ಒಣ ಒಣ ಶ್ರಾವಣ
-ಡಾ.ಶಿವಾನಂದ ಕುಬಸದ
ಮಳಿ ಹನಿಯಿಲ್ಲ ಮಾಡ ಮೂಡಿಲ್ಲ ಎಂಥಾದ್ದು ಈ ಶ್ರಾವಣ
ನೆಲಾ ಬಿರದು ನಿಟ್ಟುಸಿರ ಬಿಡತೈತಿ ಎಲ್ಲೆಲ್ಲಿ ನೋಡು ಒಣ ಒಣ
ಇನ್ನೂ ನೆನಪ ಇಲ್ಲಿ ಹಸಿರು ಹರವಿತ್ತು ನೆಲ ರಾಡಿ ರಾಡಿ
ಜೋಕಾಲಿ ಜೀಕಿ ನಾವ್ ಕೇಕೇ ಹಾಕುತ್ತ ಹಾರಕೊಂತ ಆಟ ಆಡಿ

ಊರ ಮುಂದಿನ ಹಳ್ಳ ಹರದಿತ್ತ ದನಕೆಲ್ಲ ಹುಲ್ಲು ನೀರ
ನೆಲ ಹಸಿಯಾಗಿ ಜಲ ಹರದಾಡಿ ಬೆಳದಿತ್ತ ಗಿಡದ ಬೇರ
ಹಸರ ತಿಂದ ದನ ಹೊಟ್ಟಿ ತುಂಬಿ ಇಡತಿತ್ತ ಎಂಥ ಸಗಣಿ
ಹೊಲಕ ಗೊಬ್ಬರ ನೆಲಕ ಸಡಗರ ಒಲೀ ತುಂಬ ಬೆರಣಿ
ಈಗ ನೋಡಿದರ ಹನಿ ಮಳಿಯಿಲ್ಲ ಎಲ್ಲೆಲ್ಲೂ ಹಾರಿ ಧೂಳ
ಅದs ಭೂತಾಯಿ ಅದs ಸಾಗರ ಅದs ಹೊಳಿ ಹಳ್ಳ
ಅಂದ ಕುಣದ್ಹಂಗ ಕುಣಿವಲ್ಲನಲ್ಲ ಶ್ರಾವಣದ ಆ ರಾವಣ
ಹೊಲ ಒಣಗ್ಯಾವು ಮಾರಿ ತಿರಗ್ಯಾವು ಬೆಳಿ ಇಲ್ಲದ ಭಣ ಭಣ
ಗಿಡ ಕಡದೇವು ರಸ್ತೆ ಮಾಡೇವು ಎಲ್ಲೆಲ್ಲೂ ಹೊಗಿ ಧಗಿ
ಬಾ ಅಂದ್ರ ಹ್ಯಾಂಗ ಬಂದೀತು ಮಳಿಯು ತಂಪು ಇಲ್ಲವಾಗಿ
ಮಾಡ ಹಾರ್ತಾವು ಮುಂದಿನೂರಿಗೆ ಅಲ್ಲೀನು ಬೀಳದೇನ
ಅಶ್ವೀನಾತು ರೋಹಿಣಿಯು ಹೋಯ್ತು ಆರಿದ್ರ ದರಿದ್ರವೇನ
ಕಾಲ ಮೀರಿಲ್ಲ ಮನಸು ಮಾಡಾಕ ಮುಂದೀನ ದಿನಮಾನಕ
ಗಿಡ ಬೆಳಸೂದು ಜಡ ಹೋಗ್ಸೂದು ಈಗ ತುರ್ತ ಬೇಕ
ಇಲ್ಲಂದ್ರ ಹಿಂಗ ನೀರಿಲ್ದ ಒಣಗಿ ಸಾಯೂದು ತಪ್ಪಲಾರ್ದು
ನಮ್ಮ ಮಕ್ಕಳ ಆಸ್ತಿ ಈ ಭೂಮಿ ಹಾಳು ಕೆಡವಬಾರ್ದು.






ಇನ್ನೂ ಕಾಲ ಮೀರಿಲ್ಲ…. ಭಯವಾಗುತ್ತೆ ಇಂದಿನ ಪರಿಸ್ಥಿತಿ , ಮುಂದಿನದ ನೆನೆದು…. ಮಕ್ಕಳ ಈ ಆಸ್ತಿ ಹಾಳು ಮಾಡದಿರೋಣ
ಕವಿತೆ ತುಂಬಾ ವಾಸ್ತವತೆಯ ಚಿತ್ರಣವಿದೆ
ಸೂಪರ್ ಸರ್
SUperr sir
ನಾವು ಹಿಂದೆ ನೋಡದಷ್ಟು ಮುಂದುವರಿದಿದ್ದೇವೆ. ಗಂಗಾನಚುಂಬಿ ಕಟ್ಟಡಗಳಿಗೆ ಗಾಜಿನ ಹೊದಿಕೆ ಹೊದಿಸಿ ಪ್ರಗತಿ ಕಾಣುತ್ತಿದ್ದೇವೆ. ನಿತ್ಯ ಹರಿದ್ವರ್ಣದ ಕಾಡನ್ನು ಕಾಂಕ್ರೀಟ್ ನಾಡನ್ನಾಗಿ ಪರಿವರ್ತಿಸಿ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತಿದ್ದೇವೆ. ದುಡ್ಡು ಮಾಡಿಕೊಂಡು ಹೊಟ್ಟೆ ಸವರಿಕೊಳ್ಳುತ್ತಿದ್ದೇವೆ.
ಹಳ್ಳಿಗಳಲ್ಲೂ ಗದ್ದೆಗಳನ್ನು ‘ಸೈಟ್’ಗಳಾಗಿ ಪರಿವರ್ತಿಸುವ ಕಾಯಕ ನಿರಂತರವಾಗಿ ನಡೆದಿದೆ. ಇದಕ್ಕೆ ಹಳ್ಳಿಗರನ್ನು ದೂರುವಂತಿಲ್ಲ.
ಬೇಸಾಯಕ್ಕೆ ಜನ ಸಿಗುತ್ತಿಲ್ಲ ಅನ್ನುವ ಕಾರಣವನ್ನು ತಳ್ಳಿಹಾಕುವಂತಿಲ್ಲ. ಸರಕಾರದಿಂದ ವ್ಯಯಸಾಯಕ್ಕೆ ಪ್ರೋತ್ಸಾಹ ಸಿಗುತ್ತಿಲ್ಲ ಅನ್ನುವುದಕ್ಕಿಂತ ಅದು ತಲುಪಬೇಕಾದವರಿಗೆ ತಲುಪುತ್ತಿಲ್ಲ ಅಂದರೆ ಸೂಕ್ತವಾದೀತೇನೋ.
ಬ.ಹುಶಃ ಈ ಕವನದಲ್ಲಿರುವ ಪರಿಸರ ಕಾಳಜಿ ಬೆರಳೆಣಿಕೆಯವರ ಮನ ಮುಟ್ಟಿದರೂ ಹನಿ ಹನಿ ಕೂಡಿ ಹಳ್ಳವಾದೀತು… ಮಳೆಯೂ ಕಾಲಕಾಲಕ್ಕೆ ಸುರಿದೀತು.
ಒಳ್ಳೆಯ ಆಶಯ ಹೊತ್ತ ಕವನ…
ನಾವು ಮನುಷ್ಯರು ಹೀಗೇ…. ಶ್ರಾವಣವನ್ನ ಕೂಡ ದಿಕ್ಕು ತಪ್ಪಿಸಿ ಬಿಡುತ್ತೇವೆ…..
ಪ್ರಕೃತಿದತ್ತ ವಾದ ಬಳುವಳಿಗಳನ್ನು ನಮ್ಮ ಸ್ವಾರ್ಥಕ್ಕಾಗಿ ಹೀಗೆ ಹಾಳುಗೆಡುವುತ್ತಿರುವ ಪ್ರಕ್ರೆಯೇ ಎಗ್ಗಿಲ್ಲದೆ ಸಾಗುತ್ತಿದೆ .ಆಕೆ ಕೊಡ್ತಾ ಇರುವ ಎಚ್ಚರಿಕೆ ಗಂಟೆಯನ್ನು ಯನ್ನು ನಿರ್ಲಕ್ಷಿಸಿ ಇನ್ನೂ ಏನೇನು ಅಪಾಯಗಳಿಗೆ ದಾರಿ ಮಾಡಿಕೊಡುತ್ತಿದ್ದೇವೆಯೋ ಆ ದೇವರಿಗೆ ಗೊತ್ತು . ನಮ್ಮ ಮುಂದಿನ ಪೀಳಿಗೆಗಾಗಿ ನಿಮ್ಮ ಕಾಳಜಿ ಶ್ಲಾಗನೀಯ . ಒಳ್ಳೆಯ ಸದಾಶಯದ ಕವನ .
ಮಳೆ ಇಲ್ಲದ ನಿರ್ಜಿವತೆ, ಮಳೆ ಬಂದಾಗಿನ ಕಲರವತೆ.. ಕವಿತೆಯ ಪ್ರತಿಯೊಂದು ಸಾಲಿನಲ್ಲಿಯೂ ವ್ಯಕ್ತವಾಗಿದೆ… ಕವಿತೆ ಎಷ್ಟೊಂದು ನೈಜವಾಗಿದೆಯೆಂದರೆ ಒಂದೊಂದು ಸಾಲಿನ ಸನ್ನಿವೇಶಗಳನ್ನು ನನ್ನ ಹಳ್ಳಿಯಲ್ಲಿ ಕಂಡಿರುವೆ ಸರ್… ಬಹುಷಾ ಮಳೆ ನಗರಕ್ಕಿಂತಲೂ ಹಳ್ಳಿಗಳನ್ನ ಸಂಪೂರ್ಣವಾಗಿ ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತದೆ.
ಇನ್ನು ಕವಿತೆಯ ರಚನೆ ತುಂಬಾ ಇಷ್ಥವಾಗಲು ಕಾರಣವೆಂದರೆ ಇಲ್ಲಿ ಬಳಸಿದ “ಪ್ರಾಸಗಳು”. ಎಷ್ಟೊಂದು ನೈಜವಾಗಿ ಪ್ರಾಸಗಳ ಉಪಯೋಗವಾಗಿದೆ… ಇತ್ತೀಚಿನ ಅನೇಕ ಅಭಿವ್ಯಕ್ತಿ ಸ್ವತಂತ್ರದ ಹೇಸರಿನಲ್ಲಿ ಬರುವ ಕವಿತೆಗಲ್ಲಿ ಇಂತ ಸುಂದರವಾದ ಪ್ರಾಸಗಳು ಕಾಣಸಿಗುತ್ತಿಲ್ಲ. ಪ್ರಾಸಗಳು ಸಂದರ್ಭೋಚಿತವಾಗಿ ಮಸುಕಾದರೂ ಪೂರ್ತಿ ಅಳಕಿ ಹೂಗಬಾರದೆಂಬುದು ನನ್ನ ಆಶಯ.. ಈ ಕವಿತೆಯಂತು ನಮ್ಮೂರಿನಷ್ಥೆ ಚಿರಪರಿಚಿತವಾಗಿದೆ ಸರ್… ಧನ್ನ್ಯವಾದಗಳು…
ಸಗಣೀ,ಬೆರಣೀ ಯಾವುದಿಲ್ಲ.ಮುಂದೇನು? ಅನ್ನೋದೇ ಪ್ರಶ್ನೆ.ಉತ್ತರವಿಲ್ಲದ್ದು.ಎಲ್ಲ ಹೋದ ಮೇಲೆ ಪದ್ಯಾ ಗಿದ್ಯಾಗಳಾದ್ರೂ ಎಲ್ ಉಳೀತಾವಪ್ಪ ಅನಿಸ್ತದೆ ಒಮ್ಮೊಮ್ಮೆ. ಓಝೋನ್ ತೂತುಗಳು ದೋಓಡ್ದಾಗ್ತಾನೇ ಇವೆ.ಎಷ್ಟು ಸೈಟ್ ಇದ್ರೂ ಎಲ್ಲ ಮುಳುಗೋದೇ.
ತುಂಬಾ ಚನ್ನಾಗಿದೆ ಅಸ್ಟೆ ನೋವು ಕೊಡುತ್ತದೆ
ಸೂಪರ್
ಕಾಲ ಮೀರಿಲ್ಲ ಮನಸು ಮಾಡಾಕ ಮುಂದೀನ ದಿನಮಾನಕ
ಗಿಡ ಬೆಳಸೂದು ಜಡ ಹೋಗ್ಸೂದು ಈಗ ತುರ್ತ ಬೇಕ
ಇಲ್ಲಂದ್ರ ಹಿಂಗ ನೀರಿಲ್ದ ಒಣಗಿ ಸಾಯೂದು ತಪ್ಪಲಾರ್ದು
ನಮ್ಮ ಮಕ್ಕಳ ಆಸ್ತಿ ಈ ಭೂಮಿ ಹಾಳು ಕೆಡವಬಾರ್ದು. aseya kadalalli theluva hayidhoni nimma kavana thumba chennagide