ನನ್ನ ʻಎಗ್ಲಾಂಟೈನ್‌ ಜೆಬ್‌ʼ

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ..

ಮಕ್ಕಳ ಹಕ್ಕುಗಳ ಚಿಂತಕಿಯ ಜನ್ಮದಿನಾಚರಣೆ ೨೫ ಆಗಸ್ಟ್‌ ಸಂದರ್ಭದಲ್ಲೊಂದು ನೆನಹು 

ವಿದ್ಯೆ ಕಲಿಸದಾ ಗುರುವು, ಬುದ್ಧಿ ಹೇಳದಾ ತಂದೆ //
ಬಿದ್ದಿರಲು ಬಂದು ನೋಡದಾ ತಾಯಿ //
ಶುದ್ಧ ವೈರಿಗಳು ಸರ್ವಜ್ಞ //

ಸರ್ವಜ್ಞನ ಈ ವಚನ ನನಗೆ ಅತ್ಯಂತ ಮೆಚ್ಚಿನದು. ಮಕ್ಕಳ ಹಕ್ಕುಗಳನ್ನು ಕುರಿತು ಮಾತನಾಡುವಾಗಲೆಲ್ಲಾ ಈ ವಚನವನ್ನು ಉಲ್ಲೇಖಿಸದಿರಲು ನನ್ನಿಂದ ಸಾಧ್ಯವೇಯಿಲ್ಲ. ಇಲ್ಲಿ ಬರುವ ಗುರು, ತಂದೆ ಮತ್ತು ತಾಯಿಯರಲ್ಲಿ ನಾನು ನೋಡುವುದು ಮಕ್ಕಳ ಹಿತ ಕಾಪಾಡಲು, ಸೇವೆ ಸೌಲಭ್ಯಗಳನ್ನು ಒದಗಿಸಿ ಆರೋಗ್ಯ, ರಕ್ಷಣೆಯತ್ತ ಗಮನ ಕೊಡಲು ಮನ:ಪೂರ್ವಕ ಕರ್ತವ್ಯ ನಿರ್ವಹಿಸಬೇಕಾದ ವಿವಿಧ ಜವಾಬುದಾರರನ್ನು. ಇದರಲ್ಲಿ ಪ್ರತಿಯೊಬ್ಬ ವಯಸ್ಕರಿಂದ ಆರಂಭಿಸಿ, ಕುಟುಂಬ, ಸುತ್ತಮುತ್ತಲಿನ ಸಮುದಾಯ, ಸರ್ಕಾರ, ಸರ್ಕಾರೇತರರು, ನ್ಯಾಯಾಲಯ, ಮಾಧ್ಯಮಗಳು, ಅಂತಾರಾಷ್ಟ್ರೀಯ ವ್ಯವಸ್ಥೆಗಳು ಈ ಎಲ್ಲರೂ ಒಳಗೊಳ್ಳಬೇಕಾದುದು ಅತ್ಯಗತ್ಯವೆಂದು ನಾನು ಕಾಣುತ್ತೇನೆ. 

ಮಕ್ಕಳನ್ನು ಕುರಿತು ನಮಗೆಲ್ಲರಿಗೆ ನಿರ್ದಿಷ್ಟ ಕರ್ತವ್ಯಗಳಿವೆ, ಜವಾಬ್ದಾರಿಗಳಿವೆ. ಆ ಕರ್ತವ್ಯಗಳನ್ನು ನಾವು ನಿರ್ವಹಿಸಬೇಕು. ಸರ್ವಜ್ಞ ಹೇಳಿರುವಂತೆ ಅದು ಪಾಠ ಕಲಿಸುವುದು ಇರಬಹುದು, ಆರೋಗ್ಯ ಪರಿಶೀಲಿಸಿ ಅಗತ್ಯವಾದಲ್ಲಿ  ಔಷಧಿ-ಚಿಕಿತ್ಸೆ ಕೊಡುವುದಿರಬಹುದು, ಪೌಷ್ಟಿಕ ಆಹಾರದ ವ್ಯವಸ್ಥೆ ಮಾಡುವುದಿರಬಹುದು, ಬಟ್ಟೆ, ಹಾಸಿಗೆ, ದೀಪ ಒದಗಿಸುವುದಿರಬಹುದು, ಅಗತ್ಯವಾದಾಗ ರಕ್ಷಣೆ, ಆತ್ಮೀಯ ಭರವಸೆ, ಪ್ರೀತಿ ನೀಡುವುದು, ಮಕ್ಕಳ ಮಾತು ಆಲಿಸುವುದಿರಬಹುದು, ಮಕ್ಕಳಿಗೆ ಮನೋರಂಜನೆ, ಸೃಜನಶೀಲ ಚಟುವಟಿಕೆಗಳಿಗೆ, ಆಟೋಟಗಳಿಗೆ ಅವಕಾಶ ಮಾಡಿಕೊಡುವುದಿರಬಹುದು, ನೆಮ್ಮದಿಯಿಂದ ನಿದ್ದೆ ಮಾಡಲು ಬಿಡುವುದಿರಬಹುದು… 

ಇಂತಹವುಗಳನ್ನೆಲ್ಲಾ ಆಯಾ ಕುಟುಂಬಗಳು ತಮ್ಮ ಮಕ್ಕಳಿಗೆ ಮಾಡಿಕೊಡುವುದು ಸ್ವಾಭಾವಿಕ ಅಲ್ಲವೆ ಎಂದು ಹೇಳಿ ಯಾರೂ ಕೈತೊಳೆದುಕೊಳ್ಳಬಾರದು.. ಕುಟುಂಬಗಳು ಸಿದ್ಧವಿದ್ದರೂ, ಅವುಗಳಿಗೆ ಪೂರಕವಾದ ವಾತಾವರಣವನ್ನು ಉಂಟುಮಾಡಿ, ಅನ್ಯಾಯ, ದೌರ್ಜನ್ಯ, ವಂಚನೆಗಳುಂಟಾಗದಂತೆ ಕಾಪಾಡಬೇಕಾದುದು ಸರ್ಕಾರದ ಜವಾಬ್ದಾರಿ ಎನ್ನುವುದನ್ನು ಮರೆಯಲಾಗದು. ಆಯಾ ಸರ್ಕಾರವು ಸಿದ್ಧವಿದ್ದರೂ, ಆ ಸರ್ಕಾರದಲ್ಲೆ  ಆಂತರಿಕವಾಗಿ ಸಮಸ್ಯೆಯಿದ್ದರೆ, ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಲಭೆ, ಒತ್ತಡ, ಯುದ್ಧ, ನಿಷೇಧಗಳೇ ಮೊದಲಾದವುಗಳಿಂದ ಮಕ್ಕಳಿಗೆ (ದೊಡ್ಡವರಿಗೂ) ತೊಂದರೆ, ಕಿರುಕುಳ, ನಿರಾಕರಣೆ ಉಂಟಾಗಿ ಮಕ್ಕಳು ನಲುಗುವಂತಾದರೆ, ರೋಗಗಳಿಗೆ ಈಡಾದರೆ, ಹಸಿವಿನಿಂದ ಸತ್ತರೆ, ಶಿಕ್ಷಣ ಮತ್ತು ಭವಿಷ್ಯದ ಕನಸು ಕಾಣಲಾಗದಿದ್ದರೆ… 

ಈ ಪ್ರಶ್ನೆಗಳನ್ನು ೧೯೧೮ ರಲ್ಲಿ ಅಂದರೆ ಒಂದು ಶತಮಾನದಷ್ಟು ಹಿಂದೆಯೇ ಎತ್ತಿದ ಮಹನೀಯಳು ಎಗ್ಲಾಂಟೈನ್‌ ಜೆಬ್‌  (ಜನ್ಮದಿನ ೨೫ ಆಗಸ್ಟ್‌ ೧೮೭೬ – ನಿಧನ ೧೭ ಡಿಸೆಂಬರ್‌ ೧೯೨೮; ಜೀವಿತಾವಧಿ ೫೨ ವರ್ಷಗಳು)

ಆಕೆ ಮಕ್ಕಳ ಆರೋಗ್ಯ, ರಕ್ಷಣೆ, ಶಿಕ್ಷಣ, ಅಭಿವೃದ್ಧಿ ಕುರಿತಾದ ಪ್ರಶ್ನೆಗಳನ್ನು ಸುಮ್ಮನೆ ಕೇಳಲಿಲ್ಲ. ಪ್ರಥಮ ಮಹಾಯುದ್ಧ ಎಂದು ಇತಿಹಾಸ ಗುರುತಿಸುವ ಜಾಗತಿಕ ಮಹಾ ಕ್ಷೋಭೆಗೆ ಮುನ್ನ ಆಕೆ ಮಧ್ಯ ಯೂರೋಪಿನ ದೇಶಗಳಲ್ಲೆಲ್ಲಾ ಓಡಾಡಿ, ಅಲ್ಲಿನ ಬಡತನ, ಅರಾಜಕತೆ, ಮಕ್ಕಳು ಮಹಿಳೆಯರನ್ನೂ ಒಳಗೊಂಡು ಸಮುದಾಯಗಳು ಒಂದು ಹೊತ್ತಿನ ಊಟಕ್ಕೆ ಪರದಾಡುವುದು, ರೋಗಗಳಿಗೆ ಮಕ್ಕಳು ಬಲಿಯಾಗುವುದು ಇವೆಲ್ಲವನ್ನು ಕಣ್ಣಾರೆ ಕಂಡು ವ್ಯಗ್ರಳಾಗಿದ್ದಳು.

ಅಸಹಾಯಕತೆಯಿಂದ ಬಳಲಿದ್ದಳು. ಸನ್ನಿವೇಶ ಬಿಗುವಿಂದ ಕೂಡಿದೆ; ಇಲ್ಲೇನೋ ಕುದಿಯುತ್ತಿದೆ; ಏನೋ ಭುಗಿಲೇಳಲಿದೆʼ ದೇಶದೇಶಗಳ ನಡುವೆ ಸಂಘರ್ಷವಾದೀತು ಎಂದು ಆಕೆ ಕಂಡುಕೊಂಡಿದ್ದಳು. ಇಲ್ಲಿನ ಸಮುದಾಯಗಳಿಗೆ, ಅದರಲ್ಲೂ ಮಕ್ಕಳಿಗೆ ನೆರವಾಗಲು ಏನಾದರೂ ಸಹಾಯ ಮಾಡಬೇಕು ಎಂಬ ಉದ್ದೇಶದಿಂದಲೇ ತನ್ನ ಮಾತೃಭೂಮಿ ಇಂಗ್ಲೆಂಡಿಗೆ ಓಡೋಡಿಬಂದಿದ್ದಳು. ಆದರೆ ಅಷ್ಟು ಹೊತ್ತಿಗೆ ಪರಿಸ್ಥಿತಿ ಕೈಮೀರಿಹೋಗಿತ್ತು.

ನೆರೆಹೊರೆಯ ರಾಷ್ಟ್ರಗಳ ನಾಯಕರುಗಳಿಗೆ, ರಾಜರುಗಳಿಗೆ ಯುದ್ಧದಾಹವೇ ದೊಡ್ಡದಾಗಿತ್ತು. ಅವರೆಲ್ಲ ತಮ್ಮ ತಮ್ಮ ಆಸ್ತಿಪಾಸ್ತಿಯನ್ನು, ಭೂಮಿಯನ್ನು ಕಾಪಾಡಿಕೊಳ್ಳಬೇಕಿತ್ತು ಮತ್ತು ಪರರಿಂದ ಆದಷ್ಟೂ  ದೋಚಿಕೊಳ್ಳಬೇಕಿತ್ತು. ಆ ಹವಣಿನಲ್ಲಿ ದೇಶದೇಶಗಳ ಗಡಿಗಳಲ್ಲಿ ಯೋಧರು ಬಲಿಯಾದರೆ, ಬಡದೇಶಗಳಲ್ಲಿ ಊಟ, ಔಷಧಿಯಿಲ್ಲದೆ ಮಕ್ಕಳು ಪ್ರಾಣ ತೆತ್ತರು. ೨೦೧೮ರಲ್ಲಿ ಯುದ್ಧ ಮುಗಿದಿದೆ ಎಂದು ಘೋಷಿಸಿಕೊಂಡರೂ ಅದರ ಕರಾಳ ನೆರಳು ಮಾಸದೆ  ಸಾವು-ನೋವುಗಳಿಗೆ ಕಾರಣವಾಗುತ್ತಾ ದಟ್ಟವಾಗಿ ಮುಂದುವರಿದಿತ್ತು. 

ಈ ಪರಿಸ್ಥಿತಿ ಸೂಕ್ಷ್ಮ ಮನಸ್ಸಿನ ಎಗ್ಲಾಂಟೈನ್‌ ಜೆಬ್ಬಳನ್ನು ಕಂಗೆಡಿಸಿತು. ಅದಕ್ಕಿಂತಲೂ ಹೆಚ್ಚಾಗಿ ತನ್ನದೇ ದೇಶ ಇಂಗ್ಲೆಂಡಿನ ಸರ್ಕಾರ ಮತ್ತು  ಸೈನ್ಯದ ಹುನ್ನಾರದಿಂದಲೇ ಮ‍ಧ್ಯ ಯೂರೋಪು ಮತ್ತು ಜರ್ಮನಿಯಲ್ಲಿನ ಮಕ್ಕಳ ಹಸಿವು, ಸಾವು-ನೋವುಗಳಿಗೆ ಕಾರಣ ಎಂಬ ವಾಸ್ತವ ತಿಳಿದಾಗಲಂತೂ ಎಗ್ಲಾಂಟೈನ್ ಸಿಡಿದೆದ್ದಳು. ಅಮೇರಿಕೆಯಿಂದ ಮಧ್ಯ ಯೂರೋಪಿನ ದೇಶಗಳಿಗೆಂದು ಹಡಗುಗಳಲ್ಲಿ ಬರುತ್ತಿದ್ದ ಆಹಾರವನ್ನು ಇಂಗ್ಲೆಂಡಿನ ನೌಕಾಪಡೆ ಯುದ್ಧ ಮುಗಿದ ಮೇಲೂ ಪರಿಶೀಲನೆಯ ನೆಪವೊಡ್ಡಿ ತಡೆಯುತ್ತಿತ್ತು.

ಏನೇನೋ ಅನುಮಾನಗಳ ಹೆಸರೊಡ್ಡಿ ಹಡಗುಗಳನ್ನೇ ಸಮುದ್ರದಲ್ಲಿ  ಮುಳುಗಿಸುತ್ತಿತ್ತು ಎಂಬ ವಾಸ್ತವಗಳನ್ನು ಅರಿತಾಗ, ಇಂಥ ಅಮಾನವೀಯ ಕ್ರೌರ್ಯದ ವಿರುದ್ಧ ದನಿಯೆತ್ತಿದ ಎಗ್ಲಾಂಟೈನ್  ಪಾರ್ಲಿಮೆಂಟಿನ ಸದಸ್ಯರ ಮನೆಬಾಗಿಲು ತಟ್ಟಿದಳು, ಪತ್ರಿಕೆಗಳಿಗೆ ಬರೆದಳು, ಜನಸಮುದಾಯಗಳೊಡನೆ ಮಾತನಾಡಿದಳು. ಏನೂ ಪ್ರಯೋಜನವಾಗದಿದ್ದಾಗ ಪಾರ್ಲಿಮೆಂಟಿನ ಎದುರು  ಧರಣಿ ಕುಳಿತು, ʻಮಕ್ಕಳ ಕೊಲೆಗಡುಕ ಸರ್ಕಾರʼ ಎಂದು ಬಹಿರಂಗವಾಗಿ ಘೋಷಿಸಿ, ಸರ್ಕಾರದ ವಿರುದ್ಧ ಭಿತ್ತಿಪತ್ರ ಹಿಡಿದು, ಕರಪತ್ರ ಹಂಚಿದಳು. ರಾಷ್ಟ್ರದ್ರೋಹದ ಆಪಾದನೆಯ ಮೇಲೆ ಪೊಲೀಸರಿಂದ ಬಂಧನಕ್ಕೊಳಗಾಗಿ ನ್ಯಾಯಾಲಯದಲ್ಲಿ ದಂಡೆನೆಗೂ ಈಡಾದಳು. 

ಅಷ್ಟಕ್ಕೇ ಬಿಡದೆ ಎಗ್ಲಾಂಟೈನ್‌ ಜನರನ್ನು ಸಂಘಟಿಸಿ ತಮ್ಮ ಮಕ್ಕಳಷ್ಟೇ ಅಲ್ಲ ನೆರೆಹೊರೆಯ ದೇಶಗಳ ಮಕ್ಕಳ ಬಗ್ಗೆಯೂ ನಮಗೆ ಏಕೆ ಅಕ್ಕರೆ ವಾತ್ಸಲ್ಯ ಇರಬೇಕು ಎಂದು ಪಟ್ಟು ಬಿಡದೆ ವಾದಿಸಿ, ಮನಗಾಣಿಸಿ ಅವರನ್ನು ಒಪ್ಪಿಸಿದಳು. ಪತ್ರಿಕೆಗಳ ಮೂಲಕ ಸಾಮಾನ್ಯ ಜನರನ್ನಲ್ಲದೆ, ಸಂಸದರು, ಧಾರ್ಮಿಕ ನಾಯಕರು, ವಿದ್ವಾಂಸರು, ಚಿಂತಕರು  ಇವರನ್ನೆಲ್ಲಾ ತಲುಪಿದಳು. ನಿಮ್ಮ ಕಾಳಜಿ ಬರಿಯ ಬಾಯಿ ಮಾತಲ್ಲ, ನಿಮ್ಮ ಹಣವನ್ನೂ ಕೊಡಿ ಅದನ್ನು ವ್ಯವಸ್ಥಿತವಾಗಿ ಮಕ್ಕಳ ಆಹಾರ ಔಷಧಿ ರಕ್ಷಣೆಗೆ ಬಳಸಲಾಗುತ್ತದೆ ಎಂಬ ಭರವಸೆ ನೀಡಿದಳು. ಹಾಗೆ  ಸಂಗ್ರಹಗೊಂಡ ಸಂಪನ್ಮೂಲಗಳನ್ನು, ತಾನೇ ಮುಂದೆ ನಿಂತು ಸ್ಥಾಪಿಸಿದ ʻಸೇವ್‌ ದ ಚಿಲ್ಡ್ರನ್‌ʼ ಎಂಬ ಸಂಸ್ಥೆಯ ಮೂಲಕ ಒಂದು ಚಿಕ್ಕಾಸೂ ಪೋಲಾಗದಂತೆ ತಲುಪಿಸುವ ಪಾರದರ್ಶಕ ವ್ಯವ‍ಸ್ಥೆಯನ್ನೂ ಏರ್ಪಡಿಸಿದಳು. 

ಈಗ  ಇಡೀ ಜಗತ್ತಿನ ರಾಷ್ಟ್ರಗಳು ಒಪ್ಪಿ ಅಂಗೀಕರಿಸಿದ ʻಮಕ್ಕಳ ಹಕ್ಕುಗಳʼ ಕಲ್ಪನೆಯನ್ನು  ಆಗಿನ  ಲೀಗ್‌ ಆಫ್‌ ನೇಷನ್ಸ್‌ ಎದುರಿಟ್ಟವಳು ಎಗ್ಲಾಂಟೈನ್. ಮುಂದಿನ ದಿನಗಳಲ್ಲಿ ಈ ಕಲ್ಪನೆ ವಿಶ್ವಸಂಸ್ಥೆಯ ಮೂಲಕ ೧೯೮೯ರಲ್ಲಿ ʻಮಕ್ಕಳ ಹಕ್ಕುಗಳ ಒಡಂಬಡಿಕೆʼ ಎಂಬ ಹೆಸರಿನಲ್ಲಿ ಒಪ್ಪಿತವಾಗಿ, ಸ್ವೀಡನ್‌, ನಾರ್ವೆಯಂತಹ ಚಿಕ್ಕಪುಟ್ಟ ದೇಶಗಳಿಂದ ಹಿಡಿದು ಯು.ಕೆ., ಯು.ಎಸ್.ಎ., ರಷ್ಯಾ, ಭಾರತವೂ ಸೇರಿದಂತೆ ಒಡಂಬಡಿಕೆಗೆ ಸಹಿ ಹಾಕಿರುವ ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳಲ್ಲಿ ಜಾರಿಗೆ ಬಂದಿದೆ. ಮಕ್ಕಳ ಬದುಕು, ರಕ್ಷಣೆ, ವಿಕಾಸ ಮತ್ತು ಭಾಗವಹಿಸುವಿಕೆಯನ್ನು ಕುರಿತು ಎಲ್ಲ ದೇಶಗಳು ಗಂಭೀರವಾಗಿ ಆಂತರಿಕವಾಗಿ ಗಮನಿಸಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ನೆರವಾಗುವಂತೆ ಕಾಯಿದೆಗಳನ್ನು ರಚಿಸಿ, ಸೂಕ್ತ ಯೋಜನೆಗಳನ್ನು ಹೂಡಿ ಕಾರ್ಯನಿರತವಾಗುವಂತೆ ಈ ಕಲ್ಪನೆ ಪರಿಣಾಮ ಬೀರಿದೆ. 

ಭೌತಿಕ ಬೆಳವಣಿಗೆ, ಹಣಕಾಸು, ಕಾರ್ಖಾನೆಗಳು, ಸೈನ್ಯ, ಭೂಮಿಯ ಒಡೆತನ ಇವುಗಳಿಗಷ್ಟೆ ಒತ್ತುಕೊಡುತ್ತಾ, ಆ ಮೂಲಕ ತೋರಿಕೆಯ ಅಭಿವೃದ್ಧಿಯ ಓಟದ ಸ್ಪರ್ಧೆಯಲ್ಲಷ್ಟೇ ನಿರತವಾಗಿರುವ ದೇಶಗಳಿಗೆ, ಈ ಢಾಂಭಿಕತನವನ್ನು ನಿಲ್ಲಿಸಿ, ಯುದ್ಧ ನಿಲ್ಲಿಸಿ  ಮಕ್ಕಳ ಈಗಿನ ಪರಿಸ್ಥಿತಿಯನ್ನು ಗಮನಿಸಿರಿ, ಅವರ ಏಳ್ಗೆಯ ಮೂಲಕ ನಿಮ್ಮ ಏಳ್ಗೆಯನ್ನು ಕಾಣಿರಿ ಎಂದು ಮಾನವೀಯ ಅಂತ:ಕರಣಕ್ಕೆ ಮುಟ್ಟುವಂತೆ ಚುಚ್ಚಿದವಳು ಎಗ್ಲಾಂಟೈನ್‌ ಜೆಬ್‌.

ಎಷ್ಟೊಂದು ಜನ ಎಗ್ಲಾಂಟೈನರು

(ಎಗ್ಲಾಂಟೈನ್ ಅಂತ:ಕರಣದ ಮಹಾನ್ ಚೇತನಗಳು)

ಎಗ್ಲಾಂಟೈನ್‌ ಜೆಬ್‌ಳ ದರ್ಶನ ನನಗೆ ಆದದ್ದು ೧೯೯೮ರ ನಂತರ. ಅಷ್ಟು ಹೊತ್ತಿಗೆ ಕ್ರೈ ಸಂಸ್ಥೆಯ ಸಂಸ್ಥಾಪಕ ರಿಪ್ಪನ್‌ ಕಪೂರ್‌ (೧೯೫೪-೧೯೯೪) ಅವರಿಂದ, ʻಮಕ್ಕಳ ಹಕ್ಕುಗಳ ಪರಿಚಯ ನಿಮಗೆ ಇಲ್ಲವೆ?ʼ ಎಂದು ೧೯೯೨ರಲ್ಲಿ ಛೀಮಾರಿ ಹಾಕಿಸಿಕೊಂಡಿದ್ದ  ಹಲವವರಲ್ಲಿ  ನಾನೂ ಒಬ್ಬ. ಬಹಳ ಕಷ್ಟಪಟ್ಟು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ (UN Convention on the Rights of the Child) ಇಂಗ್ಲಿಷ್‌ ಅವತರಣಿಕೆಯನ್ನು ಸಂಪಾದಿಸಿಕೊಂಡು ಅದನ್ನು ಓದಿ  ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. ಅರ್ಥ ಆಗುತ್ತಿದೆ ಎಂದೆನಿಸಿದರೂ, ಅರ್ಥವಾದುದನ್ನು ಇನ್ನೊಬ್ಬರಿಗೆ ಹೇಳಲು ಏನೋ ಕೊರತೆ ಅನಿಸುತ್ತಿತ್ತು. ಕನ್ನಡದಲ್ಲಿ ಸೂಕ್ತ ಪದಗಳಿಲ್ಲವೆ ಅಥವಾ ಮೂಲ ಇಂಗ್ಲಿಷ್‌ನಲ್ಲಿರುವ ಇಂಗಿತ ಕನ್ನಡದಲ್ಲಿ ಹೇಳಲಾಗುತ್ತಿಲ್ಲವೆ ಎಂಬ ಗೊಂದಲ. 

ಆಗ ನನಗಿದ್ದ ಕಾಳಜಿ ಆದಷ್ಟೂ ಬೇಗನೆ ಮಕ್ಕಳ ಹಕ್ಕುಗಳ ವಿಚಾರಗಳನ್ನು ಕುರಿತು ಕರ್ನಾಟಕದಲ್ಲಿ ಕೆಲಸ ಮಾಡುವವರಿಗೆಲ್ಲಾ ಮಕ್ಕಳ ಹಕ್ಕುಗಳ ಒಡಂಬಡಿಕೆ ತಲುಪಬೇಕು, ಅದೂ ಕನ್ನಡದಲ್ಲಿ ಎನ್ನುವುದಾಗಿತ್ತು. ಆ ತೊಳಲಾಟದ ಮಧ್ಯೆ, ಮಕ್ಕಳ ಹಕ್ಕುಗಳ ಒಡಂಬಡಿಕೆಯ ಇಂಗ್ಲಿಷ್‌ ಭಾಷೆಯ ಸಾಲುಗಳ ಆಶಯ  ನನ್ನದಾಗುವ ಹೊತ್ತಿಗೆ ಸಾಕುಬೇಕಾಯಿತು! ಯು.ಎನ್‌.ನ  ಇಂಗ್ಲಿಷ್  ಭಾಷೆ ಕಬ್ಬಿಣದ ಕಡಲೆಯಾಗಿ ಕಾಡಿತ್ತು. 

ಈ ಮಧ್ಯೆ ೧೯೯೪ರಲ್ಲಿ ಮಾತೃಛಾಯಾ ಸಂಸ್ಥೆಯಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ಏರ್ಪಡಿಸುವ ಅವಕಾಶ ಸಿಕ್ಕಿತ್ತು. ಆಗ ʻದ ಕನ್ಸರ್ಡ್‌ ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ʼ ಎಂಬ ಸಂಸ್ಥೆಯಲ್ಲಿ ಸಂವಹನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನನ್ನ ಪತ್ನಿ ಎನ್.‌ ಲಕ್ಷ್ಮಿಯನ್ನು ಪ್ರೋತ್ಸಾಹಿಸಿ ʻಮಕ್ಕಳ ಹಕ್ಕುʼಗಳನ್ನು ಕುರಿತು ಒಂದು ಚರ್ಚೆಯನ್ನು ಮಕ್ಕಳೊಂದಿಗೆ ಏರ್ಪಡಿಸಿದೆ. ಆಕೆ ನಡೆಸಿದ ಆ ಅಧಿವೇಶನದಿಂದಾಗಿ ಮಕ್ಕಳ ಹಕ್ಕುಗಳನ್ನು ಕುರಿತು ತರಬೇತಿಗಳನ್ನು, ಚರ್ಚೆಗಳನ್ನು ಬೇರೆ ಬೇರೆ ಗುಂಪುಗಳ ನಡುವೆ ಹೇಗೆ ಮುಂದುವರೆಸಬಹುದು ಎಂಬ ಕಲ್ಪನೆ ಮೂಡಿತು. ವಯಸ್ಕರ ಶಿಕ್ಷಣದ ಜಿಲ್ಲಾ ಆಂದೋಲನಗಳಲ್ಲಿ ತರಬೇತಿಗಳನ್ನು ನಡೆಸುತ್ತಿದ್ದವನಿಗೆ ಮಕ್ಕಳ ಹಕ್ಕುಗಳ ವಿಚಾರವನ್ನು ಹೇಗೆ ಸಂಯೋಜಿಸಬೇಕು ಎನ್ನುವುದು ಹೊಳೆಯತೊಡಗಿತು. ಅಂತಹ ಸಮಯದಲ್ಲಿ (೧೯೯೫) ಅದಾರೋ ಕನ್ನಡಕ್ಕೆ ಅನುವಾದ ಮಾಡಿಕೊಟ್ಟಿದ್ದ ಒಡಂಬಡಿಕೆಯ ಪ್ರತಿ ಸಿಕ್ಕಿತು. ವಿಶ್ವಸಂಸ್ಥೆಯ ವಿಚಾರ ಕನ್ನಡದಲ್ಲಿ ಕಂಡಾಗ ಆನಂದವಾಯಿತೇನೊ ಹೌದು. ಆದರೆ ಅದು ಹೆಚ್ಚುಕಾಲ ಉಳಿಯಲಿಲ್ಲ….! 

ಆ  ಕನ್ನಡ ಅನುವಾದದ ವೈಖರಿಯನ್ನು  ಏನನ್ನೋಣ… ಕನ್ನಡದ ಅಕ್ಷರಗಳು, ಪದಗಳನ್ನು ಕಲಸಿ ಗುಡ್ಡೆ ಹಾಕಿದ್ದರು. ವಾಕ್ಯಗಳಲ್ಲಿ ಮೂಲ ಕೃತಿಯ ಆಶಯಕ್ಕೆ ಸಮಂಜಸವಾಗುವ ಅರ್ಥ ಹೊಮ್ಮುತ್ತಲೇ ಇಲ್ಲ. ನಾನು ಆ ಪ್ರತಿಯನ್ನು ಹಿಡಿದುಕೊಂಡು ಹಳಿದುಕೊಳ್ಳುತ್ತಿದ್ದೆ. ಈ ಪ್ರತಿಯನ್ನು ಅನುವಾದ ಮಾಡಿದವರಾರು, ಒಪ್ಪಿದವರಾರು ಮತ್ತು ಪ್ರಕಟಿಸಿ ಹಂಚಲಿಕ್ಕೆ ಅನುಮತಿ ಕೊಟ್ಟವರಾರು ಎಂದು ಸಿಡಿಮಿಡಿಗೊಂಡಿದ್ದೆ. ಆಗ ನನ್ನ ಸಿಟ್ಟನ್ನು ರಚನಾತ್ಮಕ ಕೆಲಸಕ್ಕೆ ತಿರುಗಿಸಿದವರು ನನ್ನ ತಂದೆ ನೆ. ವಿಶ್ವನಾಥ ಅವರು.‌ ʻಈ ಅನುವಾದದ ಕನ್ನಡ ಸರಿಯಿಲ್ಲವೆಂದರೆ, ನೀನೇ ಅದನ್ನು ಸಿದ್ಧಪಡಿಸಿಕೋ. ತರ್ಕಶುದ್ಧವಾಗಿ ಅರಿವಿಗೆ ಬರುವಂತೆ ಅದನ್ನು ಒಗ್ಗಿಸಿಕೋʼ ಎಂದು ಸಲಹೆ ನೀಡಿದರು. ಅವರ ಸಲಹೆಗೆ ದನಿಗೂಡಿಸಿದ್ದು ನನ್ನ ಪತ್ನಿ ಎನ್.‌ ಲಕ್ಷ್ಮೀ. ಹಲವಾರು ಕಾರಣಗಳಿಂದ ನಾನೇ ಸಿದ್ಧನಿರಲಿಲ್ಲ. ನನ್ನ ಚಡಪಡಿಕೆಯಲ್ಲಿ ಅವರಿವರನ್ನು ಬರಿದೆ ಆಕ್ಷೇಪಿಸಿದ್ದಷ್ಟೆ ಬಂತು. 

ಆ ಸಮಯದಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನ ಮತ್ತು ಶಿಕ್ಷಣ ಹಕ್ಕು ಆಂದೋಲನದ ಕಾರ್ಯಕರ್ತರಿಗೆ ತರಬೇತಿ ಕೊಡಲು ಮಾಡಿಕೊಂಡ ಯೋಜನೆಗಳಲ್ಲಿ ʻಮಕ್ಕಳ ಹಕ್ಕುಗಳುʼ ವಿಚಾರವನ್ನು ಸೇರಿಸಿಯೇಬಿಟ್ಟೆ. ತರಬೇತಿ ಕೊಡಲು ಮುಂದಾದೆ. ಈ ವಿಚಾರವನ್ನು ಕುರಿತು ಅಗತ್ಯವಾದ ಓದುವ ಸಾಮಗ್ರಿಗಳನ್ನು ಕನ್ನಡದಲ್ಲಿ ಒದಗಿಸಬೇಕಿತ್ತಾಗಿ, ಆ ಅನಿವಾರ್ಯತೆ ಹೆಗಲೇರಿ ನಾನೇ ಬರೆಯತೊಡಗಿದೆ. ಬರೆಯಲು ಪಟ್ಟಾಗಿ ಕುಳಿತು, ವಿಷಯ ಸಂಗ್ರಹಣೆಗಾಗಿ ಗಂಭೀರ ಓದಿನಲ್ಲಿ ತೊಡಗಿಸಿಕೊಳ್ಳಲೇಬೇಕಾಯ್ತು… ಓದು ಓದು ಓದು. ವಿಶ್ವಸಂಸ್ಥೆಯ, ಯುನಿಸೆಫ್‌-ನ ಪ್ರಕಟಣೆಗಳು ಇಂಗ್ಲಿಷ್‌ನಲ್ಲಿ ಸಾಕಷ್ಟು ಇತ್ತು. ಓದುತ್ತಾ ಓದುತ್ತಾ ಅವು ತಾವೇ ತಾವಾಗಿ ಅರ್ಥವಾಗತೊಡಗಿದವು. ಮಕ್ಕಳ ಹಕ್ಕುಗಳ ಒಡಂಬಡಿಕೆಯ ೫೪ ಪರಿಚ್ಛೇದಗಳನ್ನು ನನ್ನದೇ ಸರಳವಾದ ಭಾಷೆಯಲ್ಲಿ ಕನ್ನಡಕ್ಕಿಳಿಸಿಕೊಳ್ಳುತ್ತಾ ಬಾಲಕಾರ್ಮಿಕ ಪದ್ಧತಿ, ಶಿಕ್ಷಣದ ಹಕ್ಕು, ಆರೋಗ್ಯ, ಮಕ್ಕಳ ರಕ್ಷಣೆ, ಇತ್ಯಾದಿ ವಿಚಾರಗಳನ್ನು ʻಮಕ್ಕಳ ಹಕ್ಕುಗಳ ದೃಷ್ಟಿಕೋನʼದಲ್ಲಿ ವಿವರಣೆಗಳು, ಪ್ರಕರಣಾಧ್ಯಯನಗಳು, ಸಂವಿಧಾನದ ಅವಕಾಶಗಳು, ವಿವಿಧ ಕಾಯಿದೆಗಳಲ್ಲಿನ ವಿಚಾರಗಳನ್ನು ಹೆಕ್ಕಿ ತೆಗೆದು ಲೇಖನಗಳನ್ನು ಬರೆಯತೊಡಗಿದೆ. ಅವುಗಳನ್ನು ಹದವರಿತು ತಿದ್ದಲು, ಭಾಷಾಶೈಲಿಗೆ ಒಪ್ಪವಿಡಲು ನನ್ನ ತಂದೆಯವರು ಮತ್ತು ನನ್ನ ಪತ್ನಿ ಲಕ್ಷ್ಮೀ ನೆರವಾದರು. (ಅವರ ʻತಿದ್ದುವ ಕೈಂಕರ್ಯʼ ಇನ್ನೂ ಮುಂದುವರೆದಿದೆ. ಈ ಲೇಖನವೂ ಕೂಡಾ! ಈ ಇಬ್ಬರಿಗೂ ನಾನು ಸದಾ ಋಣಿ).

ಕ್ರೈ ಸಂಸ್ಥೆಯ ಪರವಾಗಿ ಕರ್ನಾಟಕ ಮತ್ತು ಆಂಧ್ರ ಪ್ರದೇಶ ಮತ್ತು ಕೆಲ ಮಟ್ಟಿಗೆ ತಮಿಳುನಾಡು ಮತ್ತು ಕೇರಳದ ವಿವಿಧ ಭಾಗಗಳಲ್ಲಿ ಮಕ್ಕಳ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆಗಳೊಡನೆ ಭೇಟಿ ಮಾಡುವುದು, ಅವರ ಕೆಲಸಗಳ ಉಸ್ತುವಾರಿ, ಮೌಲ್ಯಮಾಪನ ನನ್ನ ಕೆಲಸವಾಗಿತ್ತು. ಆರು ಜನರಿದ್ದ ತಂಡವನ್ನು ಮುನ್ನಡೆಸುವ ಜವಾಬ್ದಾರಿಯೂ ಜೊತೆಗಿತ್ತು. ಈ ಅವಧಿಯಲ್ಲಿ ಭೇಟಿಯಾಗುತ್ತಿದ್ದ ವ್ಯಕ್ತಿಗಳಲ್ಲಿ ಪ್ರಮುಖರು ʻಡಾ. ಶಾಂತಾ ಸಿನ್ಹಾʼ (ಎಂ.ವಿ.ಎಫ್‌. ಸಂಸ್ಥೆ). ಹೈದರಾಬಾದ್‌ನಲ್ಲಿ ಅವರ ಕಛೇರಿ ಇದ್ದು, ರಂಗಾರೆಡ್ಡಿ ಜಿಲ್ಲೆಯಲ್ಲಿ ಬಾಲಕಾರ್ಮಿಕರು ಮತ್ತು ಬಾಲ ಜೀತ ಕಾರ್ಮಿಕರ ಬಿಡುಗಡೆಗೆ ಎಂ.ವಿ.ಎಫ್‌. ನಿರತವಾಗಿತ್ತು. ಅದೊಂದು ಅಮೋಘವಾದ ಕ್ಷೇತ್ರಕಾರ್ಯ. 

ಮುಂದಿನ ದಿನಗಳಲ್ಲಿ ಎಗ್ಲಾಂಟೈನ್‌ ಜೆಬ್‌ಳ ಕುರಿತಾಗಿ ಪರಿಚಯವಾದಂತೆಲ್ಲ, ನನಗೆ ಶಾಂತಾ ಸಿನ್ಹಾ ಅವರ ಕೆಲಸಗಳ ನೆನಪಾಗಿ, ಇವೆರಡರ ನಡುವೆ ಅದೆಷ್ಟು ಸಾಮ್ಯವಿದೆ ಎಂದೆನಿಸುತ್ತಿತ್ತು. 

ಬಾಲ ಜೀತಕಾರ್ಮಿಕರನ್ನು ಪತ್ತೆ ಮಾಡಲು ಎಂ.ವಿ.ಎಫ್‌., ಯುವಕ ಯುವತಿಯರ ದೊಡ್ಡ ಪಡೆಯನ್ನೇ ಕಟ್ಟಿತ್ತು. ಹಳ್ಳಿಹಳ್ಳಿಗಳಲ್ಲಿ  ಜೀತಕ್ಕಿದ್ದ ಮಕ್ಕಳನ್ನು ಗುರುತಿಸುವ, ಅವರನ್ನು ಬಿಡುಗಡೆ ಮಾಡಿ ಶೈಕ್ಷಣಿಕ ಶಿಬಿರಗಳಿಗೆ ಕರೆತರುವ ಮತ್ತು ಅಲ್ಲಿ ಅವರಿಗೆ ಶಿಕ್ಷಣ, ಮನೋರಂಜನೆ, ಆರೋಗ್ಯ, ರಕ್ಷಣೆ ಒದಗಿಸುವುದು ಸಾಕಷ್ಟು ಸಂಘರ್ಷಮಯ ಕೆಲಸಗಳೇ ಆಗಿದ್ದವು. ಅನೇಕ ಬಾರಿ ಮಕ್ಕಳನ್ನು ಜೀತಕ್ಕಿಟ್ಟುಕೊಂಡಿದ್ದ ಮಾಲೀಕರು ಮತ್ತು ಅವರ ಕಡೆಯವರು ಶಿಬಿರಗಳ ಮೇಲೆ ದಾಳಿ ಮಾಡುತ್ತಿದ್ದರು, ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದರು, ಮಕ್ಕಳ ಪೋಷಕರನ್ನು ಕಟ್ಟಿಹಾಕಿ ಹೊಡೆಯುತ್ತಿದ್ದರು, ಇತ್ಯಾದಿ. ಇವುಗಳಿಗೆಲ್ಲಾ ಶಾಂತಾ ಸಿನ್ಹಾ ಅವರ ಮುಂದಾಳತ್ವದ ಎಂ.ವಿ.ಎಫ್‌. ಶಾಂತವಾಗಿ ತನ್ನದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು. ಆ ದಿನಗಳಲ್ಲಿ (೧೯೯೨-೨೦೦೦) ಸಾವಿರಾರು ಬಾಲಕ ಬಾಲಕಿಯರು ಜೀತದಿಂದ ವಿಮುಕ್ತರಾಗಿ ಶಿಕ್ಷಣದ ಸವಿಯುಂಡರು. ಮುಂದಿನ ದಿನಗಳಲ್ಲಿ ಆಂಧ್ರ ಪ್ರದೇಶದ ವಿವಿಧ ಭಾಗಗಳಿಗೂ ಮತ್ತು ದೇಶದ ಹಲವು ರಾಜ್ಯಗಳಿಗೂ ಈ ಚಳುವಳಿ ಹಬ್ಬಿತು ಮತ್ತು ಮಕ್ಕಳನ್ನು ಜೀತಕ್ಕಿಟ್ಟುಕೊಳ್ಳುವ ಪದ್ಧತಿಗೆ ಜನ-ಸಮುದಾಯಗಳಿಂದಲೇ ಪ್ರಬಲವಾದ ವಿರೋಧ ಹುಟ್ಟಿ ಬಂದಿತು. 

ಮುಂದೆ ಶಾಂತಾ ಸಿನ್ಹಾ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ನಿಯೋಜಿತರಾಗಿದ್ದರು (೨೦೦೭ರಿಂದ ೨೦೧೨). ಮಕ್ಕಳ ಹಕ್ಕುಗಳ ಕೆಲಸಗಳಿಗಾಗಿ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಅದಕ್ಕೂ ಮೊದಲೇ ಅವರನ್ನು ಮಾಗ್ಸೆಸೆ ಪ್ರಶಸ್ತಿಯೂ ಗುರುತಿಸಿತ್ತು. 

ನಾ ಕಂಡ  ಎಗ್ಲಾಂಟೈನ್‌ ಜೆಬ್‌ಳ  ಅನುರೂಪ ಎನ್ನಬಹುದಾದವರು ನಮ್ಮ ನಡುವೆ ಇದ್ದು, ನಮಗೆಲ್ಲರಿಗೂ ದಾರಿ ತೋರುತ್ತಿರುವ ಇನ್ನೊಬ್ಬರು, ಹಿರಿಯ ಚೇತನ ಡಾ. ಪದ್ಮಿನಿ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್‌ ಸ್ನಾತಕೋತ್ತರ ಪದವಿ ಪಡೆದು ಪಿಎಚ್.ಡಿ ಅ‍ಧ್ಯಯನ ನಡೆಸಿದ ಪದ್ಮಿನಿ ಶಿಕ್ಷಕರಾಗಿ, ಮಾರುಕಟ್ಟೆ ಸಂಶೋಧಕರಾಗಿ ಕೆಲಸ ಮಾಡಿದ್ದವರು. ಆದರೆ ಕಡೆಗೂ ತಮ್ಮ ಮನ:ಸ್ಥಿತಿಗೆ ಒಗ್ಗುವ ಸೇವಾಪ್ರಧಾನ ನೆಲೆ ಕಂಡುಕೊಂಡದ್ದು ಯುನಿಸೆಫ್‌ ( UNICEF) ಜೊತೆಯಲ್ಲಿ. ದೆಹಲಿ, ನ್ಯೂಯಾರ್ಕ್‌ ಮತ್ತು ಇಥಿಯೋಪಿಯಾ ಮತ್ತಿತರ ಪ್ರದೇಶಗಳಲ್ಲಿ ಕೆಲಸ ಮಾಡಿ ಸೇವಾ-ಅನುಭವದ ಭಂಡಾರವೇ ಅಗಿರುವ ಪದ್ಮಿನಿಯವರನ್ನು ನಾನು ಮೊದಲ ಸಲ ಭೇಟಿಯಾದದ್ದು ೧೯೯೯ರ ಕೊನೆಯ ಭಾಗದಲ್ಲಿ.

ಯುನಿಸೆಫ್‌ನಿಂದ ನಿವೃತ್ತರಾದ ಮೇಲೆ ಪದ್ಮಿನಿ ಮತ್ತು ಅವರ ಪತಿ ರಾಮಸ್ವಾಮಿಯವರು ಬೆಂಗಳೂರಿನಲ್ಲಿ ನೆಲೆಸಲು ಹಿಂದಿರುಗಿದ್ದರು. ಮೈತ್ರಿ ಸರ್ವ ಸೇವಾ ಸಮಿತಿ (ಎಂ.ಎಸ್.ಎಸ್.ಎಸ್‌) ಎನ್ನುವ ಸಂಸ್ಥೆಯ ಮೂಲಕ ಬೆಂಗಳೂರಿನ ಕೊಳೆಗೇರಿ ನಿವಾಸಿಗಳು ಮತ್ತು ಅಲ್ಲಿನ ಮಕ್ಕಳ ಆರೋಗ್ಯ, ಶಿಕ್ಷಣ, ರಕ್ಷಣೆಯೇ ಮೊದಲಾದ  ಕೆಲಸಗಳಲ್ಲಿ ನಿರತರಾಗಿದ್ದ ಆನ್ಸ್‌ಲೆಂ ರೊಸಾರಿಯೋ ಅವರೊಡನೆ ಡಾ.ಪದ್ಮಿನಿ  ಸೇವಾ ನೆಲೆಯಲ್ಲಿ ಕೈಜೋಡಿಸಿದರು. ಮಕ್ಕಳ ಹಕ್ಕುಗಳನ್ನು ಕುರಿತು ಎಲ್ಲ ವರ್ಗಗಳ ಜನರನ್ನು ಸೂಕ್ಷ್ಮಗೊಳಿಸಬೇಕೆಂಬ ತವಕವಿದ್ದ ಡಾ.ಪದ್ಮಿನಿ ಮತ್ತು ಆನ್ಸ್‌ಲೆಂ ಕ್ಷೇತ್ರಕಾರ್ಯಕರ್ತರಿಗೆ ತರಬೇತಿ ಏರ್ಪಡಿಸಿದ್ದರು. ಈ ಬಗ್ಗೆ ನನಗೂ ತಿಳಿದಿತ್ತು. ಅಷ್ಟು ಹೊತ್ತಿಗೆ ಮಕ್ಕಳ ಹಕ್ಕುಗಳನ್ನು ಕುರಿತು ಪ್ರಚಾರಕ್ಕಾಗಿ ಗೆಳೆಯ ವಿಶ್ವವಿನ್ಯಾಸ್‌ ಜೊತೆಗೂಡಿ ಒಂದಷ್ಟು ಭಿತ್ತಿ ಪತ್ರಗಳನ್ನು ಕ್ರೈ ಮೂಲಕ ನಾವು ತಯಾರಿಸಿದ್ದೆವು. ಎಲ್ಲೆಲ್ಲಿ ಅವಕಾಶಗಳು ಸಿಗುತ್ತವೋ ಅಲ್ಲೆಲ್ಲಾ ಆ ಭಿತ್ತಿಪತ್ರಗಳನ್ನು ಪ್ರದರ್ಶಿಸಲು ತೆಗೆದುಕೊಂಡು ಹೋಗುತ್ತಿದ್ದೆವು. ಎಂ.ಎಸ್.ಎಸ್.ಎಸ್‌ ನಡೆಸುತ್ತಿದ್ದ ತರಬೇತಿಯ ಸ್ಥಳದಲ್ಲಿಯೂ ಅವುಗಳನ್ನು ಪ್ರದರ್ಶಿಸಲು ಆನ್ಸ್‌ಲೆಂ ಅವರಿಂದ ಅನುಮತಿ ನಾನು ಪಡೆದಿದ್ದೆ. 

ತರಬೇತಿಯ ಮಧ್ಯದಲ್ಲಿ ಊಟದ ಬಿಡುವಿನ ಸಮಯಕ್ಕೆ ಅಲ್ಲಿಗೆ ಹೋದವನು ಭಿತ್ತಿಪತ್ರಗಳನ್ನು ಒಪ್ಪವಾಗಿ ತೂಗು  ಹಾಕಿ ಹೊರಡುತ್ತಿದ್ದಾಗ ಒಬ್ಬ ಹಿರಿಯ ಮಹಿಳೆ ಸ್ವಲ್ಪ ನಿಲ್ಲಿ ಎಂದು ನನ್ನನ್ನು ತಡೆದರು. 

ʻಹಾಗೆ ತೂಗು ಹಾಕಿ ಹೊರಟುಬಿಟ್ಟರೆ ಹೇಗೆ? ಅದೇನದು ಭಿತ್ತಿಪತ್ರಗಳು? ಏನು ವಿಚಾರ? ಹೇಳಬೇಕುʼ ಎಂದರಾಕೆ. ಸಂಘಟಕರಿಗೆ ಊಟದ ನಂತರದ ಅಧಿವೇಶನದ ಕಲಾಪಗಳನ್ನು ವೇಳಾಪಟ್ಟಗೆ ಬದ್ದರಾಗಿ ಮುಂದುವರಿಸುವ ಧಾವಂತ!.  ಹಾಗಾಗಿ ಇದ್ದ  ಸೀಮಿತ ಸಮಯದಲ್ಲೆ ಅಲ್ಲಿ ನೆರದಿದ್ದ ಶಿಬಿರಾರ್ಥಿಗಳಿಗೆ ಮಕ್ಕಳ ಹಕ್ಕುಗಳ ಹುಟ್ಟು, ಬೆಳವಣಿಗೆ, ಅದರ ಮುಖ್ಯವಿಚಾರಗಳನ್ನು ಕನ್ನಡದಲ್ಲಿ  ಸಂಗ್ರಹವಾಗಿ  ಸ್ಪಷ್ಟವಾಗಿ ಸಾಧ್ಯವಾದಷ್ಟು ವಿವರಿಸಿದೆ.  

ನನ್ನ ಮಾತಗಳನ್ನು ಗಮನವಿಟ್ಟು ಕೇಳಿಸಿಕೊಂಡ ಆ ಹಿರಿಯ ಮಹಿಳೆ ಹಿಗ್ಗಿನ ದನಿಯಲ್ಲಿ ಅಚ್ಚರಿಯಿಂದ ʻಅಲ್ಲಪ್ಪಾ! ನಾವೆಲ್ರೂ  ಮೂರು ದಿನದಿಂದ ಹೇಳ್ತಾ ಇರೋ ವಿಚಾರಾನ ನೀನು ಹತ್ತು ನಿಮಿಷದಲ್ಲಿ ಹೇಳಿಬಿಟ್ಟೆಯಲ್ಲ!ʼ ಎಂದು ಉದ್ಗರಿಸಿದರು. ಆ ಸಂದರ್ಭದಲ್ಲೇ ‘ಇವರು ಡಾ. ಪದ್ಮಿನಿ’ ಎಂದು ಆನ್‌ಸ್ಲೆಂ ರೊಸಾರಿಯೋ  ಪರಿಚಯಿಸಿದ್ದು. ಮುಂದಿನ ದಿನಗಳಲ್ಲಿ ಅವರ ತಂಡವನ್ನು ನಾನು ಅನಧಿಕೃತವಾಗಿ ಸೇರಿಯೇಬಿಟ್ಟೆ.

ಜೊತೆಯಾಗಿ ತರಬೇತಿಗಳನ್ನು ನಡೆಸುವುದರಲ್ಲಿ ಮುಂದಾದೆ. ಆಗಷ್ಟೇ ನನ್ನ ತಲೆಯಲ್ಲಿ ಮೊಳಕೆಯೊಡೆಯುತ್ತಿದ್ದ ಕಲ್ಪನೆ, ʻಮಕ್ಕಳ ಹಕ್ಕುಗಳನ್ನು ಕುರಿತು ಸಂಪನ್ಮೂಲ ಕೇಂದ್ರʼ. ಕಲ್ಪನೆಯ ಮೊಟ್ಟೆಯನ್ನು ಎದುರಿಡುತ್ತಿದ್ದಂತೆಯೇ ಅದಕ್ಕೆ ಡಾ. ಪದ್ಮಿನಿ ಕಾವು ಕೊಡಲಾರಂಭಿಸಿದರು. ಮುಂದಿನೆರಡು ವರ್ಷಗಳಲ್ಲಿ ಪದ್ಮಿನಿ ಹಾಗೂ ಅವರ ಪತಿ ರಾಮಸ್ವಾಮಿಯವರ ಬೆಂಬಲ ಮತ್ತು ಮಾರ್ಗದರ್ಶನದಲ್ಲಿ ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ವಿಕಾಸವಾಗತೊಡಗಿತು.

ಕಳೆದ ಇಪ್ಪತ್ತು ವರ್ಷಗಳಲ್ಲಿ ಪದ್ಮಿನಿಯವರು ನೀಡಿದ ಮಕ್ಕಳ ಹಕ್ಕುಗಳ ಜಾರಿ, ವಕೀಲಿ, ಸಂಶೋಧನೆ, ತರಬೇತಿಗಳ ಗುಟುಕುಗಳನ್ನು ಪಡೆಯುತ್ತಾ ನಮ್ಮ ತಂಡ ಅರಳತೊಡಗಿತು. ತಮ್ಮ ೮೭ ವರ್ಷಗಳ  ಇಳಿವಯಸ್ಸಿನಲ್ಲಿಯೂ ನಮ್ಮೆಲ್ಲರಲ್ಲಿ ಉತ್ಸಾಹ ತುಂಬುತ್ತಾ, ಅಂದು ಇಂಗ್ಲೆಂಡಿನ, ಯೂರೋಪಿನ ಮಕ್ಕಳ ಆಶಾದೀಪವಾಗಿದ್ದ   ಎಗ್ಲಾಂಟೈನ್‌ ಜೆಬ್‌ಳಂತೆಯೇ ಇಂದು ನಮ್ಮೊಡನಿದ್ದಾರೆ ಡಾ.ಪದ್ಮಿನಿಯವರು. 

ಸಮಾಜಕಾರ್ಯ ಪ್ರಶಿಕ್ಷಣ ಮುಗಿಸಿದವನಿಗೆ ೧೯೮೯ರಲ್ಲಿ ದತ್ತು ಕ್ಷೇತ್ರದಲ್ಲಿ ತಾತ್ಕಾಲಿಕ ಉದ್ಯೋಗ ನೀಡಿದ್ದ ಮಾತೃಛಾಯಾದ ಪದ್ಮಾಸುಬ್ಬಯ್ಯನವರು ನನಗೆ ಮುಂದಿನ ಹಂತ ತೋರಿದ್ದು ಕರ್ನಾಟಕ ರಾಜ್ಯ ಶಿಶುಕಲ್ಯಾಣ ಮಂಡಳಿಯತ್ತ  (ಕೆ.ಎಸ್‌.ಸಿ.ಸಿ.ಡಬ್ಲ್ಯೂ). ಭಾರತೀಯರಿಗೆ ಮಕ್ಕಳನ್ನು ದತ್ತು ಪಡೆಯುವ ಕುರಿತು ಪ್ರಚಾರ, ವಕೀಲಿ ಕೆಲಸಗಳು. ಆಗ ಕಂಡಿದ್ದ ಚಟುವಟಿಕೆಯಿಂದ ಪಟಪಟನೆ ಓಡಾಡುತ್ತಾ ತಮ್ಮ ಸ್ಪಷ್ಟ ಮಾತುಗಳಿಂದ ಮಕ್ಕಳ ಪರವಾದ ನಿಲುವುಗಳನ್ನು ಮಂಡಿಸುತ್ತಿದ್ದ ಎತ್ತರದ ವ್ಯಕ್ತಿ ನೀನಾ ನಾಯಕ್‌. ಆಗ ಅಷ್ಟೇನೂ ಅವರೊಡನೆ ನನಗೆ ಸಂಪರ್ಕವಿರಲಿಲ್ಲ.

ನಂತರದ ಮುಂದಿನೊಂದು ದಶಕದಲ್ಲೂ ಅವರೊಂದಿಗೆ ಸಂಘಟನೆಯ ಕೆಲಸಗಳಿದ್ದರೂ, ನಮ್ಮಿಬ್ಬರ ನಡುವೆ ಹೆಚ್ಚಿನ ಒಡನಾಟವಿರಲಿಲ್ಲ. ಆದರೆ ಅವರ ಕೆಲಸಗಳನ್ನು ಗಮನಿಸುತ್ತಿದ್ದೆ. ಅವರೂ ನನ್ನ ಕೆಲಸಗಳನ್ನು ಕುರಿತು ತಿಳಿಯುತ್ತಿದ್ದರು. ೨೦೦೨ರಲ್ಲಿ ನೀನಾ ಅವರೊಡನೆ ದೆಹಲಿ ಮತ್ತು ಇತರೆಡೆಗಳಲ್ಲಿ ಕೆಲವು ಸಮಾಲೋಚನೆಗಳಲ್ಲಿ ಪಾಲ್ಗೊಂಡಿದ್ದೆ. ಆಗೊಮ್ಮೆ, ೨೦೦೩ರಲ್ಲಿ ಚೆನ್ನೈನಲ್ಲಿ ನಡೆದ ʻಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕುರಿತು ಸಮಾಲೋಚನೆʼಯಲ್ಲಿ ಇಬ್ಬರೂ ಭಾಗಿಯಾಗಿದ್ದಾಗ ಅವರು  ʻವಾಸು, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯತ್ವಕ್ಕೆ ಅರ್ಜಿ ಹಾಕು. ಅಲ್ಲಿ ಮಾಡಲು ತುಂಬಾ ಕೆಲಸವಿದೆʼ ಎಂದು ಯಾವ ಪೂರ್ವಸೂಚನೆಯೂ ಇಲ್ಲದೆ ಸೂಚಿಸಿದರು.  

ಮುಂದಿನ ನಾಲ್ಕು ವರ್ಷಗಳ ಕಾಲ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಅಧ್ಯಕ್ಷರಾಗಿದ್ದ ನೀನಾ ನಾಯಕ್‌ ಮಕ್ಕಳ ನ್ಯಾಯ ಕಾಯಿದೆಯ ಜಾರಿ ವ್ಯವಸ್ಥೆಯಲ್ಲಿನ ಅದೆಷ್ಟೊಂದು ವೈವಿಧ್ಯಮಯವಾದ ವಿಚಾರಗಳ ದರ್ಶನವನ್ನು ನಮಗೆ ಮಾಡಿಕೊಟ್ಟರು. ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ಮಕ್ಕಳ ಪರವಾದ ಸಾಂವಿಧಾನಿಕ ಅಂಶಗಳು ಮತ್ತು ವಿವಿಧ ಕಾಯಿದೆಗಳು, ನಿಯಮಗಳು, ನ್ಯಾಯಾಲಯಗಳ ತೀರ್ಪುಗಳನ್ನು ಆಧರಿಸಿ ವಿಚಾರಣೆ ಮಾಡುವುದು, ಸರ್ಕಾರ, ನ್ಯಾಯಾಲಯ, ವಿವಿಧ ಇಲಾಖೆಗಳು, ಸ್ವಯಂಸೇವಾ ಸಂಘಟನೆಗಳೊಡನೆ, ಕುಟುಂಬಗಳು, ಪರಿಸ್ಥಿತಿಗಳನ್ನು ಮಕ್ಕಳ ಪರವಾದ ದೃಷ್ಟಿಕೋನವಿಟ್ಟುಕೊಂಡು ಅರಿತುಕೊಳ್ಳುವ ಸಂಗತಿಗಳ ಪರಿಚಯ ಮಾಡಿಕೊಟ್ಟರು.

ಮತ್ತೆ ನೀನಾ ಅವರೊಡನೆ ಕೆಲಸ ಮಾಡುವ ಅವಕಾಶ ಒದಗಿದ್ದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ (೨೦೦೯-೧೧). ಅವರು ಅಧ್ಯಕ್ಷರಾಗಿ, ನಾನು ಸದಸ್ಯನಾಗಿ ಇದ್ದಾಗ. ಮತ್ತೊಮ್ಮೆ ಮೂರು ವರ್ಷಗಳ ಕಾಲ ನೀನಾ ಅವರೊಡನೆ ಹತ್ತಿರದಿಂದ ಕೆಲಸ, ಚಿಂತನೆ, ಚರ್ಚೆ, ಅಧ್ಯಯನ, ತನಿಖೆ, ಪರಿಶೀಲನೆಗಳು, ಪ್ರವಾಸ, ಸರ್ಕಾರದೊಡನೆ ಮಕ್ಕಳ ಪರವಾಗಿ ಗುದ್ದಾಡುತ್ತಲೇ ಸಲಹೆಗಳನ್ನು ನೀಡುವುದು, ನ್ಯಾಯಾಲಯಗಳಲ್ಲಿ ಮೊಕದ್ದಮ್ಮೆ… ಓಹ್‌!  ಮಕ್ಕಳ ಹಕ್ಕುಗಳ ಪ್ರತಿಪಾದಕನಾಗಲು, ಹರಿಕಾರನಾಗಲು ಅದೆಷ್ಟೊಂದು ಕಲಿಕೆಗಳು. 

ಈ ಎಲ್ಲದರಲ್ಲೂ ಬಹಳ ಮುಖ್ಯವಾಗಿ ನಾನು ಕಲಿಯುತ್ತಿರುವುದು, ತಿಳಿಯುತ್ತಿರುವುದು ಎಲ್ಲ ಮಕ್ಕಳನ್ನು ಕುರಿತು ಕಳಕಳಿ, ನ್ಯಾಯಪರತೆಯ ದೃಷ್ಟಿಕೋನ. ಎಗ್ಲಾಂಟೈನ್‌ ಜೆಬ್  ಹಾಸಿದ ಹಾದಿಯೂ ಅದೇ. ಬಹಳ ಮುಖ್ಯವಾಗಿ ಕರ್ತವ್ಯಲೋಪವೆಸಗಿದವರನ್ನು ಪ್ರಶ್ನಿಸುವುದು. ಅವರು ಪೋಷಕರಾದರೇನು, ವ್ಯವಸ್ಥೆಗಳಲ್ಲಿರುವವರೇ ಆಗಿದ್ದರೇನು, ಸರ್ಕಾರವೇ ಆದರೇನು? ನಮ್ಮ ಟೀಕೆ ಟಿಪ್ಪಣಿ ಸಲಹೆಗಳಿಗೆ ಸರ್ಕಾರದ ಇಲಾಖೆಗಳಿಗೆ ಇರುಸುಮುರುಸಾದರೂ ಒಪ್ಪಿಕೊಂಡು ನಿಲುವು ಬದಲಾದುದನ್ನು ಕಂಡಿದ್ದೇವೆ, ಅನುಭವಿಸಿದ್ದೇವೆ.

ಕೆಲವೊಮ್ಮೆ ಅನ್ಯಾಯ, ತಪ್ಪು, ಮೋಸ ಕಂಡಾಗ ಮಕ್ಕಳ ಪರವಾಗಿ ಪ್ರಶ್ನಿಸುವ ಸಂದರ್ಭದಲ್ಲಿ ಎಗ್ಲಾಂಟೈನಳ ಕುಡಿಗಳಾದ ನಮ್ಮನ್ನೂ ಪ್ರಭುತ್ವ ದುರುಗುಟ್ಟಿ ನೋಡುತ್ತದೆ, ವಿವರಣೆ ನೀಡು ಎಂದು ನೋಟೀಸು ಕೊಡುತ್ತದೆ, ಒಮ್ಮೊಮ್ಮೆ ನಮ್ಮ ಕಛೇರಿಗಳತ್ತ ಸುಳಿಯಬೇಡ, ನಮ್ಮ ಸುದ್ದಿಗೆ ಬರಬೇಡ ಎಂದು ಫರ್ಮಾನು ಹೊರಡಿಸಿಯೇಬಿಡುತ್ತದೆ! ಅದೇಕೋ ಏನೋ, ನಿಮ್ಮ ವಿಚಾರ ಸರಣಿ ಸರಿ ಎಂದು ತಲೆ ಮೇಲೆ ಮೆರೆಸುವ ನ್ಯಾಯಲಯಗಳೂ, ಕೆಲವೊಮ್ಮೆ ಗುರ್‌ ಎಂದದ್ದುಂಟು!

ಹಾಗೆಂದು ಮಕ್ಕಳ ಹಕ್ಕುಗಳ ದೀಕ್ಷೆ ಹಿಡಿದ ನಾವು ಸೇವಾಕಾರ್ಯಕರ್ತರು ಸುಮ್ಮನಿರಲಾಗದು. ಕಾನೂನಿನಲ್ಲಾಗಲೀ ಜನರ ಮನೋಭಾವದಲ್ಲಾಗಲೀ ಸೂಜಿಮೊನೆಯಷ್ಟು ಅವಕಾಶ ಸಿಕ್ಕಿದರೆ ಸಾಕು, ಅಸಹಾಯಕ ಮಕ್ಕಳನ್ನು ಶೋಷಿಸಿ ಕಂಸಾಟ್ಟಹಾಸದ ವಿಕಟತೆ ಮೆರೆಯುವ ದುರುಳರು ಇದ್ದೇ ಇರುತ್ತಾರೆ. ಇಂಥವರಿರುವರೆಗೂ ರಿಪ್ಪನ್ ಕಪೂರ್, ಶಾಂತಾ ಸಿನ್ಹಾ, ಪದ್ಮಿನೀ ರಾಮಸ್ವಾಮಿ, ಪದ್ಮಾ ಸುಬ್ಬಯ್ಯ, ನೀನಾ ನಾಯಕ್, ಆನ್ಸ್‌ಲೆಂ ರೊಸಾರಿಯೋ, ನಂದನಾ ರೆಡ್ಡಿ, ಸುಚಿತ್ರಾ ರಾವ್‌, ಲಕ್ಷಾಪತಿ, ಅಶೋಕ್‌ ಮಾಥ್ಯೂ ಫಿಲಿಪ್ಸ್‌, ಇಂತಹ ಮಾನವತಾವಾದಿ ಮಹನೀಯರ ಸಂತತಿ ಬೆಳೆಯುತ್ತಿರಬೇಕು. ಬೆಳೆಯಲಿ ಎಂದು ನಾವೆಲ್ಲ ಸಮಾನ ಮನಸ್ಕರು ಹಾರೈಸುತ್ತಲೇ ಇರಬೇಕು. 

ಎಗ್ಲಾಂಟೈನ್‌ ಜೆಬ್‌ ನೂರು ವರ್ಷಗಳ ಹಿಂದೆ ಮಕ್ಕಳ ಪರವಾಗಿ ಎತ್ತಿದ ಕಳಕಳಿಯ ದನಿ, ಕಾಲಕ್ರಮೇಣ ಗಟ್ಟಿಯಾಗುತ್ತಾ ವಿಶ್ವಸಂಸ್ಥೆಯನ್ನೂ ಮುಟ್ಟಿ ಸರ್ಕಾರಗಳ ಗಮನ ಸೆಳೆಯುತ್ತಾ, ಮಕ್ಕಳ ಕಲ್ಯಾಣ ಸಾಧಿಸುತ್ತಾ  ಬಲಿಷ್ಠ ದನಿಯಾಗುತ್ತಾ ಸಾಗಿದೆ. 

ಆಗಸ್ಟ್‌ ೨೫ ಎಗ್ಲಾಂಟೈನ್‌ ಜೆಬ್ಬಳ ಜನ್ಮ ದಿನ. ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ಎಲ್ಲರೂ ನೆನೆಯಬೇಕಾದ ದಿನ. ಇಂತಹ ಎಗ್ಲಾಂಟೈನಳನ್ನು ಕುರಿತು ಪುಸ್ತಕ ಬರೆಯಬೇಕೆಂಬ ಬಯಕೆ ಹತ್ತಿದ್ದು ೨೦೧೬ರಲ್ಲಿ. ಆಕೆಯನ್ನು ಕುರಿತು ನಡೆಸಿದ ಸಂಶೋಧನೆಯು ಎಗ್ಲಾಂಟೈನಳನ್ನು ನನಗೆ ಇನ್ನಷ್ಟು ಹತ್ತಿರ ತಂದಿತು. ಅದರ ಫಲ ʻಆಕೆ ಮಕ್ಕಳನ್ನು ರಕ್ಷಿಸಿದಳು .. ಎಗ್ಲಾಂಟೈನ್‌ ಜೆಬ್‌ ಕಥನʼ ಹೆಸರಿನಲ್ಲಿ ʻಬಹುರೂಪಿʼ ೨೦೧೯ರ ನವೆಂಬರ್‌ನಲ್ಲಿ ಪ್ರಕಟಿಸಿದ ಪುಸ್ತಕವಾಯಿತು. 

ಜೆಬ್ಬಳ ಘೋಷಣೆ ʻಎಲ್ಲ ಮಕ್ಕಳಿಗೆ ಹಕ್ಕುಗಳು ದಕ್ಕಬೇಕುʼ ಎನ್ನುವ ಕಲ್ಪನೆಯನ್ನು ಸಾಕಾರಗೊಳಿಸಲು ಮತ್ತು ಸರ್ವಜ್ಞನಿಂದ ʻ…ಶುದ್ಧ ವೈರಿಗಳುʼ ಎಂದು ಹಳಿಸಿಕೊಳ್ಳುವುದನ್ನು ತಪ್ಪಿಸಲು ಇನ್ನೂ ಸಾವಿರಾರು ಕೈಗಳು, ಮನಸ್ಸುಗಳು ಒಂದಾಗಬೇಕಿದೆ. ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿರುವ ಪರಿಚ್ಛೇದ ೪೨, ʻಮಕ್ಕಳ ಹಕ್ಕುಗಳ ಬಗ್ಗೆ ವ್ಯಾಪಕ ಪ್ರಚಾರʼ ಮತ್ತು ಪರಿಚ್ಛೇದ ೪೫ ಹೇಳುವಂತೆ, ʻವಿಶ್ವ ಸಂಸ್ಥೆಗೆ ಪರ್ಯಾಯ ವರದಿ ಸಲ್ಲಿಸುವ ಪ್ರಕ್ರಿಯೆʼ ಕುರಿತು ಕೆಲಸಗಳು ಇನ್ನೂ ನಡೆಯುತ್ತಿರಬೇಕು. 

‍ಲೇಖಕರು Admin

August 26, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: