ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನವ್ವ ನಿತ್ಯ ತರುಣಿ..

ಹುಟ್ಟಿನ ಸಾವು

ಸದಾಶಿವ್ ಸೊರಟೂರು

ನನ್ನವ್ವ ನಿತ್ಯ ತರುಣಿ
ಹಸುರುಡಿಗೆ ಬಿಳಿ ಮೊಗ್ಗು
ದಪ್ಪ ದಪ್ಪ ಹೀಚು ಕಾಯಿಗಳು,
ಕುಡಿಯಿಂದ ಹೊರಡುವಾಗ
ಕಂಠ ತುಂಬಿ ಹರಸಿದ್ದಳು
ಎನಗಿಂತ ಮಿಗಿಲಿರಲಿ ನಿನ್ನ ಬಾಳು;

ಕೆಳಗುರುಳಿ ಉಡಿ ಸೇರಿ
ಕಳೆದೆ ಅವ್ವನ ನೆರಳಲಿ ನಾಕು ದಿನ
ಬಿಸಿಲಿಗೆ ಕಾದು ರಾತ್ರಿಯ ಕಾಯ್ತಿದ್ದೆ!
ತಣ್ಣನೆಯ ಒಂಚೂರು ಗಾಳಿಗೆ
ನನ್ನೊಡಲ ಗರ್ಭ ನಡುಗಿತ್ತು ಕಾವಿಗೆ
ದೇವರ ಬೇಡುತ ದಿನ ಕಳೆದಿದ್ದೆ;

ಉಡಿ ಮಣ್ಣು ತಬ್ಬಿದ ಸಲಿಗೆಗೆ
ಭ್ರೂಣ ಮೊಳೆಯುವ ಆಸೆ ಕಂಡಿತ್ತು,
ಮಳೆಯಿಲ್ಲ, ಗಾಳಿಯಲಿಲ್ಲ ಒಂಚೂರು ತೇವ
ಉಸಿರುಗಟ್ಟುವ ಧೂಳು, ಜೀವ ಕಳೆಯಿಲ್ಲ!
ಅವ್ವ ಉದುರಿಸಿದ ಇಬ್ಬನಿಗೆ ಒಂದಿಷ್ಟು ಊದಿದ್ದೆ
ಭ್ರೂಣದಲಿ ಸಣ್ಣಗೆ ಜೀವ ಮೊಳೆದಿತ್ತು;

ಅವ್ವ ಬಾಚಿಟ್ಟ ಇಬ್ಬನಿಯಲ್ಲೇ
ಎರಡೆಲೆಯ ಹೊರ ಹಾಕಿ ಜಗವ ಕಂಡೆ
ಅವ್ವ ಹರಸಿದ ಮಾತು ನೆನಪಾಯ್ತು!
ಎಲೆ ಬಿಚ್ಚುವಲ್ಲೆ ಉಸಿರೋದ ನನಗೆ
ಮರವಾಗುವುದು ಇನ್ನು ಕನಸಾಯ್ತು!
ಬೀಸುವ ಗಾಳಿ, ಸುಡುವ ಬಿಸಿಲು
ಸಂಜೆಗೆ ನನ್ನಲೆಯ ಜೀವ ಹೊರಟೊಯ್ತು;

ಅವ್ವನೆಂತು ಬಾಳಿದಳೋ ಈ ಭುವಿಯಲ್ಲಿ
ಇನ್ಯಾರು ಬೆಳೆಯರು ಮತ್ತೆ ಈ ಜಗದಲ್ಲಿ!

‍ಲೇಖಕರು admin

6 May, 2017

3 Comments

  1. Anonymous

    ಎನಗಿಂತ ಮಿಗಿಲಿರಲಿ ನಿನ್ನ ಬಾಳು…ಅಂತಹ ಹರಕೆ ತಾಯಿಯಿಂದ ಮಾತ್ರ ಸಾಧ್ಯ…ಅತ್ಯುತ್ತಮವಾಗಿದೆ ಸರ್..

  2. Anonymous

    Super sir

  3. sreenivasa p n

    ಮರದಿಂದ ಬಿದ್ದು ಮೊಳಕೆಯಲೇ ಹುಟ್ಟಿ ಮತ್ತೆ ಆಗಲೇ ಸಾವು ಕಂಡ ಬೀಜದ ಪರಿ ನಿಮ್ಮ ಕಲ್ಪನೆಯಲ್ಲಿ ನಿರ್ವಿಕಾರವಾಗಿ ಮೂಡಿ ಬಂದಿದೆ , ಧನ್ಯವಾದಗಳು .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading