ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು!

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. ಅವನೀಂದ್ರನಾಥ್ ರಾವ್ ಅವರು ತರೀಕೆರೆಯವರ ಬೆನ್ನು ಬಿದ್ದರು.

ಮೊನ್ನೆ ಈದ್ ಮಿಲಾದ್ ಹಬ್ಬದ ಶುಭ ಘಳಿಗೆಯಲ್ಲಿ ಮುಂಜಾನೆ ಎರಡು ಕನಸು ಕಂಡಿದ್ದೆ.

ಒಂದು ಮಾಜಿ ರಾಷ್ಟ್ರಪತಿ, ಕವಿ, ತಂತ್ರಜ್ಞ, ಮಹಾನ್ ನಾಯಕ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಶ್ರೇಷ್ಠ ಮಾನವತಾವಾದಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಮ್ ಅವರ ‘ಸಂವತ್ಸರ ಉಪಾನ್ಯಾಸ’ ಆಲಿಸುವುದು.

ಎರಡನೆಯದು ಹಿಂದಿನ ದಿನ ಸಾಧ್ಯವಾಗದ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ, ಕನ್ನಡದ ಪ್ರಸಿದ್ಧ ಬರಹಗಾರ ರಹಮತ್ ತರೀಕೆರೆ ಅವರನ್ನು ಕಂಡು ಮಾತನಾಡಿಸುವುದು.

ಪ್ರಶಸ್ತಿ ಪ್ರಧಾನ ಸಮಾರಂಭದ ದಿನ ಸಂಜೆಯ ಚಹಾ ಕೂಟದಲ್ಲಿ ತರೀಕೆರೆ ಅವರು ಕಾಣಿಸಲಿಲ್ಲ.

ಬಳಿಕ ಸಭಾಂಗಣದಲ್ಲಿ ಮೇಲೆ ವೇದಿಕೆಯ ಎಡ ಭಾಗದಲ್ಲಿ ಅವರನ್ನು ಕಂಡೆ.

ದೇಶದ 24 ಮಂದಿ ಪ್ರಶಸ್ತಿ ವಿಜೇತರನ್ನು ಸ್ವಾಗತಿಸುತ್ತಾ ಈಗಿನ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಕನ್ನಡಿಗ ಅಗ್ರಹಾರ ಕೃಷ್ಣಮೂರ್ತಿ ಅವರು ‘ನನ್ನ ಭಾಷೆಯ , ಕನ್ನಡದ ರಹಮತ್ ತರೀಕೆರೆ ಈ ಬಾರಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು’ ಎಂದಾಗ ಸಭಾಂಗಣ ಹರ್ಷೋದ್ಗಾರದಿಂದ ಚಪ್ಪಾಳೆ ತಟ್ಟಿತು.

ಮೊನ್ನೆ ಸಾಹಿತ್ಯ ಅಕಾಡೆಮಿಯು ‘ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್’ ನಲ್ಲಿ ‘ಸಂವತ್ಸರ ಉಪಾನ್ಯಾಸ’ ಏರ್ಪಡಿಸಿತ್ತು.

ದೇಶದ ಶ್ರೇಷ್ಠ ಸಾಹಿತಿ ಅಥವಾ ಓರ್ವ ಚಿಂತಕರಿಂದ ಉಪಾನ್ಯಾಸವನ್ನು ಕೊಡಿಸುವುದು ಇದರ ಉದ್ದೇಶ. ರಹಮತ್ ತರೀಕೆರೆ ಅವರು ಖಂಡಿತವಾಗಿ ಅಲ್ಲಿಗೆ ಬರುತ್ತಾರೆ ಎಂಬ ನಂಬಿಕೆ ನನಗಿತ್ತು. ಆದರೆ ತರೀಕೆರೆ ಕಾಣಿಸಲಿಲ್ಲ. ಹಿರಿಯ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಹಾಗೂ ಎಲ್.ಹನುಮಂತಯ್ಯ ಅವರ ಭೇಟಿ ಆತ್ಮೀಯವಾಗಿತ್ತು. ಅವರಿಬ್ಬರ ನಡುವೆ ಕುಳಿತು ಡಾ. ಕಲಾಮ್ ಅವರ ಉಪಾನ್ಯಾಸ ಕೇಳಿದೆ. ಪಕ್ಕದಲ್ಲಿ ಒರಿಯಾದ ಶ್ರೇಷ್ಠ ಸಾಹಿತಿ ಸೀತಾಕಾಂತ ಮಹಾಪಾತ್ರ ಕುಳಿತಿದ್ದರು.

ಸೂಜಿಗಲ್ಲಿನಂತೆ ಸೆಳೆದ, ಮುಗ್ದ, ಆದರೆ ಪ್ರಖರ ಚಿಂತನೆಯ ಡಾ ಕಲಾಮ್ ಉಪಾನ್ಯಾಸ ಎಲ್ಲರನ್ನು ಮೈಮರೆಯುವಂತೆ ಮಾಡಿತು. ತಿರುವಳ್ಳುವರ್ ಅವರ ‘ತಿರುಕ್ಕುರಲ್’ ನನ್ನನ್ನು ಗಾಢವಾಗಿ ಪ್ರಭಾವಿಸಿದೆ ಎಂದು ಡಾ. ಕಲಾಮ್ ನುಡಿದರು. ಪ್ರತಿಯೊಬ್ಬರೂ ‘ಮನೆ ಗ್ರಂಥಾಲಯ’ ಹೊಂದಲು ನೆರೆದವರನ್ನು ಅವರು ಪ್ರಮಾಣ ಮಾಡಿಸಿದರು. ಡಾ. ಕಲಾಮ್ ಉಪಾನ್ಯಾಸ ಮುಗಿಸಿ ಹೊರಡುತ್ತಿದ್ದಂತೆ ಅಬಾಲ ವೃದ್ದರಾಗಿ ಜನರು ಅವರನ್ನು ಸ್ಪರ್ಶಿಸಲು ಮುಗಿಬೀಳುತ್ತಿದ್ದರು. ಹೊರಗೆ ಪತ್ನಿಯೊಡನೆ ತರೀಕೆರೆ ನಿಂತಿರುವುದನ್ನು ಕಂಡೆ. ನನ್ನ ಊಹೆ ನಿಜವಾಗಿತ್ತು.ನನ್ನ ಪರಿಚಯ ಮಾಡಿಕೊಂಡೆ. ‘ಅವನೀಂದ್ರನಾಥ್ ನೀವು ಗ್ರಂಥಪಾಲಕರಲ್ಲವೆ, ನಿಮ್ಮ ಬಗೆಗೆ ತಿಳಿದಿದ್ದೇನೆ ‘ಎಂದವರು ಹೇಳಿದಾಗ ನನಗೆ ಅಚ್ಚರಿಯಾಯಿತು.

ರಹಮತ್ ತರೀಕೆರೆ ಅವರು ಅಕಾಡೆಮಿ ಅಧ್ಯಕ್ಷ ಸುನೀಲ್ ಗಂಗೋಪಾಧ್ಯಾಯ ಅವರಿಂದ ಪ್ರಶಸ್ತಿ ಸ್ವೀಕರಿಸುವುದು

ನಿಮ್ಮ ಪ್ರಶಸ್ತಿವಿಜೇತ ‘ಕತ್ತಿಯಂಚಿನ ದಾರಿ’ ಕೃತಿಯ ಪ್ರಕಾಶಕ ನ.ರವಿ ಕುಮಾರ್ ನನಗೆ ಗೊತ್ತು. ನನ್ನ ಮೊದಲ ಪುಸ್ತಕ ‘ಸಮಯ ಸಂದರ್ಭ’ ವನ್ನು ಅವರೇ ಪ್ರಕಟಿಸಿದ್ದರು ಎಂದು ಹೇಳಿದೆ. ಅದಾಗಲೇ ಡಾ. ಅಬ್ದುಲ್ ಕಲಾಮ್ ಅವರ ಉಪಾನ್ಯಾಸ ಮತ್ತು ಆಕರ್ಷಣೆಯಿಂದ ಹೊರ ಬಂದಿರದ ತರೀಕೆರೆ ‘ಓರ್ವ ಮಾಜಿ ರಾಷ್ಟ್ರಪತಿ ಈ ಬಗೆಯಲ್ಲಿ ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು ಅಚ್ಚರಿಯ ಸಂಗತಿ’ ಎಂದು ಉದ್ಗರಿಸಿದರು.

ಬೆಳಿಗ್ಗೆ ಅಕಾಡೆಮಿ ಹಮ್ಮಿಕೊಂಡಿದ್ದ ‘ರೈಟರ್ಸ್ ಮೀಟ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತರೀಕೆರೆ ಸಂಜೆ ವಿಶ್ರಾಂತಿ ಪಡೆಯಲು ಬಯಸಿದ್ದರಂತೆ. ಪತ್ನಿಯ ಒತ್ತಾಯದ ಮೇರೆಗೆ ಕಲಾಮ್ ಉಪಾನ್ಯಾಸ ಕೇಳಲು ಬಂದಿದ್ದಾಗಿ ನನ್ನಲ್ಲಿ ಹೇಳಿದರು. ಹಾಗಿಲ್ಲದೆ ಹೋಗಿದ್ದರೆ ಈ ಅವಕಾಶ ತಪ್ಪಿಹೋಗುತ್ತಿತ್ತು ಎಂದು ತರೀಕೆರೆ ಪತ್ನಿಯ ಸ್ಪೂರ್ತಿಯನ್ನು ನೆನೆದರು. ನಂತರ ರಾತ್ರಿ ‘ಪ್ರೆಸ್ ಕ್ಲಬ್’ನವರು ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗವಹಿಸಲು ತರೀಕೆರೆ ಪತ್ನಿಯೊಡನೆ ಹೆಜ್ಜೆ ಹಾಕಿದರು.

ತರೀಕೆರೆ ಅವರಿಗೆ ಬೀಳ್ಕೊಟ್ಟ ಬಳಿಕ ಒಂದು ದೃಶ್ಯ ಮನದಲ್ಲಿ ಮರುಕಳಿಸುತಿತ್ತು. ಉಪಾನ್ಯಾಸದ ಬಳಿಕ ಯುವಕನೋರ್ವ ‘ಭಾರತ 2020ರ ವೇಳೆಗೆ ಸೂಪರ್ ಪವರ್’ ರಾಷ್ಟ್ರ ಆಗುವ ಬಗೆ ಹೇಗೆ ಎಂದು ಡಾ. ಕಲಾಮ್ ಅವರಿಗೆ ಸವಾಲು ಹಾಕಿದ್ದ. ಆಶಾವಾದಿಯಾದ ಡಾ. ಕಲಾಮ್ ನೆರೆದವರಿಗೆ ಪ್ರಮಾಣ ಮಾಡಲು ಹೇಳಿದರು. ಅದು ಹೀಗಿತ್ತು.

‘ಐ ಕ್ಯಾನ್ ಡು ಇಟ್

ಯು ಕ್ಯಾನ್ ಡು ಇಟ್

ಇಂಡಿಯಾ ಕ್ಯಾನ್ ಡು ಇಟ್ ‘

ಮುಂಜಾನೆ ಕಂಡಿದ್ದ ನನ್ನೆರಡೂ ಕನಸುಗಳು ಸಾಕಾರಗೊಂಡಿದ್ದವು.

‍ಲೇಖಕರು avadhi

February 18, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ravi kulkarni

    adbhuta dayavittu dehalige banda kannada lekhakar chalanavalanagalannu higeye kaanisiri.

    ಪ್ರತಿಕ್ರಿಯೆ
    • avadhi

      ಸಾರಿ ಕಣ್ತಪ್ಪಿನಿಂದ ಲಿಂಕ್ ಬಿಟ್ಟು ಹೋಗಿತ್ತು. ಈಗ ಲಿಂಕ್ ಸೇರಿಸಲಾಗಿದೆ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: