ಕನ್ನಡ ನಾಡಿನ ಹೊರಗಿದ್ದೂ ಕನ್ನಡವನ್ನು ಕಟ್ಟುವುದು – ಜಿ ಪಿ ಬಸವರಾಜು

gp-4

ಜಿ.ಪಿ.ಬಸವರಾಜು

ತೀ.ನಂ.ಶ್ರೀ ಅವರ ‘ಭಾರತೀಯ ಕಾವ್ಯ ಮೀಮಾಂಸೆ’ಗೆ (1953ರಲ್ಲಿ) ಮುನ್ನುಡಿಯನ್ನು ಬರೆದ ಕುವೆಂಪು ಅವರು ಒಂದು ಮಾತನ್ನು ಹೇಳಿದರು: ಕನ್ನಡ ಸಾಹಿತ್ಯ ನವೋದಯ ತನ್ನ ಹಲವು ಶಾಖೆಗಳಲ್ಲಿ ಚಿಗುರಿ ಬೆಳೆದು ಮುಂಬರಿಯುತ್ತಿದೆ. ಆದರೆ ಕಾವ್ಯ ಮೀಮಾಂಸೆಯ ಮತ್ತು ಸಾಹಿತ್ಯ ವಿಮರ್ಶೆಯ ಶಾಖೆಗಳು ಅಲ್ಲಲ್ಲಿ ಕಣ್ಣೊಡೆದಂತೆ ತೋರಿದರೂ, ಒಟ್ಟಿನಲ್ಲಿ ಬರಲು ಬರಲಾಗಿಯೆ ತೋರುತ್ತಿವೆ. ಅದರಲ್ಲೂ ಸಾಹಿತ್ಯ ವಿಮರ್ಶೆಯ ಭಾಗಕ್ಕಿಂತಲೂ ಕಾವ್ಯ ಮೀಮಾಂಸೆಯ ಭಾಗ ತುಂಬ ರಿಕ್ತ ಸ್ಥಿತಿಯಲ್ಲಿದೆ.

ನಮ್ಮ ಕಾವ್ಯ ಮೀಮಾಂಸೆಯ ಸ್ಥಿತಿ ಇವತ್ತಿಗೂ ಬದಲಾದಂತೆ ತೋರುವುದಿಲ್ಲ. ತೀನಂಶ್ರೀ, ಡಾ.ಕೆ. ಕೃಷ್ಣಮೂರ್ತಿ, ಎನ್. ಬಾಲಸುಬ್ರಹ್ಮಣ್ಯ, ಪುತಿನ, ಕುವೆಂಪು, ಇನಾಂದಾರ್, ಜಿ.ಎಸ್. ಶಿವರುದ್ರಪ್ಪ, ಕೆ.ವಿ. ನಾರಾಯಣ ಮೊದಲಾದವರು, ನಾವು ಸುಲಭವಾಗಿ ಎಣಿಸಬಹುದಾದಷ್ಟು ಜನ ಮಾತ್ರ, ಈ ಕ್ಷೇತ್ರದಲ್ಲಿ ಚಿಂತಿಸಿ ಕೃತಿ ರಚಿಸಿರುವುದನ್ನು ಬಿಟ್ಟರೆ ಹೆಚ್ಚಿನ ಪ್ರಗತಿ ಕಾಣಿಸುವುದಿಲ್ಲ. ಕಾವ್ಯ ಮೀಮಾಂಸೆಯ ಅಲಂಕಾರ ಶಾಸ್ತ್ರ, ಛಂದಶ್ಶಾಸ್ತ್ರಗಳು ಈ ಕಾಲದ ಫ್ಯಾಷನ್ ಅಲ್ಲ. ಆದರೆ ನಮ್ಮ ಕಾವ್ಯ ಮೀಮಾಂಸೆಯ ತಿರುಳೆಂದು ಭಾವಿಸಿರುವ, ‘ರಸ, ಧ್ವನಿ, ಔಚಿತ್ಯ’ಗಳನ್ನು ಬಿಟ್ಟುಕೊಟ್ಟು ವಿಮರ್ಶೆ ಬದುಕಲಾರದು. ಹೀಗಿದ್ದೂ ಕಾವ್ಯ ಮೀಮಾಂಸೆಯ ಬಗ್ಗೆ ಗಂಭೀರ ಚಿಂತನೆಗಳು ನಡೆಯದಿರುವುದು ಸೋಜಿಗ ಹುಟ್ಟಿಸುತ್ತದೆ.

೨

ಇಂಥ ಸನ್ನಿವೇಶದಲ್ಲಿ ಹೊಸದೊಂದು ಆಶಾಕಿರಣದಂತೆ ಗಿರಿ (ಡಾ.ಎಂ.ಎನ್. ಹೆಗಡೆ) ಅವರ ಕಾವ್ಯಮೀಮಾಂಸೆಯನ್ನು ಕುರಿತ ಹೊತ್ತಗೆಯೊಂದು ಹೊರಬರುತ್ತಿದೆ. ‘ಸಾಹಿತ್ಯದ ಮೀಮಾಂಸೆ ಮತ್ತು ವರ್ತನ ವಿಜ್ಞಾನ’ ಎಂಬ ಹೆಸರಿನ ಈ ಕೃತಿ ಸದ್ಯದಲ್ಲೇ ಓದುಗರ ಕೈಸೇರಲಿದೆ. ಅನೇಕ ಕಾರಣಗಳಿಗಾಗಿ ಈ ಕೃತಿ ಬಹಳ ಮಹತ್ವದ ಕೃತಿಯಾಗಿ ಕಾಣಿಸುತ್ತಿದೆ; ವಿದ್ವತ್ ವಲಯದಲ್ಲಿ ಗಂಭೀರ ಚಿಂತನೆಗೆ ದಾರಿಮಾಡಿಕೊಡುವ ಸಾಧ್ಯತೆಯನ್ನೂ ಇದು ತೋರಿಸುತ್ತಿದೆ.
ಕಾವ್ಯ ಮೀಮಾಂಸೆ ಎಂದರೆ ಸಾಹಿತ್ಯದ ಚರ್ಚೆ, ಚಿಂತನೆ, ವಿಶ್ಲೇಷಣೆ, ಸಂಶೋಧನೆ. ಸಾಹಿತ್ಯದ ಮುಖ್ಯ ಅಂಶಗಳಾದ ಕಾವ್ಯ, ಓದುಗ, ಕವಿ, ಪ್ರಯೋಜನ, ಸೃಜನಶೀಲ ಕ್ರಿಯೆ, ಹಾಗೆಯೇ ರಸ, ಧ್ವನಿ, ಔಚಿತ್ಯ ಇತ್ಯಾದಿ ಅನೇಕ ಅಂಶಗಳನ್ನು ಚರ್ಚಿಸುವುದು, ಶೋಧಿಸುವುದು, ಚಿಂತಿಸುವುದು. ಪ್ರಾಚೀನ ಚಿಂತಕರು ಕಾವ್ಯ ಮೀಮಾಂಸೆಯ ಪ್ರಮುಖ ಅಂಶಗಳನ್ನು ಚರ್ಚಿಸಿದ್ದು, ವಿಶ್ಲೇಷಿಸಿದ್ದು ಮತ್ತು ಕೆಲವು ತೀರ್ಮಾನಗಳಿಗೆ ಬಂದದ್ದು ತತ್ವಶಾಸ್ತ್ರ, ತರ್ಕಶಾಸ್ತ್ರ, ಪಾಂಡಿತ್ಯವಾದದ ತಳಹದಿಯ ಬೆಳಕಿನಲ್ಲಿ. ಪ್ಲೇಟೊ, ಅರಿಸ್ಟಾಟಲ್, ಆನಂದವರ್ಧನ, ಅಭಿನವಗುಪ್ತ ಮೊದಲಾದವರ ಚಿಂತನೆ ನಡೆದದ್ದು ಹೀಗೆಯೇ.

ಮುಂದೆ ವಿಜ್ಞಾನ ಬೆಳೆದಂತೆ ಈ ತಳಹದಿ ಜ್ಞಾನ ಶಾಖೆಗಳು ಕೂಡ ಹೆಚ್ಚುತ್ತ ಹೋದವು. ಮನೋವಿಜ್ಞಾನ, ಭಾಷಾ ವಿಜ್ಞಾನ, ವರ್ತನ ವಿಜ್ಞಾನ, ನರವಿಜ್ಞಾನ ಮೊದಲಾದ ನೆಲೆಗಳಿಂದಲೂ ಕಾವ್ಯ ಮೀಮಾಂಸೆಯ ಮುಖ್ಯ ಅಂಶಗಳನ್ನು ಪರೀಕ್ಷೆಗೆ ಒಡ್ಡುವ ಪರಿಪಾಠವೂ ಬೆಳೆಯಿತು. ಪಡುವಣದಲ್ಲಂತೂ ಇದು ಹೆಚ್ಚಾಗಿಯೇ ನಡೆಯಿತು.

‘ಇಂದ್ರಿಯಾನುಭವಕ್ಕೆ ಬರುವ ಪ್ರಪಂಚ ನಿಜವಲ್ಲ; ನಿಜವಾದದ್ದರ ಅನುಕರಣೆ. ನಿಜವಾದ ಪ್ರಪಂಚ [ದೇವರ ಮನಸ್ಸಿನಲ್ಲಿ]ಎಲ್ಲೋ ಇದೆ’ ಎಂದ ಪ್ಲೇಟೊ. ಶಂಕರಾಚಾರ್ಯರೂ ಸೇರಿದಂತೆ ಅನೇಕ ಭಾರತೀಯರ ಚಿಂತಕರ ಚಿಂತನೆಯೂ ಇದೇ ಮಾದರಿಯದೇ. ‘ಈ ಜಗತ್ತು ಮಿಥ್ಯೆ’ ಎಂದದ್ದರ ಹಿಂದಿರುವ ಚಿಂತನೆಯೇ ಇದು. ಎಲ್ಲ ದೇಶಗಳಲ್ಲೂ ಇಂಥ ಕಲ್ಪನೆ ಇದೆ ಎನ್ನುತ್ತಾರೆ ಗಿರಿ. ‘ಸ್ವರ್ಗದ ಸುಖ’ ಎಲ್ಲ ಸಮಾಜಗಳ ಕನಸು. ಕಾವ್ಯ ಮೀಮಾಂಸೆಯ ಇಂಥ ಅನೇಕ ಸಂಗತಿಗಳನ್ನು, ತಮ್ಮ ಅಪಾರವಾದ ಓದು ಮತ್ತು ಹರಿತ ವಿಶ್ಲೇಷಣೆಯ ಮೂಲಕ ಚರ್ಚೆಗೆ ಒಡ್ಡುವ ಗಿರಿ ಮೂಡಣ ಮತ್ತು ಪಡುವಣ ರಾಷ್ಟ್ರಗಳ ಅನೇಕ ಚಿಂತಕರ ವಿಚಾರಗಳನ್ನು ಮರುಪರಿಶೀಲನೆಗೆ ಒಳಗು ಮಾಡಿದ್ದಾರೆ.

೧

ವಿಜ್ಞಾನಿಯಾಗಿರುವ ಗಿರಿ ಅವರಿಗೆ ಸಹಜವಾಗಿಯೇ ಪ್ರಯೋಗಕ್ಕೆ ಒಳಪಡಿಸಿ, ಆ ಮೂಲಕ ತೀರ್ಮಾನಕ್ಕೆ ಬರುವ ಕುತೂಹಲ. ಇದಕ್ಕೆ ಅಗತ್ಯವಾದ ಸಿದ್ಧತೆಯೂ ಅವರಲ್ಲಿದೆ. ಭಾಷಾ ವಿಜ್ಞಾನ, ಮನೋವಿಜ್ಞಾನ, ಮನೋವಿಶ್ಲೇಷಣೆ, ನರವಿಜ್ಞಾನ, ವರ್ತನ ವಿಜ್ಞಾನ ಕ್ಷೇತ್ರಗಳಲ್ಲಿ ಈ ಸಂಬಂಧದಲ್ಲಿ ಆಗಿರುವ ಬೆಳವಣಿಗೆಯ ಆಳ ಅಧ್ಯಯನದ ಹಿನ್ನೆಲೆಯೂ ಗಿರಿಯವರಿಗಿದೆ. ಫ್ರಾಯ್ಡ್, ಯೂಂಗ್, ಸ್ಕಿನ್ನರ್, ಚಾಮ್ಸ್ಕಿ ಹೀಗೆ ಈ ಕ್ಷೇತ್ರಗಳಲ್ಲಿ ಮಹತ್ವದ ಕೆಲಸವನ್ನು ಮಾಡಿರುವ ಚಿಂತಕರ ತೀಮರ್ಾನಗಳನ್ನು ಗಿರಿ ದಿಟ್ಟವಾಗಿ ಪ್ರಶ್ನಿಸುತ್ತಾರೆ. ನಿರಾಕರಿಸುವ ಅಂಶಗಳನ್ನು ಮುಲಾಜಿಲ್ಲದೆ ನಿರಾಕರಿಸುತ್ತ, ಒಪ್ಪುವ ವಿಚಾರಗಳಿಗೆ ತಮ್ಮ ಸಮರ್ಥನೆಯನ್ನು ನೀಡುತ್ತ ಕಾವ್ಯ ಮೀಮಾಂಸೆಯ ನಿಲುವುಗಳನ್ನು ಗಟ್ಟಿಗೊಳಿಸಲು ನೋಡುತ್ತಾರೆ.

ಮನಸ್ಸು, ಆತ್ಮ, ಸ್ಪೂರ್ತಿ, ಸಂವೇದನೆ, ಪ್ರಚೋದನೆ, ವರ್ತನೆ, ಕನಸು, ಕಲ್ಪನೆ ಇತ್ಯಾದಿ ಅನೇಕ ಅಮೂರ್ತ ಸಂಗತಿಗಳನ್ನು ಚಚರ್ಿಸುವುದು ಹೇಗೆ? ‘ಅಪ್ಪಟ ಆಲೋಚನೆಗೆ ಎಲ್ಲ ಹೊಳೆಯುತ್ತದೆ, ಬೇರೆ ಯಾವ ಪರೀಕ್ಷೆಯೂ ಬೇಕಾಗಿಲ್ಲ’ ಎಂದು ಪ್ಲೇಟೊ ಹೇಳಿದ್ದರೂ, ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇವತ್ತು ವಿಜ್ಞಾನ ಇಲ್ಲ. ಹಿಂದಿನ ವಿಜ್ಞಾನಿಗಳೂ ಇಂಥ ಸಂಗತಿಗಳನ್ನು ಪರೀಕ್ಷೆಗೆ ಒಡ್ಡಲು ಪ್ರಯತ್ನಿಸಿದ್ದಾರೆ. ಸಾಹಿತ್ಯದ ಉಗಮವನ್ನು ಕುರಿತಂತೆ ಫ್ರಾಯ್ಡ್ ಮತ್ತು ಯೂಂಗ್ ನಡೆಸಿದ ಪ್ರಯೋಗಗಳು ಇಂಥ ಪ್ರಯತ್ನದ ಫಲವೇ. ‘ಮನಸ್ಸು ಒಂದು ಖಾಲಿ ಹಲಗೆ(ಪಾಟಿ)’ ಎಂಬ ನಂಬಿಕೆ ತತ್ವಜ್ಞಾನಿ ಅರಿಸ್ಟಾಟಲನದು. ಆಧುನಿಕ ತತ್ವಜ್ಞಾನಿ ಮತ್ತು ಮನೋವಿಜ್ಞಾನಿ ರನೆ ಡಕಾಟರ್್, ‘ಮೆದುಳಿನ ಆಳದಲ್ಲಿ ಹುದುಗಿರುವ ಶಂಕು ಗ್ರಂಥಿಯೊಳಗೆ ಮನಸ್ಸು ಅಥವಾ ಆತ್ಮ ಇರುತ್ತದೆ’ ಎಂದು ನಂಬಿದ್ದ. ಇಂಥ ಬಿಡಿಸಲಾಗದ ಸಂಗತಿಗಳನ್ನು ವರ್ತನ ವಿಜ್ಞಾನ ಇನ್ನೊಂದು ನೆಲೆಯಿಂದ ನೋಡಲು ಪ್ರಯತ್ನಿಸುತ್ತದೆ. ಸಾಹಿತ್ಯ ರಚನೆಯ ಕಾರಣಗಳು, ಪರಿಣಾಮಗಳು ಇತ್ಯಾದಿ ಅಂಶಗಳನ್ನು ಕುರಿತು ವರ್ತನ ವಿಜ್ಞಾನ ಚಿಂತಿಸುತ್ತದೆ. ಈ ಎಲ್ಲ ಸಂಗತಿಗಳನ್ನು ಪರಿಶೀಲಿಸುವ ಗಿರಿ ಅವರು, ಇಂಥ ವಿಚಾರಗಳಲ್ಲಿ ಪೂರ್ವದ ತತ್ವಜ್ಞಾನ ಮತ್ತು ಪಶ್ಚಿಮದ ವಿಜ್ಞಾನಗಳು ತಳೆದಿರುವ ನಿಲುವನ್ನು, ತೀಮರ್ಾನಗಳನ್ನು ನಮ್ಮ ಮುಂದಿಡುತ್ತಾರೆ. ಬರೆಯುವುದರ ಹಿಂದಿನ ಪ್ರೇರಣೆಗಳನ್ನು ಕುರಿತಂತೆ ಕನ್ನಡದ ಪ್ರಮುಖ ಲೇಖಕರು ನೀಡಿರುವ ವಿವರಣೆಗಳು ಹೇಗೆ ವರ್ತನ ವಿಜ್ಞಾನದ ಸತ್ಯಗಳಿಗೆ ಹತ್ತಿರವಾಗಿವೆ ಎಂಬುದನ್ನು ಗಿರಿಯವರು ತೋರಿಸಿಕೊಡುತ್ತಾರೆ.

ಭಾಷೆ, ಅರ್ಥ, ಅರ್ಥದ ಅರ್ಥ, ವ್ಯಾಕರಣ, ಧ್ವನಿ, ರಸ ಇತ್ಯಾದಿ ಸಂಗತಿಗಳೂ ಕಾವ್ಯ ಮೀಮಾಂಸೆಯ ಚೌಕಟ್ಟಿನಲ್ಲಿಯೇ ಬರುತ್ತವೆ. ಚಾಮ್ಸ್ಕಿ ಮೊದಲಾದವರು ಭಾಷೆಯನ್ನು ಕುರಿತಂತೆ ನಡೆಸಿದ ಚಿಂತನೆಗಳನ್ನು ಪರೀಕ್ಷೆಗೆ ಒಡ್ಡುವ ಗಿರಿ, ‘ವ್ಯಾಕರಣವೇ ಭಾಷೆಯ ಮುಖ್ಯ ಅಂಗ’ ಎಂಬ ಚಾಮ್ಸ್ಕಿ ವಾದವನ್ನು ತಳ್ಳಿಹಾಕುತ್ತಾರೆ. ಭಾಷೆ ಮತ್ತು ಅನುಭವ ಎಂಬ ವಿಂಗಡಣೆಯೇ ಅಸಂಗತ ಎನ್ನುತ್ತಾರೆ ಗಿರಿ. ವರ್ತನ ವಿಜ್ಞಾನಿ ಸ್ಕಿನ್ನರ್ ಪ್ರಯೋಗಗಳ ಮೂಲಕವೇ ಸಿದ್ಧಾಂತಗಳನ್ನು ರೂಪಿಸಿದವರು. ಅವು ಒಪ್ಪಬಹುದಾದ ಸಿದ್ಧಾಂತಗಳು. ಆದರೆ ಚಾಮ್ಸ್ಕಿ ಸಿದ್ಧಾಂತಗಳನ್ನು ಮಾತ್ರ ಹೇಳುತ್ತಿದ್ದಾರೆ, ಅವುಗಳಿಗೆ ಪ್ರಯೋಗಗಳ ಆಧಾರವಿಲ್ಲ-ಎಂಬುದು ಗಿರಿಯವರ ವಾದ. ಅವರ ನಿಲುವು ಸ್ಕಿನ್ನರ್ನ ಸಿದ್ಧಾಂತಗಳ ನಿಲುವು.

ಇದೇನೇ ಇರಲಿ, ಗಿರಿ ಅವರ ದಶಕಗಳ ಪ್ರಯತ್ನದ ಫಲವಾಗಿ ಮೂಡಿರುವ ಈ ಕೃತಿ ಅನೇಕ ಪ್ರಶ್ನೆಗಳಿಗೆ ಪ್ರೇರಣೆ ನೀಡಲಿದೆ; ಗಂಭೀರ ಚರ್ಚೆಗೆ ಅವಕಾಶ ಕಲ್ಪಿಸಲಿದೆ.

ಗಿರಿ ಅವರು ಕನ್ನಡ ನಾಡನ್ನು ತೊರೆದು ನಾಲ್ಕಾರು ದಶಕಗಳೇ ಕಳೆದಿವೆ. ಅವರದು ವಿಜ್ಞಾನ ಕ್ಷೇತ್ರ. ಪ್ರಾಯೋಗಿಕ ಮನೋವಿಜ್ಞಾನದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ, ಅನಂತರ ಬೆಂಗಳೂರು ವಿಶ್ವವಿದ್ಯಾನಿಯದಿಂದ ವೈದ್ಯಕೀಯ ಮನೋವಿಜ್ಞಾನದಲ್ಲಿ ಡಿಪ್ಲೊಮಾ, ಮುಂದೆ ಇಲಿನಾಯ್ಸ್ ವಿಶ್ವವಿದ್ಯಾನಿಲಯದ ಡಾಕ್ಟರೇಟ್. ಫ್ರೆಸ್ನೊದ ಕ್ಯಾಲಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿರುವ ಗಿರಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರು ರಚಿಸಿರುವ 25ಕ್ಕೂ ಹೆಚ್ಚು ಕೃತಿಗಳು ಪಠ್ಯಗಳಾಗಿ, ಪರಾಮರ್ಶನ ಗ್ರಂಥಗಳಾಗಿ ಮೆಚ್ಚುಗೆ ಗಳಿಸಿವೆ. ಅನೇಕ ಕ್ಲಿನಿಕ್ಗಳಲ್ಲಿ ಇವುಗಳ ಬಳಕೆಯೂ ಅಗುತ್ತಿದೆ. ಹಲವಾರು ಅಂತರ ರಾಷ್ಟ್ರೀಯ ಪ್ರಶಸ್ತಿಗಳು ಗಿರಿ ಅವರಿಗೆ ಲಭಿಸಿವೆ. ಗಿರಿ ಬಹು ಎತ್ತರದಲ್ಲಿ ಬೆಳಗುತ್ತಿರುವ ಕನ್ನಡಿಗ. ಕನ್ನಡದಲ್ಲಿ 70ರ ದಶಕದಲ್ಲಿ ಗಿರಿ ಅವರು ರಚಿಸಿದ ‘ಗತಿಸ್ಥಿತಿ’ ಕಾದಂಬರಿ ದಶಕದ ಕಾದಂಬರಿ ಎಂದು ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿತು. ಇತ್ತೀಚಿನ ಅವರ ಇನ್ನೊಂದು ಕಾದಂಬರಿ ಮತ್ತು ಕೆಲವು ಕತೆಗಳನ್ನು ಒಳಗೊಂಡ ‘ಗತಿಸ್ಥಿತಿ ಮತ್ತೆಲ್ಲ’ ಓದುಗರ ಮೆಚ್ಚುಗೆ ಗಳಿಸಿದೆ. ಅವರ ಬರಲಿರುವ ಕಾವ್ಯ ಮೀಮಾಂಸೆಯನ್ನು ಕುರಿತ ಈ ಕೃತಿ ಅವರ ಮಹತ್ವದ ಕೃತಿ.

ಕನ್ನಡ ನಾಡಿನ ಹೊರಗಿದ್ದೂ ಕನ್ನಡವನ್ನು ಕಟ್ಟುವುದು ಮತ್ತು ಬೆಳೆಸುವುದು ಅಂದರೆ ಇದೇ ಅಲ್ಲವೇ?

‍ಲೇಖಕರು avadhi-sandhyarani

August 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: