
ಲತಾ ವಾಲಿ
ಮನದ ಗಾಯಕೆ
ಮುಲಾಮ್ ಆಗಬಹುದು
ಇನಿಯನ ಸೇರುವ
ಸೇತುವೆ ಆಗಬಹುದು
ಯಾರಿಗೆ ಗೊತ್ತು
ಹೂ ಅರಳಿದಂತೆ
ಅರಳಬಹುದು
ಬೀದಿಬದಿಯಲ್ಲಿ ನರಳುವ
ನೋವುಗಳಿಗೆ ಅಳಬಹುದು
ನನ್ನ ಕವಿತೆ
ಇನ್ನಾರದೋ ಎದೆಯಲ್ಲಿ
ಬೆಂಕಿ ಇಡಬಹುದು
ಇನ್ನಾರಿಗೋ ತಂಗಾಳಿಯ
ತೀಡಲೂಬಹುದು
ಧರ್ಮ-ಕರ್ಮಗಳ
ಅಹಂ ಇಳಿಸಬಹುದು

ಜಾತಿ ಭೀತಿಗಳ
ಹೊಡೆದೋಡಿಸಲೂಬಹುದು
ನನ್ನ ಕವಿತೆಗೆ ಕಾಲಿಲ್ಲ
ಜಗತ್ತು ಸುತ್ತುತ್ತದೆ
ಕಣ್ಣಿಲ್ಲ ಕಣ್ಣೀರು ಹಾಕುತ್ತದೆ
ಧ್ವನಿ ಇಲ್ಲ
ದಮನಿತರ ಧ್ವನಿಯಾಗುತ್ತದೆ
ಇಷ್ಟೆಲ್ಲ ಇಲ್ಲಗಳೇ ನನ್ನ ಕವಿತೆಯಲ್ಲಿದ್ದರೂ ಏಕೋ ಗೊತ್ತಿಲ್ಲ
ಪ್ರಭುತ್ವ ನಡುಗುತ್ತದೆ
ಹುಡುಕಾಡಿ ಬಂಧಿಸಲು ಹೆಣಗುತ್ತದೆ
ಸಿಗುವುದಿಲ್ಲ ನನ್ನ ಕವಿತೆ
ಸೋತ ಪ್ರಭುತ್ವ
ಕವಿಯನ್ನೇ ಬಂಧಿಸುತ್ತದೆ
ಜೇನು ಹುಳುಗಳಂತೆ
ಬಂಧೀಖಾನೆಯಲ್ಲಿಯೇ
ಗೂಡು ಕಟ್ಟಿದ ಕವಿತೆಗಳು
ಕವಿಯ ಬಂಧಿಸಿದ
ಪ್ರಭುತ್ವದ ಕೈ ಮುಖ ಮೂತಿ ನೋಡದೆ
ಕಚ್ಚಲೂಬಹುದು
ನೋಡಿ ಪ್ರಭುತ್ವ ಮತ್ತೆ
ನಡುಗುತ್ತಿದೆ.






0 Comments