ನರ್ಸುಗಳಿಗೆ ಕಾಯುತ್ತಾ…

ಪಾಲಹಳ್ಳಿ ವಿಶ್ವನಾಥ್

ಸುಮಾರು 1950ರ ಸಮಯ ಬೆಂಗಳೂರಿನ ಬಸವನಗುಡಿಯ ಒಂದು ಕೂಡು ಕುಟುಂಬದ ಮನೆ.. ಕತ್ತಲಾಗುತ್ತಿತ್ತು. ಹುಡುಗರೆಲ್ಲಾ ಅಟ ಅರ್ಧರ್ಧ ಮುಗಿಸಿ ಬೇಗ ಮನೆಗೆ ಬಂದಿದ್ದರು. ಇಂದು ಮನೆಯಲ್ಲಿ ಏನೋ ವಿಶೇಷವಿರುವಂತೆ ಕಾಣುತ್ತಿತ್ತು. ಏನಾಗಬಹುದೆಂದು ಮಕ್ಕಳೆಲ್ಲ ಕಾಯುತ್ತಿದ್ದಾರೆ. ಅದರಲ್ಲೂ ಒಬ್ಬ ಪುಟ್ಟ ಹುಡುಗನಿಗ ಬಹಳ ಕುತೂಹಲ. ಯಾರೋ ಬಹಳ ಜನ ಹೆಂಗಸರು ಬಂದು ಹಾಡುಗಳನ್ನು ಹಾಡಿ ಹೋಗುತ್ತಾರಂತೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಇಂದು ಕ್ರಿಸ್‌ಮಸ್ ಈವ್ ಅಂತೆ. ಅಂದರೆ ಅದರ ಹಿಂದಿನ ದಿನವಂತೆ.

ಹುಡುಗನಿಗೆ ಕ್ರಿಸ್‌ಮಸ್ ಬಗ್ಗೆ ಹೆಚ್ಚು ತಿಳಿದಿಲ್ಲ. ಅವರು ಹಾಡುವ ಹಾಡುಗಳಿಗೆ ಕ್ರಿಸ್ಮಸ್ ಕೆರೋಲ್‌ ಎಂಬ ಹೆಸರಂತೆ. ಅವು ಏನು ಎಂಬುದು ಅವನಿಗೆ ತಿಳಿದಿಲ್ಲ. ಹಾಡುಗಳು ಏಸುಕ್ರಿಸ್ತನ ಹುಟ್ಟಿನ ಬಗ್ಗೆ ಎಂದು ಅವನಿಗೆ ಮನೆಯವರೊಬ್ಬರು ಹೇಳುತ್ತಾರೆ. ಆದರೆ ಏಸುಕ್ರಿಸ್ತನು ಯಾರೆಂದು ಅವನಿಗೆ ತಿಳಿದಿಲ್ಲ. ಕೇಳಿದಾಗ ಕ್ರಿಸ್ತನು ಬುದ್ಧನಂತೆ ಎಂದು ಅವರು ಹೇಳುತ್ತಾರೆ. ಅವನಿಗೆ ಬುದ್ಧನ ಬಗ್ಗೆಯೂ ಹೆಚ್ಚು ತಿಳಿದಿಲ್ಲ. ಕ್ರಿಸ್ತನು ಗಾಂಧಿಯಂತೆ ಎಂದು ಅವನಿಗೆ ಮತ್ತೆ ಹೇಳುತ್ತಾರೆ. ಸರಿ, ಈ ಹೆಸರು ಹುಡುಗನಿಗೆ ತಿಳಿದಿದೆ!

ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಮಾಡಿರುವ ನಿಂಬೆ ಶರಬತ್ತನ್ನು ಲೋಟಗಳಲ್ಲಿ ತುಂಬಿಸುವ ಕೆಲಸ ಮಕ್ಕಳದ್ದು. ಪ್ಯಾಕೆಟ್ ಗಳಿಂದ ಬಿಸ್ಕತ್ತು ತೆಗೆದ ತಟ್ಟೆಗಳಲ್ಲಿಡುವುದೂ ಮಕ್ಕಳ ಕೆಲಸವೇ. ಆಗ ಈಗ ಒಂದೆರಡು ಬಿಸ್ಕತ್ತುಗಳು ಮಕ್ಕಳ ಹೊಟ್ಟೆಗೂ ಹೋಗುತ್ತಿದ್ದವು. ಫೋನ್ ಶಬ್ದವಾಯಿತು (ಫೋನ ನಂಬರು 2842). ಆಸ್ಪತ್ರೆಗಳಿಂದ ಬಸ್ಸುಗಳು ಹೊರಟಿವೆಯಂತೆ ಎಂದು ಫೋನ್ ತೆಗೆದಕೊಂಡ ವ್ಯಕ್ತಿ ಕಿರುಚುತ್ತಾರೆ. ಆಸ್ಪತ್ರೆಗಳು? ಹೌದು, ಬರುವವರು ಬೆಂಗಳೂರಿನ ಎರಡು ದೊಡ್ಡ ಆಸ್ಪತ್ರೆಗಳ ನರ್ಸುಗಳು! ಪುಟ್ಟ ಹುಡುಗನಿಗೆ ಆಸ್ಪತ್ರೆಗಳ ಬಗ್ಗೆ ತಿಳಿದಿದೆ. ಅವುಗಳಲ್ಲಿ ಒಂದರಲ್ಲಿ ಹುಟ್ಟಿದ್ದ; ಇನ್ನೊಂದರಲ್ಲಿ ಅವನ ಶ್ವಾಸಕೋಶಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ್ದರು. ಅವುಗಳ ಹೆಸರುಗಳನ್ನು ಅವನು ನಂತರ ಸರಿಯಾಗಿ ತಿಳಿಯುವನು: ವಾಣಿ ವಿಲಾಸ್ ಆಸ್ಪತ್ರೆ ಮತ್ತು ವಿಕ್ಟೋರಿಯಾ ಆಸ್ಪತ್ರೆ.

ಕೆರೋಲ್‌ಗಳನ್ನು ಹಾಡಲು ನರ್ಸುಗಳು ತಮ್ಮ ಮನೆಗೆ ಏಕೆ ಬರುತ್ತಿದ್ದಾರೆಂಬುದು ಅವನಿಗೆ ನಿಜವಾಗಿಯೂ ತಿಳಿದಿಲ್ಲ. ಆಸ್ಪತ್ರೆಯಲ್ಲಿ ತನ್ನ ತಾಯಿ ಯಾರೋ ಮುಖ್ಯವಿರಬೇಕು ಎಂದುಕೊಳ್ಳುತ್ತಾನೆ. ಅವರು ನಿಜವಾಗಿಯೂ ಅಷ್ಟೇನೂ ಮುಖ್ಯರಲ್ಲ ಎಂದು ಅವನು ನಂತರ ಕಂಡುಕೊಳ್ಳುತ್ತಾನೆ. ಅವರು ಕೇವಲ ಸಂದರ್ಶಕ ಮಂಡಳಿಯ ಸದಸ್ಯರಾಗಿದ್ದರು. ಅಂತಹ ಕೆಲವು ಸದಸ್ಯರು ಐದೋ ಅಥವಾ ಹತ್ತೋ ಇದ್ದಿರಬಹುದು. ಸಂದರ್ಶಕ ಮಂಡಳಿಯ ಎಲ್ಲ ಸದಸ್ಯರ ಮನೆಗಳಿಗೂ ನರ್ಸುಗಳು ಹೋಗುತ್ತಿರಲಿಲ್ಲವಂತೆ. ಅವರು ಪುಟ್ಟ ಹುಡುಗನ ತಾಯಿಯ ಬಗ್ಗೆ ಏನೋ ಆತ್ಮೀಯ ಭಾವನೆಯನ್ನು ಹೊಂದಿದ್ದಿರಬೇಕು.

ದಾದಿಯರು ಹಿಂದಿನ ವರ್ಷ ಬಂದಿದ್ದರಬೇಕಲ್ಲವೇ ಎಂದು ಪುಟ್ಟಹುಡುಗ ನೆನೆಸಿಕೊಳ್ಳುತ್ತಾನೆ. ಅದಕ್ಕೂ ಹಿಂದೆ? ಅವನ ನೆನಪು ಅಲ್ಲಿಯೇ ನಿಲ್ಲುತ್ತದೆ. ಅದು ನಿಜವಾಗಿಯೂ ಅಲ್ಲಿ ನಿಲ್ಲುವುದಿಲ್ಲ; ಅವನ ನೆನಪುಗಳು ಶುರುವಾಗುವುದೇ ಅಲ್ಲಿಂದ. ಬಂದಿರುವರಲ್ಲಿ ಹೆಚ್ಚಿನವರು ಕ್ರಿಶ್ಚಿಯನ್ನರು ಎಂದು ಮಾತಾಡಿಕೊಳ್ಳುತ್ತಿದ್ದಾರೆ.ಮತ್ತೆ ಅವನಿಗೆ ಇದರ ಅರ್ಥವೇನೆಂದು ತಿಳಿದಿಲ್ಲ. ಅವನಿಗೆ ತಿಳಿದಿರುವುದು ಅವರು ಬಿಳಿ ಬಣ್ಣವನ್ನು ಧರಿಸುತ್ತಾರೆ ಮತ್ತು ಆಸ್ಪತ್ರೆಗಳಲ್ಲಿ ಖಾಯಿಲೆಯವರನ್ನು ನೋಡಿಕೊಳ್ಳುತ್ತಾರೆ. ಮನೆಯಲ್ಲಿ ಯಾರೋ ಹೇಳಿದ ಕಥೆಯನ್ನು ಹುಡುಗ ನೆನಸಿಕೊಳ್ಳುತ್ತಾನೆ..

ಯುದ್ಧ ಭೂಮಿಯಲ್ಲಿ ಗಾಯ ಗೊಂಡವರನ್ನು ನೋಡಿಕೊಳ್ಳುವ ನರ್ಸೊಬ್ಬಳ ಕಥೆ. ಆಕೆಯ ಹೆಸರು ಅವನಿಗೆ ನೆನಪಿದೆ. ಪಕ್ಷಿಯ ಹೆಸರು! ಆದರೆ ಇಂಗ್ಲಿಷ್ ಹೆಸರು ಜ್ನಾಪಕಕ್ಕೆ ಬರುತ್ತಿಲ್ಲ. ನಂತರ ಅವನು ಪೂರ್ಣ ಹೆಸರನ್ನು ಸರಿಯಾಗಿ ತಿಳಿದುಕೊಳ್ಳುತ್ತಾನೆ – ಫ್ಲಾರೆನ್ಸ್ ನೈಟಿಂಗೇಲ್. ಅಡುಗೆ ಮನೆಯಲ್ಲಿ ಸಾಕಷ್ಟು ಚಟುವಟಿಕೆ ಇದೆ. ಮನೆಯ ಕೆಲವು ಮಹಿಳೆಯರಿಗೆ ನಿಂಬೆ ರಸವು ಸಾಕಾಗುವುದಿಲ್ಲವೋ ಏನೋ ಎಂಬ ಯೋಚನೆ. ಎರಡು ಬಸ್ಬಂದರೆ ಸಾಕಾಗುತ್ತದೆ, ಆದರೆ ಮೂರು ಬಸ್ ಕಷ್ಟ ಎನ್ನುತ್ತಿದ್ದರು. ರಾತ್ರಿ ಒಂಬತ್ತು ಆಗಲಿದೆ. ಮನೆಯಲ್ಲಿ ಎಲ್ಲ ಕಡೆಯೂ ಬಲ್ಬುಗಳು ಉರಿಯುತ್ತಿದೆ. ಮನೆ ಇರುವ ಸಣ್ಣ ಓಣಿಗೆ ಬಸ್ಸುಗಳು ತಿರುಗುವ ಶಬ್ದ ಕೇಳಿಸುತ್ತದೆ. ಮಕ್ಕಳೆಲ್ಲ ಹೊರಗೆ ಓಡುತ್ತಾರೆ. ಪುಟ್ಟ ಹುಡುಗ ಬಸ್ಸುಗಳ ಸಂಖ್ಯೆಯನ್ನು ಎಣಿಸುತ್ತಾನೆ: ಒಂದು, ಎರಡು!.

ನರ್ಸುಗಳು ಬಸ್ಸಿನಿಂದ ಇಳಿದು ಮನೆಯೊಳಗೆ ಕಾಲಿಟ್ಟಾಗ ಮಕ್ಕಳು ಪಕ್ಕಕ್ಕೆ ನಿಲ್ಲುತ್ತಾರೆ. ಅವರಲ್ಲಿ ದೊಡ್ಡವರೂ ಇದ್ದಾರೆ, ಚಿಕ್ಕವರೂ ಇದ್ದಾರೆ. ಮಕ್ಕಳು ಬಂದವರು ಎಷ್ಟು ಎಂದು ಏಣಿಸಲು ಶುರುಮಾಡುತ್ತಾರೆ. ಆದರ ಅವರಲ್ಲಿ ಯಾರಿಗೂಇಪ್ಪತ್ತು ಮೀರಿ ಎಣಿಸುವುದಕ್ಕೆ ಬರುವುದಿಲ್ಲ. ಅಡುಗೆಯ ಮನೆಯ ಒಳಗಡೆ ಐವತ್ತು ಜನ ಬಂದಿರಬೇಕು ಎಂದು ಮಾತಾಡಿಕೊಳ್ಳುತ್ತಿದ್ದಾರೆ. ನರಸುಗಳೆಲ್ಲ ಒಳ ಬಂದು ಹಜಾರದಲ್ಲಿ ಕುಳಿತುಕೊಂಡರು. ಹಜಾರವೇನೋ ದೊಡ್ಡದಿತ್ತು; ಆದರೂ ಕೆಲವರು ನಿಂತುಕೊಳ್ಳಬೇಕಾಯಿತು, ಸರಿ, ಎಲ್ಲರೂ ಹಾಡಲು ಶುರು ಮಾಡಿದರು. ಹಾಡುವಾಗ ಕೆಲವು ಹೆಂಗಸರ ಕಣ್ಣಲ್ಲಿ ನೀರು ಬರುತ್ತಿರುವುದನ್ನು ಪುಟ್ಟ ಹುಡುಗ ನೋಡಿದ. ಆದರೆ ಅವರು ನಿಜವಾಗಿಯೂ ಅಳುತ್ತಿಲ್ಲ ಎಂದು ತನಗೇ ಸಮಾಧಾನ ಮಾಡಿಕೊಂಡ. ಹಾಡುಗಳು ಮುಂದುವರಿಯುತ್ತಿದ್ದವು.

ಸುಮಾರು ಒಂದು ಗಂಟೆ ಹಾಡಿರಬೇಕು. ಕೊನೆಯಲ್ಲಿ, ಎಲ್ಲರೂ ಚಪ್ಪಾಳೆ ತಟ್ಟಿದರು. ಪುಟ್ಟ ಹುಡುಗನ ತಾಯಿ ಎದ್ದು ನಿಂತು ಮನೆಗೆ ಬಂದಿದ್ದಕ್ಕೆ ದಾದಿಯರಿಗೆ ಧನ್ಯವಾದ ಹೇಳುತ್ತಾರೆ. ದೊಡ್ಡ ನರ್ಸ್, ಬಹುಶಃ ಅವರ ಮುಖ್ಯಸ್ಥರು, ಮನೆಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ. ನಂತರ ಮಕ್ಕಳು ಅವರೆಲ್ಲರಿಗೂ ನಿಂಬೆ ರಸ ಮತ್ತು ಬಿಸ್ಕತ್ತುಗಳನ್ನು ಹಂಚುತ್ತಾರೆ. ಇದೇನೂ ಹೆಚ್ಚಲ್ಲ, ಆದರೂ ದಾದಿಯರು ಸಂತೋಷದಿಂದ ತಿನ್ನುತ್ತಿದ್ದಾರೆ. ಅಲ್ಲಿ ಇಲ್ಲಿ ನಗು ಕೇಳಿಸುತ್ತದೆ. ಎಲ್ಲರೂ ತಿಂದ ಮೇಲೆ ಹೊರಡಲು ತಯಾರಾಗುತ್ತಾರೆ. ಅವರಲ್ಲಿ ಕೆಲವರು ಪುಟ್ಟ ಹುಡುಗನ ಬಳಿಗೆ ಬಂದು ಅವನ ಕೆನ್ನೆಯನ್ನು ಹಿಂಡುತ್ತಾರ. ಬೈ ಬೈ ಹೇಳುತ್ತ ಬಸ್ ಹತ್ತುತ್ತಾರೆ. ಮಕ್ಕಳೆಲ್ಲರೂ ಹೊರಗೆ ಓಡಿ ಬಸ್ಸುಗಳು ಹೋಗುವುದನ್ನೇ ನೋಡುತ್ತಾರೆ. ಅವರು ನಿರ್ಗಮಿಸಿದ ನಂತರ ಯಾವಾಗ ಈಹಾಡುಗಳನ್ನು ಮತ್ತೆ ಕೇಳುತ್ತೇವೋ ಎಂದು ಯೋಚಿಸುತ್ತಾ ಪುಟ್ಟ ಹುಡುಗ ನಿದ್ರೆಗೆ ಜಾರುತ್ತಾನೆ!

( ನನ್ನ ಚಿಕ್ಕಂದಿನ ಕ್ರಿಸ್ಮಸ್ ಸಮಯದ ನೆನಪುಗಳು)

‍ಲೇಖಕರು Avadhi

May 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: