Fresh from the Oven

ಮಂಜುಳಾ ಬಬಲಾದಿ
ನನ್ನ ಕವಿತೆಗಳಿಗಂದು ಗಾಢ ನಿದ್ದೆ
ಮುದ್ದಿನಲಿ ಎವೆಯಿಕ್ಕದೇ
ಅವುಗಳನು ದಿಟ್ಟಿಸುತಿದ್ದ
ನನ್ನಲಿ ಅದೇನೋ ಅಂಧ ಶ್ರದ್ಧೆ!
ಅಕ್ಕರೆಗರೆಯುವುದು ನಾನಲ್ಲ
ಅಕ್ಕರದ ಮೂಸೆಯಲಿ
ಒಂದಾಗುವುದು ನಾನು
ಕವಿತೆಗಳಂದು ಕನಸಂತೆ ಭಾಸ
ನಿದ್ದೆ-ಎಚ್ಚರಿಲ್ಲದ್ದು ನನಗೋ ಅವುಗಳಿಗೋ
ಅರೆ-ಕ್ಷಣದ ಆಭಾಸ…

ಮತ್ತಾಗೊಂದು ಕವಿತೆ ಮಗ್ಗಲು ಬದಲಿಸಿತ್ತು
ಮತ್ತಿನ್ನೊಂದು ಕನಸಿನಲ್ಲಿ ನಕ್ಕಿತ್ತು
ಮೂಲೆಯಲ್ಲಿನ ಕವನ ಕಣ್ಬಿಟ್ಟು ಕೆಣಕಿತ್ತು
ನಾ ಮರೆತು ಹೋದ ಕವಿತೆ
ಮುನಿಸಿನಲಿ ಬಿಕ್ಕಳಿಸಿತ್ತು
ಅಡರುತಿದ್ದ ಕತ್ತಲು, ತೆರೆಯುತಿದ್ದ ಬೆತ್ತಲು
ಕವಿತೆಯಂಗಳದಲ್ಲಿ ಬಗೆಹರಿಯುತಿದ್ದ
ಹತ್ತು-ಹಲವು ಗೋಜಲು

ಮನಸು ಮುಖ ಮೇಲೆತ್ತಿತ್ತು
ಮುಗಿಲಿಗೆ ಕನ್ನಡಿಯಾಗಿ
ಮತ್ತೆ ನಸು ನಗುತಿತ್ತು
ಹನಿಯೊಂದು ಜಿನುಗಿತ್ತು
ಆ ಚಣದ ಗರ್ಭದಿಂದ
ಮತ್ತೊಂದು ಕವಿತೆಯ ಮೊಗ್ಗು
ಬಿರಿವ ಅಮೃತಘಳಿಗೆ
ಜಾರುತಿತ್ತು, ಮೇಲೇರುತಿತ್ತು
ಕಾಲನ ಕೋಶದಿಂದ…
ಲೇಖಕರ ಚಿತ್ರ: ವಿನಯ್ ಅಲ್ಮನೆ ದತ್ತಾತ್ರೇಯ





0 Comments