ಆದರೆ ಈ ಭಾನುವಾರ ಅವರೇ ಇಲ್ಲ!

ಜಯಂತ: ಅನಂತ ನೆನಪುಗಳು

ಆನಂದತೀರ್ಥ ಪ್ಯಾಟಿ

ಇದ್ದ ಉದ್ಯೋಗ ಬಿಟ್ಟು ಮಣ್ಣಿನ ಸಹವಾಸಕ್ಕೆ ಇಳಿದವರನ್ನು ಹುಡುಕುತ್ತಿದ್ದ ಸಮಯವದು. ಅನಿರೀಕ್ಷಿತವಾಗಿ ಸಿಕ್ಕಿದ್ದು ಜಯಂತ್. ಕೊಪ್ಪಳದ ಸಮೀಪದ ಬಿಕನಳ್ಳಿ ಗ್ರಾಮಕ್ಕೆ ಎರಡು ವರ್ಷಗಳ ಹಿಂದಷ್ಟೇ ಬಂದಿದ್ದ ಜಯಂತ್, ನನ್ನ ಆಪ್ತ ವಲಯದೊಳಗೆ ಬರಲು ಹೆಚ್ಚೇನೂ ತಡವಾಗಲಿಲ್ಲ.
ಜಯಂತ್ ಅವರದು ಅಪರೂಪದ ವ್ಯಕ್ತಿತ್ವ. ಡಿಪ್ಲೊಮಾದಲ್ಲಿ ರ್ಯಾಂಕ್ ಹೋಲ್ಡರ್. ಸಿವಿಲ್ ಎಂಜಿನಿಯರಿಂಗ್’ನಲ್ಲಿ ಚಿನ್ನದ ಪದಕ ಪಡೆದವರು. ದೊಡ್ಡ ಕಂಪನಿಯಲ್ಲಿ ನೌಕರಿ ಸಿಕ್ಕಿತು. ಬೆಂಗಳೂರು ಹಾಗೂ ಥಾಯ್ಲೆಂಡ್, ಮಲೇಷ್ಯಾದಲ್ಲಿ ಉದ್ಯೋಗ ಮಾಡಿದರು. ‘ನಾವಿನ್ನೂ ಸಾವಿರ ರೂಪಾಯಿಗಳನ್ನು ಅಚ್ಚರಿಯಿಂದ ನೋಡುತ್ತಿದ್ದಾಗ, ವಿದೇಶಕ್ಕೆ ವಿಮಾನದಲ್ಲಿ ಹಾರಿದವರು ಜಯಂತ್’ ಎಂದು ನೆನಪಿಸಿಕೊಳ್ಳುತ್ತಾರೆ ಅವರ ಮಿತ್ರ ವೆಂಕನಗೌಡ ಮೇಟಿ.

ಯಾವ ಮೋಹನ ಮುರಳಿ ಕರೆಯಿತೋ, ಗೊತ್ತಿಲ್ಲ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿದವರು ಜಯಂತ. ಲಕ್ಷಗಟ್ಟಲೇ ಮೊತ್ತದ ಸಂಬಳದ ನೌಕರಿ ತ್ಯಜಿಸಿ, ಬಿಕನಳ್ಳಿಗೆ ಬಂದು, ಹಿರಿಯರ ಹೊಲದಲ್ಲಿ ನೇಗಿಲು ಹಿಡಿದರು. ಸಾಂಪ್ರದಾಯಿಕ ಬೇಸಾಯದ ಪಟ್ಟುಗಳನ್ನು ಕಲಿತು, ಬೆಳೆ ಬೆಳೆದರು. ಎರಡು ಎಕರೆಗಳಲ್ಲಿ ಕಾಡುತೋಟ ಕಟ್ಟಿದರು. ಮಳೆರಾಯನನ್ನು ನೆಚ್ಚಿಕೊಂಡು ಮಿಶ್ರ ಕೃಷಿ ಮಾಡಿದರೂ ‘ಎರಡು ವರ್ಷಗಳ ಕಾಲ ನನಗೆ ಏನೇನು ಧಾನ್ಯ ಬೇಕೋ ಅವೆಲ್ಲ ನನ್ನಲ್ಲಿವೆ’ ಎಂದು ಸವಾಲು ಹಾಕುತ್ತಿದ್ದ ಪರಿಯೇ ಸೋಜಿಗ.

ಆಧುನೀಕರಣದ ಮೋಹಕ್ಕೆ ವಿರುದ್ಧವಾಗಿ ಹೆಜ್ಜೆ ಹಾಕಿದವರು ಜಯಂತ್. ಅವರು ಮಂಡಿಸುತ್ತಿದ್ದ ಗಾಂಧೀವಾದ, ತೀರಾ ಸರಳ ಬದುಕು ಈಗಿನ ಕಾಲಕ್ಕೆ ಅಪ್ರಸ್ತುತ ಅನಿಸುತ್ತಿದ್ದರೂ ನಿರಾಕರಿಸುವಂತೆ ಇರಲಿಲ್ಲ ಎಂಬುದು ಮತ್ತೊಂದು ಅಚ್ಚರಿ! ಅದನ್ನು ಕಂಡು ಎಷ್ಟೋ ಸಲ ನಾನು ಗೊಂದಲಕ್ಕೆ ಒಳಗಾಗಿದ್ದೆ.

ಹಾರ್ಮೋನಿಯಂ, ತಬಲಾ, ಕೊಳಲು ವಾದಕರಾಗಿದ್ದ ಜಯಂತ್, ಐದು ಭಾಷೆ ಮಾತಾಡುತ್ತಿದ್ದರು. ಹಳ್ಳಿಯ ಯುವಕರ ಕರಾಳ ಭವಿಷ್ಯದ ಬಗ್ಗೆ ಕಳವಳಪಡಿಸುವ ಹೊತ್ತಿಗೇ ಜಾಗತಿಕ ಮಟ್ಟದ ವಿದ್ಯಮಾನಗಳಿಗೂ ಅಷ್ಟೇ ಸಂವೇದನಾಶೀಲವಾಗಿ ಸ್ಪಂದಿಸುತ್ತಿದ್ದರು. ‘ನಿಮ್ಮ ಚಿಂತನೆಗಳನ್ನು ಬರೆದುಕೊಡಿ’ ಎಂದು ಒತ್ತಾಯಿಸಿದಾಗ ನಕ್ಕುಬಿಡುತ್ತಿದ್ದರು!

ಐದು ವರ್ಷಗಳ ಹಿಂದೆ ನನ್ನ ತೋಟದಲ್ಲಿ ನಿಂಬೆ ಸಸಿ ನಾಟಿ ಮಾಡುವ ದಿನಪೂರ್ತಿ ಜತೆಗಿದ್ದು, ಸಸಿಗಳಿಗೆ ಕೊಡ ಹೊತ್ತು ನೀರು ಹಾಕಿದ್ದರು. ಆ ಗಿಡಗಳ ನಿಂಬೆಹಣ್ಣಿನಿಂದ ತಯಾರಿಸಿದ ಉಪ್ಪಿನಕಾಯಿಯನ್ನು ಕೊಡಲು ಕಳೆದ ಭಾನುವಾರ (ಮೇ 10) ಹೋಗಿದ್ದೆ. ‘ನೋಡಿದ್ರಾ… ಅವತ್ತು ಮಾಡಿದ ಕೆಲಸಕ್ಕೆ ಇವತ್ತು ಕೂಲಿ ಕೊಟ್ಟಿರಿ’ ಎಂದು ತಮಾಷೆ ಮಾಡಿದ್ದರು. ಕಾಡುತೋಟಕ್ಕೆ ಕರೆದೊಯ್ದು ಪೇರಲ, ಪಪ್ಪಾಯ, ಹುಣಸೆ, ನೆಲ್ಲಿ, ಶ್ರೀಗಂಧ, ಬೇವು, ಸೀತಾಫಲ ಇತ್ಯಾದಿ ಗಿಡಮರಗಳನ್ನು ತೋರಿಸಿ, ‘ಇದೆಲ್ಲವನ್ನೂ ಪ್ರಾಣಿ ಪಕ್ಷಿಗಳೇ ನೆಟ್ಟು- ಬೆಳೆಸಿದ್ದು’ ಎಂದು ಹೇಳಿದ್ದರು. ಅಲ್ಲಿ ವಾಸಿಸುತ್ತಿದ್ದ ಮಂಗಗಳು, ತೋಳ, ನರಿ, ನವಿಲುಗಳ ತಾಣವನ್ನು ದೂರದಿಂದ ತೋರಿಸಿದ್ದರು. ನನ್ನ ತೋಟದಲ್ಲಿ ಚಪ್ಪರ ಹಾಕಲು ತಮ್ಮಲ್ಲಿದ್ದ ಸುಬಾಬುಲ್ ಗಿಡಗಳನ್ನು ತೋರಿಸಿ, ಯಾವಾಗ ಬೇಕಾದರೂ ಬಂದು ಒಯ್ಯಿರಿ ಎಂದಿದ್ದರು. ‘ಮುಂದಿನ ಭಾನುವಾರ ಬರುವೆ’ ಎಂದು ಹೇಳಿ ಬಂದಿದ್ದೆ.

ಆದರೆ ಈ ಭಾನುವಾರ ಅವರೇ ಇಲ್ಲ! ಆಪ್ತನೊಬ್ಬನನ್ನು ಶಾಶ್ವತವಾಗಿ ಕಳೆದುಕೊಂಡ ಗಾಢನೋವು. ‘ನಮ್ಮ ನೆನಪುಗಳಲ್ಲಿ ಜಯಂತ್ ಸದಾ ಜೀವಂತ’ ಎಂದು ಮೇಲ್ನೋಟಕ್ಕೆ ಹೇಳಬಹುದೇನೋ? ಆದರೆ ಅದು ಸಂಪೂರ್ಣ ಸತ್ಯವಲ್ಲ ಎಂಬುದೂ ಅಷ್ಟೇ ನಿಜ.

‍ಲೇಖಕರು Avadhi

May 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: