ನಮ್ಮೂರಿನ ಹುಡುಗರು ಆಡಿದ 'ಜಿ.ಪಿ.ಎಲ್'

ಗೊರೂರ್ ಶಿವೇಶ್

ಭಾರತೀಯ ಕ್ರಿಕೆಟ್ ರಂಗದಲ್ಲಿರಲಿ, ವಿಶ್ವಕ್ರಿಕೆಟ್ ರಂಗದಲ್ಲೂ ಸಣ್ಣ ಎಲೆ ಅಲುಗಾಡಿದರೂ ಗೊರೂರೆಂಬ ಗೊರೂರಿನಲ್ಲಿ ದೊಡ್ಡ ಭೂಕಂಪವೆ ಆಗುತ್ತದೆ. ಇದಕ್ಕೆ ಗೊರೂರು ಅಣೆಕಟ್ಟು ನಿಮರ್ಿಸಲು ಆರಂಭವಾದಗಿನಿಂದ ಇಲ್ಲಿ ಬಂದು ನೆಲೆಯಾಗಿರುವ ‘ಅಫಿಷಿಯಲ್’ಗಳು ಮತ್ತು ಅವರ ಕ್ರಿಕೆಟ್ ಆಸಕ್ತಿಯೇ ಕಾರಣ. ಹೀಗಾಗಿ ಊರ ತುಂಬಾ ಹತ್ತಾರು ಕ್ರಿಕೆಟ್ ತಂಡಗಳು. ಅವರಿಗೆ ಬೇಕಾದ ವಿವಿಧ ದಜರ್ೆಯ ವಿವಿಧ ರೀತಿಯ, ವಿವಿಧ ಅಳತೆಯ ಕ್ರಿಕೆಟ್ ಕ್ರೀಡಾಂಗಣಗಳು ಇದ್ದು ವಾರದ ಕೊನೆಯಲ್ಲಿ ಒಬ್ಬೊಬ್ಬರು ಇತರರ ಜೊತೆ ಪಂದ್ಯವಾಡುತ್ತಾ, ಕೆಲವೊಮ್ಮೆ ಅಕ್ಷರಶಃ ಹೊಡೆದಾಡುತ್ತಾ ಗೊರೂರಿನಲ್ಲಿ ಕ್ರಿಕೆಟನ್ನು ಸಜೀವಾಗಿರಿಸಿದ್ದಾರೆ.
ಇಂಥಪ್ಪ ಗೊರೂರಿನಲ್ಲಿ ಐ.ಪಿ.ಎಲ್ ಮಾದರಿಯಲ್ಲಿ ‘ಜಿ.ಪಿ.ಎಲ್’ ಎಂಬ ‘ಗೊರೂರು ಪ್ರೀಮಿಯಂ ಲೀಗ್’ ನ್ನು ನಡೆಸಬೇಕೆಂದು ಹೊಳೆದದ್ದು ಬಿ.ಇ. ಪಾಸಾಗಿ ಟ.ಸಿ.ಎಸ್ ಕಂಪನಿಗೆ ಆಯ್ಕೆ ಆಗಿ ‘ರಿಸೆಷನ್’ ಕಾರಣ ಸದ್ಯ ಮನೆಯಲ್ಲೆ ಉಳಿದಿದ್ದ, ಇನ್ನೂ ಇಪ್ಪತ್ತೆರಡಕ್ಕೆ ತಲೆಗೂದಲು ಉದುರಿಹೋಗಿ ‘ಬುಂಡೆಕ್ಯಾತ’ಎಂದು ಖ್ಯಾತಿಯಾದ ಪ್ರಕಾಶನಿಗೆ. ಸಾಯಂಕಾಲ ಎಂ.ಡಿ.ಸಿ ಮ್ಯಾಚ್ (ಮಸಾಲೆ ದೋಸೆ, ಕಾಫಿ) ಆಡಿ ಫೀಲ್ಡಿನಲ್ಲಿ ಕುಳಿತಾಗ ಆತ ತನ್ನ ಯೋಜನೆಯನ್ನು ಹರಿಯಬಿಟ್ಟ. ಅದರ ಪ್ರಕಾರ ಊರಿನ ಪ್ರಮುಖ ಎಂಟು ತಂಡಗಳ ನಡುವೆ ಪಂದ್ಯಾಟ ನಡೆಯುವುದೆಂದು ಪ್ರತಿ ಎಂಟು ತಂಡಗಳಿಗೆ ಒಬ್ಬೊಬ್ಬ ಪ್ರಾಯೋಜಕರು ಇರತಕ್ಕದ್ದು ಎಂದು ತಿಳಿಸಿದ. ಅವರು ತಂಡದ ಖರ್ಚನ್ನು ಭರಿಸಬೇಕೆಂದು, ಜೊತೆಗೆ ಸ್ಥಳೀಯ ಏಳು ಜನರು ಆಡುವ ತಂಡದಲ್ಲಿ ಇರಬೇಕೆಂದು, ಬೇಕಿದ್ದರೆ ನಾಲ್ಕು ಜನ ಆಟಗಾರರನ್ನು ಬೇರೆ ಊರಿನಲ್ಲಿ ಇರುವ ನಮ್ಮೂರ ಇಲ್ಲವೆ ಬೇರೆ ಊರಿನ ಆಟಗಾರರನ್ನು ಫಾರಿನ್ ಆಟಗಾರರಿಂದ ಆಡಿಸಬಹುದೆಂದು ತಿಳಿಸಿದ. ತಲಾ ಹತ್ತು ಒವರ್ಗಳು ಲೀಗ್ನಲ್ಲಿ ಹಾಗೂ ಸಮಿಪೈನಲ್, ಫೈನಲ್ನಲ್ಲಿ ಹನ್ನೆರಡು ಒವರ್ಗಳು ಇರುವುದಾಗಿಯೂ, ಗೆದ್ದವರಿಗೆ ಹತ್ತು ಸಾವಿರದ ಒಂದು ರೂ ಮತ್ತು ಟ್ರೋಫಿ ನೀಡಬೇಕೆಂದು ತಿಳಿಸಿದಾಗ ಕುಳಿತ್ತಿದ್ದ ಆಟಗಾರರೆಲ್ಲ ರಣೋತ್ಸಾಹದಿಂದ ಸಮ್ಮತಿಸಿದರು. ತಂಡದ ಹರಾಜು ಭಾನುವಾರ ನಡೆಯುವುದೆಂದು ಅಧಿಕೃತವಾಗಿ ಪ್ರಕಾಶ ತಿಳಿಸಿದೊಡನೆ ಆಗಲೇ ಐ.ಪಿ.ಎಲ್ ಹರಾಜನ್ನು ಟಿ.ವಿಯಲ್ಲಿ ನೋಡಿದ ನಮ್ಮೂರ ಪಡ್ಡೆ ಹುಡುಗರ ಕಣ್ಣಿನಲ್ಲಿ ನಕ್ಷತ್ರಗಳು ಕುಣಿಯಲಾರಂಭಿಸಿದವು
ಭಾನುವಾರ ಬೆಳಿಗ್ಗೆ ಹರಾಜು ನಡೆಯುವ ಸ್ಥಳಕ್ಕೆ ನೂರಾರು ಹುಡುಗರು ಕುತೂಹಲಕ್ಕೆಂದು ಹತ್ತಾರು ಜನ ಕ್ರಿಕೆಟ್ ಆಸಕ್ತರು ನೆರೆದಿದ್ದರು. ಟೂನರ್ಿಗೆ ತಲಾ ಎರಡು ಸಾವಿರ ರೂ ಮುಂಗಡ ನೀಡಲು ಮುಂದೆ ಬಂದ ಮುಕುಂದು ಮಾಮ, ವಡ್ಡರಹಳ್ಳಿ ಪರಮೇಶ, ಹೊಳೆದಂಡೆ ಲಕ್ಷ್ಮಿಕಾಂತ ಜೋಯ್ಸರ ರಂಗಣ್ಣಿ, ಸಾಹಿತಿ ರಾಜು, ಕ್ಯಾಂಟೀನ್ ಕೃಷ್ಣ ಒಂದು ತಂಡದ ವಹಿಸಿಕೊಂಡಿರುವುದಾಗಿಯೂ ತಿಳಿಸಿ, ತಂಡಕ್ಕೊಂದು ಹೆಸರನ್ನು ಇಟ್ಟು, ತಲಾ ಎರಡು ಸಾವಿರ ನೀಡಿ ಹರಾಜಿಗೆ ನಿಂತರು.
‘ಜಂಪಿಂಗ್ ಬೌಲರ್’ ಎಂದು ಖ್ಯಾತನಾಗಿ ಎಸೆಯುವುದಕ್ಕಿಂತ ಜಂಪ್ ಮಾಡುವುದಕ್ಕೆ ಶ್ರಮ ವ್ಯಯಿಸುತ್ತಿದ್ದ. ಕಸ್ತೂರಿಯನ್ನು ಐನೂರೊಂದು ರೂಪಾಯಿಗೆ ಶ್ರೀನಾಥನು ಕೂಗಿದನು. ಸ್ಪಿನ್ಬೌಲಿಂಗ್ ಮಾಡಲು ನುಲಿಯುವುದೇ ಮುಖ್ಯವೆಂದು ತಿಳಿದಿದ್ದ ರಾಮು ಕೂಡಾ 501ರೂಗೆ ಹರಾಜಾದನು. ಬಂದ ಬಾಲ್ಗಳಿಗೆಲ್ಲಾ ಸೌದೆಯಂತೆ ಕಡಿಯುತ್ತಿದ್ದ ಸೌದೆ ಸತೀಶನನ್ನು ನೂರಾ ಐವತ್ತೊಂದು ರೂಗೆ ಖರೀದಿಸಿದರೆ ಪ್ರತಿ ಚಂಡನ್ನು ಜಾಂಟಿರೋಡ್ಸ್ನಂತೆ ಹಾರಿ ಹಾರಿ ಹಿಡಿಯುತ್ತಿದ್ದ ಶೆಟ್ಟರ ಹರಿ, ಬ್ಯಾಟನ್ನು ನೆಲದ ಮೇಲೆ ಕುಟ್ಟುತ್ತಿದ್ದ ಕುಟ್ಟಿ ಮಹೇಂದ್ರ ಮುಂತಾದವರು ಹರಾಜಿನಲ್ಲಿ ತಲಾ 101 ರೂಗಳಿಗೆ ಹರಾಜಾದರು. ಹಾಸನ, ಬೆಂಗಳೂರಿನಲ್ಲಿದ್ದ ಟೂರ್ನಮೆಂಟಿನ ಸಮಯದಲ್ಲಿ ಬಂದು ತಂಡ ಸೇರಿಕೊಳ್ಳುವುದಾಗಿ ಹೇಳಿದ್ದ ‘ಫಾರಿನ್’
ಆಟಗಾರರೂ ಹಾಗೂ ಅಳಿದುಳಿದವರನ್ನು ಸೇರಿಸಿ ಕ್ರಿಕೆಟ್ ತಂಡಗಳು ತಯಾರಾದವು.
ಕಳೆದವಾರದ ಸಂತೆಯಲ್ಲಿ ಈರುಳ್ಳಿಯನ್ನು ಯರ್ರಾಬಿರ್ರಿ ರೇಟಿಗೆ ಮಾರಾಟ ಮಾಡಿ ಲಾಭದ ಉತ್ಸಾಹದಲ್ಲಿದ್ದ ಮುಕುಂದಮಾಮ ತನ್ನ ತಂಡದವರಿಗೆಲ್ಲಾ ತನ್ನ ಪೋಟೋವಿರುವ ಟೀಶಟರ್್ನ್ನು ನೀಡುವುದಾಗಿ ತಿಳಿಸಿದನು. ಕೂಡಲೇ ತಮ್ಮ ಪೋಟೋವನ್ನು ಹಾಕಿಸುವುದಾದರೆ ತಾವು ಟೀಶಟರ್್ ಕೊಡಿಸುವುದಾಗಿ ಇತರೆ ಟೀಮಿನ ಮಾಲೀಕರು ತಿಳಿಸಿದರು.
ಬೆಳಗೆದ್ದು ನೋಡಿದರೆ ಬಸ್ ಸ್ಟಾಂಡ್ ಪಕ್ಕದಲ್ಲಿ ಮತ್ತು ಕ್ವಾರ್ಟಸ್ನ ಗೇಟ್ನಲ್ಲಿ ಬೃಹದಾಕಾರದ ಫ್ಲೆಕ್ಸ್ಗಳು, ಕಟೌಟ್ಗಳು ಎದ್ದು ನಿಂತಿದ್ದವು. ಮುಂದಿನ ತಾ.ಪಂ. ಸದಸ್ಯನಾಗಲು ಆಸೆ ಹೊಂದಿದ್ದ ವಡ್ಡರಹಳ್ಳಿ ಪರಮೇಶನು ಎಡಗೈಯಲ್ಲಿ ಮೊಬೈಲ್ ಬಲಗೈಯನ್ನು ಜನರೆಡೆಗೆ ಬೀಸುವ ಬಿಳಿ ಡ್ರೆಸ್ನಲ್ಲಿದ್ದ ಫ್ಲ್ಲೆಕ್ಸ್ ಹಾಕಿಸುವುದರ ಜೊತೆಗೆ ತಂಡದ ಸದಸ್ಯರ ಸಣ್ಣ ಸಣ್ಣ ಫೋಟೋಗಳನ್ನು ಹಾಕಿಸಿದ್ದನು. ಅದನ್ನು ಕಂಡ ಇತರೆ ಮಾಲೀಕರು ಕೈ ಕೈ ಹಿಸುಕುತ್ತಾ ಒಡನೆ ಹಾಸನಕ್ಕೆ ಹೋಗಿ ತಮ್ಮ ವಿವಿಧ ಭಂಗಿಯ ಫೋಟೋಗಳನ್ನು ಶಂಕರ್ ಫ್ಲೆಕ್ಸ್ನಲ್ಲಿ ಮೂಲಕ ಹಾಕಿಸಲಾಗಿ ಅವೆಲ್ಲವೂ ಮೇಲಿನ ಗೇಟಿನಿಂದ ಕೆಳಗಿನ ಗೇಟ್ರವರೆಗೆ ಪ್ರತಿಷ್ಠಾಪನೆಗೊಂಡವು.
ಇದೇ ಹೈಪನ್ನು ಬಳಸಿಕೊಂಡು ಸಿ.ಸಿ.ಜಿ. ತಂಡದವರು ಕ್ಲಾಸ್- 1ರಿಂದ ಕ್ಲಾಸ್-4 ಕಂಟ್ರಾಕ್ಟರ್ಗಳಲ್ಲದೆ ಡಿ.ಎಂ. ಎಂ.ಎಂ ಮುಂತಾಗಿ ಹತ್ತು ಹಲವು ಕಾಕಾಗಳು ನಮ್ಮೂರಿನಲ್ಲಿ ತೆರೆದಿದ್ದ ಅಂಗಡಿಗೆ ದಾಳಿ ಮಾಡಿ ತಲಾ ಐನೂರು, ಸಾವಿರ ಚಂದಾ ಎತ್ತದೆ ಬಿಡಲಿಲ್ಲ. ಮುಂದಿನ ಚುನಾವಣೆಗೆ ಎಂ.ಎಲ್.ಎ ಸ್ಥಾನಕ್ಕೆ ಆಕಾಂಕ್ಷೆಯಗಿದ್ದ ಅವ್ವೇರಹಳ್ಳಿ ರಾಜಪ್ಪನೂ ತನ್ನ ಕಟೌಟ್ ಹಾಕಿದರೆ ಐದುಸಾವಿರದ ಒಂದನ್ನು ನೀಡುವುದಾಗಿ ತಿಳಿಸಿದನು. ಈ ವಿಷಯ ತಿಳಿದ ಉಡುವಾರೆ ರಮೇಶನು ಉದ್ಘಾಟನೆ ತನ್ನ ಕೈಲಿ ಮಾಡಿಸಿದರೆ ಹತ್ತು ಸಾವಿರ ಬಹುಮಾನ ವಿತರಣೆಯನ್ನೂ ತನ್ನ ಕೈಯಲ್ಲೇ ಮಾಡಿಸಿದ್ದರೆ ಇಪ್ಪತ್ತು ಸಾವಿರ ನೀಡುವುದಾಗಿ ತಿಳಿಸಿದಾಗ ಉಬ್ಬಿ ಹೋದ ಹುಡುಗರು ‘ಹಾಗೆ ಆಗಲಣ್ಣ ನಿನ್ನದೆ ಎರಡೂ ಕಡೆ ಹೆಸರು’ ಎಂದು ಹೇಳಿ ಅಡ್ವಾನ್ಸ್ ಐದುಸಾವಿರ ಪಡೆದುಕೊಂಡು ಬಂದರು.

ಪಂದ್ಯದದಿನ ಪೋಲೀಸ್ಸ್ಟೇಷನ್ ಪಕ್ಕದಲ್ಲಿ ಬೃಹತ್ ಶಾಮಿಯಾನದ ಒಳಗೆ, ಆಸ್ಪತ್ರೆಯ ಕಾಂಪೌಂಡಿನ ಮೇಲೆ ಊರಿನ ಹಿರಿಕಿರಿಯರು, ಚಳ್ಳೆ-ಪಿಳ್ಳೆಗಳು ಕಿಕ್ಕಿರಿದು ಸೇರಿದ್ದರು. ತಮ್ಮ ಸ್ನೇಹಿತರ ಮೊಬೈಲ್ಕಾಲನ್ನು ಮನ್ನಿಸಿ ಒಂದು ಕಾಲದಲ್ಲಿ ಗೊರೂರಿನಲ್ಲಿದ್ದ ಈಗ ಪರಊರಿನಲ್ಲಿರುವ ಜನರು ಬಂದು ವಿವಿಧ ಟೀಂಗಳ ಮೇಲೆ ‘ಬೆಟ್’ ಕಟ್ಟಿ ಆಟಕ್ಕೆ ರಂಗೇರಿಸಿದರು.
‘ಚಿಯರ್ಸ್ ಗಲ್ಸರ್್’ಗಳಿಗಾಗಿ ಊರಲೆಲ್ಲಾ ಹುಡುಕಿ ಸಿಗದೆ ಸ್ಥಳೀಯ ಪ್ರೈಮರಿ ಶಾಲೆಯ ಹುಡುಗರ ಮನವೊಲಿಸಿ ಮಾವಿನ ಎಲೆಗಳನ್ನು ತಂದು ಹುಡುಗರ ಸೊಂಟದ ಸುತ್ತ ಸುತ್ತಿದ್ದಲ್ಲದೆ ಹಣೆಗೆ ಒಂದನ್ನು ಹಾವಿನ ರೂಪದಲ್ಲಿ ಕಟ್ಟಿ ‘ನಾಗಿಣಿ’ ಚಿತ್ರದ ನಾಯಕನಂತೆ ಚಿಯರ್ಬಾಯ್ಸ್ಗಳು ತಯಾರಾದರು. ಬೌಂಡರಿ, ಸಿಕ್ಸರ್ ಹೊಡೆದಾಗ ಕುಣಿಯಲು ತಲಾ ಒಂದರಂತೆ ಫೈವ್ಸ್ಟಾರ್ ಚಾಕಲೇಟ್ ನೀಡುವುದಾಗಿ ತಿಳಿಸಿ ಫೀಲ್ಡಿನ ಬದಿಯಲ್ಲಿ ನಿಲ್ಲಿಸಲಾಯಿತು.
ವೀಕ್ಷಕವಿವರಣೆ ನೀಡಲು ಕನ್ನಡದಲ್ಲಿ ಚನ್ನರಾಯಪಟ್ಟಣದ ಅಪರಮಂಜು, ಇಂಗ್ಲೀಷ್ಗೆ ಶಿವಕುಮಾರನು ಬಂದಿದ್ದರು. ಶಿವಕುಮಾರನ ವೀಕ್ಷಕ ವಿವರಣೆಯು ಕಮ್ಸ್ ಅಂಡ್ ಬೌಲ್ಸ್. . ಆಫ್ ಅಂಡ್ ಮಿಡ್ಲ್ ಸ್ಟಿಕ್. . ಡ್ರೈವ್ಸ್ ದ ಬಾಲ್. . ಫೈನ್ಶಾಟ್ . . ಫೋರ್ರನ್ಸ್ ಇಷ್ಟರಲ್ಲೆ ಗಿರಕಿ ಹೊಡೆದರೆ ಅಪರಮಂಜ ‘ಮಸೀದಿ ತುದಿಯಿಂದ ವಡೆ ವಸಂತ ಓಡಿಬಂದು . . ವೇಗವನ್ನು ಗಳಿಸಿಕೊಳ್ಳುತ್ತಾ. . . ನಿಣರ್ಾಯಕನನ್ನು ದಾಟಿ ಎಸೆದ ಚೆಂಡು . . ಮಧ್ಯದ ಗೂಟಕ್ಕೆ ನೇರವಾಗಿ ಬಂದು ಮೇಲೆಗರಿದ ಚಂಡು . . ದಾಂಡಿಗನಾದ ರಂಬೆ ರಮೇಶನು ಆ ಚೆಂಡನ್ನು ಮೈಬಗ್ಗಿಸಿ ತಲೆತಗ್ಗಿಸಿ ಚಂಡಿನ ಗತಿಯನ್ನು ಗುರುತಿಸಿ. . ಆಡದೆ ಬಿಡಲು ಗೂಟರಕ್ಷಕನಾದ ಪುರಿಪರಮೇಶನು ಆ ಚಂಡನ್ನು ಭಕ್ತಿಗೌರವದಿಂದ ಸ್ವೀಕರಿಸಿ ಚೆಂಡು ಎಸತಗಾರನಿಗೆ ನೀಡಿದನು’ ಎನ್ನುತ್ತಾ ಅಚ್ಚ ಕನ್ನಡದ ಸ್ವಚ್ಛ ವೀಕ್ಷಕ ವಿವರಣೆಯಿಂದ ವೀಕ್ಷಕರ ಮನೆಗೆದ್ದನು.
ಹಷರ್ೋದ್ಗಾರಗಳ ನಡುವೆ ಪಂದ್ಯಗಳು ಸಾಗಿದವು. ನಮ್ಮೂರ ಚಿಳ್ಳೆ-ಪಿಳ್ಳೆಗಳೆಲ್ಲಾ ಮೈದಾನದಲ್ಲಿ ಸೇರಿ ಮಧ್ಯಾಹ್ನ ಮನೆಗೆ ಊಟಕ್ಕೆ ಹೋಗದ ಕಾರಣ ಅವುಗಳನ್ನು ಹುಡುಕಿಕೊಂಡು ಬಂದ ಅವರ ಬಂಧುಗಳು ಮೈದಾನದ ಸುತ್ತ ಸುತ್ತುತ್ತಿರಲು ಜನವೋ ಜನ. ನಮ್ಮೂರ ಬೀದಿಗಳಲ್ಲಿ ಅಬ್ಬೆಪಾರಿಗಳಂತೆ ತಿರುಗುತ್ತಿದ್ದ ಗೆದ್ಲು ನಾಗ, ಹುರುಕ್ಲು ಮಂಜ, ನಿದ್ದೆನಾಣಿಯರು ಎರಡುಸಿಕ್ಸರ್ ಹೊಡೆದ ಕಾರಣಕ್ಕೊ ಇಲ್ಲವೆ ಮೇಲೆ ಹಾರಿ ಹಿಡಿದ ಕ್ಯಾಚ್ನಿಂದಾಗಿ ಹೀರೋಗಳಾಗಿ ಮಿಂಚುತ್ತಿದ್ದರು.
ಸಂಜೆಯಾಗುವಷ್ಟರಲ್ಲಿ ಲೀಗ್ ಪಂದ್ಯಗಳು ಮುಗಿದು ಲಕ್ಷ್ಮಿಕಾಂತನ ಲಕ್ಕಿ ಇಲೆವೆನ್ ರೊಡ್ಡೆ ಕೃಷ್ಣನ ನಾಯಕತ್ವದ ರೊಡ್ಡೆ ರಾಯಲ್ಸ್, ಪೇಟೆ ಬೀದಿಯ ಹುಡುಗರೇ ಇದ್ದ ಸಾಹಿತಿ ರಾಜುವಿನ ಗೊರೂರು ವಾರಿಯರ್ಸ್, ತಂಡದಲ್ಲಿ ಹೆಚ್ಚು ಮಂದಿ ‘ಎಣ್ಣೆ ಪಾಟರ್ಿ’ಗಳೆ ತುಂಬಿಕೊಂಡಿದ್ದ ‘ಕ್ವಾಟ್ರಸ್ ನೈಟ್ ರೈಡಸರ್್’ ಸೆಮಿಫೈನಲ್ ತಲುಪಿದವು.
ಭಾನುವಾರ ಅಂತಿಮ ಹಣಾಹಣಿ ನಡೆಯುವ ದಿನ. ಅದೇ ದಿನ ಸಂತೆಯೂ ಇದ್ದ ಕಾರಣ ಜನವೊ ಜನ. ನೋಡಲು ಬಂದ ಕುತೂಹಲಿಗಳು ಪರಸ್ಪರ ಚಚರ್ೆಯ ಜೊತೆಗೆ ಐದು-ಹತ್ತರಿಂದ ಪ್ರಾರಂಭಿಸಿ ನೂರು ರೂಪಾಯಿಗಳವರೆಗೆ ಬೆಟ್ಟಿಂಗ್ ಕಟ್ಟುತ್ತಿದ್ದರು. ಕ್ವಾಟ್ರಸ್ನ ‘ಅಫಿಶಿಯಲ್’ ಮಕ್ಕಳು ಜೊತೆಗೆ ಬೆಂಗಳೂರಿನಿಂದ ಬಂದಿದ್ದ ‘ಟಾಪ್ ಪ್ಲೆಯರ್’ಗಳು ಸೇರಿ ಕ್ವಾಟ್ರಸ್ ನೈಟ್ ರೈಡರ್ಸ ಪ್ರಬಲ ತಂಡವಾಗಿದ್ದು ಲೀಗ್ ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದ ಪ್ರಯುಕ್ತ ಆ ತಂಡದ ಪರವಾಗಿ ಬೆಟ್ಟಿಂಗ್ ಜೋರಾಗಿ ನಡೆದಿತ್ತು.
ಮೊದಲ ಪಂದ್ಯ ರೊಡ್ಡೆ ರಾಯಲ್ಸ್ ತಂಡ ಸಾಹಿತಿ ಗೊರೂರು ವಾರಿಯರ್ಸ್ ವಿರುದ್ಧ ಗೆದ್ದು ಫೈನಲ್ಗೆ ಬಂತು. ಇನ್ನು ‘ಲಕ್ಕಿ ಇಲೆಯನ್ಸ್’ ಮೇಲೆ ‘ಕ್ವಾಟ್ರಸ್ ನೈಟ್ ರೈಡಸರ್್’ ಸುಲಭವಾಗಿ ಗೆದ್ದು ಫೈನಲ್ಗೆ ಬರುವರೆಂದು ಮಾತಾಡಿಕೊಳ್ಳತೊಡಗಿದರು. ಅದರಂತೆ ಟಾಸ್ ಗೆದು ಬ್ಯಾಟ್ ಮಾಡಿದ ಲಕ್ಕಿ ಇಲೆಯನ್ಸ್ ತಂಡ ಹನ್ನೆರಡು ಒವರ್ಗಳಲ್ಲಿ ಮುಕ್ಕುರಿದು ನಲವತ್ತೆಂಟು ರನ್ ಹೆೊಡೆದಾಗ ನೈಟ್ ರೈಡಸರ್್ ಫೈನಲ್ ತಲಪೇಬಿಟ್ಟರೆಂದು ಲಕ್ಕಿ ಇಲೆವೆನ್ ಪರ ಬೆಟ್ ತಗೊಂಡವರ ಮುಖ ವಿವರ್ಣಗೊಂಡಿತು.
ನೈಟ್ ರೈಡಸರ್್ ಇನ್ನಿಂಗ್ಸ್ ಪ್ರಾರಂಭವಾಯಿತು. ಮೊದಲೆರಡು ಒವರ್ನಲ್ಲಿ ಹನ್ನೆರಡು ರನ್ ಬಂತು. ಆದರೆ ನಂತರ ನಡೆದಿದ್ದೆ ಬೇರೆ. ಕಡ್ಡಿಮಹೇಶನು ಬಾರಿ ಹೊಡೆತ ಹೊಡೆಯಲು ಹೋಗಿ ಬೌಂಡರಿಯಲ್ಲಿ ಕ್ಯಾಚ್ ಕೊಟ್ಟು ಔಟಾದೊಡನೆ ಮುಂದೆ ಬಂದವರೆಲ್ಲ ಪೆವಲಿಯನ್ನಿಂದ ಗ್ರೌಂಡಿಗೆ, ನಂತರ ಪೆವಲಿಯನ್ಗೆ ಏನೊ ಬಿಟ್ಟ್ಟವರಂತೆ ರಭಸದಲ್ಲಿ ಹಿಂತಿರುಗುತ್ತಾ ಪರೇಡ್ ನಡೆಸಿ ಮುವತ್ತೆಂಟು ರನ್ನಿಗೆ ಆಲೌಟ್ ಆದರು. ಲಕ್ಕಿ ಇಲೆವೆನ್ ತಂಡದವರು ಗೆದ್ದ ಖುಷಿಯಲ್ಲಿ ಮೈದಾನದ ಸುತ್ತ ಕುಣಿಯಲಾರಂಭಿಸಿದರು.
ಆದರೆ ಇತ್ತ ಪೆವಲಿಯನ್ನಲ್ಲಿ ದೊಡ್ಡ ಗಲಾಟೆ. ‘ಪಂದ್ಯ ಫಿಕ್ಸಿಂಗ್ ಆಗಿದೆ. ಮ್ಯಾಚ್ ನಿಲ್ಲಿಸಿ’ ಎಂಬ ಕೂಗಾಟ ಜೋರಾಯಿತು. ‘ಅಂಪೈರ್ ತೀಮರ್ಾನವೇ ಅಂತಿಮ. ಯಾರೂ ಗಲಾಟೆ ಮಾಡಬಾರದು’ ವೀಕ್ಷಕ ವಿವರಣೆ ನೀಡುತ್ತಿದ್ದವರ ಮೇಲೆ ಒಬ್ಬಾತ ದಡಿ ತೆಗೆದುಕೊಂಡು ಬಂದು ಬಡಿಯಲು ಮುಂದಾದಾಗ ‘ಹಾಯ್ ಶಿವ, ಹಾಯ್ ಮಂಜ’ ಎಂದು ಕ್ಷಣಮಾತ್ರದಲ್ಲಿ ಅವರು ಮಾಯವಾದರು.
ಇತ್ತ ಮೊಬೈಲ್ ಹಿಡಿದು ರಂಗಣ್ಣಿಯು ಜನರಿಗೆ ಏನನ್ನೋ ತೋರಿಸುತ್ತಿದ್ದಾನೆ. ಅದರಲ್ಲಿ ನೋಡಿದರೆ ‘ಶರಾವತಿ ಬಾರ್’ನಲ್ಲಿ ‘ಮ್ಯಾಚ್ ಸೋತರೆ ಒಂದು ವಾರ ತಿನ್ನೊವಷ್ಟು ಬಾಡು, ಕುಡಿಯೋವಷ್ಟು ಎಣ್ಣೆ’ ಆಫರ್ ನೀಡುತ್ತಿದ್ದಾನೆ, ಲಕ್ಷ್ಮಿಕಾಂತ್. ‘ಆಗಲಿ ನೋಡೋಣ?’ ಎನ್ನುತ್ತಿದ್ದಾನೆ ಒಬ್ಬಾತ. ‘ನೋಡೋಣ ಎನ್ಬಂತು ಪಕ್ಕಾ’ ಎನ್ನುತ್ತಿದ್ದಾನೆ ಇನ್ನೊಬ್ಬ.
ಗುಂಡಿಗೆ ತುಂಡಿಗೆ ಫಿಕ್ಸ್ ಅದರೆಂಬ ಮಾತು ಹರಡಿ ಮೈದಾನಕ್ಕೆ ಜನ ನುಗ್ಗಿದರು. ಅವರಲ್ಲಿ ಹಣಕಳೆದುಕೊಂಡವರು ವಿಕೇಟನ್ನು ಕಿತ್ತು ಆಟಗಾರರ ಮೇಲೆ ಹಲ್ಲೆಗೆ ಸಿದ್ದರಾದರು. ಆದರೆ ಆಟಗಾರರು ಎಲ್ಲಿ ?. ಅವರೆಲ್ಲಾ ಮಾಯವಾಗಿದ್ದರು. ಜನರ ಆಕ್ರೋಶ ಅಲ್ಲಿದ್ದ ಫ್ಲೆಕ್ಸ್ ಮೇಲೆ ಬಿದ್ದಾಗ ಅವು ಚೂರುಚೂರಾದವು. ವಿಷಯ ಪಕ್ಕದ ಪೋಲಿಸ್ ಸ್ಟೇಷನ್ಗೆ ಮುಟ್ಟಿ ಅವರು ಮೈದಾನಕ್ಕೆ ನುಗ್ಗಿ ದೊಣ್ಣೆ ಬೀಸಲು ಪ್ರಾರಂಭಿಸಿದೊಡನೆ ಅಲ್ಲಿದ್ದ ಚಿಳ್ಳೆಪಿಳ್ಳೆಗಳೆಲ್ಲ ಸಮೇತ ಇದ್ದವರೆಲ್ಲಾ ದಿಕ್ಕಾಪಾಲಾಗಿ ಓಡಲು ಕ್ಷಣಮಾತ್ರದಲ್ಲಿ ಮೈದಾನ ಖಾಲಿಯಾಗಿ ಘಟನೆಗೆ ಸಾಕ್ಷಿಯಾಗಿ ಚಪ್ಪಲಿಗಳು ಮೈದಾನದ ಸುತ್ತಾ ಹರಡಿದ್ದವು.
ಪಂದ್ಯ ಮುಗಿದ ಮೇಲೆ ಪಂದ್ಯದ ಕಾರಣಕರ್ತ ಪ್ರಕಾಶ ಎದುರಾದ. ‘ಇದೇನೋ ಹೀಗಾಯ್ತು’ ಎಂದೆ. ಅದಕ್ಕೆ ‘ಬಡ್ಡಿಮಕ್ಳು ಎಲ್ಲಾ ನಮ್ಮುಡುಗ್ರೆ ಮಾಡಿದ್ದು. ಟೂನರ್್ಮೆಂಟ್ಗಂಥ ಐವತ್ತು-ಅರವತ್ತು ಸಾವಿರ ಕಲೆಕ್ಟ್ ಮಾಡಿದ್ರು. ದಿನಾ ಹತ್ತು, ಹನ್ನೆರಡು ಜನ ಹಾಸನ, ಅರಕಲಗೂಡು ಅಂತ ಸುತ್ತಿ ಡಾಬಾ, ಬಾರ್ ಸೇರಿ ದುಡ್ಡು ಕಳುದ್ರು. ಕೊನೆಗೆ ಟ್ರೋಫಿ ಮತ್ತು ಗೆದ್ದೊರ್ಗೆ ಕೊಡ್ಬೇಕಾದ ದುಡ್ಡಿಗೆ ಎನೋಪ್ಪ ಮಾಡೋದು ಅಂತಿದ್ರು. ಅದಕ್ಕೆ ಸರಿಯಾಗಿ ಮ್ಯಾಚ್ ಫಿಕ್ಸಿಂಗ್ ಸೇರಿ ಟೂರ್ನ್ ಮೆಂಟ್  ಮಟಾಷ್ ಮಾಡಿ, ಮುಂಡಾ ಮೋಚ್ಸಿದ್ರು’ ಎಂದ.

‍ಲೇಖಕರು G

May 26, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: