ಜೋಗಿಮನೆ : ಹುಣಿಸೇತೋಟದ ಕನಸಲ್ಲಿ…


ಹುಣಿಸೇ ಮರವನ್ನು ಮೆಚ್ಚದವರು ಯಾರಿದ್ದಾರೆ? ತುಂಬು ಹೆರಳ ಸುಂದರಿಯ ಹಾಗೆ, ಕಂಗೊಳಿಸುವ ಹುಣಿಸೇಮರವೆಂದರೆ ನನಗಂತೂ ಇಷ್ಟ. ಅದೇ ಕಾರಣಕ್ಕೆ ಹುಣಸೂರು ಕೂಡ. ಮೈಸೂರಿನಿಂದ ಮಡಿಕೇರಿಗೆ ಹೋಗುವಾಗೆಲ್ಲ, ದಾರಿಯುದ್ದಕ್ಕೂ ಅವಧೂತರ ಹಾಗೆ ಸ್ವಸ್ಥ ನಿಂತಿರುವ ಹುಣಿಸೇಮರಗಳು ಖುಷಿ ಕೊಡುತ್ತವೆ. ಆ ಮರದ ಹಸುರೇ ಬೇರೆ, ಕತ್ತಲಾದರೆ ಅದರ ನಿಗೂಢವೇ ಬೇರೆ. ಹುಣಿಸೇಮರದ ಕೊಂಬೆಗಳು ಅದೆಷ್ಟು ಗಟ್ಟಿ ಅಂದರೆ ಕೊಂಬೆಯ ತುದಿಗೆ ಹೋದರೂ ಅದು ಬಾಗುತ್ತದೆಯೇ ಹೊರತು ಮುರಿಯುವುದಿಲ್ಲ. ಹಳ್ಳಿಯ ಶಾಲೆಯ ಮೇಷ್ಟ್ರುಗಳಿಗೆ ತುಂಟ ಮಕ್ಕಳನ್ನು ಹದ್ದುಬಸ್ತಿನಲ್ಲಿಡುವುದಕ್ಕೆ ಹುಣಿಸೆಯ ಬರಲೇ ಪಾಶುಪತಾಸ್ತ್ರ.
ಹುಣಿಸೆಯ ಮರ ಎಲ್ಲಾ ಹಳ್ಳಿಗಳಲ್ಲೂ ಸಾಮಾನ್ಯ. ಹುಣಿಸೇಹಣ್ಣಿನ ಬೆಲೆ ಎಷ್ಟೇ ಆದರೂ ಹುಣಿಸೇಮರವನ್ನು ನಗದು ಬೆಳೆಯಾಗಿ ಬೆಳೆಸಿದವರನ್ನು ನಾನಂತೂ ನೋಡಿಲ್ಲ. ಹುಣಿಸೇ ತೋಟ ಇಟ್ಟುಕೊಂಡಿದ್ದೇನೆ ಅಂತ .ಯಾವೂರ ರೈತನೂ ಹೇಳಿಕೊಂಡಂತಿಲ್ಲ. ಹುಣಿಸೇಹಣ್ಣಿಗೆ ಬೆಂಬಲ ಬೆಲೆ ಘೋಷಿಸಿ ಅಂತ ಗದ್ದಲವಾದದ್ದೂ ಗೊತ್ತಿಲ್ಲ. ಆದರೆ ಚಿತ್ರದುರ್ಗದ ಕಡೆಯ ಗೆಳೆಯರು ಅವರೂರಲ್ಲಿ ಬಂಜರು ಭೂಮಿ ಕೊಂಡು ಹುಣಿಸೇಮರ ಬಾಕಿ, ಹದಿನೈದೋ ಇಪ್ಪಕ್ಕೋ ವರುಷ, ಫಲಬರುವ ತನಕ ಕಾಯುತ್ತಾರಂತೆ.
ಹುಣಿಸೇಮರದ ಲಾಭನಷ್ಟದ ಕತೆ ಹೇಗಾದರೂ ಇರಲಿ. ನಿಮಗೆಂದಾದರೂ ಎಲೆಯುದುರಿಸಿಕೊಂಡು ಬೆತ್ತಲೆ ನಿಂತ ಹುಣಿಸೇಮರ ನೋಡಿದ ನೆನಪಿದೆಯಾ? ನಾನಂತೂ ಎಲೆಯುದುರಿದ ಬೋಳು ಹುಣಿಸೇಮರ ನೋಡಿಲ್ಲ. ಹಾಗೇ ಯೌವನದಿಂದ ನಳನಳಿಸುವ ಹುಣಿಸೇಮರವನ್ನು ಕೂಡ. ಸಾಮಾನ್ಯವಾಗಿ ಎಲ್ಲಾ ಹುಣಿಸೇಮರವೂ ನೂರೋ ನೂರೈವತ್ತೋ ವರುಷವಾದಂತೆ ಋಷಿಗಳ ಹಾಗೆ ಕಾಣಿಸುತ್ತದೆ.
ಹುಣಿಸೇಮರ ಹುಟ್ಟುಹಾಕುವ ಕತೆಗಳಿಗಂತೂ ಲೆಕ್ಕವಿಲ್ಲ. ಅದು ದೆವ್ವಗಳ ಅಡಗುದಾಣ. ಹುಣಿಸೇಮರದಡಿಯಲ್ಲಿ ಮಲಗಿ ಮರಣಹೊಂದಿದವರ ಕತೆಗಳಂತೂ ಪ್ರತಿ ಹಳ್ಳಿಯಲ್ಲೂ ಇವೆ. ಹಳೆಯ ಚಂದಮಾಮಗಳಲ್ಲಂತೂ ಹುಣಿಸೇಮರದ ಜೊತೆ ದೆವ್ವ ಫ್ರೀ. ಬ್ರಹ್ಮರಾಕ್ಷಸನ ಪಾಲಿಗೂ ಹುಣಿಸೇಮರವೇ ಅಂತಃಪುರ. ಆದರೆ, ಹುಣಿಸೇಮರಕ್ಕೆ ನೇಣುಹಾಕಿಕೊಳ್ಳುವವರು ಕಡಿಮೆ. ಅದ್ಯಾಕೋ ಸತ್ತವರ ಪಾಲಿಗೆ ಪ್ರಿಯವಾದಷ್ಟು ಹುಣಿಸೇಮರ ಸಾಯುವವರ ಪಾಲಿಗೆ ಆಪ್ತವಾಗಲಿಲ್ಲ.
ಹಾಗೇ ಕವಿಗಳಿಗೂ ಕಾವ್ಯಕ್ಕೂ ಹುಣಿಸೇಹಣ್ಣು ರುಚಿಸಿದಂತಿಲ್ಲ. ಮರ ಮುಪ್ಪಾದರೆ ಹುಳಿ ಮುಪ್ಪೇ ಎಂಬ ಗಾದೆಗಷ್ಟೇ ಹುಣಿಸೇಮರ ಸೀಮಿತ. ಹುಣಿಸೇಹಣ್ಣು ಕೂಡ ವ್ಯರ್ಥಪ್ರಯತ್ನವನ್ನೂ ಸೂಚಿಸುವ ನುಡಿಗಟ್ಟನ್ನು ಕೊಟ್ಟಿತು. ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದಂತೆ ಅಂತ ಹಿರಿಯರು ಈಗಲೂ ಹೇಳುವುದುಂಟು. ಇನ್ನೊಬ್ಬನ ಅಭಿವೃದ್ಧಿಯನ್ನು ಕಂಡು ಕರುಬುವವನನ್ನು ಹೊಟ್ಟೆಯಲ್ಲಿ ಹುಣಿಸೇಹಣ್ಣು ಕಿವುಚಿದಂತಾಯಿತು ಅನ್ನುತ್ತಾರೆ. ಅಷ್ಟು ಬಿಟ್ಟರೆ, ಬಸುರಿಯ ಬಯಕೆಗೆ ಮಾವಿನಕಾಯೇ ಬೇಕು. ಅದರ ಬದಲು ಅವರೇಕೆ ಹುಣಿಸೇಕಾಯಿ ಬಯಸರು?
ಕವಿಗಳು ಇಷ್ಟೊಂದು ಚೆಂದದ ಮರವನ್ನು ಬಣ್ಣಿಸದೇ ಬಿಟ್ಟರೇಕೆ ಎಂಬ ಪ್ರಶ್ನೆ ಮೂಡುತ್ತಿರುವಾಗಲೇ ನೆನಪಾದದ್ದು ಬೇಂದ್ರೆಯವರ ಹೂತದ ಹುಣಸೀ ಕವಿತೆ. ಕವಿ ಜೀವದ ಬೇಸರ ತಣಿಸೋದಕ್ಕೆ ಬೇರೇನು ಬೇಕು, ಒಂದು ಹೂಬಿಟ್ಟ ಹುಣಿಸೇಮರ ಸಾಕು ಎಂದು ಕೊನೆಯಾಗುವ ಕವಿತೆ ಹುಣಿಸೇಮರದ ಸೊಬಗನ್ನು ವರ್ಣಿಸಿದೆ.
ನಾವು ಚಿಕ್ಕವರಿದ್ದಾಗ ಮೇಷ್ಟರು ನಮ್ಮನ್ನು ಹದ್ದುಬಸ್ತಿನಲ್ಲಿ ಇರಿಸಿಕೊಳ್ಳುವುದಕ್ಕೆ ಬಳಸುತ್ತಿದ್ದದ್ದು ಹುಣಸೇ ಮರದ ಬೆತ್ತವನ್ನೇ. ಆ ಬೆತ್ತ ಹೇಗೆ ಬಳುಕಿ ಬಾಗುತ್ತದೆ ಎಂದರೆ ನಾಲ್ಕೈದು ಅಡಿ ಉದ್ದದ ಬೆತ್ತದಿಂದ ಬಾರಿಸಿದರೆ ಮೈಯ ಸುತ್ತ ಸರ್ಪಸುತ್ತು ಬಂದಂತೆ ಏಟಿನ ಬರೆ ಬೀಳುತ್ತಿತ್ತು. ಅಂಥ ಸಹಸ್ರಾರು ಏಟುಗಳನ್ನು ನಮ್ಮ ಗಣಿತದ ಮೇಷ್ಟ್ರು ವೈದ್ಯರ ಕೈಯಲ್ಲಿ ತಿಂದದ್ದು ನೆನಪಿದೆ.
ಒಮ್ಮೆ ನಾವಿಬ್ಬರು ರಾತ್ರೋ ರಾತ್ರಿ ರಹಸ್ಯವಾಗಿ ಕುರ್ಬಾನಿ ಸಿನಿಮಾ ನೋಡಲು ನಮ್ಮೂರಿನ ಪ್ರೀತಮ್ ಚಿತ್ರಮಂದಿರಕ್ಕೆ ಹೋಗಿದ್ದೆವು. ಯಾರಿಗೂ ಅದು ಗೊತ್ತಾಗಿಲ್ಲ ಎಂದು ನಿಟ್ಟುಸಿರಿಟ್ಟು ರಾತ್ರೋ ರಾತ್ರಿ ಮನೆ ಸೇರಿಕೊಂಡಿದ್ದೆವು. ಮಾರನೆ ದಿನ ತರಗತಿಗೆ ಕಾಲಿಟ್ಟರೆ, ವೈದ್ಯರು ಹುಣಸೇ ಮರದ ಅಡರನ್ನು ಸಿದ್ಧಮಾಡಿಕೊಂಡು ಕಾಯುತ್ತಿದ್ದರು. ನಾವು ಒಳಗೆ ಕಾಲಿಡುತ್ತಿದ್ದಂತೆ ಅತ್ಯಂತ ಕಷ್ಟದ ಲೆಕ್ಕವೊಂದನ್ನು ಕೊಟ್ಟು ಬೋರ್ಡ್ ನಲ್ಲಿ ಮಾಡಿ ತೋರಿಸು ಅಂತ ಕುರ್ಚಿಯಲ್ಲಿ ಕೂತೇ ಬಿಟ್ಟರು.
ಅದು ಯಾರೂ ಬಿಡಿಸುವುದಕ್ಕೆ ಸಾಧ್ಯವಾಗದ ಗಣಿತದ ಸಮಸ್ಯೆಯಾಗಿತ್ತೆಂದು ಈಗ ಅನ್ನಿಸುತ್ತದೆ. ಹೇಗಾದರೂ ಮಾಡಿ ಅದನ್ನು ಪೂರ್ತಿ ಮಾಡಿ ಬೆತ್ತದ ಏಟಿನಿಂದ ಪಾರಾಗಬೇಕೆಂಬ ನಮ್ಮ ಪ್ರಯತ್ನ ಯಶಸ್ವಿಯಾಗಲಿಲ್ಲ. ನಾವು ಸೋಲುತ್ತಿದ್ದಂತೆ ಬೆತ್ತ ಝಳಪಿಸುತ್ತಾ ಥೇಟ್ ಮಯೂರವರ್ಮನಂತೆ ಅವರು ನಮ್ಮಿಬ್ಬರಿಗೂ ಸೇರಿಸಿ ಒಂದೇಟು ಕೊಟ್ಟಿದ್ದರು. ಆ ಬೆತ್ತ ಇಬ್ಬರನ್ನೂ ಸುತ್ತುವರಿದು, ಇಬ್ಬರ ಬೆನ್ನು ಹೊಟ್ಟೆಯ ಮೇಲೆ ಬಾಸುಂಡೆ ಎಬ್ಬಿಸಿತ್ತು. ಮೇಷ್ಟರು ನಂತರ ನಿಧಾನವಾಗಿ ಲೆಕ್ಕ ಮಾಡೋದು ಅಂದ್ರೆ ಕುರ್ಬಾನಿ ನೋಡಿದ ಹಾಗಲ್ಲ ಅಂತ ಕೊನೆಯ ಬಾಂಬು ಎಸೆದಿದ್ದರು. ಆ ಪೆಟ್ಟಿಗಿಂತಲೂ ಆ ಕಾಲಕ್ಕೆ ಅತ್ಯಂತ ಅಶ್ಲೀಲ ಚಿತ್ರ ಎಂದೇ ಜಗಜ್ಜಾಹೀರಾಗಿದ್ದ ಕುರ್ಬಾನಿ ನೋಡಿದವರು ನಾವೆಂದು ನಮ್ಮ ತರಗತಿಯ ಹೆಣ್ಮಕ್ಕಳಿಗೆ ತಿಳಿಯಿತಲ್ಲ ಅಂತ ದುಃಖವಾಗಿತ್ತು. ಯಾರಾದರೊಬ್ಬರು ನಮ್ಮನ್ನು ಅಕಸ್ಮಾತ್ತಾಗಿ ಪ್ರೀತಿಸಬಹುದು ಎಂಬ ಆಶೆ ಕಮರಿಹೋಗಿತ್ತು.

ಮೊನ್ನೆ ಗೆಳೆಯರೊಬ್ಬರು ಹುಣಸೇ ಮರ ನೆಟ್ಟರೆ ಸಿಕ್ಕಾಪಟ್ಟೆ ಲಾಭ ಬರುತ್ತದೆ. ನಾಲ್ಕೈದು  ವರುಷಕ್ಕೆ ಹುಣಸೇ ಹಣ್ಣು ಬಿಡುವಂಥ ತಳಿಯೊಂದು ಸಿದ್ಧವಾಗಿದೆ. ಅದಕ್ಕೆ ನೀರು, ಗೊಬ್ಬರವೂ ಜಾಸ್ತಿ ಬೇಕಾಗಿಲ್ಲ. ಬಿಸಿಲು ಬಿದ್ದರೂ ತಡಕೊಳ್ಳುತ್ತದೆ. ಮಲೇಷಿಯಾದಂಥ ರಾಷ್ಚ್ರಗಳಲ್ಲಿ ರಬ್ಬರ್ ಬೆಳೆಯುವ ದೇಶಗಳಲ್ಲಿ ಈಗೀಗ ಹುಣಸೇಮರ ಬೆಳೆಯುತ್ತಿದ್ದಾರೆ, ಎಲ್ಲಾದರೂ ಬಂಜರು ಭೂಮಿ ಇದ್ದರೆ ಕೊಂಡುಕೊಂಡು ಹುಣಸೇ ಹಣ್ಣು ಬೆಳೆಯಬಹುದು ಎಂದು ಆಸೆ ಹುಟ್ಟಿಸಿದಾಗ ಇದೆಲ್ಲ ನೆನಪಾಯಿತು.
ಮಿಕ್ಕ ಗೆಳೆಯರಿಗೆ ಅದನ್ನು ಹೇಳಿ ನೋಡಿದೆ. ಅವರು ಹುಣಸೇತೋಟ ಮಾಡಿ ಉದ್ಧಾರ ಆದೋರುಂಟಾ? ಮನೆ ಅಂಗಳದಲ್ಲಿರೋ ಒಂದೇ ಒಂದು ಹುಣಸೇಮರದಲ್ಲಿ ಬಿಡೋ ಹಣ್ಣುಗಳೇ ನಮಗೆ ದಕ್ಕುತ್ತಿಲ್ಲ. ಈಗೀಗ ಅಳಿಲು, ಕೋತಿ, ಗೀಜಗ, ಗಿಣಿ, ಕಾಗೆ- ಯಾವುದಕ್ಕೂ ಹಣ್ಣುಗಳೇ ಸಿಗುತ್ತಿಲ್ಲ. ಹುಣಸೇ ಹಣ್ಣು ತಿನ್ನೋದಕ್ಕೆ ಶುರು ಮಾಡಿವೆ. ನಮ್ಮನೆಗೆ ಬಂದು ನೋಡು, ಬರೀ ಹುಣಸೇ ಹಣ್ಣಿನ ಖಾಲಿ ಕೋಡುಗಳು ಮಾತ್ರ ಬಿದ್ದಿರುತ್ತವೆ. ಅದೆಲ್ಲ ಮಾಡೋದಕ್ಕೆ ಹೋಗಬೇಡ ಎಂದು ಎಚ್ಚರಿಸಿದರು.
ಹುಣಸೇಮರದ ಕೆಳಗೆ ಮಲಗಿದವರು ಬೆಳಗಾಗುವದರೊಳಗೆ ಸತ್ತ ಕತೆಗಳು ನಮ್ಮೂರಲ್ಲಿ ಚಾಲ್ತಿಯಲ್ಲಿದ್ದವು. ಅದಕ್ಕೆ ಆ ಮರದಲ್ಲಿ ಅಡಗಿರುವ ದೆವ್ವವೇ ಕಾರಣ ಅಂತ ನಮ್ಮೂರ ಮಂದಿ ನಂಬಿದ್ದರು. ದೆವ್ವಗಳಿಗೆ ಅವು ಒಳ್ಳೆಯ ಅಡಗುದಾಣವಂತೂ ಹೌದು. ಹುಣಸೇಮರದ ಎಲೆಗಳು ಎಷ್ಟು ಒತ್ತೊತ್ತಾಗಿ ಇರುತ್ತವೆಂದರೆ ಅವುಗಳ ನಡುವೆ ಬಚ್ಚಿಟ್ಟುಕೊಂಡರೆ ಕಣ್ಣಿಗೆ ಬೀಳುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಯಾರ ಕಣ್ಣಿಗೂ ಕಾಣಿಸದ ದೆವ್ವಗಳಿಗೆ ಬಚ್ಚಿಟ್ಟುಕೊಳ್ಳುವ ಪ್ರಮೇಯವೇ ಬರುವುದಿಲ್ಲವಲ್ಲ ಅಂತ ನಾವೆಲ್ಲ ತರ್ಕಬದ್ಧವಾಗಿ ಯೋಚನೆ ಮಾಡುತ್ತಿದ್ದರೂ, ಹುಣಸೇ ಮರದ ಅಡಿ ರಾತ್ರಿ ಹೊತ್ತಲ್ಲಿ ಸುಳಿಯುತ್ತಿರಲಿಲ್ಲ.
ಹುಣಸೇ ಮರದಡಿ ಮಲಗಿದವರು ಸತ್ತುಬಿದ್ದ ಕತೆಗಳಿಗೆ ವೈಜ್ಞಾನಿಕ ಕಾರಣವೂ ಇದೆ ಎಂದು ನಂತರದ ದಿನಗಳಲ್ಲಿ ಗೊತ್ತಾಯಿತು. ಬೇರೆ ಮರಗಳಂತಲ್ಲದ ಹುಣಸೇಮರ, ರಾತ್ರಿ ಹೊತ್ತು ಆಮ್ಮಜನಕ ಹೀರಿಕೊಂಡು ಇಂಗಾಲದ ಡೈ ಆಕ್ಸೈಡನ್ನು ಹೊರ ಹಾಕುತ್ತದಂತೆ. ಅದಕ್ಕೇ ಆ ಮರದ ಎಲೆಗಳು ರಾತ್ರಿ ಹೊತ್ತಿಗೆ ಮಡಿಚಿಕೊಂಡಂತಿರುತ್ತವೆ ಅಂತ ಮರಗಳ ಶಾಸ್ತ್ರ ಬಲ್ಲವರು ನಮ್ಮಂಥ ವೈಜ್ಞಾನಿಕ ಮನೋಭಾವದವರು ನಂಬುವಂಥ ಸತ್ಯವೊಂದನ್ನು ಹೇಳಿದ್ದರು. ಹುಣಸೇ ಮರದಲ್ಲಿ ದೆವ್ವವಿದೆ ಅಂದವರಿಗೆಲ್ಲ ಇದೇ ವೈಜ್ಞಾನಿಕ ಕಾರಣ ಅಂತ ನಾವೂ ಹೆಮ್ಮೆಯಿಂದ ಹೇಳಿಕೊಂಡು ಒಂದಷ್ಟು ದಿನ ಓಡಾಡಿದ್ದೆವು. ಕಾರಣ ಏನೇ ಇದ್ದರೂ ಹುಣಸೇ ಮರ ಅಪಾಯಕಾರಿ ಅನ್ನುವುದಂತೂ ಮನಸ್ಸಿನಲ್ಲಿ ನಿಂತುಬಿಟ್ಟಿದೆ.
ಏನೇ ಆದರೂ, ಅತ್ಯಂತ ಲಾಭದಾಯಕ ಹುಣಸೇತೋಟಕ್ಕಿಂತ ಬರೆಯುತ್ತಾ ಇರುವುದೇ ಕ್ಷೇಮವಲ್ಲವೇ? ಬರೆದರೆ ಏನ್ರೀ ಬರುತ್ತೆ, ಹುಣಸೇಬೀಜ? ಎಂದು ನಾವು ಚಿಕ್ಕೋರಿದ್ದಾಗ ನಮ್ಮೂರ ಪಟೇಲರೊಬ್ಬರು ನಮ್ಮೂರ ಕವಿಯೊಬ್ಬನಿಗೆ ಗೇಲಿ ಮಾಡಿದ್ದು ನೆನಪಿದೆ? ಅವರು ಅವಮಾನಿಸುತ್ತಿದ್ದದ್ದು ಕವಿಯನ್ನೋ ಹುಣಸೇಬೀಜವನ್ನೋ ಅನ್ನುವುದು ಮಾತ್ರ ಗೊತ್ತಾಗುತ್ತಿಲ್ಲ.
 

‍ಲೇಖಕರು G

October 28, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Shashikala m

    “ಬೇರೆ ಮರಗಳಂತಲ್ಲದ ಹುಣಸೇಮರ, ರಾತ್ರಿ ಹೊತ್ತು ಆಮ್ಮಜನಕ ಹೀರಿಕೊಂಡು ಇಂಗಾಲದ ಡೈ ಆಕ್ಸೈಡನ್ನು ಹೊರ ಹಾಕುತ್ತದಂತೆ. ”
    ರಾತ್ರಿ ಹೊತ್ತು ಎಲ್ಲಾ ಸಸ್ಯಗಳಿಗಳೂ ಆಮ್ಮಜನಕ ಹೀರಿಕೊಂಡು ಇಂಗಾಲದ ಡೈ ಆಕ್ಸೈಡನ್ನು ಹೊರ ಹಾಕುತತ್ತವೆ

    ಪ್ರತಿಕ್ರಿಯೆ
  2. ಪದ್ಮ

    ಬರೆದರೆ ಏನ್ರೀ ಬರುತ್ತೆ, ಹುಣಸೇಬೀಜ? ಅವರು ಅವಮಾನಿಸುತ್ತಿದ್ದದ್ದು ಕವಿಯನ್ನೋ ಹುಣಸೇಬೀಜವನ್ನೋ ಅನ್ನುವುದು ಮಾತ್ರ ಗೊತ್ತಾಗುತ್ತಿಲ್ಲ. – Nice lines 🙂

    ಪ್ರತಿಕ್ರಿಯೆ
  3. Sumangala

    ನನಗೆ ತಿಳಿದಿರುವಂತೆ ಹುಣಿಸೇ ಮರಗಳು ಮಾತ್ರವಲ್ಲ, ಎಲ್ಲ ಸಸ್ಯಗಳು ಹಗಲು ಮತ್ತು ರಾತ್ರಿ ಸ್ವಲ್ಪ ಪ್ರಮಾಣದ ಆಮ್ಲಜನಕವನ್ನು ಹೀರಿಕೊಳ್ಳುತ್ತವೆ, ನಮ್ಮ ಹಾಗೆಯೇ ಕಾರ್ಬೋಹೈಡ್ರೇಟ್ ಗಳನ್ನು ವಿಭಜಿಸಿ ಶಕ್ತಿ ಬಿಡುಗಡೆ ಮಾಡಲು ಅವಕ್ಕೂ ಆಮ್ಲಜನಕ ಬೇಕಾಗುತ್ತದೆ. ಹಗಲಿನಲ್ಲಿ ಸಸ್ಯಗಳ ಹಸಿರುಭಾಗವು (ಹೆಚ್ಚಾಗಿ ಎಲೆಗಳು) ಕಾರ್ಬನ್ ಡಯಾಕ್ಸೈಡ್ ಅನ್ನು ಕೂಡ ಹೀರಿಕೊಂಡು ಸೂರ್ಯನ ಬೆಳಕಿನ ಶಕ್ತಿ ಬಳಸಿಕೊಂಡು ದ್ಯುತಿಸಂಶ್ಲೇಷಣೆ ಕ್ರಿಯೆ (ಫೋಟೋಸಿಂಥೆಸಿಸ್) ನಡೆಸುವುದರಿಂದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಆದರೆ ರಾತ್ರಿ ಸೂರ್ಯನ ಬೆಳಕಿಲ್ಲದೇ ಇರುವುದರಿಂದ ಕಾರ್ಬನ್ ಡಯಾಕ್ಸೈಡ್ ಬಳಸಿಕೊಂಡು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸುವುದಿಲ್ಲ ಮತ್ತು ಆಮ್ಲಜನಕವನ್ನು ಹೊರಹಾಕುವುದಿಲ್ಲ. ಎಲೆಗಳ ಹೊರತಾಗಿ ಸಸ್ಯಗಳ ಬೇರೆ ಭಾಗಗಳು ಅಂದರೆ ಕಾಂಡಗಳು, ಬೇರುಗಳು ಕಡಿಮೆ ಪ್ರಮಾಣದ ಆಮ್ಲಜನಕವನ್ನು ಹೀರಿಕೊಳ್ಳುತ್ತವೆ ಮತ್ತು ಕಾರ್ಬೋಹೈಡ್ರೇಟ್ ಅನ್ನು ವಿಭಜಿಸುತ್ತವೆ. ಆದರೆ ಮನುಷ್ಯರು ಉಸಿರಾಟಕ್ಕೆ ಹೀರಿಕೊಳ್ಳುವ ಪ್ರಮಾಣಕ್ಕೆ ಹೋಲಿಸಿದರೆ ಮರಗಳು ಹೀರಿಕೊಳ್ಳುವ ಪ್ರಮಾಣ ಕಡಿಮೆ. ಹೀಗಾಗಿ ಹುಣಿಸೇಮರವು ತನ್ನ ಸುತ್ತಲಿನ ಆಮ್ಲಜನಕವನ್ನು ಹೀರಿಕೊಂಡು, ಅದರ ಕೆಳಗೆ ಮಲಗಿದವರಿಗೆ ಆಮ್ಲಜನಕದ ಕೊರತೆಯಾಗಿ ಅಪಾಯ ಎನ್ನುವುದು ವೈಜ್ಞಾನಿಕವಾಗಿಯೂ ಅಷ್ಟು ವಾಸ್ತವವಲ್ಲ ಎನ್ನಿಸುತ್ತದೆ.

    ಪ್ರತಿಕ್ರಿಯೆ
  4. malini guruprasanna

    Hunase maravannu ratri kandare nanageegaloo bhayavagutte. lekhana chennagide sir…

    ಪ್ರತಿಕ್ರಿಯೆ
  5. Anil Talikoti

    ಕನ್ನಡದಲ್ಲಿ ಬರೆದು ಬದಕುವದು ಮೈಮೇಲೆ ಬರೆ ಹಾಕ್ಕೊಂಡಂತೆ ಸರ್ವಜ್ಞ.
    ಹುಣಸೆಗಿರುವ ಎಲ್ಲ ವಿಪತ್ತುಗಳ ದುಪ್ಪಟ್ಟು ಬರೆಯುವವರಿಗೆ ಇದೆಯೇನೋ?
    ಬೇಂದ್ರೆ ಒಬ್ಬರೆ ಅನಿಸುತ್ತೆ ಹೂತ ಹುಣಸೆಯಿಂದಲೂ ಕವಿತೆ ಹುಟ್ಟಿಸಲು ಶಕ್ತರಾದವರು.
    ಕುರ್ಬಾನಿ ನೋಡಿ ಕಮರಿಹೋದ ಪ್ರೀತಿ -I sympathize with your pain , sir!
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  6. ಸುಧಾ ಚಿದಾನಂದಗೌಡ

    ಸ್ವಾರಸ್ಯಕರ. ಇಷ್ಟವಾಯ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: