ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಫೋನ್‍ನ ಅಲಾರಂ ಗಂಟೆ ಬಾರಿಸಿತು..

ಕಾಣದ ಕಡಲಿಗೆ ಹಂಬಲಿಸಿದೆ ಮನ.. ಹೆಜ್ಜೆ 01

ಸ್ವಾತಂತ್ರ್ಯದ ಹುಡುಕಾಟದಲ್ಲಿ

avadhi-column-rahul bw-edited2

ಜುಲೈ 06ನೇ 2015ರ ಬೆಳಗಿನ ಜಾವ ಸುಮಾರು ನಾಲ್ಕರ ಸಮಯಕ್ಕೆ ಸರಿಯಾಗಿ ನನ್ನ ಫೋನ್‍ನ ಅಲಾರಂ ಗಂಟೆ ಬಾರಿಸಿತು.

ಎದ್ದು ನನ್ನ ಪಕ್ಕವೇ ಮಲಗಿದ್ದ ನನ್ನ ತಮ್ಮನಿಗೆ ಎಚ್ಚರವಾಗದಂತೆ ಕೋಣೆಯ ಹೊರಗಡೆ ಬಂದೆ.

ಬಂದಿದ್ದೇ ತಡ ಬೇಗ ಹೋಗಿ ತಳ ಅಂತಸ್ತಿನ ಬಚ್ಚಲಮನೆಯಲ್ಲಿ ಕೈಕಾಲು ಮುಖ ತೊಳೆದು, ಮನೆಯ ಎರಡನೇ ಅಂತಸ್ತಿನ ಕೋಣೆಯಲ್ಲಿ ಬಚ್ಚಿಟ್ಟಿದ್ದ ನನ್ನ ಬ್ಯಾಗನ್ನು ತೆಗೆದುಕೊಂಡು, ನನ್ನ ಮೊಬೈಲ್ ಮತ್ತು ಲ್ಯಾಪ್‍ಟಾಪ್‍ಗಳನ್ನು ಮನೆಯಲ್ಲೇ  ಬಿಟ್ಟು, ಯಾರಿಗೂ ಎಚ್ಚರವಾಗದಂತೆ ಮನೆಯ ಕದವನ್ನು ಜಡಿದುಕೊಂಡು ನನ್ನ ಈ ಪ್ರಯಾಣವನ್ನು ಪ್ರಾರಂಭಿಸಿದೆ.

ನಮ್ಮ ಶ್ರೀರಾಂಪುರದ ಮನೆಯಿಂದ ಬಸ್ಸು ನಿಲ್ದಾಣಕ್ಕೆ ಸುಮಾರು ಎಂಟು ಮೈಲುಗಳಾಗಬಹುದು. ಬೆಳಗಿನ ಜಾವ ಯಾವ ಆಟೋ, ಬಸ್ಸೂ ಕಾಣಿಸಲಿಲ್ಲ. ಕಾಲ್ನಡಿಗೆಯೇ ಪ್ರಧಾನವಾಯಿತು. ಮೊದಲ ಎರಡು ಮೈಲುಗಳು ಬಹಳ ಚಂಚಲಮಯವಾಗಿತ್ತು. ನಾನು ಯಾವ ಕಾರಣಕ್ಕಾಗಿ ಈ ಪ್ರಯಾಣ ಕೈಗೊಳ್ಳುತ್ತಿದ್ದೇನೆ, ನನ್ನ ಈ ನಿರ್ಧಾರದಿಂದ ನನ್ನ ಕುಟುಂಬ ವರ್ಗದವರಿಗೆ ಆಗುವ ನೋವು ನಷ್ಟಗಳನ್ನು ನೆನೆದು ನನ್ನ ಮನಸ್ಸು ಪರಿತಪಿಸುತ್ತಿತ್ತು.

ಯಾವಾಗ ಒಂದು ಮೂರ್ನಾಲ್ಕು ಮೈಲುಗಳು ಸವೆದು ನನ್ನ ಮೈ ಬೆವರತೊಡಗಿತೋ, ನನ್ನ ಮನಸ್ಸು ಕೂಡ ದೃಢವಾಗುತ್ತಾ, ಮೆದುಳಿನಲ್ಲಿ ಹರಿದಾಡುತ್ತಿದ್ದ ಗೊಂದಲಮಯ ಆಲೋಚನೆಗಳೆಲ್ಲಾ ಒಂದೊಂದಾಗಿ ಮಾಯವಾಗತೊಡಗಿತು. ಮೂರ್ನಾಲ್ಕು ವಾರಗಳಿಂದ ಪ್ರತಿದಿನ ನಾಲ್ಕೈದು ಮೈಲುಗಳು ನಡೆದು ಕೈಕಾಲುಗಳನ್ನು ಗಟ್ಟಿ ಮಾಡಿಕೊಂಡಿದ್ದೆ. ಆದರೂ ಬಸ್‍ನಿಲ್ದಾಣದವರೆಗಿನ ಎಂಟು ಮೈಲುಗಳ ನಡಿಗೆ ಸ್ವಲ್ಪ ತ್ರಾಸವೇ ಆಯಿತು. ಎಲ್ಲೂ ನಿಲ್ಲದೆ ಒಂದೇ ಸಮನೆ ನಡೆಯ ತೊಡಗಿದೆ. ಎಲ್ಲಿ ಹೇಗಾದರೂ ನಮ್ಮ ಮನೆಯವರಿಗೆ ವಿಷಯ ಗೊತ್ತಾಗಿ ನನ್ನನ್ನು ಹುಡುಕಿಸಿ ಮನೆಗೆ ಹಿಂತಿರುಗಿ ಕರೆದುಕೊಂಡು ಹೋದಾರು ಎಂಬ ಆತಂಕವೂ ಇತ್ತು.

avadhi- column- rahul- low res- editedಆ ವಿಚಾರದಲ್ಲಿ ನನ್ನ ತಮ್ಮ ರೋಷನ್ ಬಹಳ ಚಾಣಾಕ್ಷ್ಯ. ಸ್ವಲ್ಪ ವಾಸನೆ ಬಂದರೂ ಸರಿ, ತನ್ನ ಸ್ನೇಹಿತರ ಸೈನ್ಯವನ್ನೆಲ್ಲಾ ಬಿಟ್ಟು ನಾನು ಮೈಸೂರು ದಾಟುವ ಮುಂಚೆಯೇ ಹುಡುಕಿಸುವ ತಾಕತ್ತು ಅವನಲ್ಲಿತ್ತು. ಆ ಯೋಚನೆಯಲ್ಲೇ ಬಸ್ಸು ನಿಲ್ದಾಣದ ಕಡೆಗೆ ಬೇಗನೆ ನಡೆದು ತಲುಪಿದೆ. ತಲುಪಿದ ತಕ್ಷಣ ಅಲ್ಲೇ ತೆರೆದಿದ್ದ ಸಣ್ಣ ಪೆಟ್ಟಿಗೆ ಅಂಗಡಿಯಲ್ಲಿ ಒಂದು ಪೆನ್ನು, ಸೋಪ್, ಪೇಸ್ಟ್, ಇತರೆ ಅವಶ್ಯ ಸಾಮಾನುಗಳನ್ನು ಕೊಂಡುಕೊಂಡೆ.

ನನ್ನ ಮನದಂಗಳದ ಯಜ್ಞ ಕುಂಡದಲ್ಲಿ ಸಾಧನೆಯ ಕಿಡಿಯೊಂದು ಹೊತ್ತಿ ನನ್ನನ್ನೇ ಆವರಸಿಕೊಳ್ಳುವ ತವಕದಲ್ಲಿತ್ತು. ಆ ಕಿಡಿಯು ಕ್ರಮೇಣ ಜ್ವಾಲೆಯಾಗಿ, ಜ್ವಾಲೆಯ ಕೆನ್ನಾಲಿಗೆಗೆ ನನ್ನೆಲ್ಲಾ ಪೂರ್ವ ಪೋಷಿತ ಭಯ, ದುಗುಡ, ಮೌಢ್ಯಗಳು ಒಂದೊಂದಾಗಿ ಸಿಲುಕಿ ಭಸ್ಮವಾಗುತ್ತಿತ್ತು. ಬಸ್ ನಿಲ್ದಾಣದ ಒಳಹೊಕ್ಕುತ್ತಿದ್ದಂತೆ ತುಮಕೂರಿನ ಕಡೆಗೆ ಹೊರಡುವ ಬಸ್ಸು ನಿಂತಿತ್ತು. ಸಿದ್ದಗಂಗೆಗೆ ಹೋಗಿ ಶ್ರೀಗಳ ಆಶಿರ್ವಾದ ಪಡೆದು ಮುನ್ನಡೆಯೋಣವೆಂದು ನಿರ್ಧರಿಸಿ ಬಸ್ ಕಂಡಕ್ಟರ್ ನಿಂತಿದ್ದ ಕಡೆಗೆ ನಡೆದೆ. “ಸರ್, ಈ ಬಸ್ಸು ತುಮಕೂರಿಗೆ ಹೋಗುತ್ತಾ?” ಎಂದು ಕೇಳಿ ಖಚಿತಪಡಿಸಿಕೊಂಡೆ. “ಹೌದು, ಮದ್ದೂರು-ಕುಣಿಗಲ್ ಮೂಲಕ ಹೋಗುತ್ತೆ” ಎಂದ.

ಸರಿ ನೀನು ಚಂದ್ರಲೋಕದ ಮೂಲಕನಾದರೂ ಕರೆದುಕೊಂಡು ಹೋಗು ನನಗೇನಂತೆ, ಆದರೆ ನಮ್ಮ ಮನೆಯವರು ನನ್ನನ್ನು ಇಲ್ಲೇ ಕಂಡುಹಿಡಿದು ಮನೆಗೆ ಕರೆದುಕೊಂಡು ಹೋಗುವ ಮುನ್ನ ನೀ ಹೊರಡು ತಂದೆ ಎಂದು ಮನಸ್ಸಿನಲ್ಲೇ ಅವನನ್ನು ವಿನಂತಿಸಿಕೊಂಡೆ. ಬಸ್ಸಿನಲ್ಲಿ ಅಷ್ಟೇನು ಜನರಿರಲಿಲ್ಲ. ಚಾಲಕನ ಹತ್ತಿರದ ಒಂದು ಸೀಟು ಹಿಡಿದು ಕುಳಿತೆ. ಕ್ರಮೇಣ ಬಸ್ಸು ತುಂಬತೊಡಗಿತು. ಸುಮಾರು 06-10ರ ಸಮಯಕ್ಕೆ ಬಸ್ಸು ಹೊರಟಿತು. ಅದು ಮೈಸೂರಿನ ಹೊರಗಿರುವ ಕೊಲಂಬಿಯಾ ಆಸ್ಪತ್ರೆಯನ್ನು ದಾಟಿದ ನಂತರವೇ ನನ್ನ ಮನಸ್ಸು ನಿರಾಳವಾಗಿದ್ದು.

ಬ್ಯಾಗಿನಲ್ಲಿದ್ದ ಕೃಷ್ಣಮೂರ್ತಿ ಹನೂರರ ‘ನಿಕ್ಷೇಪ’ ಕಾದಂಬರಿಯನ್ನು ಓದತೊಡಗಿದೆ. ನಾಲ್ಕೈದು ಹಾಳೆ ತಿರುವುದರೊಳಗೆ ಬಹಳ ಆಯಾಸವಾಗಿದ್ದರಿಂದ ಕಣ್ಣುಗಳು ತೂಕಡಿಸುತ್ತಿದ್ದವು. ಕೊಂಚ ನಿದ್ರೆ ಮಾಡಿದೆ. ಮದ್ದೂರು ಬಂದದ್ದು, ಮದ್ದೂರು ವಡೆ ಮಾರುವವರ ಸದ್ದಿನಿಂದ ಗೊತ್ತಾಯಿತು. ಕಣ್ಣು ತೆರೆಯಲಿಲ್ಲ. ಹಾಗೇ ಮತ್ತೆ ನಿದ್ರೆಗೆ ಜಾರಿದೆ. ಸುಮಾರು 8-30ರ ಸಮಯಕ್ಕೆ ಕುಣಿಗಲ್ ಹತ್ತಿರ ಬಂದ. ಹಳೇ ರಸ್ತೆಯನ್ನು ಕಿತ್ತುಹಾಕಿ ಅಗಲೀಕರಣ ಹಾಗೂ ಹೊಸ ಡಾಂಬರೀಕರಣ ಶುರುವಾಗಿತ್ತು. ಬಸ್ಸು ಕಿತ್ತುಹಾಕಿದ್ದ ಹಳೆಯ ರಸ್ತೆಯ ಮೇಲೆ ಚಲಿಸತೊಡಗಿತ್ತು. ಬಸ್ಸು ಬಹಳವಾಗಿ ಅತ್ತ ಇತ್ತ ಅಳ್ಳಾಡತೊಡಗಿದ್ದರಿಂದ ನನಗೆ ಎಚ್ಚರವಾಯಿತು.

joxi_screenshot_1465823063202ಕುಣಿಗಲ್ ನಾನು ಹಿಂದೆ ನೋಡದಿದ್ದ ಸ್ಥಳವಾದ್ದರಿಂದ ನನ್ನಲ್ಲಿ ಊರಿನ ಬಗ್ಗೆ ಒಂದು ಕುತೂಹಲವಿತ್ತು. ಹಾಗೆ ಕಿಟಕಿಯಿಂದ ಈಚೆ ನೋಡತೊಡಗಿದೆ. ತೆಂಗು, ಅಡಿಕೆ, ಬಾಳೆ, ಜೋಳ, ಕಬ್ಬು, ಹೀಗೆ ಒಂದಿಲ್ಲೊಂದು ಬೆಳೆಗಳಿಂದ ಸಮೃದ್ಧಿ ಹೊಂದಿದ ಪ್ರದೇಶ. ಮತ್ತೆ ನನ್ನ ಮನಸ್ಸು ಮನೆಯವರ ಕಡೆಗೆ ತಿರುಗಿತು. ಆ ಸಮಯಕ್ಕಾಗಲೇ ಮನೆಯವರೆಲ್ಲರಿಗೂ ನನ್ನ ಪ್ರಯಾಣದ ವಿಚಾರ ತಿಳಿದು ಆಘಾತವಾಗಿರುತ್ತದೆಂದು ನೆನೆದು ಮನಸ್ಸು ಬಹಳವಾಗಿ ಮರುಗಿತು. ಕಣ್ಣಿನಲ್ಲಿ ಹನಿಗಳು ಮೂಡಿ ಮಾಯವಾಗುತ್ತಿದ್ದವು. ಮತ್ತೆ ಮನಸ್ಸನ್ನು ಒಂದು ತಹಬದಿಗೆ ತಂದು ನಿಲ್ಲಿಸಿ ನನ್ನ ಮುಂದಿನ ಗುರಿಯ ಬಗ್ಗೆ ಕಾಯಕಲ್ಪ ಕೊಡುವಷ್ಟರಲ್ಲಿ ತುಮಕೂರಿನ ಹತ್ತಿರ ಬಂದಿದ್ದೆವು.

“ಜ್ಞಾನದೇಗುಲಕ್ಕೆ ಎಲ್ಲರಿಗೂ ಸುಸ್ವಾಗತ” ಎಂದು ಬರೆದಿದ್ದ ಫಲಕವನ್ನು ನೋಡಿದೆ. ನಿಜವೇ ಎನಿಸಿತು. ನಡೆದಾಡುವ ದೇವರೆಂದೇ ಕರೆಯುವ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ತುಮಕೂರಿನ ಸುತ್ತ ಮುತ್ತ ಒಂದು ಶಿಕ್ಷಣ ಮತ್ತು ದಾಸೋಹ ಕ್ರಾಂತಿಯೇ ನಡೆಯುತ್ತಾ ಬಂದಿದೆ.

ನಗರವನ್ನು ಹೊಕ್ಕ ಕ್ಷಣದಿಂದಲೇ ವಾಹನಗಳ ಸದ್ದು, ಅವುಗಳ ಧ್ವನಿವರ್ಧಕಗಳಿಂದ ಮೂಡುತ್ತಿದ್ದ ಅಪಾರ ಸಪ್ಪಳ ನನ್ನ ಮನಸ್ಸಿನಲ್ಲಿ ನೆಲೆಸಿದ್ದ ಶಾಂತಿಯನ್ನು ಕದಡತೊಡಗಿತ್ತು. ಎಲ್ಲರಿಗೂ ಏನೋ ಒಂದು ತರಹದ ಆತುರ. ತಾಳ್ಮೆ ಕಳೆದುಕೊಂಡವರಂತೆ ಯದ್ವಾತದ್ವಾ ಓಡಿಸುತ್ತಾರೆ. ಧ್ವನಿವರ್ಧಕಗಳಿಂದ ಶಬ್ಧ ಮಾಡುವುದೇ ತಮ್ಮ ಆದ್ಯ ಹಕ್ಕು ಎಂಬುವಂತೆ. ಇವೆಲ್ಲಾ ಯೋಚನೆಗಳು ನನ್ನಲ್ಲಿ ಹಾದು ಹೋದಂತೆ ನಮ್ಮ ಬಸ್ಸು ಕೂಡ ಶಬ್ಧಮಾಡುತ್ತಾ ಬಸ್ ನಿಲ್ದಾಣವನ್ನು ತಲುಪಿದಾಗ ಸಮಯ ಸುಮಾರು 09:50 ಆಗಿತ್ತು. ಹೊಟ್ಟೆ ಚುರುಗುಟ್ಟುತ್ತಿತ್ತು. ಹೋಟೆಲ್‍ನಲ್ಲಿ ಹೋಗಿ ತಿಂಡಿ ತಿನ್ನುವ ಸಂಯಮ ನನ್ನಲ್ಲಿ ಇರಲಿಲ್ಲ. ಹಾಗೇ ಬೇಕರಿಯಲ್ಲಿ ಎರಡು ಬನ್ನು ಮತ್ತ್ತು ಒಂದು ಲೀಟರ್ ನೀರು ಕೊಂಡು, ಸಿದ್ಧಗಂಗೆಗೆ ಹೋಗುವ ದಾರಿಯನ್ನು ಕೇಳಿಕೊಂಡು ಕೈಯಲ್ಲಿದ್ದ ಎರಡು ಬನ್ನನ್ನು ತಿನ್ನುತ್ತಾ ಹೊರಟೆ.

ತುಮಕೂರಿನ ಸುಂದರ ಲಲನೆಯರತ್ತಾ ನನ್ನ ಕಣ್ಣುಗಳು ಆಗಾಗ ವಾಲತೊಡಗಿದ್ದವು. ಹುಟ್ಟು ಬುದ್ದಿ ಸುಟ್ಟರೂ ಹೋಗುವುದಿಲ್ಲ ಎನ್ನುವ ಮಾತು ನಿಜವಿರಬಹುದು. ಹತ್ತು ಮೈಲುಗಳನ್ನು ಸವೆಸಿ ಸಿದ್ಧಗಂಗಾ ಪುಣ್ಯಕ್ಷೇತ್ರ ತಲುಪಿದೆ. ಕೆಲವು ಮಕ್ಕಳ ಕುಟುಂಬವರ್ಗದವರು ಅಲ್ಲಿ ಇಲ್ಲಿ ಅಡ್ಡಾಡುತ್ತಿದ್ದುದು ಕಾಣಿಸಿತು. ಹಲವಾರು ಭಕ್ತರು ಸ್ವಾಮೀಜಿ ತಮ್ಮ ಪೀಠದಲ್ಲಿ ಬಂದು ಕೂರಲು ಕಾಯುತ್ತಿದ್ದರು. ನಾನು ಆವರಣದಲ್ಲಿ ಸ್ವಲ್ಪ ಹೊತ್ತು ಅಡ್ಡಾಡಿ, ಅರಳೀ ಮರ ಹಾಗೂ ಅದರ ಜೊತೆ ಬೆಸೆದಿದ್ದ ಬೇವಿನ ಮರದ ನೆರಳಿನಲ್ಲಿದ್ದ ಒಂದು ಕಟ್ಟೆಗೆ ತಲೆ ಒರಗಿಸಿ ಹಾಗೇ ನಿದ್ರೆಗೆ ಜಾರಿದೆ. ಅಬ್ಬಬ್ಬಾ ಎಂತಹ ತಂಪು ಎನ್ನುತ್ತೀರ. ನನಗೆ ನಿದ್ರೆ ಹತ್ತಿದ ಗಮನವೇ ಇಲ್ಲ.

ಊಟದ ಸಮಯದಲ್ಲಿ, ಮಕ್ಕಳ ಪ್ರಾರ್ಥನೆಯ ಸದ್ದು ಕೇಳಿ ಎಚ್ಚರವಾಯಿತು. ಮಕ್ಕಳ ಪಾರ್ಥನೆಯನ್ನು ಸ್ವಲ್ಪ ಹೊತ್ತು ಆಲಿಸಿ ದಾಸೋಹ ಭವನದ ಕಡೆಗೆ ಹೆಜ್ಜೆಯಿಟ್ಟೆ. ಭವನದ ಮುಂದೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಸರಣಿಯಲ್ಲಿ ನಿಂತಿದ್ದು, ಸ್ವಾಮೀಜಿಯವರು ತಮ್ಮ ಪೀಠ ಅಲಂಕರಿಸಿದ್ದಾರೆಂಬುದನ್ನು ತಿಳಿಸಿತು. ನಾನು ಕೂಡ ಹೋಗಿ ಸ್ವಾಮೀಜಿಯವರ ಆಶೀರ್ವಾದವನ್ನು ಪಡೆಯಲು ಸರಣಿಯಲ್ಲಿ ನಿಂತೆ. ನನ್ನ ಸರದಿ ಬಂದಾಗ, ಸ್ವಾಮೀಜಿಯವರ ಕಾಲಿಗೆ ಬಿದ್ದು, ಸಿಕ್ಕಿದ್ದ ಐದು ಸೆಕೆಂಡ್‍ಗಳಲ್ಲಿ ನನ್ನ ಮನಸಲ್ಲಿದ್ದುದನ್ನು ಹೇಳಿಕೊಂಡು ನನಗೆ ಆಶೀರ್ವಾದ ಮಾಡಬೇಕೆಂದು ಮನಸ್ಸಿನಲ್ಲೇ ಕೋರಿಕೊಂಡೆ. ಭಾರೀ ವರ ಪಡೆದಂತಾಯಿತು. ಎದ್ದು ಅವರತ್ತ ನೋಡಿದರೆ, ಎತ್ತಲೋ ಮುಖಮಾಡಿ ಏನನ್ನೋ ಬರೆಯುತ್ತಿದ್ದರು.

ದಾಸೋಹ ಭವನದಲ್ಲಿ ಕುಳಿತು ಮುದ್ದೆ, ಅನ್ನ ಸಾಂಬಾರಿನ ಪ್ರಸಾದವನ್ನು ಹೊಟ್ಟೆ ತುಂಬ ಊಟಮಾಡಿದೆ. ಹೊಟ್ಟೆಯ ಹಸಿವನ್ನೇನೋ ನೀಗಿಸಿದೆ, ಹಾಗೆಯೇ ನನ್ನ ಜ್ಞಾನದ ಹಸಿವನ್ನೂ ಕೂಡ ನೀಗಿಸು ತಂದೆ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದೆ. ಊಟ ಮಾಡಿದ ನಂತರ ಅದೇ ಅರಳೀ ಕಟ್ಟೆಯ ಮೇಲೆ ಹೋಗಿ ಕುಳಿತಾಗ ಮಧ್ಯಾಹ್ನದ ಸೋಮಾರಿ ನಿದ್ರೆ ಬರಶುರುಮಾಡಿತು. ಅದನ್ನು ಅಲ್ಲೇ ತಡೆದು ನಾನು ತಂದಿದ್ದ ಡೈರಿಯಲ್ಲಿ ನನ್ನ ಈ ಪ್ರಯಾಣದ ವಿವರಗಳನ್ನು ಬರೆಯತೊಡಗಿದೆ.

ಕನ್ನಡದಲ್ಲಿ ಬರೆದು ಬಹಳ ವರ್ಷಗಳೇ ಆಗಿದ್ದರಿಂದ ಕನ್ನಡ ಪದಗಳು ಅಷ್ಟು ಸುಲಲಿತವಾಗಿ ಬರುತ್ತಿರಲಿಲ್ಲ. ಮೊದಲು ಬಹಳ ಕಷ್ಟವಾಯಿತು. ಒಂದು ಹಾಳೆ ಬರೆದು ಮುಗಿಸುವಷ್ಟರಲ್ಲಿ ನನ್ನ ಕೈ ಸುಸ್ತುಬಿದ್ದು ಹೋಗಿತ್ತು. ಕಂಪ್ಯೂಟರ್ ಮುಂದೆ ಕುಳಿತು ಕೆಲಸಮಾಡಲು ಶುರುಮಾಡಿದ ಮೇಲೆ ಬರವಣಿಗೆ ಬಹಳವಾಗಿ ಕಡಿಮೆಯಾಗಿತ್ತು. ವರುಷಕ್ಕೆ ಒಂದು ಸಾವಿರ ಪದಗಳನ್ನು ಬರೆದರೆ ಹೆಚ್ಚು. ಬೆರಳುಗಳು ಜಡ್ಡು ಹಿಡಿದಿದ್ದವು. ಹಾಗೆಯೇ ಬಹುತೇಕ ಪದಗಳು ಆಂಗ್ಲ ಭಾಷೆಯಲ್ಲಿ ಹೊಳೆಯುತ್ತಿದ್ದವು. ಹೀಗಾಗಿ ಆಂಗ್ಲ ಭಾಷೆಯ ಪದಗಳನ್ನು ಕನ್ನಡಕ್ಕೆ ಅನುವಾದ ಮಾಡುವ ನಿಘಂಟಿನ ಅವಶ್ಯಕತೆ ಇತ್ತು. ಪುಸ್ತಕ ಮಳಿಗೆಯನ್ನು ಹುಡುಕಿಕೊಂಡು ಶಾಲಾ ಕಾಲೇಜುಗಳನ್ನು ಒಂದು ಸುತ್ತೊಡೆದೆ. ಪುಸ್ತಕದ ಅಂಗಡಿ ಮುಚ್ಚಿತ್ತು.

ತಿಂದಿದ್ದ ಅನ್ನವನ್ನು ಕರಗಿಸುವ ದೃಷ್ಟಿಯಿಂದ ಬೆಟ್ಟದ ಮೇಲಿದ್ದ ಗುಡಿಯ ಮೆಟ್ಟಿಲುಗಳನ್ನು ಏರತೊಡಗಿದೆ. ಈಚೆಯೇ ಮಟ್ಟಿಲ ಮೇಲೆ ಕುಳಿತಿದ್ದ ಭಿಕ್ಷುಕನಿಗೆ ದೇಣಿಗೆ ಕೊಟ್ಟು ಅವನ ಪಕ್ಕದಲ್ಲಿ ಕುಳಿತು ಕೆಳಗೆ ಕಾಣುತ್ತಿದ್ದ ಶ್ರೀಕ್ಷೇತ್ರದ ಪರಿಸರವನ್ನು ಸ್ವಲ್ಪ ಹೊತ್ತು ಕಣ್‍ತುಂಬಿಕೊಂಡೆ. ಕೋತಿಗಳು ಗುಡಿಗೆ ಬರುತ್ತಿದ್ದ ಭಕ್ತರನ್ನು ಪೀಡಿಸಿ, ಹೆದರಿಸಿ ಪೂಜೆಗೆ ತಂದಿದ್ದ ಹಣ್ಣು ಕಾಯಿಗಳನ್ನು ಕಿತ್ತುಕೊಂಡು ತಿನ್ನುತ್ತಿದ್ದುದು ಬಹಳ ತಮಾಷೆಯಾಗಿತ್ತು. ಒಬ್ಬ ಭಕ್ತ ಆಗತಾನೆ ಅಂಗಡಿಯಿಂದ ಕೊಂಡ ಹಣ್ಣು-ಕಾಯಿಯನ್ನು ಎರಡು ಕೋತಿಗಳು ಅವನನ್ನು ಆಟವಾಡಿಸಿ ಕಿತ್ತುಕೊಂಡವು. ಅವನಿಗೆ ಕೋಪ ಬಂದು ಒಂದು ಕಲ್ಲನ್ನು ಎತ್ತು ಅದರತ್ತ ಒಗೆದ. ಅದು ಹೋಗಿ ಅವನ ಕೈಚೀಲವನ್ನು ಕಿತ್ತುಕೊಂಡಿದ್ದ ಕೋತಿಗಳನ್ನು ಬಿಟ್ಟು ಮೂರನೇ ಕೋತಿಗೆ ಬಡಿಯಿತು. ಏಟು ತಿಂದ ಕೋತಿ ಕಿಟಾರನೆ ಕಿರುಚಿತು. ನನಗೆ ಕೋಪ ನೆತ್ತಿಗೇರಿತು. ಅವನನ್ನು ಕೇಳಿದೆ.

joxi_screenshot_1465823036259“ಅಲ್ಲ ಸ್ವಾಮಿ, ಗುಡಿಯೊಳಗಿರುವುದು ದೇವರೆಂದಾದರೆ ಗುಡಿಯ ಹೊರಗಿರುವ ಕೋತಿಗಳು ದೇವರಲ್ಲವೇ. ನೀವು ಪೂಜೆ ಮಾಡುವ ಆಂಜನೇಯನೂ ಒಂದು ಕೋತಿಯ ಪ್ರತಿರೂಪನಲ್ಲವೇ” ಎಂದೆ. ನನ್ನ ಮಾತಿನ ದಾಟಿ ಜೋರಾಗಿಯೇ ಇತ್ತು. ಭಕ್ತರೆಲ್ಲಾ ಇತ್ತ ಒಂದು ಕ್ಷಣ ತಿರುಗಿ ನೋಡಿದರು. ಕಲ್ಲು ಒಗೆದವ ಏನೂ ಮಾತನಾಡದೇ ಅಂಗಡಿಯಲ್ಲಿ ಮತ್ತೆ ಹಣ್ಣು ಕಾಯಿ ಕೊಂಡು ಅದನ್ನು ಬಹಳ ಜೋಪಾನ ಮಾಡಿ ಗುಡಿಯ ಕಡೆಗೆ ನಡೆದ. ನನ್ನ ಹಿತವಚನವನ್ನು ಕೇಳಿದ ಕೆಲವು ಭಕ್ತರು ತಾವೇ ಸ್ವಯಂಪ್ರೇರಿತರಾಗಿ ಕೋತಿಗಳಿಗೆ ಹಣ್ಣು ಕಾಯಿ ಹಾಕತೊಡಗಿದರು. ಅವರನ್ನು ನೋಡಿ ಮತ್ತಷ್ಟು ಜನ ಅದನ್ನು ಮುಂದುವರಿಸಿಕೊಂಡು ಹೊರಟರು.

ನನ್ನ ಪಕ್ಕದಲ್ಲಿದ್ದ ಭಿಕ್ಷುಕನ ಶಹಬಾಷಗಿರಿ ನನಗೆ ಸಿಕ್ಕಿತು. ನನಗೂ ಖುಷಿಯಾಗಿ ಅವನ ಕಥೆಯೇನೆಂಬುದನ್ನು ಅವನಿಂದ ಕೇಳತೊಡಗಿದೆ. ಸ್ವಂತ ಕಥೆಗಿಂತ ಗ್ರಹಗಳ ಶಕ್ತಿ ಮತ್ತು ಚರಿತ್ರೆಗಳನ್ನು ಹೇಳತೊಡಗಿದ. ಮಾತು ಎತ್ತಲೋ ತಿರುಗುತ್ತಿರುವ ಲಕ್ಷಣ ಕಂಡು, ಮಾತು ಮೊಟಕುಗೊಳಿಸುವ ಸಲುವಾಗಿ ಹಣ್ಣಿನ ಅಂಗಡಿಯ ಒಳಗಿದ್ದ ಯುವತಿಯ ಕಡೆ ತಿರುಗಿ ಮಾತನಾಡಿಸಿದೆ. “ಏನ್ರೀ ಮೇಡಂ ಅಂಗಡಿಯಲ್ಲಿ ಡಬಲ್ ವ್ಯಾಪಾರವಾಗಲಿ ಎಂದು ನೀವೇ ಕೋತಿಗಳಿಗೆ ಟ್ರೈನಿಂಗ್‍ಕೊಟ್ಟು ಇಲ್ಲಿ ತಂದು ಬಿಟ್ಟಿದ್ದೀರ?” ಎಂದು ಅವಳ ಕಾಲೆಳೆದೆ.

“ಊಂ. ಹೇಗೆ ಕಂಡುಹಿಡಿದುಬಿಟ್ಟಿರಿ? ನೀವೇನ್ ಸಿ.ಐ.ಡಿ ಕಡೆಯವರ?” ಎಂದು ನಕ್ಕಳು. ನಗುವಿನಲ್ಲಿ ತುಂಟತನವಿತ್ತು. ಒಂದು ತರಹ ಸೆಳೆತವಿತ್ತು. ಹುಡುಗಿಯ ಬಣ್ಣದಲ್ಲಿ ಸ್ವಲ್ಪ ಗೋಧಿಯ ಕಳೆಯಿದ್ದರೂ, ಈ ಕ್ಷೇತ್ರದ ಸುಂದರಿಯರಲ್ಲಿ ಒಬ್ಬಳಿರಬೇಕು ಎನಿಸಿತು. ಅದಾಗಲೇ ನಾಲ್ಕೈದು ಹುಡುಗರ ಜೊತೆ ಅವಳು ಚೇಷ್ಟೆ ಮಾಡಿದ್ದನ್ನು ನಾನು ನೋಡಿದ್ದೆ. ಆಗ ತಾನೆ ಬಂದ ಒಬ್ಬ ಹುಡುಗನಿಗೆ ತನಗೆ ಊಟ ಕಟ್ಟಿಸಿಕೊಂಡು ಬರಲು ಆಜ್ಞೆಯಿಟ್ಟಳು. ಅದೇ ತನ್ನ ಪೂರ್ವ ಜನ್ಮದ ಪುಣ್ಯವೆಂಬಂತೆ ಭಾವಿಸಿ ಅವನು ಅವಳಿಗೆ ಊಟ ತರಲು ಓಡಿ ಹೋದ.

ನಾನು ಮರುಮಾತನಾಡದೇ ನನ್ನ ಬರವಣಿಗೆ ಮುಂದುವರಿಸಿದೆ. ಅಷ್ಟರಲ್ಲಾಗಲೇ ಆ ಮಿಟುಕುಲಾಡಿಯ ಕಣ್ಣು ನನ್ನ ಮೇಲೆ ಬಿದ್ದಿತ್ತು. ನನ್ನ ಪಕ್ಕವೇ ಕುಳಿತಿದ್ದ  ಗ್ರಹಗಳ ವಿಜ್ಞಾನಿಗೆ ಮಾವಿನ ಹಣ್ಣು ಕೊಡುವ ನೆಪಮಾಡಿ, ಹತ್ತಿರ ಬಂದು ನನ್ನನ್ನು “ಎಕ್ಸ್ ಕ್ಯೂಸ್ ಮೀ” ಎಂದು ನನ್ನ ಗಮನವನ್ನು ಅವಳತ್ತ ಸೆಳೆಯಲು ಯತ್ನಿಸಿದಳು.

ನಾನು ಅವಳತ್ತ ತಿರುಗಿದೆ. ನನ್ನ ಕಡೆ ತನ್ನ ಕಳ್ಳ ನಗುಬೀರಿ “ನೀವು ಡೈರಿ ಬರೆಯುತ್ತಿದ್ದೀರ?” ಎಂದು ಕೇಳಿದಳು.

“ಇಲ್ಲ ಕತೆ ಬರೆಯುತ್ತಿರುವೆ” ಎಂದೆ.

“ವಾವ್. ನೀವು ಯಾವುದಾದರು ಫಿಲಂನಲ್ಲಿ ನಟಿಸಿದ್ದೀರ?” ಎಂದು ಕೇಳಿದಳು.

“ಅಯ್ಯೋ ರಾಮ! ನಾನು ಯಾವ ಆ್ಯಂಗಲ್‍ನಿಂದ ಸಿನಿಮಾ ನಟನ ತರಹ ಕಾಣುತ್ತೇನೆ ಹೇಳಿ?” ಎಂದು ನನ್ನ ಒಂದು ಕಣ್ಣು ಮಿಟುಕಿಸಿ ಕೇಳಿದೆ.

“ನೀವು ಫಿಲ್ಮ್ ಡೈರೆಕ್ಟರ್ ಅಲ್ವಾ? ನಿಮ್ಮನ್ನು ಎಲ್ಲೋ ನೋಡಿದ ನೆನಪು” ಎಂದಳು.

joxi_screenshot_1465823011165ಬೇರೆ ಸಮಯವಾಗಿದ್ದರೆ, ಒಂದು ಸುಂದರ ಕಥೆ ಕಟ್ಟಿ ತಮಾಷೆ ಮಾಡಿ ಅವಳ ಕಾಲೆಳೆದು ಅವಳಿಗೆ ಆಕಾಶ ತೋರಿಸುತ್ತಿದ್ದೆ. ಆದರೆ ನನ್ನ ಯೋಚನಾ ಲಹರಿ ಬೇರೆಯದೇ ಆಗಿತ್ತು. “ಯಾಕ್ರೀ? ಫಿಲಂನಲ್ಲಿ ಒಂದು ಚಾನ್ಸ್ ಬೇಕೇನು? ನಾನು ಯಾವ ಮೂವಿ ಸ್ಟಾರು ಅಲ್ಲ, ಡೈರಕ್ಟರು ಕೂಡ ಅಲ್ಲ” ಎಂಬ ನಿಜಾಂಶವನ್ನು ಬಿಚ್ಚಿಟ್ಟೆ.

“ಓ ಹೌದಾ? ಹಾಗಾದರೆ ಮುಂಚೆ ಇಲ್ಲೆ ಇದೇ ಸ್ಥಳದಲ್ಲಿ ಬಂದು ಕುಳಿತು ಬರೆಯುತ್ತಿದ್ದಿರಿ ಅಲ್ಲವೇ?” ಎಂದು ಕೇಳಿದಳು.

ಈ ಹುಡುಗಿ ಯಾಕೋ ನನ್ನನ್ನು ಬಿಡಲು ಕಾಣಿಸುತ್ತಿರಲಿಲ್ಲ. ನಾನು “ಹೌದು” ಎಂದು ಸುಳ್ಳು ಹೇಳಿ ಅವಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದೆ.

“ಅದೇ ನೋಡಿ, ನಾನು ಗೆಸ್ ಮಾಡಿದ್ದು ಸರಿಯಾಗಿದೆ. ಸಾರಿ! ಡಿಸ್ಟರ್ಬ್ ಮಾಡಿದ್ದಕ್ಕೆ” ಎಂದು ನನ್ನ ಇಂಗಿತವನ್ನು ಅರಿತಳು.

“ನೋ ಪ್ರಾಬ್ಲಮ್! ಎನಿವೇಸ್ ನಿಮ್ಮ ನಗು ತುಂಬಾ ಚೆನ್ನಾಗಿದೆ. ಟ್ರೈ ಮಾಡಿ, ಸಿನಿಮಾದಲ್ಲಿ ಚಾನ್ಸ್ ಸಿಕ್ಕರೂ ಸಿಗಬಹುದು” ಎಂದು ನನ್ನ ಮೆಚ್ಚಿಗೆ ವ್ಯಕ್ತಪಡಿಸಿದೆ.

“ತುಂಬಾ ಥ್ಯಾಂಕ್ಸ್” ಎಂದು ನುಲಿದಾಡುತ್ತಾ ತನ್ನ ಅಂಗಡಿಗೆ ಹಿಂತಿರುಗಿದ ಮೇಲೂ, ಅವಳು ನನ್ನ ಮೇಲೆ ಆಗಿಂದಾಗ್ಗೆ ಕಣ್ಣು ಹಾಯಿಸುತ್ತಿದ್ದುದು, ಹಾಗೂ ತನ್ನ ಹತ್ತಿರ ಮಾತನಾಡಲು ಬರುತ್ತಿದ್ದ ಹುಡುಗರನ್ನು ತಿರಸ್ಕರಿಸಿ ಹಿಂದಕ್ಕೆ ಕಳುಹಿಸುತ್ತಿದ್ದುದು ಅವಳ ಮೇಲೆ ನನಗೆ ಕೆಲವು ಅನುಮಾನಗಳನ್ನು ಮೂಡಿಸಿತು. ಇಲ್ಲೇ ಇದ್ದರೆ ಎಲ್ಲಿ ನನ್ನನ್ನು ಪಟಾಯಿಸಿಬಿಟ್ಟಾಳು ಎಂದು ಹೆದರಿ ನಾನು ಅಲ್ಲಿಂದ ಅವಳಿಗೆ ಹೇಳದೇ ಕೇಳದೇ ಕಾಲ್ಕಿತ್ತೆ.

ಆ ರಾತ್ರಿ ಅಲ್ಲೇ ಉಳಿಯುವುದೋ? ಅಥವಾ ಬೇರೆಲ್ಲಾದರು ಹೋಗುವುದೋ ಎಂದು ಯೋಚನೆ ಶುರುವಾಯಿತು. ಆ ರಾತ್ರಿ ಅಲ್ಲೇ ಉಳಿಯಬೇಕಾದರೆ ಸಂಸ್ಥೆಯ ಅತಿಥಿ ಗೃಹದಲ್ಲಿ ಬಾಡಿಗೆ ಕಟ್ಟಿ ಒಂದು ಕೋಣೆ ಪಡೆಯಬೇಕು. ಅದೇ ಹಣದಲ್ಲಿ ಬೇರೆ ಎಲ್ಲಿಗಾದರು ಹೊರಟರೆ ಹೇಗೆ? ಎಂಬ ವಿಚಾರಮಾಡಿದೆ. ಆದರೆ ಹೋಗುವುದಾದರೂ ಎಲ್ಲಿಗೆ? ಹಾಗೆ ಯೋಚನೆ ಮಾಡುತ್ತಾ ಕುಳಿತಿರಲು ಪಕ್ಕದಲ್ಲಿದ್ದ ಗುಂಪು ಅದೇ ರಾತ್ರಿ ಹುಬ್ಬಳ್ಳಿಗೆ ರೈಲು ಹೊರಡುವುದಾಗಿ ಮಾತನಾಡಿಕೊಳ್ಳುತ್ತಿದ್ದುದು ನನ್ನ ಕಿವಿಗೂ ಬಿತ್ತು. ಸರಿ, ರೈಲು ನಿಲ್ದಾಣಕ್ಕೆ ಹೋಗಿ ವಿಚಾರಿಸುವ ಎಂದು ಅಲ್ಲಿಂದ ಹೊರಟೆ. ಬಹಳ ಆಯಾಸವಾಗಿದ್ದರಿಂದ ಮತ್ತೆ ಅಲ್ಲಿಂದ ನಡೆದುಕೊಂಡು ಹೋಗುವುದು ಬೇಡವೆಂದು ಅಲ್ಲೇ ಕಾಯುತ್ತಿದ್ದ ಬಸ್ಸಿನಲ್ಲಿ ಹತ್ತಿ ಕುಳಿತೆ. ಬಸ್ಸು ನಾನು ಬೆಳಿಗ್ಗೆ ಇಳಿದಿದ್ದ ತುಮಕೂರಿನ ಬಸ್‍ಸ್ಟಾಂಡ್‍ನಲ್ಲೇ ಬಂದು ನಿಂತಿತು.

ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗದ ಮಧ್ಯೆ ರಸ್ತೆ ಬದಿಯಲ್ಲಿ ತಳ್ಳುವ ಗಾಡಿಯ ಮೇಲೆ ಓರ್ವ ಮಹಿಳೆ ಕೆಲವು ಪುಸ್ತಕಗಳನ್ನು ಇಟ್ಟುಕೊಂಡು ಮಾರುತ್ತಿದ್ದುದು ಕಂಡು ಬಂತು. ಅವಳ ಹತ್ತಿರ ಹೋಗಿ ಆಂಗ್ಲ ಪದಗಳನ್ನು ಕನ್ನಡಕ್ಕೆ ಅನುವಾದಿಸುವ ನಿಘಂಟನ್ನು ಕೊಂಡು ಮುಂದುವರಿದೆ. ಸ್ವಲ್ಪ ದೂರದಲ್ಲೇ ಸಿಕ್ಕ ಸಂಚಾರಿ ಸಿಗ್ನಲ್‍ನ್ನು ದಾಟಿ ಒಂದು ಇನ್ನೂರು ಮೀಟರ್ ದೂರವಿದ್ದ ರೈಲ್ವೆಸ್ಟೇಷನ್ ತಲುಪಿ, ಟಿಕೆಟ್ ಕೊಳ್ಳುವವರ ಸರಣಿಯಲ್ಲಿ ನಿಂತೆ. ರಾತ್ರಿ 7ಗಂಟೆಗೆ ಪಂಡರಾಪುರ ಎಕ್ಸ್ ಪ್ರೆಸ್ ಬೆಂಗಳೂರಿನಿಂದ ಬರುವುದೆಂದು ಗೊತ್ತಾಯಿತು. ಸಾಮಾನ್ಯ ವರ್ಗದ ಬೋಗಿಯಲ್ಲಿ ಒಂದು ಟಿಕೆಟ್ ಕೊಡಿ ಎಂದರೆ ಆರು ಗಂಟೆಯ ಮೇಲೆ ಬರಲು ಹೇಳಿದರು. ನಾನು ನಾಲ್ಕು ಗಂಟೆಗೇ ರೈಲು ನಿಲ್ದಾಣ ತಲುಪಿದ್ದರಿಂದ ರೈಲು ಹೊರಡಲು ಇನ್ನು ಮೂರು ತಾಸಿನ ಸಮಯ ಇತ್ತು. ಅಲ್ಲೇ ಪಕ್ಕದಲ್ಲೆ ಇದ್ದ ಅಂಗಡಿಯಲ್ಲಿ ಚಹಾ ಕುಡಿದು ಒಂದು ಸುತ್ತು ಓಡಾಡಿಕೊಂಡು ಬಂದು, ಟಿಕೆಟ್ ಪಡೆದು ರೈಲು ಕಾದು ಕುಳಿತೆ. ರೈಲಿನಲ್ಲಿರುವ ಶೌಚಾಲಯವನ್ನು ನೆನೆದು ಭಯವಾಯಿತು. ಸ್ಟೇಷನ್‍ನಲ್ಲೇ ಇದ್ದ ಸುಸಜ್ಜಿತವಾದ ದುಡ್ಡುಕೊಟ್ಟು ಉಪಯೋಗಿಸುವ ಶೌಚಾಲಯದಲ್ಲಿ ನನ್ನ ಕೆಲಸ ಮುಗಿಸಿ ನಿರಾಳನಾದೆ.

ಒಂದು ಕಪ್ಪಗೆ ಕುಳ್ಳಗೆ ಇದ್ದ ಹುಡುಗಿ ನನ್ನ ಪಕ್ಕವೇ ಬಂದು ಕುಳಿತು ತಲೆತಿನ್ನಲು ಶುರುಮಾಡಿದಳು. ಹುಬ್ಬಳ್ಳಿಗೆ ಹೋಗುವ ರೈಲಿನ ಬಗ್ಗೆ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳತೊಡಗಿದಳು. 07:10ಗೆ ಬರುವುದೆಂದು ಎಲೆಕ್ಟ್ರಾನಿಕ್ ಬೋರ್ಡ್ ತೋರಿಸಿದ್ದನ್ನು ಗಮನಿಸಿ ಅವಳಿಗೆ ಹೇಳಿ ಅವಳ ಬಾಯಿ ಮುಚ್ಚಿಸಿದೆ. ಕೊನೆಯ ಕ್ಷಣದಲ್ಲಿ ನಾವು ತಿಳಿದದ್ದು ತಪ್ಪು, 06:58ಗೆ ಬರುವ ರೈಲಿಗೆ ಹೋಗಬೇಕೆಂದು ತಿಳಿದು ದಿಗ್ಬ್ರಮೆಯಾಯಿತು. ಇಬ್ಬರೂ ಒಂದನೇ ಪ್ಲಾಟ್‍ಫಾರ್ಮ್‍ಗೆ ದೌಡಾಯಿಸಿದೆವು.

ಆದಾಗಲೇ ರೈಲು ಬಂದು ನಿಂತಿತ್ತು. ನನಗೆ ಅಷ್ಟಾಗಿ ರೈಲಿನಲ್ಲಿ ಪ್ರಯಾಣ ಮಾಡಿ ಅಭ್ಯಾಸವಿಲ್ಲದಿದ್ದರಿಂದ ಗಾಬರಿಯೋ ಗಾಬರಿ. ಒಬ್ಬರು ಮುಂದಿನ ಬೋಗಿಗಳು ಸಾಮಾನ್ಯ ವರ್ಗದ್ದು ಎಂದರು. ಅವಳು ಅತ್ತ ಓಡತೊಡಗಿದಳು. ಅಷ್ಟರಲ್ಲೇ ಇನ್ನೊಬ್ಬರು ಕೊನೆಯ ಕೆಲವು ಬೋಗಿಗಳೂ ಕೂಡ ಸಾಮಾನ್ಯ ವರ್ಗದವೇ ಆಗಿವೆ ಎಂದರು. ಅದನ್ನು ಕೇಳಿದ್ದೇ ತಡ ಆ ಹುಡುಗಿಯಿಂದ ತಪ್ಪಿಸಿಕೊಂಡರೆ ಸಾಕಾಯಿತು ಎಂದು ಕೊನೆಯ ಬೋಗಿಗಳ ಕಡೆಗೆ ಓಡಿದೆ. ಒಂದು ಬೋಗಿಯಲ್ಲಿ ಹತ್ತಿ ಕಿಟಕಿಯ ಬಾಜುವಲ್ಲೇ ಖಾಲಿ ಇದ್ದ ಸೀಟನ್ನು ಆಕ್ರಮಿಸಿಕೊಂಡೆ. ಸ್ವಲ್ಪ ಹೊತ್ತು ಬರೆಯೋಣವೆಂದು ಕುಳಿತರೆ, ರೈಲಿನ ವೇಗ ಹೆಚ್ಚಾದಂತೆಲ್ಲಾ, ನನ್ನ ಬರವಣಿಗೆ ಅಸ್ಪಷ್ಟವಾಗುತ್ತಿತ್ತು. ಹೌದು, ಮನಸ್ಸಿನ ತಲ್ಲಣದ ವೇಗ ಹೆಚ್ಚಿದಂತೆಲ್ಲಾ ಜೀವನದ ಲಿಪಿಯೂ ಕೂಡ ಅಸ್ಪಷ್ಟವಾಗುತ್ತದೆ. ನಡೆಯುವ ದಾರಿಯು ಕಷ್ಟವಾಗುತ್ತಾ ಹೋಗುತ್ತದೆ.

joxi_screenshot_1465822984811ತಿಪಟೂರಿನ ಸ್ಟೇಷನ್‍ನ ಹೊರಗಿನಿಂದ ಯಾವಾಗ “ಇಡ್ಲಿ ವಡೆ ಸಾಂಬಾರ್, ಇಡ್ಲಿ ವಡೆ ಸಾಂಬಾರ್” ಎಂಬ ಕೂಗು ಕೇಳಿತೋ ಮನಸ್ಸು ಬರವಣಿಗೆಯಿಂದ ಹೊಟ್ಟೆಯ ಕಡೆಗೆ ತಿರುಗಿತು. ಬದುಕಿರುವುದೇ ತುತ್ತು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ ಎಂಬ ಮಾತು ನಿಜವೆನಿಸಿತು. ಬಿಸಿ ಇಡ್ಲಿ ವಡೆಯ ರುಚಿ ಬಾಯಿ ಚಪ್ಪರಿಸುವಂತಿತ್ತು. ಹಸಿವಿನ ಹೊಟ್ಟೆಗೆ ಹಳಸಿದ ಅನ್ನವೂ ಮೃಷ್ಟಾನ್ನ ಭೋಜನವಂತೆ. ಮನೆಯಲ್ಲಿ ಬಿಸಿ ಇಡ್ಲಿ, ಚಟ್ನಿ, ಸಾಂಬಾರಿನ ಜೊತೆ ಬೆಣ್ಣೆ ಹಾಕಿಕೊಟ್ಟರೂ ಏನಾದರೊಂದು ತಪ್ಪು ಕಂಡು ಹಿಡಿದು ಸಿಡಿಮಿಡಿಗೊಳ್ಳುತ್ತಿದ್ದ ನನ್ನ ತಮ್ಮನ ನೆನಪಾಯಿತು.

ಧಾರವಾಡವನ್ನು ರೈಲು ಬೆಳಗಿನ ಜಾವ 04:00ರಿಂದ 04:30 ಹೊತ್ತಿಗೆ ತಲುಪಬಹುದೆಂದು ಎಂದು ಸಹ ಪ್ರಯಾಣಿಕರನ್ನು ಕೇಳಿ ತಿಳಿದೆ. ಸರಿ ಸ್ವಲ್ಪ ಸಮಯ ಮಲಗುವ ಯೋಚನೆ ಬಂತು. ನನ್ನ ಶೂಗಳನ್ನು ಸೀಟಿನ ಕೆಳಗೆ ಬಿಚ್ಚಿಟ್ಟು, ಸರಂಜಾಮು ಇಡುವ ಜಾಗಕ್ಕೆ ಏರಿ ನನ್ನ ಬ್ಯಾಗನ್ನು ತಲೆಗೆ ಆಸರೆಯನ್ನಾಗಿಸಿ ಮಲಗಿದೆ. ಹೀಗಾಗಿ ಎಲ್ಲಿ ಪಕ್ಕಕ್ಕೆ ತಿರುಗಲು ಹೋಗಿ ಕೆಳಗೆ ಬಿದ್ದು ಬಿಡುವೆನೆಂಬ ಭಯದಿಂದ ಆವಾಗವಾಗ ಮೈ ಬೆಚ್ಚಿ  ಬೀಳುತ್ತಿತ್ತು. ಸಾಮಾನ್ಯ ವರ್ಗದ ಬೋಗಿಯಾದ್ದರಿಂದ ಸ್ವಲ್ಪ ಗಲಾಟೆ ಹೆಚ್ಚಿತ್ತು.

ಹಿಂದಿ, ಕನ್ನಡ, ಮರಾಠಿ ಎಲ್ಲಾ ಭಾಷೆಯನ್ನು ಆಡಿಸಿ ಜಾಡಿಸಿ ಕುಡಿದಂತಾಗಿತ್ತು. ಅಲ್ಲದೆ ನಾನು ಗಡತ್ತಾಗಿ ನಿದ್ರೆ ಮಾಡಿ ಧಾರವಾಡ ಬಂದಾಗ ನನಗೆ ಎಚ್ಚರವಾಗದೇ ರೈಲು ಮುಂದಕ್ಕೆ ಹೊರಟು ಹೋದರೆ ಏನಪ್ಪಾ ಗತಿ ಎಂಬ ಭಯ ಬೇರೆ. ಬಹಳ ಅಸ್ಪಷ್ಟ ನಿದ್ರೆ. ಹಾಗೂ ಹೀಗೂ ಹುಬ್ಬಳ್ಳಿ ಬರುವ ತನಕ ಮಲಗಿದೆ. ನಗರ ಹತ್ತಿರ ಬರುತ್ತಿದ್ದಂತೆ ರೈಲು ಕೂಗುಟ್ಟತೊಡಗಿತು. ಕೆಳಗಿಳಿದು ಹುಬ್ಬಳ್ಳಿಯನ್ನು ನೋಡಲು ಕುಳಿತೆ. ಕತ್ತಲಲ್ಲಿ ನಗರ ನೋಡುವುದೆಂತು. ಎಲ್ಲಿ ನೋಡಿದರಲ್ಲಿ ದೀಪಗಳು. ಹುಬ್ಬಳ್ಳಿಯಲ್ಲಿ ಅಷ್ಟು ಸುಸಜ್ಜಿತವಾದ ರೈಲ್ವೆ ಸ್ಟೇಷನ್ ಇರಬಹುದೆಂಬ ಕಲ್ಪನೆಯೂ ಇರಲಿಲ್ಲ. ರಾತ್ರಿ ಕೂಡ ಹಲವಾರು ಅಂಗಡಿಗಳು ತೆರೆದಿದ್ದವು. ಅಲ್ಲಿ ಇಲ್ಲಿ ಪೋಲಿಸರ ಪಹರೆಯು ಕೂಡ ಕಾಣಿಸಿತು.

[ಇಲ್ಲಿಯ ತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ 20 ಮೈಲುಗಳು]

‍ಲೇಖಕರು Admin

14 June, 2016

21 Comments

  1. Pooja

    Good writing .. I Felt even i am travelling with you…

    • RaDa

      Thanks Pooja 🙂

      Travel with me for next few weeks.. Am glad to have a company 😉

  2. vinay

    Kannadada into the wild

    • RaDa

      Yes Vinay 🙂 Into the wild..

      Please follow the upcoming wildness.

  3. Pradeep K S

    Great start!! Very curious to read upcoming episodes…

    • RaDa

      Thanks Paddi 🙂 Curiosity is a very good start. Am glad you liked it. Thanks for your support.

  4. Sangeeta Kalmane

    ಸರಾಗವಾಗಿ ಓದಿಕೊಂಡು ಹೋಗುವ ಬರಹ. ಕೊನೆಯ ಪ್ಯಾರಾದಲ್ಲಿ ವಣಿ೯ಸಿದ ಎಲ್ಲಿ ಇಳಿಯಬೇಕಾದ ಸ್ಥಳ ದಾಟಿ ಮುಂದೆ ಹೋಗಿ ಬಿಡುತ್ತೊ ಇದು ಪ್ರಯಾಣದಲ್ಲಾಗುವ ನೈಜ ಘಟನೆ.
    ಚೆನ್ನಾಗಿದೆ. ಮುಂದೇನಾಗುತ್ತೆ ಅನ್ನುವ ಕುತೂಹಲ.

    • RaDa

      ಧನ್ಯವಾದಗಳು ಸಂಗೀತ ಅವರೇ.

      ತಮಾಷೆ ಎನಿಸಿದರೂ, ಈಗಲೂ ರಾತ್ರಿ ಪ್ರಯಾಣ ಮಾಡಿದರೆ ನನಗೆ ಆ ಭಯ ಕಾಡುತ್ತೆ.

      ಈಗಾಗಲೇ ಪುಸ್ತಕದ ಕೆಲವು ಅಧ್ಯಾಯಗಳು ಪ್ರಕಟಗೊಂಡಿದೆ. ತಾವು ಓದಿ ತಮ್ಮ ಅಭಿಪ್ರಾಯ ತಿಳಿಸಿ. ಇಷ್ಟವಾದರೆ ತಮ್ಮ ಸ್ನೇಹಿತರಿಗೂ ಓದಲು ಹೇಳಿ. ಈಗಿರುವ ತಮ್ಮ ಕುತೂಹಲವು ಕಡೆವರೆಗೂ ಇರುತ್ತದೆಂದು ಭಾವಿಸುತ್ತೇನೆ.

      ಕೆಳಗಿನ ವಿಳಾಸದಲ್ಲಿ ಎಲ್ಲಾ ಅಧ್ಯಾಯಗಳೂ ಲಭ್ಯವಿರಲಿದೆ.

      http://avadhimag.online/category/ಅಂಕಣ/ಕಾಣದ-ಕಡಲಿಗೆ-ಹಂಬಲಿಸಿದೆ-ಮನ

  5. He ho

    Good one..keep it rolling…

    • RaDa

      Thanks HeHo 🙂 Be part of this roller coaster journey for next few weeks..

  6. Vinay

    Good read Rahul!! Very nice

    • RaDa

      Thanks Vinay. Am glad you liked it. Please follow upcoming episodes too.

  7. Divya Vikranth

    Nimma baraha tumba channagide adbutha

  8. Divya Vikranth

    Nimma baraha tumba chennagide adhbutha

    • RaDa

      Thanks Divya. Nimage istavaadare nanaguu santhosha. mikka adhyaayagalannu odi.

  9. Shama, Nandibetta

    ಹೀಗೆ ಬರೆದರೆ ತಿಂಗಳೇನು ವರ್ಷವಿಡೀ ಹೆಜ್ಜೆ ಹಾಕಬಹುದು

    • RaDa

      ಧನ್ಯವಾದಗಳು ಶಾಮ ಅವರೇ.

      ತಮ್ಮಂತಹ ಸಹೃದಯೀ ಓದುಗರು ನನ್ನ ಜೊತೆ ಹೆಜ್ಜೆ ಹಾಕಿದರೆ ವರ್ಷವಿಡೀ ಬರೆಯಲು ನಾನೂ ಸಿದ್ಧ.

      ಈಗಾಗಲೇ ಪುಸ್ತಕದ ಕೆಲವು ಅಧ್ಯಾಯಗಳು ಪ್ರಕಟಗೊಂಡಿದೆ. ತಾವು ಓದಿ ತಮ್ಮ ಅಭಿಪ್ರಾಯ ತಿಳಿಸಿ. ಇಷ್ಟವಾದರೆ ತಮ್ಮ ಸ್ನೇಹಿತರಿಗೂ ಓದಲು ಹೇಳಿ.

      ಕೆಳಗಿನ ವಿಳಾಸದಲ್ಲಿ ಎಲ್ಲಾ ಅಧ್ಯಾಯಗಳೂ ಲಭ್ಯವಿರಲಿದೆ.

      http://avadhimag.online/category/ಅಂಕಣ/ಕಾಣದ-ಕಡಲಿಗೆ-ಹಂಬಲಿಸಿದೆ-ಮನ

  10. Anonymous

    Number iskolad thanae ah godhi banna sadharana maikatti navludu :p

    • ರಾದ

      ಹಾ..ಹಾ..ಹಾ.. ನಂಬರ್ ತೆಗೆದುಕೊಳ್ಳಬಹುದಿತ್ತು. ಆದರೆ ಅವಳಿಗೆ ಕರೆ ಮಾಡಲು ನನ್ನ ಹತ್ತಿರ ಮೊಬೈಲ್ ಇರಲಿಲ್ಲ.
      ಅದಕ್ಕಿಂತ ಮಿಗಿಲಾಗಿ, ನಾನು ಅವಳನ್ನು ಮಾತನಾಡಿಸಿದರೇ ಅವಳ ಬಾಲಂಗೋಚಿಗಳು ತಮ್ಮ ಓರೇಗಣ್ಣಿನಿಂದ ಗುರಾಯಿಸುತ್ತಿದ್ದರು. ನಾನು ನಂಬರ್ ಪಡೆದಿರುವ ವಿಷಯವೇನಾದರೂ ಅವಳ ಅಭಿಮಾನಿ ಬಳಗಕ್ಕೆ ಗೊತ್ತಾಗಿದ್ದರೆ ನನ್ನನ್ನು ಹೊಡೆದು ಪಕ್ಕದಲ್ಲೇ ಹಾದು ಹೋಗುವ ರೈಲು ಕಂಬಿಯ ಮೇಲೆ ಬಿಸಾಕುತ್ತಿದ್ದರು. ನನ್ನ ಈ ಪ್ರಯಾಣ ಮೊದಲ ದಿನಕ್ಕೇ ಸಮಾಪ್ತಿಯಾಗುತ್ತಿತ್ತು.

  11. Tejavardhan vishwakarma

    ಜೀವನದ ನೈಜತೆಯ ಪಯಣವನ್ನು ತಾವು ಬಹಳ ಸರಳವಾಗಿ ಸುಸಂಸ್ಕೃತವಾಗಿ ಸವಿಸ್ತಾರದಿಂದ ವಿವರಿಸಿದ್ದೀರ ಹಾಗೂ ಬಹಳ ಕುತೂಹಲವನ್ನು ಮೂಡಿಸಿದ್ದೀರ ಅದರಲ್ಲೂ ತಾವು ಕೊಟ್ಟಂತಹ ಹೋಲಿಕೆಗಳು ಬಹಳ ಅದ್ಬುತವಾಗಿ ಮೂಡಿಬಂದಿದೆ.

    ಧನ್ಯವಾದಗಳು

    • ರಾದ

      ಧನ್ಯವಾದಗಳು. ಹೌದು ಇದೊಂದು ಅಧ್ಬುತ ಪ್ರಯಾಣ.
      ಮುಂದಿನ ಕೆಲವವು ವಾರಗಳು, ನೀವೂ ಕೂಡ ನನ್ನ ಜೊತೆ ಪ್ರತೀ ದಿನವೂ ಒಂದೊಂದು ಹೆಜ್ಜೆ ಹಾಕಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading