ನನ್ನ ಡೈವೋರ್ಸ್ ಆಯ್ತು: ಉಮಾಶ್ರೀ

ಜೀವನ ‘ನಾಟಕ’ದ ಹೃದಯಸ್ಪರ್ಶಿ ಪಾತ್ರವೊಂದರಲ್ಲಿ…!

ಅಹರ್ನಿಶಿ ಪ್ರಕಾಶನ ಹೊರತರುತ್ತಿರುವ ಉಮಾಶ್ರೀ ಅವರ ಬದುಕಿನ ಕಥನ ‘ಬೆಂಕಿ ಬೆಡಗು’ ಆಯ್ದ ಭಾಗ

ಉಮಾಶ್ರೀ

ಇಷ್ಟರ, ಮಧ್ಯೆ ನನ್ನ ಮಕ್ಕಳು ಓದ್ತಾ ಇದ್ರು, ಸಿನಿಮಾದಲ್ಲಿ ಒಳ್ಳೆ ಅವಕಾಶ ಸಿಕ್ತು. ಜೀವನ ನಿರುಂಬಳವಾಗತೊಡಗಿತ್ತು. ಅಧಿಕೃತ ಡೈವೋಸರ್್ 1998 ಆದದ್ದು 1977ರಲ್ಲೇ ಸಂಬಂಧ, ಸಂಪರ್ಕ ಅದು ಕಡಿದು ಹೋಗಿತ್ತು. ನಾನು ಹೋಗುವ, ಅವರು ಬರುವ ಎಲ್ಲ ಪ್ರಶ್ನೆಗಳೂ ಮುಗಿದಿದ್ದವು. ಆದ್ರೆ ನನ್ನ ಗಂಡನ ತಾಯಿ, ನನ್ನ ಅತ್ತೆ ಅವರಿಗೆ ಮಾತ್ರ ‘ಉಮಾ’ ಅಂದ್ರೆ ಬಾಳ ಇಷ್ಟ. ಅವರಂದ್ರೆ ನನಗೂ ಪ್ರೀತಿ. ಏಕೆಂದ್ರೆ ಆ ಹೆಂಗಸು ತುಂಬಾನೆ ಒಳ್ಳೆಯವರು. ಸೊಸೆಗೆ ಕಷ್ಟ ಕೊಡೋ ಅವರ ಮಗನನ್ನೇ ಬಯ್ಯುತ್ತಿದ್ರೆ ಹೊರತು ನನ್ನನ್ನು ಬೈಯ್ದದ್ದು ತುಂಬಾ ಕಡಿಮೆ. ನಮ್ಮ ಅಮ್ಮನ ಮೂಲಕ ಏನಾದ್ರೂ ಹೇಳಿಕಳ್ಸೋರು. ನಾನು ಹೋಗದಿದ್ರೂ ಹಣ ಸಹಾಯ ಇತ್ಯಾದಿ ಮಾಡ್ತಾನೆ ಬಂದಿದ್ದೆ. ನನ್ನ ತಾಯಿ ಮತ್ತು ಅತ್ತೆ ನಡುವೆ ಒಳ್ಳೆಯ ಸಂಬಂಧವಿದೆ.
ನಾನು ನಾಟಕ, ಸಿನಿಮಾ ಅಂತ ಸಿಕ್ಕಾಪಟ್ಟೆ ಬಿಜಿಯಾಗಿದ್ದಾಗಿನ ಒಂದು ದಿನ ನನ್ನ ಅಮ್ಮನಲ್ಲಿ ನಾನು ಒಮ್ಮೆ ಉಮಾಳನ್ನು ನೋಡಬೇಕಮ್ಮಾ ಕಳಿಸಿಕೊಡು ಅಂತ ಹೇಳಿ ಕಳ್ಸಿದ್ದರು. ಆ ಹೊತ್ತಿಗೇ ಅವರು ಕಾಯಿಲೆ ಬಿದ್ದಿದ್ದರು ಕೂಡ. ಒಂಬತ್ತು ಹತ್ತು ದಿನ ಹಾಸಿಗೆಯಲ್ಲಿ ಒದ್ದಾಡುತ್ತಿದ್ರೂ ಅವರ ಗಂಡು ಮಕ್ಕಳು ಆಸ್ಪತ್ರೆಗೆ ಸೇರ್ಸೇ ಇಲ್ಲ. ಹಿಂದೆಲ್ಲಾ ಅಮ್ಮ ಎಷ್ಟೇ ಬಾರಿ ಅವರು ಕರ್ದಿದ್ದಾರೆ ಅಂದ್ರೂ ನಾನೂ ಹೋಗಿರಲಿಲ್ಲ. ಈ ಬಾರಿ ನಮ್ಮ ಅಮ್ಮ ಅವರು ಸಾಯೋ ಸ್ಥಿತಿಯಲ್ಲಿದ್ದಾರೆ. ಪ್ರಾಣ ಹೋಗೋ ಸಮಯ. ಅವರ ಆಸೆ ಈಡೇರದಿದ್ರೆ ಪ್ರಾಣ ಸಲೀಸಾಗಿ ಹೋಗಲ್ವಂತೆ. ಒಮ್ಮೆ ಹೋಗಿ ಬಾ ಅಂತ ಸಾರಿ ಸಾರಿ ಹೇಳಿದ್ರು. ನಾನು ನನಗೆ ಅತ್ತೆಯೂ ಇಲ್ಲ. ಅತ್ತೆ ಮನೆಯೂ ಇಲ್ಲ ಅಂತ ಎಷ್ಟೇ ಹೇಳಿ ಸಿಡಿಮಿಡಿಗೊಂಡರೂ ಅಮ್ಮ ಬಿಡಲೇ ಇಲ್ಲ. ಸರಿ, ಹೋದೆ.
ನನ್ನ ಭಾವ, ನಾದಿನಿಯರು, ನನ್ನ ಗಂಡ ಎಲ್ಲಾ ಕೂತಿದ್ರು. ಅತ್ತೆ ಕಾಲ ಬಳಿ ಕೂತೆ. ಅಮ್ಮಾ ನೋಡಿ, ಯಾರು ಬಂದಿದ್ದಾರೆ ಅಂತ ಅತ್ತೆಯನ್ನು ಎಬ್ಬಿಸಿ ಕೂರ್ಸಿದ್ರು. ನನ್ನನ್ನು ಮುಟ್ಟಿ ನೋಡಿದ್ರು. ನಾನವಾಗ ಎಲ್ಲಾ ಬೆರಳುಗಳೀಗೂ ಉಂಗುರಗಳನ್ನು ಹಾಕ್ತಾ ಇದ್ದೆ. ಅದನ್ನು, ಚಿನ್ನದ ಬಳೆಗಳನ್ನೆಲ್ಲಾ ಮುಟ್ಟಿ ನೋಡಿದ್ರು. ಆಗವರಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಮೆಲ್ಲಗೆ ಉಮಾ… ಉಮಾ ಅಂದ್ರು. ನಾನು ಅವರಿಗೆ ಆಸ್ಪತ್ರೆಗೆ ಹೋಗೋಣ ಬನ್ನಿ ಅಂತ ಹೇಳ್ತಾ, ಭಾವನವರಿಗೆ, ಗಂಡನಿಗೆಲ್ಲಾ ಬೈದೆ. ಏನ್ ಗಂಡುಮಕ್ಳು ನೀವು. ವಯಸ್ಸಾದ ಎಲ್ಲರೂ ಆಸ್ಪತ್ರೆ ಬೇಡ ಅಂತ ಹೇಳೋದು ಸಾಮಾನ್ಯ. ನೀವೆಲ್ಲಾ ಅದನ್ನು ಕೇಳಿ ಸುಮ್ನಿರೋದಾ? ಅತ್ತೆಗೂ ತಿಳಿಹೇಳಿದೆ. ಅವರಿಗೆ ಈ ಗಂಡುಮಕ್ಕಳೆಲ್ಲಾ ಸೇರಿಕೊಂಡು ಆಸ್ಪತ್ರೆ ಸೇರಿಸೋ ಹೆಸರಿನಲ್ಲಿ ತನ್ನ ಕೊಂದುಹಾಕ್ತಾರೆ ಅನ್ನೋ ಭಯ.
ನಾನಿದ್ದೀನಿ. ಯಾರೂ ಏನೂ ಮಾಡಲ್ಲ. ಆಸ್ಪತ್ರೆಗೆ ಹೋದ್ರೆ ಬೇಗ ಹುಶಾರಾಗ್ತಿರಿ ಅಂತೆಲ್ಲಾ ಹೇಳಿ, ನನ್ನ ಕಾರಲ್ಲಿ ನನ್ನ ವೈಯಕ್ತಿಕ ಡಾಕ್ಟರ್ ಬಳಿ ಕರೆದೊಯ್ದೆ. ಪೂರ್ಣ ಪರೀಕ್ಷೆ ಮಾಡಿಸಿದೆ. ನನ್ನ ಡಾಕ್ಟರ್ಗೆ ಒಂದು ಮಾತನ್ನು ಹೇಳಿದೆ, ನೋಡಿ ಸಾರ್, ಇವರು ನನ್ನ ಅತ್ತೆ. ವ್ಯಕ್ತಿಗತವಾಗಿ ನನಗೂ ಇವರ ಮಗ (ನನ್ನ ಗಂಡ)ನಿಗೂ ಯಾವ ಸಂಬಂಧವೂ ಇಲ್ಲ. ಆದ್ರೆ ಮಾನವೀಯ ದೃಷ್ಟಿಯಿಂದ, ನನಗೆ ಇವರಿಗೆ ಇರೋ ಒಡನಾಟದ ನೆನಪಿನಿಂದ ಅವರೇ ಸ್ವತಃ ನನ್ನನ್ನು ಕರೆಸಿಕೊಂಡಿರೋದ್ರಿಂದ ಅವರನ್ನು ನೋಡಿಕೊಳ್ಳೋದು ನನ್ನ ಕರ್ತವ್ಯ. ಪ್ಲೀಸ್ ಟೇಕ್ ಕೇರ್ ಆಫ್ ಹರ್. ಹಾಗೇ ನನ್ನ ಗಂಡ, ಅವರ ಕಡೆಯವರನ್ನು ಕರೆಸಿ ಹೇಳಿದೆ- ನೋಡಿಯಪ್ಪಾ, ನನ್ನ ಕೈಲಾದ್ದನ್ನು ಮಾಡ್ತೇನೆ. ಆಮೇಲೇನಾದ್ರೂ ಹೆಚ್ಚುಕಮ್ಮಿ ಆದ್ರೆ ಉಮಾಶ್ರೀನೇ ಮಾಡಿದ್ದು ಅಂತ ಆಗಬಾರದು ಅಂದೆ – ಅದಕ್ಕೆ ಅವರೆಲ್ಲಾ ಒಪ್ಪಿದ್ರು. ಡಾಕ್ಟರ್ ಟ್ರೀಟ್ಮೆಂಟ್ ಆರಂಭಿಸಿದ್ರು. ಎರಡು-ಮೂರು ದಿನಗಳಲ್ಲೇ ಎಚ್ಚರ ಬಂತು – ಸುಧಾರಿಸಿದ್ರು. ಮತ್ತೆರಡು ದಿನಗಳಲ್ಲಿ ಎದ್ದು ಕೂತ್ಕೊಳ್ಳುವಷ್ಟು ಗಟ್ಟಿಯಾದ್ರು.
ಆಗ ನಾನವರನ್ನು ಕೂರಿಸಿಕೊಂಡು ಯಾಕಮ್ಮಾ ಹೀಗಾಯ್ತು. ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ರೆ ಸತ್ತೇ ಹೋಗ್ತಿದ್ದೀಯಲ್ಲಮ್ಮಾ ಅಂದೆ. ಅದಕ್ಕೆ ಇಲ್ಲ ನಂಗೇನೋ ಆಗಿಬಿಡ್ತು. ನಿನ್ನ ಗಂಡ ಯಾವ್ದಕ್ಕೋ ಅಂತ ಹೇಳಿ, ನನ್ನ ಹತ್ತಿರ ಸಹಿ ಮಾಡಿಸ್ಕಂಡವನೆ ಅಂತ ಹೇಳಿದ್ರು. ಆಗಲೂ ಅವರ ಮುಖದಲ್ಲಿ ಏನೋ ಭಯ. ಈ ಹೆಂಗಸಿಗೆ, ಪಕ್ಕದ ಮನೆಯವರಿಗೆ ದಾಯಾದಿ ಜಗಳ. ಆ ಪಕ್ಕದವರಿಗೆ ಇವರಿಗೆ ಹೆಸರು ಹೇಳಿದ್ರೂ ಆಗಲ್ಲ. ಜಗಳ, ತಕರಾರು. ಅವರಿಗೆ ಈಗ ಇದ್ದ ಮನೆಗೆ ಮಹಡಿ ಹಾಕೋಕೆ ‘ನೋ ಅಬ್ಜೆಕ್ಷನ್ ಸಟರ್ಿಫಿಕೇಟ್’ ಬೇಕಾಗಿತ್ತು. ಈ ಮನೆಯಲ್ಲಿ ನನ್ನ ಗಂಡ ಒಬ್ಬ ಅವರಲ್ಲಿ ಹೋಗಿಬಂದು, ಮಾತುಕತೆ ಇದ್ದದ್ದು. ಹಾಗಾಗಿ ಅವರು ನನ್ನ ಗಂಡನ ಮೂಲಕ ಸಹಿ ಹಾಕಿಸಿಕೊಂಡಿದ್ದಾರೆ. ಅದರ ಮೂಲ ತಿಳಿಯದೆ, ಏಕೆ? ಏತಕ್ಕೆ ಸಹಿ ಹಾಕಿಸಿಕೊಂಡಿದ್ದಾರೋ ಅಂತ ತಿಳಿದು ಈ ಮುದುಕಿ ಭಯಗೊಂಡಿದೆ. ನನ್ನ ಜೀವನಕ್ಕೆ ಇರುವ ಏಕೈಕ ಭದ್ರತೆಯಾದ ಈ ಮನೆಯನ್ನು ಬರೆಸಿಕೊಂಡು ಬಿಟ್ಟಿದ್ದಾರೆ ಅನ್ನೋ ಅಭದ್ರತಾ ಭಾವ ಕಾಡಹತ್ತಿದೆ. ಬದುಕಲ್ಲಿ ಬಾಳ ಕಷ್ಟಪಟ್ಟಿದೆ ಆ ಹೆಂಗಸು. ಮಕ್ಕಳನ್ನು ಸಾಕಲು ಇನ್ನಿಲ್ಲದ ಪಾಡುಪಟ್ಟ ಪ್ರಾಮಾಣಿಕ ಹೆಂಗಸದು. ಅದಕ್ಕೇ ನನಗೆ ಅವರ ಮೇಲೆ ತುಂಬಾ ಗೌರವ.
ನಾನು ಮತ್ತೆ ಬುದ್ಧಿ ಹೇಳಿದೆ. ನಾನು ಇಷ್ಟು ದೊಡ್ಡ ಸಿನಿಮಾ ನಟಿ ಅಲ್ವಾ, ಸಂಬಂಧಿಸಿದ ಆಫೀಸರ್ ಹತ್ರ ಮಾತಾಡಿ ಆ ಪತ್ರ ಹಿಂದೆ ತಕ್ಕೋಳ್ತೀನಿ ಅಂತೆಲ್ಲ ಹೇಳಿ ಈಗ ಗಂಜಿ ತಿನ್ನಮ್ಮಾ ಅಂತ ಹೊಟ್ಟೆಗೆ ಕೈಯಾರೆ ತಿನ್ನಿಸಿದೆ. ಜೋರು ಮಾಡಿ ಮುದ್ದೆ ತಿನ್ನಿಸಿ ಬಂದೆ. ಸಂಜೆ ಪುನಃ ಹೋದೆ. ಅಲ್ಲೇ ಇದ್ದ ಒಂದು ಕಾಗದವನ್ನು ಮಡಚಿ ಅತ್ತೆ ಕೈಲಿ ಕೊಟ್ಟು ನಾನು ಆಫೀಸರ್ ಹತ್ರ ಹೋಗಿ ತಂದೆ ಅಂತ ಹೇಳಿದೆ, ಆಗ ಅವರ ಮುಖ ಅದೆಷ್ಟು ಅರಳಿತು? ಅದೆಷ್ಟು ಖುಶಿ? ತಕ್ಷಣ ನನ್ನ ತಲೆಯ ಮೇಲೆ ಕೈಯಿಟ್ಟು ಹರಸಿ, ಆ ಕಾಗದವನ್ನು ಪಕಪಕನೆ ಮಡಚಿ ತನ್ನ ತಾಂಬೂಲದ ಚೀಲದ ಒಳಗೆ ಇಟ್ಟು ಚೀಲವನ್ನು ಗಂಟು ಹಾಕಿ ಇಟ್ಟುಕೊಂಡರು. ನೋಡಿದ್ಯೇನಮ್ಮಾ, ಈಗ ನನಗೆ ಜೀವ ಬಂತು. ನನ್ನ ಹತ್ರ ಸಹಿ ಹಾಕಿಸಿಕೊಂಡು ಎಂತಾ ಕೆಲ್ಸ ಮಾಡಿದ್ದ ಅವನು ನೋಡಿದ್ಯಾ ಅಂತ ದೊಡ್ಡದಾಗಿ ನುಡಿದರು. ಮತ್ತೆ ಹಾಲು, ಹಣ್ಣು ತಿನ್ನಿಸಿ, ದಾವಣಗೆರೆ ನಾಟಕ ಮುಗಿಸಿ ಮತ್ತೆ ಬರ್ತೇನೆ ಅಂತ ಹೊರಟು ಬಂದೆ. ನಾನು ವಾಪಸ್ಸು ಬಂದದ್ದು ಗುರುವಾರ, ಅತ್ತೆ ಶುಕ್ರವಾರ, ಶನಿವಾರ ಎಲ್ಲಾ ಓಡಾಡಿಕೊಂಡಿದ್ರಂತೆ. ಜೇನುತುಪ್ಪ ಬೇಕು ಅಂತ ಹೇಳಿಕಳ್ಸಿದ್ರಂತೆ. ಅಮ್ಮ ಹೋಗಿ ಕೊಟ್ಟು ಬಂದವರೆ. ನಾನು ನಾಟಕ ಮುಗಿಸಿ ಬರುವಾಗಲೇ ಅಂದ್ಕೊಂಡಿದ್ದೆ. ಅಮ್ಮ ಮತ್ತು ಅತ್ತೆಯನ್ನು ಒಮ್ಮೆ ನೋಡ್ಕೊಂಡು ಬಂದು ಮಲಗಿಬಿಡೋದು. ಮೂರು ದಿನಗಳಿಂದ ನಿದ್ದೆ ಇಲ್ಲ. ರಾತ್ರಿ ಒಂದಾಗ್ಲಿ ಎರಡಾಗ್ಲಿ, ಅದು ಹುಬ್ಳಿ, ಧಾರವಾಡ, ಬೆಳಗಾವಿ ಯಾವುದೇ ಇದ್ರೂನೂ ಹೊರಟೇಬಿಡ್ತಿದ್ದೆ. ರಾತ್ರಿ ಇಡೀ ಪ್ರಯಾಣ. ಸುಸ್ತು, ಮತ್ತು ನಿದ್ದೆ…
ಅವತ್ತೂ ಹಾಗೆ ದಾವಣಗೆರೆಯಿಂದ ಬಂದವಳು ನೇರ ಆಸ್ಪತ್ರೆಗೆ ಹೋದೆ. ಅಲ್ಲಿ ಡಾಕ್ಟರ್ ಹೇಳಿದ್ರು ನಿನ್ನೆನೇ ಹೋಗಿಬಿಟ್ರಮ್ಮಾ ಅಂತ. ಒಮ್ಮೆ ಚುರಕ್ ಅಂದಿತು. ಒಡಲೊಳಗಿಂದ ಒಂದು ಅವ್ಯಕ್ತ ವೇದನೆ. ಸರಿ, ನನ್ನ ಕರ್ತವ್ಯ ಮುಗಿಯಿತು ಅಂತ ಮನೆಗೆ ಬಂದೆ. ಆದ್ರೆ ಮನೆಗೆ ಫೋನ್ಗಳ ಮೇಲೆ ಫೋನ್ ಬಂತು. ಆಮೇಲೆ ಸ್ವತಃ ನನ್ನ ಗಂಡನೇ ಮಾಡಿದ. ಇನ್ನು ನನ್ನ ಅವಶ್ಯಕತೆ ಇಲ್ಲ ಅಂತ ಜೋರಾಗಿ ಹೇಳಿದ್ರೂ ಕೇಳ್ಲಿಲ್ಲ. ಸ್ವತಃ ಮಾವನವರೇ ‘ನೀನು ಮತ್ತು ಮಕ್ಕಳು ಬರ್ದೆ ಹೆಣ ತೆಗೆಯೋಕೆ ಆಗಲ್ಲ, ಅಂದಾಗ ಮೈಸೂರಿಗೆ ಹೋಗಿ ಮಕ್ಕಳನ್ನು ಕರ್ಕೊಂಡು ಸಂಜೆ ಐದು ಗಂಟೆಗೆ ಹೋದೆ. ಹೆಣವನ್ನು ಹೊಂಡಕ್ಕೆ ಹಾಕೋವರೆಗೂ ಕಣ್ಣೀರೇ ಬಂದಿರಲಿಲ್ಲ. ಯಾವಾಗ ಹೊಂಡಕ್ಕೆ ಹಾಕಿದ್ರೋ ದುಃಖದ ಕಟ್ಟೆ ಒಡೆಯಿತು. ಅಮ್ಮ ನೀನು ಈ ಜೀವನದಲ್ಲಿ ಯಾವ ಸುಖವನ್ನೂ ಕಾಣ್ಲಿಲ್ಲ. ಮಕ್ಕಳ ಸುಖ ಉಂಡಿಲ್ಲ. ಈಗ ಶಾಶ್ವತ ಸುಖದತ್ತ ಹೊರಟಿದ್ದೀಯ. ನೆಮ್ಮದಿಯಾಗಿ ಹೋಗಿ ಬಾರಮ್ಮ ಅಂತ ಒಂದು ಹಿಡಿ ಮಣ್ಣು ಹಾಕಿ ಬಂದೆ.
ಹಿಂದಿರುಗುತ್ತಿದ್ದಂತೆ ಅವರು ಅಂದು ಆಸ್ಪತ್ರೆಯಲ್ಲಿದ್ದಾಗ ನನ್ನಿಂದ ಒಂದು ಪ್ರಾಮಿಸ್ ತೆಕ್ಕೊಂಡಿದ್ರು. ನನ್ನ ಹೆಣ್ಣು ಮಕ್ಕಳ ಮದುವೆ ಹಾಗೇ ಉಳಿದು ಹೋಗಿದೆ. ಏನ್ಮಾಡ್ತೀಯಮ್ಮಾ ಅಂತ ಕೇಳಿ ಮಾಡ್ತೀಯೇನಮ್ಮ ಅಂತಲೂ ಉಸುರಿದ್ರು. ನಾನಿರೋವಾಗ ನೀವು ಯಾವ ಚಿಂತೇನೂ ಮಾಡಬೇಡಿ ಅಂತ ಹೇಳಿದ್ದೆ. ಆ ಪ್ರಕಾರ ದೊಡ್ಡ ನಾದಿನಿಯವರ ಮದುವೆಗೂ ಬಂಗಾರ, ಹಣ ಅಂತ ಸಹಾಯ ಮಾಡಿದ್ದೇನೆ. ಎರಡನೇ ನಾದಿನಿ ಮದುವೆ ಹೊತ್ತಿಗೆ ಭಾವನ ಮಕ್ಕಳು ಮತ್ತು ಭಾವಂದಿರು ಆಥರ್ಿಕವಾಗಿ ಸ್ವಲ್ಪ ಬಲ ಹೊಂದಿದ್ದರು, ಅವಳ ಮದುವೆಯನ್ನು ಮಾಡಿದರು. ಆಗಾಗ ತೊಂದರೆ ತಾಪತ್ರಯಕ್ಕೆ ನನ್ನಿಂದಾದ ಸಹಾಯವನ್ನು ಮಾಡ್ತಾನೇ ಬಂದಿದ್ದೇನೆ. ನಾನವರ ಸಂಸಾರಕ್ಕೆ ತಿರಸ್ಕೃತಳಾಗಿಯೂ ನನ್ನ ಕರ್ತವ್ಯ ಪ್ರಜ್ಞೆಯಿಂದ ನನ್ನಿಂದ ಅಲ್ಲಿಗೆ ಸಲ್ಲಬೇಕಾದ್ದನ್ನು ಸಲ್ಲಿಸುತ್ತಾ ಬಂದವಳು ನಾನು. ಇದು ಕೇವಲ ನನ್ನ ಅತ್ತೆಯವರ ಮೇಲಿನ ಪ್ರೀತಿ, ಗೌರವಕ್ಕಾಗಿ. ಒಬ್ಬ ಹೆಣ್ಣು ಕೊನೆಗೂ ಇನ್ನೊಬ್ಬ ಹೆಣ್ಣಿನ ನೋವು-ನುಡಿಗಳನ್ನು ಅರ್ಥ ಮಾಡಿಕೊಂಡಿದ್ದಕ್ಕಾಗಿ. ತನ್ನ ಅಸಹಾಯಕತೆಯ ಮಧ್ಯೆಯೂ ನನ್ನನ್ನು ಅವರು ಪ್ರೀತಿಸಿದ್ದಕ್ಕಾಗಿ.

‍ಲೇಖಕರು G

February 4, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

24 ಪ್ರತಿಕ್ರಿಯೆಗಳು

  1. kum.veerabhadrappa

    kannada rangabhoomi haagoo chalanachitrarangada abhijaata kalaavide umaashri avara atmakathana ‘benkiya bedagu’ bidugadeyaaguttiruvudu santoshada sangati. h.s. shivaprakash prajavaniya tamma ankanadalli kelavu tingalugala hindiye barediddaru, andininda kayuttidde. umashri avarige mattu adara prakasharige nammellara abhinandanegalu
    kumvee

    ಪ್ರತಿಕ್ರಿಯೆ
  2. chalam

    ಉಮಾಶ್ರಿಯವರನ್ನು ಪರದೆಯ ಮೇಲೆ ನಾನಾ ಪಾತ್ರಗಳಲ್ಲಿ ನೋಡಿದ್ದೇವೆ.ಅವರು ದ್ವಂದ್ವಾರ್ಥದ ಜೋಕಿನ ಕಾಲದಿಂದ ಮಣಿ,ಹಾಗೂ ಇನ್ನಿತರ ಕಲಾತ್ಮಕ ಚಿತ್ರಗಳಲ್ಲೂ ನೋಡಿದಾಗ ಅವರ ಏರಪೇರಿನ ಪಾತ್ರದ ಬಗ್ಗೆ ಮಾತ್ರ ಪರಿಚಯವಿತ್ತು.ಅಂತಹವರ ಜೀವನವೂ ಅಧ್ಯಯನಯೋಗ್ಯ ಅಂತ ತುಂಬಾ ದಿನಗಳಿಂದ ಅಂದುಕೊಳ್ಳುತ್ತಿದ್ದೆ.ಅವಕಾಶ ಮಾಡಿಕೊಡುತ್ತಿರುವ ಅಕ್ಷತಾ ಅವರಿಗೆ ಧನ್ಯವಾದ.

    ಪ್ರತಿಕ್ರಿಯೆ
  3. ಟೀನಾ ಶಶಿಕಾಂತ್

    ಸ್ಕೂಲಿನಲ್ಲಿದ್ದಾಗ ವಾರ್ಷಿಕೋತ್ಸವ ಸಮಾರಂಭಕ್ಕೆ ಉಮಾಶ್ರೀಯವರು ಅತಿಥಿಯಾಗಿ ಆಗಮಿಸಿದ್ದರು. ’ಏಷ್ಟು ಛಂದ ಇದ್ದಾರೆ!’ ಅಂತಂದುಕೊಂಡು ನೋಡುತ್ತ ಇದ್ದುಬಿಟ್ಟಿದ್ದೆ. ಈ ಭಾಗವನ್ನೋದಿದ ಮೇಲೆ ಆಕೆಯ ಮೇಲಿನ ಅಭಿಮಾನ ಇಮ್ಮಡಿಯಾಯ್ತು!! ಪುಸ್ತಕ ಖರೀದಿಸದೆ ಇರಲಾರೆ!!

    ಪ್ರತಿಕ್ರಿಯೆ
  4. Gopaal Wajapeyi

    ಉಮಾಶ್ರೀಯವರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ‘ಬಸ್ ಕಂಡಕ್ಟರ್’ನಂಥ ನಾಟಕಗಳ ಉಮಾಶ್ರೀಯೆ ಬೇರೆ… ‘ಒಡಲಾಳ’ದ ಉಮಾಶ್ರೀಯೆ ಬೇರೆ. ನಾನು ಸಂಭಾಷಣೆ ಬರೆದ ‘ಸಂಗ್ಯಾ-ಬಾಳ್ಯಾ’ ಚಿತ್ರದ ಸಂದರ್ಭದಲ್ಲಿ (ಅದರಲ್ಲಿ ಉಮಾಶ್ರೀಯವರದು ಪರಮ್ಮನ ಪಾತ್ರ) ಅವರು ಪಾತ್ರದಲ್ಲಿ ಪ್ರವೇಶಿಸುತ್ತಿದ್ದ ಪರಿಯನ್ನು ಕಂಡು ಅಚ್ಚರಿಪಟ್ಟಿದ್ದೇನೆ. ಆಕೆ ಅಪ್ಪಟ ಕಲಾವಿದೆ. ಆಕೆಯ ವೃತ್ತಿಪರತೆ ಮತ್ತು ಪಾತ್ರದ ತಯಾರಿ ಮೆಚ್ಚುವಂಥದ್ದು.
    ಈ ಅದ್ಭುತ ನಟಿಯ ‘ಆತ್ಮ ಚರಿತ್ರೆ’ ಇದೀಗ ಪುಸ್ತಕ ರೂಪದಲ್ಲಿ ಬಂದಿರುವುದು ಸಂತಸದ ವಿಚಾರ.

    ಪ್ರತಿಕ್ರಿಯೆ
  5. Jayalaxmi Patil

    ಬಣ್ಣದ ಮನೆಯಿಂದ ಬಿನ್ನಣವಿಲ್ಲದ ನೇರ ಮಾತುಗಳು.ಈ ಬದುಕಿನ ಓದಿಗಾಗಿ ಕಾಯುತ್ತಿದ್ದೇನೆ.

    ಪ್ರತಿಕ್ರಿಯೆ
  6. ಸುಧಾ ಚಿದಾನಂದಗೌಡ

    ಉಮಾಶ್ರೀ ಜೀವನಚರಿತ್ರೆ ಅನೇಕ ಮರುಓದುಗಳನ್ನು ಬಯಸುವಂಥದ್ದು ಎಂದು ಈಗಲೇ ಹೇಳಬಹುದು.ಅಹರ್ನಿಶಿಗೆ ಅಭಿನಂದನೆ.

    ಪ್ರತಿಕ್ರಿಯೆ
  7. ಗೊರೂರು ನಾಗ

    ಓದಿ ಭಾವುಕನಾದೆ…
    ಪುಸ್ತಕ ಓದೋ ಕುತೂಹಲ ಮೂಡಿದೆ

    ಪ್ರತಿಕ್ರಿಯೆ
  8. ಗೊರೂರು ನಾಗ

    ಕನ್ನಡ ಚಿತ್ರರಂಗಕ್ಕೆ ಒಬ್ಬಳೇ ಪುಟ್ನಂಜಿ..

    ಪ್ರತಿಕ್ರಿಯೆ
  9. Mohan V Kollegal

    ಈ ಲೇಖನದ ಮೂಲಕ ಉಮಾಶ್ರೀಯವರು ನಮ್ಮೆಲ್ಲರಿಗೂ ಹತ್ತಿರವಾಗಿದ್ದಾರೆ. ಒಂದು ಜೀವದುಳಿವಿಗೆ ಅವರು ಪಟ್ಟ ಕಷ್ಟದೊಂದಿಗೆ ಆ ಕ್ಷಣಗಳಲ್ಲಿ ಆಕೆ ಪಟ್ಟಿದ್ದ ಸಾಂಸಾರಿಕ ತಳಮಳವು ಮುಕ್ತವಾಗಿ ವ್ಯಕ್ತವಾಗಿದೆ. ಮನಸ್ಸಿಗೆ ಹತ್ತಿರವಾದ ಬರಹ. ‘ಬೆಂಕಿ ಬೆಡಗು’ ಬೇಗ ನನ್ನ ಕೋಣೆ ಸೇರಿಕೊಳ್ಳುತ್ತದೆ.

    ಪ್ರತಿಕ್ರಿಯೆ
  10. Beluru Raghunaandan

    ಆತ್ಮಚರಿತ್ರೆ ಅಲ್ಲವೇ ಅಲ್ಲ.
    ರಂಗಭೂಮಿ ಮತ್ತು ಸಿನಿಮಾವನ್ನು ಆದಾರವಾಗಿಟ್ಟುಕೊಂಡು ಪಿ ಎಚ್ ಡಿ ಮಾಡುತ್ತಿರುವ ನಂಗೆ ಉಮಾಶ್ರೀ ಮುಖ್ಯ ಆಕರ.ಆಕೆ ಅದ್ಭುತ ಕಲಾವಿದೆ ಸರಿ.ಹಾಗೆಯೇ ಒಳ್ಳೆಯ ಸಂಶೋಧನಾ ವಸ್ತು.ಅಹರ್ನಿಶಿ ಯವರು ತರುತ್ತಿರುವ ಬೆಂಕಿ ಬೆಡಗು ಉಮಾಶ್ರೀ ಎಂಬ ಪುಸ್ತಕ ಅವರ ಆತ್ಮಚರಿತ್ರೆ ಅಲ್ಲ.ಅದು ಹಿಂದೆ ರೂಪತಾರಕ್ಕೆ ಕೊಟ್ಟ ಸಂದರ್ಶನಗಳ ಕಟ್ಟು.ನಾನು ನೇರವಾಗೇ ಅವರನ್ನು ನಿಮ್ಮ ಆತ್ಮ ಚರಿತ್ರೆ ಅಂದೊಡನೆ, ನಾನು ಇನ್ನೊಂದಷ್ಟು ಮಾಡುವುದು ಇದೆ,ಆಮೇಲೆ ನಾನೇ ನನ್ನ ಆತ್ಮಚರಿತ್ರೆ ಬರೆಯುತ್ತೇನೆ ಅಂದರು. ಬೆಂಕಿ ಬೆಡಗು ಉಮಾಶ್ರೀ ಕೆಲವೇ ಹೆಜ್ಜೆಗಳ ಒಂದು ಸಣ್ಣ ಕಥೆ ಅಷ್ಟೇ ಅಂದರು.ಹಾಗಾಗಿ ಬರುತ್ತಿರುವ ಪುಸ್ತಕ ಆತ್ಮಚರಿತ್ರೆ ಅಲ್ಲವೇ ಅಲ್ಲ.

    ಪ್ರತಿಕ್ರಿಯೆ
  11. akshatha humchadakatte

    ಸ್ಪಂದಿಸಿದ ಓದುಗರಿಗೆ ಥ್ಯಾಂಕ್ಸ್ . ನಮ್ಮ ಮೆಚ್ಚಿನ ಲೇಖಕರಾದ ಕುಂ.ವಿ ಸರ್ ಅಂಥವರು ಓದಲು ಕಾಯುವಂತ ಪುಸ್ತಕ ತರುತ್ತಿರುವುದು ಅಹರ್ನಿಶಿ ಬಳಗಕ್ಕೆ ನಿಜಕ್ಕೂ ಖುಷಿ ತಂದಿದೆ. ಬೆಂಕಿ ಬೆಡಗು (ನಟಿ ಉಮಾಶ್ರಿ ಬದುಕಿನ ಕೆಲ ಪುಟಗಳು ) ಕೃತಿ ಬಿಜಾಪುರದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹರ್ನಿಶಿ ಪ್ರಕಾಶನದ ಪುಸ್ತಕ ಮಳಿಗೆಯಲ್ಲಿ ಓದುಗರಿಂದಲೇ ಬಿಡುಗಡೆ ಆಗುತ್ತದೆ . ಅಲ್ಲಿ ನಿಮಗಾಗಿ ಕಾಯುತ್ತೇವೆ ಬನ್ನಿ.
    ಅಹರ್ನಿಶಿಯ ಪರವಾಗಿ
    ಅಕ್ಷತಾ

    ಪ್ರತಿಕ್ರಿಯೆ
  12. ಶ್ರೀಕಾಂತ ಹಳ್ಳಿಕಾರ್

    ಬೆಂಕಿ ಬೆಡಗು (ನಟಿ ಉಮಾಶ್ರೀ ಬದುಕಿನ ಕೆಲ ಪುಟಗಳು) ಎಂಬ ಪುಸ್ತಕ ಅಹರ್ನಿಶಿಯವರು ತರುತ್ತಿರುವುದು ಸಂತೋಷದ ವಿಷಯ. ಅದು ಉಮಾಶ್ರೀಯವರ ಬದುಕಿನ ಕೆಲ ಪುಟಗಳು ಮಾತ್ರ. ಉಮಾಶ್ರೀಯವರು ಮುಂದೊಂದು ದಿನ ಅವರೆ ತಮ್ಮ ಆತ್ಮಚರಿತ್ರೆ ಬರೆಯುತ್ತಾರೆಂದು ಹೇಳಿದ್ದಾರೆ.

    ಪ್ರತಿಕ್ರಿಯೆ
  13. ಲಕ್ಷ್ಮೀ ಶಿವಶಂಕರ್

    ’ಬೆಂಕಿ ಬೆಡಗು ಉಮಾಶ್ರೀ’ ಪುಸ್ತಕ ಉಮಾಶ್ರೀರವರ ಆತ್ಮಚರಿತ್ರೆ ಅಲ್ಲ, ಅವರ ಬದುಕಿನ ಕೆಲ ಪುಟಗಳು ಎಂದು ಅಹರ್ನಿಶಿಯವರು ಈಗಾಗಲೆ ಮೇಲೆ ಹೇಳಿದ್ದಾರೆ. ಬೇಲೂರು ರಘುನಂದನ್ ಹೇಳಿರುವುದೂ ಸರಿ ಇದೆ.

    ಪ್ರತಿಕ್ರಿಯೆ
  14. Harshitha

    Eyes filled after reading this. Waiting to read the autobiography of umashree.

    ಪ್ರತಿಕ್ರಿಯೆ
  15. GURURAJ KATHRIGUPPE

    I have tears in my eyes,I always felt Umasree is a women,she brought respect to womenhood by her courage, by facing difficulties in life and still loving this wonderful life. Only great people can live like this

    ಪ್ರತಿಕ್ರಿಯೆ
  16. dr gayathri ramesh

    she has always given sweet to others and kept bitter to herself even in her difficult days. Me her daughter is one who has always had sweet from her. Definetly her autobiography will be an inspiration to many who are lost and lonely without any support.
    dr Gayathri Ramesh

    ಪ್ರತಿಕ್ರಿಯೆ
  17. Manjula

    umashree avaranna bari film actor , comidy actor, ELLA tara acting madtare anta andokidde avaru tumba kastagallanna anubhavishi bandirodu mattu avaru idda stisti alli bere yava hennu iddidru puna gandana mane kade tirgu nodtirlilla , avara atte mele ittiro preetigoskara avaru aa manege help madtiddralla avara vektitva tumba doddadu . nange tumbane avara real life na real guna ista aytu .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: