ಓ ಮನುಷ್ಯರೇ ನೀವೆಷ್ಟು ಒಳ್ಳೆಯವರು!!

ಕೊರೋನಾ ಗೆದ್ದ ಕಥೆ

ಡಾ ಜಗದೀಶ್ ಸಿ ಕೆ

೨೦೦೦-೨೦೦೧ ನೇ ಶೈಕ್ಷಣಿಕ ವರ್ಷ. ಮಹಾರಾಣಿ ಕಲಾ ಕಾಲೇಜಿನಲ್ಲಿದ್ದೆ. ಆಗ ‘ನ್ಯಾಕ್ ‘ ಪೀರ್ ಕಮಿಟಿಯವರು ಕಾಲೇಜಿಗೆ ಭೇಟಿಕೊಡುವ ದಿನವಿತ್ತು. ಅವರ ಗಮನ ಸೆಳೆಯುವಂತೆ ಕನ್ನಡ ವಿಭಾಗದ ಸೂಚನಾಫಲಕದ ಮೇಲೆ ಆಕರ್ಷಕವಾಗಿ ಏನಾದರೂ ಬರೆಸೋಣವೆಂದು ಆಲೋಚಿಸಿದ ನಾನು ‘ಮಾನವಕುಲಂ ತಾನೊಂದೆ ವಲಂ’ ಎಂದು ಮುದ್ದಾದ ಅಕ್ಷರಗಳಲ್ಲಿ ಬರೆಸಿದ್ದೆ. ಎಲ್ಲ ವಿಭಾಗಗಳಿಗೆ ಭೇಟಿಕೊಡುತ್ತಾ ಬಂದ ಪೀರ್ ಕಮಿಟಿಯವರು ಕನ್ನಡ ವಿಭಾಗದ ಬಳಿಯೂ ಬಂದು ಹೊರಡುವ ಮುನ್ನ ‘ಕನ್ನಡ ಫಲಕ’ ಗಮನಿಸಿದರು. ಅಲ್ಲಿ ಬರೆದಿರುವುದರ ಅರ್ಥದ ಬಗ್ಗೆ ಪ್ರಶ್ನಿಸಿದರು. ಉಹುಂ, ಕನ್ನಡ ಬಾರದ ಅವರಿಗೆ ನಾನು ಆಂಗ್ಲ ಭಾಷೆಯಲ್ಲಿ ವಿವರಿಸಲಾಗದೆ ತಡವರಿಸಿದೆ.., ‘ಪಂಪನ ಸೂಕ್ತಿ’ ಎಂದೆ.

ಆಗ ಕಾಲೇಜಿನ ನ್ಯಾಕ್ ಸಂಯೋಜಕರಾಗಿ ಪೀರ್ ಕಮಿಟಿಯವರ ಜೊತೆಯಲ್ಲಿಯೇ ಇದ್ದ ಪ್ರೊ.ಓ.ಎಲ್.ನಾಗಭೂಷಣ ಸ್ವಾಮಿಯವರು ಅವರಿಗೆ ಸ್ಪಷ್ಟವಾಗಿ ವಿವರಿಸಿದರು. ‘ಓಹ್, ಗ್ರೇಟ್..’ ಎನ್ನುತ್ತಾ ಕಮಿಟಿಯವರು ಮುಂಬರಿದರು. ಅವರನ್ನು ಹಿಂಬಾಲಿಸುವ ಮುನ್ನ ‘ಓ ಎಲ್ ಎನ್’ ನನಗೆ ‘ಅದು ಪಂಪನ ಸಾಲಲ್ಲ ಜಗದೀಶ್’ ಎನ್ನುವುದೇ? ಅಚ್ಚರಿಯಿಂದ ಅವಾಕ್ಕಾದೆ! ಮೂರ್ನಾಲ್ಕು ದಿನಗಳ ಬಳಿಕ ಕ್ಯಾಂಟಿನ್ನಲ್ಲಿ ಕೇಳಿಯೇಬಿಟ್ಟೆ.. ಪಂಪ ಹೇಳಿರುವುದು ‘ಮನುಷ್ಯ ಕುಲಂ ತಾನೊಂದೇ ವಲಂ’ ಅಲ್ವೇ ಜಗದೀಶ್ ಎಂದರು ಸಿಗರೇಟ್ ಹಚ್ಚುತ್ತಾ! ನನಗೇ ಗೊತ್ತಿಲ್ಲದೆ ಅವರಲ್ಲಿ ಗೌರವಭಾವಮೂಡಿತು (ಇಂತಹ ಅವ್ಯಕ್ತ ಗೌರವ ಭಾವಗಳು ನನ್ನ ಅನೇಕ ಗುರುಗಳ ಬಗ್ಗೆ ನನಗಾಗುತ್ತಿರುತ್ತವೆ!).

‘ಮಾನವಕುಲ’ ಅಥವಾ ‘ಮನುಷ್ಯ ಕುಲ’ ಎಲ್ಲ ಒಂದೇ ಅಲ್ವೇ ಅನಿಸಿದರೂ ಖಂಡಿತ ಅಲ್ಲ ಎಂದು ನನ್ನ ಭಾವನೆ. ಪಂಪ ಸರಿಯಾಗಿಯೇ ಹೇಳಿದ್ದಾನೆ ಬಿಡಿ. ‘ಮನುಷ್ಯ’ತ್ವದ ಬೆಲೆಯೇ ಘನವಾದುದದು, ಅಮೂಲ್ಯವಾದುದು. ಹಾಗಾಗಿಯೇ ಮನುಷ್ಯರಾಗಿ ನಿಮ್ಮೆಲ್ಲರನ್ನು ಈಗ ಅಭಿನಂದಿಸುತ್ತಾ ನನ್ನ ಋಣವನ್ನರುಹುತ್ತಿದ್ದೇನೆ‌. ಮನುಷ್ಯರೇ ನೀವು ಗ್ರೇಟ್!! ನಿಜಕ್ಕೂ.ಮೊನ್ನೆ ಏಪ್ರಿಲ್ ೧೬ರಂದು ನನಗೆ ಸ್ವಲ್ಪಜ್ವರ, ತೀವ್ರ ತಲೆನೋವು ಕಾಣಿಸಿಕೊಂಡಿದ್ದರಿಂದ ಕೋವಿಡ್ ಟೆಸ್ಟ್ ಮಾಡಿಸಿದೆ.

‘ಪಾಸಿಟಿವ್’ ಬಂದದ್ದರಿಂದ, ನನ್ನ ವೈದ್ಯತಮ್ಮ ಡಾ.ಕೆ.ಎಸ್.ಸುರೇಶ್ (ಚಿಕ್ಕಮ್ಮನ ಮಗ) ಸಹಾಯದಿಂದ ಏಪ್ರಿಲ್ ೧೮ರಂದು ನಗರದ ಬೌರಿಂಗ್ ಆಸ್ಪತ್ರೆಗೆ ಭಾನುವಾರ ಬೆಳಗ್ಗೆ ಸೇರಿ, ಚಿಕಿತ್ಸೆ ಪಡೆಯಲಾರಂಭಿಸಿದೆ, ಧೈರ್ಯವಾಗಿಯೇ ಇದ್ದೆ. ಆದರೆ ಒಂದೆರಡು ದಿನಗಳ ಹಿಂದೆಯಷ್ಟೇ ಡಾ.ಕೆ.ಜೆ.ರೇಖಾ, ಡಾ.ನಿಂಗಮಾರಯ್ಯ, ಡಾ.ಮೇಘನಾಥ್, ಹೀಗೆ ಎಲ್ಲ ಕನ್ನಡದ ಅಧ್ಯಾಪಕರೇ ಕೊರೋನಾದಿಂದ ಅಂತಕನೂರ ಹಾದಿ ಹಿಡಿದಿದ್ದರಿಂದ.. ನನ್ನ ‘ಸೂೞ್’ ಸಹ ಬಂತೇನೋ ಎನಿಸಿ ಭಯಬಿದ್ದೆ. ಆಸ್ಪತ್ರೆಯಿಂದಲೇ ಕರೆಮಾಡಿಮನೆಯಲ್ಲಿದ್ದ ಪತ್ನಿ, ಮಗಳಿಗೆ ಧೈರ್ಯ ಹೇಳಿದೆ.. ಸಮಾಧಾನ ಮಾಡಿದೆ. ನನ್ನಾಕೆ ಮಮತಾ ಹಾಗೂ ನನ್ನ ಮಗಳು ಲಕ್ಷ್ಮಿಯ ಧೈರ್ಯದ ಮುಂದೆ ನನ್ನ ಧೈರ್ಯ ಏನೇನೂ ಅಲ್ಲ.

ನನ್ನನ್ನು ಮನೆಯಿಂದ ಕಳುಹಿಸುವಾಗ ಮಮತಾ ಅತ್ತಳಾದರೂ ಮಗಳು ಧೈರ್ಯ ಹೇಳಿದಳು. ಅವರಿಬ್ಬರ ಹಾರೈಕೆ, ದೃಢತೆ ನನ್ನನ್ನು ಉಳಿಸಿವೆ… (ಈ ಮಧ್ಯೆ ವಿಟಿಯು ಮುಂದೂಡದೆ, ಹಠದಿಂದ ಆಗ ನಡೆಸಿದ ಪರೀಕ್ಷೆಗಳನ್ನೂ ಮಗಳು ಮೆಟ್ರೋದಲ್ಲಿ ಹೋಗಿ ಬಂದು ಬರೆದಿದ್ದಾಳೆ… ಗ್ರೇಟ್ ಮಗಳೆ!). ಕೊರೊನಾ ಹಾವಳಿಯಿಂದ ಬೆದರಿ, ಛೆ, ಸಾವಿಗೆ ಹೆದರಬಾರದೆಂದುಕೊಂಡೆ. ‘ಮರಣವೇ ಮಹಾನವಮಿ’ ಎಂದೆ. ‘ಎಲ್ಲರ ಆಯುರವಧಿಗೂ ಒಂದು ಅಂತವಿದೆ. ನಾನೂ ಅಂತಕನ ಅತಿಥಿಯಾಗುವ ಕಾಲ ಸಮೀಪಿಸಿರಬಹುದೆನಿಸಿತು, ಧೈರ್ಯ ಬರಲಿಲ್ಲ.

ಕೊರೋನ ರೋಗಕ್ಕೆ ನಾನೂ ಬಲಿಯಾಗುವೆನೆಂಬ ಆತಂಕ ಹೆಚ್ಚಾಗತೊಡಗಿತು. ‘ಏನೂ ಆಗಲ್ಲ, ಧೈರ್ಯವಾಗಿರಬೇಕಷ್ಟೇ’ ಎಂದುಕೊಂಡೆ. ಧೈರ್ಯ ಮಾತ್ರ ಬರಲಿಲ್ಲ. ಸಾವಾದರೆ ಏನು ಮಾಡಲು ಸಾಧ್ಯ, ಮಡದಿಗೆ, ಮಗಳಿಗೆ ಕರೆ ಮಾಡಿ ಮತ್ತೆ ಏನೇನೋ ಹೇಳಬೇಕೆನಿಸಿತು, ಏನೂ ಹೇಳಲಿಲ್ಲ, ಎಲ್ಲರಂತೆ ‘ಧೈರ್ಯವಾಗಿರಿ’ ಎಂದೆನಷ್ಟೆ! ಸಾವಿನ ಮುನ್ಸೂಚನೆ ಅರಿತು ಪರಿತಪಿಸಿದ ಲಲಿತಾಂಗ ನೆನಪಾದ. ‘ಸೂಡಿದ ಪಾರಿಜಾತದ ನಮೇರುವ ಬಾಸಿಗಮೊಯ್ಯನೊಯ್ಯನಿರ್ಪೋಡಿಸುದಂದಿನಂಗರುಚಿ ಕಣ್ಣಿಱಿದಾಯ್ತು ವಿಭೂಷಣಂಗಳೊಳ್ತೀಡುವ ರಶ್ಮಿಗಳ್ ಮಸುಳ್ದುವಾಗುಳಿಯಾಯ್ತಿನಿತುಬ್ಬೆಗಂ ಮೊಗಂಬಾಡೆ ತಗಳ್ದು ಸೂಚಿಸಿದುವಾ ದಿವಿಜಂಗವಸಾನ ಕಾಲಮಂ’ ‘ಸುರತರುನಂದನಂಗಳಿರ ರತ್ನಪಿನದ್ಧವಿಮಾನ ಕುಟ್ಟಿಮಾಂತರ ಸುರತಾಲಯಗಳಿರ ಚಾರುವಿಲೋಲಕಟಾಕ್ಷಪಾತ ಸೌಂದರ ಪರಿವಾರದೇವಿಯರಿರಾ ಕಡುಕೆಯ್ದು ಕೃತಾಂತನಿಂತು ನಿರ್ನೆರಮೆಱಿದುಯ್ಯೆ ಬಾರಿಸದೆ ಕೆಮ್ಮನುಪೇಕ್ಷಿಸಿ ನೋಡುತಿರ್ಪಿರೇ’ ೧೯೮೨ ರಲ್ಲಿ ಪ್ರೊ.ಎಂ.ಆರ್. ಕಮಲ ಮೇಡಂ ಮಾಡಿದ್ದ ಪಾಠವದು.

ನೆನಪಾಯ್ತು, ಆಗ ಮೇಡಂ ‘ಅಕ್ಕಿಗೊಟ್ಟು ಮಡಗೂೞ್ ಉಣ್ಬಂದದೇ ..’ ಪದ್ಯಭಾಗ ಮಾಡುತ್ತಾ ಆದಿಪುರಾಣ ದ ಕಥಾಸಾರವನ್ನೇ ಹೇಳಿದ್ದರು. ಆಗತಾನೇ ಕನ್ನಡ ಎಂ.ಎ. ಪದವಿ ಪಡೆದು ಹೊಸದಾಗಿ ಅಧ್ಯಾಪನಕ್ಕೆ ಬಂದಿದ್ದ ಮೇಡಂ ಅವರು ಇನ್ನಿಲ್ಲದಷ್ಟು ಉತ್ಸಾಹ, ಹುರುಪಿನಲ್ಲಿ ನಮಗೆ ಬೋಧಿಸುತ್ತಿದ್ದರು. ಪಠ್ಯದಲ್ಲಿಲ್ಲದ ಪದ್ಯಭಾಗಗಳನ್ನೂ ಬೋರ್ಡ್ ಮೇಲೆ ಬರೆದು ಸ್ವಾರಸ್ಯ ವಿವರಿಸುತ್ತಿದ್ದರು. ಮೇಟಿಕುರ್ಕೆ ಕಾಲೇಜಿಗೆ, ಪ್ರಥಮ ಪಿಯೂಸಿ ಓದಲು ಆಗ ಹಳ್ಳಿಯಿಂದ ಬರುತ್ತಿದ್ದೆ. ಹೊಲ-ತೋಟಗಳ ತೊಗರಿ, ಹೆಸರು, ಅವರೆ ಸೊಗಡನ್ನೂ ಗಮನಿಸುವುದು ಗೊತ್ತಿಲ್ಲದ ನನಗೆ, ನನ್ನಂತಹವರಿಗೆ, ‘ಕಾವ್ಯ ಕುಸುಮ’ದ ಪರಿಮಳವ ಪರಿಚಯಿಸಿ, ಪಸರಿಸತೊಡಗಿದ್ದರು ಕಮಲ ಮೇಡಂ! ನಲವತ್ತು ವರ್ಷಗಳಿಂದ ಈಗಲೂ ಅದೇ ಮಾಡುತ್ತಿದ್ದಾರೆ!

* * * * *

ಅನೇಕರಿಂದ ‘ಕರೆ’ ಬರಲಾರಂಭಿಸಿದವು. ಆಸ್ಪತ್ರೆಯ ಕೊರೊನಾ ಶಯ್ಯೆಯಲ್ಲಿದ್ದ ನನಗೆ.. ಈಶಾನಕಲ್ಪದ ಸಾಮಾನಿಕ ದೇವತೆಗಳು ಲಲಿತಾಂಗನನ್ನು ಸಾಂತ್ವನಗೊಳಿಸಿದಂತೆ ಕೆಲವರು ಸಮಾಧಾನಪಡಿಸುವುದರೊಂದಿಗೆ ವಿವೇಕ ಹೇಳಿ, ಧೈರ್ಯತುಂಬಿದರು, ಮುಂದಿನ ಹೆಜ್ಜೆಗಳನ್ನಿಡಬೇಕಾದ ದಾರಿ ತೋರಿಸಿದವರು ಹಲವರು. ಸಹಜವಾಗಿಯೇ, ಊರಿಂದ ಪೋನ್ ಬಂತು! ತಾಯಿಯ ಸ್ಮರಿಸಿದೆ, ಉಸಿರಿತ್ತ ನನ್ನವ್ವ ಫೋನ್ ಮಾಡಿಸಿಕರುಳ ಸಂಕಟದಲ್ಲಿಯೇ, ‘ಹುಷಾರಾಗಿ ಬಾರೊ ಮ್ಹೊನೆ (ಮಗನೆ)’ ಎಂದರು… ತಮ್ಮ ಶಶಿಧರನೂ ಮನದಲ್ಲಿಯೇ ಶುಭ ಬಯಸಿರಬೇಕು, ಬಯಸದಿರುತ್ತಾನೆಯೇ. ಗುರುಗಳನ್ನೂ, ಬಂಧುಮಿತ್ರರನ್ನೂ ನೆನೆದೆ. ಉಹುಂ, ಲಲಿತಾಂಗನಂತೆ ಒಳಗೊಳಗೇ ಪರಿತಪಿಸಿದೆ, ಧೈರ್ಯ ಬರಲೇ ಇಲ್ಲ. ‘ಚಿಃ ಸತ್ತರೇಂ ಪುಟ್ಟರೇ’ ಎಂದುಕೊಂಡಿದ್ದೂ ಆಯ್ತು! ಏನೂ ಮಾಡಲಾಗದೆ ಸಂಕಟ ಅನುಭವಿಸುತ್ತಾ ಮಲಗಿದೆ.

ಏನೇನೋ ಟೆಸ್ಟ್ ಮಾಡಿದರು, ಕೆಲ ಮಾತ್ರೆ, ಆ್ಯಂಟಿಬಯೋಟಿಕ್ ಇಂಜೆಕ್ಷನ್, ರೆಮಿಡಿಸಿವಿಯರ್ ಕೊಟ್ಟರು… ಅವೆಲ್ಲ ಮೀರಿದ ಅಕ್ಕರೆ, ಧೈರ್ಯ ಕೊಟ್ಟು ಈ ಬಡ ಜೀವವ ಬದುಕಿಸಿದರು!! ಈಗ ಚೆನ್ನಾಗಿದ್ದೇನೆ. ನನ್ನ ನಿರೀಕ್ಷೆಗೂ ಮೀರಿದ ಆಸ್ಪತ್ರೆಯಲ್ಲಿನ ಸಿಬ್ಬಂದಿಯ ಶುಶ್ರೂಷೆಯಿಂದ, ಎಲ್ಲ ಹಿತೈಷಿಗಳ ಹಾರೈಕೆಯಿಂದ ಈಗ ಆರೋಗ್ಯವಾಗಿ ಮನೆಗೆ ಹಿಂದಿರುಗಿರುವೆ.

***

ಕೃತಜ್ಞತೆಯ ಕೃತಿಯರಿಕೆ ಈಗ.

1. ‘ಹೆತ್ತಾಕೆಯ ಬಳಗದಲಿ’ : ನನ್ನವ್ವ ಹಳ್ಳಿಯಾಕೆ, ಮನೆಯಲ್ಲಿ ಎಮ್ಮೆ, ಹುಲ್ಲು, ಹಟ್ಟಿ, ಸಗಣಿಗಳೊಂದಿಗೇ ಬೆಳೆದ ಹೆಂಗಸು. ಅಷ್ಟೇನೂ ವ್ಯಾವಹಾರಿಕ ತಿಳುವಳಿಕೆಯಿಲ್ಲದ ಈ ತಾಯಿಯ, ಮುಗ್ಧ ಅಕ್ಕರೆಯೇ ಸದಾ ನನ್ನ ಪೊರೆವ ತೊಟ್ಟಿಲು. ಚಿಕ್ಕಂದಿನಲ್ಲಿಯೇ ತಂದೆಯ ವಾತ್ಸಲ್ಯದಿಂದ ವಂಚಿತನಾಗಿದ್ದ ನಾನು ಬೆಳೆದದ್ದು, ಬದುಕು ಕಟ್ಟಿಕೊಂಡದ್ದು, ನನ್ನ ತಾಯಿಯ ತವರುಮನೆಯಲ್ಲಿ.. ಚಿಕ್ಕೊಂಡಿಹಳ್ಳಿಯಲ್ಲಿ. ಅಜ್ಜ ಅಜ್ಜಿ ಸೋದರಮಾವಂದಿರು ಮತ್ತು ಚಿಕ್ಕಮ್ಮಂದಿರ ಆಸರೆಯಲ್ಲಿ. ಅವರೆಲ್ಲರ ಹಾರೈಕೆಯೇ ನನ್ನನ್ನು ಈ ಮಟ್ಟಿಗೆ ಬೆಳೆಸಿದೆ.

ರಾಮಾಯಣ, ಮಹಾಭಾರತ ಕಥೆಗಳನ್ನು ಸ್ವಾರಸ್ಯಕರವಾಗಿ ವಿವರಿಸುತ್ತಿದ್ದ ನನ್ನಜ್ಜ (ಗಂಗಜ್ಜ),ಅಕ್ಕರೆಯ ಜೋಳದ ರೊಟ್ಟಿಗೆ ಪ್ರೀತಿಯ ಬೆಣ್ಣೆ ಸವರಿ ಜೇಬಲ್ಲಿಟ್ಟು ಸ್ಕೂಲಿಗೆ ಕಳುಹಿಸುತ್ತಿದ್ದ ನನ್ನಜ್ಜಿ (ನಿಂಗಜ್ಜಿ) ನನ್ನ ಆದರ್ಶದ Iconಗಳು.. ನನ್ನುಸಿರು ಇರುವವರೆಗೂ. ಚಿಕ್ಕವಾರಾಗಿದ್ದ ನಮಗೆಲ್ಲ ಆಗ ಅವರ ಹಿರಿಯ ಮಗ ನಂಜುಂಡಯ್ಯ ಆದರ್ಶ. ಆಗಲೇ ಚೆನ್ನಾಗಿ ಓದಿ ಸರ್ಕಾರಿ ನೌಕರಿ ಹೊಂದಿದ್ದ ಆ ನನ್ನ ಸೋದರಮಾವ ‘ಜಿ.ಎನ್’. ಸ್ವಲ್ಪ ನಿಷ್ಠುರವಾದಿ, ಸ್ವಲ್ಪವೇನಲ್ಲ.. ಜಾಸ್ತಿಯೇ!, strict ಅಂದ್ರೆ strict, ಎಲ್ಲವನ್ನೂ ಗಂಭೀರವಾಗಿ ಪರಿಗಣಿಸುವ ಬಹು ಶಿಸ್ತಿನ ವ್ಯಕ್ತಿತ್ವ. ಯಾವುದೇ ಕೆಲಸದಲ್ಲೂ ಉಡಾಫೆ, ಉದಾಸೀನ ಅವರಿಗೆ ಸಲ್ಲದು.

ನನ್ನ ಪಿಯುಸಿ ಓದು ಮುಗಿದ ಬಳಿಕ ನನ್ನನ್ನು ಬೆಂಗಳೂರಿಗೆ ‘ತಂದು’ ಸರ್ಕಾರಿ ಕಲಾ ಕಾಲೇಜಿಗೆ ಸೇರಿಸಿದರವರು. ಅವರ ಮನೆಯಲ್ಲಿ ಹಾಗೂ ತೋಟದಪ್ಪ ಛತ್ರದಲ್ಲಿ ಇರಿಸಿ ನನ್ನ ಓದಿಸಿದವರೂ ಅವರೇ. (ನನಗೆ ಇಲ್ಲಿ ಮತ್ತೊಬ್ಬ ದೇವಮಾನವರಾಗಿದ್ದವರು ಪ್ರೊ.ಸಿ.ಎಂ.ರಾಜಶೇಖರ್ ಎಂಬ ನನ್ನ ಸೋದರ ಮಾವ, ಅವರಿಲ್ಲದ ಅನಾಥ ಭಾವ ನನ್ನನ್ನ ಕಾಡುತ್ತಲೇ ಇರುತ್ತದೆ!). ಬೆಂಗಳೂರಿನಲ್ಲಿ, ನನ್ನ ಮಾವನ ಶಿಸ್ತಿನ ಭಯದಲ್ಲಿ ಬಿ.ಎ., ಓದ್ತಾ ಬೆಳೆದೆ. ತಾನು, ತನ್ನದೇ ಸರಿ ಎಂಬಂತಹ ಧೋರಣೆ ಹೊಂದಿ ಗಂಭೀರವಾಗಿ, ಗತ್ತಿನಲ್ಲಿಯೇ ಮಾತನಾಡುವ ಈ ನನ್ನ ಮಾವ ಮೇಲ್ನೋಟಕ್ಕೇ ‘ಅಹಂಕಾರಿ’ ಯಂತೆ ಭಾಸವಾಗುತ್ತಾರೆ… ಆದರೆ ಹೃದಯ ಮಾತ್ರ ಬೆಣ್ಣೆಯೇ ಸರಿ. ಮಹಾ ಮಾನವತಾವಾದಿ.

ನಾನು ವಚನಸಾಹಿತ್ಯಕ್ಕೆ ಇತ್ತೀಚಿಗೆ ಕಣ್ಬಿಟ್ಟವ, ಆದರೆ, ಅರುವತ್ತು ವರ್ಷಗಳ ಹಿಂದಿನಿಂದಲೇ ಶರಣಸಾಹಿತ್ಯ ಓದಿ, ಆ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು ಈ ನನ್ನ ಮಾವ ನಂಜುಂಡಯ್ಯನವರು, ಪುಸ್ತಕ ಪ್ರೇಮಿಯೂ ಹೌದು. ಅವರೊಂದಿಗೆ ಯಾರೇ ಮಾತನಾಡಲಿ ಸ್ಪಷ್ಟತೆ ಇರಬೇಕು.. perfection ಅಂದ್ರೆ perfection. ಸದಾ ಗಂಭೀರ ವದನರಾದ ಇವರು ಎಲ್ಲರನ್ನೂ (ನನ್ನ ತಮ್ಮಂದಿರನ್ನೂ) ಸರಿಯಾಗಿಯೇ ಮಾತನಾಡಿಸುತ್ತಾರೆ, ಆದರೆ ನನ್ನೊಬ್ಬನನ್ನು ಮಾತ್ರ ಇಂದಿಗೂ ಏನಲೇ, ಹೋಗಲೇ, ಬಾರಲೇ.. ಹೀಗೆ ನುಡಿಸುತ್ತಾರೆ. ಅವರ ಆ ಪ್ರೀತಿಯ ಏಕವಚನ ನನಗೆಂದಿಗೂ ಬೇಸರ ತಂದಿಲ್ಲ, ತರುವುದೂ ಇಲ್ಲ.

ನಮ್ಮ ಬಂಧು-ಬಳಗದಲ್ಲೆಲ್ಲ ಹಿರಿಯ ‘ಜೀವ’ವಾಗಿರುವ, ಹಿತೈಷಿಯಾದ ಈ ನನ್ನ ಮಾವ, ನಾನು ಮೊನ್ನೆ ಆಸ್ಪತ್ರೆಯಲ್ಲಿದ್ದಾಗ ಎರಡೆರಡು ಬಾರಿ ಕರೆಮಾಡಿ ಧೈರ್ಯ ತುಂಬಿದರು. ಅವರ ಹಾರೈಕೆ, ಆಶೀರ್ವಾದ ನನ್ನನ್ನು ಕಾದಿದೆ. ಅವರಿಗೆ ನಾನು ‘ಋಣಿ’ ಎಂಬ ಪದದ ಮೂಲಕ ಕೃತಜ್ಞತೆ ಹೇಳಿದರೇ ಸಾಕಾದೀತೆ ? ಆದರೂ ಹೇಳಲೇಬೇಕು ‘ಕೃತಜ್ಞತೆಯಿಂದಿರುವೆ’ ಅವರಿಗೆ.

2. ಮತ್ತೊಬ್ಬರು ಇವರ ಕಿರಿಯ ಸೋದರ ಲೋಹಿತಾಕ್ಷಮೂರ್ತಿ, ಸೌಜನ್ಯತೆಯ ಸಾಕಾರಮೂರ್ತಿ, ರೈತಕುಟುಂಬಿ. ಮೇಲ್ನೋಟಕ್ಕೆ ಸ್ವಲ್ಪ ಉದಾಸೀನತೆಯ ಸ್ವಭಾವಿ ಎಂಬಂತೆ ಕಂಡುಬಂದರೂ, ದೃಢ ನಿರ್ಧಾರದ ವ್ಯಕ್ತಿ. ಎಂತೆಂತಹ ಸಂದರ್ಭಗಳಲ್ಲಿಯೂ ಎದೆಗುಂದದ ಕಷ್ಟ ಸಹಿಷ್ಣು.. ಶ್ರಮಜೀವಿ, ನನ್ನ, ಬದುಕಿನಲ್ಲಂತೂ ನನ್ನ ತಾಯಿಗಿಂತ ಹೆಚ್ಚಿನ ವಾತ್ಸಲ್ಯ ಧಾರೆಯೆರೆದವರು ಈ ಸೋದರಮಾವ ಲೋಹಿತಣ್ಣ, ನನಗೆ ಜೀವನ ಕೊಟ್ಟು ರೂಪಿಸಿದ ‘ಮಹಾವ್ಯಕ್ತಿ’.

ಸರಳಜೀವಿ, ಜನಾನುರಾಗಿ ರೈತ. ಇವರ ಪುತ್ರನೋ, ಸರ್ಕಾರಿ ಉನ್ನತ ಅಧಿಕಾರಿ ನಿರಹಂಕಾರಿ, ಸಹಕಾರಜೀವಿ. ರಾಜ್ಯವನ್ನಾಳುವ ‘ದೊರೆ’ಗೇ ಸಲಹೆ ನೀಡಬಲ್ಲ ‘ಆಪ್ತ’. ಆದರೂ ನನ್ನ ಮಾವ ನನಗೆ ಸರಳವ್ಯಕ್ತಿ. ನನ್ನ ಈ ಇಬ್ಬರೂ ಸೋದರಮಾವಂದಿರೂ, ಅವರವರ ಪುಣ್ಯ ಫಲದಿಂದೆಂಬಂತೆ ಈಗ ಮಕ್ಕಳು, ಮೊಮ್ಮಕ್ಕಳೊಂದಿಗೆ ಸುಸ್ಥಿತಿಯಲ್ಲಿದ್ದಾರೆ.. ನೆಮ್ಮದಿಯಿಂದಿದ್ದಾರೆ. ಅವರು ಯಾವತ್ತೂ ಹಾಗೇ ಇರಲಿ ಎಂದು ಅವರು ನಂಬುವ ‘ಶ್ರೀರಂಗ’ನಲ್ಲಿ ಪ್ರಾರ್ಥಿಸುವೆ.

* * *

ಇನ್ನು ಸಂಬಂಧಿಕರಾದ ಪಿ.ಬಿ.ಬಸವರಾಜಪ್ಪ, ಡಾ.ಕೆ.ಎಸ್.ಧನಂಜಯಮುರ್ತಿ, ಭಾವನಾ, ಶಿವಕುಮಾರ್, ಗುರುಮೂರ್ತಿ, ಜಿ.ಎಲ್., ಜಯಣ್ಣ, ವಿನಿ, ಅಂಕಿತ ಮೊದಲಾದವರು ಕರೆ ಮಾಡಿ ಧೈರ್ಯ ತುಂಬಿದಿರಿ.. ಧನ್ಯವಾದಗಳು, ನನ್ನ ಸಹೋದ್ಯೋಗಿಗಳಾದ ಡಾ.ಪೂರ್ಣಿಮಾಜಿ.ಆರ್., ಡಾ ವನಜಾಕ್ಷಿ ಆರ್.ಹಳ್ಳಿಯವರ ಮೊದಲಾದವರು ಕರೆ ಮಾಡಿ ಧೈರ್ಯ ಹೇಳಿ ಸಾಂತ್ವನದ ಮಾತುಗಳನ್ನಾಡಿದರು. ಹಲವು ಸಲಹೆ ನೀಡಿದರು.. ನೀಡುತ್ತಿದ್ದಾರೆ. ಅವರಿಗೂ ಋಣಿಯಾಗಿರುವೆ.ಮತ್ತೊಬ್ಬರ ಇಲ್ಲಿ ನೆನೆಯಬೇಕು.

ಸದಾ ಸಕಾರಾತ್ಮಕ ಆಲೋಚನೆಗಳ ‘ಬಸ್’ ಈ Dr.BUS. ತಮ್ಮ ವಿದ್ಯಾರ್ಥಿಗಳಿರಲಿ, ಸಹೋದ್ಯೋಗಿಗಳಿರಲಿ ಎಲ್ಲರೊಂದಿಗೂ ಆರ್ದ್ರವಾಗಿ ಮಾತನಾಡುತ್ತಾ, ಆತ್ಮೀಯತೆಯ ಹರಿಸುವ ಈ ‘ಸುಮ’ ವ್ಯಕ್ತಿತ್ವ ಅಪೂರ್ವವಾದುದು. ‘ಜಗದೀಶ್ ಸರ್, ನಿಮಗೇನೇನೂ ಆಗದು.. ಖಂಡಿತ ವಾಸಿಯಾಗಿ ಬೇಗನೆ ಮನೆಗೆ ಬರುವಿರಿ.. ದೈರ್ಯವಾಗಿರಿ, ನಿಮ್ಮ ಧನಾತ್ಮಕ ಆಲೋಚನೆಗಳೇ ನಿಮ್ಮನ್ನು ಕಾಪಾಡುತ್ತವೆ..’ ಎನ್ನುತ್ತಾ ಸಮಾಧಾನ ಪಡಿಸಿದ BUS ಮಾತು ‘ಧೈರ್ಯಂ ಸರ್ವತ್ರ ಸಾಧನಂ’ ಎಂಬುದನ್ನು ಸದಾ ನೆನಪಿಸುತ್ತದೆ! ಇನ್ನು ಈ ದತ್ತ! ಗ್ರೇಟ್ ಮಿತ್ರ.

ಎಲ್ಲೇ ಇರಲಿ ತಾನೇ ಸರಿ, ತನ್ನದೇ ಸರಿ ಎಂಬ ಭಾವ. ಮಹಾ ನಿಷ್ಠುರವಾದಿ. ಯಾರು ಏನೇ ಮಾತನಾಡಿದರೂ ಸುಲಭಕ್ಕೆ ಒಪ್ಪದ, ತಕರಾರು ಮಾಡುವ ವ್ಯಕ್ತಿ. ಸಿನಿಕ ಸ್ವಭಾವಿ ಎಂದುಕೊಂಡಿದ್ದೆ… ಪರಿಚಯವಾದಾಗ 2003ರಲ್ಲಿ. ಆ ಬಳಿಕ ತಿಳಿಯಿತು, ಈ ವ್ಯಕ್ತಿಯ ‘ಭಾವ’ವೇ ಬೇರೆ, ಹೃದಯದಸ್ವಭಾವವೇ ಬೇರೆ! ಹೇಳಿಕೇಳಿ ಮಲೆನಾಡಿನ ಮೂಡಿಗೆರೆಯವರು.. (‘ತೇಜಸ್ವಿ’ಗೂ ಇಲ್ಲದ ನಿಷ್ಠುರತೆ!). ‘ಧೈರ್ಯವಾಗಿರ್ರಿ’ ಎಂದ ದತ್ತ ‘ಸಮಾಧಾನ’ದ ಮೆಸೇಜ್ಗಳನ್ನು ಕಳುಹಿಸುತ್ತಿದ್ದರು, ಭಾವುಕನಾಗಿ ಅವರಿಗೆ ವಂದಿಸದಿರೆನು! ಅದು ಹೇಗೋ ‘ಪಾಸಿಟಿವ್’ ವಿಷಯ ತಿಳಿದು ನನಗೆ ಕರೆ ಮಾಡಿ ಮಾತನಾಡಿಸಿದ ಪ್ರೀತಿಯ ವಿದ್ಯಾರ್ಥಿಗಳ ಅಕ್ಕರೆಗೂ ನಾನು ಋಣಿ.

* * * * *

ಇವರೆಲ್ಲರ ಜೊತೆಗೆ, ನನ್ನ ಪಾಲಿನ ದೇವರಾದವ ನನ್ನ ವೈದ್ಯತಮ್ಮ ಡಾ.ಕೆ.ಎಸ್.ಸುರೇಶ್ (ಚಿಕ್ಕಮ್ಮನ ಮಗ ಕೊನೆಯಲ್ಲಿ ನೆನಪಿಸಿಕೊಳ್ಳುವೆ). ನನ್ನ ನಿರೀಕ್ಷೆಗೂ ಮೀರಿದಆತನ ಹಾಗೂ ಬೌರಿಂಗ್ ಆಸ್ಪತ್ರೆಯ ಸಿಬ್ಬಂದಿಯ ಶುಶ್ರೂಷೆ, ಹಾರೈಕೆಯಿಂದ ನಾನು ಆರೋಗ್ಯವಾಗಿರುವೆ. ಅಲ್ಲಿ ಎಲ್ಲರೂ ಹೊತ್ತುಹೊತ್ತಿಗೆ ಟೀ, ತಿಂಡಿ, ಊಟ, ಬಿಸಿನೀರು, ರಾಗಿಮಾಲ್ಟ್, ಮಾತ್ರೆ, ಸಿರಪ್, ಎಕ್ಸ್- ರೇ ಹೀಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನನ್ನ ತಮ್ಮ ಸಹ ಅತಿಯಾದ ಕಾಳಜಿಯಿಂದ ಬಂದು ಬಂದು, ಬೇಕೆಂದಾಕ್ಷಣ ಹಣ್ಣು, ನೀರು ಇತ್ಯಾದಿ ತಂದಿಟ್ಟು ಹೋಗುತ್ತಾ. ವಿಚಾರಿಸಿಕೊಂಡು ಹೋಗುತ್ತಿದ್ದನು.

ಎಲ್ಲರಿಗೂ, ಇವರೆಲ್ಲರಿಗೂ ಕೃತಜ್ಞತೆಯ ಸೂಚಿಸಲು ನಾನು ಹೇಳುವ ‘ಋಣಿ’ ಎಂಬ ನನ್ನ ಮಾತು ಬಹು ಚಿಕ್ಕದೆನಿಸುತ್ತದೆ. ಕೃತಜ್ಞತೆ ಹೇಳುವಾಗ ಈ ‘ಮಾತು’ಗಳು ಒಮ್ಮೊಮ್ಮೆ ಏನಕ್ಕೂ ಸಾಲವು! (..’ನುಡಿಯು ತಿಳುಹಲು ಬಲ್ಲುದೇನು ಮೌನ ನುಡಿದಾ ದುಗುಡವ ?’)…, ಪಿಪಿಇ ಕಿಟ್ ಧರಿಸಿ ಬಂದುಹೋಗುವ ಆಸ್ಪತ್ರೆಯ ಈ ಸ್ಟ್ಯಾಫ್ ನರ್ಸ್ಗಳಲ್ಲಿ ಅವರಾರ ಮುಖದರ್ಶನವೂ ನನಗಿಲ್ಲ. ಆದರೆ ನನಗೇ ಗೊತ್ತಿಲ್ಲದೆ ಅವರೆಲ್ಲರ ಬಗ್ಗೆ ಮೂಡಿರುವ ಅತೀವ ‘ಗೌರವಭಾವ’ವನ್ನು ಇಲ್ಲಿ ಮಾತಿನಲ್ಲಿ ಹೇಳಲಾರೆ. ತಮ್ಮ ಪ್ರಾಣಕ್ಕೆ ಅಪಾಯವಿರುವುದು ಗೊತ್ತಿದ್ದರೂ, (ಅವ್ಯಕ್ತ ಭಯದಲ್ಲಿ), ನಗುನಗುತ್ತಾ ನಮ್ಮನ್ನು ಮಾತನಾಡಿಸಿ, ಧೈರ್ಯ ತುಂಬುತ್ತಾ ಸೇವೆಗೈಯುತ್ತಿದ್ದಾರೆ.

ನಿಸ್ಪೃಹ ಸೇವೆಯ ಈ ಮೆಡಿಕಲ್ ವಾರಿಯರ್ಸ್ ಗಳು ನಿಜಕ್ಕೂ ದೇವತೆಗಳೇ ಸರಿ… ಮನದಲ್ಲಿಯೇ ತಲೆಬಾಗಿರುವೆನವರಿಗೆ. ‘ನಾವು ನಮ್ಮ ಜೀವನದಲ್ಲಿ ಲೆಕ್ಕವಿರದಷ್ಟು ಜ್ಞಾತಾಜ್ಞಾತ ವ್ಯಕ್ತಿಗಳಿಗೆ ಋಣಿಯಾಗಿರುತ್ತೇವೆ..’ ಎಂದು ಮೂವತ್ತೆರಡು ವರ್ಷಗಳ ಹಿಂದೆ ಪ್ರಥಮ ಪಿಯೂಸಿಯಲ್ಲಿ ಕನ್ನಡ ಪಠ್ಯ (‘ಜೀವನ ಶ್ರದ್ಧೆ’ : ಐನ್ ಸ್ಟೀನ್) ಬೋಧಿಸುವಾಗ ಓದಿದ್ದ ಮಾತು ಮತ್ತೆ ನೆನಪಾಯಿತು.

ಈ ವಾರಿಯರ್ಸ್‌ಗಳು ನನಗೆ ಅಜ್ಞಾತರೇ ಆದರೂ ಅವರು ನನ್ನ ಹೃದಯದ ಅಮರರು. ಇವರು ಒಬ್ಬಿಬ್ಬರಲ್ಲ.. ದೇವರೇ ರಕ್ಷಿಸು ಈ ಎಲ್ಲರನೂ. ನೆನ್ನೆ, ಎಕ್ಸರೇ ತೆಗೆಯಲು ಏಳನೇ ಮಹಡಿಯ ನನ್ನ ಕೊಠಡಿಗೆ ಆ ದೊಡ್ಡ ಯಂತ್ರ ಸಹಿತ ಬಂದು ಎಕ್ಸ್ ರೇ ತೆಗೆದುಕೊಂಡು ಕೆಳಮಹಡಿಗೆ ಹೋದ ವ್ಯಕ್ತಿಯು, ನಾನು ಎಕ್ಸ್ ರೇ ತೆಗೆವಾಗ ‘ಶೇಕ್’ ಮಾಡಿರುವೆನೆಂದು ಮತ್ತೊಮ್ಮೆ ಏಳನೇ ಮಹಡಿಗೆ ಬಂದು ಎಕ್ಸ್ ರೇ ತೆಗೆದುಕೊಂಡು ಹೋದಂತಹ ಆ ಮೊಹ್ಸಿದ್ದೀನ್ ಇಸ್ ಗ್ರೇಟ್!! ಪ್ರಾತಃಕಾಲಕ್ಕೇ ಬಂದು ಆ್ಯಂಟಿಬಯೋಟಿಕ್ ಇಂಜೆಕ್ಷನ್ ಕೊಡುತ್ತ, ಧೈರ್ಯದ, ಸಾಂತ್ವನದ ಮಾತು ಹೇಳಿಹೋಗುವ ‘ಸಿಸ್ಟರ್ಸ್’ ಗಳು ಮಾತಿಗೆ ನಿಲುಕದ ಮಹತ್ತಾದ ವ್ಯಕ್ತಿತ್ವ ಹೊಂದಿದ್ದಾರೆ.

ಕಾರ್ಯದೊತ್ತಡದ ನಡುವೆ ಡಾಕ್ಟರ್ ಗಳ ನಿಸ್ಪೃಹ ಕರ್ತವ್ಯನಿಷ್ಠೆ ವಾಹ್! ಅದ್ಭುತ. ನಾನು ಆಸ್ಪತ್ರೆಗೆ ಹೋಗುವಾಗ ಮರೆತು ಹೋಗಿದ್ದ ಕಾರಣ, ಆಸ್ಪತ್ರೆಯಲ್ಲಿ ಓದಲು ಪುಸ್ತಕ ಬೇಕೆಂದಾಗ ಬೌರಿಂಗ್ ಆಸ್ಪತ್ರೆ ಗೇಟ್ ವರೆಗೂ ಬಂದು ಸೆಕ್ಯುರಿಟಿ ಕೈಲಿ ‘ಭುಜಂಗಯ್ಯನ ದಶಾವತಾರ’, ‘ಕಲ್ಲುಕರಗುವ ಸಮಯ’ ತಲುಪಿಸಿ ಹೋದ ೧೯೯೯ ರ ಹಳೆಯ ವಿದ್ಯಾರ್ಥಿನಿ ಕಲಾವತಿಗೆ ವಂದನೆ. ನನ್ನನ್ನು ಸದಾ ಹುರುಪಿನಲ್ಲಿಡುವ ಹಿತೈಷಿ, ದೂರದಿಂದಲೇ ‘ಹತ್ತಿರ’ದ ಮಾತನಾಡುವ ಹಳೆಯಗೆಣೆಯ ಚನ್ನಮುರುಗೇಶ ಅಕ್ಕಿ, ‘ಸಹಾಯ ಬೇಕೆಂದೆನಿಸಿದಾಗ ಕಾಲ್ ಮಾಡಿ ಸರ್’ ಎಂದ ಪ್ರೀತಿಯ ವಿದ್ಯಾರ್ಥಿ ಮಿತ್ರರಾದ ಗಿರೀಶ್, ವಿಜಿ, ಮಲ್ಲಿಕಾರ್ಜುನ್, ರಮೇಶ್ ಮೊದಲಾದವರಿಗೂ ವಂದನೆಗಳು.

C+ ವರದಿ ಬಂದಾಕ್ಷಣವೇ ನನ್ನ ಕಿರಿಯ ಸೋದರ ಡಾ.ಕೆ.ಎಸ್.ಸುರೇಶ್ ಏಪ್ರಿಲ್ 18ರಂದು ಭಾನುವಾರ ಬೆಳಗ್ಗೆ admit ಮಾಡಿಸಿ, ನನ್ನನ್ನು Special wardಗೆ ಸೇರಿಸಿದನು., ಅತ್ಯಂತ ಕಾಳಜಿಯಿಂದ ಚಿಕಿತ್ಸೆ ಕೊಡಿಸುತ್ತಾ, ನನಗೆ ಹಲವು ಮೆಡಿಕಲ್ test ಮಾಡಿಸುತ್ತಾ, ಅವನ ಕೆಲಸದ(duty) ಒತ್ತಡದ ನಡುವೆಯೇ, ಮತ್ತೆ ಮತ್ತೆ ಬಂದು ನನ್ನನ್ನೂ ನೋಡಿಕೊಳ್ಳುತ್ತಿರುವ ಡಾ.ಸುರೇಶ್ ನನ್ನ ಪಾಲಿನ ದೇವರಾಗಿದ್ದಾನೆ!! ಭೇಟಿಯಾಗಿ, ಆರು ತಿಂಗಳಾದರೂ ಒಮ್ಮೆಯೂ ಕಾಲ್ ಮಾಡದ ಈ ಸುರೇಶ್, ನಾನು ಆಪತ್ತಿನಲ್ಲಿದ್ದಾಗ ಆಪದ್ಭಾಂಧವನಾಗಿ ಬರುತ್ತಾನೆ..ಬಂದಿದ್ದಾನೆ… ಕಾಪಾಡಿದ್ದಾನೆ.

ರೈತಕುಟುಂಬದಲ್ಲಿ ಜನಿಸಿ ಉತ್ತಮ ‘ವೈದ್ಯ ಪದವಿ’ ಪಡೆದು ಹಿರಿಯ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವ ಈ ಕಿರಿಯ ತಮ್ಮನ ‘ಹಿರಿಯ’ ವ್ಯಕ್ತಿತ್ವದ ಬಗ್ಗೆ ಹೆಮ್ಮೆಯೆನಿಸುತ್ತದೆ. ಅರಸೀಕೆರೆ ತಾಲ್ಲೂಕಿನ ಕಾನೀಹಳ್ಳಿಯಲ್ಲಿತಮ್ಮ ಜೀವನದ ಪ್ರತೀಕ್ಷಣವನ್ನೂ ಕಷ್ಟಪಟ್ಟು ದುಡಿದು ಇವನನ್ನು ‘ಡಾಕ್ಟರ್’ ಮಾಡಿದ ಅವನ ತಾಯಿ-ತಂದೆಗೆ (ಮಹೇಶ್ವರಮ್ಮ, ಷಡಕ್ಷರಪ್ಪನವರಿಗೆ) ನಾನು ಚಿರಋಣಿ. ತಂದೆಯ ವಾತ್ಸಲ್ಯದಿಂದ ದೂರಾಗಿದ್ದ ನನನ್ನು, ನನ್ನ ಹೆತ್ತ ತಾಯಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ನನ್ನ ಚಿಕ್ಕಮ್ಮ ಮಾಯಮ್ಮ ಈಗಿಲ್ಲ.. ಆದರೆ ಅವರ ಮಗ ಡಾ. ಕೆ.ಎಸ್.ಸುರೇಶ್ ನನ್ನನ್ನು ರಕ್ಷಿಸಿದ್ದಾನೆ.

ಹದಿನಾಲ್ಕು ದಿನದ ಚಿಕಿತ್ಸೆ ಕೊಡಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಮನೆಗೆ ಕಳುಹಿಸಿಕೊಟ್ಟಿದ್ದಾನೆ. ನನ್ನ ತಮ್ಮ , ನನ್ನ ಪಾಲಿನ ದೈವವಾಗಿದ್ದಾನೆ. Hats off DR.SURESH. ತಲೆಬಾಗಿರುವೆ. ಈ ಶಬ್ದಗಳಿಗಿಂತ ಹೃನ್ಮನದೊಳಗಿನ ನಿಶ್ಶಬ್ದದ ಋಣಭಾವವೇ ಚೆನ್ನ.ಯಾರನ್ನಾದರೂ ಮರೆತಿದ್ದರೆ ಕ್ಷಮಿಸಿ, ಎಲ್ಲರಿಗೂ ಧನ್ಯವಾದಗಳು, ಕೃತಜ್ಞನಾಗಿರುವೆ.

‍ಲೇಖಕರು Avadhi

May 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: