– ದಿಲೀಪ್ ಎನ್ಕೆ
ನನ್ನುಸಿರು
ಸರಿಯಾಗಿ ಯಾವ ಸಮಯಕ್ಕೆ
ನಿಲ್ಲುವುದೋ ಏನೋ ?
ಯಾವ ವರ್ಷ ತಿಂಗಳು
ದಿನ ಸಮಯ ?
ನನ್ನುಸಿರು
ಯಾವ ಸ್ಥಳದಲ್ಲಿ
ನಿಲ್ಲುವದೋ ಏನೋ ?
ಈಗಾಗಲೇ ಅದರ ಪರಿಚಯ
ನನಗಿದೆಯೋ ಇಲ್ಲವೋ ?
ನನ್ನುಸಿರು
ಯಾವ ಕಾರಣಕ್ಕೆ
ನಿಲ್ಲುವುದೋ ಏನೋ ?
ಅಪಘಾತ ಆತ್ಮಹತ್ಯೆ
ಖಾಯಿಲೆ ಮತ್ತಾವುದೋ ?
ಕಡೆಯದಾಗಿ
ನಾನು ಯಾರ ಜೊತೆಗೆ
ಮಾತನಾಡುತ್ತೇನೋ ?
ಕಡೆಯದಾಗಿ
ನಾನು ಯಾರ ಕಾಣಲು
ಹಂಬಲಿಸುತ್ತೇನೋ ?
ಕಡೆಯದಾಗಿ
ನಾನು ಯಾರ ಕೈಯಿಂದ
ನೀರು ಕುಡಿಯುತ್ತೇನೋ ?
ನನಗೆ ಯಾವುದು
ಕಡೆಯ ನಗುವಾಗುವುದೋ ?
ನನಗೆ ಯಾವುದು
ಕಡೆಯ ಊಟವಾಗುವುದೋ ?
ನನಗೆ ಯಾವುದು
ಕಡೆಯ ಉಡುಪಾಗುವುದೋ ?
ಹೇಳ ಬಯಸಿ ಹೇಳಲಾಗದೆ
ಎದೆಯಲೇ ಹೆಪ್ಪುಗಟ್ಟುವ
ಸಂಗತಿಗಳಾವುವೋ ?
ಹೆಗಲ ಕೊಡುವವರ್ಯಾರೋ ?
ಮೂರು ಹಿಡಿ ಹಾಕುವವರ್ಯಾರೋ?
ಕಡೇ ದರುಶನದಿಂದ
ವಂಚಿತರಾಗುವವರ್ಯಾರೋ?






0 Comments