಿಗೆ ಸಂತೋಷವನ್ನು ತರುತ್ತೆ ಎಂದು ಹಾರೈಸಿ ಲಂಕೇಶರಿಗೆ ಅರವತ್ತು ತುಂಬಿದ ಈ ಸಂದರ್ಭದಲ್ಲಿ ಅವರಿಗೆ ವಂದಿಸುವೆ.

‍ಲೇಖಕರು avadhi

May 29, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Dr. BR. Satyanarayana

    ಸಾರ್ ಲಂಕೇಶ್ ಪತ್ರಿಕೆಯ ಬಗ್ಗೆ ಹಲವಾರು ವಿಚಾರಗಳನ್ನು ತಿಳಿಸಿದ್ದೀರಿ. ನಾವು ಪಿಯುಸಿ ಓದುವಾಗ ಲಂಕೇಶ್ ಪತ್ರಿಕೆ ಪೀಕ್ ನಲ್ಲಿತ್ತು. ಆಗ ನಮ್ಮ ಕಡೆ ಲಂಕೇಶ ಪತ್ರಿಕೆ ಓದುವವರ ಬಗ್ಗೆ ಎರಡು ಬಗೆಯ ಪರಸ್ಪರ ವೈರುಧ್ಯದ ಭಾವನೆಗಳಿದ್ದವು. ಕೆಲವರು ಅವರನ್ನು ಬುದ್ದಿಜೀವಿಗಳು ಎನ್ನುವಂತೆ ನೋಡಿದರೆ, ಇನ್ನು ಕೆಲವರು ಅವರನ್ನು ಪುಂಡರು ಎನ್ನುವಂತೆ ನೋಡುತ್ತಿದ್ದರು.

    ಪ್ರತಿಕ್ರಿಯೆ
  2. siddamukhi

    ಹೊಗಳುಭಟ್ಟರಿಗೆ ಇಕ್ಕಿದ ಪತ್ರಿಕೆ ಲಂಕೇಶ್. ಮೊನಚು ಬರಹಗಳು ಅವರ ಸಹವರ್ತಿಗಳನ್ನು ಕಂಗೆಡಿಸುವಂತೆ ಮಾಡಿದ್ದವು.ಬೆಣ್ಣೆಯಂಥ ಮಾತನಾಡುವವರ ನಡುವೆ ಇಂತಹ ಪತ್ರಿಕೆಗಳು ಜೀವಂತವಾಗಿರಲಿ.
    ಸಿದ್ದಮುಖಿ

    ಪ್ರತಿಕ್ರಿಯೆ
  3. tumkurnaveed

    ೧೯೯೬, ಕೆ ಪಿ ಎಸ ಸಿ ಗ್ರೂಪ್ ಎ & ಬಿ ಹುದ್ದೆಗಳ ಸಂದರ್ಶನ. ಪ್ರಶ್ನೆ, ನೀವು ಕನ್ನಡದ ಯಾವ ಪತ್ರಿಕೆ ಓದುತ್ತಿರ?.ಲಂಕೇಶ್.
    ನಿಮಗೆ ಪೀತ ಪತ್ರಿಕೋದ್ಯಮ ಅಂದರೆ ಗೊತ್ತ? ಹೇಳಿದೆ. ನಂತರದ ಪ್ರಶ್ನೆ, ಲಂಕೇಶ್ ಒಬ್ಬ ಒಳ್ಳೆಯ ಲೇಖಕ, ಆದರೆ ಅವರು ಪತ್ರಿಕೊದ್ಯಮಿಯಾಗಿ ಸೋತಿದ್ದಾರೆ ಎನಿಸುವುದಿಲ್ಲವೇ? ಪ್ರಶ್ನೆ ಕೇಳಿದವರು ನೀರಾವರಿ ಯವರು. ಇವರ ಬಗ್ಗೆ, ಇವರ ಭ್ರಷ್ಟತೆ ಬಗ್ಗೆ ಲಂಕೇಶ್ ಪತ್ರಿಕೆ ಸಾಕಷ್ಟು ಝಾಡಿಸಿತ್ತು. ನಾನು ನಿರೀಕ್ಷಿಸಿದ್ದೆ. ನನಗೆ ಬರುವ ಅಂಕಗಳಿಗೆ ಖಂಡಿತ ಕತ್ತರಿ ಬೀಳುತ್ತೆ. ಹಾಗೆ ಆಯಿತು. ಕೇವಲ ೧.೨೮ ಅಂಕಗಳಿಂದ ಗ್ರೂಪ್ ಬಿ ಹುದ್ದೆಯನ್ನು ಕಳೆದುಕೊಂಡಿದ್ದೆ. ನೋವಾದರೂ ಸಹ ಲಂಕೇಶ್ ಪತ್ರಿಕೆಯೊಂದಿಗೆ ಬೆಳೆದಿದ್ದು ಇದರ ಮುಂದೇನು ಇಲ್ಲ ಅನ್ನಿಸುತ್ತೆ.
    ತುಮಕೂರ್ ನವೀದ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: