ನನ್ನ ಸಂಪಿಗೆ ಮರವೇ..

 

 

nempe-devaraj

ನೆಂಪೆ ದೇವರಾಜ್ 

ತೀರ್ಥಹಳ್ಳಿಯ ದಟ್ಟಾರಣ್ಯ, ಅರಣ್ಯದೊಳಗಿನ ಜೀವ ವೈವಿದ್ಯ, ಸಮಾಜವಾದ, ಗೇಣಿ ವಿರೋಧಿ ಹೋರಾಟ, ತೀರ್ಥಹಳ್ಳಿಗೆ ಬಂದ ಎರಡು ಜ್ಞಾನಪೀಠ ಪ್ರಶಸ್ತಿ, ಮೂರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇವೆಲ್ಲ ತೀರ್ಥಹಳ್ಳಿ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆಯಲು ಕಾರಣವಾದ ಅಂಶಗಳು ಎಂಬುದರಲ್ಲಿ ಎರಡು ಮಾತಿಲ್ಲ.

ಮೌಲ್ಯಯುತ ಹಾಗೂ ಪ್ರಮಾಣಿಕ ರಾಜಕಾರಣಕ್ಕೆ ಕಡಿದಾಳು ಮಂಜಪ್ಪ, ಸಮ ಸಮಾಜದ ಹೋರಾಟಕ್ಕೆ ಶಾಂತವೇರಿ ಗೋಪಾಲಗೌಡರನ್ನು ನೆನಪು ಮಾಡುವುದರ ಮೊದಲು ತೀರ್ಥಹಳ್ಳಿ ಪಟ್ಟಣದ ಬಗ್ಗೆ ಯೋಚಿಸೋಣ.

malenadu-dairy-promoಮೊನ್ನೆ ಮೊನ್ನೆಯವರೆಗೆ ಸುಮ್ಮನೆ ಬೋಂಜಾಯ್ ತರಹದ ಬೆಳವಣಿಗೆಯಲ್ಲಿ ಮಗ್ನವಾಗಿದ್ದ ತೀರ್ಥಹಳ್ಳಿ ಭೌದ್ದಿಕವಾಗಿ ಮತ್ತು ಭೌತಿಕವಾಗಿ ಎರಡರಲ್ಲೂ ನೋಡ ನೋಡುತ್ತಿರುವಂತೆ ಬಾರೀ ಬಲಾವಣೆಯತ್ತ ಸಾಗುತ್ತಾ ತನ್ನ ಮೇಲೆ ಕಾಂಕ್ರೀಟ್ ತಾರಪಾಲನ್ನೇ ಹೊದ್ದುಕೊಳ್ಳುತ್ತಿದೆಯೇನೋ ಎನಿಸುತ್ತಿದೆ. ಹೆಮ್ಮೆಯಿಂದ ಇದನ್ನು ತೋರಿಸಿಕೊಳ್ಳುತ್ತಿದೆ. ಮತ್ತು ಬೀಗುತ್ತಿದೆ.

ಕೇವಲ ಒಂದೂವರೆ ವರ್ಷಗಳ ಹಿಂದೆ ಆಜಾದ್ ರಸ್ತೆಯಲ್ಲಿದ್ದ ನಾಡ ಹೆಂಚಿನ ಅಂಗಡಿ ಮುಂಗಟ್ಟುಗಳೂ, ಹೆಂಚುಗಳ ಮೇಲೆ ಬೆಳೆದಿದ್ದ ಹಸಿರಾದ ಹುಲ್ಲೂ ಮಂಗ ಮಾಯವಾಗಿ ಬಹುಮಹಡಿ ಕಟ್ಟಡಗಳಿಂದ ತುಂಬಿಕೊಂಡಿರುವುದು ಮಾತ್ರವಲ್ಲದೆ ರಸ್ತೆ ಅಗಲೀಕರಣಗೊಂಡು ಡಬಲ್ ಸಿಮೆಂಟು ರಸ್ತೆ ಬೆರಗುಗಣ್ಣುಗಳಿಂದ ಸೆಳೆಯುತ್ತಿದೆ. ಇಕ್ಕಟ್ಟಾದ ರಸ್ತೆಯಲ್ಲಿ ಕೊಡೆ ಹಿಡಿದುಕೊಂಡು ಹಿಂಡು-ಹಿಂಡಾಗಿ ಬಳುಕುತ್ತಾ ಬುರ್ರೆಂದು ಹೋಗುವ ವಾಹನಗಳ ಮೇಲೆ ಭಯ ಮಿಶ್ರಿತ ಕಣ್ಣುಗಳರಳಿಸಿ ಸಣ್ಣ ಕಿರುನಗೆಯ ಬೀರಿ ಬಣ್ಣದ ಲಂಗಗಳನ್ನು ಒಂಚೂರು ಮಡಿದುಕೊಂಡು ಹೋಗುತ್ತಿದ್ದ ಹುಡುಗಿಯರ ಗುಂಪು ಅಗಲೀಕರಣಗೊಂಡ ರಸ್ತೆಯಲ್ಲಿ ನಿರಾತಂಕವಾಗಿ ಓಡಾಡುವಂತೆ ಕಾಣಿಸುತ್ತಿದೆ.

ಮಹಾತ್ಮಾ ಗಾಂಧಿಯವರು ಬಂದು ಭಾಷಣ ಮಾಡಿದ್ದ ಹಳೇ ಸಿನಿಮಾ ಥಿಯೇಟರ್ ನೆಲಸಮಗೊಂಡು ಅಲ್ಲೊಂದು ಬೃಹತ್ತಾದ ಸರ್ಕಲ್ ನ ನಿರ್ಮಾಣ ಈ ಪುಟ್ಟ ಪಟ್ಟಣ ಹೋಗುತ್ತಿರುವ ನಡೆಗಳನ್ನು ಸಂಕೇತಿಸುವಂತಿದೆ. ಪಟ್ಟಣದ ಮಧ್ಯದಲ್ಲೇ ಇದ್ದ ಗಾಂಧಿ ಚೌಕ ಮಾಯವಾಗಿದ್ದು ಮಾತ್ರವಲ್ಲ ನಾಲ್ಕು ಮುಖದ ಆಶೋಕ ಸ್ಥಂಭದ ಎದುರು ನಡೆದ ಅನೇಕ ಸಭೆಗಳು, ಹೋರಾಟಗಳು ನಡೆದದ್ದಾದರೂ ಎಲ್ಲಿ? ಯಾವಾಗ? ಎಂದು ಅಲ್ಲಿ ನಿಂತಿರುವ ವಾಹನಗಳು, ಕಾಂಕ್ರೀಟ್ ರಸ್ತೆಯೊಂದಿಗೆ ಸೇರಿ ಪ್ರಶ್ನೆಗಳನ್ನು ಎಸೆಯುತ್ತಿವೆ.

ರಸ್ತೆ ಅಗಲೀಕರಣಕ್ಕೆ ಎರಡು ವರ್ಷ ಮುಂಚೆಯೇ ತಾಲೂಕು ಕಛೇರಿಗೆ ಹೋಗುವ ಒಂದು ಬದಿಯ ದಾರಿಯಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಾ ಬೃಹದಾಕಾರವಾಗಿ ಬೆಳೆದಿದ್ದ ನಾಲ್ಕು ತಾಳೆ ಜಾತಿಯ ಮರಗಳು ಮಿನಿ ವಿಧಾನಸೌಧದ ಕಾಮಗಾರಿ ನಿರ್ವಹಿಸಲೋಸುಗ ಅದಾವ ಮುನ್ಸೂಚನೆಗಳನ್ನು ಪಡೆಯದೆ ನೆಲಕ್ಕುರುಳಿದ್ದು ಹಳೆಯ ಕತೆ.

ತಾಲೂಕು ಪಂಚಾಯ್ತಿ ಎದುರಿದ್ದ ಬಾವಿಕಟ್ಟೆಯೊಂದು ಸಣ್ಣಪುಟ್ಟ ಸಭೆಗಳ ಪೂರ್ವಭಾವಿ ಮಾತುಗಳಿಗೆ ವೇದಿಕೆಯಾಗಿತ್ತು. ಅದರ ಕೈಪಿಡಿಗಳಿಗೆ ಬೆನ್ನುಕೊಟ್ಟು ಪ್ರಚಲಿತ ಹತ್ತಾರು ವಿಷಯಗಳನ್ನು ಮಾತಾಡಿ ಮನೆಗೆ ಹೋಗುತ್ತಿದ್ದುದು ಪ್ರತಿದಿನದ ಕಾಯಕವಾಗಿತ್ತು. ಈ ಬಾವಿಯೂ ಒಂದು ದಿನ ಜೆಸಿಬಿಯ ಅಗಲ ಬಾಯಿಗೆ ಯಾವುದೇ ಪ್ರತಿರೋಧ ತೋರದೆ ಸೇರಿಕೊಂಡು ಅಸ್ತಂಗತವಾಯಿತು.

ತಾಲೂಕು ಕಛೇರಿಯ ಹಳೆ ಕಟ್ಟಡ ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡಿತ್ತು. ಸೊಗಸಾದ ಹೆಂಚುಗಳು ಹಾಗೂ ಉಪಯೋಗಿಸಿದ್ದ ಗಟ್ಟಿ ಮುಟ್ಟಾದ ಮರಗಳ ಕಾರಣಕ್ಕೆ ಅಂದಿನ ಕಾಲದ ನಿರ್ಮಾಣಗಳನ್ನು ಕೆಲವರಾದರೂ ಹೆಮ್ಮೆಯಿಂದ ಮೆಲುಕು ಹಾಕುತ್ತಿದ್ದರು.

roadಈ ಕಟ್ಟಡವನ್ನು ಸಂಪೂರ್ಣ ನಾಶಗೊಳಿಸದೆ ಹಳೆಯ ಕುರುಹಾಗಿ ಮುಂಭಾಗ ಮಾತ್ರ ಉಳಿಯಲು ಕಾರಣ ಸಂಪಿಗೆ ಮರದ ನೆರಳಲ್ಲಿ ನಡೆಸಿದ್ದ ಹೋರಾಟಗಾರರ ಜೀವಂತಿಕೆ ಇದ್ದರೂ ಇರಬಹುದು. ಹಳೆಯ ಪೊಲೀಸ್ ಠಾಣೆಯ ಎದುರಿರುವ ಈ ತಾಲೂಕು ಕಛೇರಿ ಬಹುತೇಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿತ್ತು. ಇದೀಗ ಈಗಲೋ ಅಗಲೋ ಕೆಡವಿಸಿಕೊಳ್ಳುವ ಭಯಭೀತ ಕಣ್ಣುಗಳೊಂದಿಗೆ ನಿಂತುಕೊಂಡಿದೆ.

ಬೀಳಿಸಿಕೊಳ್ಳಲು ತಯಾರಾಗಿರುವ ಕಟ್ಟಡದ ಎದುರು ಬೃಹದಾಕಾರವಾಗಿ ಬೆಳೆದು ನಿಂತಿರುವ ಸಂಪಿಗೆ ಮರದ ನೆರಳಲ್ಲಿ ತಮ್ಮ ಮಫ್ಲರಿನಿಂದ ಬೆವರೊರೆಸಿಕೊಳ್ಳುತ್ತಾ ದಿವಂಗತ ಶಾಂತವೇರಿ ಗೋಪಾಲಗೌಡರು ನಡೆಸಿದ ಬಹುತೇಕ ಪ್ರತಿಭಟನೆ ಮತ್ತು ಅವರ ಬಾವಪೂರ್ಣ ಕೆಚ್ಚೆದೆಯ ಭಾಷಣಗಳು ಜನರನ್ನು ರೋಮಾಂಚನಗೊಳಿಸುತ್ತಿದ್ದುದರ ಬಗ್ಗೆ ಇನ್ನೂ ಅಲ್ಲಲ್ಲಿ ಉಳಿದ ವಯೋವೃದ್ದ ಸಮಾಜವಾದಿಗಳು ಮೆಲುಕು ಹಾಕುವುದನ್ನು ಅವರದೇ ಮೆಲುದನಿಯಲ್ಲಿ ಕೇಳಿ ತಿಳಿದುಕೊಳ್ಳಬಹುದು.

ಎಂಬತ್ತರ ದಶಕದಲ್ಲಿ ಪ್ರೊ. ಎಂ.ಡಿ ನಂಜುಂಡಸ್ವಾಮಿಯವರು ಸೇರಿದ್ದ ಸಾವಿರಾರು ರೈತರನ್ನು ತೀವ್ರವಾಗಿ ಪ್ರಚೋದನೆ ಮತ್ತು ವಿಚಾರಕ್ಕೆ ಹಚ್ಚಿದ್ದ ಪರಿಗೆ ಇಂದಿಗೂ ಈ ಸಂಪಿಗೆ ಮರ ಸಾಕ್ಷಿಯಾಗಿ ಉಳಿದಿದೆ. ಲಾಗಾಯ್ತಿನಿಂದ ಎದುರಿದ್ದ ಪೊಲೀಸ್ ಠಾಣೆ ಭಯಭೀತಗೊಳಿಸುತ್ತಿದ್ದುಕ್ಕೆ ತಿಲಾಂಜಲಿ ಕೊಟ್ಟದ್ದು ಈ ನಂಜುಂಡಸ್ವಾಮಿಯವರ ಭಾಷಣ. ಎದುರುಗಡೆಯ ಠಾಣೆಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬ ರೈತರ ಮನೆ-ಮಠ ಜಪ್ತಿ ಮಾಡುವ ಸಂದರ್ಭದಲ್ಲಿ ವರ್ತಿಸುತ್ತಿದ ರೀತಿಯನ್ನು ವಿರೋಧಿಸಿ ನಡೆದ ಈ ಪ್ರತಿಭಟನೆಯ ಕಾವು ಎರಡು ದಶಕಗಳ ಕಾಲ ತಾಲೂಕಿನಾದ್ಯಂತ ಹಾಗೇ ಉಳಿದುಕೊಳ್ಳಲು ಕಾರಣವಾಗಲು ಈ ಭಾಷಣ ಕಾರಣವಾಯಿತು ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ನೂರಾರು ಹೋರಾಟಗಳಿಗೆ ನೆರಳಾಗಿ, ಸಾವಿರಾರು ಮಹಿಳೆಯರ ತಲೆಗೆ ಹೂವಾಗಿ ಪರಿಮಳ ಬೀರಿದ ಸಂಪಿಗೆ ಮರಕ್ಕೆ ಕೊಡಲಿ ಏಟುಗಳು ಬಿದ್ದು ಈ ಜಾಗ ಕಾಂಕ್ರೀಟುಮಯವಾಗುವ ಕಾಲದ ದೂರ ಕೂಗಳತೆಯಲ್ಲಿ ಇದ್ದರೂ ಇರಬಹುದು.

1982 ರಲ್ಲಿ ಬಿದ್ದ ಮಹಾಮಳೆಯಲ್ಲಿ ಸಂತ್ರಸ್ಥರಾದ ರೈತರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಎಸಗಿದ ಅಧಿಕಾರಿಗಳ ಬೇಜವಾಬ್ದಾರಿಯನ್ನು ವಿರೋಧಿಸಿ ಕಡಿದಾಳು ಶಾಮಣ್ಣನವರು ನಡೆಸಿದ ಉಪವಾಸ ಸತ್ಯಾಗ್ರಹ ತನ್ನ ವಿಶೇಷತೆಗಳ ಮೂಲಕ ಇಡೀ ರಾಜ್ಯದ ಗಮನ ಸೆಳೆಯಿತು. ಶಾಮಣ್ಣನವರಿಗೆ ಬೆಂಬಲಾರ್ಥವಾಗಿ ತಾಲೂಕಿನ ಮೂಲೆ ಮೂಲೆಯಿಂದ ಆಗಮಿಸಿದ ರೈತರು ತಾಲೂಕು ಕಚೇರಿ ಎದುರು ಗಂಜಿ ತಯಾರಿಸಿ ಒಣ ಮೀನು ಸುಟ್ಟುಕೊಂಡು ಉಣ್ಣುತ್ತಾ ಒಣ ಮೀನಿನ ವಾಸನೆಯ ಮೂಲಕ ಅಧಿಕಾರಿಗಳಿಗೆ ಪ್ರತಿರೋಧ ಸೂಚಿಸಿದ್ದು ಈ ಸಂಪಿಗೆ ಮರದ ನೆರಳ ಕೆಳಗೆ.

ಸಭೆ ನಡೆಸಲು ಜಾಗವೇ ಇಲ್ಲದಿದ್ದ ಕಾಲದಲ್ಲಿ ಮತ್ತು ಹೋರಾಟಗಾರರು ಹೈಟೆಕ್ಕುಗಳಾಗಿ ಪರಿವರ್ತನೆಯಾಗದಿದ್ದಾಗ ಸಂಪಿಗೆ ಮರ ನೂರಾರು ಸಣ್ಣ ಪುಟ್ಟ ಚರ್ಚೆಗಳಿಗೆ ವೇದಿಕೆಯಾಗಿದ್ದು ಬಹಳಷ್ಟು ಸಲ. 365 ದಿನಗಳ ಕಾಲವೂ ರಾಶಿ ಹೂಗಳನ್ನು ನೀಡುತ್ತಾ ಪ್ರತಿ ದಿನವನ್ನೂ ಉಲ್ಲಸಿತಗೊಳಿಸುವ ಸಂಪಿಗೆ ಮರಕ್ಕೆ ಮತ್ತೆ ಮುಕ್ತಿ ಕಾಣಿಸಬೇಕೆಂಬ ಚರ್ಚೆಗಳು

Panduranga Pandit's tea shop. Express photo by ANIRUDDHA CHOWDHURY

ಈಗಲೂ ಅಭಿವೃದ್ದಿಯ ಹೆಸರಲ್ಲಿ ನಡೆಯುವ ಬಗ್ಗೆ ಗುಸು ಏಳುತ್ತಲೆ ಇವೆ. ಕಡಿದಾಳು ಶಾಮಣ್ಣನಂತವರ ಮನಸ್ಸುಗಳು ಈ ಸಂಪಿಗೆ ಮರದ ಬಗ್ಗೆ ವಿಚಾರಿಸುತ್ತಲೇ ಇರುವುದರಿಂದ ಇದರ ತಂಟೆ ತಕರಾರರಿಗೆ ಬರಲು ಅಧಿಕಾರಸ್ಥರು ಯೋಚಿಸುತ್ತಿದ್ದಾರೆ ಎಂಬುದು ಸುಳ್ಳಲ್ಲ.

ನೂತನವಾಗಿ ನಿರ್ಮಾಣಗೊಂಡಿರುವ ತಾಲೂಕು ಕಛೇರಿ ಮುಖ್ಯ ರಸ್ತೆಯ ನಾಲ್ಕೂ ದಿಕ್ಕಿಗೂ ಕಾಣಿಸಬೇಕು ಎಂಬ ಉದ್ದೇಶದಿಂದ ಉಳಿದಿರುವ ಮುಖಭಾಗದ ಹಳೆಯ ಕಟ್ಟಡವನ್ನೂ ಕೆಡವಬೇಕೆಂಬ ಪ್ರಸ್ತಾಪ ಜಿಲ್ಲಾಧಿಕಾರಿಯವರಿಗೆ ಬಂದಿತ್ತಂತೆ. ಇದನ್ನು ಗ್ರಹಿಸಿದ ನಾನು ಮತ್ತು ದಿವಂಗತ ಪ್ರೊ. ಗಂಗಾಧರ್ ರವರೂ ತಾಲೂಕು ಕಚೇರಿಗೆ ಭೇಟಿ ನೀಡಲು ಬಂದಿದ್ದ ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜ್ ಎಂಬುವರಿಗೆ ಮನವಿ ಸಲ್ಲಿಸಿದೆವು. ‘ಈ ಹಳೆಯ ಕಟ್ಟಡ ಉಳಿಸಿಕೊಂಡು ಏನು ಮಾಡುತ್ತೀರಿ’ ಎಂಬ ಉದ್ದಟತನದ ಉತ್ತರ ನೀಡುತ್ತಾ ನಮ್ಮ ಮನವಿ ಸ್ವೀಕರಿಸಿ ಮೂರು ವರುಷಗಳಾಯಿತು.

ತಾಲೂಕು ಕಚೇರಿಯ ಮುಂಭಾಗದ ಉಳಿವು ಮತ್ತು ಸದಾ ಜೀವಂತಿಕೆಯಿಂದ ಹತ್ತು ಹಲವು ನೆನಪುಗಳನ್ನು ಆಗಾಗ್ಗೆ ಬಿಟ್ಟುಕೊಡುತ್ತಿರುವ ಸಂಪಿಗೆ ಮರಕ್ಕೂ ಬಿಡಲಾರದ ನಂಟಿದೆ. 1839 ರಲ್ಲಿ ನಿರ್ಮಾಣವಾದದ್ದರ ಬಗ್ಗೆ ತನ್ನ ತಲೆಯ ಮೇಲೆ ಇಸವಿಯನ್ನು ಕೊರೆಸಿಕೊಂಡಿರುವ ತಾಲೂಕು ಕಛೇರಿಯ ಈ ಒಂದು ಭಾಗ ನೆಲಸಮಕ್ಕೆ ಒಳಗಾದರೆ ಸಂಪಿಗೆ ಮರಕ್ಕೂ ಕುತ್ತಿದೆ ಎಂಬುದನ್ನು ಮರೆಯಬಾರದು.

ವಿದ್ಯಾರ್ಥಿ ದೆಸೆಯಿಂದ ಹತ್ತಾರು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ನನಗೆ ಸಂಪಿಗೆ ಮರ ಕೊಟ್ಟ ಸುಖ ಮೊನ್ನೆ ಮತ್ತೆ ಮರುಕಳಿಸಿತು.

ತೀರ್ಥಹಳ್ಳಿ ಪಟ್ಟಣದ ತುಂಬಾ ಯಂತ್ರಗಳದೇ ಕಾರುಬಾರು. ಡಾಂಬರಿನ ವಾಸನೆ. ಎಲ್ಲೆಲ್ಲೂ ರಸ್ತೆ ಅಗಿತಗೊಂಡಿದೆ. ಇಂಜಿನಿಯರುಗಳೂ ಗುತ್ತಿಗೆದಾರರೂ ದೊಡ್ಡ ದೊಡ್ಡ ಲಾರಿಗಳಲ್ಲಿ ಬೀಳುತ್ತಿದ್ದ ಬಿಸಿ ಬಿಸಿ ಜಲ್ಲಿ ಮಿಶ್ರಿತ ಡಾಂಬರು ಬೀಳುತ್ತಿದ್ದ ದೃಷ್ಯವನ್ನು ಹೆಮ್ಮೆಯಿಂದ ನೋಡುತ್ತಿದ್ದಾರೆ. ಆದರೆ ಈ ಬಾರಿಯ ಬಿಸಿಲು ತೀರ್ಥಹಳ್ಳಿ ಪಟ್ಟಣದಿಂದ ತಪ್ಪಿಸಿಕೊಂಡರೆ ಸಾಕಪ್ಪಾ ಎಂದು ಏದುಸಿರು ಬಿಡಿಸುತ್ತಿತ್ತು.

ಯಂತ್ರಗಳ ಸದ್ದಿನೊಂದಿಗೆ ಕಾದ ಕಲ್ಲು ಮೈಗಿಟ್ಟಂತೆ ಬಿಸಿಲು ತನ್ನ ಪೌರುಷ ತೋರಿಸುತ್ತಿದ್ದಾಗ ತಾಲೂಕು ಕಛೇರಿಯಲ್ಲಿ ಕೆಲಸವಾಗದೆ ಸಾಯಂಕಾಲದವರೆಗೆ ಕಾಯಬೇಕಾದ ಪರಿಸ್ಥಿತಿಯಲ್ಲಿ ಸಂಪಿಗೆ ಮರದ ಬುಡದಲ್ಲಿ ಕಾಲು ನೀಡಿ ಮಲಗಿ ನಿದ್ರಿಸುತ್ತಿದ್ದ ರೈತರನ್ನು ನೋಡಿದಾಗ ಸಂಪಿಗೆ ಮರ ನೀಡುತ್ತಿರುವ ಸುಖಕ್ಕೆ ಪರ್ಯಾಯ ರೂಪಿಸಲು ಹೆಣಗುವ ನಮ್ಮ ಮನಸ್ಸುಗಳ ಸಣ್ಣತನಕ್ಕೆ ಹೊಡೆತ ಬಿದ್ದಂತೆನಿಸಿತು.

‍ಲೇಖಕರು Admin

October 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: