ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಲ್ಲೆ ಮುಡಿದ ಮಲ್ಲಿಗೆ…

ವಿಜಯಕುಮಾರ ನೇರ್ವೆಕರ

ನಲ್ಲೆಯು ಮುಡಿದ ಮಲ್ಲಿಗೆ ಹೂವು
ಸೂಸಿರೆ ಪರಿಮಳವ
ಹೇಳುವುದೇಗೆ ಅಲ್ಲಿಯೇ ಕುಳಿತ
ನಲ್ಲನ ತಳಮಳವ
ನಲ್ಲನಿಗೇನೋ ನಲ್ಲೆಯ ಗಲ್ಲವ
ಚುಂಬಿಸುವ ತವಕ
ಏನು ಮಾಡುವುದು ಕಾಯಲೇ ಬೇಕಿದೆ
ಒಪ್ಪಿಗೆ ಸಿಗುವ ತನಕ

ಹೂದೋಟದ ತೂಗು ಮಂಚದ ಮೇಲೆ
ಒಂದಂಚಲಿ ಅವಳು
ಇನ್ನೊಂದಂಚಲಿ ಇವ ಕುಳಿತಿರುವ
ನೋಡುತ ಮುಗಿಲು
ಇಳೆಯನು ಚುಂಬಿಸಿ ಕಾಲ್ಬೆರಳುಗಳು
ತೂಗುಮಂಚವ ತೂಗಲು
ನಕ್ಕಳು ಆಕೆ ನಲ್ಲನ ನೋಡಿ
ಸರಿಸುತಲಿ ಮುಂಗುರುಳು

ಸರಿದನು ಅವಳೆಡೆ ನಲ್ಲನು
ನಗುವಿನ ಅನುಮತಿಯು ಸಿಗಲು
ಮೆಲ್ಲನೆ ಮೆತ್ತನೆ ಕಯ್ಯನು ಹಿಡಿದನು
ತಾಕಿಸಿ ಹೆಗಲಿಗೆ ಹೆಗಲು
ಪ್ರೀತಿಯ ಮಾತಿಗೆ ಸೋತಿತು ನಾಚಿಕೆ
ಸತ್ತಿತು ಮನದೊಳಗಿನ ದಿಗಿಲು
ತೋಳಲಿ ತೋಳು ಬಂಧಿಯಾಗಲು
ಬೆರೆಯಿತು ನೆರಳಿನಲಿ ನೆರಳು

ಸಿಹಿಮುತ್ತುಗಳ ವಿನಿಮಯವಾಯಿತು
ತಣ್ಣನೆ ಗಾಳಿಯು ಬೀಸಿರಲು
ರವಿ ತಾ ನಾಚುತ ಮರೆಗೆ ಸರಿದನು
ಸುತ್ತಲೂ ಕವಿಯಿತು ಇರುಳು
ಹೊತ್ತು ಕಳೆಯಿತು ಹೊರಡಲೇ ಈಗ
ಎಂದು ನಲ್ಲೆಯು ಕೇಳಿದಳು
ಮತ್ತೆ ಸಿಗುವ ನಂಬಿಕೆಯ ಮೇಲೆ
ತಯಾರಾದನು ನಲ್ಲನು ಬೀಳ್ಕೊಡಲು

‍ಲೇಖಕರು Admin

20 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading