ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನನ್ನ ಬಳಿಯೂ ಕೆಲ ಬೀಜಗಳಿವೆ, ತೇವದ ಮಣ್ಣು ದುರ್ಲಭ ಅಷ್ಟೇ..’ – ಬಸವರಾಜ ಸೂಳಿಭಾವಿ

ಬಸವರಾಜ ಸೂಳಿಭಾವಿ


ನೀ ಭೆಟ್ಟಿಯಾದೆ ಎಂಬುದು ಎಷ್ಟು ಸಾಮಾನ್ಯ ಸಂಗತಿ
ಅಲ್ಲ ಅನಿಸಿದ್ದು ಗೋರಿಯ ಮೇಲೊಂದು ಹೂ ಹುಟ್ಟಿದಾಗ

**

ಮುತ್ತುರತ್ನ ಸೊಲಗಿಯಿಂದ ಅಳೆವ ಬೀದಿಯನ್ನು
ಚರಿತ್ರೆಕಾರನಂತೆ ನಿಂತು ನೋಡಿದವು ಸೂರಿಲ್ಲದ ಕಣ್ಣು

**

ನೀನು ನನಗೆ ಸೋತೆ ಎಂಬ ಅಹಂಕಾರ ಎಲ್ಲಿಯತನಕ?
ಬದುಕು ಅರ್ಥಮಾಡಿಸಿದೆ ಕರಗಿಸಬಲ್ಲವರು ಕರಗುತ್ತಲೇ ಹೋಗುತ್ತಾರೆ

**

ಬರೀ ಕಲ್ಲೆನಬೇಡ ಅಹಲ್ಯೆ ಒಳಗಿರಬಹುದು
ಮುಟ್ಟಿ ನೋಡು

**

ನನ್ನೆಡೆಗೆ ನೀನಿಟ್ಟ ಹೆಜ್ಜೆ ಸಪ್ಪಳ ಕೇಳಿತು
ಈ ಸಾಗರವೂ ಮೊದಲೊಂದು ಹನಿಯಾಗಿಯೇ ಹುಟ್ಟಿದ್ದು ನೆನಪಾಯಿತು

**

ತಾಗಿದ ಬೆರಳು ಅಖಂಡ ಬದುಕಿನ ಕಥೆ ಹೇಳಿತು
ಆ ಕ್ಷಣವೇ ಆಕಾಶದಲಿದ್ದ ಕಾಮನಬಿಲ್ಲು ಕಣ್ಣಿಗಿಳಿಯಿತು

**

ಅಂಗಳದಲಿ ಶವ ಶೃಂಗಾರಗೊಳುತಿತ್ತು
ಕನಸುಗಳ ಮರಣಪತ್ರ ಬಾಯಿಂದ ಬಾಯಿಗೆ ಬಿಕರಿಯಾಯಿತು

**

ಕೆಲವು ಸಲ ಹೀಗೆ
ದುಃಖವೂ ನಗುತ್ತದೆ

**

ಬದುಕೆಂದರೆ ಇನ್ನೊಬ್ಬರ ಸಾಯಿಸುವುದಲ್ಲ
ಸಾವು ಇಂದಿಗೂ ನಿಂತಿರುವುದು ಬದುಕಿನ ಮೇಲೆಯೇ

**

ಬದುಕಿಗೆ ಇರುವಷ್ಟು ಚರಿತ್ರೆ
ಇದೆ ಸಾವಿಗೂ

**

ಮುಟ್ಟಿದ ಅಷ್ಟೂ ಕಲ್ಲುಗಳ ನಡುವೆ
ಅಹಲ್ಯೆಯಾದ ಕಲ್ಲು ಬದುಕಿನ ಪುಟ ತಿರುವಿಹಾಕಿತು

**


ನನ್ನ ಬಳಿಯೂ ಕೆಲ ಬೀಜಗಳಿವೆ
ತೇವದ ಮಣ್ಣು ದುರ್ಲಭ ಅಷ್ಟೇ

**

ಮುಟ್ಟುವ ಧೈರ್ಯ ಮಾಡಿದೆ
ಕಲ್ಲು ಹೆಣ್ಣಾಯಿತು ಅಹಲ್ಯೆಯಾಗಲಿಲ್ಲ

**

ನೀ ಕಂಡ ಸುಂದರ ಚಿತ್ರ ಬರೆ ಎಂದೆ ಮಗಳಿಗೆ
ಹಾಳೆ ತುಂಬ ತಥಾಗತನ ಮಂದಸ್ಮಿತವ ಚಿತ್ರಿಸಿದಳು

**

ಎಲ್ಲವೂ ಸುಲಭವಾಗುವ ದಾರಿ
ಕಡೆತನಕ ಎಲ್ಲರಿಗೂ ಅಪರಿಚಿತವೇ

**

ಸುಡುವ ವಿಷಯಕ್ಕೆ ಬಂದರೆ
ಮಾತಿನೆದುರು ಬೆಂಕಿ ಎಷ್ಟು ಸಣ್ಣದು!

**

ನೋಡಿಕೊಳಲು ಕನ್ನಡಿಯ ಮುಂದೆ ನೀನಿದ್ದೆ
ನಾ ಕುರುಡನೆಂಬ ಲೋಕದ ನಂಬಿಕೆಗೆ ಪುರಾವೆ ಸಿಕ್ಕಿತು

**

ಬುದ್ಧ ಕಣ್ಣೆದುರಿನ ಕಡಲು
ನನ್ನದೇನಿದ್ದರೂ ಬೊಗಸೆಯಲಿ ತುಂಬಿಕೊಳುವ ಯತ್ನ

**

ಎರಡು ಕಾಲುಗಳು ಒಂದೇ ದಾರಿ
ಒಂದು ಎಡವಿದರೆ ಎರಡೂ ಬೀಳುತ್ತವೆ

**

ನಿರಾಕಾರದ ಮಾತು ಅಸ್ತಿತ್ವವಾದಿ
ಕಟ್ಟಬಲ್ಲದು ಕಾಲುಗಳ ಆಚೀಚೆ ಅಲುಗದ ಹಾಗೆ
 

‍ಲೇಖಕರು G

28 October, 2013

13 Comments

  1. ಪ್ರಕಾಶ ಬಿ. ಜಾಲಹಳ್ಳಿ

    ಎರಡು ಕಾಲುಗಳು ಒಂದೇ ದಾರಿ
    ಒಂದು ಎಡವಿದರೆ ಎರಡೂ ಬೀಳುತ್ತವೆ
    sir kavite chennagide melina salu tumba istavayitu.

  2. pallavi

    chendada saalugaLu

  3. nagraj.harapanahalli

    ಬುದ್ಧ ಕಣ್ಣೆದುರಿನ ಕಡಲು
    ನನ್ನದೇನಿದ್ದರೂ ಬೊಗಸೆಯಲಿ ತುಂಬಿಕೊಳುವ ಯತ್ನ
    – ಎರಡು ಸಾಲಿನ ಅನುಭಾವ ಕಾವ್ಯ. ದ್ವಿಪದಿಗೆ ಕಸುವು ತುಂಬಿದ ಕವಿ ಬಸೂ

  4. amardeep.p.s.

    ಇಷ್ಟವಾಯಿತು ಸರ್ … ಅಭಿನಂದನೆಗಳು ..

  5. malathi S

    ಬುದ್ಧ ಕಣ್ಣೆದುರಿನ ಕಡಲು
    ನನ್ನದೇನಿದ್ದರೂ ಬೊಗಸೆಯಲಿ ತುಂಬಿಕೊಳುವ ಯತ್ನ……ವಾಹ್ ತುಂಬ ಇಷ್ಟವಾದ ಸಾಲು……
    ಮಾಲತಿ ಎಸ್

  6. Swarna

    ಎಷ್ಟು ಚಂದದ ಸಾಲುಗಳು !

  7. Boranna

    ಸುಡುವ ವಿಷಯಕ್ಕೆ ಬಂದರೆ
    ಮಾತಿನೆದುರು ಬೆಂಕಿ ಎಷ್ಟು ಸಣ್ಣದು!
    yaako ee saalu thumbaa istavaaythu sir…

  8. ಗವಿಸಿದ್ಧ ಹೊಸಮನಿ

    ಇಂತಹ ಸಾಲುಗಳನ್ನು ಓದುತ್ತಲೇ ಇರಬೇಕು ಅನ್ನಿಸುತ್ತದೆ ಆದರೆ,
    ಮುಗಿಸಲಿಕ್ಕೆ ಆಗುವುದೇ ಇಲ್ಲ;ಮುಗಿಯಲೂಬಾರದು.
    ದ್ವಿಪದಿಗೂ ಕನಸಿದೆ ಅಂದೆನಿಸಿತು..
    “ನೀ ಕಂಡ ಸುಂದರ ಚಿತ್ರ ಬರೆ ಎಂದೆ ಮಗಳಿಗೆ
    ಹಾಳೆ ತುಂಬ ತಥಾಗತನ ಮಂದಸ್ಮಿತವ ಚಿತ್ರಿಸಿದಳು..”
    ಈ ಸಾಲು ಬಹಳಷ್ಟು ಕಾಡಿದವು..

  9. smitha Amrithraj

    chendada saalugalu….

  10. bharathi

    adbhutha !!!!!!!!!!!

  11. Anil Talikoti

    ವಾವ – ಅತ್ಯಂತ ಶಕ್ತಿಶಾಲಿಯಾದ ಸಾಲುಗಳಿವು –“ನನ್ನ ಬಳಿಯೂ ಕೆಲ ಬೀಜಗಳಿವೆ
    ತೇವದ ಮಣ್ಣು ದುರ್ಲಭ ಅಷ್ಟೇ” -ಅನುಭವ, ಅನುಭಾವ ಕ್ಕೆ ಸೆಡ್ಡು ಹೊಡೆದು ನಿಲ್ಲುವ ಪರಿಯಿದು.
    -ಅನಿಲ ತಾಳಿಕೋಟಿ

  12. manyapuragovindaraju

    ptrthi salu artha purna vadavugalu

  13. ಚಂದಿನ

    ಅದ್ಭುತ, ಬಹಳ ಇಷ್ಟವಾಯಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading